ಗ್ರಾಮ ಚರಿತ್ರೆಗೊಂದು ಕೈಗನ್ನಡಿ


"ಇತಿಹಾಸ ರಚನೆಗೆ ಶಾಸನಗಳು ಪ್ರಧಾನ ಆಕರಗಳು. ಆರಂಭದಲ್ಲಿ ರಾಜನ ಆಜ್ಞೆಗೆ ಸೀಮಿತವಾಗಿದ್ದ ಇವು ಕ್ರಮೇಣವಾಗಿ ದಾನ, ವೀರ, ತ್ಯಾಗ, ಬಲಿದಾನಗಳ ಮಾಹಿತಿಗೂ ಬಳಕೆಯಾದವು. ಇವುಗಳ ಒಟ್ಟು ಅಧ್ಯಯನದ ಮೂಲಕ ಕರ್ನಾಟಕದ ಸಾಂಸ್ಕೃತಿಕ ಜಗತ್ತನ್ನು ಕಟ್ಟಿಕೊಡಬಹುದು," ಎನ್ನುತ್ತಾರೆ ಚನ್ನಬಸವಯ್ಯ ಹಿರೇಮಠ. ಅವರು ಡಾ. ಮಹಾದೇವಪ್ಪ ನಾಗರಾಳ ಅವರ ‘ಮುದಗಲ್ಲ ಇತಿಹಾಸ ಮತ್ತು ಶಾಸನಗಳು’ ಕೃತಿಗೆ ಬರೆದ ಮುನ್ನುಡಿ.

ಇತಿಹಾಸದ ಅಧ್ಯಯನ ಇಂದು ಮಾಂಡಳಿಕ ಅರಸರನ್ನು ದಾಟಿಕೊಂಡು ಗ್ರಾಮ ಚರಿತ್ರೆಗಳತ್ತ ಹೆಜ್ಜೆ ಹಾಕಿದೆ. ಇದರಿಂದ ಅಧ್ಯಯನಕಾರ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನ್ನು ಗ್ರಹಿಸಿ ವಿಶ್ಲೇಷಿಸುವಂತಾಗಿದೆ. ಇಲ್ಲೆಲ್ಲ ಸಂಶೋಧಕ ತನ್ನ ಚಿಕಿತ್ಸಕ ಬುದ್ದಿಯೆಂಬ ಪಾತಾಳಗರಡಿಯ ಮೂಲಕ ವಿನೂತನ ಅಂಶಗಳನ್ನು ಹೆಕ್ಕಿ ತೆಗೆಯುವ ಸಾಹಸಿ ಪಟ್ಟಕ್ಕೆ ಭಾಜನನಾಗಿದ್ದಾನೆ. ಇದನ್ನು ಸೂಕ್ಷ್ಮಗ್ರಹಿಕೆಯ ಇತಿಹಾಸ(ಒiಛಿಡಿo ಟeveಟ sಣuಜಥಿ) ಎಂದು ಕರೆಯಬಹುದು. ಡಾ. ಮಹಾದೇವಪ್ಪ ನಾಗರಾಳ ಅವರು ಇಂಥ ಸಾಹಸಕ್ಕೆ ಕೈಹಾಕಿ ‘ಮುದಗಲ್ಲ ಇತಿಹಾಸ ಮತ್ತು ಶಾಸನಗಳು’ ಗ್ರಂಥವನ್ನು ಬೆಳಕಿಗೆ ತಂದಿದ್ದಾರೆ.

