“ಇಲ್ಲಿರುವ ಅಷ್ಟೂ ಅಧ್ಯಾಯಗಳು ಹೃದಯದಿಂದ ಬಸಿದ ಕಜ್ಜಾಯ! ಒಂದಕ್ಕಿಂತ ಒಂದು ಮಿಗಿಲು. ಯಾವುದು ಹೆಚ್ಚು ಯಾವುದು ಕಮ್ಮಿ ಎಂಬುದನ್ನು ವಿಂಗಡಿಸುವುದೇ ಕಷ್ಟಕರ ಕೆಲಸ,” ಎನ್ನುತ್ತಾರೆ ಗಣೇಶ್ ಕಾಸರಗೋಡು. ಅವರು ಕವಿರಾಜ ಅವರ “ಕವಿರಾಜ ಮಾರ್ಗದಲ್ಲಿ…” ಕೃತಿಗೆ ಬೆರದ ಮುನ್ನುಡಿ.
'ಕವಿರಾಜ ಮಾರ್ಗದಲ್ಲಿ' ಪುಸ್ತಕಕ್ಕೊಂದು ಮುನ್ನುಡಿ ಬರೆದು ಕೊಡಿರೆಂದು ಲೇಖಕ ಕವಿರಾಜ್ ವಿನಂತಿಸಿಕೊಂಡಾಗ ನಾನು ಕೇಳಿದ ಮೊದಲ ಪ್ರಶ್ನೆ ಹೀಗಿತ್ತು : 'ಈ ಬೃಹತ್ ಚಿತ್ರೋದ್ಯಮದಲ್ಲಿ ನಿಮ್ಮಂಥಾ ಸೆಲೆಬ್ರಿಟಿಗಳ ಪುಸ್ತಕಕ್ಕೆ ಮುನ್ನುಡಿ ಬರೆಯಲು ನಿಮ್ಮಷ್ಟೇ ಸೆಲೆಬ್ರಿಟಿಗಳಾದವರು ಕ್ಯೂನಲ್ಲಿ ನಿಂತಿರುತ್ತಾರೆ. ಅವರನ್ನೆಲ್ಲಾ ಬಿಟ್ಟು ಈ ಸಾಮಾನ್ಯನಾದ ಸಿನಿಮಾ ಪತ್ರಕರ್ತನನ್ನು ಯಾಕೆ ಆಯ್ಕೆ ಮಾಡಿಕೊಂಡೀ ಕವಿಗಳೇ?' – ಈ ಪ್ರಶ್ನೆಗೆ ನಿಮ್ಮ ಉತ್ತರ : 'ಮೊದಲು ಪುಸ್ತಕಕ್ಕೆ ಯಾರಿಂದಲೂ ಮುನ್ನುಡಿ ಬರೆಸೋ ಯೋಚನೆ ಇರಲಿಲ್ಲ. ಕೊನೆಗೆ ಮುನ್ನುಡಿ ಬೇಕು ಅಂತ ಅನ್ನಿಸ್ತು. ಆಗ ಮೊದಲ ಸಂದರ್ಶನ ಮಾಡಿಸಿದ ನೀವೇ ಮುನ್ನುಡಿ ಬರೆದರೆ ಚೆಂದ ಅನ್ನಿಸ್ತು...'
