ಕನ್ನಡ ಕಾದಂಬರಿ ಲೋಕದ ಅಗ್ರಮಾನ್ಯ ಪ್ರಯತ್ನಗಳಲ್ಲೊಂದು `ಚೆನ್ನಭೈರಾದೇವಿ'


"ಈ ಕಾದಂಬರಿಯಲ್ಲಿ ನನ್ನ ಮನಸ್ಸಿಗೆ ತೀರಾ ಹತ್ತಿರವಾದ ಸಾಲು "ರೂಪವೋ ಗುಣವೋ ಸಂಸ್ಕಾರವೋ ಬುದ್ಧಿಯೋ ರಕ್ತಸಂಬಧವನ್ನಾಧರಿಸಿ ಹರಿಯಬಹುದು. ಆದರೆ ಪ್ರೀತಿ ಹರಿಯುವುದಕ್ಕೆ ಯಾವ ಸಂಬಂಧವೂ ಬೇಡ".... ಎಷ್ಟು ಸತ್ಯ ಅಲ್ವಾ...ಅಷ್ಟಿಲ್ಲದೆ ನಮ್ಮ ಹೆಚ್.ಎಸ್.ವಿ. ಹೇಳುತ್ತಿದ್ದರೇ..."ತಡೆಯುವರಿಲ್ಲಾ...ಪಾತ್ರವಿರದ ತೊರೆ ಪ್ರೀತಿ" !," ಎನ್ನುತ್ತಾರೆ ನಾಗೇಂದ್ರ ಎ.ಆರ್. ಅವರು ಗಜಾನನ ಶರ್ಮಾ ಅವರ ‘ಚೆನ್ನಭೈರಾದೇವಿ’ ಕೃತಿ ಕುರಿತು ಬರೆದ ಅನಿಸಿಕೆ.

'ಚೆನ್ನಭೈರಾದೇವಿ'... ಕರಿಮೆಣಸಿನ ರಾಣಿಯ ಅಕಳಂಕಿತ ಚರಿತೆ... ಓದಿ ವಿಸ್ಮಯವಾಯಿತು., ಜೊತೆಗೆ ವಿಷಾದವೂ ಆಯಿತು. ವಿಸ್ಮಯ ಏಕೆ? ಇಂತಹ ಗತವೈಭವದ ಇತಿಹಾಸಕ್ಕೆ ನನ್ನ ಅಕ್ಕಪಕ್ಕದ ಜಿಲ್ಲೆಗಳೇ ಹಿಂದೆ ಸಾಕ್ಷಿಯಾಗಿದ್ದವಲ್ಲಾ ಎಂಬುದಕ್ಕೆ !! ವಿಷಾದ ಏಕೆ? ಇಂತಹ ಮಹಾರಾಣಿಯೊಬ್ಬಳ ಕರ್ಮಭೂಮಿಯ ಪಕ್ಕದಲ್ಲೇ ನಾವಿದ್ದೂ, ಬಾಲ್ಯದಿಂದ ಇಲ್ಲಿಯವರೆಗೆ ಯಾರೊಬ್ಬರಿಂದಲೂ, ಎಲ್ಲಿಂದಲೂ ಈ ಕತೆಗಳೇ ನಮಗೆ ತಲುಪಲಿಲ್ಲವಲ್ಲಾ ಎಂಬುದಕ್ಕೆ !! ಘಜ್ನಿ, ಘೋರಿ, ಅಬ್ದಾಲಿಯಂತಹ ದಂಡುಕೋರರಿಗೆ, ಮೊಘಲರ ಕ್ರೌರ್ಯಕ್ಕೆ, ಪೋರ್ಚುಗೀಸರ, ಡಚ್ಚರ, ಫ್ರೆಂಚರ, ಆಂಗ್ಲರ ತೀರದ ದಾಹಕ್ಕೆ ಬೇಕುಬೇಕೆಂದಷ್ಟು ಜಾಗ ನೀಡುವ ಉದಾರಿ ಸ್ವಭಾವದ ನಮ್ಮ ಇತಿಹಾಸ ಪಠ್ಯಗಳು, ಬರೋಬ್ಬರಿ ಐವತ್ನಾಲ್ಕು ವರ್ಷಗಳ ಕಾಲ ರಾಜ್ಯವಾಳಿದ ಈ ರಾಣಿಯ ವಿಷಯದಲ್ಲಿ ಖಡು ಮೌನಿಗಳಾದವೇಕೆ? ಅಮೇರಿಕಾದ ಟೆಕ್ಸಾಸ್ ಯೂನಿವರ್ಸಿಟಿಯ ಪ್ರೊಫೆಸರ್ ಒಬ್ಬರು ಈಕೆಯ ಬಗ್ಗೆ ಅಧ್ಯಯನ ಮಾಡಿ, ಇವಳನ್ನು ಇಂಗ್ಲೆಂಡಿನ ಎಲಿಜಬೆತ್ ರಾಣಿಗೆ ಹೋಲಿಸಿ, ಬಾಯ್ತುಂಬ ಕೊಂಡಾಡಿದರೂ ನಮ್ಮ ಇತಿಹಾಸಕಾರರಿಗೆ, ಮಾಧ್ಯಮಗಳಿಗೆ, ಪಠ್ಯಗಳಿಗೆ ಇವಳು ಕಾಣದೇ ಉಳಿದಳಲ್ಲ !! ಇತಿಹಾಸದ ಕತ್ತಲ ಗರ್ಭದಲ್ಲಿ ಇಂತಹ ಇನ್ನೂ ಎಷ್ಟು ರತ್ನಗಳು ಹುದುಗಿ ಹೋಗಿವಿಯೋ ಯಾರು ಬಲ್ಲರು !!

