“ಇಂಥ ಒಂದು ಕೃತಿಯನ್ನು ಬರೆದುಕೊಂಡವರಲ್ಲಿ ನಾನು ಮೊದಲಿಗನಲ್ಲ ಕಡೆಯವನಂತೂ ಅಲ್ಲವೇ ಅಲ್ಲ. ಆದರೆ ಇದನ್ನು ಬರೆದುದು ನಾನು ಮಾತ್ರ,” ಎನ್ನುತ್ತಾರೆ ಜಯರಾಮ ಹೆಗಡೆ. ಅವರು ತಮ್ಮ “ಬೀದಿಯ ಬದುಕು” ಕೃತಿಗೆ ಬರೆದ ಲೇಖಕರ ಮಾತು.
ಬೀದಿಯ ಬದುಕು ಎಂದು ಬರೆದುಕೊಂಡೆ. ಬರೆಯುವಾಗ ಒಮ್ಮೆಗೇ ಕುಳಿತು ಬರೆದ ಕಥೆಯಲ್ಲ. ಬರೆದು ಕಾಲ ಬಹಳ ಸಂದಿದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದಿನಿಂದಲೂ ತೊಡಗಿಕೊಂಡ ಈ ಬರಹ ಗಜಗರ್ಭವೇ ಆಗಿದ್ದಂತೂ ಸತ್ಯದ ಸಂಗತಿ. ಇಷ್ಟು ದೀರ್ಘ ಕಾಲ ತೆಗೆದುಕೊಂಡ ಈ ಬರಹಕ್ಕೆ ಪ್ರತ್ಯೇಕ ಪ್ರಸ್ತಾವನೆ ಬೇಕೇ ಎಂಬ ಪ್ರಶ್ನೆ ಇದೆಯಾದರೂ ಪ್ರಸ್ತುತ ಕಾಲದಲ್ಲಾದರೂ ಇದರ ಅನಾವರಣಕ್ಕೆ ಕಾಲ ಕೂಡಿ ಬಂದಿತೇ ಎಂಬ ಗೊಂದಲದಲ್ಲಿ ಈಗಲೂ ನಾನಿದ್ದೇನೆ. ಎರಡು ದಶಕದ ಹಿಂದೆ ಬರೆಯ ತೊಡಗುವ ದಿನದಂದು ನನ್ನೊಳಗಿದ್ದದ್ದನ್ನು ಹೊರಹಾಕುವ ಉದ್ದೇಶ ಮಾತ್ರ ಇತ್ತು. ಇತರರೆದುರು ಪ್ರದರ್ಶಿಸಲಿಕ್ಕಾಗಲೀ, ಬೇರೆಯ ಅದ್ಭುತ ಪವಾಡ ಸೃಷ್ಟಿಯಾದೀತೆಂಬ, ಆಗಲೇಬೇಕೆಂಬ ಭ್ರಮೆಯಾಗಲಿ ಯಾವುದೂ ಇರದೆ ನಾನು ನನ್ನಷ್ಟಕ್ಕೆ ನನ್ನದೇ ಭಾಷೆಯಲ್ಲಿ ಬರೆದುಕೊಂಡಿದ್ದು.
ಇದು ಆತ್ಮಚರಿತ್ರೆಯೋ, ಆತ್ಮ ನಿವೇದನೆಯೋ ಅಥವಾ ಇನ್ನೇನೋ. ಇದಕ್ಕೆ ಸಾಹಿತ್ಯ ಲೋಕದಲ್ಲಿ ಯಾವ ಶಿರೋನಾಮೆ ಸಿಕ್ಕೀತೋ ಎಲ್ಲವೂ ಗೊಂದಲದ ವಿಷಯಗಳೇ. ಇಂಥ ಒಂದು ಕೃತಿಯನ್ನು ಬರೆದುಕೊಂಡವರಲ್ಲಿ ನಾನು ಮೊದಲಿಗನಲ್ಲ ಕಡೆಯವನಂತೂ ಅಲ್ಲವೇ ಅಲ್ಲ. ಆದರೆ ಇದನ್ನು ಬರೆದುದು ನಾನು ಮಾತ್ರ. ಸಾಹಿತ್ಯ ಲೋಕದ ತಂತ್ರಗಾರಿಕೆಯಾಗಲಿ, ಶಬ್ದಲೋಕದ ಅಬ್ಬರವಾಗಲಿ ಯಾವುದೂ ಇಲ್ಲದ ಒಂದು ಕಿರು ತೊರೆ ಸೃಷ್ಟಿಯ ಯಾವುದೋ ಮೂಲೆಯಿಂದ ತೊಡಗಿ ಯಾರಿಗೂ ಕಾಣಿಸಿಕೊಳ್ಳದ ಗುಪ್ತಗಾಮಿನಿಯಾಗಿ ಸಾಗಿ ಸಾಗಿ ಮತ್ತೆ ಮತ್ತೊಂದು ಹಂತದತ್ತ ನಡೆಯುವ ಈ ಕ್ರಿಯೆ ನಿರಂತರವೇ.
