ಇದ್ದೂ ಇಲ್ಲದ್ದೂಃ ಪರಂಪರೆಯ ಸಾತತ್ಯ ಹಾಗೂ ದೇವರ ಬಿಕ್ಕಟ್ಟಿನ ಕಥನ

Date: 04-12-2023

Location: ಬೆಂಗಳೂರು


''ಕಾಂತಾವರ ಎಂಬ ದಿವ್ಯ ಸನ್ನಿಧಿಯಲ್ಲಿ ಕುಳಿತುಕೊಂಡು ಲೋಕವನ್ನು ನೋಡುವ ಏಕಲವ್ಯನ ಧ‍್ಯಾನ ಅವರು ಜೀವಂತವಾಗಿ ಉಳಿಸಿಕೊಂಡು ಬಂದಿದ್ದಾರೆ. ಆದ್ದರಿಂದ ಪರಂಪರೆಯ ಸ್ಮೃತಿಗಳಿಗೆ ಮರಳಿ ಆಧುನಿಕತೆಯ ಬಿಕ್ಕಟ್ಟುಗಳನ್ನು ನಿಕಷಕ್ಕೊಡ್ಡುವ ಚಿಂತನೆಯನ್ನು ತಮ್ಮ ಕಥನದ ಮೂಲಕ ಅನ್ವೇಷಿಸುತ್ತಾರೆ. ಕನ್ನಡದಲ್ಲಿ ಅವರಿಗಿರುವಷ್ಟು ಸ್ಮೃತಿಪ್ರಜ್ಞೆ ಸದ್ಯ ಬೇರಾವ ಲೇಖಕರಿಗೆ ಇಲ್ಲ ಅನಿಸುತ್ತದೆ,'' ಎನ್ನುತ್ತಾರೆ ರಾಜಶೇಖರ ಹಳೆಮನೆ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ಡಾ.ನಾ. ಮೊಗಸಾಲೆ ಅವರ ‘ಇದ್ದೂ ಇಲ್ಲದ್ದು’ ಕೃತಿಯ ಕುರಿತು ವಿವರಿಸಿದ್ದಾರೆ.

ಡಾ. ನಾ. ಮೊಗಸಾಲೆಯವರು ಪರಂಪರೆಯೊಳಗಿನ ಗಾಢ ನಂಬಿಕೆಗಳು ವಾಸ್ತವದಲ್ಲಿ ಎದುರಿಸುವ ದ್ವಂದ್ವ ಮತ್ತು ಬಿಕ್ಕಟ್ಟುಗಳನ್ನು ನಿರಂತರ ತಮ್ಮ ಕಥನಗಳ ಮೂಲಕ ಶೋಧಿಸುತ್ತಾ ಬರುತ್ತಿದ್ದಾರೆ. ಒಂದು ಸಮುದಾಯವನ್ನು ಕೇಂದ್ರವಾಗಿಟ್ಟುಕೊಂಡು, ಅದರ ಸಾಂಸ್ಕೃತಿಕ ವಿವರಗಳನ್ನು ದಾಖಲಿಸುತ್ತಾ, ನಿರಾಡಂಬರ ಶೈಲಿಯ ನಿರೂಪಣೆಯಲ್ಲಿ ಬದುಕಿನ ವಿನ್ಯಾಸಗಳನ್ನು ಸಹಜವಾಗಿ ಕಟ್ಟಿಕೊಡುತ್ತಾರೆ. ಕನ್ನಡ ಕಥನ ಪರಂಪರೆಯಲ್ಲಿ ಇದೊಂದು ವಿನೂತನ ವಿಧಾನ. ಈ ಕ್ರಮವನ್ನು ಅವರೆ ರೂಢಿಸಿಕೊಂಡ ಸೃಜನಶೀಲತೆ ಮಾದರಿ. ಕಾಂತಾವರ ಎಂಬ ದಿವ್ಯ ಸನ್ನಿಧಿಯಲ್ಲಿ ಕುಳಿತುಕೊಂಡು ಲೋಕವನ್ನು ನೋಡುವ ಏಕಲವ್ಯನ ಧ‍್ಯಾನ ಅವರು ಜೀವಂತವಾಗಿ ಉಳಿಸಿಕೊಂಡು ಬಂದಿದ್ದಾರೆ. ಆದ್ದರಿಂದ ಪರಂಪರೆಯ ಸ್ಮೃತಿಗಳಿಗೆ ಮರಳಿ ಆಧುನಿಕತೆಯ ಬಿಕ್ಕಟ್ಟುಗಳನ್ನು ನಿಕಷಕ್ಕೊಡ್ಡುವ ಚಿಂತನೆಯನ್ನು ತಮ್ಮ ಕಥನದ ಮೂಲಕ ಅನ್ವೇಷಿಸುತ್ತಾರೆ. ಕನ್ನಡದಲ್ಲಿ ಅವರಿಗಿರುವಷ್ಟು ಸ್ಮೃತಿಪ್ರಜ್ಞೆ ಸದ್ಯ ಬೇರಾವ ಲೇಖಕರಿಗೆ ಇಲ್ಲ ಅನಿಸುತ್ತದೆ. ಈ ಹಿನ್ನಲೆಯಲ್ಲಿ ಅವರ ಇದ್ದೂ ಇಲ್ಲದ್ದೂ ಕಾದಂಬರಿಯನ್ನು ನೋಡಬೇಕು.