ಪ್ರಾಯಶಃ ಈ ಕೃತಿ, ಕನ್ನಡ ಕಾದಂಬರಿ ಲೋಕದ ಅಗ್ರಮಾನ್ಯ ಪ್ರಯತ್ನಗಳಲ್ಲೊಂದು ಎಂದರೆ ತಪ್ಪಾಗಲಾರದು. 2021ರಲ್ಲಿ ಬಿಡುಗಡೆ ಹೊಂದಿ, ಅದೇ ವರ್ಷವೇ ನಾಲ್ಕು ಮುದ್ರಣಗಳನ್ನು ಕಂಡು, ಇದೀಗ ಆರನೇ ಮುದ್ರಣದ ಕೃತಿ ಕಳೆದ ವಾರ ನನ್ನ ಕೈ ಸೇರಿತು. ಪುಸ್ತಕವನ್ನು ಓದುವುದಕ್ಕೂ ಮೊದಲು, ಪುಸ್ತಕದ ಬಗ್ಗೆ ಲೇಖಕರಾದ ಗಜಾನನ ಶರ್ಮರ ಸಂದರ್ಶನವೊಂದನ್ನು ನೋಡಿದ್ದೆ. ಅದನ್ನು ನೋಡಿದ ಮೇಲೆ, ಈ ಕೃತಿ ರಾಣಿಯೊಬ್ಬಳ ಜೀವನಚರಿತ್ರೆಯಾಗಿರಬಹುದು ಎಂದಷ್ಟೇ ನಾನು ಭಾವಿಸಿದ್ದೆ. ಆದರೆ ಓದುತ್ತಾ ಸಾಗಿದಂತೆ ಅರಿವಾಯಿತು. ಇತಿಹಾಸದ ಮತ್ತು ಆಧ್ಯಾತ್ಮದ ಬಗ್ಗೆ ಆಸಕ್ತಿಯುರುವ ಪ್ರತಿಯೊಬ್ಬರ ಮನಸಲ್ಲೂ ಗುಪ್ತವಾಗಿ ಅಡಕವಾಗಿರಬಹುದಾದ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ಈ ಕೃತಿ ತೆರೆದಿಡುತ್ತದೆ.

ಚಕ್ರವರ್ತಿಯಾಗಿ ಸಾರ್ವಭೌಮನೆನಿಸಿದವನ ಪಾಲಿಗೂ ಸಾಮಂತರು, ಮಾಂಡಲಿಕರಂತಹ ಚಿಕ್ಕ ರಾಜರುಗಳು ಬಹು ಮುಖ್ಯವಾಗುತ್ತಾರೇಕೆ?

ಸಮುದ್ರಯಾನದ ಸುದೀರ್ಘ ಏಕತಾನತೆ ಯುರೋಪಿಯನ್ನರ ಕ್ರೌರ್ಯವನ್ನು ನಮ್ಮ ನೆಲದಲ್ಲಿ ಹೇಗೆ ಉದ್ದೀಪನಗೊಳಿಸಿತು?

ಕೆಲ ಧರ್ಮಗಳ ಏಕ ದೇವಾರಾಧನೆಯೇ ಇತಿಹಾಸದಲ್ಲಿನ ಕ್ರೌರ್ಯ ಮತಾಂತರಗಳಿಗೆ ಮೂಲಕಾರಣವೇ?

ಆದರ್ಶಕ್ಕೂ ವಾಸ್ತವಕ್ಕೂ ಇರುವ ವೈರುಧ್ಯಳೇ, ಮನದ ತುಮುಲಗಳಿಗೆ ಹೇಗೆ ಕಾರಣವಾಗುತ್ತವೆ?