ಹಾಗೆಯೇ ಇಷ್ಟು ದೀರ್ಘ ವರ್ಷಗಳ ನಂತರ ಇದನ್ನು ಪ್ರಕಟಿಸುವ ಹುಕಿಯಾದರೂ ಯಾಕೆ ಹುಟ್ಟಿತು? ಇಷ್ಟು ವರ್ಷ ಕಾದವನಿಗೆ ಮತ್ತಷ್ಟು ವರ್ಷಗಳ ತನಕವೂ ಮುಂದುವರೆಸಿಕೊಂಡೇ ಹೋಗಬಹುದಾದ ಬರಹಕ್ಕೆ ಇಂಥ ಒಂದು ನಿಲುಗಡೆಯಾದರೂ ಯಾಕೆ ಬೇಕಾಯಿತು? ಯಾಕೆಂದರೆ ಬದುಕೇ ಚಲನಶೀಲವಾದದ್ದಷ್ಟೇ. ಹರಿಯುತ್ತಲೆ ಇದ್ದಾಗ ಮಾತ್ರ ಕಿರು ತೊರೆಗೆ ಅಸ್ತಿತ್ವವಷ್ಟೆ. ಹಾಗೆಯೇ ಈಗಲೂ ಇದರ ಪ್ರಸ್ತುತಿ ಯಾಕೆ ಅವಶ್ಯವಾಯ್ತು? ಯಾವ ಮಹಾ ಸಂದೇಶವನ್ನು ಕೊಡುವ ಕಥೆ ಇದೆ ಇದರಲ್ಲಿ ಅಥವಾ ಸಾಹಿತ್ಯಕವಾಗಿಯಾದರೂ ಯಾವ ಹೊಸ ಹೆಜ್ಜೆ ಕಾಣಿಸುವಂತಿದೆ ಇದರಲ್ಲಿ.
ಇಂಥ ಎಲ್ಲ ದ್ವಂದ್ವಗಳಿಗೂ ಉತ್ತರವಾಗಿ ಇದು ಪ್ರಕಟಗೊಳ್ಳುತ್ತಿದೆ. ಸಮಕಾಲೀನ ವಿಷಯಗಳನ್ನೊಳಗೊಂಡ, ನನ್ನ ಜೊತೆ ಒಡನಾಡಿದವರು ಬದುಕಿಯೇ ಇರುವ ಇಂಥ ವೇಳೆಯಲ್ಲಿ ಇದರ ಪ್ರಸ್ತುತಿ ಎಷ್ಟರ ಮಟ್ಟಿಗೆ ಸರಿಯಾದೀತು, ಅವರಿಗಾಗಲಿ ಅಥವಾ ಅವರನ್ನು ಅನಾವರಣಗೊಳಿಸುತ್ತಿರುವ ನನಗಾಗಲಿ ಮುಜುಗರ ಹುಟ್ಟಿಸಲಾರದೇ ಎಂಬ ಶಂಕೆ ಮೂಡಿದ್ದೂ ಹೌದು. ಆದರೆ ಅವರ ಜೊತೆಗಿನ ಅನುಸಂಧಾನ, ಒಡನಾಟದಲ್ಲಿ ಕಂಡಿರದ ಮುಜುಗರ ಈಗ ಯಾಕೆ ಕಾಣಬೇಕು? ಇತರರನ್ನು ಮೆಚ್ಚಿಸಲಿಕ್ಕಾಗಿಯಂತೂ ಇದನ್ನು ಬರೆದದ್ದಲ್ಲ. ಹಾಗಾಗಿ ಇದು ಇದ್ದ ಹಾಗೆ ಇರಲಿ ಎಂದುಕೊಂಡೆ.
