ಇಂಥವರೂ ಈ ಕಾಲದಲ್ಲಿ ಇರ್ತಾರಾ


“ಅವರ ಬಗ್ಗೆ ಓದುತ್ತಾ ಹೋದಂತೆ, ಅವರನ್ನು ಇನ್ನಷ್ಟು ಹೆಚ್ಚು ಅರಿಯುವ ತವಕ ನಮ್ಮಲ್ಲಿ ಮೂಡದೇ ಇರದು,” ಎನ್ನುತ್ತಾರೆ ಮೋಹನ್‌ ಕುಮಾರ್‌ ಡಿ. ಎನ್‌. ಅವರು ವಿಶ್ವೇಶ್ವರ ಭಟ್‌ ಅವರ “ಕಾಲ ದೇಶ” ಕೃತಿ ಕುರಿತು ಬರೆದ ವಿಮರ್ಶೆ.

ಇದಕ್ಕೂ ಮೊದಲು ಶಾರದಾಪ್ರಸಾದ್ ಅವರ ‘ಎಲ್ಲ ಬಲ್ಲವರಿಲ್ಲ’ ಮತ್ತು ‘ಬಲ್ಲವರು ಬಹಳಿಲ್ಲ’ ಎನ್ನುವ ಎರಡು ಪುಸ್ತಕಗಳನ್ನು ಓದಿದ್ದೆ. ಬಹಳ ಇಷ್ಟವಾಗಿತ್ತು. ಪ್ರಸ್ತುತ ಪುಸ್ತಕ ಶಾರದಾ ಪ್ರಸಾದರು ಇಂಗ್ಲೀಷಿನಲ್ಲಿ ಬರೆದ ಲೇಖನಗಳ ಕನ್ನಡಾನುವಾದ. ಅನುವಾದಿಸಿದ್ದು ವಿಶ್ವೇಶ್ವರ ಭಟ್ಟರು. ಮೂರು ಜನ ಪ್ರಧಾನ ಮಂತ್ರಿಗಳ ಬಳಿ ಮಾಧ್ಯಮ ಸಲಹೆಗರರಾಗಿ ಸಮರ್ಥವಾಗಿ, ಬಹಳ ನಿಷ್ಠೆಯಿಂದ ಕೆಲಸ ನಿರ್ವಹಿಸಿದ್ದ ಶಾರದಾ ಪ್ರಸಾದರ ಜೀವನತೋಟಿ, ಚಿಂತನೆ, ಬರಹ ಮತ್ತು ಬದುಕು ಅಪರೂಪದ್ದು. ಹೀಗಾಗಿ ಅವರ ಬರಹ ನನಗಿಷ್ಟ. ಅವರ ಎರಡು ಪುಸ್ತಕಗಳು ಕೂಡ ಅವರ ಲೇಖನಗಳ ಅನುವಾದವೇ ಆಗಿತ್ತು. ಆದರೆ ಇದು ಸಮಗ್ರವಾಗಿದೆ ಮತ್ತು ಅನುವಾದ ಮೂಲಕ್ಕೆ ನಿಷ್ಠವಾಗಿದೆ. ಹೀಗಾಗಿ ಎರಡನೆಯ ಪುಸ್ತಕ ಮಳಿಗೆಯಲ್ಲಿ ಅನುವಾದದ ಕಿರು ರುಚಿಯನ್ನು ಸವಿದು ಮತ್ತೊಮ್ಮೆ ಶಾರದಾಪ್ರಸಾದರನ್ನು ಓದುವ ಮನಸ್ಸಾಗಿ ಪುಸ್ತಕ ಖರೀದಿಸಿದೆ. ಬಹಳ ಗಾಢವಾಗಿ, ಅನೇಕ ಸಂಗತಿಗಳ ಕುರಿತು ಅವರು ಬರೆದಿದ್ದಾರೆ. ಎಲ್ಲವೂ ಓದಲರ್ಹ ಮತ್ತು ಸಂಗ್ರಹಯೋಗ್ಯವಾದುದಾಗಿದೆ.