ಇತಿಹಾಸ ರಚನೆಗೆ ಶಾಸನಗಳು ಪ್ರಧಾನ ಆಕರಗಳು. ಆರಂಭದಲ್ಲಿ ರಾಜನ ಆಜ್ಞೆಗೆ ಸೀಮಿತವಾಗಿದ್ದ ಇವು ಕ್ರಮೇಣವಾಗಿ ದಾನ, ವೀರ, ತ್ಯಾಗ, ಬಲಿದಾನಗಳ ಮಾಹಿತಿಗೂ ಬಳಕೆಯಾದವು. ಇವುಗಳ ಒಟ್ಟು ಅಧ್ಯಯನದ ಮೂಲಕ ಕರ್ನಾಟಕದ ಸಾಂಸ್ಕೃತಿಕ ಜಗತ್ತನ್ನು ಕಟ್ಟಿಕೊಡಬಹುದು. ನಾಲ್ಕು ಅಧ್ಯಾಯಗಳಲ್ಲಿ ಬಿಚ್ಚಿಕೊಳ್ಳುವ ಈ ಗ್ರಂಥದ ಪ್ರವೇಶಿಕೆ ಭಾಗದಲ್ಲಿ ಮುದಗಲ್ಲು ಗ್ರಾಮದ ಪ್ರಾಚೀನತೆ, ಸ್ಥಳನಾಮ ವಿವೇಚನೆ, ಪ್ರಾಕೃತಿಕ ಸಂಪತ್ತು ಇತ್ಯಾದಿ ವಿವರಗಳಿವೆ. ಶಾಸನಗಳಲ್ಲಿ ಮೊದಂಗಲ್ಲು-ಮೊದಗಲ್ಲ ಎಂದು ಕಾಣಸಿಗುವ ಈ ಸ್ಥಳನಾಮ ನಿಷ್ಪತ್ತಿಯನ್ನು ಕೊಡೆಯ+ಕಲ್ಲು>ಕೊಡೇಕಲ್ಲು ಮಾದರಿಯಲ್ಲಿ ಮೊದಲ+ಕಲ್ಲು>ಮೊದಂಗಲ್ಲು> ಮೊದಗಲ್ಲು>ಮುದಗಲ್ಲು ಎಂದು ಬಿಡಿಸಿ ತೋರಿಸಬಹುದು. ಇಲ್ಲಿಂದ ಮುಂದಕ್ಕೆ ಟಾಲೆಮಿ ಹೇಳುವ ಕೊಂಕಿನಪುಲೊ (ಕೊಪ್ಪಳ) ಊರು ಸಿಗುತ್ತದೆ. ಅವನ ಪ್ರಕಾರ ಇದು ಕೊನೆಯ ಪುರ ಇರಬೇಕು. ಇಲ್ಲವೆ ಮೊದ್ದ(ಹೆಡ್ಡ/ಗಡಚು)+ ಕಲ್ಲು> ಮೊದ್ದಂಗಲ್ಲು>ಮೊದಗಲ್ಲು>ಮುದಗಲ್ಲು ಆಗಿರಬೇಕು.

ಮುದಗಲ್ಲು ಇತಿಹಾಸವನ್ನು ಮೂರು ನೆಲೆಯಲ್ಲಿ ಅಂದರೆ ಮೊದಲಘಟ್ಟ, ನಡುವಿನ ಘಟ್ಟ ಮತ್ತು ನಂತರದ ಘಟ್ಟವೆಂದು ವಿಂಗಡಿಸಿಕೊಳ್ಳುತ್ತಾರೆ. ಮುದಗಲ್ಲು ಪಟ್ಟಣ ಪ್ರಾಚೀನ ಮತ್ತು ಐತಿಹಾಸಿಕ ನಗರ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅದು ಪ್ರಾಗೈತಿಹಾಸಿಕ ನೆಲೆಯಲ್ಲ್ಲವೆಂದು ಸ್ಪಷ್ಟವಾಗಿ ಹೇಳುತ್ತಾರೆ. ಈ ಊರಿನಿಂದ 4 ಕಿ.ಮೀ. ದೂರದಲ್ಲಿ ಪಿಕಳಿಹಾಳ ಹೆಸರಿನ ಊರು ಸಿಗುತ್ತದೆ. ಅಲ್ಲಿಯ ಬೆಟ್ಟದಲ್ಲಿ ಪ್ರಾಗೈತಿಹಾಸಿಕ ಅವಶೇಷಗಳು ದೊರೆತಿವೆ. ಇವು ಮುದಗಲ್ಲು ಬೆಟ್ಟಕ್ಕೆ ಹೊಂದಿಕೊಂಡಿದ್ದರೂ ಅದನ್ನು ಪ್ರಾಗೈತಿಹಾಸಿಕ ನೆಲೆಯೆಂದು ನೋಡಬೇಕಾಗಿಲ್ಲವೆಂದು ಖಚಿತಪಡಿಸುತ್ತಾರೆ.

