ಕಾನೂನಿನ ಪ್ರಕಾರ ಇಂತಹ ಸ್ಥಳದ ಸುತ್ತಲೂ ಯಾವುದೇ ಅಹಿತಕರ ಚಟುವಟಿಕೆ ಮಾಡುವ ಹಾಗಿಲ್ಲ; ಮಾಲತಿ


"ಗ್ರಾಮೀಣ ಶಾಲೆಯ ಸುಂದರ ಪರಿಸರದ ನಡುವೆ ಬೆಳೆಯುವ ಹುಡುಗರು ತಮ್ಮ ಚಟುವಟಿಕೆಯ ನಡುವೆಯೂ ಕುತೂಹಲದ ಕಣ್ಣಿಂದ ಹೇಗೆಲ್ಲಾ ಸುತ್ತಲ ವಿದ್ಯಾಮಾನವನ್ನು ಗಮನಿಸುತ್ತಾರೆ. ಹಿರಿಯರ ಸಹಕಾರದಲ್ಲಿ ಗಣಿಗಾರಿಕೆಯಂತಹ ಹಾನಿಯನ್ನು ತಪ್ಪಿಸಲು ತಮ್ಮ ಸಾಹಸ ಮೆರೆಯುತ್ತಾರೆ ಎನ್ನುವ ವಿಷಯದ ಸುತ್ತ ಈ ಕಥೆ ರೂಪುಗೊಂಡಿದೆ," ಎನ್ನುತ್ತಾರೆ ಮಾಲತಿ ರಾಮಕೃಷ್ಣ ಭಟ್. ಅವರು ತಮ್ಮಣ್ಣ ಬೀಗಾರ ಅವರ ‘ಬಾವಲಿ ಗುಹೆ’ ಕುರಿತು ಬರೆದ ವಿಮರ್ಶೆ.

ಕೃತಿ ಹೆಸರು: ಬಾವಲಿ ಗುಹೆ
ಲೇಖಕರು: ತಮ್ಮಣ್ಣ ಬೀಗಾರ
ಅಭಿನವ ಪ್ರಕಾಶನ ಬೆಂಗಳೂರು
ಮುದ್ರಣದ ವರ್ಷ: 2018
ಪುಟ:76
ಬೆಲೆ: 70

ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಲೇಖಕರು ಶ್ರೀ ತಮ್ಮಣ್ಣ ಬೀಗಾರ. ವೃತ್ತಿಯಲ್ಲಿ ಶಿಕ್ಷಕರಾಗಿ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ಪಡೆದ ಇವರು ನಿವೃತ್ತರಾಗಿ ಸಿದ್ದಾಪುರದಲ್ಲಿ ನೆಲೆಸಿದ್ದಾರೆ.

ಲಲಿತ ಬರಹಗಳು, ಪ್ರಬಂಧ, ಕವನ ಸಂಕಲನ, ಶಿಶುಪ್ರಾಸ ಹೊತ್ತಿಗೆ, ಕಥಾಸಂಕಲನ, ಕಾದಂಬರಿ ಹೀಗೆ ಇವರು ಮೂವತ್ತಕ್ಕಿಂತಲೂ ಹೆಚ್ಚಿನ ಮಕ್ಕಳ ಕೃತಿಗಳನ್ನು ರಚಿಸಿದ್ದಾರೆ. ಅನೇಕ ಪ್ರಶಸ್ತಿ ಸನ್ಮಾನಗಳು ಇವರಿಗೆ ದೊರಕಿದೆ. ಪ್ರಸ್ತುತ ಈ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ 'ಬಾಲ ಸಾಹಿತ್ಯ ಪುರಸ್ಕಾರ'ಕ್ಕೆ ಪಾತ್ರವಾಗಿದೆ.

ಗ್ರಾಮೀಣ ಶಾಲೆಯ ಸುಂದರ ಪರಿಸರದ ನಡುವೆ ಬೆಳೆಯುವ ಹುಡುಗರು ತಮ್ಮ ಚಟುವಟಿಕೆಯ ನಡುವೆಯೂ ಕುತೂಹಲದ ಕಣ್ಣಿಂದ ಹೇಗೆಲ್ಲಾ ಸುತ್ತಲ ವಿದ್ಯಾಮಾನವನ್ನು ಗಮನಿಸುತ್ತಾರೆ. ಹಿರಿಯರ ಸಹಕಾರದಲ್ಲಿ ಗಣಿಗಾರಿಕೆಯಂತಹ ಹಾನಿಯನ್ನು ತಪ್ಪಿಸಲು ತಮ್ಮ ಸಾಹಸ ಮೆರೆಯುತ್ತಾರೆ ಎನ್ನುವ ವಿಷಯದ ಸುತ್ತ ಈ ಕಥೆ ರೂಪುಗೊಂಡಿದೆ.

