`ಹೆಣ್ತನದ’ ಕತೆಗಳು

Date: 31-10-2023

Location: ಬೆಂಗಳೂರು


“ಮಹಿಳೆಯ ಅಂತರಂಗದ ಬವಣೆ, ಕ್ಷೋಭೆ, ಒತ್ತಡ, ತಪ್ತಸ್ಥಿತಿ, ನೋವು, ವಿಷಾದದ ವಿಯೋಗ ಅವರ ಕಥೆಗಳಲ್ಲಿ ಕಾಣುತ್ತೇವೆ. ಬಹುತೇಕ ಕಥೆಗಳು ಹೊರಗಿನ ಪ್ರಪಂಚದೊಂದಿಗೆ ಮುಖಾಮುಖಿಯಾಗುವದಕ್ಕಿಂತ ತಮ್ಮ ಕೇಂದ್ರದೊಳಗೆ ನಡೆಯುತ್ತವೆ. ಅವು ಸ್ವ ಅನುಭವದ ನೆಲೆಯಲ್ಲಿ ಮುನ್ನಡೆಯುತ್ತವೆ. ಅಲ್ಲಿ `ಸ್ತ್ರೀಪ್ರಜ್ಞೆ’ ಯೊಂದು ಜಾಗೃತವಾಗಿರುವದನ್ನು ಗಮನಿಸಬೇಕು,” ಎನ್ನುತ್ತಾರೆ ರಾಜಶೇಖರ ಹಳೆಮನೆ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ತುಳಸಿ ವೇಣುಗೋಪಾಲ ಅವರ `ಸಮಗ್ರ ಕತೆಗಳು’ ಕೃತಿಯ ಕುರಿತು `ಹೆಣ್ತನದ’ ಕತೆಗಳು ಶೀರ್ಷಿಕೆಯಡಿಯಲ್ಲಿ ವಿವರಿಸಿದ್ದಾರೆ.

ತುಳಸಿ ವೇಣುಗೋಪಾಲ ಅವರ `ಸಮಗ್ರ ಕತೆಗಳು’ ಸಂಕಲನದಲ್ಲಿ ಇಪ್ಪತ್ತು ಕತೆಗಳಿವೆ. ಈ ಕಥೆಗಳು ಕನ್ನಡದ ಕಥನಗಾರಿಕೆಯನ್ನು ವಿಸ್ತರಿವೆ. ಬದುಕನ್ನು ಸೂಕ್ಷ್ಮ ನೋಟದಿಂದ ನೋಡುವ ಈ ಕತೆಗಳು ಮನಸ್ಸಿಗಿಳಿಯುತ್ತವೆ. ಓದುಗನ ಅಂತರಂಗವನ್ನು ಕಲುಕಿ, `ಗಂಡುತನದ’ ಚಹರೆಯನ್ನು ನಿಕಷಕ್ಕೊಡ್ಡಿಕೊಳ್ಳುವಂತೆ ಮಾಡತ್ತವೆ. ಪುರುಷನ ಒಳಗಿರುವ ಯಜಮಾನಕಿಯ ಸ್ವರೂಪವನ್ನು ತೀಕ್ಷ್ಣವಾಗಿ ಶೋಧಿಸುತ್ತವೆ. ಗಂಡಾಳಿಕೆಯ ದರ್ಪದಲ್ಲಿರುವ ಮನಸ್ಸುಗಳ ವಿಕಾರಗಳನ್ನು ಯಾವ ಸೈದ್ದಾಂತಿಕ ಭಾರವಿಲ್ಲದೆ ಸಹಜವಾಗಿ ತೆರದಿಡುತ್ತವೆ. ಮನುಷ್ಯ ಸಂಬಂಧಗಳಲ್ಲಿರುವ ಆಳದ ಹಿಂಸೆಯನ್ನು ತಣ್ಣಗೆ ಅಬ್ಬರವಿಲ್ಲದೆ ಕಟ್ಟಿಕೊಡುತ್ತವೆ. ಮನುಷ್ಯನ ಕಾಮ. ಪ್ರೇಮ, ಸಂಬಂಧ, ಕುಟುಂಬ, ಸಮಾಜ, ನಗರದ ಬದುಕಿನ ವಿನ್ಯಾಸವನ್ನು ಇವರ ಕತೆಗಳು ಅನ್ವೇಷಿಸುತ್ತಾ ಹೋಗುತ್ತವೆ. ಮಹಿಳೆಯ ತಪ್ತ ಮನಸ್ಸನ್ನು ಅನಾವರಣಗೊಳಿಸುತ್ತಾ, ಗಂಡಸಿನ ದಂದುಗವನ್ನು ನಿರೂಪಿಸುತ್ತವೆ. ವೈಚಾರಿಕ ನೆಲೆಯಲ್ಲಿ ಹೆಣ್ಣಿನ ಪ್ರತಿರೋಧದ ಮನಸ್ಸನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಈ ಕತೆಗಳನ್ನು ಓದುವುದೆಂದರೆ ನಮ್ಮ ಅಂತರಂಗದೊಂದಿಗೆ ಸಂವಾದಿಸಿ, ಮಾನವೀಯ ಸೆಲೆಯೊಂದು ಹೃದಯದಲ್ಲಿ ಹರಿಯುತ್ತದೆ. ಈ ಕತೆಗಳ ಭಾಷೆಯು ಅನುಭವದೊಂದಿಗೆ ಸಂಯೋಗಗೊಂಡು ಹೊಸ ಜೀವಲಯವೊಂದನ್ನು ಸೃಷ್ಟಿಯಾಗುತ್ತದೆ. ಗಟ್ಟಿ ಕಥನ ಕುಸುರಿಯಿಂದ ಸಂದ್ರವಾದ ಜೀವನಾನುಭವ ಈ ಕತೆಗಳಲ್ಲಿ ಮೈ ಪಡೆಯುತ್ತದೆ.

