ಹಿಂದಿ `ರಾಜ' ಭಾಷೆ ಅಲ್ಲ: ಯೋಗೇಂದ್ರ ಯಾದವ್

Date: 23-03-2025

Location: ಬೆಂಗಳೂರು


ಬೆಂಗಳೂರು: "ನಮಗೆ ಹಿಂದಿ ದಿವಸ್ ಅಲ್ಲ, ಭಾಷಾ ದಿವಸ್ ಬೇಕು. ಹಿಂದಿ ರಾಜ ಭಾಷೆ ಅಲ್ಲ. ಭಾರತೀಯ ಎಲ್ಲಾ ಭಾಷೆಗಳಿಗೂ ಮಹತ್ವವಿದೆ. ಎಲ್ಲವೂ ಭಾರತೀಯ ಭಾಷೆಗಳು," ಎಂದು ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಅವರು ಲೋಹಿಯಾ ಅವರ ಇಂಗ್ಲಿಷ್ ಬಗ್ಗೆ ತಮಗಿರುವ ನಿಲುವಿನ ಬಗ್ಗೆ ಮಾತನಾಡುವಾಗ ತಿಳಿಸಿದರು.

ನಗರದ ಮಿಡಾಸ್ ಸ್ಕೂಲ್ ಆಫ್ ಎಂಟರ್ ಪ್ರೆನರಶಿಪ್ ನ ಸಭಾಂಗಣದಲ್ಲಿ ಸಮಾಜಮುಖಿ, ಅಂಕುರ ಪ್ರಕಾಶನ ಮತ್ತು ಸ್ವ್ಯಾನ್ ಪ್ರಿಂಟರ್ ಆಶ್ರಯದಲ್ಲಿ ಚಂದ್ರಕಾಂತ ವಡ್ಡು ಅವರ ಸಂಪಾದಿತ ಚನ್ನಬಸವಣ್ಣನ ಗುಣವಿಶೇಷ ಕೃತಿ 'ಚುಂಬಕ ಗಾಳಿ' ಲೋಕಾರ್ಪಣೆ ಮತ್ತು ‘ಲೋಹಿಯಾ ಸಮಾಜವಾದ ಮತ್ತು ಇಂದಿನ ಸರ್ಕಾರಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

"ಲೋಹಿಯಾ ಅವರನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೋ, ಅಷ್ಟೇ ತಪ್ಪು ಅರ್ಥಮಾಡಿಕೊಂಡಿದ್ದೇವೆ. ಇಂದು ಲೋಹಿಯಾ ನಾಲ್ಕು ವಿಚಾರಗಳಿಂದ ಹೆಚ್ಚು ಜನಪ್ರಿಯರು. ಅವು ಕಾಂಗ್ರೆಸ್ ವಿರೋಧಿ, ಇಂಗ್ಲಿಷ್ ವಿರೋಧಿ, ಮಂಡಲ್ ವರದಿ ಮತ್ತು ಮಾರ್ಕ್ಸ್ ವಾದದ ವಿರೋಧಿ ಎಂಬ ಕಾರಣಕ್ಕೆ. ಆದರೆ ಲೋಹಿಯಾ ವಿರೋಧಿಸಿದ್ದು ಕಾಂಗ್ರೆಸ್ ಅನ್ನು ಅಲ್ಲ, ಅಧಿಕಾರದ ಪಟ್ಟಭದ್ರ ಹಿತಾಸಕ್ತಿಯನ್ನ. ಇದು ಅವರ ನಿಲುವೇ ಹೋರತು, ಕಾಂಗ್ರೆಸ್ ವಿರೋಧಿ ನೀತಿ ಅಲ್ಲ," ಎಂದರು.

"ಇನ್ನು ಲೋಹಿಯಾ ಅವರ ಇಂಗ್ಲಿಷ್ ವಿರೋಧದ ಬಗ್ಗೆ ಮಾತನಾಡಿ, ಲೋಹಿಯಾ ಅವರು ಇಂಗ್ಲಿಷ್ ಅನ್ನು ಬರೆಯಲು ಮತ್ತು ಮಾತನಾಡಲು ಚೆನ್ನಾಗಿ ಬಲ್ಲರು. ಆದರೆ ಅವರು ಇಂಗ್ಲಿಷನ್ನು ವಿರೋಧಿಸಿದ್ದು, ಅದೊಂದು ಊಳಿಗಮಾನ್ಯ ಪದ್ಧತಿಯ ರೀತಿಯಲ್ಲಿ ಆದ ಕಾರಣಕ್ಕೆ. ಇಂಗ್ಲೀಷ್ ಬಲ್ಲವರು ಮೇಲ್ವರ್ಗ ಎಂಬ ನಿಲುವನ್ನು ಲೋಹಿಯಾ ವಿರೋಧಿಸಿದ್ದರು,".