ರಾಯಚೂರು ಜಿಲ್ಲೆಯಲ್ಲಿ ಹಳೆಯ ಶಿಲಾಯುಗ, ನೂತನ ಶಿಲಾಯುಗ, ತಾಮ್ರ-ಕಬ್ಬಿಣಯುಗದ ಸಂಸ್ಕೃತಿ ಬೆಳೆದು ಬಂದಿದೆ. ಅವುಗಳ ಕಾಲ ಹಾಗೂ ಅಲ್ಲಿ ದೊರೆತ ವಿವಿಧ ಅವಶೇಷಗಳನ್ನು ವಿಸ್ತಾರವಾಗಿ ಕಾಣಿಸುತ್ತಾರೆ. ಇದರಿಂದ ಜಿಲ್ಲೆಯ ಒಟ್ಟು ಪ್ರಾಚೀನ ಇತಿಹಾಸವು ಕಣ್ಣು ಮುಂದೆ ಹಾದು ಹೋಗುತ್ತದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಕರ್ನಾಟಕವನ್ನು ಹಲವು ರಾಜಮನೆತನಗಳು ಆಳಿವೆ. ಮೌರ್ಯರ ಕಾಲದಲ್ಲಿ ಇದು ಧಾರ್ಮಿಕ ಆಂದೋಲದ ಭಾಗವಾಗಿ ಕಾಣಿಸಿಕೊಂಡಿದೆ. ಅಶೋಕನ ಶಾಸನಗಳಲ್ಲಿ ಕಾಣಸಿಗುವ ಆತನ ಸಾಮ್ರಾಜ್ಯದ ದಕ್ಷಿಣ ಪ್ರಾಂಥದ ರಾಜದಾನಿ ‘ಸುವರ್ಣಗಿರಿ’ ಯಾವುದು? ಎಂಬ ಪ್ರಶ್ನೆಗೆ ಇದುವರೆಗೂ ಸಮರ್ಪಕವಾದ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇಲ್ಲೆಲ್ಲ ವಿದ್ವಾಂಸರು ವಸ್ತುನಿಷ್ಟ ಮಾಹಿತಿಗಿಂತ ತಮ್ಮ ಪ್ರದೇಶದ ಅಸ್ಮಿತೆಗೆ ಆದ್ಯತೆ ನೀಡಿದ್ದು ಎದ್ದುಕಾಣುತ್ತದೆ. ಹೀಗಾಗಿ ಚಾರಿತ್ರಿಕ ಮಹತ್ವವುಳ್ಳ ನೈಜ ‘ಸುವರ್ಣಗಿರಿ’ಯನ್ನು ಗುರುತಿಸುವಲ್ಲಿ ಇಂದಿಗೂ ಸೋತಿದ್ದೇವೆ; ಮತ್ತು ಎಡವುತ್ತಲೇ ಸಾಗಿದ್ದೇವೆ.

ಅಶೋಕನ ಶಾಸನಗಳಲ್ಲಿ ಆತನ ಸಾಮ್ರಾಜ್ಯದ ದಕ್ಷಿಣ ಮೇರೆಗಳಾಗಿ ಪಾಂಡ್ಯ, ಚೋಳ, ಚೇರ ರಾಜ್ಯಗಳು ಕಾಣಸಿಗುತ್ತವೆ. ಅವು ಇಂದಿನ ತಮಿಳನಾಡು, ಕೇರಳ ರಾಜ್ಯಗಳಾಗಿದ್ದು, ಇವುಗಳಲ್ಲಿ ಕುಂತಳ/ಕರ್ನಾಟಕದ ಉಲ್ಲೇಖವೇ ಇಲ್ಲ. ಇದನ್ನು ಆಧರಿಸಿ ಕರ್ನಾಟಕವು ಆತನ ಸಾಮ್ರಾಜ್ಯದ ಭಾಗವಾಗಿತ್ತೆಂದು ಹೇಳುತ್ತ ಬಂದಿದ್ದೇವೆ. ಇದೂ ಸಹ ಸರ್ವಸಮ್ಮತ ಅಭಿಪ್ರಾಯವೆನಿಸಿಲ್ಲ. ಅದೇನೆ ಇರಲಿ ಅಶೋಕ, ಆತನ ಅಧಿಕಾರಿಗಳು ಮತ್ತು ಬೌದ್ಧ ಭಿಕ್ಷುಗಳು ಕರ್ನಾಟಕದ ಉದ್ದಕ್ಕೂ ಸಂಚರಿಸಿದ್ದನ್ನು ಅಲ್ಲಗಳೆಯಲಾಗದು.

