Date: 19-09-2024
Location: ಬೆಂಗಳೂರು
ಬೆಂಗಳೂರು: ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಕನ್ನಡ ಸಂಘದ ಸುವರ್ಣ ಮಹೋತ್ಸವ 2024ರ ಅಂಗವಾಗಿ ಏರ್ಪಡಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣವು 2024 ಸೆ.18 ಮತ್ತು 19ರಂದು ಕ್ರೈಸ್ಟ್ ಕಾಲೇಜಿನ ಆವರಣದಲ್ಲಿ ನಡೆಯಿತು.
ಮೊದಲ ದಿನದ ವಿಚಾರ ಸಂಕಿರಣದಲ್ಲಿ ಹಿರಿಯರಾದ: ರಾಜೇಂದ್ರ ಚೆನ್ನಿ, ರಘುನಾಥ್ ಚ ಹ, ನಿತ್ಯಾನಂದ ಶೆಟ್ಟಿ- ಬದಲಾದ ಸಾಹಿತ್ಯ ಸ್ವರೂಪದ ಬಗ್ಗೆ, ನವಮಾಧ್ಯಮಗಳ ಪ್ರಭಾವದ ಬಗ್ಗೆ, ಲಲಿತಾ ಸಿದ್ಧಬಸವಯ್ಯ, ಕವಿತಾ ರೈ ಕಾವ್ಯದ ನೆಲೆಗಳು, ಕಾವ್ಯದ ಹೊಸ ತಾತ್ವಿಕತೆ ಬಗ್ಗೆ, ಕೆ ಸತ್ಯನಾರಾಯಣ, ಸುರೇಶ ನಾಗಲಮಡಿಕೆ- ಈಚಿನ ಕತೆ, ಕಾದಂಬರಿ ವಸ್ತು, ವೈವಿದ್ಯ, ಆಶಯಗಳ ಬಗ್ಗೆ ವಿಷಯ ಮಂಡಿಸಿದರು.
ದಿನದ ಯಾವ ಗಳಿಗೆಯಲ್ಲೂ ಅನವಶ್ಯಕ, ಕಾಲಹರಣ, ಅದದೇ ಮಾತು - ಮುಂತಾದವಕ್ಕೆ ಆಸ್ಪದವಿರಲಿಲ್ಲ. ವೇದಿಕೆ ಮೇಲಿದ್ದವರೂ ವಿಷಯ ಪರಿಣತರೇ, ಕೆಳಗಿದ್ದವರೂ ಪರಿಣತರೇ ಆಗಿದ್ದರಿಂದ ನಾನು ಸುಮ್ಮನೆ ಮಂತ್ರಮುಗ್ಧನಾಗಿ ಕೇಳಿಸಿಕೊಳುವುದಷ್ಟೇ ಕಾಯಕವಾಗಿತ್ತು. ಸೆಶನ್ಗಳು ಅಷ್ಟು ವಿಷಯದಟ್ಟವಾಗಿತ್ತು.
ಆ ಕುರಿತ ಸಣ್ಣ ಸಮ್ಮರಿ ಇಲ್ಲಿದೆ.
ನಿತ್ಯಾನಂದ ಶೆಟ್ಟಿ: ಆಧುನಿಕ ಸಾಹಿತ್ಯ ಲೋಕ ವಿಘಟನೆಗೊಂಡಿದೆ. ಇಲ್ಲಿ ಬರುವ ಸಾಹಿತ್ಯದಲ್ಲಿಯೂ ದರ್ಶನ ಕಾಣೆಯಾಗಿದೆ. 'ಚೋಮನ ದುಡಿ' ಕೇವಲ ದಲಿತನ ಕತೆಯಾಗದೆ ಭೂಮಿ ಇಲ್ಲದವರ, ಗೇಣಿ ಕಟ್ಟುವವರ ಒಟ್ಟು ಪ್ರತಿನಿಧಿಯಾಗಿತ್ತು.
ರಘುನಾಥ ಚಹ: ನವಮಾಧ್ಯಮಗಳು ಹೊಸಬರಿಗೆ ಅವಕಾಶ ಹುಟ್ಟುಹಾಕಿರುವುದು ನಿಜ. ಒಂದಷ್ಟು ಮಟ್ಟಿಗೆ ಡೆಮಾಕ್ರಟೈಜ್ ಮಾಡಿರುವುದು ನಿಜ. ಆದರೆ ಅದು ಪ್ರಚಾರ, ಖ್ಯಾತಿ, ಸ್ವಮೋಹಗಳ ಸಮಸ್ಯೆಗಳನ್ನೂ ಹುಟ್ಟುಹಾಕಿದೆ.