ತುಳಸಿ ವೇಣುಗೋಪಾಲ ಅವರು ದಕ್ಷಿಣ ಕನ್ನಡದಿಂದ ಮುಂಬೈಗೆ ಹೋಗಿ ವಾಸ ಮಾಡಿದವರು. ಮುಂಬೈ ಜೀವನದ ಸಂಕೀರ್ಣತೆಯನ್ನು ಬಲ್ಲವರು. ಅಲ್ಲಿಯ ಪಲ್ಲಟಗಳು, ವೈಯ್ದಾಟಗಳು, ವೈರುದ್ಯಗಳು, ಮುಖವಾಡಗಳು, ಜೀವನ ಪ್ರೀತಿಯನ್ನು ಕಂಡುಂಡವರು. ಮುಂಬೈಯಿಯ ಅವಸರದ ಬದುಕು, ಆ ಬದುಕಿಗೆ ಹೊಂದಿಕೊಂಡು ಬದುಕುವ ಬಿಕ್ಕಟ್ಟುಗಳು, ಅಲ್ಲಿಯ ನಿರುದ್ಯೋಗ, ವಸತಿ ಮುಂತಾದ ಸಮಸ್ಯೆಗಳು ಕತೆಗಳಲ್ಲಿ ಉಸಿರು ಪಡೆದಿವೆ. ಹೃದ್ಯವಾದ ಗದ್ಯ, ಕಾವ್ಯಮಯ ಶೈಲಿ, ಪಾತ್ರಗಳ ಸಂಯಮ ನಿರೂಪಣೆ, ವಿಶಿಷ್ಟ ವಸ್ತುವಿನ ಆಯ್ಕೆಯಿಂದ ಓದುಗನ ಮನಸ್ಸನ್ನು ಆವರಿಸಿಕೊಂಡು ಕಾಡುತ್ತವೆ. ಅಲ್ಲಿಯ ಬದುಕಿನ ವಿನ್ಯಾಸವನ್ನು ಹೆಣ್ತನದ ನೆಲೆಯಲ್ಲಿ ನೋಡುತ್ತವೆ. ತಮ್ಮ ಬಾಲ್ಯದ ಬೇರುಗಳೊಂದಿಗೆ ಮುಂಬೈಯಿಯ ವಾಸ್ತವವನ್ನು ಬೆಸೆಯುವ ಕಥನ ಕೌಶಲವನ್ನು ಇವರ ಕಥೆಗಳು ಸಾಧಿಸಿವೆ.

