‘ಗೆಳೆಯರಿರಲಿ ಕಡೆತನಕ, ಗೆಳೆಯರಿರಲಿ ಬಾಳಿನಲ್ಲಿ’ ಎನ್ನುವುದು ಲಕ್ಷ್ಮಣರಾವ್ ಅವರ ಸಿದ್ಧಾಂತ; ನರಹಳ್ಳಿ

Date: 31-12-1899

Location: ಬೆಂಗಳೂರು


ಬೆಂಗಳೂರು: ಸಿವಿಜಿ ಪಬ್ಲಿಕೇಷನ್ಸ್, ಹರಿವು ಬುಕ್ಸ್ ಮತ್ತು ಸುಗಮ ಸಂಗೀತ ಪರಿಷತ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಬಿಆರೆಲ್-78’ ಅಭಿನಂದನೆ, ಪುಸ್ತಕ ಲೋಕಾರ್ಪಣೆ ಮತ್ತು ಗೀತ ಗೌರವ ಸಮಾರಂಭವು 2024 ಸೆ. 15 ಭಾನುವಾರದಂದು ನಗರದ ಸಿ.ಅಶ್ವತ್ಥ್ ಕಲಾಭವನದಲ್ಲಿ ನಡೆಯಿತು.

ಸಮಾರಂಭದಲ್ಲಿ ಸಿವಿಜಿ ಪಬ್ಲಿಕೇಷನ್ಸ್ ನಿಂದ ಪ್ರಕಟಗೊಂಡ ಬಿ.ಆರ್. ಲಕ್ಷ್ಮಣರಾವ್ ಅವರ ‘ಬಿಡದ ಬುವಿಯ ಮಾಯೆ’ ಈವರೆಗಿನ ಕವಿತೆಗಳು, ಕೆ. ಸತ್ಯನಾರಾಯಣ ಅವರ ‘ವರ್ಣಪಟಲ’ ಬಿಆರೆಲ್ ಸಾಹಿತ್ಯಾವಲೋಕನ, ಹರಿವು ಬುಕ್ಸ್ ನಿಂದ ಪ್ರಕಟಗೊಂಡ ಬಿ.ಆರ್. ಲಕ್ಷ್ಮಣರಾವ್ ಅವರ ‘ಮೂರು ನಗೆ ನಾಟಕಗಳು’ ನಾಟಕ ಸಂಕಲನ, ಸುಮತಿ ಕೃಷ್ಣಮೂರ್ತಿ ಅವರ ಕವನ ಸಂಕಲನ ‘ವೈಶಾಖದ ಮಳೆ’ ಕೃತಿಗಳು ಲೋಕಾರ್ಪಣೆಗೊಂಡವು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಮಾತನಾಡಿ, "ನನ್ನ ಲಕ್ಷ್ಮಣರಾವ್ ಸ್ನೇಹ ಐವತ್ತು ವರ್ಷಗಳ ಒಡನಾಟ. ನಮ್ಮ ಕಾಲದಲ್ಲಿ ಇಷ್ಟು ಸುದೀರ್ಘವಾದ ಸ್ನೇಹವನ್ನು ಕಾಪಾಡಿಕೊಂಡು ಬಂದಿರುವುದು ಸರಳವಾದ ಸಂಗತಿಯಲ್ಲ. ಗೆಳೆಯರಿರಲಿ ಕಡೆತನಕ, ಗೆಳೆಯರಿರಲಿ ಬಾಳಿನಲ್ಲಿ ಎನ್ನುವುದು ಲಕ್ಷ್ಮಣರಾವ್ ಅವರ ಸಿದ್ಧಾಂತವಾಗಿದೆ. ಬಹುಶಃ ನಮ್ಮ ಕಾಲದಲ್ಲಿ ಗೆಳೆತನಕ್ಕೆ, ಸ್ನೇಹಕ್ಕೆ ಒಂದು ಮೌಲ್ಯವನ್ನು ಕಲ್ಪಿಸಿದವರು ಲಕ್ಷ್ಮಣರಾವ್. ಮೌಲ್ಯಗಳ ಅಧಃಪತನದ ಕಾಲದಲ್ಲಿ ಇಂದು ನಾವಿದ್ದೇವೆ. ಇಂತಹ ಹೊತ್ತಲ್ಲಿ ಗೆಳೆತನವನ್ನ, ಸ್ನೇಹವನ್ನ ಒಂದು ಮೌಲ್ಯವಾಗಿ ಪರಿಚಯ ಹಾಗೂ ಸಾಬೀತು ಮಾಡಿದ್ದಾರೆ. ಮಾನವ ಸಂಬಂಧಗಳು ಶಿಥಿಲವಾಗುವ ಹೊತ್ತಲ್ಲಿ ಗೆಳೆತನವನ್ನ ಹೇಗೆ ಒಂದು ಮೌಲ್ಯವಾಗಿ ಕಾಪಾಡಿಕೊಂಡು ಬಂದಿದ್ದಾರೆ ಎನ್ನುವುದು ಮುಖ್ಯವಾದ ಸಂಗತಿ," ಎಂದು ಲಕ್ಷ್ಮಣರಾವ್ ಹಾಗೂ ತಮ್ಮ ಒಡನಾಟದ ಬಗ್ಗೆ ಹಂಚಿಕೊಂಡರು.