ಈ ಕತೆಯ ಸಂಕ್ಷಿಪ್ತ ಪರಿಚಯ ಇಂತಿದೆ.....

ಶಾಲೆ ಬಿಟ್ಟೊಡನೆ ತಿಂಡಿ ತಿಂದು ಆಡಲು ಹೊರಗೆ ಬಂದ ಶಂಕರ. ತೋಟದ ಇಳಿಜಾರಿನಲ್ಲಿ ನಿಂತು 'ಕೂಹು' ಎಂದು ಎರಡು ಸಾರಿ ಕೂಗಿ ತನ್ನ ಗೆಳೆಯ ಜಾನಿಯನ್ನು ಕರೆದ. ತೋಟದ ಅತ್ತ ಕಡೆಯಿಂದ ಅಂತದೇ ಸೀಟಿ ಕೇಳಿದ ಮೇಲೆ ಅತ್ತ ಓಡಿದ. ಅಲ್ಲೊಂದು ಹರಿಯುವ ಹಳ್ಳ. ಅಲ್ಲಿ ಈಜಾಡುವ ಮೀನುಗಳು,ಕಪ್ಪುಬಂಡೆಯ ಮೇಲೆ ಕುಳಿತು ದೂರದಲ್ಲಿ ಕಾಣುವ ಗದ್ದೆಯ ಮೇಲೆ ಹಾರುವ ಹದ್ದು, ಹಿಕ್ಕೆ ಹಾಕುವ ಕಾಗೆ ಎಲ್ಲಾ ನೋಡುತ್ತಾ ಕುಳಿತಂತೆ ದೂರದಿಂದ 'ಢಮಾರ್' ಎನ್ನುವ ಶಬ್ದ ಕೇಳಿಸಿತ್ತು.!

ಮರದ ಮೇಲಿದ್ದ ಮಂಗಗಳು ಹೆದರಿ ಹೇಸಿಗೆ ಮಾಡಿ, ಅದು ಜಾನುವಿನ ತಲೆಯ ಮೇಲೆ ಬಿತ್ತು. ಆಗ ಮೊದಲ ಬಾರಿಗೆ ಗಾಬರಿಯಿಂದ ಮಕ್ಕಳು ಕಿವಿ ಮುಚ್ಚಿ ಕೊಂಡಿದ್ದರು. ಈಗ ಆರೇಳು ತಿಂಗಳಿನಿಂದ ಇಂತಹ ಸದ್ದು ಕೇಳಿ ಅವರಿಗೆ ಅಭ್ಯಾಸವಾಗಿ ಹೋಗಿದೆ.

ಅವರೂರಿನ ಗುಡ್ಡದಲ್ಲಿ ಕಲ್ಲು ಒಡೆದು ಸಾಗಿಸುವ ಕೆಲಸ ನಡೆದಿದೆ. ಬಂಡೆಗೆ ಯಂತ್ರದ ಸಹಾಯದಿಂದ ತೂತು ಕೊರೆದು ಅದರಲ್ಲಿ ಸ್ಪೋಟಕ ತುಂಬಿ ಸಿಡಿಮದ್ದಿಗೆ ಬೆಂಕಿ ಹಚ್ಚಿದಾಗ ಹೀಗೆ ಶಬ್ಧವಾಗುತ್ತಿತ್ತು. ಗಣಿಗಾರಿಕೆ ಕೆಲಸಕ್ಕೆ ಅಲ್ಲಿದ್ದ ದೊಡ್ಡ ಜೆಸಿಬಿ ಯಂತ್ರವೂ ಮಕ್ಕಳಿಗೆ ಅಚ್ಚರಿ ಮೂಡಿಸಿತ್ತು. ತಮ್ಮೂರಿನ ಮಣ್ಣಿನ ರಸ್ತೆಗೆ ಟಾರ್, ಹಳ್ಳಕ್ಕೆ ಸೇತುವೆ ಆದರೆ 'ಸುಂಯ್' ಎಂದು ಸೈಕಲ್ ಹೊಡೆಯುತ್ತಾ ಶಾಲೆಗೆ ಹೋಗುವ ಕನಸು ಕಂಡರು.

