“ಇದು ಬಹಳ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಬರೆದ ಪುಸ್ತಕವಾದರೂ, ಒಂದೇ ಹಿಡಿತಕ್ಕೆ ಸಿಗುವ, ಸಿಕ್ಕ ಕ್ಷಣವೇ ಜಾರಿಕೊಳ್ಳುವ ಗುಣವಿರುವ ಪುಸ್ತಕ. ಪ್ರಾಪ್ತಿ ಇದ್ದಷ್ಟೇ ದಕ್ಕುವುದು,” ಎನ್ನುತ್ತಾರೆ ಮೋಹನ್ ಕುಮಾರ್ ಡಿ ಎನ್. ಅವರು ಜೋಗಿ(ಗಿರೀಶ್ ರಾವ್ ಹತ್ವಾರ್) ಅವರ “ಇಳಂಗೋವನ್” ಕೃತಿ ಕುರಿತು ಬರೆದ ವಿಮರ್ಶೆ.
ಈ ಪುಸ್ತಕದ ವಿಶೇಷತೆ ಎಂದರೆ ನಮ್ಮೊಳಗೆ ಉಂಟು ಮಾಡುವ ಜಿಜ್ಞಾಸೆ. ಪುಸ್ತಕದ ಪ್ರತಿ ಅಧ್ಯಾಯ ಕೂಡ ಹೊಸ ಹೊಳಹು, ಚಿಂತನೆಗಳಿಂದ ಕೂಡಿದೆ. ಯಾರಿಗೆ ಎಷ್ಟರ ಮಟ್ಟಿಗಿನ ದರ್ಶನ ಲಭಿಸುವುದೋ ಅದು ಅವರವರೇ ನಿರ್ಧರಿಸಬೇಕು. ಇಲ್ಲಿ ನಡೆಸಿರುವ ವಿಚಾರಧಾರೆಗಳ ಮಂಥನ ಹಲವು ರೀತಿಯವು. ಹುಟ್ಟು, ಸಾವು, ಭಯ, ಭಕ್ತಿ, ಸಾಧನೆ, ಅಧ್ಯಾತ್ಮ, ಪರಮಾತ್ಮ, ಆತ್ಮ, ಸತ್ಯ, ಅಸತ್ಯ, ಭ್ರಮೆ, ವಾಸ್ತವ, ಅವಾಸ್ತವ, ಪವಾಡ, ನಾಸ್ತಿಕತೆ, ಧಾರ್ಮಿಕತೆ, ಅಧಾರ್ಮಿಕತೆ, ಸಂಪ್ರದಾಯ, ನಂಬಿಕೆ, ಅಪನಂಬಿಕೆ, ಮೂಢನಂಬಿಕೆ, ತಿಳಿವಳಿಕೆ, ಸಂಗತ, ಅಸಂಗತ, ಆಚಾರ, ತಾತ್ವಿಕತೆ, ತರ್ಕಶಾಸ್ತ್ರ, ಪುರಾಣ, ವೇದ, ಉಪನಿಷತ್ತು, ಭಗವದ್ಗೀತೆ.. ಇದರ ಹರಹು ವಿಶಾಲವಾದುದು.
ಬದುಕಿನ ಹಾದಿಯಲ್ಲಿ ಎಲ್ಲೋ ಒಮ್ಮೆ ಎಡವುತ್ತೇವೆ. ಯಾವುದೋ ಗೊಂದಲಕ್ಕೆ ಒಳಗಾಗುತ್ತೇವೆ. ಮೂಲಭೂತ ಅಗತ್ಯಗಳ ಹೊರತಾಗಿ ಅಷ್ಟೇ ಮುಖ್ಯವಾದ ಕೆಲವು ಸಂಗತಿಗಳು ನಮ್ಮನ್ನು ಕಾಡುತ್ತವೆ. ಕೈ ಹಿಡಿದು ಜಗ್ಗುತ್ತವೆ. ನಾನು ಯಾರು? ಎಲ್ಲಿಂದ ಬಂದೆ ಹೋಗಬೇಕಿರುವುದೆಲ್ಲಿಗೆ? ತಲುಪುವ ಹಾದಿ ಯಾವುದು? ಬದುಕಿನ ಗಮ್ಯವೇನು? ಸಾಧನೆ ಎಂದರೆ ಏನು? ಸಾಧಿಸಬೇಕಿರುವುದೇನು? ಆ ಹಾದಿಯಲ್ಲಿ ಗುರು ಸಿಗುವನೇ? ಸಿಕ್ಕರೂ ಗುರುವನ್ನು ಗುರುತಿಸುವುದು ಹೇಗೆ? ಅಸಲಿಗೆ ಗುರು ಎನ್ನುವನೊಬ್ಬನು ಇರುವನೇ? ಸಾವಿನ ಭಯ, ಪುನರ್ಜನ್ಮದ ಭಯ, ಅನಾರೋಗ್ಯದ ಭಯ, ನೋವಿನ ಭಯ, ಸಂಬಂಧಗಳು ನಿರರ್ಥಕಗೊಳ್ಳುವ ಭಯ…ಮುಂತಾಗಿ ನಮ್ಮೆಲ್ಲರನ್ನೂ ಕಾಡುತ್ತಲೇ ಇರುತ್ತವೆ. ಅದಕ್ಕೆ ಉತ್ತರ ಹುಡುಕುವ ಕ್ರಿಯೆ ಮತ್ತು ಹಾದಿ ಪ್ರತಿಯೊಬ್ಬರದೂ ಭಿನ್ನ ಕೂಡ ಹೌದು. ಹೀಗೆ ತನ್ನ ಬದುಕಿನಲ್ಲಿ ಎದುರಾದ ಉತ್ತರವೇ ಕಾಣದ ಅನೇಕ ಪ್ರಶ್ನೆಗಳು, ಹುಟ್ಟು ಸಾವು, ಬದುಕಿನ ಕುರಿತಾದ ಜಿಜ್ಞಾಸೆ ಕುರಿತ ತನ್ನದೇ ಹಾದಿಯ ಪಯಣದ ಬಗ್ಗೆ ಲೇಖಕ ಜೋಗಿ ಇಲ್ಲಿ ಸವಿಸ್ತಾರವಾಗಿ ಹೇಳಿದ್ದಾರೆ.
ಇದೊಂದು ರೀತಿಯ ಅನುಭವ ಕಥನ ಎಂದರೆ ತಪ್ಪಿಲ್ಲ. ಇಷ್ಟೇ, ಇದು ಲೌಕಿಕವನ್ನು ಮೀರಿದ ಅಲೌಕಿಕ ಅನುಭವ ಕಥನ. ನಂಬುವವರು ನಂಬಬಹುದು, ಬಿಟ್ಟವರಿಗೆ ನಷ್ಟವಿಲ್ಲ. ಯೂ ಜಿ ಕೃಷ್ಣಮೂರ್ತಿ, ಜೆ ಕೃಷ್ಣಮೂರ್ತಿ, ಓಶೋ ರಜನೀಶ್, ರಮಣ ಮಹರ್ಷಿಗಳಂತಹ ಭಾರತೀಯ ಆಧ್ಯಾತ್ಮಿಕ ಚಿಂತಕರಿಂದ ಹಿಡಿದು ಪಾಶ್ಚಾತ್ಯ ಚಿಂತಕರಾದಿಯಾಗಿ, ಅಷ್ಟೇ ಏಕೆ, ತನ್ನದೇ ಹಾದಿಯಲ್ಲಿ ಬದುಕಿನ ನಿಗೂಢತೆಯನ್ನು ಅರಿಯುವ ಪ್ರಯತ್ನದಲ್ಲಿದ್ದ ಸ್ವತಃ ಅಣ್ಣನನ್ನು ಕೂಡ ಬಿಡದೇ, ಸತತವಾಗಿ ಅನೇಕ ವರ್ಷಗಳ ಕಾಲ ಅವರನ್ನೆಲ್ಲ ಜೋಗಿ ಅನುನಯಿಸಿದ್ದಾರೆ. ಅನುಸರಿಸಿದ್ದಾರೆ. ಆಶ್ರಯಿಸಿದ್ದಾರೆ. ಬೆನ್ನು ಹತ್ತಿದ್ದಾರೆ. ಅಭ್ಯಸಿಸಿದ್ದಾರೆ. ತನ್ನನ್ನು ಕಾಡುವ ಅನೇಕ ಗೊಂದಲಗಳಿಗೆ, ಬದುಕಿನ ನಿಗೂಢತೆ, ವಿಸ್ಮಯ, ಕೌತುಕ, ದೇವರು-ದಿಂಡರುಗಳ ಬಗ್ಗೆ ಅವರಲ್ಲಿ ಪ್ರಶ್ನೆಗಳನ್ನು ಎಬ್ಬಿಸುವ ಮೂಲಕ ಉತ್ತರ ಹುಡುಕುವ ಪ್ರಯತ್ನ ನಡೆಸಿದ್ದಾರೆ. ಇವರೆಲ್ಲರಿಗಿಂತ ಹೆಚ್ಚಾಗಿ ‘ಇಳಂಗೋವನ್’ ಎನ್ನುವ ಅನಾಮಿಕ, ಅಜ್ಞಾತ ನಿಲ್ದಾಣದಲ್ಲಿ ಅವರು ನಡೆಸಿದ ಚಿಂತನ-ಮಂಥನದ ಮೂಲಕ ತನ್ನನ್ನು ಕಾಡುತ್ತಿದ್ದ ಅನುಮಾನಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿ, ಅವರೇ ಹೇಳಿರುವಂತೆ, ಭಾಗಶಃ ಯಶಸ್ವಿಯಾಗಿದ್ದಾರೆ ಅಥವಾ ಹಾಗಂತ ಓದುಗರು, ನಾವು ಭಾವಿಸಬಹುದು.
ಈ ‘ಇಳಂಗೋವನ್’ ಯಾರು? ಎಂದರೆ, ‘ಇಳಂಗೋವನ್ ನನ್ನ ಬಹುಕಾಲದ ಒಡನಾಡಿ. ನನ್ನ ಅಧ್ಯಾತ್ಮದ ಹುಡುಕಾಟದಲ್ಲಿ ನನಗೆ ಒದಗಿಬಂದ ಗುರು, ಗೆಳೆಯ, ಮಾರ್ಗದರ್ಶಿ. ಅವನು ಸಿಗದೇ ಹೋಗಿದ್ದರೆ ಅಲೌಕಿಕದ ಸೆಳವಿಗೆ ಸಿಕ್ಕಿ ನಾನು ಕೊಚ್ಚಿಹೋಗುತ್ತಿದ್ದೆ ಅಂತಲೂ ಅನೇಕ ಸಲ ಅನ್ನಿಸುತ್ತದೆ. ಭಾವುಕತೆಯ ಸೆಳವಿನಷ್ಟೇ ಅಧ್ಯಾತ್ಮದ ಸೆಳೆತ ಕೂಡ ಅಪಾಯಕಾರಿ. ಆಗಾಗ ಒಬ್ಬ ಕಟು ವಿಮರ್ಶಕ ನಮ್ಮನ್ನು ಬದುಕಿನ ದಂಡೆಗೆ ಎಳೆದು ಹಾಕಿ, ಕರುಳು ಸೇರಿದ ಹೊಳೆನೀರನ್ನು ಹೊಟ್ಟೆಯನ್ನು ಒತ್ತಿ ಹೊರಗೆ ಹಾಕಬೇಕಾಗುತ್ತದೆ. ಅಂಥ ಕೆಲಸವನ್ನು ಇಳಂಗೋವನ್ ಮಾಡುತ್ತಲೇ ಬಂದಿದ್ದಾನೆ’ ಎನ್ನುತ್ತಾರೆ ಲೇಖಕ ಜೋಗಿ.
ಪುಸ್ತಕ ಓದುವಾಗ ಅನೇಕ ಸಾಲುಗಳು ಕಾಡುತ್ತವೆ. ಪುಳಕವನ್ನುಂಟು ಮಾಡುತ್ತವೆ. ಆದರೆ ಅದರ ನಿರರ್ಥಕತೆಯನ್ನು ಇಳಂಗೋವನ್ ಸಾರಸಗಟಾಗಿ ತಿರಸ್ಕರಿಸುತ್ತಾನೆ.
