Date: 29-09-2021
Location: ಬೆಂಗಳೂರು
‘ಕನಕರನ್ನು ಕೇವಲ ಕೀರ್ತನಕಾರನಾಗಿ, ದಾಸನನ್ನಾಗಿ ನೋಡದೆ ದಾರ್ಶನಿಕನನ್ನಾಗಿ, ಈ ನೆಲದ ತಾತ್ವಿಕತೆಯ ಅಸ್ಮಿತೆಯಾಗಿ ನೋಡಬೇಕು’ ಎನ್ನುತ್ತಾರೆ ಸಂಸ್ಕೃತಿ ಚಿಂತಕ, ಸಂಶೋಧಕ ನಟರಾಜ ಬೂದಾಳು ಅವರು ತಮ್ಮ 'ಬಯಲ ಬೆಳಕು' ಅಂಕಣದಲ್ಲಿ ಕನಕದಾಸರ ಓದಿನ್ನ ವಿಭಿನ್ನ ಮಾದರಿಗಳ ಕುರಿತು ಚರ್ಚಿಸಿದ್ದಾರೆ.
ಕನಕದಾಸರನ್ನು ಒಂದು ನೆಲೆಗೆ ಸೀಮಿತಗೊಳಿಸಲಾಗಿದೆ. ಉಡುಪಿಯವನೆಂದೋ, ವಿಜಯನಗರದವನೆಂದೋ ನೋಡದೆ ಕನಕದಾಸರನ್ನು ‘ಬಾಡದ’ವನೆಂದು ನೋಡಿದಾಗ ನಮಗೆ ಕಾಣುವ ನೋಟವೇ ಬೇರೆಯಾಗಿರುತ್ತದೆ. ಕನಕದಾಸರನ್ನು ಕುರಿತ ನಮ್ಮ ಓದನ್ನು ದೀರ್ಘಕಾಲದಿಂದ ನಿಯಂತ್ರಿಸಿಕೊಂಡು ಬರಲಾಗಿದೆ. ಅವರನ್ನು ಈವರೆಗೆ ಕೇವಲ ವೈಷ್ಣವ ಪಾಂಥಿಕ ಓದಿನ ಮೂಲಕ ಮಾತ್ರ ನೋಡಲಾಗಿದೆ. ವೈಷ್ಣವ ಭಕ್ತಿಪಂಥದ ದ್ವೈತ ಓದಿಗೆ ಕನಕರನ್ನು ಸಿಕ್ಕಿಸಿಕೊಳ್ಳಲಾಗಿದೆ. ಕನಕದಾಸರನ್ನು ಹಾಗೆಯೇ ಹೊರಗೆ ನಿಲ್ಲಿಸಿಲ್ಲ, ಬಂಧಿಸಿ ನಿಲ್ಲಿಸಲಾಗಿದೆ. ಕನಕರ ಭಕ್ತಿ ಬೇಕು, ಅವರ ಹಾಡು ಬೇಕು, ಅವರ ಸಂಗೀತ ಬೇಕು ಆದರೆ ಅವರು ಬೇಡವೆನ್ನುವ ಓದು ಇನ್ನೂ ನಡದೇ ಇದೆ. ಅವರನ್ನು ದಾಸರೆಂದೋ, ಕೀರ್ತನಕಾರರೆಂದೋ ನೋಡಲು ಬೇಕಾಗುವಷ್ಟನ್ನು ಮಾತ್ರವೇ ಕಾಣಿಸಿಕೊಡಲಾಗಿದೆ. ಕನಕರ ನಳಚರಿತ್ರೆಯನ್ನಾಗಲಿ, ರಾಮಧಾನ್ಯ ಚರಿತ್ರೆಯನ್ನಾಗಲಿ ಮುನ್ನಲೆಗೆ ಬರದಂತೆ ನೋಡಿಕೊಳ್ಳಲಾಗಿದೆ. ವಿಷ್ಣುಭಕ್ತಿಯ ಓದಿಗೆ ಒಳಗಾದ ಕನಕರನ್ನು, ಅವರ ಅಭಿವ್ಯಕ್ತಿಯನ್ನು ದೊಡ್ಡ ಪ್ರಮಾಣದಲ್ಲಿ ಪ್ರಕ್ಷಿಪ್ತಗಳು ಆವರಿಸಿಕೊಂಡಿವೆ. ಸಮಾಜದ ಕೆಳಸ್ತರದ ಒಪ್ಪಿಗೆಯನ್ನು ಉತ್ಪಾದಿಸಿಕೊಳ್ಳಲು ಕನಕರು ಒಳ್ಳೆಯ ಮಾಧ್ಯಮವಾಗಿ ಒದಗಿಬಂದಿದ್ದಾರೆ. ಕನಕದಾಸರು ಉಡುಪಿಯಲ್ಲಿ ಕೃಷ್ಣನೆದುರು ನೆಲೆನಿಂತವರಲ್ಲ. ಅವರು ಸದಾ ತಿರುಗುತ್ತಿದ್ದ ಜಂಗಮ ಪ್ರವೃತ್ತಿಯವರು. ಆದರೆ ಪಂಥೀಯ ದೃಷ್ಟಿಕೋನವು ಕೃಷ್ಣನನ್ನೂ ಜನರ ಕಡೆಗೆ ತಿರುಗಲು ಬಿಡುತ್ತಿಲ್ಲ, ಕನಕರನ್ನೂ ಒಳಗೆ ಬಿಡುತ್ತಿಲ್ಲ. ಹೊಸ್ತಿಲ ಮೇಲೆ ಕುಳಿತು ವ್ಯಾಪಾರ ನಡೆಯುತ್ತಿದೆ.