ಗಣಿಗಾರಿಕೆಗಾಗಿ ದೊಡ್ಡ ಆಲದ ಮರ ಕಡಿದಾಗ, ಅಲ್ಲಿ ಆಡಿದ ನೆನಪು ಬಂದು ಮಕ್ಕಳು ನೊಂದರು. ಜಾನುವಾರುಗಳು ಮೇಯಲು ಹೋದಾಗ ಮದ್ದು ಸಿಡಿದು ಪೆಟ್ಟು ಮಾಡಿ ಕೊಂಡಿದ್ದು, ಶಾಲೆಯಲ್ಲಿ ಹಿರಿಯ ಮುಖಂಡ ಶ್ಯಾಮಣ್ಣನವರ ನೇತೃತ್ವದಲ್ಲಿ ಸಭೆ ನಡೆಸಿ, ಚಳುವಳಿ ನಡೆಸಲು ತೀರ್ಮಾನಿಸಿದ್ದು, ಮಕ್ಕಳ ಮೂಲಕ ಕರ ಪತ್ರ ಹಂಚಿಸಿದ್ದು, ಹೋರಾಟದಲ್ಲಿ ಹಿರಿಯರ ಜೊತೆ ಮಕ್ಕಳು ಭಾಗವಹಿಸಿದ್ದು ಎಲ್ಲವನ್ನೂ ಕ್ರಮವಾಗಿ ಒಂದೊಂದು ಅಧ್ಯಾಯದಲ್ಲಿ ವಿವರಿಸಲಾಗಿದೆ.

ಕೆಲಸಗಾರರ ಟೆಂಟ್, ಅವರ ಕೊಳೆಬಟ್ಟೆ ಧರಿಸಿದ ಮಕ್ಕಳು ಶಾಲೆಗೆ ಹೋಗದ ಬಗ್ಗೆ ಈ ಮಕ್ಕಳ ಕಾಳಜಿ, ಚಳುವಳಿ ನಿಲ್ಲಿಸಲು ಪೊಲೀಸರು ಮಧ್ಯೆ ಬಂದಿದ್ದು, ಮಕ್ಕಳಿಗೆ ಮನೆಗೆ ಹೋಗಲು ಹೇಳಿದ್ದು,ಮರಳುವಾಗ ಜಲಪಾತದ ಬಳಿ ಗುಡ್ಡದ ಮೇಲಿರುವ 'ಬಾವಲಿ ಗುಹೆ'ಯನ್ನು ನೋಡಿದ್ದು ಇವು ಇಲ್ಲಿನ ಮಕ್ಕಳ ಕುತೂಹಲದ ಪತ್ತೆದಾರಿಕೆಗೆ ಮಾದರಿ.

ಕಥೆಯಲ್ಲಿ ಅಜ್ಜಿ ಮಕ್ಕಳಿಗೆ ಮಾವಿನ ಹಣ್ಣು ತಿನ್ನಲು ಕೊಟ್ಟು, ಗೊರಟೆಯನ್ನು ಮಣ್ಣು ತುಂಬಿದ ಪ್ಲಾಸ್ಟಿಕ್ ಚೀಲದಲ್ಲಿ ನೆಡಲು ಹೇಳುವಲ್ಲಿ ಗಿಡ ನೆಟ್ಟು ಹಸಿರು ಉಳಿಸುವ ಸೂಕ್ಷ್ಮ ಸಲಹೆ ಎದ್ದು ಕಾಣುತ್ತದೆ. ಮಳೆನೀರು ಮನೆಗೆ ನುಗ್ಗಿ ಚಳಿಯಲ್ಲಿದ್ದ ಅಜ್ಜಿಯನ್ನು ಹಿರಿಯರ ಸಹಾಯದಿಂದ ರಕ್ಷಿಸಿದ ಮಕ್ಕಳ ಕಾಳಜಿ ವ್ಯಕ್ತವಾಗುತ್ತದೆ. ಮಳೆ ಕಳೆದ ಮೇಲೆ ಮತ್ತೆ ಶುರುವಾದ ಗಣಿಗಾರಿಕೆ, ಕಾಡುಗಳ ನಾಶ ಎಲ್ಲರಿಗೂ ಸಮಸ್ಯೆ ತಂದಿತ್ತು.