"ಲಕ್ಷ್ಮಣರಾವ್ ಅವರನ್ನು ಸಮಗ್ರವಾಗಿ ಗ್ರಹಿಸುವ ಪ್ರಯತ್ನವನ್ನು ನಾವು ಮಾಡಬೇಕು. ಆಗ ಬಹುಶಃ ನಮ್ಮ ಅರಿವಿನ ವಿಸ್ತಾರ ಜಾಸ್ತಿಯಾಗುತ್ತದೆ, ನಮ್ಮ ತಿಳುವಳಿಕೆ ಜಾಸ್ತಿಯಾಗುತ್ತದೆ. ನಮ್ಮ ವ್ಯಕ್ತಿತ್ವಕ್ಕೆ ಹೊಸ ಹೊಸ ಅಂಶಗಳು ಸೇರಿಕೊಳ್ಳುತ್ತಾ ಹೋಗುತ್ತದೆ. ಲಕ್ಷ್ಮಣ ರಾವ್ ಅವರ ಸಮಗ್ರ ಸಾಹಿತ್ಯ ನಮಗೆ ಓದಲು ಸಾಧ್ಯವಾಯಿತು ಅಂದರೆ, ನಮ್ಮ ವ್ಯಕ್ತಿತ್ವಕ್ಕೆ ಕೆಲವು ಇತ್ಯಾತ್ಮಕ ಅಂಶಗಳು ಸೇರಲು ಸಾಧ್ಯವಾಗುತ್ತದೆ. ಹಾಗೆಯೇ ಅವರ ಕಾವ್ಯದ ಓದಿನಿಂದ ನಾನು ಶ್ರೀಮಂತನಾಗಿದ್ದೇನೆ. ಕೆಲವು ವಿಚಾರಗಳನ್ನು ಪಡೆದುಕೊಂಡು ನನ್ನ ವ್ಯಕ್ತಿತ್ವವನ್ನು ಶ್ರೀಮಂತಗೊಳಿಸಿದ್ದೇನೆ," ಎಂದು ತಿಳಿಸಿದರು.