ಶಾರದಾ ಪ್ರಸಾದರು ಬರೆದ ಲೇಖನಗಳ ತೂಕ ಒಂದಾದರೇ, ಅವರ ವ್ಯಕ್ತಿತ್ವದ ತೂಕವೇ ಇನ್ನೊಂದು. ಅವರ ಬಗ್ಗೆ ಓದುತ್ತಾ ಹೋದಂತೆ, ಅವರನ್ನು ಇನ್ನಷ್ಟು ಹೆಚ್ಚು ಅರಿಯುವ ತವಕ ನಮ್ಮಲ್ಲಿ ಮೂಡದೇ ಇರದು.

ಶಾರದಾ ಪ್ರಸಾದ್ ಅವರ ಬಗ್ಗೆ ಮಾಜಿ ವಿದೇಶಾಂಗ ಸಚಿವನಾಗಿದ್ದ ನಟವರ್ ಸಿಂಗ್ ಅವರು ಹೇಳಿದ್ದು: ‘ಶಾರದಾ ಪ್ರಸಾದ್ ನಿಜಕ್ಕೂ ಗ್ರೇಟ್ ಮನುಷ್ಯ. ಅವರು ಅಪ್ಪಟ ಗಾಂಧಿವಾದಿ. ಬಹಳ ವರ್ಷಗಳ ಕಾಲ ದಿಲ್ಲಿಯಲ್ಲಿ ಅವರಿಗೊಂದು ಸ್ವಂತ ಮನೆ ಸಹ ಇರಲಿಲ್ಲ. ಈ ವಿಷಯ ಹೇಗೊ ಸೋನಿಯಾ ಗಾಂಧಿಯವರಿಗೆ ಗೊತ್ತಾಯಿತು. ಶಾರದಾ ಪ್ರಸಾದ್ ಅವರಿಗೆ ಕಡಿಮೆ ಬಾಡಿಗೆ ಸರಕಾರಿ ಮನೆ ನೀಡುವಂತೆ ಸೂಚಿಸಿದರು. ತಮಗೆ ಇಂಥ ಮನೆ ಕೊಡಿಸಿ ಎಂದು ಸೋನಿಯಾ ಮುಂದೆ ಏನಿಲ್ಲವೆಂದರೂ ಹತ್ತು ಸಾವಿರ ಮಂದಿ ಅರ್ಜಿ ಹಿಡಿದು ನಿಂತಿರಬಹುದು. ಆದರೆ ಶಾರದಾ ಪ್ರಸಾದ್ ಬಹಳ ವಿನಯ ಪೂರ್ವಕವಾಗಿ ಇದನ್ನು ತಿರಸ್ಕರಿಸಿದರು. ಸೈಟು ನೀಡಲು ಸರಕಾರ ಮುಂದೆ ಬಂದಾಗಲೂ ಅವರು ತೆಗೆದುಕೊಳ್ಳಲಿಲ್ಲ. ಇಂಥ ವ್ಯಕ್ತಿಗಳು ಈ ಕಾಲದಲ್ಲೂ ಇದ್ದಾರೆ ಅಂದ್ರೆ ನಂಬುವುದು ಕಷ್ಟ. ಅವರೆಂಥ ಸರಳ ಜೀವನ ನಡೆಸುತ್ತಿದ್ದಾರೆಂಬುದನ್ನು ನೋಡಲು ಅವರ ಮನೆಗೊಮ್ಮೆ ಹೋಗಿ ನೋಡಿ’