ನಾನು ಬರೆಯುತ್ತಿರುವಾಗ ಅದನ್ನು ದೂರದಿಂದ ಸೂಕ್ಷ್ಮವಾಗಿ ಗಮನಿಸುತ್ತಿದ್ದ ನನ್ನ ಮಗ ಲಕ್ಷ್ಮೀಶ ಅದರತ್ತ ಕುತೂಹಲ ತಾಳಿದ. ಏನು ಎತ್ತ ವಿಚಾರಿಸಿದ. ನಾನು ಹಗುರಾಗುವ ಕ್ರಿಯೆ ಎಂದು ಸೂಚ್ಯವಾಗಿ ಹೇಳಿದೆ ಕೂಡ. ಅಷ್ಟಕ್ಕೇ ಸುಮ್ಮನಾಗದ ಆತ ಅದನ್ನು ಓದಲು ಯತ್ನಿಸಿದ. ಯತ್ನಿಸಿದ ಎನ್ನುವುದಕ್ಕಿಂತ ನನ್ನ ಶಾಸನ ಲಿಪಿಯನ್ನು ಓದಲಾಗದ್ದಕ್ಕೆ ನನ್ನಿಂದಲೇ ಕೆಲವು ಅಧ್ಯಾಯಗಳನ್ನು ಓದಿಸಿಕೊಂಡ. ಇದನ್ನು ಪ್ರಕಟಿಸುವ ಮಾತಾಡಿದ. ನನಗೆ ನಗೆ ಬಂದದ್ದು ಹೌದು. ಯಾವುದೇ ಸಾಹಿತ್ಯ ಶಕ್ತಿ ಇಲ್ಲದ ಅಥವಾ ಸಮಾಜಕ್ಕೆ ಯಾವುದೇ ಸಂದೇಶ ಕೊಡಲಾಗದ ಇದನ್ನು ಕೃತಿಯಾಗಿಸುವ ಹುಚ್ಚುತನವಾದರೂ ಯಾಕೆ ಎಂದು ಮೊಂಡುತನದ ಹಠ ನಾ ಮಾಡಿದ್ದೂ ಹೌದು. ನೀವು ಬರೆಯುವ ತನಕ ಮಾತ್ರ ಇದು ನಿಮ್ಮದಾಗಿತ್ತು. ಅಕ್ಷರ ರೂಪಕ್ಕೆ ಇಳಿದಾಯಿತೆಂದರೆ ಅದು ಇತರರ ಸ್ವತ್ತಾಯಿತೆಂಬ ತರ್ಕ ಮಾತಾಡಿದ. ಇಷ್ಟೇ ಅಲ್ಲ ಬಿಡುವಿಲ್ಲದ ವೈದ್ಯಕೀಯ ಜೀವನದ ಒತ್ತಡದಲ್ಲಿ ಕೂಡ ನನಗಿಂತ ಹೆಚ್ಚು ತಾನೇ ಆವೇಶ ಹೊಕ್ಕವನಂತೆ ಸದಾ ಸರ್ವದಾ ಚಿಂತಿಸಿ, ನಾನು ಬರೆದದ್ದನ್ನು ನನ್ನಿಂದಲೇ ಓದಿಸಿಕೊಂಡು ಕಂಪ್ಯೂಟರೀಕರಣ ಮಾಡಿ, ತಿದ್ದಿ, ತೀಡಿ ಕರಡು ಪ್ರತಿಯನ್ನು ಒಪ್ಪ ಓರಣ ಮಾಡಿ ನನಗಿಂತ ಹೆಚ್ಚು ಪ್ರಸವ ವೇದನೆ ಅನುಭವಿಸಿದವ ನನ್ನ ಮಗ. ಶಿವಪ್ರಸಾದ್ ಎಂಬ ಲಕ್ಷ್ಮೀಶನ ಆತ್ಮೀಯ ಸ್ನೇಹಿತರು, ಮಾಧ್ಯಮ ಲೋಕದಲ್ಲಿ ಕೆಲಸ ಮಾಡುವ ಅವರನ್ನು ನಾನು ಭೇಟಿಯಾಗಿದ್ದು ಕೆಲವೇ ಗಂಟೆಗಳ ಕಾಲವಾದರೂ ತನ್ನ ಸ್ನೇಹಿತನ ತಂದೆಯ ಬರಹ ಎಂಬ ಕಕ್ಕುಲತೆಯಿಂದ ಬೀದಿಯ ಬದುಕನ್ನು ಅಕ್ಷರಶಃ ತೀರದ ಕುತೂಹಲದಿಂದ ಓದಿದರು. ಸಾಹಿತ್ಯಕ ರೂಪ ಕೊಡಲು ಕೆಲವು ಮಾರ್ಪಾಡು ಸೂಚಿಸಿದರು. ನನ್ನ ಮಗನಿಗೆ ಹತ್ತಿರದ ಸಖ ಆತ. ಶಿವಪ್ರಸಾದರಿಗೆ ಕೃತಜ್ಞ ಎಂದಿಷ್ಟೇ ಹೇಳಿದರೆ ಕೃತಕವಾಗಬಹುದಾದರೂ ಬೇರೆ ಯಾವುದೇ ಅಲಂಕಾರೋಕ್ತಿಗಳನ್ನು ಬಳಸಲು ಇಷ್ಟವಾಗದು.
ಕಥಾ ಹಂದರದಲ್ಲಿ ಹಿನ್ನಲೆಗಾಗಿ ಕೆಲವು ಮಾಹಿತಿ ಒದಗಿಸಬೇಕು. ಲಕ್ಷ್ಮೀನಾರಾಯಣಪ್ಪ ನನ್ನ ತಂದೆ. ಅವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹುಲಿಮನೆ ಎಂಬ ಪುಟ್ಟ ಹಳ್ಳಿ. ಅಲ್ಲಿಂದ ಅವರು ಸಾಗರ ತಾಲೂಕಿನ ಕೌಲುಮನೆ ಎಂಬಲ್ಲಿಗೆ ಅಂದರೆ ನನ್ನ - ತಾಯಿಯ ತವರಿಗೆ ನನ್ನ ತಾಯಿಯನ್ನು ಮದುವೆಯಾಗಿ ಆ ಕಾಲದ ಪದ್ಧತಿಯಂತೆ ಮನೆಯಾಳ್ತನಕ್ಕೆ ಅಂದರೆ ಕೌಲುಮನೆ ಆಸ್ತಿವೃತ್ತಿಗಳಿಗೆ ಉತ್ತರಾಧಿಕಾರಿಯಾಗಲು ಬರುತ್ತಾರೆ. ಕೌಲುಮನೆಯಲ್ಲಿ ನನ್ನ ಅಜ್ಜ ಅಂದರೆ ತಾಯಿಯ ತಂದೆ ಅವರಿಗೆ ಗಂಡು ಸಂತಾನವಿಲ್ಲ. ಐದು ಜನ ಹೆಣ್ಣು ಮಕ್ಕಳು. ಕ್ರಮವಾಗಿ ಹಿರಿಯವಳಾಗಿ ತಿಪ್ಪಮ್ಮ ಅವಳನ್ನು ಕೌಲುಮನೆಗೆ ಸಮೀಪ ಗದ್ದೆ ಮನೆ ನಾಗೇಂದ್ರ ಭಟ್ಟನಿಗೆ ವಿವಾಹ ಮಾಡಿ ಕೊಟ್ಟಿತ್ತು. ಆಕೆಗೆ ಸಂತಾನವಿರಲಿಲ್ಲ. ಅಕಾಲದಲ್ಲಿ ಗಂಡನನ್ನು ಕಳೆದುಕೊಂಡು ಪುನಃ ತವರಿಗೆ ಕೌಲುಮನೆಗೇ ಬಂದಿದ್ದಳು. ಎರಡನೆಯವರು ಸಾವಿತ್ರಮ್ಮ. ಅವರನ್ನು ಹಂಸಗಾರು ಕೃಷ್ಣಯ್ಯನಿಗೆ ಕೊಟ್ಟ ಕಥೆ ಈ ಕೃತಿಯಲ್ಲಿದೆ. ಮೂರನೆಯ ಮಗಳು ಲಕ್ಷ್ಮಿಯನ್ನು ಹಿರೇಮನೆ ಗಣಪ ಭಟ್ರಿಗೆ ಮದುವೆ ಮಾಡಿ ಕೊಟ್ಟಿತ್ತು. ನಾಲ್ಕನೆಯ ಶೇಷಮ್ಮ ಕೌಲುಕೋಡು ಶಿವಪ್ಪನಿಗೆ ಮದುವೆಯಾದ ಕಥೆ. ಐದನೆಯವರೇ ನನ್ನ ಅಮ್ಮ ಪಾರ್ವತಿ. ನಂತರದ ದಿನಗಳಲ್ಲಿ ಹಲವು ಜಂಜಡಗಳಿಂದಾಗಿ ನಮ್ಮ ತಂದೆ ಕೊಳಚಗಾರಿಗೆ ಬಂದ ಕಥೆ, ಆ ಸಂದರ್ಭದಲ್ಲಿ ಕೌಲುಮನೆಯಲ್ಲಿ ಹಿರಿಯವಳಾದ ತಿಪ್ಪಮ್ಮ ಅಧಿಷ್ಠಾತ್ರಿಯಾದ ಕಥೆ ಈ ಹೊತ್ತಗೆಯಲ್ಲಿ ವರ್ಣಿತವಾಗಿದೆ.
ಮುಂದೆ ಇದು ಯಾರ ಸೊತ್ತು, ಯಾರಿಗೆ, ಯಾಕೆ, ಯಾವಾಗ ಬೇಕು ಎಂಬುದನ್ನೆಲ್ಲ ಓದುಗರೇ ನಿರ್ಣಯಿಸಬೇಕು. ಯಾವ ಹೊಗಳಿಕೆಯೂ ಅಗತ್ಯವಿಲ್ಲದ ಅಥವಾ ಯಾವ ತೆಗಳಿಕೆಗೂ ಬದಲಾಗದ ಈ ನುಡಿಚಿತ್ರ ಇದು ಬರೆಯುವ ತನಕ ಮಾತ್ರ ನನ್ನದಾಗಿದ್ದು ಅಕ್ಷರ ಪ್ರಪಂಚಕ್ಕೆ ತೆರೆದುಕೊಂಡ ಮೇಲೆ ಓದುಗರದ್ದು ಎಂಬ ಲಕ್ಷ್ಮೀಶನ ಅನಿಸಿಕೆ ಈಗ ನನ್ನದೂ ಹೌದು. ಒಮ್ಮೆಯಾದರೂ ಓದಿ. ಎಲ್ಲರಿಗೂ ವಂದನೆಗಳು.
“ಇದು ಬಹಳ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಬರೆದ ಪುಸ್ತಕವಾದರೂ, ಒಂದೇ ಹಿಡಿತಕ್ಕೆ ಸಿಗುವ, ಸಿಕ್ಕ ಕ್ಷಣವೇ ಜಾ...
“ಸೋಲುಗಳು ನಮ್ಮೊಳಗಿನ ಶಕ್ತಿಯನ್ನು ಪ್ರದರ್ಶಿಸಲು ಬರುವ ಒಂದು ಸುವರ್ಣಾವಕಾಶ ಮತ್ತು ಯಾವುದೇ ಕ್ಷೇತ್ರವಿರಲಿ ಯಶಸ್...
"ಇಲ್ಲಿಯ ಕಥಾನಾಯಕನಿಗೆ ಮತ್ತು ನಾಯಕಿಗೆ ಯಾವುದೇ ಹೆಸರಿಲ್ಲ. ನಾನು ಮತ್ತು ಅವಳು ಈ ಎರಡು ವ್ಯಕ್ತಿಗಳ ಸುತ್ತಲೇ ಸ್ಟ...
©2025 Book Brahma Private Limited.