ಈಗ ಆ ಮೊದಲ ಸಂದರ್ಶನಕ್ಕೆ ಕಾರಣವಾದ ಘಟನೆಯನ್ನು ಅದೇ ಕವಿರಾಜ್ ಮಾತಲ್ಲಿ ಕೇಳಿ : 'ಅದು 2004ರ ಸಮಯ. ನಾನಿನ್ನೂ ಚಿತ್ರರಂಗಕ್ಕೆ ಹೊಸಬ. ನಾಲೈದು ಚಿತ್ರಗಳಿಗೆ ಹಾಡು ಬರೆದಿದ್ದೆನಷ್ಟೇ. ಆ ವೇಳೆ ಉಪೇಂದ್ರ ಅವರ 'ಕುಟುಂಬ' ಚಿತ್ರಕ್ಕೆ ಹಾಡು ಬರೆಯುವ ಅವಕಾಶ ಸಿಕ್ಕಿತ್ತು. ಚಿತ್ರದ ಧ್ವನಿಸುರುಳಿ ಬಿಡುಗಡೆಗೆಂದು ಮೂರು ಬಸ್ಸುಗಳಲ್ಲಿ ಎಲ್ಲರೂ ಹುಬ್ಬಳ್ಳಿಗೆ ಹೊರಟಿದ್ದೆವು. ನಾನು ಪತ್ರಕರ್ತರಿಗೆ ಮೀಸಲಾಗಿಟ್ಟ ಬಸ್ಸು ಏರಿಬಿಟ್ಟಿದ್ದೆ! ಪ್ರಯಾಣದಲ್ಲಿ 'ಕುಟುಂಬ' ಚಿತ್ರದ ಹಾಡನ್ನು ಪ್ಲೇ ಮಾಡಿದ್ದರು. ಅದರಲ್ಲಿ 'ಮುಜೆ ಕುಚು ಕುಚು ಹೋಗಯಾ' ಹಾಡು ನನ್ನ ನಿರೀಕ್ಷೆ ಮೀರಿ ಎಲ್ಲಾ ಪತ್ರಕರ್ತರಿಗೂ ಮೆಚ್ಚುಗೆಯಾಗಿತ್ತು. ಬರೆದದ್ದು ಹೊಸ ಹುಡುಗ ಎಂದು ತಿಳಿದಾಗ ಎಲ್ಲರೂ ಏಕಕಂಠದಿಂದ ನನ್ನ ಈ ಪ್ರಯೋಗವನ್ನು ಕೊಂಡಾಡಿದರು. ಆಗ ಹಿರಿಯ ಪತ್ರಕರ್ತರೊಬ್ಬರು ನನ್ನನ್ನು ಕರೆದು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡರು. ನಾನು ತುಂಬಾ ಸಂಕೋಚದಿಂದ ಅವರ ಪಕ್ಕದಲ್ಲಿ ಕೂತೆ. ತಕ್ಷಣವೇ ನನ್ನ ಬಗ್ಗೆ ಒಳ್ಳೆ ಮಾತಾಡಿ ವಿಸಿಟಿಂಗ್ ಕಾರ್ಡು ಕೊಟ್ಟು ಭೇಟಿಯಾಗುವಂತೆ ತಿಳಿಸಿದರು. ಆಗಲೇ ನನಗೆ ತಿಳಿದದ್ದು ಅವರು ಅಂದಿನ 'ವಿಜಯಕರ್ನಾಟಕ' ಪತ್ರಿಕೆಯ ಸಿನಿಮಾ ವಿಭಾಗದ ಮುಖ್ಯಸ್ಥ ಗಣೇಶ್ ಕಾಸರಗೋಡು ಎಂದು! ಮಾರನೇ ಬೆಳಿಗ್ಗೆ ಎದ್ದೆನೋ ಬಿದ್ದೆನೋ ಎಂಬಂತೆ 'ವಿಜಯಕರ್ನಾಟಕ' ಆಫೀಸಿಗೆ ಹೋಗಿ ಗಣೇಶ್ ಅವರ ಮುಂದೆ ಕೂತೆ. ಅಷ್ಟರಲ್ಲೇ ತಮ್ಮ ಸಹೋದ್ಯೋಗಿಯೊಬ್ಬರನ್ನು ಕರೆಸಿ ನನ್ನ ಸಂದರ್ಶನ ಮಾಡಿಸಿಕೊಂಡರು. ಬರುವಾಗ 'ಮುಂದಿನ ಶುಕ್ರವಾರ ನಿಮಗೊಂದು