ಮಹಿಳೆಯ ಅಂತರಂಗದ ಬವಣೆ, ಕ್ಷೋಭೆ, ಒತ್ತಡ, ತಪ್ತಸ್ಥಿತಿ, ನೋವು, ವಿಷಾದದ ವಿಯೋಗ ಅವರ ಕಥೆಗಳಲ್ಲಿ ಕಾಣುತ್ತೇವೆ. ಬಹುತೇಕ ಕಥೆಗಳು ಹೊರಗಿನ ಪ್ರಪಂಚದೊಂದಿಗೆ ಮುಖಾಮುಖಿಯಾಗುವದಕ್ಕಿಂತ ತಮ್ಮ ಕೇಂದ್ರದೊಳಗೆ ನಡೆಯುತ್ತವೆ. ಅವು ಸ್ವ ಅನುಭವದ ನೆಲೆಯಲ್ಲಿ ಮುನ್ನಡೆಯುತ್ತವೆ. ಅಲ್ಲಿ `ಸ್ತ್ರೀಪ್ರಜ್ಞೆ’ ಯೊಂದು ಜಾಗೃತವಾಗಿರುವದನ್ನು ಗಮನಿಸಬೇಕು. ಸಂಸಾರ ಸುಗಮವಾಗಿ ನಡೆದಿದೆ ಎಂದಾಗ ಗಂಡು ಹಿಣ್ಣಿನ ನಡುವೆ ಉಂಟಾಗುವ ಬಿರುಕುಗಳು, ಆ ಬಿರಿಕಿನಲ್ಲಿ ಅಸಾಹಯಕಳಾಗುವ ಮಹಿಳೆ, ಅದನ್ನು ತುಂಬಲು ಪಡುವ ಬವಣೆಗಳು ಬಹಳ ಸೂಕ್ಷ್ಮವಾಗಿ ಮನಸ್ಸಿಗಿರುಯುತ್ತವೆ. ಹೊಂದಾಣಿಕೆಯಿಂದ ಸಂಸಾರದಲ್ಲಿ ಬದುಕಿದ ಮಹಿಳೆ ಆ ಹೊಂದಾಣಿಕೆಯೇ ತನಗೆ ವಿರುದ್ದವಾದದ್ದು ಅನಿಸಲು ಆರಂಭವಾಗುತ್ತದೆ. ವಾಸ್ತವವೆಂಧರೆ ಮತ್ತೆ ಹೊಂದಾಣಿಕೆಯಿಂದ ಸಂಸಾರದ ಭಾರದಲ್ಲಿ ನಲುಗುವುದು. ಅದು ಪುರುಷನ ಮನೋಭಾವವನ್ನು ಬದಲಾಯಿಸಲಾರದ ವ್ಯಥೆಯಲ್ಲಿ ಜೀವನವನ್ನು ಮುನ್ನೆಡಿಸುವುದು. ಕೆಲವು ಸಾರಿ ಈ ಗಂಡು ಹೆಣ್ಣಿನ ಬಿಕ್ಕಟ್ಟುಗಳು ಭಾಷೆಯ ಆವರಣಕ್ಕೆ ದಕ್ಕದಷ್ಟೂ ಸೂಕ್ಷ್ಮವಾಗಿ ಕತೆಗಳಲ್ಲಿ ಒಡಮೂಡಿವೆ.