`ದೇವರು’ ಅನ್ನುವ ಅಮೂರ್ತ ಪರಿಕಲ್ಪನೆಯನ್ನು ಕಾದಂಬರಿ ಭೌತಿಕ ನೆಲೆಯಲ್ಲಿ ನಿಂತು ಚಿಂತಿಸುತ್ತದೆ. ಒಂದು ಕುಟುಂಬ ಪರಂಪರಾನುಗತವಾಗಿ ಬೆಳೆಸಿಕೊಂಡು ಬಂದ ದೇವರ ಶ್ರದ್ದೆಯನ್ನು ಜಿಜ್ಞಾಸೆಗೆ ಒಡ್ಡುವುದರ ಮೂಲಕ, ಕೃಷಿ ಸಂಬಂಧಿ ಆಯಾಮಗಳ ಸಂಕೀರ್ಣ ಸ್ಥಿತಿಯನ್ನು ಅನಾರಣಗೊಳಿಸುತ್ತಾರೆ. ಜಾತಿ ಮತ್ತು ಧರ್ಮಗಳು ಸೃಷ್ಟಿಸುವ ಬಿಕ್ಕಟ್ಟುಗಳು ಪರಂಪರೆಯ ಸಾತತ್ಯವನ್ನು ಪುನರಾವಲೋಕನಕ್ಕೆ ಒಡ್ಡುತ್ತವೆ. ನಂಬಿಕೆಯ ಒಡಲನ್ನು ಛಿದ್ರಗೊಳಿಸುವುದು ಜಾತಿ ಮತ್ತು ಧರ್ಮಗಳು. ಈ ಕಾದಂಬರಿಯಲ್ಲಿ `ದೇವರು’ ಅನ್ನುವ ಬಿಕ್ಕಟ್ಟು ಆರಂಭವಾಗುವುದು ಅಂತರ್ಜಾತೀಯ ವಿವಾಹದ ಮೂಲಕ. ರಮಾನಂದ ದೇವರಮನೆ ಪರಂಪರೆಯ ಅಸ್ಮಿತೆಗೆ ಭಂಗ ತರುತ್ತಾನೆ. ಆತ ಮೇರಿಯನ್ನು ಮದುವೆಯಾದದ್ದು ನೂರಾರು ವರ್ಷಗಳ ನಂಬಿಕೆಗೆ ಆತಂಕವನ್ನು ಒಡ್ಡುತ್ತದೆ. ಈ ಆತಂಕ ಕುಟುಂಬದ್ದು ಮಾತ್ರವಾಗಿರದೆ ಸಮುದಾಯ ಮತ್ತು ಧಾರ್ಮಿಕ ನಂಬಿಕೆಯದ್ದು ಆಗಿದೆ. ಈ ಆತಂಕದಿಂದ ಬಿಡುಗಡೆಯಾಗಲು ನಗರಗಳೇ ಆಶ್ರಯತಾಣಗಳಾಗಿವೆ. ಕಾದಂಬರಿ ನಗರ ಜೀವನವನ್ನು ಎಷ್ಟೇ ನಿಕಷಕ್ಕೊಡ್ಡಿದರೂ ಅದನ್ನೂ ನಿರಾಕರಿಸಲೂ ಆಗುವುದಿಲ್ಲ. ಅದರ ಪರಿಣಾಮಗಳ ಬಗ್ಗೆ ಅವಲೋಕನ ಮಾಡಬಹುದು. ಮರಳಿ ನಂಬಿಕೆಗೆ ಹೋಗಲಾಗುವುದಿಲ್ಲ ಎಂಬ ಸತ್ಯವನ್ನು ಕಾದಂಬರಿ ಶೋಧಿಸುತ್ತದೆ. ರಮಾನಂದ ದೇವರಮನೆ ಕುಟುಂಬವನ್ನು ತೊರೆದ ಮೇಲೆ ತಂದೆ ಹರಿದಾಸಭಟ್ಟರು ಮತ್ತೆ ಮಗನನ್ನು ಮನೆಗೆ ಸೇರಿಸುವದಿಲ್ಲ. ಆತನೊಂದಿಗೆ ಕುಟುಂಬದ ಯಾವ ಕಾರ್ಯವನ್ನು ಮಾಡಿಸಿಕೊಳ್ಳುವದಿಲ್ಲ. ಮಗನ ಮೇಲೆ ಮಹಾ ಹಠವನ್ನು ಸಾಧಿಸುತ್ತಾರೆ. ಅದು ಮನೆಯಲ್ಲಿ ದೇವರನ್ನು ಯಾರು ಪೂಜೆ ಮಾಡಬೇಕು, ಆಚರಣೆಯನ್ನು ಮುಂದುವರಿಸಬೇಕು ಎಂಬುದಕ್ಕಿಂತ ಮಗ ಅಂತರ್ಧಮೀಯ ಮದುವೆಯಾದುದ್ದೇ ದೊಡ್ಡ ಸಮಸ್ಯೆಯಾಗುತ್ತದೆ. ಒಂದು ವ್ಯವಸ್ಥೆಯನ್ನು ಗಟ್ಟಿಯಾಗಿ ಸ್ಥಾಪಿಸಿಕೊಂಡು ಬಂದಿರುವುದು ಕೇವಲ ವೈಯಕ್ತಿಕ ಕುಟುಂಬ ಶ್ರದ್ದೆ ಮಾತ್ರವಲ್ಲ. ಹರಿದಾಸ ಭಟ್ಟರ ಮನೆಯ ದೇವರ ಪೂಜೆಗೂ ಇವರನ್ನೂ ನಿಯಂತ್ರಿಸುವ ಉಡುಪಿ ಮಠಕ್ಕೂ ಸಂಬಂಧವಿದೆ. ಮಠ ಸೃಷ್ಟಿಸಿದ ಬಲೆಯಲ್ಲಿ ಸಿಕ್ಕಿಕೊಂಡಿರುವ ಇಂತಹ ಕುಟುಂಬಗಳು ಎದುರಿಸಬೇಕಾದ ಸವಾಲು ಸ್ಥಾಪಿತ ಮಠೀಯ ಕಂದಾಚಾರವನ್ನು. ಭೌತಿಕ ದೇವರ ನಂಬಿಕೆ ಇಂತಹ ಬಿಕ್ಕಟ್ಟನ್ನು ಎದಿರಿಸುತ್ತದೆ. ನಿಜವಾದ ದೇವರ ಕಲ್ಪನೆ ಭೌತಿಕತೆಯನ್ನು ಮೀರಿದ್ದು ಎಂಬ ವಾಸ್ತವವನ್ನು ಕಾದಂಬರಿ ದರ್ಶನ ಮಾಡುತ್ತದೆ. ಆದ್ದರಿಂದ ಆ ನಂಬಿಕೆಯನ್ನು ರಮಾನಂದ ದೇವರಮನೆ ಒಡೆಯುವದು ಆ ದೇವರ ಕಲ್ಪನೆಯಿಂದ ದೂರ ಬರುವುದು. ಇದರಿಂದಾಗಿ ಸಾಮೂಹಿಕ ಸಾಮರಸ್ಯದ ಪ್ರಕೃತಿ ಪ್ರೀತಿಯಲ್ಲಿ ದೇವರನ್ನು ಕಾಣುವ ಕಾಣ್ಕೆಯು ಕಾದಂಬರಿಯಲ್ಲಿ ಅಂತರ್ ವಾಹಿನಿಯಾಗಿ ಹರಿಯುತ್ತದೆ.