ಸರ್‌ಪ್ರೈಸ್ ಕಾದಿದೆ. All the best, ಹೋಗಿ ಬನ್ನಿ...' ಅಂದರು. ಆ ಶುಕ್ರವಾರದ ಸಿನಿಮಾ ಪುರವಣಿಯನ್ನು ನೋಡಿದಾಗ ನಿಜಕ್ಕೂ ಸರ್‌ಪ್ರೈಸ್ ಅನ್ನಿಸಿತು. ನನ್ನ ಕಣ್ಣುಗಳನ್ನು ನನಗೇ ನಂಬಲಾಗಲಿಲ್ಲ. ನನ್ನ ಸಂದರ್ಶನ ಮೊದಲ ಪುಟದಲ್ಲೇ ಛಾಯಾಚಿತ್ರದೊಂದಿಗೆ ರಾರಾಜಿಸುತ್ತಿತ್ತು! ಖುಷಿಯಿಂದ ಕೊರಳುಬ್ಬಿ ಬಂತು. ಕಣ್ಣುಂಬಿ ಬಂತು. ಮೆಚ್ಚುಗೆಯ ಫೋನ್ ಕಾಲ್‌ಗಳ ಸುರಿಮಳೆ. ಇದ್ದ ಕೆಲಸ ಬಿಟ್ಟು ಹಾಡು ಬರೆದು ಬದುಕು ಕಟ್ಟಿಕೊಳ್ಳಲು ಹೊರಟ ನನ್ನ ಬಗ್ಗೆ ಅಸಮಾಧಾನವಿದ್ದ ನನ್ನ ಮನೆಯವರು, ಬಂಧುಗಳು, ಹಿತೈಷಿಗಳು ಹೆಮ್ಮೆಯಿಂದ ಅಭಿನಂದಿಸತೊಡಗಿದರು. ಇಲ್ಲೇ ಮುಂದುವರಿಯಬೇಕೋ, ಬೇಡವೋ ಎಂಬ ನನ್ನೊಳಗಿನ ತುಮುಲ, ಗೊಂದಲಗಳು ಪರಿಹಾರವಾಗಿ ಹೊಸದೊಂದು ಆತ್ಮವಿಶ್ವಾಸ ಉಕ್ಕಿ ಬಂತು. ಆಗಿನ್ನೂ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದವನಿಗೆ ಈ ಮಟ್ಟಿಗಿನ ಪ್ರಚಾರ, ಪ್ರಾಮುಖ್ಯತೆ, ಪ್ರೋತ್ಸಾಹ ನೀಡಿದ್ದ ಗಣೇಶ್ ಕಾಸರಗೋಡು ಎಂಬ ವ್ಯಕ್ತಿ, ಶಕ್ತಿ ನನ್ನ ವೃತ್ತಿ ಬದುಕಿನ ಒಂದು ಪ್ರಮುಖ ತಿರುವಿಗೆ ಕಾರಣರಾದದ್ದು ಹೀಗೆ...' - ಹೀಗೆ ಬರೆಯುತ್ತಾ ಹೋಗುತ್ತಾರೆ ಕವಿರಾಜ್. ಅಂದಹಾಗೆ, ಇವರು ಇದನ್ನು ಮುನ್ನುಡಿ ರೂಪದಲ್ಲಿ ಬರೆದದ್ದು ನನ್ನ ನೂರು ಚಿತ್ರಗಳು ನೂರಾರು ನೆನಪುಗಳು' ಪುಸ್ತಕಕ್ಕೆ!
ಈಗ ಇದೇ ಕವಿರಾಜ್ ಪುಸ್ತಕಕ್ಕೆ ಮುನ್ನುಡಿ ಬರೆಯಲು ಕೂತಿದ್ದೇನೆ ನಾನು! ಇದು ಬರಿಯ ಮುನ್ನುಡಿ ಮಾತ್ರವಲ್ಲ ಹಿತನುಡಿಯೂ ಹೌದು. ಕವಿರಾಜ್ ಭೇಟಿಯಾದದ್ದು 2004ರಲ್ಲಿ. ಈಗ 2025. ಅಂದರೆ ಈ 21 ವರ್ಷಗಳಲ್ಲಿ ಕವಿರಾಜ್ ಬೆಳೆದ ಎತ್ತರದ್ದೇ ಒಂದು ಸಾಹಸಗಾಥೆ...