ಹಾಗೆಯೇ, ಭಾರತದ ದಾರ್ಶನಿಕ ಚರಿತ್ರೆಯನ್ನು ದ್ವೈತಾದ್ವೈತಗಳ ಮೂಲಕ ಮಾತ್ರವೇ ದಾಖಲಿಸಿ ಅವುಗಳ ಮೂಲಕ ಮಾತ್ರ ನೋಡಲು ಒತ್ತಾಯಿಸುವ ಓದುಗಳು ಕೂಡಾ ಚಾಲ್ತಿಯಲ್ಲಿವೆ. ಇಲ್ಲೆಲ್ಲ ನಿರಾಕರಣೆಗೊಳ್ಳುವ ಅಥವಾ ನಿರ್ಲಕ್ಷಕ್ಕೀಡಾಗುವ ‘ಬಹುತ್ವ’ ದೃಷ್ಟಿಕೋನವು ಮಾತ್ರ ನಿಜವಾದ ಭಾರತವನ್ನು ಕಾಣಿಸಿಕೊಡಬಲ್ಲದು. ನಮ್ಮ ಮುಂದಿರುವ ಸಮಸ್ಯೆಯೆಂದರೆ ನಮ್ಮ ಚರಿತ್ರೆಯನ್ನು ಇಂತಹ ಬಹುತ್ವದ ಮೂಲಕ ಕಟ್ಟಿಕೊಳ್ಳಬೇಕಾಗಿರುವುದು. ದ್ವೈತಾದ್ವೈತವನ್ನು ನಿರಾಕರಿಸುವ ದೃಷ್ಟಿಕೋನಗಳನ್ನು, ಅಧಿಕಾರ ಕೇಂದ್ರಗಳಿಗೆ ಮಣಿಯದ, ಅವುಗಳ ಪರವಾದ ಅಧಿಕಾರ ನಿರ್ವಚನಕ್ಕೆ ಒದಗಿ ಬಾರದ ತಾತ್ವಿಕತೆಗಳನ್ನು ನಿರಂತರವಾಗಿ ಹೊರಗೆ ನಿಲ್ಲಿಸುವ ಪ್ರವೃತ್ತಿಯು ಭಾರತೀಯ ಸಾಂಸ್ಕೃತಿಕ ರಾಜಕಾರಣದಲ್ಲಿ ಚಾಲ್ತಿಯಲ್ಲಿದೆ. ನಮ್ಮ ಸಾಹಿತ್ಯ ಚರಿತ್ರೆಯ ಪಾಡೂ ಇದೇ ಆಗಿದೆ. ಜೈನ, ವೀರಶೈವ ಮತ್ತು ವೈದಿಕ ಸಾಹಿತ್ಯವನ್ನು ಮಾತ್ರ ಓದಲು ಇಡಲಾಗಿದೆ. ಹೊಸಗನ್ನಡ ಸಾಹಿತ್ಯವನ್ನು ಹೊರತುಪಡಿಸಿದರೆ ಒಕ್ಕಲಿಗರ, ಕುರುಬರ, ಹೊಲೆಯರ, ಮಾದಿಗರ, ಕುಂಬಾರರ, ಗಾಣಿಗರ, ಗೊಲ್ಲರ, ಬೇಡರ, ಬೆಸ್ತರ, ಸಾಬರ, ಉಪ್ಪಾರರ, ಸಾಹಿತ್ಯವನ್ನು ನಮ್ಮ ಸಾಹಿತ್ಯದ ಓದಿನಿಂದ ಹೊರಗೇ ಇಡಲಾಗಿತ್ತು. ಜುಂಜಪ್ಪನಕಾವ್ಯ, ಮೈಲಾರಲಿಂಗನ ಕಾವ್ಯ, ಎತ್ತಪ್ಪನ ಕಾವ್ಯ, ಮಂಟೇಸ್ವಾಮಿ ಕಾವ್ಯ, ಮಲೆಮಾದೇಶ್ವರನ ಕಾವ್ಯ, ಕೃಷ್ಣಗೊಲ್ಲರ ಕಾವ್ಯ, ಶನಿಮಹಾತ್ಮೆ, ಚಿದಾನಂದಾವಧೂತರ ದೇವಿ ಮಹಾತ್ಮೆ ಹತ್ತಾರು ಸಾವಿರ ತತ್ವಪದಗಳು - ಇವೆಲ್ಲ ಈಗಲೂ ಹೊರಗೇ ನಿಲ್ಲಿಸಲ್ಪಟ್ಟಿವೆ. ಹೀಗೆ ಹೊರಗೆ ನಿಲ್ಲಿಸುವ ನಿಲುವು ಕನಕನ್ನು ವ್ಯಾಖ್ಯಾನಿಸಿಕೊಟ್ಟಿರುವುದರಿಂದ ಈ ಮಾತು ಅಗತ್ಯವೆನ್ನಿಸಿದೆ.
ಯಾಕೆ ಆಹಾರಸಮಾನತೆ ಮತ್ತು ಸಂಸಾರಸಾಮರಸ್ಯದ ಕಥನಗಳನ್ನು ಕನಕದಾಸರು ತಮ್ಮ ಕಾವ್ಯವಸ್ತುವನ್ನಾಗಿಸಿಕೊಂಡರು? ಈ ಕತೆಗಳನ್ನು ಅಧಿಕಾರ ಕೇಂದ್ರದಲ್ಲಿರುವವರಿಗೆ ಕೇಳುವಂತೆ ನುಡಿಯುತ್ತಿರುವುದು ಏಕೆ? ಈ ಪ್ರಶ್ನೆಗಳನ್ನು ಇಂದೂ ಕೇಳಿಕೊಳ್ಳಬೇಕಾಗಿದೆ. ಈ ಹೊತ್ತು ಅನ್ನ ಅನ್ನವಷ್ಟೇ ಅಲ್ಲ; ಬದಲಿಗೆ ಅದು ಯಾರ್ಯಾರನ್ನು ಅಧಿಕಾರದಿಂದ ಎಷ್ಟೆಷ್ಟು ದೂರ ನಿಲ್ಲಿಸಬೇಕು ಎಂದು ತೀರ್ಮಾನಿಸುವ ತಾರತಮ್ಯದ ಶಕ್ತಿಯಾಗಿದೆ. ಧರ್ಮ, ದೈವ, ಭಕ್ತಿ, ರಾಷ್ಟ್ರಪ್ರೇಮ ಮುಂತಾದ ಪರಿಕಲ್ಪನೆಗಳನ್ನು ಹೇಗೆ ಹೇಗೆ ಓದಬಲ್ಲರು ಎಂಬ ಸೊಲ್ಲನ್ನು ಕನ್ನಕದಾಸರು ಬಲ್ಲರು. ರಾಜ್ಯಾಧಿಕಾರವನ್ನು ಕಂಡುಂಡ ಕನಕದಾಸರಿಗೆ, ಅಧಿಕಾರ ಕೇಂದ್ರಗಳು ತಮಗೆ ಬೇಕಾದವರ ಆಯ್ಕೆ ಅಥವಾ ತಿರಸ್ಕಾರಕ್ಕೆ ಏನೇನನ್ನು ಬಳಸಬಲ್ಲವು ಎಂಬ ಸ್ಪಷ್ಟ ಅರಿವಿದೆ.
