Date: 13-11-2024
Location: ಬೆಂಗಳೂರು
ಬೆಂಗಳೂರು: ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ -2024 ಸಂಭ್ರಮಾಚರಣೆ, ಪುಸ್ತಕ ಬಿಡುಗಡೆ ಹಾಗೂ ರಾಜ್ಯಮಟ್ಟದ ಸ್ಪರ್ಧೆ ಕಾರ್ಯಕ್ರಮವು 2024 ನಂ. 13 ಬುಧವಾರದಂದು ನಗರದ ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜಿನ ಮಂಗಳ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ‘ಕನಸು’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಖ್ಯಾತ ಸಾಹಿತಿ, ಚಲನಚಿತ್ರ ನಿರ್ದೇಶಕ, ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತ ನಾಗತಿಹಳ್ಳಿ ಚಂದ್ರಶೇಖರ್, “ಇವತ್ತಿಗೂ ಕೂಡ ಕನ್ನಡಕ್ಕೆ ಸರಿಯಾದ ಜಲನೀತಿ, ಶಿಕ್ಷಣ ನೀತಿ, ಉದ್ಯೋಗ ನೀತಿ ಇಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮನ್ನ ಆಳುವವರ ಇಚ್ಛಾ ಶಕ್ತಿ. ಎಷ್ಟು ಮಂದಿ ಇಲ್ಲಿಂದ ದೆಲ್ಲಿಗೆ ಆಳ್ವಿಕೆಯನ್ನು ಮಾಡುವ ನೆಪದಲ್ಲಿ ಹೋದರೂ ಕನ್ನಡದ ಬಗ್ಗೆ ಕಿಂಚ್ಚಿತ್ತು ಕಾಳಜಿಯಿಲ್ಲ. ಹೀಗೆ ನಮ್ಮನ್ನು ಆಳುವ ರಾಜಕಾರಣಿಗಳು ಹಾಗೂ ನಮ್ಮ ಸಮುದಾಯದವರ ಮನಸ್ಥಿತಿ ಭಿನ್ನವಾಗಿದೆ. ಇತರರನ್ನು ದೂರುವುದನ್ನು ಬಿಟ್ಟು ನಾವೇನು ಮಾಡಬಹುದು ಎಂದು ಚಿಂತಿಸಬೇಕು. ಪ್ರತಿಯೊಬ್ಬ ವ್ಯಕ್ತಿ ಕನ್ನಡ ನಾಡು ನುಡಿಯ ಬಗ್ಗೆ ಚಿಂತಿಸಬೇಕು. ಕನ್ನಡ ಭಾಷೆ ಎದುರಿಸುತ್ತಿರುವ ಸವಾಲು, ಹಾಗೂ ಕನ್ನಡ ಭಾಷೆಯನ್ನು ಉಳಿಸುವ ನೈತಿಕ ಹೊಣೆ ನಮ್ಮದಾಗಬೇಕು ಎಂದು,” ತಿಳಿಸಿದರು.
ಲೇಖಕಿ, ಪ್ರಾಧ್ಯಾಪಕಿ ಸಂಧ್ಯಾ ಹೆಗಡೆ ದೊಡ್ಡಹೊಂಡ ಮಾತನಾಡಿ, “ಕರ್ನಾಟಕದ ಏಕೀಕರಣದ ಸಂದರ್ಭಗಳಲ್ಲಿ ನಮಗೆ ಶತ್ರುಗಳಿರಲಿಲ್ಲ. ನಮ್ಮದೇ ಅಣ್ಣ, ತಮ್ಮಂದಿರ ಜೊತೆಗೆ ನಾವು ಕಾದಾಡಬೇಕಾದಂತಹ ಪರಿಸ್ಥಿತಿ ನಮ್ಮೆದುರಿಗಿತ್ತು. ಇಂತಹ ಸಂದರ್ಭದಲ್ಲಿ ನಮ್ಮ ಭಾರತದ ಏಕತೆ ಮತ್ತು ಭಾರತದ ಸಾರ್ವಭೌಮತೆಗೆ ದಕ್ಕೆ ಬಾರದಂತೆ ಏಕೀಕರಣವನ್ನು ಮಾಡುವ ಸವಾಲು ನಮ್ಮ ಮುಂದಿತ್ತು. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಏಕೀಕರಣವನ್ನು ಪಡೆಯುವುದು ಕೂಡ ಕಷ್ಟವಾಗಿತ್ತು. ಹೈದರಾಬಾದ್ ಕರ್ನಾಟಕ ಸೇರಿದಂತೆ ಹಲವು ಪ್ರದೇಶಗಳಲ್ಲಿ ಲೀನವಾಗಿದ್ದ ನಮ್ಮ ಕರ್ನಾಟಕವನ್ನು ಏಕೀಕರಣಗೊಳಿಸಲು ಬಹಳಷ್ಟು ಮಹನೀಯರು ತಮ್ಮ ಬೆವರನ್ನಷ್ಟೇ ಅಲ್ಲದೆ ರಕ್ತವನ್ನು ಕೂಡ ಸುರಿದಿದ್ದಾರೆ. ಏಕೀಕರಣ ಅನ್ನುವುದು ಗತವಲ್ಲ, ಅದು ಪ್ರಸ್ತುತ, ಭವಿಷ್ಯ ಕೂಡ. ಮುಂದಿನ ದಿನಗಳಲ್ಲಿ ಕನ್ನಡದ ಕೀರ್ತಿ ಜಗತ್ತಿನ ದಶದಿಕ್ಕುಗಳಲ್ಲಿ ಹರಡಲಿ. ಅದರ ಶಕ್ತಿಯ ತರಂಗಗಳ ಚಂಡೆ, ಮದ್ದಳೆಯ ಅನುರಣನ ದಶ ದಿಕ್ಕುಗಳಲ್ಲಿ ಮೊಳಗಲಿ. ಭವ್ಯ ಭವಿಷತ್ತು ನಮ್ಮದಾಗಲಿ ಎಂಬುವುದೇ ನನ್ನ ಆಸೆ,” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜಿನ ಅಧ್ಯಕ್ಷೆ ಮಾಯಾ ಚಂದ್ರ ಮಾತನಾಡಿ, “ ಕನ್ನಡವನ್ನು ದಿನನಿತ್ಯ ಉಪಯೋಗಿಸಿ. ಅಷ್ಟೇಅಲ್ಲದೆ ನಮ್ಮ ಭಾಷೆಯನ್ನು ಇನ್ನೊಬ್ಬರಿಗೆ ಕಲಿಸುವಂತಹ ಕೆಲಸವನ್ನು ಕೂಡ ಮಾಡಬೇಕಿದೆ. ಕನ್ನಡದ ಉಳಿವಿಗೆ ಪ್ರತಿಯೊಬ್ಬ ಕನ್ನಡಿಗನು ಶ್ರಮಿಸಬೇಕು,” ಎಂದು ತಿಳಿಸಿದರು.
ವೇದಿಕೆಯಲ್ಲಿ ಜಯನಗರದ ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಸ್ನೇಹಲತಾ ಜಿ. ನಾಡಿಗೇರ್ ಉಪಸ್ಥಿತರಿದ್ದರು.
ಬೆಂಗಳೂರಿನ ಅಭಿನವ ಪ್ರಕಾಶನ ಹಾಗೂ ಭಾರತೀಯ ವಿದ್ಯಾಭವನವು ಪುಸ್ತಕ ಪ್ರದರ್ಶನ ಮತ್ತು ಮಾರಾಟ ಸಹಕಾರವನ್ನು ನೀಡಿತು.
ಕಾರ್ಯಕ್ರಮವನ್ನು ಆನ್ ಲೈನ್ ನಲ್ಲಿ ಬುಕ್ ಬ್ರಹ್ಮ ಯುಟ್ಯೂಬ್ ಚಾನೆಲ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ..
ಬೆಂಗಳೂರು: ಅಂಕಿತ ಪ್ರಕಾಶನದ ವತಿಯಿಂದ ಚಿತ್ರಸಮೂಹ ಸಹಯೋಗದಲ್ಲಿ ಸುಚಿತ್ರಾ ಫಿಲಂ ಸೊಸೈಟಿ ಹಾಗೂ ವಾರ್ತಾ ಮತ್ತು ಸಾರ್ವಜನ...
ಬೆಂಗಳೂರು: 'ವಿನಯ ಮತ್ತು ಅಧಿಕಾರ ಒಟ್ಟಿಗೆ ಹೋಗುವುದಿಲ್ಲ. ಅಧಿಕಾರ ಬಂದರೆ ಅಹಂಕಾರ ಒಟ್ಟೊಟ್ಟಿಗೆ ಬರುತ್ತದೆ. ಕೇಂದ...
ಬೆಂಗಳೂರು: ದೆಹಲಿಯ ಸಂಗೀತ ನಾಟಕ ಅಕಾಡೆಮಿಯಿಂದ ನೀಡುವ ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022ಕ್ಕೆ ಕವಿ, ನಾಟಕಕಾರ ಬೇಲೂರು ...
©2024 Book Brahma Private Limited.