"ಇನ್ನು ಮಂಡಲ್ ವರದಿ ಬಗ್ಗೆ ಮಾತನಾಡಿದ, ಅಂದು ಉತ್ತರ ಭಾರತದಲ್ಲಿ ಜಾತಿಯ ಬಗ್ಗೆ ಮಾತುಗಳಿರಲಿಲ್ಲ. ಆಗ ಲೋಹಿಯಾ ಜಾತಿಗಳ ಬಗ್ಗೆ ಮಾತನಾಡಿದರು. ಹಿಂದುಳಿದವರು 60 ಶೇ. ಅವಕಾಶ ಕಲ್ಪಿಸಬೇಕು. ಮಹಿಳೆಯನ್ನು ಶೂದ್ರರರಾಗಿ ನೋಡಲಾಗಿದೆ ಎಂದು ಲೋಹಿಯಾ ಹೇಳಿದ್ದರು. ಮಹಿಳೆಯರಿಗೆ ಅವಕಾಶ ಕೊಡಬೇಕು ಎಂದವರಲ್ಲಿ ಲೋಹಿಯಾ ಮೊದಲಿಗರು ಎಂದೇ ಹೇಳಬಹುದು. ಕಾಸ್ಟ್, ಕ್ಲಾಸ್, ಜಂಡರ್ನ್ನು ಒಂದಾಗಿ ನೋಡಿದವರು ಲೋಹಿಯಾ ಎಂದು ತಿಳಿಸಿದರು.

"ಮಾರ್ಕ್ಸ್ ವಾದದಲ್ಲಿ ವಿರೋಧಿ ಲೋಹಿಯಾ ಎಂಬ ಚಿಂತನೆಯಿದೆ, ಆದರೆ ಲೋಹಿಯಾ ಮಾರ್ಕ್ಸ್ ವಾದವನ್ನು ವಿರೋಧಿಸಲಿಲ್ಲ ವಿಶ್ಲೇಷಣೆ ಮಾಡಿದರು. ವಿಶ್ಲೇಷಿಸಿ ಪ್ರಶ್ನೆ ಮಾಡಿದರು. ಆದರೆ ಅವರ ಮಾರ್ಕ್ಸ್ ವಾದದ ವಿಶ್ಲೇಷಣೆಯನ್ನೇ ಲೋಹಿಯಾ ಅವರ ವಿರೋಧ ಎಂದು ತಿಳಿಯಲಾಗಿದೆ. ಆದರೆ ಇದು ಅವರು ವಿರೋಧಿಸಿದ್ದಲ್ಲ ಪ್ರಶ್ನಿಸಿದ್ದ ಎಂಬುದನ್ನು ಅರಿತುಕೊಳ್ಳಬೇಕಿದೆ. ಅಲ್ಲದೇ ಲೋಹಿಯಾ ಅವರು ಯುರೋಪ್ ಕೇಂದ್ರಿತ ಜ್ಞಾನ ಸಂಪರ್ಕವನ್ನು ವಿರೋಧಿಸಿದ್ದರು," ಎಂದು ಯೋಗೇಂದ್ರ ಯಾದವ್ ವಿವರಿಸಿದರು.

ಲೋಹಿಯಾ ವಾದಕ್ಕೆ ಮೊದಲ ಅಡ್ಡಿ ಲೋಹಿಯಾ ವಾದಿಗಳೇ:-
"ಲೋಹಿಯಾ ಸಮಾಜವಾದ ಮತ್ತು ಇಂದಿನ ಸರ್ಕಾರಗಳು ಕುರಿತ ಉಪನ್ಯಾಸದಲ್ಲಿ ಮಾತನಾಡಿದ ವಿಚಾರವಾದಿ ಶಿವಸುಂದರ್, ಲೋಹಿಯಾ ವಾದಕ್ಕೆ ಮೊದಲ ಅಡ್ಡಿ ಲೋಹಿಯಾ ವಾದಿಗಳೇ. ಲೋಹಿಯಾ ಅವರು ಮಾರ್ಕ್ಸ್ ವಾದದ ಬಗ್ಗೆ ಕೆಲವು ಪ್ರಶ್ನೆಗಳನ್ನು ಮಾಡಿದ್ದರು. ಲೋಹಿಯಾ ವಾದಿಗಳು ಅದನ್ನೇ ಉತ್ತರ ಎಂದು ಭಾವಿಸಿದರು. ಇದು ಲೋಹಿಯಾ ಮಾತ್ರ ಅಲ್ಲ ಬಹುತೇಕ ವಿಚಾರಗಳಲ್ಲಿ ಆಗಿದೆ," ಎಂದರು.