ನಾವು ಮಾಡಿದ್ದು ಸರಿ ಎಂದು ಹೆಮ್ಮೆ ಪಡುವುದರಲ್ಲಿ ಅಥವಾ ತಪ್ಪು ಎಂದು ವ್ಯಥೆ ಪಡುವುದರಲ್ಲಿ ಎಷ್ಟು ಅರ್ಥವಿದೆ ? ನಮ್ಮ ಕರ್ಮಗಳಿಂದಾದ ಸರಿತಪ್ಪುಗಳ ಮೌಲ್ಯಮಾಪಕರಾರು?

ಚೆನ್ನಭೈರಾದೇವಿಯ ಜೀವನದ ಎಲ್ಲ ಮಜಲುಗಳನ್ನು ತೋರುವುದರ ಜೊತೆಜೊತೆಗೆ ಈ ಕೃತಿ ಇಂತಹ ಅನೇಕ ವಿಚಾರಗಳನ್ನು ತೆರೆದಿಡುತ್ತದೆ. ರಾಣಿಯ ವ್ಯಾವಹಾರಿಕ ಚಾಣಾಕ್ಷತೆ, ರಾಜಕೀಯ ಮುತ್ಸದ್ಧಿತನ, ಮಿತ್ರರಾಜ್ಯಗಳ ಜೊತೆಗಿನ ನಿಷ್ಠೆ, ಶತ್ರುರಾಜ್ಯಗಳ ಕುರಿತ ನಿಲುವುಗಳಿಗೆ ಬದ್ಧತೆ, ದೀನರೆಡೆಗಿನ ಔದಾರ್ಯತೆ, ಭವಿಷ್ಯದ ಕುರಿತ ದೂರದೃಷ್ಟಿ....ಇದೆಲ್ಲದರ ಪರಿಣಾಮ ಆಕೆ ಅಬಲೆಯಾದ ಶಬಲೆಯ ಪಾಲಿಗೆ 'ಸಣ್ಣಮ್ಮ'ನಾದಳು, ನಾಡ ಪ್ರಜೆಗಳ ಪಾಲಿಗೆ 'ಅವ್ವರಸಿ'ಯಾದಳು, ವಿಜಯನಗರದವರ ಪಾಲಿಗೆ ಮಹಾಮಂಡಲೇಶ್ವರಿಯಾದಳು, ಬಿಜಾಪುರದವರೊಂದಿಗೆ ಮೈತ್ರಿಯ ಸಹಕಾರಿಣಿಯಾದಳು, ಪೋರ್ಚುಗೀಸರ ಪಾಲಿಗೆ ಕೊನೆಯವರೆಗೂ ಅಭೇದ್ಯವಾಗುಳಿದ 'ರೈನಾ ದಿ ಪಿಮೆಂಟಾ' ಆದಳು. ಗೋವಾ, ಕೊಚ್ಚಿ, ಕಲ್ಲಿಕೋಟೆ, ದಿಯು ಮುಂತಾದ ಕರಾವಳಿ ನಗರಗಳಲ್ಲಿ ಈಗಲೂ ಪೋರ್ಚುಗೀಸರು ಕಟ್ಟಿದ ಹಳೆಯ ಚರ್ಚುಗಳು ಕಾಣಸಿಗುತ್ತವೆ. 1565ರ ತಾಳಿಕೋಟೆ ಯುದ್ಧದಲ್ಲಿ ಹಿಂದೂ ಸಾಮ್ರಾಜ್ಯವಾದ ವಿಜಯನಗರ ಹೀನಾಯವಾದ ಸೋಲು ಕಂಡಿತು. ಆ ಯುದ್ಧದ ನಂತರ ಕರ್ನಾಟಕದ ಚಿತ್ರಣ ಹೇಗಿತ್ತು ? ಮೇಲಿಂದ ಬಿಜಾಪುರ ಸುಲ್ತಾನರು, ಕೆಳಗಿನಿಂದ ಪೋರ್ಚುಗೀಸರು.... ಇಂತಹ ಸನ್ನಿವೇಶದಲ್ಲಿ ಒಂದು ವೇಳೆ ಹದಿನೈದನೆಯ ಶತಮಾನದಲ್ಲಿ ಈ ರಾಣಿಯ ಪ್ರಭುತ್ವ ಇರದಿದ್ದರೆ ಘಟ್ಟದ ಮೇಲಿನ ಕರ್ನಾಟಕವನ್ನೂ ಪೋರ್ಚುಗೀಸರು ನುಂಗಿ ನೊಣೆಯದೆ ಬಿಡುತ್ತಿರಲಿಲ್ಲವೇನೋ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆಗಳೂ ಸಹ ಇಂದು ಗೋವಾದ ತದ್ರೂಪಿಗಳೇ ಆಗಿಬಿಡುತ್ತಿದವೇನೋ.... ನಮ್ಮ ಪೂರ್ವಿಕರೂ ಬಲವಂತದ ಮತಾಂತರಕ್ಕೆ ಬಲಿಯಾಗುತ್ತಿದ್ದರೇನೋ !!

