Date: 26-02-2023
Location: ಬೆಂಗಳೂರು
“ಮೊದಲೆಲ್ಲ ನಾವುಗಳು, ನಮ್ಮ ಸಮುದಾಯದವರು ಭಿಕ್ಷಾಟನೆ, ಬುರ್ರಕಥಾ ಗಾಯನ, ಗಂಗೆ ಗೌರಿ ಗಾಯನ ಮೇಳ, ಹಗಲುವೇಷಗಾರಿಕೆ ಜೊತೆಗೆ ಸಣ್ಣ ಪುಟ್ಟ ಪ್ರಾಣಿಗಳಾದ ಕಾಡು ಬೆಕ್ಕು, ಮುಂಗಸಿ, ಉಡ ಈ ತರದ ಪ್ರಾಣಿಗಳನ್ನು ಬೇಟೆಯಾಡಿ ಜೀವನ ಸಾಗಿಸುತ್ತಿದ್ದೆವು. ಆಗಿನ ಕಾಲಕ್ಕೆ ಸಂಪಾದನೆ ಮಾಡಬೇಕು, ಹಣ ಕೂಡಿಟ್ಟುಕೊಳ್ಳಬೇಕು ಎನ್ನುವುದು ಯಾರಿಗೂ ಇರಲಿಲ್ಲ,” ಎನ್ನುತ್ತಾರೆ ಸಮುದಾಯದ ಮುಖ್ಯಸ್ಥ ಸಣ್ಣ ಅಜ್ಜಯ್ಯ. ಲೇಖಕಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ''ಬುಡಗ, ಜಂಗಮ, ಶಿಂಧೋಳ್, ಸುಡುಗಾಡು ಸಿದ್ದ, ಚೆನ್ನಾದಾಸರು'' ಸಮುದಾಯದವರ ಕುರಿತು ಕಟ್ಟಿಕೊಟ್ಟಿದ್ದಾರೆ.
ನಮ್ಮಲ್ಲಿ ಕಲೆಗೇನು ಕೊರತೆಯಿಲ್ಲ. ಭಾರತೀಯ ನೆಲದಲ್ಲಿ ಹಣಕೊಟ್ಟು ಗುರುಮುಖೇನ ಶಾಸ್ತ್ರೋಕ್ತವಾಗಿಯೇ ಕಲಿಯಬೇಕೆಂಬುದೇನಿಲ್ಲ. ಸಾಕಷ್ಟು ಜನ ಹುಟ್ಟು ಕಲಾವಿದರು. ಅವರ ಕುಟುಂಬದವರು ಹಿರಿಯರು ಅಥವಾ ಊರಿನವರಲ್ಲಿರುವ ಕಲೆ ಸರಾಗವಾಗಿ ಮುಂದಿನ ಪೀಳಿಗೆಗೆ ಹರಿದು ಬಂದಿರುತ್ತದೆ. ಆದರೆ ಅಂತಹ ಬಹಳಷ್ಟು ಜನರು ನಮ್ಮ ನಡುವಿದ್ದರೂ ಕಡೆಗಣೆನೆಗೆ ಒಳಗಾಗುತ್ತಾರೆ. ಕೊನೆಗೆ ಅವರು ಆ ಕಲೆಯನ್ನು ಪ್ರಚುರ ಪಡಿಸುತ್ತ ಹೊಟ್ಟೆ ಪಾಡಿಗೆ ಊರೂರು ಅಲೆಯುತ್ತ ಹೋಗಿ ತಮ್ಮ ಮೂಲ ನೆಲೆಗಟ್ಟನ್ನು ಕಳೆದುಕೊಂಡು ಜೀವನ ಸಾಗಿಸಲು ಪರದಾಡುವಂತಾಗಿದೆ. ಕಲೆಯನ್ನೇ ನಂಬಿಕೊಂಡು, ಕಲೆಯನ್ನೇ ಉಸಿರಾಗಿಸಿಕೊಂಡು ಜೀವಿಸುತ್ತಿರುವ ಅಂತಹ ಬುಡಗ, ಜಂಗಮ, ಶಿಂಧೋಳ್, ಸುಡುಗಾಡು ಸಿದ್ದ, ಚೆನ್ನಾದಾಸರು ಈ ಅಲೆಮಾರಿ ಸಮುದಾಯದವರು ಕಂಡು ಬಂದದ್ದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದಲ್ಲಿ. ಅವರ ಪರಿಚಯ ಇಂದಿನ ನಿಮ್ಮ ಓದಿಗೆ ತಂದಿದ್ದೇನೆ ಅವರ ಮಾತುಗಳಲ್ಲಿ ಓದಿಕೊಳ್ಳಿ.