"ಮುಂದುವರೆದು, ಕಾಡಿನ ನಕ್ಸಲರನ್ನು ಕೊಲ್ಲುವಾಗ ವಿರೋಧಿಸದಿದ್ದರೆ, ನಗರ ನಕ್ಸಲ್ ಕೊಲ್ಲುವಾಗ ಯಾರು ಧ್ವನಿ ಎತ್ತರು. ಕಾವೇರಿ ಆರತಿಗೂ, ಕುಂಭಮೇಳಕ್ಕೂ ಏನು ವ್ಯತ್ಯಾಸ, ಸೌಜನ್ಯ ಪ್ರಕರಣ ಚರ್ಚೆಯಲ್ಲಿದೆ. ಆದರೆ ಅವರ ಕಾಲಿಗೆ ಬಿಳುವವರು ಸರ್ಕಾರದಲ್ಲಿದ್ದಾರೆ. ಭಗವದ್ಗೀತೆ ಪಠ್ಯದಲ್ಲಿ ಬೇಕು ಅಂದರು. ರಾಮಮಂದಿರ ನಿರ್ಮಾಣ ಅಧರ್ಮ ಎಂದು ಯಾವ ಪಕ್ಷವೂ ಹೇಳಲಿಲ್ಲ. ಎಲ್ಲಾ ಪಕ್ಷಗಳು ತಮ್ಮ ಚುನಾವಣಾ ಪ್ರಚಾರವನ್ನ ಅಯೋಧ್ಯೆಯಿಂದಲೇ ಆರಂಭಿಸುತ್ತಾರೆ. ಕಾಂಗ್ರೆಸ್ ನಿಂದ ಅಯೋಧ್ಯೆಯ ಉದ್ಘಾಟನೆಗೆ ಹೋಗಲಿಲ್ಲ ಆದರೆ, ರಾಮಮಂದಿರವನ್ನ ಅಧರ್ಮ ಎಂದು ಹೇಳುವ ಧೈರ್ಯ ಇಲ್ಲ. ಮತ ಕಳೆದುಕೊಳ್ಳುವ ಭಯ ಇದೆ. ಕಾವೇರಿ ಆರತಿ ಮಾಡಲಿ ಆದರೆ ಅದನ್ನು ಸರ್ಕಾರದ ಕಾರ್ಯಕ್ರಮ ಎಂದಿರುವುದು ಆಲೋಚಿಸಬೇಕಾದ ವಿಚಾರ ಎಂದು ಆತಂಕ ಹೊರಹಾಕಿದರು,".

ಇದೇ ಸಂದರ್ಭದಲ್ಲಿ 'ಚುಂಬಕ ಗಾಳಿ' ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಬಿ. ಆರ್ ಪಾಟೀಲ್, "ಇಂದಿನ ಈ ಸಭೆ ಕಂಡರೆ ಮತ್ತೆ ಸಮಾಜ ಕಟ್ಟಲು ಸಾಧ್ಯ ಎಂಬ ಭರವಸೆ ಮೂಡಿದೆ. ಇದಕ್ಕೆ ಕಾರಣ ಚೆನ್ನಬಸವಣ್ಣ ಅವರು ಎಂದರು. ಕಾಂಗ್ರೆಸ್ ನಿಂದ ತುರ್ತು ಪರಿಸ್ಥಿತಿಗೆ ಸಂದರ್ಭದಲ್ಲಿ ಜೈಲಿಗೆ ಹೋದವ ನಾನು, ಈಗ ಅದೇ ಪಕ್ಷದಲ್ಲಿದ್ದೇನೆ ಇದು ವಿಪರ್ಯಾಸ. ನಾವು ಕಟ್ಟಿದ ಮನೆಗಳು ಬಿದ್ದಿದ್ದು ಇದಕ್ಕೆ ಕಾರಣ," ಎಂದರು.