ವಿಚಿತ್ರವೆಂದರೆ ದೇವರ ಸಾನಿದ್ಯದಲ್ಲಿಯೇ ಬದುಕಿನ ದುರಂತ ಮತ್ತು ಧಾವಂತಗಳು ನಡೆಯುವದು. ದೇವೇಚ್ಚೆಯನ್ನು ಮೀರಿದ ಮನುಷ್ಯ ಸಂಕೀರ್ಣ ದ್ವಂದ್ವ ಮತ್ತು ಸಾಧ್ಯತೆಗಳು ಘಟಿಸುವುದು. ದೊಡ್ಡ ರಮಾನಂದರು ಸುಂದರಿಯೊಂದಿಗೆ ಸಂಬಂಧವನ್ನು ಈ ಹಿನ್ನಲೆಯಲ್ಲಿ ನೋಡಬೇಕು. ದೇವರ ಪೂಜೆ ಮಾಡುತ್ತಿದ್ದ ಕುಪ್ಪಣ್ಣಚಾರ್ಯ ಮಗ ಆತ್ಮಹತ್ಯೆ ಮಾಡಿಕೊಳ್ಳುವುದು. ಆತ್ಮಹತ್ಯೆಯನ್ನು ಮನೆಯಲ್ಲಿರುವ ದೇವರು ಯಾಕೆ ತಡೆಯಲಿಲ್ಲ ಎಂಬ ಪ್ರಶ್ನೆ ಕಾದಂಬರಿಯಲ್ಲಿ ಹುಟ್ಟುತ್ತದೆ. ಆದ್ದರಿಂದ ಕುಪ್ಪಣ್ಣಚಾರ್ಯ ದಂಪತಿಗಳು ದೇವತಾ ಕಾರ್ಯ ಮುಂದುವರಿಸಲು ನಿರಾಕರಿಸುತ್ತಾರೆ. ಈ ನಿರಾಕರಣೆ ಮೇಲ್ನೋಟಕ್ಕೆ ಸರಳ ಸಹಜ ಏನಿಸಿದರೂ ಪರಂಪರಾಗತ ದೇವರ ಆರಾಧನೆ ಏನನ್ನು ನೀಡಿದೆ ಎಂಬ ಪ್ರಶ್ನೆಯೂ ಕಾಡುತ್ತದೆ. ಆಕಸ್ಮಿಕ ಬದುಕಿನ ಕ್ರಮಗಳು ದೇವರನ್ನು ಇನ್ನಷ್ಟೂ ಹತ್ತಿರಗೊಳ್ಳುವಂತೆ, ಅಮೂರ್ತತೆಯ ವಿನ್ಯಾಸವನ್ನು ಆರಾಧನೆಯ ನೆಲೆಯಲ್ಲಿ ಅರಿತುಕೊಳ‍್ಳುವಂತೆ ಮಾಡುತ್ತದೆ.