ಸಾಹಸದಿಂದ ಮಕ್ಕಳು ಬಾವಲಿ ಗುಹೆಯಲ್ಲಿ ಹುಡುಕಿದ ಬಾಹುಬಲಿಯ ಮೂರ್ತಿಯೊಂದು ಪುರಾತನ ಸ್ಮಾರಕ ಎಂದು ಗೊತ್ತಾಯಿತು. ಕಾನೂನಿನ ಪ್ರಕಾರ ಇಂತಹ ಸ್ಥಳದ ಸುತ್ತಲೂ ಯಾವುದೇ ಅಹಿತಕರ ಚಟುವಟಿಕೆ ಮಾಡುವ ಹಾಗಿಲ್ಲ. ಮುಂದೆ ಮಕ್ಕಳ ಮೂಲಕ ಸಿಕ್ಕ ಇದೇ ವಿಷಯವನ್ನಿಟ್ಟು ಕೊಂಡು ಊರಿನ ಹಿರಿಯರು ನ್ಯಾಯಾಲಯದಲ್ಲಿ ಗೆದ್ದರೇ?...

ಎನ್ನುವುದನ್ನು ಪೂರ್ಣ ಕಥೆಯನ್ನು ಓದಿ ತಿಳಿಯಿರಿ....

ಶಂಕರನ ತಂಡದಲ್ಲಿ ಎಲ್ಲಾ ಸಮಾಜದ ಗೆಳೆಯರಿರುವುದು ಸಮಾನತೆ ತೋರಿಸುತ್ತದೆ. ಮಕ್ಕಳ ಹಾವ -ಭಾವದ ಪ್ರತಿನಡೆಯೂ ಇಲ್ಲಿ ಪ್ರತ್ಯಕ್ಷ ರೀತಿಯ ವರ್ಣನೆಯಲ್ಲಿ ಕೂಡಿದೆ. ಪರಿಸರ, ಪ್ರಾಣಿ ಪಕ್ಷಿ, ಹಸಿರು ಎಲ್ಲವೂ ಮನುಷ್ಯನಿಗೆ ಎಷ್ಟು ಮುಖ್ಯ ಎನ್ನುವುದನ್ನು ಇಲ್ಲಿ ಲೇಖಕರು ಮಕ್ಕಳ ಮೂಲಕ ಅರ್ಥಮಾಡಿಸಿ ನೀಡಿದ ಸಂದೇಶ ಮಹತ್ತರವಾಗಿದೆ.

- ತಮ್ಮಣ್ಣ ಬೀಗಾರ

MORE FEATURES

ಸಾಹಿತ್ಯ ಸಾಧಕರಲ್ಲಿ ನಿಲ್ಲುವ ಅಪ್ರತಿಮ ವ್ಯಕ್ತಿತ್ವವುಳ್ಳ ಸೃಜನಾತ್ಮಕ ಸಾಹಿತಿ ಗವಿಸಿದ್ಧಪ್ಪ

19-09-2024 ಬೆಂಗಳೂರು

“ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಮುಟ್ಟದ ವಿಷಯವಿಲ್ಲ ಎಂಬ ನಾಡ ನುಡಿಯಂತೆ ಡಾ. ಗವಿಸಿದ್ದಪ್ಪ ಹೆಚ್ ಪಾಟೀಲ ಅವರ...

ನಿಗೂಢ, ಪತ್ತೇದಾರಿಯ ಜಾಡಿನಲ್ಲಿ ಸಾಗುವ ಕಾದಂಬರಿಯಿದು..

19-09-2024 ಬೆಂಗಳೂರು

“ಕೇರಳ ಮತ್ತು ಕರ್ನಾಟಕ ರಾಜ್ಯಗಳ ಗಡಿಯಲ್ಲಿದ್ದ ಯಾವುದೋ ಊರು ಅದು. ಆ ಊರಲ್ಲಿ ಸಂಪಾದಕರು, ವರದಿಗಾರರು ಯಾರೆಂದೇ ತ...

ಒಂದು ಕಥೆಯೊಳಗೆ ಎಷ್ಟೆಲ್ಲ ಕಥೆಗಳು!

19-09-2024 ಬೆಂಗಳೂರು

"ನಾವು ಬದುಕನ್ನು ಆ ವರ್ಷ ಪಡೆದ ಸಂಬಳ, ಮಾಡಿದ ಖರ್ಚು, ಕೊಂಡ ವಸ್ತುಗಳು, ಕಳೆದುಕೊಂಡ ವ್ಯಕ್ತಿಗಳು ಎಂಬ ಅಂತಿಮ ಘಟ್...