ರಾಜೇಂದ್ರ ಚೆನ್ನಿ: ಮೇಲಿನ ಇಬ್ಬರಿಗೂ ಸ್ವಲ್ಪ ತದ್ವಿರುದ್ಧ ಹೇಳುತ್ತೇನೆ. ಈಗಿನ ಕತೆಗಳಲ್ಲಿ ಈಗಿನ ಸಮಸ್ಯೆಗಳ ಅಥವಾ ಹಳೆ ಸಮಸ್ಯೆಗಳು ಹೊಸ ಸ್ವರೂಪದಲ್ಲಿ ಬಲವಾಗಿ ಕಾಣಿಸಿಕೊಳ್ಳುತ್ತಿವೆ.
ಕವಿತಾ ರೈ: ಇಂದು ಕಾವ್ಯವೊಂದೇ ಗಟ್ಟಿಯಾಗಿ ಸಶಕ್ತವಾಗಿ ಪ್ರಭುತ್ವದ ವಿರುದ್ಧ ದನಿಯೆತ್ತುತ್ತಿರುವುದು. ಕಳೆದ ಇಪ್ಪತ್ತು ವರುಷಗಳಿಂದ ಬರೆಯುತ್ತಿರುವ ಒಂದು ನಲವತ್ತು ಗಟ್ಟಿ ಕವಿಗಳನ್ನು ಹೆಸರಿಸಿದರು. ಎನ್ಕೆ ಹನುಮಂತಯ್ಯನವರನ್ನು ನೆನೆದರು. ಅದಕ್ಕೆ ಟಿ ಯಲ್ಲಪ್ಪ ಎಲ್ಲರೂ ಅಲ್ಲಿಗೇ ನಿಲ್ಲುತ್ತೀರಲ್ಲ ಅದರಿಂದಾಚೆ ನಾವು ನಮ್ಮಂಥವರು ಕಾಣೋದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಲಲಿತಾ ಸಿದ್ಧಬಸವಯ್ಯ: ಪ್ರಜಾಪ್ರಭುತ್ವದಿಂದ ನಮಗೆ ರಾಮರಾಜ್ಯ ಬರುತ್ತದೆ ಎಂದು ಕನಸು ಕಾಣುತ್ತಿದ್ದ ಸಮಾಜ ವೋಟ್ ಹಾಕಿದ ನಂತರ ನಿರಾಶೆ ಹೊಂದಿ ಚಳುವಳಿಗಳಿಗೆ ಇಳಿಯಿತು. ನವೋದಯ ಮಾರ್ಗ ಹುಟ್ಟಿಕೊಂಡಿತು. ಅದು ಜನರಿಂದ ಜನರಿಗಾಗಿ ಹುಟ್ಟಿ ಒಂದು ಹತ್ತು ಪರ್ಸೆಂಟ್ ಅವರ ಆಶೋತ್ತರ ಈಡೇರಿಸಿತು, ಪ್ರಗತಿಶೀಲ ಮಾರ್ಗ ಒಂದು ಐದು ಪರ್ಸೆಂಟ್ ಈಡೇರಿಸಿತು, ನವ್ಯ ಮಾರ್ಗ ಸಾಹಿತ್ಯದಿಂದ ಮರಿ ಸಾಹಿತ್ಯದಂತೆ ಹುಟ್ಟಿ ಅಲ್ಲೇ ಮುದುರಿತು. ಆನಂತರ ಬಂದ ದಲಿತ ಬಂಡಾಯ ಮತ್ತು ಮಹಿಳಾ ಮಾರ್ಗ ಹಕ್ಕೊತ್ತಾಯದಿಂದ ಹುಟ್ಟಿಕೊಂಡು ಕಾನೂನುಗಳಲ್ಲಿ ಬದಲಾವಣೆ ತಂದು ಸಾಕಷ್ಟು ಮಟ್ಟಿಗೆ ಜನರಿಗೆ ಸ್ಪಂದಿಸಿತು. ಈಗಲೂ ಅದೇ ಮಾರ್ಗ ನಡೆಯುತ್ತಿರುವುದು. ಸಾಹಿತ್ಯದ ಹಿರಿಯರು ಇದನ್ನು ಯಾವಾಗಲೂ ದಲಿತ ಬಂಡಾಯ ಎಂದು ಕರೆಯುತ್ತ ಮಹಿಳಾ ಮಾರ್ಗವನ್ನು ಕೈಬಿಡುತ್ತಾರೆ. ದಲಿತ ಬಂಡಾಯದ ಜೊತೆಗೆ ಮಹಿಳಾ ಎಂದು ಸೇರಿಸಬೇಕು ಎಂದು ಹಕ್ಕೊತ್ತಾಯ ಮಾಡಿದರು.