ಕನಕರನ್ನು ಕೇವಲ ಕೀರ್ತನಕಾರನಾಗಿ, ದಾಸನನ್ನಾಗಿ ನೋಡದೆ ದಾರ್ಶನಿಕನನ್ನಾಗಿ, ಈ ನೆಲದ ತಾತ್ವಿಕತೆಯ ಅಸ್ಮಿತೆಯಾಗಿ ನೋಡಬೇಕು. ಈ ನೆಲದ ಶಕ್ತಿಯಾಗಿ ಅವರನ್ನು ಕಾಣಿಸುವಂತಾಗಬೇಕು. ಭಕ್ತಿಯ ಕನಕರನ್ನಾಗಿ ಮಾತ್ರವೇ ನೋಡದೆ ಕ್ರಾಂತಿಕಾರಿ ಕನಕರನ್ನೂ ನಾವು ಕಾಣಬಹುದಾಗಿದೆ. ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಬಸವಣ್ಣನಂತೆಯೇ ಕನಕರನ್ನೂ ಕ್ರಾಂತಿಕಾರಿ ನೆಲೆಯಲ್ಲಿ ನೋಡಬಹುದಿತ್ತು. ಆದರೆ ಅದು ಆಗಲಿಲ್ಲ. ಈಗ ನಮ್ಮ ನಡುವಿನ ಒಂದು ಸಮಾಜ ಕನಕರನ್ನು ತಮ್ಮ ಸಮಾಜೋ ಸಾಂಸ್ಕೃತಿಕ ಅಸ್ಮಿತೆಯನ್ನಾಗಿ ಗುರುತಿಸಿಕೊಂಡಿದೆ. ಅದು ತಪ್ಪೇನಲ್ಲ. ಆದರೆ ಕನಕರು ಈ ನಾಡಿನ ಎಲ್ಲ ನೆಲಮೂಲ ಸಮೂಹಗಳಿಗೆ ಕೊಟ್ಟ ತತ್ವದರ್ಶನ, ಸಾಮಾಜಿಕ ಎಚ್ಚರ, ಬಹುತ್ವದ ನಿಲುವು ಮತ್ತು ಅತ್ಯಂತ ಮುಖ್ಯವಾದ ‘ಕೈ ಸದರದವರನು ಕೊಲುವುದುಚಿತವೆ?’ ಎಂದು ಅಧಿಕಾರ ಕೇಂದ್ರವನ್ನು ಕೇಳುವುದರ ಮೂಲಕ ಎಲ್ಲ ಅಸಹಾಯಕ ಸಮುದಾಯಗಳ ಪರವಾಗಿ ನಿಂತ ಕನಕರನ್ನು ತಮ್ಮ ಆದರ್ಶವನ್ನಾಗಿಸಿಕೊಳ್ಳುವುದು ಈ ಹೊತ್ತಿನ ಅಗತ್ಯವಾಗಿದೆ.
ಕನಕರ ತಾತ್ವಿಕತೆಯ ಪ್ರಸ್ತುತತೆ
ಹೊಸ ಪೀಳಿಗೆಯು ಹಳಗನ್ನಡದ ಓದಿನ ಬಗೆಗೆ ತೋರುತ್ತಿರುವ ಅನಾದರವನ್ನು ಕಂಡ ನಮ್ಮ ಹಿರಿಯರು ಒಂದು ರೀತಿಯ ಆತಂಕವನ್ನು ವ್ಯಕ್ತಪಡಿಸುತ್ತಾರೆ. ಆದರೆ ನನ್ನ ಆತಂಕ ಬೇರೆ ರೀತಿಯದ್ದು. ಈ ಹಿರಿಯರನ್ನು, ಗುರುಗಳನ್ನು ಭಂಗಗೊಳಿಸದ ಹೊರತು ಹೊಸತನ್ನು ನಾವು ಕಾಣಲಾರೆವು. ಈವರೆಗೆ ಈ ಹಿರೀಕನಡೆಸಿರುವ ಹಳಗನ್ನಡದ ಓದು ಯಾವ ರೀತಿಯದ್ದು?
ಪಂಪ, ರನ್ನ ಮುಂತಾದವರನ್ನು ಜೈನ ತಾತ್ವಿಕತೆಯ ಪ್ರಮುಖ ಮೀಮಾಂಸಾ ಪರಿಕಲ್ಪನೆಯಾದ ಅನೇಕಾಂತವಾದದ ಮೂಲಕ ಓದಿದ್ದಾರೆಯೇ? ವಚನಕಾರರನ್ನು ಕಾಶ್ಮೀರ ಶೈವದ ಮೂಲಕ ತಮಿಳಿನ ಶೈವ ಸಿದ್ದಾಂತದ, ಅದ್ವೈತದ ಮೂಲಕ ಮಾತ್ರ ಓದುತ್ತಿದ್ದಾರೆಯೇ ಹೊರತು, ನಾಥ, ಸಿದ್ಧ, ಬೌದ್ಧ, ಕಾಪಾಲಿಕ, ಶಾಕ್ತ, ಅವಧೂತ, ಆರೂಢ ಮುಂತಾದ ದ್ವೈತಾದ್ವೈತಗಳನ್ನು ದಾಟಿದ ಶ್ರಮಣಧಾರೆಗಳ ಮೂಲಕ ಯಾಕೆ ಓದಿಲ್ಲ? ನೂರಾರು ತತ್ವಪದಕಾರರನ್ನು, ಭಾರತದ ಉದ್ದಗಲಕ್ಕೂ ವ್ಯಾಪಿಸಿರುವ ಸಿದ್ಧ ಪರಂಪರೆಯನ್ನು ದ್ವೈತಾದ್ವೈತಗಳ ಮೂಲಕ ಮಾತ್ರ ಓದುತ್ತಿದ್ದಾರೆಯೇ ಹೊರತು ಅವುಗಳನ್ನು ದಾಟಿದ ಪರಿಕಲ್ಪನೆಗಳ ಮೂಲಕ ಯಾಕೆ ಓದುತ್ತಿಲ್ಲ? ಕನಕನನ್ನು ದ್ವೈತದಿಂದ ಹೊರತಾದ ಭಾಗವತಭಕ್ತಿ ಪಂಥದ ಮೂಲಕವೋ, ಶ್ರೀವೈಷ್ಣವದ ಮೂಲಕವೋ ಯಾಕೆ ಓದಿಲ್ಲ? ಇತ್ಯಾದಿ ಪ್ರಶ್ನೆಗಳು ಎದುರಿಗೆ ಇವೆ.