ದೇವರಮನೆಯಲ್ಲಿ ವೆಂಕಟರಮಣ ಮೂರ್ತಿ, ಸಾಲಿಗ್ರಾಮ ಶಿಲೆಗಳಿಗೆ ಪೂಜೆ ಆಗುತಿತ್ತು. ದೇವಿ ಪುರಾಣ ಪಠಣ, ಆರಾಧನೆ ಆಗುತಿತ್ತು. ಇದೆಲ್ಲವೂ ಚಾಚೂ ತಪ್ಪದೇ ನಡೆದುಕೊಂಡು ಬರಬೇಕೆಂಬುದು ಮನೆಯ ಪರಂಪರೆ. ಅದೂ ಮುಂದುವರೆಯಲೇಬೇಕೆಂಬುದು ಹಿರಿಯರ ಅಭಿಲಾಷೆ. ಮುಂದುವರೆಯದಿದ್ದರೆ ಏನಾಗುತ್ತದೆ ಎಂದು ಚಿಂತನೆ ಮಾಡುವ ಮನಸ್ಸುಗಳು ಮನೆಯಲ್ಲಿಲ್ಲ. ಅದರಿಂದ ಏನಾದರೂ ತೊಂದರೆ ಸಂಭವಿಸುತ್ತದೆ ಎಂದು ಭಾವಿಸಿದ ಪರಂಪರೆ. ಈ ಪರಂಪರೆಯ ಪಾಲಿಸದ, ದೂರವಿರುವ ರಮಾನಂದ ನಿರ್ಲಿಪ್ತ ಸ್ಥಿತಿಯಲ್ಲಿದ್ದಾನೆ. ಆತನನ್ನು ಎಚ್ಚರಿಸಿ ಪರಂಪರೆಯ ಪಳಿಯುಳಿಕೆಯನ್ನು ಮುಂದುವರೆಸುವ ಹೊಣೆಗಾರಿಕೆಯನ್ನು ನೀಡುವುದು ಗೋವಿಂದಚಾರ್ಯ. ಗೋವಿಂದಚಾರ್ಯರು ಪರಂಪರೆಯ ಪರದೆಯನ್ನು ದಾಟಲಾಗದ ಮನಸ್ಥಿತಿಯವರು. ಪರಂಪರೆಗೆ ಅಂಟಿಕೊಂಡವರು. ಪರಂಪರೆಯಿಂದ ಬಿಡಿಸಿಕೊಂಡ ರಮಾನಂದ ಮತ್ತೆ ಪರಂಪರೆಗೆ ಮರಳುವುದು ಕಷ್ಟ. ಪರಂಪರೆಯನ್ನು ಉಳಿಸಿಕೊಳ್ಳುವ ಪ್ರಶ್ನೆ ಆಧುನಿಕತೆಯ ಸಂದರ್ಭದಲ್ಲಿ ನಿರಂತರವಾಗಿ ಕಾಡುವಂತದ್ದು. ಕಾದಂಬರಿಯಲ್ಲಿ ದೇವರು, ಕೃಷಿಗೆ ಸಂಬಂಧಿಸಿದಂತೆ ಈ ತಾಕಲಾಟ ಇದೆ.

