ತೇಜಸ್ವಿ ಸಾಹಿತ್ಯವು ವಿಶ್ವದ ಅಗ್ರಮಾನ್ಯ ಸಾಹಿತ್ಯ


“ತೇಜಸ್ವಿ ಸಾಹಿತ್ಯವನ್ನು ಮೆಚ್ಚುಗೆ, ಟೀಕೆ ಮತ್ತು ವಿಶ್ಲೇಷಣೆಗೆ ಈಡು ಮಾಡಿದ, ಸಮಾಜಮುಖಿಯಲ್ಲಿ ಪ್ರಕಟವಾದ ಆಯ್ದ ಲೇಖನಗಳ ಸಂಕಲನವೇ ಈ ಕೃತಿ,” ಎನ್ನುತ್ತಾರೆ ಚಂದ್ರಕಾಂತ ವಡ್ಡು ಅವರು ತಮ್ಮ “ವಿಸ್ಮಯ ವಿಮರ್ಶೆ” ಪುಸ್ತಕಕ್ಕೆ ಬರೆದ ಸಂಪಾದಕರ ಮಾತು.

ತೇಜಸ್ವಿ ಸಾಹಿತ್ಯವನ್ನು ಇದುವರೆಗಿನ ಕನ್ನಡ ಸಾಹಿತ್ಯ ಪ್ರಕಾರದ ಯಾವುದೇ ಒಂದು ವರ್ಗಕ್ಕೆ ಸೇರಿಸುವುದು ಕಷ್ಟಸಾಧ್ಯವಾಗಿದೆ. ಇದಕ್ಕಾಗಿಯೇ ಏನೋ, ತೇಜಸ್ವಿ ಸಾಹಿತ್ಯವನ್ನು 'ವಿಸ್ಮಯಕಾರಿ' ಸಾಹಿತ್ಯವೆಂಬ ಹೊಸ ಪ್ರಕಾರ-ವರ್ಗಕ್ಕೆ ತೇಜಸ್ವಿ ಅಭಿಮಾನಿಗಳು ಸೇರಿಸಿಬಿಟ್ಟಿದ್ದಾರೆ. ತೇಜಸ್ವಿ ಸಾಹಿತ್ಯವು ವಿಶ್ವದ ಅಗ್ರಮಾನ್ಯ ಸಾಹಿತ್ಯ ಪ್ರಕಾರವೆಂದೂ, ಕುವೆಂಪು ಸಾಹಿತ್ಯ ಕೊಡುಗೆಗೆ ಸರಿಸಮವೆಂದೂ ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ತೇಜಸ್ವಿ ಬದುಕು ಬರೆಹಗಳು ಪಲಾಯನವಾದವೆಂದೂ, ದೈನಂದಿನ ಬದುಕು ಬವಣೆಗಳಿಗೆ ನಿರುತ್ತರವೆಂದೂ, ಕೇವಲ ಅರಣ್ಯರೋದನ ವೆಂದೂ, ಸ್ವಾನುಭವಕ್ಕೆ ಸೀಮಿತವೆಂದೂ ಹಾಗೂ ಪರಿಣಾಮ ಫಲಿತಾಂಶ ಶೂನ್ಯವೆಂದೂ ಗೊಣಗುವವರ ಸಂಖ್ಯೆಯೂ ಸಾಕಷ್ಟಿದೆ.

ಸಾಹಿತಿಯೊಬ್ಬನನ್ನು ವಿಮರ್ಶೆಯ ಮೂಸೆಗೆ ಹಾಗೂ ಟೀಕೆಗಳ ಒರೆಗಲ್ಲಿಗೆ ಹಚ್ಚುವವರೆಗೆ ಆತನ ಸಾಹಿತ್ಯದ ಶ್ರೇಷ್ಠತೆ ಸಿದ್ಧವಾಗುವುದಿಲ್ಲ. ಆತನ ಸಾಹಿತ್ಯಕೃಷಿಯ ಆಳ-ಅಗಲಗಳು ಅನಾವರಣಗೊಳ್ಳುವುದಿಲ್ಲ. ಹಾಗೆಯೇ ಇತಿಮತಿಗಳ ಮಧ್ಯೆಯೂ ಆತನ ಸಾಹಿತ್ಯದ ವಿಶಿಷ್ಟತೆ, ಸಾರ್ವಕಾಲಿಕತೆ ಹಾಗೂ ಸೌಂದರ್ಯ ಒಪ್ಪುಗೂಡುವುದಿಲ್ಲ.