ಮೌರ್ಯರ ನಂತರ ಕರ್ನಾಟಕವನ್ನು ಆಳಿದ ಶಾತವಾಹನ, ಕದಂಬ, ರಾಷ್ಟçಕೂಟರ ಶಾಸನಗಳು ಮುದಗಲ್ಲು ಪರಿಸರದಲ್ಲಿ ದೊರೆತಿಲ್ಲ. ಕಲ್ಯಾಣ ಚಾಲುಕ್ಯರ ಆಳ್ವಿಕೆಯಲ್ಲಿ ಮುದಗಲ್ಲು ಎಡೆದೊರೆ ನಾಡಿನ ಭಾಗವಾಗಿತ್ತು. ಚಾಲುಕ್ಯ 5ನೆಯ ವಿಕ್ರಮಾದಿತ್ಯನ ಕೆಳಗೆ 2ನೆಯ ಜಯಸಿಂಹ ಈ ಪ್ರದೇಶವನ್ನು ಆಳುತ್ತಿದ್ದುದು ಮಸ್ಕಿ, ನವಿಲೆ ಮೊದಲಾದ ಶಾಸನಗಳಿಂದ ತಿಳಿಯುತ್ತದೆ. ಇನ್ನೂ ಮುಂದಕ್ಕೆ ಸೇವುಣರು, ಕುಮ್ಮಟದ ನಾಯಕರು ಇದನ್ನು ಆಳಿದರು. ವಿಜಯನಗರ ಮತ್ತು ಬಹುಮನಿ/ಆದಿಲ್‌ಶಾಹಿ ಕಾಲದ ಇತಿಹಾಸವನ್ನು ನಡುವಿನ ಕಾಲಘಟ್ಟದಲ್ಲಿ ಅಡಕಗೊಳಿಸಿದ್ದಾರೆ. ಮೊಘಲರು ಮತ್ತು ಅವರ ಉತ್ತರಾಧಿಕಾರಿಗಳಾಗಿ ಬಂದ ಹೈದ್ರಾಬಾದ್ ನಿಜಾಮರ ಆಳ್ವಿಕೆಯನ್ನು ನಂತರದ ಕಾಲಘಟ್ಟವೆಂದು ವಿಭಜಿಸಿದ್ದಾರೆ.

ಕೃಷ್ಣ-ತುಂಗಭದ್ರ ನದಿಗಳ ನಡುವೆ ಹರಡಿಕೊಂಡಿದ್ದ ‘ಎಡೆದೊರೆನಾಡು’ ಫಲವತ್ತತೆ ಹಾಗೂ ಸಮೃದ್ಧಿಗೆ ಹೆಸರಾಗಿತ್ತು. ಈ ಪ್ರದೇಶದ ಮೇಲೆ ತಮ್ಮ ಹಕ್ಕನ್ನು ಪ್ರತಿಷ್ಠಾಪಿಸಲು ಹೊಯ್ಸಳರು, ಕಾಕತೀಯರು ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ವಿಜಯನಗರ/ಕರ್ನಾಟಕ ಸಾಮ್ರಾಜ್ಯ-ಬಹುಮನಿ/ಆದಿಲ್‌ಶಾಹಿಗಳ ಕಾಲದಲ್ಲಿ ಇದು ತುರೀಯ ಅವಸ್ಥೆಗೆ ಮುಟ್ಟಿತು. ಆಗ ಮುದಗಲ್ಲು ಈ ಎರಡೂ ಸಾಮ್ರಾಜ್ಯಗಳ ಗಡಿ ಪ್ರದೇಶವಾಗಿ ಮಾರ್ಪಟ್ಟಿತು. ಇದನ್ನು ಕೈವಶಮಾಡಿಕೊಳ್ಳಲು ಇಬ್ಬರೂ ನಿರಂತರವಾಗಿ ಹೋರಾಡಿದರು. ವಿಜಯಲಕ್ಷ್ಮಿ ಒಮ್ಮೆ ವಿಜಯನಗರಕ್ಕೂ ಮತ್ತೊಮ್ಮೆ ಬಹುಮನಿ/ಆದಿಲ್‌ಶಾಹಿಗಳತ್ತ ವಾಲುತ್ತಿದ್ದಿತು. ಈ ಕಾಲದ ಅನೇಕ ಶಾಸನಗಳು ಕೋಟೆಯ ಭಿತ್ತಿಯ ಮೇಲೆ ದಾಖಲಾಗಿವೆ.

ಕ್ರಿ.ಶ 2ನೆಯ ಶತಮಾನದಿಂದಲೂ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದ ಮುದಗಲ್ಲು ಪಟ್ಟಣ ಚಾಲುಕ್ಯ 2ನೆಯ ಸೋಮೇಶ್ವರನ ಕಾಲದಲ್ಲಿ ಅಗ್ರಹಾರವಾಗಿ ಮಾರ್ಪಟ್ಟಿತು. ಈ ಅವಧಿಯಲ್ಲಿ ಕದಂಬ ವಂಶದ ಒಂದು ಶಾಖೆಯು ಕರಡಕಲ್ಲು-300 ಉಪವಿಭಾಗವನ್ನು ಆಳುತ್ತಿದ್ದಿತು. ಸೇವುಣರ ಕಾಲಕ್ಕೆ ಇದರ ಮುಖ್ಯಪಟ್ಟಣ ಮುದಗಲ್ಲಿಗೆ ಸ್ಥಳಾಂತರವಾಯಿತು. ಇದರಿಂದ ಈ ಪಟ್ಟಣದ ಅಗ್ಗಳಿಕೆ ಇನ್ನಷ್ಟು ಹಿಗ್ಗಿತು. ಬಹಳಷ್ಟು ವಿದ್ವಾಂಸರು ಊಹಿಸಿರುವಂತೆ ಅಗ್ರಹಾರಗಳು ಶಿಕ್ಷಣ ಕೇಂದ್ರಗಳಾಗಿರಲಿಲ್ಲ. ಅಲ್ಲಿ ವಿದ್ಯಾವಂತ ಸೋಮಯಾಜಿಗಳು ಹಾಗೂ ಇತರ ಬ್ರಾಹ್ಮಣರು ವೇದ ಮಂತ್ರ ಪಠಣ, ಹೋಮ, ಹವನ ಇತ್ಯಾದಿ ವೈದಿಕ ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿದ್ದರು. ಇವರು ವಾಸವಾಗಿದ್ದ ಓಣಿಯನ್ನು ‘ಬ್ರಹ್ಮಪುರಿ’ಗಳೆಂದು ಕರೆಯುತ್ತಿದ್ದರು. ವಾಸ್ತವದಲ್ಲಿ ದೇವಾಲಯಕ್ಕೆ ಹೊಂದಿಕೊಂಡಂತಿದ್ದ ಮಠಗಳು ಮಾತ್ರ ಶಿಕ್ಷಣ ಕೇಂದ್ರಗಳಾಗಿದ್ದವು.

ಮೂರನೆಯ ಭಾಗವು ಮುದಗಲ್ಲು ಶಾಸನಗಳ ಅಧ್ಯಯನಕ್ಕೆ ಮೀಸಲಾಗಿದೆ. ಇಲ್ಲಿ ಕನ್ನಡ, ಸಂಸ್ಕೃತ, ತೆಲುಗು, ಪರ್ಷಿಯನ್, ಅರೇಬಿಕ್, ಗುಜರಾತಿ ಭಾಷೆಗೆ ಸೇರಿದ 99 ಶಾಸನಗಳು ದೊರೆತಿವೆ. ಶಾಸನಗಳ ಆರಂಭದ ಶ್ಲೋಕ/ವಸ್ತುವಿಷಯವನ್ನು ಆಧರಿಸಿ ಇವುಗಳನ್ನು ಜೈನ, ವೈಷ್ಣವ, ಶೈವ ಎಂದು ವರ್ಗಿಕರಿಸಬಹುದು.