ರಮಾನಂದ ತನ್ನ ಮನೆತನದ ಚರಿತ್ರೆಯನ್ನು ಅಪ್ಪನ ಡೈರಿಯಿಂದ ತಿಳಿದುಕೊಳ‍್ಳುತ್ತಾನೆ. ವಾಸ್ತವದಲ್ಲಿ ಆರಂಭವಾದ ಕಾದಂಬರಿ ಲಾಕ್ ಡೌನ್ ನೆಪದಲ್ಲಿ ಗತಕ್ಕೆ ಮರಳುತ್ತದೆ. ಆ ಗತವು ಆಧುನಿಕ ಚಲನೆಗೆ ಸಿಲುಕದ ಬದುಕಿನ ವಿನ್ಯಾಸ. ಅಲ್ಲಿ ತಮ್ಮ ಹಿರಿಯರು ಸವೆಸಿದ ದಾರಿಯನ್ನು ಕಂಡುಕೊಂಡು ಮತ್ತೆ ಆ ಕಡೆ ಮರಳುವ ಮನಸ್ಸು ರಮಾನಂದನಿಗೆ ಆಗುವದಿಲ್ಲ. ಆಧುನಿಕ ಜೀವನಕ್ಕೆ ಒಳಗಾದ ಯಾವ ಜೀವಿಯೂ ಮತ್ತೆ ಗತಕ್ಕೆ ಮರಳುವುದು ಕಷ್ಟ. ಗತದ ನೆನಪುಗಳನ್ನು ಮೆಲಕು ಹಾಕಬಹುದೇ ಹೊರತು ಗತವನ್ನು ವಾಸ್ತವ ಮಾಡಲಾಗುವುದಿಲ್ಲ. ಈ ಅರಿವು ಕಾದಂಬರಿ ಒಳಗಡೆ ಹರಿಯುತ್ತದೆ. ಆದ್ದರಿಂದ ದೇವರ ಪೂಜೆ, ಆರಾಧನೆ, ಪ್ರತಿಷ್ಠಾಪನೆ ಯಾರಿಗೂ ಬೇಡ. ಆಧುನಿಕ ದಂದುಗದಲ್ಲಿ ಅದರ ಅವಶ್ಯಕತೆಯಾದರೂ ಏನೆಂಬ ಜಿಜ್ಞಾಸೆ ಸಹಜವಾಗಿ ಹುಟ್ಟುತ್ತದೆ. ಆಧುನಿಕತೆ ಎಂಬುದು ಉಪಭೋಗದ ಜೀವನ ವಿಧಾನವನ್ನು ಹೊಂದಿರುವಂತದ್ದು. ಉಪಭೋಗಕ್ಕೆ ಒಳಗಾಗದ ನಂಬಿಕೆಯನ್ನು ಶ್ರದ್ಧೆಯಿಂದ ಸ್ವೀಕರಿಸುವುದು. ಅದಕ್ಕೆ ಕಷ್ಟವಾಗುತ್ತದೆ. ನಂಬಿಕೆಯನ್ನು ನಿಕಷಕ್ಕೊಡ್ಡಿದಾಗ ಉಳಿಯುವ ಅಂಶ ಯಾವುದು ಎಂಬ ವಿಚಾರ ಅಲ್ಲಿ ಪ್ರಧಾನವಾಗುತ್ತದೆ. ಆದ್ದರಿಂದ ಹೊಸ ತಲೆಮಾರು ಈ ನಂಬಿಕೆಯೊಂದಿಗೆ ಅಷ್ಟೊಂದು ತದಾತ್ಮ್ಯ ಹೊಂದುವದಿಲ್ಲ. ವಿಜ್ಞಾನದ ಪರಿಭಾಷೆಯಲ್ಲಿ ದೇವರ ಸ್ವರೂಪವನ್ನು ಅರಿಯಲು ಪ್ರಯತ್ನಿಸುತ್ತದೆ. ಇಲ್ಲವೇ ಆ ನಂಬಿಕೆಯನ್ನು ಕುಟುಂಬದಾಚೆಗೆ ಸಮೂಹಿಕ ಸನ್ನಿಯಲ್ಲಿ ಕಾಣಲು ಹಾತೊರೆಯುತ್ತದೆ. ಬದುಕಿನ ಅತಂತ್ರ ಮತ್ತು ಭಯವನ್ನು ಮೀರುವ ಪ್ರಕ್ರಿಯೆಯಾಗಿಯೂ ಇದನ್ನು ಭಾವಿಸಬಹುದು. ರಮಾನಂದ ದೇವರಮನೆಯ ವ್ಯಕ್ತಿತ್ವ ಈ ನೆಲೆಯೊಂದಿಗೆ ಬದುಕುತ್ತಿರುವುದು. ಈ ಕಾರಣಕ್ಕೆ ಕೃಷಿಯನ್ನು ಅಧ್ಯಯನ ಮಾಡಿದ ರಮಾನಂದ ಕೃಷಿಗೆ ಮರಳದೆ ಅಪ್ಪನ ಭರವಸೆಯನ್ನು ಹುಸಿಗೊಳಿಸುವುದು. ದೇವರ ಶ್ರದ್ಧೆಯಿಂದ ಹೊರಗುಳಿದು ಆಧುನಿಕ ಬದುಕಿಗೆ ತೆರೆದುಕೊಳ್ಳುವುದು. ಈ ಪ್ರಕ್ರಿಯೆ ಆಧುನಿಕ ವಿದ್ಯಮಾನದಲ್ಲಿ ಸಾಮನ್ಯವಾಗಿದೆ. ಈ ಸಾಮನ್ಯವಾದ ಸಂಗತಿಯನ್ನು ಕಾದಂಬರಿ ಕಟ್ಟಿಕೊಡಲು ಪ್ರಯತ್ನಿಸುತ್ತದೆ. ಈ ಕಾರಣಕ್ಕಾಗಿ ನಿರೂಪಕ ಇಲ್ಲಿ ನಿರ್ಲಿಪ್ತತೆಯ ಅಂತರವನ್ನು ಕಾಯ್ದುಕೊಳ್ಳುತ್ತಾನೆ.
ಬದಲಾಗುತ್ತಿರುವ ಸಂಗತಿಗಳನ್ನು ಒಪ್ಪಿಕೊಳ್ಳುವುದು ಬದುಕಿನ ಅನಿವಾರ್ಯ ಎಂಬ ಸತ್ಯದ ಜೊತೆಗೆ ನಿರೂಪಕ ನಿಲ್ಲುತ್ತಾನೆ. ಇದು ಉದಾರ ಮಾನವೀಯತೆಯ ಸುಧಾರಣೆಯ ಮೂಲತತ್ವ. ಈ ತತ್ವ ಕಾದಂಬರಿಯ ಅಂತರಾತ್ಮವಾಗಿದೆ.

ಕುಪ್ಪಣ್ಣಚಾರ್ಯ ಮತ್ತು ಗೋವಿಂದಚಾರ್ಯರ ನಡುವೆ ನಡೆವ ದೇವರ ಕುರಿತ ಸಂಭಾಷಣೆ ನಿರೂಪಕ ನಿಲುವನ್ನು ಅಭಿವ್ಯಕ್ತಿಸುತ್ತವೆ. ಕುಪ್ಪಣ್ಣಚಾರ್ಯನಿಗೆ ಮಗ ಆತ್ಮಹತ್ಯೆ ಮಾಡಿಕೊಂಡ ಮೇಲೆ ದೇವರ ಮೇಲಿರುವ ನಂಬಿಕೆ ಸಡಿಲಗೊಳ್ಳುತ್ತದೆ. ದೇವರನ್ನು ವಿಮರ್ಶಿಸುವ ಸ್ಥಿತಿ ಬೆಳಿಸಿಕೊಳ್ಳುತ್ತಾನೆ. ಅದಕ್ಕೆ ಗೋವಿಂದಚಾರ್ಯರು ನಮ್ಮ ಲೌಕಿಕ ಹಾಗೂ - ಹೋಗುಗಳಿಗೆ ದೇವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ನಮ್ಮ ನೋಟಕ್ಕೆ ನಿಲುಕುವ ಕ್ರಿಯೆಯಲ್ಲಿ ದೇವರ ಸ್ವರೂಪ ಇದೆ ಎಂದು ಎಷ್ಟೇ ವಾದಿಸಿದರೂ ತನ್ನ ನಿಲುವಿನಿಂದ ಕುಪ್ಪಣ್ಣಚಾರ್ಯ ಹಿಂದೆ ಸರಿಯುವದಿಲ್ಲ ಎಂಬುದನ್ನು ಗಮನಿಸಬೇಕು. ರಮಾನಂದ ದೇವರಮನೆ ದೇವರನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ. ಮೂರ್ತಿಯಲ್ಲಿ ಅವ್ಯಕ್ತವಾದ ಆನಂದನುಭೂತಿಯನ್ನು ಕಾಣುತ್ತಾನೆ. ಅಂದರೆ ದೆವರನ್ನು ಬಿಟ್ಟು ನರಜೀವಿ ಇರಲು ಸಾಧ್ಯವಿಲ್ಲ ಎಂಬ ಸನಾತನ ತತ್ವದ ನೆಲೆಗೆ ತಲುಪಲು ರಮಾನಂದ ಯೋಚಿಸುವುದು ದೇವರ ಅಸ್ತಿತ್ವದ ಬಗ್ಗೆ ಹೊಸ ಚಿಂತನೆಯನ್ನು ಹುಟ್ಟು ಹಾಕುತ್ತದೆ. ಮೂರ್ತ ರೂಪಕ್ಕಿಂತಲೂ ಅಮೂರ್ತ ಕಲ್ಪನೆಯ ಸಂವೇದನೆಯಲ್ಲಿಯೇ ದೇವರ ನೆಲೆ ಇರಬಹುದೆಂಬ ಚಿಂತನೆ ರಮಾನಂದನನ್ನು ಆವರಿಸಿಕೊಳ್ಳುತ್ತದೆ. ಆದ್ದರಿಂದ ದೇವರನ್ನು ಸಮುದ್ರದಲ್ಲಿ ಹಾಕಿದರೂ ದೋಷವಿಲ್ಲ ಅನಿಸುತ್ತದೆ. ಅದುವೇ ದೇವರಿಗೆ ಸುರಕ್ಷಿತವಾದ ಸ್ಥಳ. ಬಯಲಿನಲ್ಲಿ, ಪ್ರಕೃತಿಯ ಅಣುವಿನಲ್ಲಿ ದೇವರು ಇರುತ್ತಾನೆ ಎಂಬ ಸತ್ಯದ ಶೋಧವನ್ನು ಕಾದಂಬರಿ ರಮಾನಂದನ ಮನೋಭಾವದ ಮೂಲಕ ಮನಗಾಣಿಸಲು ಪ್ರಯತ್ನಿಸುತ್ತದೆ.