ಎಲ್ಲಿಂದ ಶುರು ಮಾಡಲಿ ಎನ್ನುವ ಕನ್ಸೂಷನ್ ನನ್ನದು. 'ಕವಿರಾಜ್ ಮಾರ್ಗದಲ್ಲಿ' ಪುಸ್ತಕದ ಎಲ್ಲಾ ಅಧ್ಯಾಯಗಳನ್ನು ಓದಿ ಅನಿಸಿದ ಅನಿಸಿಕೆಗೆ ಅಕ್ಷರ ರೂಪ ಕೊಡಲು ಕೂತಿದ್ದೇನೆ. ಯಾವುದೇ ಕಾರಣಕ್ಕೂ ಪುಸ್ತಕ ಒಳಗೊಂಡ ವಿವರಗಳಿಗಿಂತ ಈ ನನ್ನ ಮುನ್ನುಡಿ ಅಥವಾ ಹಿತನುಡಿ ಕ್ವಾಲಿಟಿಯಲ್ಲಿ ಕಮ್ಮಿಯಾಗಬಾರದೆನ್ನುವ ಎಚ್ಚರಿಕೆಯನ್ನಿಟ್ಟುಕೊಂಡರೂ ತೂಕದಲ್ಲಿ ಕವಿರಾಜ್ ಅವರೇ ಹೆಚ್ಚು ಎನ್ನುವ ಅನಿಸಿಕೆ ನನ್ನದು. ಇರಲಿ, ಇಲ್ಲಿರುವ ಅಷ್ಟೂ ಅಧ್ಯಾಯಗಳು ಹೃದಯದಿಂದ ಬಸಿದ ಕಜ್ಜಾಯ! ಒಂದಕ್ಕಿಂತ ಒಂದು ಮಿಗಿಲು. ಯಾವುದು ಹೆಚ್ಚು ಯಾವುದು ಕಮ್ಮಿ ಎಂಬುದನ್ನು ವಿಂಗಡಿಸುವುದೇ ಕಷ್ಟಕರ ಕೆಲಸ.
ಅಷ್ಟೊಂದು ಪರಿಪಕ್ವ ನಳಪಾಕ! ಓದುತ್ತಾ ಹೋದಂತೆ ಒಂದು ಹಂತದಲ್ಲಿ ನಾನು ಕವಿರಾಜ್ ಅವರಿಗೆ ಹೀಗೆಂದು ಮೆಸೇಜ್ ಮಾಡಿದೆ : 'ಒಟ್ಟಿನಲ್ಲಿ ಇದು ಸಿನಿಮಾ ಕಮೋಡಿಟಿ ಕವಿ. ಇಲ್ಲಿ ಎಲ್ಲವೂ ಇವೆ. ಸೆಂಟಿಮೆಂಟ್, ವಿಷಾದ, ಕಾಮಿಡಿ, ಹತಾಶೆ...ವಾಹ್. ಏನುಂಟು, ಏನಿಲ್ಲ? ಭರ್ಜರಿ ಕಮರ್ಷಿಯಲ್ ಸಿನಿಮಾ ಆಗಬಹುದಾದ ಅವಕಾಶ ಈ ಪುಸ್ತಕಕ್ಕಿದೆ. ಯೋಚಿಸಿ ನೋಡಿ, ಯಾವುದೋ 'ಬುಲ್ ಬುಲ್' ಯಶಸ್ವೀ ಸಿನಿಮಾ ಆಗಬಹುದಾದರೆ ಇದೊಂದು ರೋಚಕ ಸಿನಿಮಾ ಆಗುವುದರಲ್ಲಿ ಅನುಮಾನವಿಲ್ಲ. ಅರ್ಧ ಓದಿ ಈ ಅಭಿಪ್ರಾಯವನ್ನು ನಿಮ್ಮ ಮುಂದಿಡುತ್ತಿದ್ದೇನೆ...ಸ್ವೀಕರಿಸಿ ಕವಿ... ಇದಕ್ಕೆ ಕವಿರಾಜ್ ಉತ್ತರ : 'ಸಿನಿಮಾ ಆಗ್ಟಹುದು ಅಂತ ನಂಗೂ ಅನ್ನಿಸ್ತು, ಎಲ್ಲಾ ಘಟನೆಗಳನ್ನು ಒಂದು ಕಥೆಯಾಗಿ ತರೋ ಸವಾಲಿದೆ...' - ಈ ಸವಾಲನ್ನು ಮೀರಿ ಚಿತ್ರಕಥೆ ಹೆಣೆಯುವ ತಾಕತ್ತು ಕವಿರಾಜ್ ಅವರಿಗಿದೆ ಎಂಬುದನ್ನು ಶೃತಪಡಿಸುತ್ತಾ...
ಒಟ್ಟು 30 ಅಧ್ಯಾಯಗಳಿರುವ ಈ ಪುಸ್ತಕದ ಎಲ್ಲಾ ಅಧ್ಯಾಯಗಳೂ ಭರಪೂರ ಆತ್ಮನಿವೇದನೆಯಂಥಾ ರಸಪಾಕಗಳೇ, ಯಾವುದು ಚೆನ್ನಾಗಿದೆ, ಯಾವುದು ಚೆನ್ನಾಗಿಲ್ಲ ಎಂದು ವಿಂಗಡಿಸುವುದು ಸಾಧ್ಯವೇ ಇಲ್ಲ. ಒಮ್ಮೆ ಓದಲು ಶುರುವಿಟ್ಟುಕೊಂಡರೆ ಸಾಕು ನಿಲ್ಲಿಸುವ ಮನಸ್ಸೇ ಬಾರದು. ಕೆಲವೊಮ್ಮೆ ಅದೊಂದು ಭೋರ್ಗರೆವ ಜಲಪಾತ, ಮತ್ತೆ ಕೆಲವೊಮ್ಮೆ ಶಾಂತವಾಗಿ ಹರಿವ ಸಾಗರ, ಇನ್ನೂ ಕೆಲವೊಮ್ಮೆ ಅಚ್ಚರಿಗೊಳಿಸುವ ತಿಳಿನೀರ ಕೊಳ! ಉದಾಹರಣೆಗೆ 'ಎಂಟರ್ ವಿತ್ ಮುತ್ತಪ್ಪ ರೈ' ಅಧ್ಯಾಯವನ್ನೇ ತೆಗೆದುಕೊಳ್ಳಿ, ಇಲ್ಲಿ ಯಾವುದಿಲ್ಲ, ಯಾವುದುಂಟು ಎಂದು ವಿಂಗಡಿಸುವುದು ಕಷ್ಟ ಕಷ್ಟ ಸರಾಗವಾಗಿ ಓದಿಸಿಕೊಂಡು ಹೋಗುವ ಕವಿಯ ಶೈಲಿಗೆ ನಮೋ ನಮಃ. ಕಣ್ಣಿಗೆ ಕಟ್ಟಿದಂತೆ ಅಕ್ಷರಗಳಲ್ಲಿ ಘಟನೆಗಳನ್ನು ಹೆಣೆಯುವ ಪರಿಗೆ ಯಾರಾದರೂ ಅಚ್ಚರಿಗೊಳ್ಳಲೇಬೇಕು. 'ಹಮ್ಮುಬಿಮ್ಮಿಲ್ಲದ ಹೃದಯವಂತ ದೊರೆ'ಯಲ್ಲಿನ ಅಂಬರೀಶ್ ನಮ್ಮ ಮುಂದೆ ಬೇರೆಯದ್ದೇ ಅವತಾರ ತಾಳಿ ಪ್ರತ್ಯಕ್ಷರಾಗುತ್ತಾರೆ. 'ಸಾಹಸಸಿಂಹನ ಸನ್ನಿಧಿಯಲ್ಲಿ'ನ ವಿಷ್ಣುವರ್ಧನ್ ಮತ್ತಷ್ಟು ಹತ್ತಿರವಾಗುವುದು ಕವಿಯ ನಿರ್ಮಲ ಹೃದಯದ ಅಭಿವ್ಯಕ್ತಿಯಿಂದ. 'ಈ ಮನುಷ್ಯನನ್ನೇಕೆ ದೇವತಾ ಮನುಷ್ಯ ಅನ್ನೋದು?' ಅಧ್ಯಾಯದ ರಾಜಕುಮಾರ್ ನಮ್ಮ ಮುಂದೆ ಪ್ರತ್ಯಕ್ಷವಾಗುವ ರೀತಿ ಬೇರೆಯದ್ದೇ ಆದ ಆಂಗಲ್‌ನಲ್ಲಿ. 'ಕಿಚ್ಚನ ಪತ್ನಿಯ ಕಿವಿಯೋಲೆ ಪ್ರಸಂಗ'ದಲ್ಲಿ ಈ ಕವಿ ತಮ್ಮನ್ನು ತಾವೇ ಹೀಯಾಳಿಸುತ್ತಾರೋ, ಸಾಂತ್ವನಗೊಳಿಸುತ್ತಾರೋ, ರಹಸ್ಯ ಬಿಚ್ಚಿಡುತ್ತಾರೋ...ಅದೊಂದು ಸಸ್ಪೆನ್ಸ್. ಹಾಗೆಯೇ 'ಸಲಾಂ ಯಶ್ ಭಾಯ್', 'ರಶ್ಮಿಕಾ ಕೃಶ್ಚಿಕಾ ಆಗುವ ಮುನ್ನ... ಮೊದಲಾದ ಅಧ್ಯಾಯಗಳು ರಸಿಕ ಹೃದಯದ ಸಂವೇದನೆಗಳು!
ಕಂಠೀರವ ಸ್ಟುಡಿಯೋ ಯಾವುದು, ಕಂಠೀರವ ಸ್ಟೇಡಿಯಂ ಯಾವುದೆಂದೇ ತಿಳಿಯದೇ ಬೆಂಗಳೂರಿಗೆ ಕಾಲಿಟ್ಟ ಕವಿರಾಜ್ ಇಡಿಯ ಕನ್ನಡ ಚಿತ್ರರಂಗವೇ ಬೆರಗುಗೊಳ್ಳುವಂಥಾ ಗೀತರಚನಕಾರರಾಗಿ ಬೆಳೆಯಬೇಕಿದ್ದರೆ ಅವರೊಳಗಿನ ಧೀಶಕ್ತಿಗೆ ತಲೆ ಬಾಗಲೇಬೇಕು. ಬದುಕಿನ ಈ ಪಯಣದಲ್ಲಿ ಎಡವಿದ್ದೆಷ್ಟೋ, ಬಿದ್ದದ್ದೆಷ್ಟೋ, ಎದ್ದದ್ದೆಷ್ಟೋ...ಅವರಿಗೆ ಮಾತ್ರ ಗೊತ್ತು. ಅವುಗಳನ್ನೆಲ್ಲಾ ಒಟ್ಟು ಸೇರಿಸಿ ಘಟನೆಗಳ ಮೂಲಕ ಸಿನಿಮೀಯ ರೀತಿಯಲ್ಲಿ ಹೇಳುವ ಪ್ರಯತ್ನ ಇವರದ್ದು. ಇದರ ಹಿಂದಿನ ಶ್ರಮ, ಶ್ರದ್ಧೆಯನ್ನು ನೀವು ಗಮನಿಸಬೇಕು. ಎಲ್ಲೂ ಬೋರು ಹೊಡೆಯದಂತೆ ವಾಕ್ಯ ರಚನೆಯಲ್ಲಿ ತೆಗೆದುಕೊಂಡ ಜಾಗ್ರತೆ ನಿಚ್ಚಳವಾಗಿ ಎದ್ದುಕಾಣುತ್ತದೆ. ಇದು ಈ ಕೃತಿಯ ಸಾರ್ಥಕತೆ.
ನಾನೊಮ್ಮೆ ಶಿವಾನಂದ ಸರ್ಕಲ್ ಬಳಿಯ ಜನಾರ್ಧನ ಹೋಟೆಲಿಗೆ ಹೋಗಿ ಖ್ಯಾತ ಚಿತ್ರ ಸಾಹಿತಿ ಚಿ|ಉದಯಶಂಕರ್ ಅವರನ್ನು ಸಂದರ್ಶಿಸಿದಾಗ ಅವರು ತಮ್ಮ ಹಾಸಿಗೆ ದಿಂಬಿನಡಿ ಅಡಗಿಸಿಟ್ಟಿರುವ ಬೌನ್ಸ್ ಆದ ಚೆಕ್ಕುಗಳನ್ನು ತೋರಿಸಿ ವಿಷಾದ ವ್ಯಕ್ತಪಡಿಸಿದ್ದನ್ನು ಮರೆಯಲು ಸಾಧ್ಯವೇ? ಆದರೆ ಪುಣ್ಯಕ್ಕೆ ಇಂಥಾ ಅನುಭವ ಕವಿರಾಜ್ ಅವರಿಗೆ ಆಗಿರಲಿಕ್ಕಿಲ್ಲ ಎಂದು ಭಾವಿಸಿದ್ದೇನೆ. ಆ ಕಾಲದ ಚಿತ್ರ ಸಾಹಿತಿಗಳು ಓಡಾಡಲು ಆಟೋರಿಕ್ಷಾವನ್ನು ಬಳಸುತ್ತಿದ್ದುದನ್ನು ಕಣ್ಣಾರೆ ಕಂಡವನು ನಾನು. ಈಗ ಕಾಲ ಬದಲಾಗಿದೆ. ಹೆಚ್ಚಿನ ಚಿತ್ರ ಸಾಹಿತಿಗಳ ಬಳಿ ಕಾರುಗಳಿವೆ. ಕವಿರಾಜ್ ಕೂಡಾ ಕಾರಿನಲ್ಲೇ ಓಡಾಡುವ ಚಿತ್ರ ಸಾಹಿತಿ! ಈ ಮಟ್ಟಕ್ಕೆ ಬರಲು ಅವರು ಪಟ್ಟ ಶ್ರಮವನ್ನು ಕೂಡಾ ಈ ಲೇಖನ ಮಾಲೆಯಲ್ಲಿ ಸೂಚ್ಯವಾಗಿ ಬರೆದಿದ್ದಾರೆ..