ಹೀಗೆಂದು ಪ್ರಬಲವಾಗಿ ನಂಬಿದ ಸಮಾಜಮುಖಿ ಮಾಸಪತ್ರಿಕೆಯು ಸತತ ಮೂರು ಸಂಚಿಕೆಗಳಲ್ಲಿ ಸರಣಿ ಲೇಖನಗಳನ್ನು ಪ್ರಕಟಿಸುವ ಮೂಲಕ ತೇಜಸ್ವಿ ಸಾಹಿತ್ಯಕೃಷಿಯನ್ನು ವಸ್ತುನಿಷ್ಠವಾಗಿ ಅವಲೋಕಿಸುವ ಅನನ್ಯ ಪ್ರಯತ್ನ ಮಾಡಿತು. ತೇಜಸ್ವಿ ಸಾಹಿತ್ಯವನ್ನು ಮೆಚ್ಚುಗೆ, ಟೀಕೆ ಮತ್ತು ವಿಶ್ಲೇಷಣೆಗೆ ಈಡು ಮಾಡಿದ, ಸಮಾಜಮುಖಿಯಲ್ಲಿ ಪ್ರಕಟವಾದ ಆಯ್ದ ಲೇಖನಗಳ ಸಂಕಲನವೇ ಈ ಕೃತಿ.

ಪತ್ರಿಕೆ ರೂಪಿಸುವಾಗಿನ ಸಮಯದ ಗಡಿರೇಖೆಯನ್ನು ಸಾಮಾನ್ಯವಾಗಿ ಡೆಡ್‌ಲೈನ್ ಎಂಬ ಭಯ ಹುಟ್ಟಿಸುವ ಪದದಿಂದ ಗುರುತಿಸಲಾಗುತ್ತದೆ. ನಿಯತಕಾಲಿಕೆಯ ಸಂಪಾದಕ ಈ ಡೆಡ್‌ಲೈನ್ ಒತ್ತಡದ ಒಂದು ಭಾಗವನ್ನು ಲೇಖಕರೊಂದಿಗೆ ಹಂಚಿಕೊಳ್ಳುವುದು ಸಹಜ ಮತ್ತು ಅನಿವಾರ್ಯ. ಅಂತೆಯೇ ತೇಜಸ್ವಿ ಸಾಹಿತ್ಯ ಕುರಿತ ಸಂಚಿಕೆಗಳನ್ನು ರೂಪಿಸುವಾಗ ಲೇಖಕರು ನಾನು ವರ್ಗಾಯಿಸಿದ ಒತ್ತಡವನ್ನು 'ವಿನಂತಿಯಿಂದ ಆಗ್ರಹದ ತನಕ ಸಹಿಸಿಕೊಂಡಿದ್ದಾರೆ. ಅವರ ಪ್ರೀತಿಗೆ, ಸಜ್ಜನಿಕೆಗೆ, ಸಹಕಾರಕ್ಕೆ ಕೃತಜ್ಞತೆಗಳು. ಸಮಾಜಮುಖಿ ಬಳಗದ ಆಶಯ ಮತ್ತು ನಡಿಗೆಗೆ ಬೆಂಗಾವಲಾಗಿರುವ ನಾಡುನುಡಿ ಚಿಂತಕ ಜಯರಾಮ್ ರಾಯಪುರ ಅವರಿಗೆ ಶರಣು.

- ಚಂದ್ರಕಾಂತ ವಡ್ಡು

MORE FEATURES

ಜಗತ್ತಿನ ಶ್ರೇಷ್ಟ ಕಾದಂಬರಿಗಳ ಪಟ್ಟಿಗೆ ಸೇರೋ ಕೃತಿಯಿದು

26-12-2024 ಬೆಂಗಳೂರು

“ಜಗತ್ತಿನ ಶ್ರೇಷ್ಠ ಕಾದಂಬರಿಳ ಪಟ್ಟಿಗೆ ಸೇರೋ ಈ ಕಾದಂಬರಿಯ ಅನುವಾದ ಸರಾಗವಾಗಿ ಓದಿಸಿಕೊಂಡು ಹೋದರೂ ಅಲ್ಲಲ್ಲಿ ಹಂ...

ನಾನು ಎಂದೋ ಬರೆದು ಮರೆಯುತ್ತಿರುವ ಕಾಲಂ..

26-12-2024 ಬೆಂಗಳೂರು

“ನಾನು ಎಂದೋ ಬರೆದು ಮರೆಯುತ್ತಿರುವ ಕಾಲಂ. ಇಂದೂ ಕೂಡ ನನ್ನ ಬೆನ್ನು ಹತ್ತಿರುವ ಕಾರಣಕ್ಕೆ, ಕೆಲವು ಉತ್ತಮವಾದ ಕಂತ...

ಎಲ್ಲವನ್ನೂ ಮೀರಿ ನಿಂತ ಒಂದು ಸುಂದರ ನಿರೂಪಣೆಯುಳ್ಳ ಅನುಭವ ಕಥನವಿದು..

25-12-2024 ಬೆಂಗಳೂರು

""ಒಂದು ಪುರಾತನ ನೆಲದಲ್ಲಿ" ಪ್ರವಾಸ ಕಥನದ ರೂಪದಲ್ಲಿರುವ ಒಂದು ಮಿಶ್ರ ತಳಿಯ ಇತಿಹಾಸ. ಇದು ಈಜಿಪ್ಟ್ ಸ...