ರಮಾನಂದ ತಾನು ಹುಟ್ಟಿಬೆಳೆದ ಮನೆಯ ಬಗ್ಗೆಯು ವಾಸ್ತವವಾಗಿ ಯೋಚಿಸುತ್ತಾನೆ. ಹುಟ್ಟಿ ಬೆಳೆದ ಕಾರಣಕ್ಕಾಗಿಯೇ ಮನೆಗೆ ಅಂಟಿಕೊಳ್ಳಬೇಕೆಂದೇನು ಇಲ್ಲ. ಬದುಕು ಎಲ್ಲಿಗೆ ಸೆಳೆದುಕೊಂಡು ಹೋಗುತ್ತದೋ ಹೋಗಬೇಕು. ಎಲ್ಲಾ ಮನೆಗಳ ಸ್ಥಿತಿಯೂ ಇದೇ ಆಗಿದೆ. ಯಾರು ತಮ್ಮ ತಮ್ಮ ಮನೆಗಳಲ್ಲಿ ಉಳಿಯದೆ ನಗರವಾಸಿಗಳಾಗುತ್ತಿದ್ದಾರೆ. ಅಲ್ಲಿಯೇ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಹೀಗಾಗಿ ರಮಾನಂದನಿಗೆ ಮನೆಯ ಮೇಲೆ ವಿಶೇಷವಾದ ಯಾವ ಮೋಹವೂ ಇಲ್ಲ. ಅವನು ವಾಸ್ತವವಾದಿಯಾಗಿ ಯೋಚಿಸುತ್ತಾನೆ. ಆದರ್ಶದಿಂದ ಮನೆಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡವರು ಅಲ್ಲಿ ಸುಖವಾಗಿ ಇರುವುದನ್ನು ಕಾಣಲಾಗುವುದಿಲ್ಲ. ಇದೊಂದು ಆಧುನಿಕ ಬದುಕಿನ ಬಿಕ್ಕಟ್ಟು. ಒಟ್ಟಾರೆ, ಕಾದಂಬರಿ ಮೂರು ತಲೆಮಾರುಗಳ ಮೂಲಕ ಸಾಂಸ್ಕೃತಿಕ ಬದಲಾವಣೆಯ ಸಂದರ್ಭಗಳನ್ನು ಸಮರ್ಥವಾಗಿ ದಾಖಲಿಸುತ್ತದೆ. ಬದಲಾವಣೆಯನ್ನು ಸಹಜವಾಗಿ ಕಾದಂಬರಿ ಸ್ವೀಕರಿಸುತ್ತದೆ. ಸಾಮಾಜಿಕ ಪಲ್ಲಟಗಳ ಬಗ್ಗೆ ಯಾವ ಮಡಿವಂತಿಕೆಯು ಕಾದಂಬರಿಗೆ ಇಲ್ಲ. ದೊಡ್ಡ ರಮಾನಂದ, ಹರಿದಾಸಭಟ್ಟ, ರಮಾನಂದರ ಮೂರು ತಲೆಮಾರುಗಳ ಬದುಕಿನ ವಿನ್ಯಾಸವನ್ನು ನಿರೂಪಿಸುತ್ತಾ, ಆಯಾ ಕಾಲದ ಬದುಕನ್ನು ಅರ್ಥ ಮಾಡಿಕೊಳ್ಳಲು ಕಾದಂಬರಿ ಪ್ರಯತ್ನಿಸುತ್ತದೆ. ಆದ್ದರಿಂದ ಕಾದಂಬರಿಯಲ್ಲಿ ಯಾವ ತಲೆಮಾರು ದುರ್ಬಲವಾಗಿ ಕಾಣುವುದಿಲ್ಲ. ಪ್ರತಿಯೊಂದು ಬದಲಾವಣೆಯು ಜೀವಂತಿಕೆಯನ್ನೇ ಹೊಂದಿರುತ್ತದೆ ಎಂಬುದು ಕಾದಂಬರಿಯ ಅಚಲ ನಿಲುವು. ಹೀಗಾಗಿ ಕಾದಂಬರಿಯ ಭಾಷೆ ಎಲ್ಲಿಯೂ ಕ್ಲಿಷ್ಟತೆಯ ಸಂಕೀರ್ಣತೆಯನ್ನು ಪಡೆಯದೆ ಸಹಜ ಲಯವನ್ನು ಹೊಂದಿದೆ. ತಾತ್ವಿಕ ಭಾರಗಳಿಂದಲೂ ಕಾದಂಬರಿ ಕುಸಿಯುವದಿಲ್ಲ. ʻದೇವರುʼ ಅನ್ನುವ ತತ್ವದ ಜಿಜ್ಞಾಸೆಯನ್ನು ಮೂರು ತಲೆಮಾರುಗಳ ನೆಲೆಯಲ್ಲಿ ನಡೆಸಿದರೂ ಅದರ ಸರಳತೆಯಿಂದಾಗಿಯೇ ಓದುಗರ ಹೃದಯವನ್ನು ಹಿಡಿಯುತ್ತದೆ. ಈ ಕಾರಣಕ್ಕೆ ಕಾದಂಬರಿ ಕಥನ ಪರಂಪರೆಯಲ್ಲಿ ಭಿನ್ನವಾಗಿ ನಿಲ್ಲುತ್ತದೆ.