`ಮುಂಜಾವಿಗೆ ಕಾದವಳು’ ಕತೆಯಲ್ಲಿ `ಇನ್ನೇನು ತಾನು ಅತ್ತು ಬಿಡಬಹುದು ಎಂದು ಅಂದುಕೊಳ್ಳುತ್ತಾ ಅವಳು ಕಣ್ಣು ಮುಚ್ಚಿದಳು. ತನಗೇನು ಬೇಕಾಗಿದೆ? ಅದನ್ನು ಪ್ರಕಟಿಸಲು ತನ್ನಲ್ಲಿ ಶಬ್ದಗಳಿಲ್ಲ. ಅಕ್ಷರಗಳಿಲ್ಲ. ತನ್ನ ಆಕಾಂಕ್ಷೆಗೆ ಅರ್ಥ ಸಿಗುವವರೆಗೆ, ಅಕ್ಷರ ಸಿಗುವವರೆಗೆ ಹೋರಾಟ ಸಾಗಬಹುದು. ಇಂದಿನ ಮಟ್ಟಿಗೆ ಆತ ತನಗಾಗಿ ಸೋತು ಬಂದದ್ದು, ತನ್ನ ಚಿಕ್ಕ ಜಯವಾಗಿರಬಹದು. ಇಂತಹ ಚಿಕ್ಕ ಪುಟ್ಟ ಗೆಲವುಗಳಿಂದ ಆತ ತನಗೆ ಸಮೀಪವಾಗಬಹುದು. ಇಂದಲ್ಲಾ ನಾಳೆ ಅಲ್ಲ. ವರ್ಷಗಳು ಕಳೆದು ಹೋಗಬಹುದು. ತಾವಿಬ್ಬರು ಕಾಲದೊಂದಿಗೆ ಮರೆಯಾಗಬಹುದು. ನನ್ನ ಪ್ರತೀಕವಾಗಿ ಉಳಿಯುವ ಹೆಣ್ಣುಗಳೇ, ನಿರಭ್ರ ಆಕಾಶದಲ್ಲಿ ಹಾರಾಡುವ ಪುಟ್ಟ ಹಕ್ಕಿಯ ಸ್ವಾತಂತ್ರ್ಯದ ಆನಂದವನ್ನು ನೀವು ಅನುಭವಿಸಿರಿ. ಆದರೆ ಬಹಳ ಮೇಲಕ್ಕೇರಬೇಡಿ. ರೆಕ್ಕೆ ಸುಟ್ಟು ಮತ್ತೆ ಬಂಧಿತರಾದರೆ, ನನ್ನಂತೆ ಬದುಕಿ ಸತ್ತ ಸ್ತ್ರೀಯರ ಆತ್ಮ ಕಣ್ಣೀರಿಟ್ಟಿತು.’ ಎಂದು ಸುಶೀಲಾ ಹೇಳುವ ಮಾತುಗಳು ತುಳಸಿಯವರ ಕತೆಗಳ ಧ್ವನಿಯನ್ನು ಸೂಚಿಸುತ್ತದೆ. ಮಹಿಳೆಯ ಅಸ್ತಿತ್ವ ಕೇವಲ ಗಂಡನ ಅಧೀನದಲ್ಲಿದೆಯೇ ಎಂಬ ವೈಚಾರಿಕ ಪ್ರಶ್ನೆಯನ್ನು ಇಲ್ಲಿಯ ಅನೇಕ ಕಥೆಗಳು ಎತ್ತುತ್ತವೆ. ಈ ಪ್ರಶ್ನೆ ವಾಚ್ಯವಾಗಿ ಬರುವುದಿಲ್ಲ. ಕತೆಯ ಎಳೆಯೊಳಗೆ ಸೇರಿಕೊಂಡು ಹೊಸ ಧ್ವನಿಯನ್ನು ಹೊರಡಿಸುತ್ತವೆ.