ವಿಶ್ವೇಶ್ವರ ಭಟ್ಟರು ಶಾರದಾಪ್ರಸಾದ್ ಅವರ ಮನೆಗೆ ಭೇಟಿಕೊಟ್ಟಾಗ ಕಂಡಿದ್ದು: ‘ಅಂದು ಶಾರದಾ ಪ್ರಸಾದರೊಂದಿಗೆ ಅವರ ಮನೆಯಲ್ಲಿ ನಾನು ಎರಡು ಗಂಟೆ ಕಳೆದಿರಬಹುದು. ಮನೆತುಂಬಾ ಹಳೇ ಪುಸ್ತಕ, ಹಳೇ ಫೋಟೊ ಹಾಗೂ ಹಳೇ ಪೀಠೋಪಕರಣಗಳನ್ನು ಬಿಟ್ಟರೆ ಆಧುನಿಕವೆನಿಸುವಂಥ ಯಾವ ಸಾಮಾನುಗಳೂ ಅಲ್ಲಿರಲಿಲ್ಲ. ಗೋಡೆ ಸುಣ್ಣ ಬಣ್ಣ ಕಾಣದೇ ಅನೇಕ ವರ್ಷಗಳಾಗಿರಬಹುದು. ಮನೆಯ ಚಾವಣಿ ಅಲ್ಲಲ್ಲಿ ಕಿತ್ತು ಹೋಗಿದ್ದವು. ಲಿಫ್ಟ್ ಸಹ ಇಲ್ಲದ ಫ್ಲಾಟು ಅದು. ಇಡೀ ಮನೆಯನ್ನು ಪುಸ್ತಕಗಳೇ ಆವರಿಸಿದ್ದವು. ನಿವೃತ್ತ ಸಾಮಾನ್ಯ ಸರಕಾರಿ ನೌಕರನೊಬ್ಬನ ಕ್ವಾರ್ಟಸ್ರನಂತೆ ಕಂಗೊಳಿಸುತ್ತಿದ್ದ ಆ ಮನೆಯ ಯಜಮಾನ, ಭಾರತದ ಅತ್ಯಂತ ಪ್ರಭಾವಶಾಲಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಸೇರಿದಂತೆ ಮೂವರು ಪ್ರಧಾನಿಗಳಿಗೆ ಮಾಧ್ಯಮ ಸಲಹೆಗಾರರಾಗಿದ್ದರು ಎಂದರೆ ಯಾರೂ ನಂಬುವಂತಿರಲಿಲ್ಲ. ಸಾಮಾನ್ಯ ಸರಕಾರಿ ನೌಕರನೂ ಇಂದು ಬಂಗಲೆ ಕಟ್ಟಿಸುತ್ತಾನೆ. ಕಾರನ್ನಿಟ್ಟುಕೊಂಡಿರುತ್ತಾನೆ. ಆದರೆ ಪ್ರಧಾನಮಂತ್ರಿ ಕಾರ್ಯಾಲಯ (PMO)ದಂಥ ದೇಶದ ಆಯಕಟ್ಟಿನ, Power houseನಲ್ಲಿ ಸುಮಾರು ಇಪ್ಪತ್ತೆರಡು ವರ್ಷಗಳ ಕಾಲ ಕಳೆದ ವ್ಯಕ್ತಿಯ ಮನೆಯಾ ಇದು ಎಂದು ಪದೇ ಪದೆ ಕೇಳಿಕೊಳ್ಳುವ ಹಾಗೆ, ಕೇಳಿಕೊಂಡರೂ ಎದುರಾಎದುರು ನೋಡಿದರೂ ನಂಬದ ಹಾಗೆ, ಇಂಥವರೂ ಈ ಕಾಲದಲ್ಲಿ ಇರ್ತಾರಾ ಎಂದು ನಮ್ಮನ್ನೇ ಸಂಶಯಿಸಿಕೊಳ್ಳುವ ಹಾಗೆ, ಶಾರದಾಪ್ರಸಾದ್ ಇದ್ದರು. ಅವರ ಮನೆಯೂ ಹಾಗಿತ್ತು.