ಓದು ಮತ್ತು ಕಥನ ಎರಡೂ ಗಂಭೀರವಾದ ಸಾಂಸ್ಕೃತಿಕ ರಾಜಕಾರಣವನ್ನು ನಿರ್ವಹಿಸುತ್ತವೆ. ಕಥನ ಒಂದು ರಾಜಕಾರಣ. ಯಾವ ಕತೆಯನ್ನು ಹೇಳಬೇಕು, ಹೇಗೆ ಹೇಳಬೇಕು, ಯಾವಾಗ ಹೇಳಬೇಕು, ಯಾರಿಗೆ ಹೇಳಬೇಕು, ಯಾರ ಕೈಲಿ ಹೇಳಿಸಬೇಕು, ಯಾವ ಕತೆಗಳನ್ನು ಹೇಳಬಾರದು– ಇವೆಲ್ಲ ಕಥನ ರಾಜಕಾರಣದ ಪ್ರಮುಖ ನಿರ್ಧಾರಗಳು. ಈ ಕಥನ ರಾಜಕಾರಣದ ಒಂದೆರಡು ಮಾದರಿಗಳೆಂದರೆ ಪಂಪನು ನಿರ್ವಹಿಸಿದ ಕರ್ಣಜನ್ಮ ವೃತ್ತಾಂತ ಮತ್ತು ಭಾನುಮತಿ-ಕರ್ಣರ ಪಗಡೆಯ ಪ್ರಸಂಗಗಳು ಹಾಗೂ ಹರಿಹರ ತನ್ನ ಕಥಾನಾಯಕರನ್ನಾಗಿ ಮಾದಿಗರ ಚೆನ್ನಯ್ಯ, ಬೇಡರ ಕಣ್ಣಪ್ಪ, ಬೆಸ್ತರ ಅತಿಭಕ್ತ, ಕುಂಬಾರ ಗುಂಡಯ್ಯ, ಮುಂತಾದವರನ್ನೇ ಗುರುತಿಸಿಕೊಂಡದ್ದು.
ಈ ನೆಲೆಯಿಂದ ನೋಡಿದಾಗ ಬೌದ್ದ, ಆಜೀವಿಕ, ಸಿದ್ಧ, ನಾಥ, ಕಾಪಾಲಿಕ, ಶಾಕ್ತ, ಕೌಳ, ರಸಸಿದ್ಧ, ಶರಣ, ಸೂಫಿ, ಅವಧೂತ, ಆರೂಢ, ತತ್ವಪದಕಾರರ ಸಹಜಯಾನಿ ಪರಂಪರೆಗಳ ಸಾಲಿನಲ್ಲಿ ವೈಷ್ಣವ ಭಕ್ತಿಪಂಥವನ್ನಿಟ್ಟು ನೋಡುವುದು ತಾತ್ವಿಕತೆಯ ದೃಷ್ಟಿಯಿಂದ ವಿದ್ರೋಹಿ ಕೆಲಸವೆಂದೇ ನನಗನ್ನಿಸುತ್ತದೆ. ಏಕೆಂದರೆ ಮೇಲಿನ ಶ್ರಮಣಧಾರೆಗಳು ಗುರುಮಾರ್ಗಗಳು. ಜ್ಞಾನದ ಮೂರ್ತರೂಪವಾದ ಅರಿವನ್ನು ಗುರುವಾಗಿ ಕಾಣುವುದು ಅದರ ನಿಲುವು. ಗುರುವನ್ನು ಮೀರಿದ ಮತ್ತೇನೂ ಇಲ್ಲ. ದೈವಮಾರ್ಗ ಅಲ್ಲಿ ತಂತಾನೇ ನಿರಾಕರಣೆಗೆ ಒಳಗಾಗುತ್ತದೆ. ವೈಷ್ಣವ ಭಕ್ತಿಪಂಥ ನಿರ್ಣಾಯಕವಾಗಿ ದೈವಮಾರ್ಗ. ಗುರುಮಾರ್ಗವು ವಾಸ್ತವವಾದರೆ ದೈವಮಾರ್ಗ ಕಾಲ್ಪನಿಕವಾದುದು. ದೈವಮಾರ್ಗ ಅದೆಷ್ಟೇ ಬೃಹತ್ತಾಗಿ ಬಿಂಬಿತವಾಗಿದ್ದರೂ ಅದು ಊದಿ ಊದಿ ದೊಡ್ಡದಾಗಿಸಿದ ಬಲೂನು. ಗುರುಮಾರ್ಗಿಗಳು ಇಂತಹ ಭ್ರಮಾ ಕಲ್ಪನೆಯಿಂದ ಹೊರಬಂದವರು. ಹಾಗಾಗಿ ವಚನಕಾರರಾಗಲೀ, ಕನಕದಾಸರಂಥ ಕೀರ್ತನಕಾರರಾಗಲೀ ಕೇವಲ ನಾಡಾಡಿ ದೈವಗಳನ್ನು ನಿರಾಕರಿಸುತ್ತಿಲ್ಲ; ಬದಲಿಗೆ ದೈವಮಾರ್ಗವನ್ನು ನಿರಾಕರಿಸುತ್ತಿದ್ದಾರೆ. ಅವರ ಪಾಲಿಗೆ ತಮ್ಮ ಅಂತರಂಗದ ಜ್ಞಾನ ಪ್ರಜ್ಞೆಗಳೇ ಸಮಸ್ತವೂ ಆಗಿವೆ. ಆದರೂ ಬೀರಪ್ಪ, ವಿಠೋಬ, ಮೈಲಾರ, ಹೊಂಬಾಳೆ ಕೆಂಚಮ್ಮ, ಸಿದ್ಧರಾಮ, ಜುಂಜಪ್ಪ, ಹೆಂಜಾರಪ್ಪ, ಗಂಗಮಾಳಮ್ಮ, ಯಲ್ಲಮ್ಮ, ಬೇವಿನಳ್ಳಮ್ಮ, ಮುಂತಾದ ‘ನಾಡಾಡಿ’ ದೈವಗಳನ್ನು ಆಚೆಗೆ ಸರಿಸಿ ಏಕದೈವವನ್ನು ಪ್ರತಿಷ್ಠಾಪಿಸುವ ಪ್ರಯತ್ನಗಳು ಅಂತಿಮವಾಗಿ ಸರ್ವಾಧಿಕಾರದಲ್ಲಿ ಪರಿಣಮಿಸುತ್ತವೆ ಎಂಬುದು ಈಗ ಸಿದ್ಧವಾಗಿರುವ ಸಂಗತಿ.
ಜೊತೆಗೆ ಅಖಿಲ ಭಾರತ ವ್ಯಾಪ್ತಿಯುಳ್ಳ, ಕೆಲವು ಅದರಾಚೆಗೂ ವ್ಯಾಪಿಸಿರುವ, ಈ ಪಂಥಗಳನ್ನು ತಾತ್ವಿಕತೆಯ ದೃಷ್ಟಿಯಿಂದಾಗಲೀ, ಒಪ್ಪಿಕೊಂಡಿರುವ ಸಮೂಹದ ವಿಸ್ತಾರದಿಂದಾಗಲೀ, ಆವರಿಸಿಕೊಂಡಿರುವ ಕಾಲಮಾನದ ದೃಷ್ಟಿಯಿಂದಾಗಲೀ ಯಾವುದೇ ಮಾನದಂಡದಿಂದಲೂ ಅತ್ಯಂತ ಕಿರಿದಾದ ದ್ವೈತಪಂಥದೊಡನೆ ಮಾತುಕತೆಗೆ ಇಡುವುದು ಸಾಧುವಲ್ಲ. ವೈಷ್ಣವ ಭಕ್ತಿಪಂಥ ಮತ್ತು ದ್ವೈತದರ್ಶನಗಳನ್ನು ಸಮೀಕರಿಸುವ ಪ್ರಯತ್ನಗಳು ಕೂಡ ಇಂತದ್ದೇ ಅಪಚಾರವೆಂದು ಅನ್ನಿಸುತ್ತದೆ. ಇಂತಹಕಡೆ ಕನಕರಂಥವರನ್ನು ಅನೇಕ ಪ್ರಕ್ರಿಪ್ತಗಳಿಗೊಳಪಡಿಸಿ ಕೆಳಸ್ತರದ ಒಪ್ಪಿಗೆಯನ್ನು ದ್ವೈತದ ಪರವಾದ ಪಡೆಯುವ ಪ್ರಯತ್ನವಾಗಿ ಕನಕರ ಓದನ್ನು ಕಾಣಬಹುದು.
ಭಕ್ತಿಪಂಥವನ್ನು ಅಖಿಲ ಭಾರತೀಯ ನೆಲೆಯಲ್ಲಿ ನೋಡಿದಾಗ ಕಂಡುಬರುವ ನೋಟವೇ ಬೇರೆ, ಕರ್ನಾಟಕದ ಮಟ್ಟಿಗೆ ಸೀಮಿತವಾಗಿ ಗಮನಿಸಿದಾಗ ಕಂಡು ಬರುವುದೇ ಬೇರೆ. ಭಕ್ತಿಪಂಥದ ಕಾಲಮಾನದ ಹೊತ್ತಿಗೆ ಶರಣಚಳವಳಿ ನಡೆದು ವಿಜಯನಗರದ ಆಡಳಿತವೂ ಕುಸಿತವನ್ನು ಕಂಡಿತ್ತು. ಶಿವಸಂಸ್ಕೃತಿಯ ಶರಣಧರ್ಮದ ವಿರುದ್ಧವಾಗಿ ಅಗ್ರಹಾರವು ತನ್ನನ್ನು ಮರಳಿ ಪ್ರತಿಷ್ಠಾಪಿಸಿಕೊಳ್ಳಬೇಕಾದ ಒತ್ತಡದಲ್ಲಿತ್ತು. ಹನ್ನೆರಡು ಹರಿಮೂರನೆಯ ಶತಮಾನದಲ್ಲಿ ವೈದಿಕ ಸಮೂಹದಿಂದ ಕೈತಪ್ಪಿ ಹೋದ ಸಾಂಸ್ಕೃತಿಕ ಯಜಮಾನಿಕೆಯ ಪುನರ್ ಪ್ರತಿಷ್ಠಾಪನೆ ಭಕ್ತಿಪಂಥ ಮತ್ತು ವೈಷ್ಣವ ಭಕ್ತಿ ಪರಂಪರೆಯು ಬಳಕೆಯಾಗಿರುವುದನ್ನು ಕಾಣಬಹುದಾಗಿದೆ. ಪ್ರಾಯಶ: ವೈದಿಕರು ಅನುಭವಿಸಿದ ಸಾಂಸ್ಕೃತಿಕ ಬಿಕ್ಕಟ್ಟಿನಿಂದ ಪಾರಾಗಲು ಮತ್ತು ತಮ್ಮ ಅಧೀನ ಸಮುದಾಯಗಳ ಮೇಲೆ ಹಿಡಿತ ಸಾಧಿಸಿಕೊಳ್ಳಲು ಭಕ್ತಿಪಂಥ ದುಡಿಯಬೇಕಾಯಿತು.