ಮದ್ಯಮ ವರ್ಗದ ಮಹಿಳೆಯ ಸ್ವರೂಪವನ್ನು ಶಕ್ತವಾಗಿ ಇವರ ಕಥೆಗಳು ಹಿಡಿದುಡಿತ್ತವೆ. ಗಂಡನಿಗೆ ನಿಷ್ಠಯಿಂದ, ಕುಟುಂಬವನ್ನು ಪೊರೆಯುವದು ಹೆಣ್ತನವೆಂಬ ಪರಂಪರಾಗತ ಮೌಲ್ಯದ ನಂಬಿಕೆಯ ಸಾಮಾಜಿಕ ವಿನ್ಯಾಸವನ್ನು ಇವರ ಕಥೆಗಳು ಪರಾಮರ್ಶೆಗೆ ಒಡ್ಡುತ್ತವೆ. ವಸ್ತ್ರ, ಒಡವೆ, ಮನೆ, ಊಟ ಕೊಟ್ಟರೆ ಸಾಕು ಎಂಬ ಸಾಮಾಜಿಕ ಕ್ರಮವನ್ನು ಮಹಿಳೆ ಹೇಗೆ ಸ್ವೀಕರಿಸುತ್ತಾಳೆ ಎಂಬ ಚಿಂತನೆ ಇವರ ಕತೆಗಳಲ್ಲಿ ಕಾಣುತ್ತೇವೆ. `ಮತ್ತೇನು ಬೇಕು ನಿನಗೆ? ‘ ಎಂಬ ಸುಶೀಲಾಳ ಗಂಡನ ಪ್ರಶ್ನೆಯನ್ನು ಮಹಿಳೆಯ ಸ್ವಕೀಯ ಪ್ರಜ್ಞೆಯಲ್ಲಿ ಇಟ್ಟು ನೋಡಿದಾಗ ಗಂಡಸಿನ `ಯಜಮನಿ’ ಗೊತ್ತಾಗುತ್ತದೆ. ಇದೊಂದು ಸಹಜ ಪ್ರಕ್ರಿಯೆ ಎಂದೇ ಬಾವಿಸಲಾಗಿದೆ. ಈ ಭಾವನೆಗಳನ್ನು ಇವರ ಕತೆಗಳು ಹೆಣ್ತನದ ಒಳದನಿಯಿಂದ ನೋಡುತ್ತವೆ. `ಗೃಹಭಂಗ’, `ಪಾರ್ಟಿ’, `ಸಹಯಾತ್ರಿ’, `ಸುಳಿ’, `ನೇಪಥ್ಯ’ `ತಪ್ತರು’ ಕಥಾ ನಾಯಕಿಯೂ ಚರಿತ್ರ ಪಾತ್ರಗಳೂ’ ಕತೆಗಳು ಹೊಸ ನೋಟವನ್ನು ನೀಡುತ್ತವೆ. ಮಹಿಳೆ ಸಂಸಾರವೆಂಬ ಭವದಲ್ಲಿ ಹೊರುವ ಭಾರದ ಬವಣೆಗಳನ್ನು ನಿರೂಪಿಸುತ್ತಲೇ ತಣ್ಣನೆಯ ಸಾಮಾಜಿಕ ಕ್ರೌರ್ಯವನ್ನು ಅನಾವರಣಗೊಳಿಸುತ್ತವೆ. `ಇದು ಬೇರೆ ಕತೆ’ ವಿಭಿನ್ನವಾದ ಮನುಷ್ಯನ ಆಳದ ಶೋಷಣೆಯ ನೆಲೆಯನ್ನು ಶೋಧಿಸುತ್ತದೆ. ಮಹಿಳೆಯ ಒಳಗಿರುವ `ಯಜಮನಿ’ ಯನ್ನು ಈ ಕಟ್ಟಿಕೊಡುತ್ತದೆ. ಸಾಮಾಜಿಕ ಕ್ರೌರ್ಯವನ್ನು ಕಂಡು ಕಾಣದಂತೆ ಬದುಕುವ ಮನುಷ್ಯನ ಸ್ವಭಾವವನ್ನು ಕುರಿತು ಈ

ಕತೆ ಗಂಭೀರವಾಗಿ ಚಿಂತಿಸುತ್ತದೆ. `ಪಾರ್ಟಿ’ ಕತೆಯು ಆಧುನಿಕ ಬದುಕಿನ ಹುಸಿ ಜೀವನವನ್ನು ನಿರೂಪಿಸುತ್ತದೆ. ದೊಡ್ಡಸ್ತಿಕೆಯನ್ನು ಮೆರೆಸಲು ಮಹಿಳೆಯನ್ನು ಒಳಗು ಮಾಡಿಕೊಳ್ಳುವ ಪ್ರಕ್ರಿಯೆ ಚಿತ್ರಿತವಾಗಿದೆ. ಗಂಡನ ವಿಲಾಸವನ್ನು ಪ್ರದರ್ಶಿಸಲು ಹೆಂಡತಿ ತನ್ನ ಅಸ್ತಿತ್ವನ್ನು ಕಳೆದುಕೊಳ್ಳುವ ಮನೋಭಾವನ್ನು ಕತೆಯಲ್ಲಿ ಸೂಕ್ಷ್ಮವಾಗಿ ಮುಡಿ ಬಂದಿದೆ. `ಋತು’ ಕತೆ ವಿಬಿನ್ನವಾದುದು. ಕೆಳವರ್ಗಗಳ ಸಹಜ ಜೀವನದ ಸುಂದರತೆ, ಹಣವಂತರ ಹೃದಯಹೀನತೆ ಅಸಹಜ ಬದುಕನ್ನು ನಿರೂಪಿಸುತ್ತದೆ. ಜೀವನದ ಸುಖ ಹಣದಲ್ಲಿದೆಯೋ ಪ್ರೀತಿಯಲ್ಲಿದೆಯೋ ಎಂಬ ಸತ್ಯವನ್ನು ಶೋಧಿಸುತ್ತದೆ.