ಕೃತಿಯ ಬಗ್ಗೆ ಮಾತನಾಡಿದ ಸುಭಾಷ್ ರಾಜಮಾನೆ, "ನಾನು ಈ ಕೃತಿಗೆ ಲೇಖನ ಬರೆಯಬೇಕಿತ್ತು. ಅವಕಾಶ ಸಿಗಲಿಲ್ಲ ಎಂದರು. ಕೃತಿ ಆರಂಭದಲ್ಲಿರುವ ಕವಿತೆಗಳು ಬಸವಣ್ಣ ಅವರಿಗೆ ಸೂಕ್ತವಾಗಿವೆ. ಬಸವಣ್ಣ ಅವರು ಪ್ರಕಾಶಕರಾಗಿ ಮಾಡಿದ ಕಾರ್ಯ ನೆನೆಯಬೇಕು. ಅವರ ಪ್ರಕಾಶನದ ಎಲ್ಲಾ ಕೃತಿಗಳು ಮರು ಮುದ್ರಣ ಕಂಡಿದೆ. ಅವರ ಪ್ರಕಾಶನದ ರಹಸ್ಯ ಕೇಳಿದ್ದೇನೆ. ಅವರು ಹೇಳಿದ್ದಾರೆ. ಆದರೆ ಅದನ್ನು ನಮಗೆ ತಿಳಿಯಲು ಸಾಧ್ಯವಿಲ್ಲ ಇಂತಹ ಹಲವು ವಿಚಾರಗಳು ಈ ಕೃತಿಯಲ್ಲಿದೆ. ಹೀಗೆ ಕೃತಿಯ ಸ್ವಾರಸ್ಯಕರ ಘಟನೆಗಳನ್ನು," ವಿವರಿಸಿದರು.

ಸಮಾಜಮುಖಿ ಜಯರಾಮ್ ರಾಯಪುರ ಅಧ್ಯಕ್ಷೀಯ ನುಡಿಗಳನ್ನು ಆಡಿದರು. ಗೌರವ ಕೃತಿಯ ಕುರಿತು ಮಾತನಾಡಿದ ಚೆನ್ನಬಸವಣ್ಣ ತಮ್ಮ ಬದುಕಿನ ಹೆಜ್ಜೆಗಳಲ್ಲಿ ಜೊತೆಯಾಗಿದ್ದವರನ್ನು ನೆನಸಿದರು. ಕಾರ್ಯಕ್ರಮದ ಕುರಿತು ಆಶಯ ನುಡಿಗಳನ್ನು ಚಂದ್ರಕಾಂತ ವಡ್ಡು ಆಡಿದರು.

MORE NEWS

ಭಾನುಪ್ರಕಾಶ್ ಶರ್ಮ ಮತ್ತು ಶ್ರೀಧರ ದೀಕ್ಷಿತ್ ಗೆ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿ ಪ್ರದಾನ 

25-03-2025 ಬೆಂಗಳೂರು

ಮೈಸೂರಿನ ಶ್ರೀ ವಾಸುದೇವ ಮಹಾರಾಜ್ ಫೌಂಡೇಶನ್ ವತಿಯಿಂದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಶ್ರೀ ವಾಸುದೇವ ಮಹಾರಾಜ 88...

ಪ್ರಶಸ್ತಿಯನ್ನು ಅರ್ಜಿ ಹಾಕಿ ಪಡೆಯುವುದಕ್ಕಿಂತ, ಸಾಧಕರನ್ನು ಗುರುತಿಸಿ ಕೊಡುವುದು ಶ್ರೇಷ್ಠ; ಶಿವರಾಜ ತಂಗಡಗಿ

24-03-2025 ಬೆಂಗಳೂರು

ಬೆಂಗಳೂರು: "ಯಾವುದೇ ಒಂದು ಪ್ರಶಸ್ತಿಯನ್ನು ಅರ್ಜಿ ಹಾಕಿ ಪಡೆಯುವುದಕ್ಕಿಂತ, ವ್ಯಕ್ತಿಯ ಸಾಧನೆಯನ್ನು ಗುರುತಿಸಿ ಪ್...

'ತಲ್ಕಿ' ಎನ್ನುವ ಕರುಳು ಹಿಂಡುವ ಕಥೆ

24-03-2025 ಬೆಂಗಳೂರು

ಮಾರ್ಚ್ 22-23ರಂದು ನಡೆದ ಕರ್ನಾಟಕ ಲೇಖಕಿಯರ ಸಂಘದ 8ನೆಯ ಅಖಿಲ ಕರ್ನಾಟಕ ಸಮ್ಮೇಳನದ ಮೊದಲ ದಿನದ ಕೊನೆಯಲ್ಲಿ ರಂಗದ ಮೇಲೆ ...