'ನಿನಗೆ ಬೇಕಾಗಿರುವುದು ಮಾತಿನ ರೋಮಾಂಚನ. ರಮಣರ ಮಾತಿನಿಂದ ಯೂಜಿಗೆ ತನ್ನ ದಾರಿ ಯಾವುದು ಅನ್ನುವುದು ಅರಿವಾಗಿರಬಹುದು. ಆದರೆ ನಿನಗಾಗಲೀ ನನಗಾಗಲೀ ಆ ಮಾತಿನಿಂದ ಯಾವ ಪ್ರಯೋಜನವೂ ಇಲ್ಲ. ಅದೊಂದು ಆಕರ್ಷಕ ಮಾತು ಮಾತ್ರ.ಅಲೌಕಿಕತೆಯ ಹುಡುಕಾಟದಲ್ಲಿ ಎಷ್ಟೊಂದು ಮಂದಿ ಇಂಥ ಆಕರ್ಷಕ ಮಾತುಗಳಿಂದಲೇ ತೃಪ್ತರಾಗಿರಬಹುದು? ಅದರಿಂದ ನನಗೇನು ಪ್ರಯೋಜನ? ಝೆನ್ ಗುರುಗಳು ಆಡುವ ಸಂಭಾಷಣೆಗಳನ್ನು ಎಷ್ಟೊಂದು ಕಾಲದಿಂದ ಕೇಳುತ್ತಾ ಬಂದಿಲ್ಲ. ಅದನ್ನು ಎಷ್ಟೊಂದು ಮಂದಿಗೆ ನಾನೇ ಹೇಳಿಲ್ಲ. ಆ ಮಾತಿನ ರೋಮಾಂಚನ ಬಿಟ್ಟರೆ ಅಂತರಂಗದಲ್ಲಿ ಏನೇನೂ ಬದಲಾಗಿಲ್ಲ. ಅವಾಕ್ಕಾಗುವ ವಾಕ್ಕಿನಲ್ಲೇ ದೋಷವಿದೆ.'
ಹೀಗಾಗಿ ಪುಸ್ತಕದಲ್ಲಿ ಅಡಿಗೆರೆಯನ್ನೆಳೆಯುವ, ನೋಟ್ ಮಾಡಿಟ್ಟುಕೊಳ್ಳುವ ತೀವ್ರತಮವಾದ ಆಸೆಯನ್ನು ಅಕ್ಷರಶಃ ಬದಿಗೊತ್ತಿದ್ದೇನೆ.
ಇದು ಬಹಳ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಬರೆದ ಪುಸ್ತಕವಾದರೂ, ಒಂದೇ ಹಿಡಿತಕ್ಕೆ ಸಿಗುವ, ಸಿಕ್ಕ ಕ್ಷಣವೇ ಜಾರಿಕೊಳ್ಳುವ ಗುಣವಿರುವ ಪುಸ್ತಕ. ಪ್ರಾಪ್ತಿ ಇದ್ದಷ್ಟೇ ದಕ್ಕುವುದು. ಎಷ್ಟು ಪ್ರಾಪ್ತಿ?
ಮತ್ತದೇ ಉತ್ತರ ಕಾಣದ ಪ್ರಶ್ನೆಗಳು, ಗೊಂದಲಗಳು..
"ರಾಜಮಾತೆ ಕೆಂಪನಂಜಮ್ಮಣ್ಣಿ - ಮಾದರಿ ಮೈಸೂರಿನ ತಾಯಿಬೇರು - ಈ ಪುಸ್ತಕ ಕೊಂಡು ವಾರವೇ ಆದರೂ ರೇಷ್ಮೆ ಬಟ್ಟೆಯ ಓದು ...
"ನಾನೂರು ವರ್ಷಗಳಷ್ಟು ಹಳೆಯ ಥಿಯೇಟರಲ್ಲಿ ನಾಟಕ ನೋಡಿದಾಗ ನೀನಾಸಂ ನೆನಪು, ವಿಸೀಯವರ ಇಂಗ್ಲೆಂಡ್ ಪಯಣ, ವರ್ಡ್ಸ್ ವರ...
"ಕಾವ್ಯದ ಹಿನ್ನೆಲೆ, ತತ್ವ, ಸೌಂದರ್ಯಾನುಭವವದ ಜೊತೆಗೆ ಭಾರತೀಯ ಜೀವನ ದರ್ಶನದ ಅನೇಕ ಹೊಸ ಹೊಳಹುಗಳನ್ನು ತಮ್ಮ ಚಮತ್...
©2025 Book Brahma Private Limited.