ಈ ಕಾದಂಬರಿಯಲ್ಲಿ ನನ್ನ ಮನಸ್ಸಿಗೆ ತೀರಾ ಹತ್ತಿರವಾದ ಸಾಲು "ರೂಪವೋ ಗುಣವೋ ಸಂಸ್ಕಾರವೋ ಬುದ್ಧಿಯೋ ರಕ್ತಸಂಬಧವನ್ನಾಧರಿಸಿ ಹರಿಯಬಹುದು. ಆದರೆ ಪ್ರೀತಿ ಹರಿಯುವುದಕ್ಕೆ ಯಾವ ಸಂಬಂಧವೂ ಬೇಡ".... ಎಷ್ಟು ಸತ್ಯ ಅಲ್ವಾ...ಅಷ್ಟಿಲ್ಲದೆ ನಮ್ಮ ಹೆಚ್.ಎಸ್.ವಿ. ಹೇಳುತ್ತಿದ್ದರೇ..."ತಡೆಯುವರಿಲ್ಲಾ.....ಪಾತ್ರವಿರದ ತೊರೆ ಪ್ರೀತಿ" !! ತೇಜೋ ನದಿಯ ತೀರದ ಪೋರ್ಚುಗಲ್ಲಿನ ಲಿಸ್ಬನ್ ಎಲ್ಲಿ....ಶರಾವತಿ ನದಿ ದಂಡೆಯ ಮೇಲಿನ ಗೇರುಸೊಪ್ಪೆ ಎಲ್ಲಿ !! ಇಂತಹ ಕೃತಿಗಳನ್ನು ಓದಿದಾಗ ಪ್ರಪಂಚ ನಿಜಕ್ಕೂ ಎಷ್ಟು ಚಿಕ್ಕದು ಎನಿಸುತ್ತದೆ. ಸಾಕಷ್ಟು ಅಧ್ಯಯನದೊಂದಿಗೆ, ನಿಖರ ವಿವರಗಳೊಂದಿಗೆ ಇಂತಹ ಕಾದಂಬರಿಯನ್ನು ಬರೆದು ಕನ್ನಡಕ್ಕರ್ಪಿಸಿದ ಶ್ರೀ ಗಜಾನನ ಶರ್ಮರ ಶ್ರಮ ಮತ್ತು ಪ್ರಯತ್ನಕ್ಕೆ ನಮನಗಳು. ಇಂತಹ ಕೃತಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಲಿ, ಓದುವ ಭಾಗ್ಯ ನಮ್ಮದಾಗಲಿ.

- ನಾಗೇಂದ್ರ ಎ.ಆರ್.

MORE FEATURES

ಅಂತರರಾಷ್ಟ್ರೀಯ ಮಟ್ಟದಲ್ಲಿ ತಾವೇ ಸ್ವತಃ ಕಂಡುಂಡ ರಣರೋಚಕ ಅನುಭವಗಳನ್ನು ದಾಖಲಿಸಿದ್ದಾರೆ

18-09-2024 ಬೆಂಗಳೂರು

"ಕಳೆದ ದಶಕದಲ್ಲಿ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮತ್ತು ಅಮೆರಿಕ, ನ್ಯಾಟೋ ಪಡೆಗಳ ನಡುವೆ ನಡೆದ ಸುಧೀರ್ಘ ...

ಕಾನೂನಿನ ಪ್ರಕಾರ ಇಂತಹ ಸ್ಥಳದ ಸುತ್ತಲೂ ಯಾವುದೇ ಅಹಿತಕರ ಚಟುವಟಿಕೆ ಮಾಡುವ ಹಾಗಿಲ್ಲ; ಮಾಲತಿ

18-09-2024 ಬೆಂಗಳೂರು

"ಗ್ರಾಮೀಣ ಶಾಲೆಯ ಸುಂದರ ಪರಿಸರದ ನಡುವೆ ಬೆಳೆಯುವ ಹುಡುಗರು ತಮ್ಮ ಚಟುವಟಿಕೆಯ ನಡುವೆಯೂ ಕುತೂಹಲದ ಕಣ್ಣಿಂದ ಹ...

ಹಿರಿಯರೂ ಓದಬೇಕಾದ ಮಕ್ಕಳ ಕಾದಂಬರಿ ‘ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು’

18-09-2024 ಬೆಂಗಳೂರು

"ಕಾದಂಬರಿ ಕಥೆಯ ವಿಸ್ತಾರ ರೂಪ. ಬರಹಗಾರನ ಕೌಶಲ್ಯ ಬೇಡುವ ಒಳಸುಳಿಗಳನ್ನು ಹುಡುಕುವ, ಪಾತ್ರದಲ್ಲಿತಾನೇ ಹೋಗಿ ಸೇರುವ...