ಇಂದಿರಾಗಾಂಧಿ ಪ್ರಧಾನಿಯಾಗಿದ್ದಷ್ಟು ಕಾಲ ಶಾರದಾ ಪ್ರಸಾದ್‌ ಮಾಧ್ಯಮ ಸಲಹೆಗಾರರಾಗಿದ್ದರು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗಲೂ ನಾಲ್ಕು ವರ್ಷ ಅದೇ ಹುದ್ದೆಯಲ್ಲಿದ್ದರು. ಮೊರಾರ್ಜಿ ದೇಸಾಯಿ ಸಹ ಅವರನ್ನು ಬಿಡಲಿಲ್ಲ. ಇಂದಿರಾಗಾಂಧಿ ಅವರ ಪ್ರಮುಖ ಭಾಷಣಗಳೆಲ್ಲವನ್ನೂ ಬರೆದುಕೊಟ್ಟವರು ಇವರೇ.

ಇಂದಿರಾಗೆ ತೀರಾ ಆತ್ಮೀಯರಾಗಿದ್ದ ಶಾರದಾಪ್ರಸಾದ್ ಎಲ್ಲೂ ತಮ್ಮ ಸ್ಥಾನಮಾನಗಳನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ಅವರು ಪ್ರಧಾನಮಂತ್ರಿ ಕಾರ್ಯಾಲಯದಲ್ಲಿದ್ದಾಗ ಬಸ್ಸಿನಲ್ಲಿ ಅನೇಕ ವರ್ಷ ತಿರುಗಾಡುವುದನ್ನು ನೋಡಿದವರಿದ್ದಾರೆ. ಪ್ರಧಾನಮಂತ್ರಿಗಳ ಜತೆ ಸುಮಾರು 60 ದೇಶಗಳಿಗೆ ಹೋಗಿ ಬಂದಿದ್ದರೂ, ಈ ಬಗ್ಗೆ ಯಾರಾದರೂ ಕೇಳದಿದ್ದರೆ ಪ್ರಸ್ತಾಪಿಸದಷ್ಟು ಸಂಕೋಚ ಸ್ವಭಾವದವರು. ಶಾರದಾಪ್ರಸಾದ್‌ ರನ್ನು ಭೇಟಿಯಾದಾಗ ತಾನು ಪ್ರಧಾನಿ ಕಾರ್ಯಾಲಯದಲ್ಲಿದ್ದೇನೆ, ಪ್ರಧಾನಿಗೆ Media Advisor ಆಗಿದ್ದೇನೆ ಎಂದು ಹೇಳಲು ಸಹ ಅವರು ಹಿಂದೆಮುಂದೆ ನೋಡುತ್ತಿದ್ದರು. ಇಂದಿರಾಗೆ ಇವರ ಮೇಲೆ ಅದೆಂಥ ನಿಷ್ಠೆ, ನಂಬಿಕೆಯಿತ್ತೆಂದರೆ ನೆಹರು ನಿಧನದ ಎಷ್ಟೋ ವರ್ಷಗಳ ಬಳಿಕ ಅಲಹಾಬಾದ್‌ನಲ್ಲಿದ್ದ ಅವರ (ನೆಹರು) ಅಲ್ಮೆರಾದೊಳಗೆ ಇರುವ ಸಾಮಾನುಗಳನ್ನು ತರಲು ಇಂದಿರಾ, ಶಾರದಾಪ್ರಸಾದ್‌ಗೆ ಕೀಲಿ ಕೊಟ್ಟು ಕಳುಹಿಸಿದ್ದರು!