ಇವೆಲ್ಲದರ ಜತೆಗೆ ಕವಿರಾಜ್ ಬರೆದ ಟಾಪ್ 101 ಗೀತೆಗಳ ದಾಖಲೆಯೂ ಇದೆ. ಬಣ್ಣದ ಆಕರ್ಷಕ ನೆನಪಿನ ಆಲ್ಬಂ ನಿಜಕ್ಕೂ ಒಂದು ಬೋನಸ್ ಕೊಡುಗೆ. ಒಟ್ಟಿನಲ್ಲಿ ಈ ಪುಸ್ತಕವನ್ನು ಓದಿದರೆ ಬಣ್ಣದ ಲೋಕದ ಮತ್ತೊಂದು ಮುಖದ ಪರಿಚಯದ ಜತೆ ಆರಾಮವಾದ ಉಲ್ಲಾಸಕರ ಸಿನಿಮಾ ಜರ್ನಿ ಮಾಡಿದಂತೆ. ಇಷ್ಟರಲ್ಲೇ ಮುಗಿಯುವುದಿಲ್ಲ, ಕವಿರಾಜ್ ಅವರ ಮತ್ತಷ್ಟು, ಮಗದಷ್ಟು ಅನುಭವಗಳ ಮೂಟೆ ಓಪನ್ ಆಗುವ ಎರಡನೇ, ಮೂರನೇ ಭಾಗ ಕಣ್ಮುಂದೆ ಬರುತ್ತದೆ. ಇಂಥಾ ಆಸಕ್ತಿಕರ ಪುಸ್ತಕಗಳ ಭರಪೂರ ಅಧ್ಯಾಯಗಳನ್ನು ಓದಿ ಸವಿಯಲು ನಾನಂತೂ ಈಗಲೇ ರೆಡಿಯಾಗಿದ್ದೇನೆ, ನೀವೂ ರೆಡಿಯಾಗಿ ಬಿಡಿ...
“ಪ್ರೀತಿ, ಪ್ರೇಮಗಳು ,ಜಾತಿ, ಮತ ಧರ್ಮ,ವಿಚಾರಗಳು, ಯುವಕರ ಬಗ್ಗೆ ಆಚರಣೆಗಳು ಹೀಗೆ ಹಲವಾರು ಪ್ರಸ್ತುತ ಬದಲಾದ ಹಳ...
“ಇಸ್ಕೂಲು ಓದಿಸಿಕೊಂಡು ಹೋಯಿತು ಅನ್ನುವುದಕ್ಕಿಂತ ನೆನಪಿನ ಅಲೆಯಲ್ಲಿ ತೇಲಿಸಿಕೊಂಡು ಹೋಯಿತು ಅಂದರೆ ಹೆಚ್ಚು ಸೂಕ್...
“ಪ್ರೀತಿಯ ಕಥಾವಸ್ತುನಿಟ್ಟುಕೊಂಡ ಕೃತಿಗಳಲ್ಲಿ ಸಾಮಾನ್ಯವಾಗಿ ಭಾವುಕತೆಯೇ ವಿಜೃಂಭಿಸುತ್ತದೆ. ಆದರೆ ಈ ಕೃತಿಯು ಮನು...
©2025 Book Brahma Private Limited.