ವಿಮರ್ಶಕ ಎಚ್.ಎಸ್. ಸತ್ಯನಾರಾಯಣ ಅವರು ಮಾತನಾಡಿ, "ಬಿ.ಆರ್. ಲಕ್ಷ್ಮಣರಾವ್ ಅವರ ವಯಸ್ಸು ಹೆಚ್ಚಾಗುತ್ತಿದ್ದಂತೆ ಅವರ ಪುಸ್ತಕದ ಗಾತ್ರವೂ ಕೂಡ ಹೆಚ್ಚಾಗುತ್ತಿರುವುದು ಸಂತಸದ ಸಂಗತಿ. ಒಬ್ಬ ಕವಿಯನ್ನು ಅವನ ಎಲ್ಲಾ ಪ್ರಯೋಗಗಳ ಜೊತೆಗೆ ನೋಡುವ ಮನಸ್ಥಿತಿ ಕುವೆಂಪು ಅವರ ಕಾಲದಲ್ಲಿ ಇತ್ತು. ಅದು ಮಾಸ್ತಿ, ಪುತಿನ ಅವರ ವಿಚಾರದಲ್ಲಿಯೂ ನಿಜವಾಗಿದೆ. ಆದರೆ ನಂತರದಲ್ಲಿ ಬರು ಬರುತ್ತಾ ಕಂಬಾರ ಮತ್ತು ಲಂಕೇಶರ ವಿಚಾರದಲ್ಲಿ ಅವರ ಕತೆಗಳು ಮತ್ತು ನಾಟಕಗಳನ್ನು ಒಟ್ಟೊಟ್ಟಿಗೆ ಚರ್ಚೆ ಮಾಡುವಂತಹ ಒಂದು ಸಂದರ್ಭವನ್ನು ನೋಡುತ್ತಾ ಬಂದಿದ್ದೇವೆ. ಆ ಮೇಲೆ ಕವಿಯ ಬೇರೆ ಬೇರೆ ಪ್ರಕಾರಗಳನ್ನು ಅವರ ಬಹಳ ಮುಖ್ಯವಾದ ಮಾಧ್ಯಮದ ಜೊತೆಗೆ ಇಟ್ಟುಕೊಂಡು ಚರ್ಚೆ ಮಾಡುವಂತಹ ಒಂದು ದಾರಿ ಇವತ್ತು ನಮಗೆ ಕಾಣುತ್ತಿಲ್ಲವೇನೋ. ಇನ್ನು ಕವಿ ಒಬ್ಬ ನಾಟಕಕಾರ ಕೂಡ ಆಗಿದ್ದಾಗ, ಅದರ ಲಾಭ ನಾಟಕಕ್ಕೆ ಹೆಚ್ಚು ಅನ್ನುವುದು ನನಗೆ ಬಿ.ಆರ್. ಲಕ್ಷ್ಮಣರಾವ್ ಅವರ ನಾಟಕಗಳನ್ನು ಓದುವಾಗ ಅನ್ನಿಸಿತು. ಅವರು ನಾಟಕರಂಗದ ಈ ಕೃತಿ ನಿಜಕ್ಕೂ ಬಹಳ ವಿಚಾರಧಾರೆಗಳಿಂದ ಕೂಡಿದೆ," ಎಂದು ತಿಳಿಸಿದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಅವರು ಮಾತನಾಡಿ, "ಬದುಕಿನ ಹಲವು ನಿಗೂಢತೆಗಳ ಕುರಿತು ಸುಮತಿ ಕೃಷ್ಣಮೂರ್ತಿ ಅವರು ತಮ್ಮ ಕವನಗಳಲ್ಲಿ ಮಾತನಾಡುತ್ತಾರೆ. ನನ್ನ ಮನಸ್ಸಿಗೆ ವಿರುದ್ಧವಾಗಿ ನಾನು ಬದುಕುತ್ತಿದ್ದೇನೆ, ಹೇಳಿದ್ದನ್ನೇ ಹೇಳುತ್ತಿದ್ದೇನೆ, ನಟಿಸುತ್ತಿದ್ದೇನೆ ಅನ್ನುವಂತಹ ಆಲೋಚನೆಗಳು ಕೂಡ ಬರುವುದಕ್ಕೆ ಆರಂಭವಾಗುತ್ತವೆ ಎನ್ನುವ ವಿಚಾರಗಳನ್ನು ಇಲ್ಲಿ ಭಿನ್ನವಾಗಿ ದಾಖಲಿಸಿದ್ದಾರೆ. ಕಟು ಸತ್ಯಗಳನ್ನು ಹೇಳುವಂತಹ ಆಸೆ, ಆದರೆ ಅದನ್ನು ನೇರವಾಗಿ ಹೇಳಲು ಆಗದಂತಹ ಪರಿಸ್ಥಿತಿ ಕವಯಿತ್ರಿಯದ್ದು, ಆದರೆ ಅಂತಹ ಸಂದರ್ಭದಲ್ಲಿ ಕವಯಿತ್ರಿ ಭಾವನೆಗಳ ಮೂಲಕ ವಿಚಾರವನ್ನು ವಿಭಿನ್ನವಾಗಿ ತಿಳಿಸಿದ್ದಾರೆ. ಮಹಿಳಾ ಕಾವ್ಯದ ಸೊಗಡು ಬಹಳಷ್ಟು ವಿಭಿನ್ನವಾಗಿ ಇಲ್ಲಿ ಮೂಡಿಬಂದಿದೆ," ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಅವರು ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್, ಕವಯಿತ್ರಿ ಸುಮತಿ ಕೃಷ್ಣಮೂರ್ತಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬುಕ್ ಬ್ರಹ್ಮ ಯುಟ್ಯೂಬ್ ಚಾನೆಲ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ..

MORE NEWS

ಈ ಬಾರಿಯ ದಸರಾ ಮಹೋತ್ಸವ ಉದ್ಘಾಟಕರಾಗಿ ಸಾಹಿತಿ ಹಂಪ ನಾಗರಾಜಯ್ಯ ಆಯ್ಕೆ

20-09-2024 ಬೆಂಗಳೂರು

ಮೈಸೂರು: ನಾಡಿನ ಪ್ರಸಿದ್ಧ ಹಿರಿಯ ಸಾಹಿತಿ, ಸಂಶೋಧಕ ಹಂಪ ನಾಗರಾಜಯ್ಯ ಅವರು ಈ ಬಾರಿ ಮೈಸೂರು ದಸರಾವನ್ನು ಉದ್ಘಾಟಿಸಲಿದ್ದ...

ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುವ ಮೂರು ದಿನಗಳ ಕಮ್ಮಟ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

19-09-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೋಟಗೋಡಿ, ಹಾವೇರಿ ಜಿಲ್ಲೆ ಇವರ ಸಹಯೋಗದಲ್ಲ...

ದಲಿತ ಬಂಡಾಯದ ಜೊತೆಗೆ ಮಹಿಳಾ ಎಂದು ಸೇರಿಸಬೇಕು; ಲಲಿತಾ ಸಿದ್ಧಬಸವಯ್ಯ

19-09-2024 ಬೆಂಗಳೂರು

ಬೆಂಗಳೂರು: ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಕನ್ನಡ ಸಂಘದ ಸುವರ್ಣ ಮಹೋತ್ಸವ 2024ರ ಅಂಗವಾಗಿ ಏರ್ಪಡಿಸಿದ್ದ ಎರಡು ದಿನಗಳ ...