ದಾನ ಸಂದರ್ಭದಲ್ಲಿ ಭೂಮಿಯ ಮೇರೆ, ಅದರ ಗಾತ್ರ(ವಿಸ್ತೀರ್ಣ), ಮಣ್ಣಿನ ಬಗೆ(ಕೆಂಪು, ಕರಿ), ಅಳತೆಯ ಸಾಧನ(ಕೋಲು ಇತ್ಯಾದಿ); ಕೆರೆ, ಬಾವಿಗಳ ನಿರ್ಮಾಣ; ವಿದ್ಯಾಭ್ಯಾಸ, ವಿದ್ಯಾರ್ಥಿ, ಉಪಾಧ್ಯಾಯ; ಪೂಜೆ-ಪುನಸ್ಕಾರ ಇತ್ಯಾದಿಗಳಿಗೆ ನೀಡಿದ ದತ್ತಿಯ ವಿವರ ಸಿಗುತ್ತವೆ. ಇದಲ್ಲದೆ ಅಂದು ಬಳಕೆಯಲ್ಲಿದ್ದ ನಾಣ್ಯಗಳು, ಆಹಾರ ವಸ್ತುಗಳು; ಬ್ರಾಹ್ಮಣ, ವೈಶ್ಯ, ಸೆಟ್ಟಿ, ಬಣಂಜಿಗ, ಗಾಣಿಗ, ಅಕ್ಕಸಾಲಿ, ಸಿಂಪಿಗ, ನಾವಿಂದ ಮೊದಲಾದ ಜಾತಿಗಳು; ಗೋತ್ರ(ಕಪಿಲ), ಶಾಖೆ(ವೈದಿಕರ ರುಕ್) ಮುಂತಾದವು ತುಂಬಿ ನಿಂತಿವೆ. ಇವು ನಮ್ಮ ಸಂಸ್ಕೃತಿಯ ಭಾಗ ಎಂಬುದನ್ನು ಡಾ. ಮಹಾದೇವ ಅವರು ಬಿಡಿಸಿ ತೋರಿಸಿದ್ದಾರೆ.

ನಾಲ್ಕನೆಯ ಭಾಗದಲ್ಲಿ ಆಡಳಿತ, ಅಧಿಕಾರಿಗಳು, ಧಾರ್ಮಿಕ-ಆರ್ಥಿಕ-ಸಾಮಾಜಿಕ-ಶೈಕ್ಷಣಿಕ ವ್ಯವಸ್ಥೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದಾರೆ. ವಿಸ್ತಾರವಾದ ಸಾಮ್ರಾಜ್ಯವನ್ನು ಚಕ್ರವರ್ತಿಗಳು ಆಡಳಿತದ ಅನುಕೂಲಕ್ಕಾಗಿ ವಿವಿಧ ಉಪವಿಭಾಗಗಳಾಗಿ ವಿಂಗಡಿಸಿದ್ದರು. ಮುದಗಲ್ಲು ಪಟ್ಟಣ ಎಡೆದೊರೆ ನಾಡಿನ ಕರಡಿಕಲ್ಲು ಉಪವಿಭಾಗದಲ್ಲಿ ಸೇರಿತ್ತು. ಚಕ್ರವರ್ತಿ, ಮಾಂಡಳಿಕ/ಸಾಮಂತ, ಗಾವುಂಡ, ದೇಸಾಯಿ-ದೇಶಮುಖ-ಮಾಮಲೇದಾರ-ನಾಯಕ ಮೊದಲಾದವರು ಆಳುವ ವರ್ಗದಲ್ಲಿ; ಮಂತ್ರಿ, ದಂಡನಾಯಕ, ಪೆರ್ಗಡೆ, ಕುಲಕರ್ಣಿ, ಹವಾಲ್ದಾರ, ತಳವಾರ, ಫೌಜದಾರ ಮುಂತಾದವರು ಅಧಿಕಾರಿ ವರ್ಗದಲ್ಲಿ ಸೇರಿದ್ದಾರೆ. ಈ ಎರಡೂ ಸಂದರ್ಭದಲ್ಲಿ ಶಾಸನಗಳು ಅವರನ್ನು ‘ಆಳುತ್ತಿದ್ದ’ರೆಂದು ಹೇಳಿವೆ. ಒಬ್ಬರು ಒಡೆಯರಾಗಿ ಆಳಿದರೆ ಮತ್ತೊಬ್ಬರು ತಮ್ಮ ಹುದ್ದೆಯಿಂದ ಆಳುತ್ತಿದ್ದರು. ಅಧಿಕಾರಿ ವರ್ಗದಲ್ಲಿ ಕೇಂದ್ರ ಮತ್ತು ಪ್ರಾಂತೀಯ ಎಂಬ ಎರಡು ವರ್ಗಗಳಿದ್ದವು. ಹೀಗೆ ಉದ್ದಕ್ಕೂ ಜೋಡು ವ್ಯವಸ್ಥೆ(ಆಳ್ವಿಕೆ/ಆಡಳಿತ) ಜಾರಿಯಲ್ಲಿದ್ದಿತು. ವಿಜಯನಗರದ ಕಾಲದಲ್ಲಿ ಆಡಳಿತ ಕೇಂದ್ರಗಳನ್ನು ‘ಸೀಮೆ’ ಎಂದು ಕರೆದರು. ಉದಾ: ಮುದಗಲ್ಲು ಸೀಮೆ, ಮಸ್ಕಿ ಸೀಮೆ ಇತ್ಯಾದಿ. ಆದಿಲ್‌ಶಾಹಿ/ನಿಜಾಮರ ಆಳ್ವಿಕೆಯಲ್ಲಿ ಮಾಮಲಾ, ದೇಸಗತಿ, ಪರಗಣ ಇತ್ಯಾದಿ ಬಳಕೆಗೆ ಬಂದವು.