ಈ ಅಂಕಣದ ಹಿಂದಿನ ಬರಹಗಳು:
ಕಾಂತಾವರ ಕನ್ನಡ ಸಂಘದ ಕನ್ನಡ ಕಾಯಕ
`ಹೆಣ್ತನದ’ ಕತೆಗಳು

ಡಾ. ಪೂವಪ್ಪ ಕಣಿಯೂರು ಸಂಶೋಧನೆಗಳು: ಜಾನಪದೀಯ ಬಹು ಪ್ರಮಾಣಗಳ ಆಖ್ಯಾನ
ಡಾ. ಮಲ್ಲಿಕಾ ಘಂಟಿ ಕಾವ್ಯ: ಪುರುಷ ಪ್ರಮಾಣಗಳ ಭಂಜನ
ಡಾ. ಚೇತನ ಸೋಮೇಶ್ವರ ಕವಿತೆ `ಹೊಸ ನುಡಿಗಟ್ಟಿನ ಲಯಗಳು'
ಮನುಷ್ಯನ ವೈರುಧ್ಯಗಳನ್ನೆಲ್ಲ ಹೇಳುವ ಲಂಕೇಶರ ಕವಿತೆಗಳು

 

MORE NEWS

ತ.ರಾ.ಸು ಅವರ ೦-೦=೦ ಕಥೆಯಲ್ಲಿ ಸಾವಿನ ಸೂಕ್ಷ್ಮ ನೋಟ

26-12-2024 ಬೆಂಗಳೂರು

"ತ.ರಾ‌. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...

ಬರಹಗಾರ ವಸ್ತುನಿಷ್ಠವಾಗಿ ಹೇಳದೇ ಹೋದರೆ...

25-12-2024 ಬೆಂಗಳೂರು

"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...