ಕನಕರ ಕಾವ್ಯದಲ್ಲಿ ಮತಪ್ರಚಾರಕ್ಕೆ ಒದಗಿ ಬರುವ ಸಾಮಗ್ರಿಯ ಭಾಗ ಮಾತ್ರ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಲಾಗಿದೆ. ಹಿಂದೂ ಧರ್ಮಕ್ಕೆ ಒಳ ಮತಾಂತರ ಸಾಧ್ಯವಿಲ್ಲದಿರುವುದರಿಂದ ಮತಪ್ರಚಾರವಾದರೂ ಯಾಕೆ ಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ. ಉತ್ತರ ಎರಡು ಕವಲಾಗಿದೆ. ಹಿಂದೂ ಧರ್ಮವೆಂದರೆ ಆರ್ಯಕೇಂದ್ರಿತವಾದ ವೈಷ್ಣವಾರಾಧನೆ ಎಂಬ ನಿಲುವನ್ನು ವೈಷ್ಣವ ಪಂಥ ಪ್ರತಿಪಾದಿಸುತ್ತದೆ. (ಹರಿ ಸರ್ವೋತ್ತಮ ಇತ್ಯಾದಿ) ಕೀರ್ತನೆ ಎನ್ನುವ ಪ್ರಕಾರವೇ ವೈಷ್ಣವ ಭಕ್ತಿ ಪಂಥವನ್ನು ಪ್ರಚಾರಮಾಡುವ ಉದ್ದೇಶವನ್ನೇ ಪ್ರಧಾನವಾಗಿ ಹೊಂದಿದ್ದು, ಹರಿಕತೆಯ ಮುಖ್ಯ ಪಠ್ಯ ಎಂದು ಹೆಸರಾದ ಶ್ರೀ ಭಕ್ತವಿಜಯ ಕೃತಿಯನ್ನೊಮ್ಮೆ ಗಮನಿಸಿದರೆ ಅದರಲ್ಲಿರುವ ಕತೆಗಳಲ್ಲಿ - ಕತೆಗಳು ವೈಷ್ಣವ ಸಂಪ್ರದಾಯವನ್ನು ಕುರಿತಾದವು.
ಕನಕದಾಸರು ಅತ್ಯಾಶ್ರಮಿ ಅಂದರೆ ವರ್ಣಾಶ್ರಮಧರ್ಮಗಳನ್ನು ಮೀರಿದವನು. ಲೋಕಸಮಾನತೆಯನ್ನು ನಿರಾಕರಿಸುವ ಯಾವ ಪ್ರಮಾಣಗಳನ್ನೂ (ಪ್ರಶ್ನಿಸಬಾರದು ಎನ್ನುವ ದಾಖಲೆಗಳು) ಮಾನ್ಯಮಾಡಿದವನಲ್ಲ ಎಂಬುದು ಗೋಚರಿಸುತ್ತದೆ. ಹಾಗಾಗಿ ಕನಕರ ಇಂದಿನ ಪ್ರಸ್ತುತತೆಯೆಂದರೆ ಇಡಿಯಾಗಿ ಕೆಳಸ್ತರದ ಸಮೂಹಗಳು ಅನುಭವಿಸಿದ ಮತ್ತು ಅನುಭವಿಸುತ್ತಿರುವ ಅಪಮಾನವನ್ನು ಮೀರುವ ಸಾಂಸ್ಕೃತಿಕ ಎಚ್ಚರವನ್ನು ಕನಕನಿಗಾದ ಅಪಮಾನದ ಮೂಲಕ ವ್ಯಾಖ್ಯಾನಿಸಿಕೊಳ್ಳಬೇಕಾಗಿದೆ. ಅದು ಇಡಿಯಾಗಿ ಈ ಎಲ್ಲ ದುಡಿಯುವ, ಸಮೂಹಗಳಿಗೆ ಆದ ಮತ್ತು ಆಗುತ್ತಿರುವ ಅಪಮಾನವೆಂದೇ ಅದನ್ನು ಪರಿಭಾವಿಸಬೇಕಾಗಿದೆ. ಅದಕ್ಕೆ ಪರಿಹಾರವೆಂದರೆ ಎಲ್ಲ ಕೆಳಸ್ತರದ ದುಡಿಯುವ ಸಮೂಹಗಳು ಕಂಡುಕೊಳ್ಳಬೇಕಾದ ಸ್ವಂತಿಕೆ ಮತ್ತು ಯಾವ ಕಾರಣಕ್ಕೂ ತಮ್ಮದಲ್ಲದ ತಾತ್ವಿಕತೆಯ ಅಡಿಯಾಳಾಗದಂತೆ ಸಾಂಸ್ಕೃತಿಕ ರಾಜಕಾರಣವನ್ನು ನಿರ್ವಹಿಸುವುದು.
ಇದಿಷ್ಟು ಹಿನ್ನೆಲೆಯೊಡನೆ ಕನಕರ ತಾತ್ವಿಕತೆಯ ಅನುಸಂಧಾನಕ್ಕೆ ತೊಡಗುವುದಾದರೆ, ಮೊದಲಿಗೆ ಮಧ್ವ ಸಂಪ್ರದಾಯಕ್ಕೆ ಕನಕ ಸೇರುತ್ತೇನೆಂದರೂ ಅವನನ್ನು ಸೇರಿಸಿಕೊಳ್ಳಲು ಸಾಧ್ಯವೆ? ಎನ್ನುವ ಪ್ರಶ್ನೆ. ಮಾಧ್ವ ಪಂಥದ ಪ್ರಧಾನ ನಿಲುವುಗಳು ಇವು:
1. ಹರಿ ಸರ್ವೋತ್ತಮ - ಹರಿ ಮಾತ್ರ ಸತ್ಯ
2. ಸತ್ಯಂ ಜಗತ್ (ಸರ್ವಾಸ್ತಿವಾದ)
3. ಲೋಕ ವಸ್ತುಗಳ ನಡುವಿನ ಭಿನ್ನತೆಯು ಸತ್ಯ. ವರ್ಣಾಶ್ರಮ ವ್ಯವಸ್ಥೆಯ ಬಗೆಗೆ ಪ್ರಶ್ನಾತೀತ ನಿಷ್ಠೆಯನ್ನು ಅದು ವ್ಯಕ್ತಪಡಿಸುತ್ತದೆ.