ಸುಭದ್ರ ಅರ್ಥವ್ಯವಸ್ಥೆಗೆ ಸಂಪನ್ಮೂಲದ ಕ್ರೋಡೀಕರಣವೆ ಮುಖ್ಯವಾಗಿತ್ತು. ರಾಜಕೇಂದ್ರಿತ ಈ ವ್ಯವಸ್ಥೆಯಲ್ಲಿ ಕೃಷಿ(ಪ್ರಕೃತಿ), ವೃತ್ತಿ(ವ್ಯವಹಾರ) ತೆರಿಗೆಗಳು ಪ್ರಧಾನವಾಗಿದ್ದವು. ಮುದಗಲ್ಲು ಪಟ್ಟಣದಲ್ಲಿ ನಖರ(ನಗರ) ಹೆಸರಿನ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇವರೊಂದಿಗೆ ಬಣಂಜಿಗ, ಸೆಟ್ಟಿ, ಮುಮ್ಮುರಿದಂಡ, ದೇಸಿ, ನಾನಾದೇಸಿಗಳು ವ್ಯಾಪಾರದಲ್ಲಿ ತೊಡಗಿದ್ದರು.

ಅಶೋಕನ ಶಾಸನಗಳಲ್ಲಿರುವ ಮಾಹಿತಿ ಏನನ್ನು ಸೂಚಿಸುತ್ತದೆ? ಎಂಬುದು ಇಂದಿಗೂ ಒಗಟಾಗಿ ಉಳಿದಿದೆ. ಅವು ಬೌದ್ಧ ಧರ್ಮದ ತತ್ವಗಳಿಂದ ಕೂಡಿವೆ ಎಂದು ವಿದ್ವಾಂಸರು ಹೇಳಿದ್ದಾರೆ. ವಾಸ್ತವದಲ್ಲಿ ಅಲ್ಲಿರುವುದು ಚಕ್ರವರ್ತಿ ಅಶೋಕನ ಧಾರ್ಮಿಕ ಚಿಂತನೆಗಳು. ತಾನು ಬುದ್ಧನ ಚಿಂತನೆಗಳಿಂದ ಪ್ರಭಾವಿತನಾದೆನೆಂದು ಸ್ಪಷ್ಟವಾಗಿ ದಾಖಲಿಸಿದ್ದಾನೆ. ಕ್ರಿ.ಶ. 7ನೆಯ ಶತಮಾನದ ವೇಳೆಗೆ ಕೊಪ್ಪಳ ಪರಿಸರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಬೌದ್ಧ ಭಿಕ್ಷುಗಳು ಇದ್ದರೆಂದು ಹುಯೆನ್‌ತ್ಸಾಂಗ್ ಹೇಳುತ್ತಾನೆ. ಇದು ಮುದಗಲ್ಲು ಪರಿಸರಕ್ಕೂ ಅನ್ವಯಿಸುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮುದಗಲ್ಲು ಅಗ್ರಹಾರದಲ್ಲಿ ಮೂರು ನೂರು ಮಹಾಜನಗಳಿದ್ದ ಸಂಗತಿ ಶಾಸನದಲ್ಲಿದೆ. ಇಲ್ಲಿ ಇಸ್ಲಾಂ, ಕ್ರೈಸ್ತ ಧರ್ಮಗಳೂ ಕ್ರಮೇಣವಾಗಿ ಕಾಣಿಸಿಕೊಂಡವು.