`ಆವಿಷ್ಕಾರ’, `ಸ್ಕ್ಯಾಪಿ’, `ಹೊಂಚು’,`ಲವ್ ಆಲ್’, ` ಭಂಗಾರ್ ಬಾಬಾ ವಂಡರ್ ಲ್ಯಂಡ್,’ `ಆಕಾಶ ಬಾಣ’ ಕತೆಗಳು ಮುಂಬೈ ನಗರದ ಧಾವಂತ ಬದುಕಿನ ಕರಾಳತೆಯನ್ನು ಕಟ್ಟಿಕೊಡುತ್ತವೆ. ಮನುಷ್ಯ ನಗರದ ಬದುಕಿಗೆ ಹೊಂದಿಕೊಂಡು ಅದರ ಲಯಕ್ಕೆ ಒಳಗಾಗಿ, ತನ್ನತನವನ್ನು ಕಳದುಕೊಳ್ಳುವ ವಿಷಾದವನ್ನು ಈ ಕಥೆಗಳು ನಿರೂಪಿಸುತ್ತವೆ. ಅದರಲ್ಲೂ ಹಳ್ಳಿಯಿಂದ ದುಡಿಯಲು ನಗರಕ್ಕೆ ಬರುವವರ ಬವಣೆಯನ್ನು `ಹೊಂಚು’ ಕತೆಯಲ್ಲಿ ಮನಮಿಡಿಯುವಂತೆ ಚಿತ್ರಿಸಲಾಗಿದೆ.

ತುಳಸಿ ವೇಣುಗೋಪಾಲ ಅವರ ಈ ಕಥೆಗಳು ಕನ್ನಡ ಕಥನ ಜಗತ್ತಿಗೆ ಹೊಸ ಬನಿಯನ್ನು ತಂದಿವೆ. ಭಾಷೆ, ನಿರೂಪಣೆ, ಕಥನ ಶೈಲಿ, ಬದುಕಿನ ನೋಟ, ಚಿಂತನೆಯಲ್ಲಿ ಇವು ಹೊಸತನವನ್ನು ಮೂಡಿಸಿವೆ. ಮುಖ್ಯವಾಗಿ `ಹೆಣ್ತನದ’ ಮನೋಭಾವವನ್ನು ಅವರ ದುಃಖ-ದುಮ್ಮಾನ, ಹೋರಾಟ, ಅಸಹಾಯಕತೆ, ಮರುಕ, ಉತ್ಸಾಹ, ಸ್ವಂತದ ಸ್ವಾವಲಂಬನೆಯ ನೆಲೆಯಲ್ಲಿ ಶಕ್ತವಾಗಿ ಕಟ್ಟಿಕೊಡುತ್ತವೆ.

ಈ ಅಂಕಣದ ಹಿಂದಿನ ಬರಹಗಳು:
ಡಾ. ಪೂವಪ್ಪ ಕಣಿಯೂರು ಸಂಶೋಧನೆಗಳು: ಜಾನಪದೀಯ ಬಹು ಪ್ರಮಾಣಗಳ ಆಖ್ಯಾನ
ಡಾ. ಮಲ್ಲಿಕಾ ಘಂಟಿ ಕಾವ್ಯ: ಪುರುಷ ಪ್ರಮಾಣಗಳ ಭಂಜನ

ಡಾ. ಚೇತನ ಸೋಮೇಶ್ವರ ಕವಿತೆ `ಹೊಸ ನುಡಿಗಟ್ಟಿನ ಲಯಗಳು'
ಮನುಷ್ಯನ ವೈರುಧ್ಯಗಳನ್ನೆಲ್ಲ ಹೇಳುವ ಲಂಕೇಶರ ಕವಿತೆಗಳು

 

MORE NEWS

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...

ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

01-12-2024 ಬೆಂಗಳೂರು

"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...

‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ

27-11-2024 ಬೆಂಗಳೂರು

"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...