4. ಲೋಕ ಜೀವಿಗಳ ಆತ್ಮಭೇಧವು ಹರಿನಿರ್ಮಿತ. ಮೂರು ರೀತಿಯ ಆತ್ಮ ವಿಂಗಡಣೆ: 1) ನಿತ್ಯ ಮುಕ್ತರು : ಬ್ರಾಹ್ಮಣರು 2)ನಿತ್ಯ ಸಂಸಾರಿಗಳು: ವೇದಾಧ್ಯಯನ ಅರ್ಹತೆಯಿರುವ ವರ್ಣದವರು ಮತ್ತು 3. ನಿತ್ಯ ನಾರಕಿಗಳು: ವೇದಾಧ್ಯಯನಾರ್ಹತೆ ಇಲ್ಲದ ಸಮಸ್ತ ಶೂದ್ರರು ಮತ್ತು ಪಂಚಮರು
5. ಎಲ್ಲರಿಗೂ ಸಮಾನ ಮುಕ್ತಿಯು ಸಾಧ್ಯವಿಲ್ಲ. ಈ ವಿಂಗಡಣೆಗನುಗುಣವಾಗಿ ಸಾಧಕರಿಗೆ ಫಲ ದೊರಕುತ್ತದೆ.
6. ಮುಕ್ತಿಯೆಂಬುದು ಸಂಸ್ಕಾರಕ್ಕನುಗುಣವಾಗಿ ಅನುಭವಿಸುವ ಸುಖ. ಅಂದರೆ ಮುಕ್ತಿಗೆ ಅರ್ಹರಲ್ಲದವರಿಗೆ ಸಿಗುವುದು ಭಕ್ತಿ ಸುಖವೇ ಹೊರತು ಮುಕ್ತಿ ಸುಖವಲ್ಲ.
7. ಮುಕ್ತಿಯನ್ನು ಪಡೆಯಲು ತತ್ವ ಮತ್ತು ಭಕ್ತಿ ಎರಡೂ ಬೇಕು.
8. ಪ್ರತ್ಯಕ್ಷ, ಅನುಮಾನ ಮತ್ತು ಶಬ್ದ ಪ್ರಮಾಣಗಳು ಮಾನ್ಯ.
9. ವೇದಗಳು ವಿಷ್ಣುವನ್ನು ಮಾತ್ರ ಸ್ತುತಿಸುತ್ತವೆ.
ಲೋಕಜೀವಿಗಳ ನಡುವಿನ ‘ತಾರತಮ್ಯ’ವ್ಯವಸ್ಥೆ ಮಧ್ವ ಸಿದ್ಧಾಂತದ ತಿರುಳು. ಜೀವಿಗಳ ಆತ್ಮರೂಪವನ್ನು ಮೂರಾಗಿ ವಿಂಗಡಿಸುವಾಗ 1) ಮುಕ್ತಿಯೋಗ್ಯ 2) ನಿತ್ಯ ಸಂಸಾರಿ ಮತ್ತು 3) ತಮೋಯೋಗ್ಯ - ಈ ಮೂರನ್ನು ಸೇರಿಸಿ ಸ್ವರೂಪ ತ್ರೈವಿಧ್ಯ ಎನ್ನುತ್ತಾರೆ. ಈ ತ್ರೈವಿಧ್ಯವು ತಾರತಮ್ಯಕ್ಕಾಗಿಯೇ ನಿರ್ಮಿಸಿಕೊಂಡದ್ದು- ಇದನ್ನು ಮಧ್ವಸಿದ್ಧಾಂತವು ಕಠಿಣವಾಗಿ ವಿಧಿಸಿದೆ. ಈ ವ್ಯವಸ್ಥೆಗೆ ತ್ರಿಮತಸ್ಥರಲ್ಲಿ ವಿರೋಧವೇನೂ ಇಲ್ಲವೆಂದು ಅರ್ಥಪಾಪವನ್ನು ಅವರ ಮೇಲೂ ಎಳೆಯುತ್ತಾರೆ. ಈ ಮುಕ್ತಿಯೋಗ್ಯರು ಯಾರು ಎಂದರೆ ವೇದಾಧ್ಯಯನಕ್ಕೆ ಅರ್ಹರಾದ ತ್ರಿವರ್ಣದವರು ಮಾತ್ರ. ಶೂದ್ರರು ಮತ್ತು ಹೆಣ್ಣುಮಕ್ಕಳು ಪುರಾಣ ಮಹಾಕಾವ್ಯ ಮತ್ತು ಪಂಚರಾತ್ರಗಳನ್ನು ಮಾತ್ರ ಓದಿ ಮುಂದಿನ ಜನ್ಮಕ್ಕೆ ಜ್ಞಾನದ ಉಳಿತಾಯವನ್ನು ಮಾಡಿಕೊಳ್ಳಬಹುದು! ಹೀಗಿರುವಾಗ ಶೂದ್ರ ಸಮುದಾಯದ ಕೆಳಸ್ತರದಿಂದ ಬಂದ ಕನಕರಿಗೆ ದಾಸ ದೀಕ್ಷೆ ನೀಡಲು ಸಾಧ್ಯವೇ ಹೊರತು ಮಾಧ್ವ ದೀಕ್ಷೆ ನೀಡಲು ಸಾಧ್ಯವೆ? ಈಗಲೂ ಅವರು ಕರೆಯುತ್ತಿರುವುದು ಈ ಊಳಿಗಕ್ಕೆ ಮಾತ್ರ.
ಮಾಧ್ವ ಪಂಥದ ಈ ಪ್ರಧಾನ ನಿಲುವುಗಳು ಕನಕರಲ್ಲಿ ಹೇಗೆ ವ್ಯಕ್ತವಾಗಿವೆ?
1.ಹರಿ ಮಾತ್ರ ಸತ್ಯ - ಶಿವ ಶಿವ ಶಿವ ಎನ್ನಿರೋ - ಮೂಜಗದವರೆಲ್ಲ ಶಿವ ಶಿವ ಶಿವ ಎನ್ನಿರೋ, ಭುವನಕೆ ಬಲ್ಲಿದರಾಗಬೇಕಾದರೆ, ನೀವು ಭವನ ಪದವ ಪಡೆಯಬೇಕಾದರೆ - ಶಿವ ಶಿವ ಶಿವ ಎನ್ನಿರೋ
2.ದಾಸನಾಗಬೇಕು ಸದಾಶಿವನ ದಾಸನಾಗಬೇಕು.