ಶಾರದಾಪ್ರಸಾದ್ ಎರಡು ದಶಕಗಳ ಕಾಲ ಪ್ರಧಾನಿ ಕಚೇರಿಯಂಥ ಆಯಕಟ್ಟಿನ ಜಾಗದಲ್ಲಿ ಇದ್ದವರು. ಪ್ರಧಾನಿಗಳಿಗೆ ತೀರಾ ನಿಕಟರಾಗಿದ್ದ ಅವರು, ಆ ಅವಧಿಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರಗಳಿಗೆ, ಘಟನೆಗಳಿಗೆ ಸಾಕ್ಷಿಯಾದವರು. ಜವಾಹರಲಾಲ್ ನೆಹರು ಅವರನ್ನು ಸಹ ಹತ್ತಿರದಿಂದ ಬಲ್ಲವರು. ಇಂದಿರಾ, ಮೊರಾರ್ಜಿ ಹಾಗೂ ರಾಜೀವ್ ಜತೆ ಕೆಲಸ ಮಾಡಿದ್ದರಿಂದ ಪ್ರಧಾನಿ ಕಾರ್ಯಾಲಯದ ಸೂಕ್ಷ್ಮಗಳನ್ನು ಅರಿತವರು. ಹೀಗಾಗಿ ಅವರಿಗೆ ಅನೇಕ ಸಂಗತಿಗಳು ಗೊತ್ತಿರುವುದು ಸಹಜ. ಈ ಕಾರಣದಿಂದ ಅವರು ಏನೇ ಹೇಳಲಿ, ಅದಕ್ಕೆ ಹೆಚ್ಚಿನ ಮಹತ್ವವಿರುತ್ತದೆ’
ಶಾರದಪ್ರಸಾದರನ್ನು ಓದಲು ಇದಕ್ಕಿಂತ ಹೆಚ್ಚಿನ ಕಾರಣ ಬೇಕೇ? ಪುಸ್ತಕ ಸಿಕ್ಕರೆ ಖಂಡಿತ ಓದಿ.

MORE FEATURES

ಕನ್ನಡ ಆಧುನಿಕ ಕಥನ ಸಾಹಿತ್ಯವು ಪ್ರಾರಂಭದಲ್ಲಿ ಹೊಂದಿದ್ದ ವೈವಿಧ್ಯ ಈಗ ಕಾಣಿಸುತ್ತಿಲ್ಲ

23-03-2025 ಬೆಂಗಳೂರು

"ಲೇಖಕರ ಹಾಸ್ಯ, ವ್ಯಂಗ್ಯಗಳು ಮತ್ತು ಕುತೂಹಲ ಉಳಿಸಿಕೊಳ್ಳುವ ನಿರೂಪಣೆ ಈ ಕತೆಗಳ ವೈಶಿಷ್ಟ್ಯ. ಕತೆಗಳು ಒಂದು ಒಂದೂವ...

ಪ್ರಕೃತಿ ಸಹಜವಾದ ಆಕರ್ಷಣೆಯ ಆದರ್ಶ ಜೀವನ ಎಲ್ಲರಿಗೂ ಬೇಕು

23-03-2025 ಬೆಂಗಳೂರು

"ಜಲಪಾತ ಹೆಸರೇ ಸೂಚಿಸುವಂತೆ ನಿರಂತರ ಹರಿಯುತ್ತಿರುವ ಪ್ರಕೃತಿಯ ಶಕ್ತಿಯ ಅಗಾಧತೆಯನ್ನು ಬಿಂಬಿಸುವ ಪ್ರಾಕೃತಿಕ ಸೃಷ್...

ಒಂದು ಐತಿಹಾಸಿಕ ಸಮ್ಮೇಳನಕ್ಕೆ ಹಾಜರಾದ ಸಾರ್ಥಕತೆ

23-03-2025 ಬೆಂಗಳೂರು

"ನಗಲು ತೆರೆದ ಬಾಯನ್ನು ಮುಚ್ಚಲಾಗದಷ್ಟು ಪರಿಚಿತ ಮುಖಗಳು ಸಿಕ್ಕು ತವರಿನ ಕಾರ್ಯಕ್ರಮಕ್ಕೆ ಹೋದಂತೆನಿಸಿತು. ಕವಿಗೋಷ...