'ಮೊದಲೆಲ್ಲ ನಾವುಗಳು, ನಮ್ಮ ಸಮುದಾಯದವರು ಭಿಕ್ಷಾಟನೆ, ಬುರ್ರಕಥಾ ಗಾಯನ, ಗಂಗೆ ಗೌರಿ ಗಾಯನ ಮೇಳ, ಹಗಲುವೇಷಗಾರಿಕೆ ಜೊತೆಗೆ ಸಣ್ಣ ಪುಟ್ಟ ಪ್ರಾಣಿಗಳಾದ ಕಾಡು ಬೆಕ್ಕು, ಮುಂಗಸಿ, ಉಡ ಈ ತರದ ಪ್ರಾಣಿಗಳನ್ನು ಬೇಟೆಯಾಡಿ ಜೀವನ ಸಾಗಿಸುತ್ತಿದ್ದೆವು. ಆಗಿನ ಕಾಲಕ್ಕೆ ಸಂಪಾದನೆ ಮಾಡಬೇಕು, ಹಣ ಕೂಡಿಟ್ಟುಕೊಳ್ಳಬೇಕು ಎನ್ನುವುದು ಯಾರಿಗೂ ಇರಲಿಲ್ಲ. ಆ ದಿನದ ಊಟ ಸಿಕ್ಕರೆ ಸಾಕು ಮುಂದೆ ಏನಾದರೂ ಆಗಲಿ ಆ ದಿನಕ್ಕೆ ಊಟ ಸಿಕ್ಕರೆ ನಮಗೆ ಅದೇ ಸಂತೃಪ್ತ ಜೀವನ ಎಂದುಕೊಂಡು ಇದ್ದವರು ನಾವು. ಆಧುನಿಕ ಕಾಲಘಟ್ಟದಲ್ಲಿ ನಾವು ನಮ್ಮ ಸಂಸ್ಕೃತಿಯನ್ನು ಬಿಡದೇ ಆಧುನಿಕ ಪದ್ಧತಿಗಳಿಗೂ ಒಗ್ಗಿಕೊಳ್ಳದೆ ತೀರಾ ಸಂಕಷ್ಟದಲ್ಲಿದ್ದೇವೆ. ನಮ್ಮ ಪಾರಂಪರಿಕ ಕಲೆಗಳನ್ನು, ಸಂಸ್ಕೃತಿಗಳನ್ನು ಬಹುತೇಕರು ಪ್ರೋತ್ಸಾಹ ಮಾಡುತ್ತಿಲ್ಲ. ನಮಗೆ ಅಕ್ಷರ ಜ್ಞಾನ ಇಲ್ಲ. ನಮ್ಮ ಸಮುದಾಯದವರಿಗೆ ಸರ್ಕಾರದ ಯಾವ ಯೋಜನೆಗಳು ಸಿಗುತ್ತಿಲ್ಲ. ಸಾಕಷ್ಟು ಯೋಜನೆಗಳಿದ್ದರೂ ಕೂಡ ಕೆಲವೊಂದು ಕೊರತೆಗಳಿಂದ ನಮ್ಮ ಸಮುದಾಯದವರು ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ನಮ್ಮ ಸಮುದಾಯದ ಪಾರಂಪರಿಕ ಕಲೆಗಳು ನಶಿಸಿ ಹೋಗುತ್ತಿವೆ. ನಮ್ಮ ಕಲೆಗಳು ನಶಿಸಿ ಹೋಗುವುದರ ಜೊತೆಗೆ ನಾವು ಸಣ್ಣ ಪುಟ್ಟ ವ್ಯಾಪಾರ, ಪ್ಲಾಸ್ಟಿಕ್ ಸಾಮಾನುಗಳನ್ನು ಮಾರಿಕೊಂಡು ಜೀವನ ಸಾಗಿಸುತ್ತಿದ್ದೇವೆ. ದೊಡ್ಡ ವ್ಯಾಪಾರ ಮಾಡಲು ಬಂಡವಾಳ ಇಲ್ಲ. ಸಾಲ ತಂದು ವ್ಯಾಪಾರ ಮಾಡುವ ಶಕ್ತಿಯೂ ಇಲ್ಲ. ಈಗೆಲ್ಲ ಬೇಟೆ ನಿಷೇಧ ಕಾಯ್ದೆ, ಭಿಕ್ಷಾಟನೆ ನಿಷೇದ ಕಾಯ್ದೆಗಳು ನಮ್ಮ ಸಮುದಾಯಕ್ಕೆ ಮಾರಕವಾಗಿದೆ. ನಾವುಗಳು ಬೆಳೆದ ಪರಿಯೇ ಬೇರೆ. ನಮ್ಮ ಸಾಮಾಜಿಕ, ಸಾಂಸ್ಕೃತಿಕ ರಚನೆಯೇ ಬೇರೆ ಇದೆ. ಆಚಾರ, ವಿಚಾರ, ಸಂಸ್ಕೃತಿಗಳನ್ನು ನಂಬಿಕೊಂಡು ಜೀವನ ಮಾಡುವವರು ನಾವು. ನಮ್ಮದೇ ಆದ ಸಂಪ್ರದಾಯಗಳಿಗೆ ಒಗ್ಗಿಕೊಂಡ ನಾವು ಹೊರಗಿನ ಪ್ರಪಂಚದಲ್ಲಿ ಬೆರೆಯುವುದು ಕಷ್ಟವಾಗುತ್ತದೆ. ಆಗೆಲ್ಲ ಬೇಟೆಯಾಡಿ ಮಾಂಸ ತಿನ್ನುತ್ತಿದ್ದೆವು. ಈಗ ನಿಷೇಧ ಇರುವುದರಿಂದ ಮಾಂಸ ಕೊಂಡುಕೊಳ್ಳಲು ಸಾಧ್ಯವಿಲ್ಲದೆ ಕಡಿಮೆ ಹಣಕ್ಕೆ ಸಿಗುವಂತಹ ಕೋಳಿಕಾಲು, ಕೋಳಿ ತಲೆ, ಬಿಸಾಡುವಂತಹ ಕರುಳುಗಳು ಅದನ್ನು ತಂದು ಸ್ವಚ್ಛ ಮಾಡಿ ಊಟ ಮಾಡುತ್ತೇವೆ. ಭಿಕ್ಷಾಟನೆ ಮಾಡಬಾರದು ಎನ್ನುವ ಕಾಯ್ದೆ ಇದೆ. ನಮ್ಮಲ್ಲಿ ಕೌದಿ ಹೊಲೆಯುವವರು, ಬಣ್ಣಗಾರಿಕೆ, ಹಗಲುವೇಷಗಾರಿಕೆ, ಬುರ್ರಕಥಾ ಗಾಯನ ಮಾಡುವವರು ಸಾಕಷ್ಟು ಜನರಿದ್ದಾರೆ. ಸರ್ಕಾರ ನಮ್ಮನ್ನೆಲ್ಲ ಗುರುತಿಸಿ ನಮಗೆ ಸರಿಯಾದ ತರಬೇತಿಯನ್ನು ಕೊಟ್ಟು ಇದರಿಂದ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಯಾಕೆ ಮಾಡಬಾರದು!? ಹೀಗೆ ಮಾಡುವುದರಿಂದ ಕಲೆ, ಕಲಾವಿದರು, ನಾಡಿನ ಸಂಸ್ಕೃತಿ, ನಮ್ಮ ಸಮುದಾಯಗಳು ಉಳಿಯುತ್ತವೆ. ನಾವು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ಇರಲು ಮನೆಯಿಲ್ಲ, ಕರೆಂಟು, ಶೌಚಾಲಯ, ಶುದ್ಧ ಕುಡಿಯುವ ನೀರು ಸಿಗುವುದಿಲ್ಲ. ಊರಿನೊಳಗೆ ಉಳಿದುಕೊಳ್ಳಲು ನಮ್ಮನ್ನು ಯಾರು ಬಿಟ್ಟುಕೊಳ್ಳುವುದಿಲ್ಲ. ಊರ ಹೊರಗೆಲ್ಲೊ ಯಾವುದೋ ಜಾಗದಲ್ಲಿ ಸ್ವಚ್ಛ ಮಾಡಿಕೊಂಡು ಟೆಂಟ್ ಹಾಕಿಕೊಂಡು ಜೀವನ ಮಾಡುತ್ತೇವೆ. ರಾತ್ರಿಯಾದರೆ ಹಾವು, ಚೇಳು ತರಹದ ಪ್ರಾಣಿಗಳಿಂದ ಅಪಾಯ ತಪ್ಪಿದ್ದಲ್ಲ. ನಾವು ಹುಟ್ಟಿದಾಗಿನಿಂದಲೂ ಬೆಳೆದದ್ದು ಇಂತಹದ್ದೇ ವಾತಾವರಣದಲ್ಲಿ. ಹಾಗಾಗಿ ಸಂಕಷ್ಟಗಳ ಸರಮಾಲೆಯೇ ನಮ್ಮ ಬದುಕು. ಇಷ್ಟೆಲ್ಲಾ ಇದ್ದರೂ ಕಲಾ ಪ್ರದರ್ಶನಕ್ಕೆ ಹೋದಾಗ ಬಿಸಿಲು, ಗಾಳಿ, ಮಳೆ, ಚಳಿ ಎನ್ನದೇ ಬೆಳಗ್ಗೆಯೇ ವೇಷ ಭೂಷಣಗಳನ್ನು ಹಾಕಿಕೊಂಡು ನಮ್ಮ ಬದುಕನ್ನು ಸಾಗಿಸುತ್ತಿದ್ದೇವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೇಲ್ವರ್ಗದ ಜನರಿಗೆ ತಿಳಿದ ಕೌಶಲ್ಯಗಳು, ತರಬೇತಿ ನಮ್ಮ ಮಕ್ಕಳಿಗೆ ಸಿಗುತ್ತಿಲ್ಲ. ಜೊತೆಗೆ ಮನೆ, ವಸತಿ, ಆಹಾರ ಕ್ರಮ, ಇವೆಲ್ಲವೂ ಬಹಳ ಮುಖ್ಯವಾಗುತ್ತದೆ' ಎನ್ನುತ್ತಾರೆ ಈ ಸಮುದಾಯದ ಮುಖ್ಯಸ್ಥರಾದ ಸಣ್ಣ ಅಜ್ಜಯ್ಯ.
'ನಾವು ಮೂಲತಃ ಸಂಚಾರಿಗಳು. ರಾಮ, ಲಕ್ಷ್ಮಣ, ಶೂರ್ಪನಖಿ ವೇಷಗಳನ್ನು ಹಾಕಿಕೊಂಡು ರಾಮಾಯಣ, ಮಹಾಭಾರತದ ಇತಿಹಾಸಗಳನ್ನು, ರಾಜರ ಕಥೆಗಳು, ದಾಸರ ಕಥೆಗಳು, ಕನಕದಾಸರು, ಶರಣರ ಬದುಕು, ಬಸವಣ್ಣನವರ ವಚನಗಳು, ತತ್ವಪದಗಳನ್ನು ಹೇಳುತ್ತೇವೆ. ಒಂದು ಹಳ್ಳಿಯಲ್ಲಿ ವೇಷ ಹಾಕಿಕೊಂಡು ಪಾತ್ರಗಳನ್ನು ಮಾಡಿ ಅವರನ್ನು ರಂಜಿಸಿ 3-4 ದಿನ ಇದ್ದು ಕೊನೆಯ ದಿನ ಭಿಕ್ಷಾಟನೆ ಮಾಡಿಕೊಂಡು ಬರುತ್ತೇವೆ. ನಮ್ಮ ಸಮುದಾಯಗಳ ಪೈಕಿ ಕೆಲವು ಇಂತಿವೆ. ಬುಡಗ ಜಂಗಮ - ಹಾರ್ಮೋನಿಯಂ, ತಬಲಾ, ಹಗಲುವೇಷ, ಹಾಡು, ಗಾಯನ ಮಾಡುವುದು. ಶಿಂಧೋಳ್ - ಬುಟ್ಟಿಯಲ್ಲಿ ದುರ್ಗಮ್ಮ, ಸುಂಕ್ಲಮ್ಮ ದೇವರನ್ನು ಹೊತ್ತು ಬರಿಗಾಲಲ್ಲಿ ನಡೆಯುತ್ತಾ, ಚಾಟಿಯಲ್ಲಿ ಹೊಡೆದುಕೊಂಡು ಭಿಕ್ಷಾಟನೆ ಮಾಡುವುದು. ಚೆನ್ನದಾಸರು - ಕೂದಲು, ಪಿನ್ನು ವ್ಯಾಪಾರ, ಬೀಗ ರಿಪೇರಿ ಇವರ ಕುಲ ಕಸುಬು. ಸುಡುಗಾಡು ಸಿದ್ದರು - ಶಂಕು, ಗಂಟೆ, ರುದ್ರಾಕ್ಷಿಗಳನ್ನು ಹಾಕಿಕೊಂಡು ಒಂದು ಊರಿಗೆ ಹೋಗಿ ರಾತ್ರಿ 12 ಗಂಟೆವರೆಗೂ ಶಂಖ ಊದಿಕೊಂಡು ಮಧ್ಯರಾತ್ರಿ ಊರೆಲ್ಲ ಸುತ್ತುತ್ತಾರೆ. ಬೆಳಗ್ಗೆ ಭಿಕ್ಷಾಟನೆ ಮಾಡಿ ಜೀವನ ಸಾಗಿಸುವುದಿದೆ. ನಮ್ಮ ದೇವರುಗಳು ಸುಂಕಲಮ್ಮ, ಭೂತಪ್ಪ, ಯಲ್ಲಮ್ಮ. ನಮಗೆ ಮಠ ಇಲ್ಲ, ಗುರು ಇಲ್ಲ. ನಮ್ಮ ಕುಲ ಶಾಸ್ತ್ರದ ಅಧ್ಯಯನ ಆಗಬೇಕು. ನಮ್ಮ ಸಮುದಾಯದವರಿಗೆ ವಸತಿ ಶಾಲೆಗಳು ಆಗಬೇಕು. ನಮ್ಮದೇ ಸಮುದಾಯ ಭವನಗಳು ಬೇಕು. ಸರ್ಕಾರಿ ನೌಕರಿ, ರಾಜಕೀಯದಲ್ಲಿ, ಶಿಕ್ಷಣದಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರಲು ಮೂಲ ಕಾರಣ ಸರ್ಕಾರ ನಮ್ಮನ್ನು ಗುರುತಿಸುತ್ತಿಲ್ಲ. ನಮ್ಮ ಸಮುದಾಯದವರು ಈಗಲೂ ಹಗಲು ಸತ್ತರೆ ಉಪ್ಪಿಗೆ ಗತಿಯಿಲ್ಲ ರಾತ್ರಿ ಸತ್ತರೆ ದೀಪಕ್ಕೆ ಗತಿಯಿಲ್ಲ ಎನ್ನುವ ಹಾಗಿದ್ದಾರೆ. ಸರ್ಕಾರ ನಮ್ಮ ಸಮುದಾಯಗಳತ್ತ ಗಮನ ಹರಿಸಬೇಕು. ಇಂದಿಗೂ ನಮ್ಮ ಸಮುದಾಯದವರು ಕಾಡಿನಲ್ಲಿ ಪ್ರಾಣಿಗಳಿಗಿಂತ ಕಡೆಯಾದಂತಹ ಜೀವನ ನಡೆಸುತ್ತಿದ್ದಾರೆ. ದುರ್ಗಮ್ಮ, ಸುಕ್ಲಮ್ಮ ದೇವರುಗಳನ್ನು ಹೊತ್ತುಕೊಂಡು ಚಾಟಿಯಲ್ಲಿ ಹೊಡೆದುಕೊಂಡು ನೋವಿನ ಪರಿಕಲ್ಪನೆಯೇ ಇಲ್ಲದೆ ಬದುಕುತ್ತಿರುವ ಎಷ್ಟೋ ಸಮುದಾಯಗಳು ಇಂದಿಗೂ ಜೀವಂತವಾಗಿವೆ. ಅಲೆಮಾರಿ ಮಕ್ಕಳು ಎಂದ ಕೂಡಲೆ ನಮ್ಮ ಮಕ್ಕಳು ತಾರತಮ್ಯಕ್ಕೆ ಒಳಗಾಗುತ್ತಾರೆ. ಭಿಕ್ಷಾಟನೆಯ ಈ ಬದುಕು ನಮಗೆ ಕೊನೆಯಾಗಲಿ. ಇನ್ನು ಮುಂದಾದರೂ ನಮ್ಮ ಸಮುದಾಯದ ಮಕ್ಕಳಿಗೆ ಸರಿಯಾದ ಪ್ರಮಾಣದಲ್ಲಿ ಮೀಸಲಾತಿ ಕೊಟ್ಟಿದ್ದೇ ಆದರೆ ಯಾರಿಗೋ ಒಬ್ಬರಿಗೆ ಕೆಲಸ ಸಿಕ್ಕಿದರೂ ಸಾಕು ಅದು ಮತ್ತೊಬ್ಬರಿಗೆ ಸ್ಫೂರ್ತಿಯಾಗಿ ಅವರವರ ಮಕ್ಕಳನ್ನು ಓದಿಸಲು ಮುಂದಾಗುತ್ತಾರೆ. ಇದು ಬಹಳ ಮುಖ್ಯ. 60 ವರ್ಷ ಮೇಲ್ಪಟ್ಟವರಿಗೆ ಮಾಶಾಸನ ಕಾಯ್ದೆ ಇದೆ. ನಾವುಗಳು ಹುಟ್ಟು ಕಲಾವಿದರಾದ್ದರಿಂದ ಕಲೆಯೇ ನಮ್ಮ ಬದುಕಾದ್ದರಿಂದ 60, 70 ವರ್ಷ ಮೇಲ್ಪಟ್ಟ ಎಷ್ಟೋ ಜನರು ನಮ್ಮಲ್ಲಿ ಇದ್ದಾರೆ. ಅವರು ಅರ್ಜಿ ಹಾಕಿ ಅವರಿಗೆ ಮಾಶಾಸನ ಬರುವ ಹೊತ್ತಿಗೆ ಸತ್ತೇ ಹೋಗಿರುತ್ತಾರೆ. ಇಂತಹ ದುರಂತಗಳು ಬಹಳಷ್ಟು ನಡೆದಿವೆ' ಎನ್ನುತ್ತಾರೆ ಈ ಸಮುದಾಯಗಳ ಜನರು.
ಈ ಸುಡುಗಾಡು ಸಿದ್ದರ ಕೈ ಚಳಕ, ಬುಡಗ ಜಂಗಮ ಸಮುದಾಯದವರು ಜನಪದ ಸಂಗೀತ ಎಷ್ಟು ಅದ್ಭುತವಾಗಿ ಹಾಡುತ್ತಾರೆ ಎಂದರೆ ಯಾವ ಹಾಡುಗಾರರಿಗೆ ಕಡಿಮೆ ಇಲ್ಲ. ಇವರಲ್ಲಿ ಆ ರೀತಿಯ ಜ್ಞಾನವಿದೆ. ವಿಶೇಷವಾಗಿ ಇಂತಹ ಸಮುದಾಯಗಳಿಗೆ ಕಲೆಯನ್ನು ನಂಬಿಕೊಂಡು ಜೀವಿಸುತ್ತಿರುವ ಸಮುದಾಯಗಳಿಗೆ ಸರ್ಕಾರಗಳು ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಇವರ ಮೂಲ ಭಾಷೆ ತೆಲುಗು ಆದರೂ ಇವರು ತಮ್ಮ ಇಡೀ ಸಂಸ್ಕೃತಿ, ಸಂಪ್ರದಾಯವನ್ನು ಕನ್ನಡೀಕರಣಗೊಳಿಸಿದ್ದಾರೆ. ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಬದುಕನ್ನು ನಡೆಸುತ್ತಿದ್ದಾರೆ. ಈಗ ಅಲೆಮಾರಿಗಳು ಕಡಿಮೆಯಾಗಿದ್ದರೂ ಅರೆ ಅಲೆಮಾರಿತನವಿದೆ. ಆರು ತಿಂಗಳು ಬೇರೆ ಊರುಗಳಿಗೆ ಹೋಗಿ ತಮ್ಮ ಕಲೆಗಳನ್ನು ಪ್ರದರ್ಶನ ಮಾಡಿ ಅವರು ಕೊಟ್ಟ ದವಸ, ಧಾನ್ಯಗಳನ್ನು ತೆಗೆದುಕೊಂಡು ತನ್ನ ಮೂಲ ನಿವಾಸಕ್ಕೆ ಮರಳುತ್ತಾರೆ. ಇತ್ತೀಚೆಗೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಲು ಮುಂದಾಗಿದ್ದಾರೆ. ಆದರೆ ವಿದ್ಯಾಭ್ಯಾಸ ಈ ಸಮುದಾಯದವರಿಗೆ ಸರಿಯಾಗಿ ಸಿಗುತ್ತಿಲ್ಲ ಹಾಗಾಗಿ ಮೀಸಲಾತಿ ಬೇಕು. ಸರ್ಕಾರದ ಯೋಜನೆಗಳು ವಿಶೇಷವಾಗಿ ಸಮುದಾಯ ಆಧಾರಿತವಾಗಿ, ಅವರ ಕೌಶಲ್ಯ ಆಧಾರಿತವಾಗಿ ಯಾರಿಗೆಲ್ಲ ತಲುಪಬೇಕಾದವರಿಗೆ ಸರ್ಕಾರ ಸೌಲಭ್ಯಗಳನ್ನು ಕೊಟ್ಟಿದ್ದೇ ಆದರೆ ಈ ಸಮುದಾಯಗಳು ಸಮಾಜದ ಮುನ್ನೆಲೆಗೆ ಬರಲು ಸಾಧ್ಯವಿದೆ. ಕಲಾ ಶ್ರೀಮಂತಿಕೆ ಇವರಲ್ಲಿ ಬಹಳ ದೊಡ್ಡದಿದೆ. ಇವರು ಹುಟ್ಟು ಕಲಾವಿದರು. ಇವರಲ್ಲಿನ ಕಲೆಯನ್ನು ಪ್ರೋತ್ಸಾಹಿಸಬೇಕು. ಅನೇಕ ಕಲಾವಿದರು ಈ ಸಮುದಾಯಗಳಲ್ಲಿ ಇರುವುದರಿಂದ ಸರ್ಕಾರ ಇವರತ್ತ ಗಮನ ಹರಿಸಿ ಇವರನ್ನು ತರಬೇತುಗೊಳಿಸಿ ಇವರ ಮುಖಾಂತರ ಹಲವಾರು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲು ಮುಂದಾಗಬೇಕು. ಈ ಸಮುದಾಯದವರು ಕೂಡ ಸಮಾಜದ ಮುನ್ನೆಲೆಗೆ ಬರಬೇಕು. ಶಿಕ್ಷಣ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಅವಶ್ಯಕತೆಗಳನ್ನು ಜಪಪ್ರತಿನಿಧಿಗಳು ಹಾಗೂ ಸರ್ಕಾರ ಒದಗಿಸಬೇಕು. ಅಸ್ಪೃಶ್ಯರಂತೆ ಕೀಳರಿಮೆಗೆ ಒಳಗಾಗಿರುವ ಇವರು ಪ್ರಾಣಿಗಳಲ್ಲ ಮನುಷ್ಯರೇ ಎನ್ನುವ ಉದಾತ್ತ ಮನೋಭಾವನೆ ಎಲ್ಲರಲ್ಲೂ ಮೂಡುವಂತಾಗಲಿ ಎಂದು ಆಶಿಸುತ್ತೇವೆ.
ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಸಕಲಕಲಾವಲ್ಲಭ ಪಂಚಾಕ್ಷರಿ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ
‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...
©2024 Book Brahma Private Limited.