3.ರಾಮಾನುಜರೇ ನಮೋ ನಮೋ
4.ಹರಿಹರ ವಿಭೇದಗೈದವರಿಗೆ ದಂತಚ್ಯುತವು
ಕನಕರ ಕೀರ್ತನೆಗಳಲ್ಲಿ ಮಧ್ವ ತತ್ವದ ಸೂಕ್ಷ್ಮ ತಾತ್ವಿಕ ಅಂಶಗಳ ಚರ್ಚೆಯನ್ನಾಗಲೀ, ಮಂಡನೆಯನ್ನಾಗಲೀ ಕಾಣಲು ಸಾಧ್ಯವಿಲ್ಲ. ಕನಕರ ನಿಲುವುಗಳೆಲ್ಲ ಸ್ವೀಕಾರಾರ್ಹವೆ? ಖಂಡಿತಾ ಇಲ್ಲ. ಅವರು ಹಣೆಬರಹವಾದಿ, ವಿಧಿವಾದಿ, ಕರ್ಮವಾದಿ (ಉದಾಹರಣೆಗೆ: ಪ್ರಾಚೀನ ಕರ್ಮವಿದು ಬಿಡಲರಿಯದು, ಒಲ್ಲೆನೆಂದರಾಗುವುದೆ, ಅಲ್ಲಿ ಪಡೆದು ಬಂದುದನು – ಎಲ್ಲವನುಂಡು ತೀರಿಸಬೇಕು ಹರಿಯೆ, ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ, ಆರಿಗಾದರು ಪೂರ್ವ ಕರ್ಮ ಬಿಡದು, ಇತ್ಯಾದಿ)
ಇನ್ನು ಕನಕರ ಲೋಕಕಲ್ಯಾಣದ ನಿಲುವುಗಳನ್ನು ಸಂಗ್ರಹಿಸಿ ಹೀಗೆ ಹೇಳಬಹುದು:
ಧರ್ಮವೆಂದೆನಿಪ ಮಾರ್ಗವನು ಬಿಟ್ಟು ದುರ್ಮಾರ್ಗದಲಿ ನಡೆದವಗೆ ಘೋರವ್ಯಾಧಿ, ಹರಿಹರ ವಿಭೇಧಗೈದವಗೆ, ಗುರುದೈವ ನಿಂದೆ ಮಾಡಿದವಗೆ, ಪರಸತಿಯ ಕಾಮಿಸಿದವಗೆ, ಕೆರೆಗಳನು ಒಡೆಸಿದವಗೆ, ಧರೆಯನಳಿಸಿದವಗೆ, ಮತಭೇದವನ್ನು ಮಾಡಿದವಗೆ, ಶಿಶುಹತ್ಯೆಗೈದವಗೆ ಬರಬಹುದಾದ ರೋಗಗಳ ಒಂದು ದೊಡ್ಡ ಪಟ್ಟಿಯನ್ನೇ ಕೊಡುತ್ತಾನೆ. ಒಂದು ಆರೋಗ್ಯಕರವಾದ ಸಾಮರಸ್ಯದ ಸಮಾಜಕ್ಕಾಗಿ ಹಂಬಲಿಸಿದವರು ಕನಕರು, ಗಾಂಧೀಜಿಯ ಹಾಗೆ.
ಕನಕರ ನಳಚರಿತ್ರೆಯಲ್ಲಿ, ಮಹಾರಾಜ ನಳನು ಹಂಸವೊಂದನ್ನು ಬಲೆಹಾಕಿ ಹಿಡಿದುಬಿಡುತ್ತಾನೆ. ಆಗ ಆ ಹಂಸ ಅವನನ್ನು ಹೀಗೆ ಕೇಳುತ್ತದೆ. ಅದನ್ನು ಕನಕರ ಮಾತಲ್ಲೇ ಕೇಳಿ:
ಒದರಿ ಕುಣಿಯಲು ಹಸ್ತದೊಳಗದ
ಕದಲದಂತಿರೆ ಪಿಡಿಯಲರಸನ
ವದನಕಮಲವ ನೋಡಿ ಹೆದರಿತು ಬಹಳ ಭೀತಿಯಲಿ
ಹೃದಯ ಕರಗುವ ಮಾತನೆಂದುದು
ಮದಕರಿಗೆ ನೊರಜಂತರವೆ ಕೈ
ಸದರದವರನು ಕೊಲುವುದೇನರಿದೆಂದುದಾ ಪಕ್ಷಿ
ರಾಜನಾದವನು ರಾಜಧರ್ಮವನ್ನು ಪಾಲಿಸಬೇಕು. ಸಮೂಹದ ದುರ್ಬಲರನ್ನು ಪೊರೆಯಬೇಕು – ಇದು ಕನಕರ ಆಶಯ.
"ಮಲೆನಾಡಿನ ದಟ್ಟ ಕಾನನದ ನಡುವೆ ತುಂಗೆಯ ತಟದಲ್ಲಿ ಜನಿಸಿದ ಕುವೆಂಪುರವರು ಕುಪ್ಪಳ್ಳಿ ಎಂಬ ಊರಿನಿಂದ ಅಂತಾರಾಷ್ಟ್ರೀ...
"ಸಣ್ಣ ಸಣ್ಣ ಬಾಶೆಗಳ ಮತ್ತು ಬುಡಕಟ್ಟು ಬಾಶೆಗಳ ಪಾಲಕರಲ್ಲಿ ಅವರ ಬಾಶೆಗಳೆ ಅವರನ್ನು ಹಿಂದಿಕ್ಕುತ್ತಿವೆ ಎಂಬುದು ಕಾ...
"ಆ ಮಧುರ ನೆನಪುಗಳು ನನ್ನೊಳಗೆ ನೂರು ತಾಜ್ ಮಹಲುಗಳನ್ನು ನಿರ್ಮಿಸಿವೆ. ನನ್ನೆದೆಯ ತಿದಿಯಲಿ ದೇಹಿ ಉಸಿರಿನ ದೀಪ ಮುಡ...
©2024 Book Brahma Private Limited.