ಒಟ್ಟಿನಲ್ಲಿ ಮುದಗಲ್ಲು ಪಟ್ಟಣದ ಸಮಗ್ರ ಇತಿಹಾಸ ಹಾಗೂ ಸಂಸ್ಕೃತಿಯನ್ನು ಡಾ. ಮಹಾದೇವಪ್ಪ ನಾಗರಾಳ ಅವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದು ಗ್ರಾಮದ ಚರಿತ್ರೆಯನ್ನು ಶಾಸನಗಳನ್ನು ಪ್ರಧಾನವಾಗಿ ಇಟ್ಟುಕೊಂಡು ಹೇಗೆ ಕಟ್ಟಿಕೊಡಬೇಕು ಎಂಬುದುಕ್ಕೆ ಇದು ಮಾದರಿಯಾಗಿದೆ. ಅವರಿಂದ ಇಂಥ ಇನ್ನಷ್ಟು ಉತ್ತಮ ಕೃತಿಗಳು ಬೆಳಕು ಕಾಣಲಿ ಎಂದು ಹಾರೈಸುತ್ತೇನೆ.

- ಡಾ. ಚನ್ನಬಸವಯ್ಯ ಹಿರೇಮಠ

MORE FEATURES

ಜಗತ್ತಿನ ಶ್ರೇಷ್ಟ ಕಾದಂಬರಿಗಳ ಪಟ್ಟಿಗೆ ಸೇರೋ ಕೃತಿಯಿದು

26-12-2024 ಬೆಂಗಳೂರು

“ಜಗತ್ತಿನ ಶ್ರೇಷ್ಠ ಕಾದಂಬರಿಳ ಪಟ್ಟಿಗೆ ಸೇರೋ ಈ ಕಾದಂಬರಿಯ ಅನುವಾದ ಸರಾಗವಾಗಿ ಓದಿಸಿಕೊಂಡು ಹೋದರೂ ಅಲ್ಲಲ್ಲಿ ಹಂ...

ತೇಜಸ್ವಿ ಸಾಹಿತ್ಯವು ವಿಶ್ವದ ಅಗ್ರಮಾನ್ಯ ಸಾಹಿತ್ಯ

26-12-2024 ಬೆಂಗಳೂರು

“ತೇಜಸ್ವಿ ಸಾಹಿತ್ಯವನ್ನು ಮೆಚ್ಚುಗೆ, ಟೀಕೆ ಮತ್ತು ವಿಶ್ಲೇಷಣೆಗೆ ಈಡು ಮಾಡಿದ, ಸಮಾಜಮುಖಿಯಲ್ಲಿ ಪ್ರಕಟವಾದ ಆಯ್ದ ...

ನಾನು ಎಂದೋ ಬರೆದು ಮರೆಯುತ್ತಿರುವ ಕಾಲಂ..

26-12-2024 ಬೆಂಗಳೂರು

“ನಾನು ಎಂದೋ ಬರೆದು ಮರೆಯುತ್ತಿರುವ ಕಾಲಂ. ಇಂದೂ ಕೂಡ ನನ್ನ ಬೆನ್ನು ಹತ್ತಿರುವ ಕಾರಣಕ್ಕೆ, ಕೆಲವು ಉತ್ತಮವಾದ ಕಂತ...