ಸುರೇಶ್ ನಾಗಲಮಡಿಕೆ: ಇಂದಿನ ಕತೆಗಾರರ ಕತೆಗಳನ್ನು ಪರಾಮರ್ಶಿಸಿ ಒಂದಷ್ಟು ಥೀಮ್ ಗಳನ್ನು ಪಟ್ಟಿ ಮಾಡಿದರು. ಅನಿಶ್ಚಿತತೆ, ನಗರ-ಹಳ್ಳಿ, ಉದ್ಯೋಗ ಸಮಸ್ಯೆ, ಮೌಲ್ಯಗಳ ಅವಸಾನದಿಂದ ಬದುಕಿನಲ್ಲಿ ನಿರಾಸಕ್ತಿ ಮುಂತಾಗಿ. ಕೆಲವರು ಅಮರೇಶ‌್ ನುಗಡೋಣಿ ನೆರಳಿಂದ, ಕೆಲವರು ಜಯಂತ್ ಕಾಯ್ಕಿಣಿ ನೆರಳಿಂದ ತಪ್ಪಿಸಿಕೊಳ್ಳಲಾರದೆ ಒದ್ದಾಡುವುದನ್ನು ಗಮನಕ್ಕೆ ತಂದರು.
ಕೆ ಸತ್ಯನಾರಾಯಣ: ಕಳೆದ ಇಪ್ತ್ನಾಲ್ಕು ವರುಷಗಳಲ್ಲಿ ಪೂರ್ವಸೂರಿಗಳ ಮರುಓದು ಆಗುತ್ತಿದ್ದು ಆ ಹಳೆಬರೇ ಹೊಸ ಸಾಹಿತಿಗಳಾಗಿ ಪ್ರಸ್ತುತವಾಗಿ ಕಾಣಿಸುತ್ತಿದ್ದಾರೆ. ಆಗಿನ ಕಾಲದಲ್ಲಿ ಬರೆದ ಕೃತಿಗಳ ನಡುವೆ ತಂತಾನೇ ಸಂವಾದ ಏರ್ಪಟ್ಟಿತ್ತು. ಕುವೆಂಪು ಕಾರಂತರ ಪುಸ್ತಕಗಳ ನಡುವೆ, ಕಾರಂತ-ಪುತಿನರ ಪುಸ್ತಕಗಳ ನಡುವೆ ಸಂವಾದ ಇತ್ತು. ಈಗಿನ ಸಾಹಿತ್ಯ ಪುಸ್ತಕಗಳ ನಡುವೆ ಅದಾಗುತ್ತಿದೆಯಾ ಎಂದು ವಿಮರ್ಶಕರು ಹುಡುಕಬೇಕಾಗಿದೆ.
ಅಲ್ಲಿನ ಒಂದು ಸಂವಾದಕ್ಕೆ ಇಂದ್ರಕುಮಾರ್ ಎದ್ದು 'ಈಗ ವಿಮರ್ಶೆ ಎಲ್ಲಿ ಆಗ್ತಾ ಇದೆ, ಬರೇ ತೀರ್ಪು ಕೊಡ್ತಾ ಇದಾರೆ, ಅದೂ ಅಂತಿಮ ತೀರ್ಪುಗಳ ತರಹ, ಸ್ಪರ್ಧೆಗಳ ಕಾರಣದಿಂದಾಗಿ. ಮತ್ತು ಸ್ಪರ್ಧೆಗಳಿಗಾಗಿ ಬರೆದೂ ಬರೆದೂ ಕತೆಗಳ ಕುತ್ತಿಗೆ ಹಿಸುಕುತ್ತಿದ್ದಾರೆ' ಎಂದು.
ನನಗೆ ಈಗ ಕುಳಿತು ಮೆಲುಕುತ್ತಾ ಒಟ್ಟಾರೆ ಹೀಗೆ ಅನಿಸುತ್ತಿದೆ.
ನಾವೆಲ್ಲರೂ ಒಂಥರಾ ಕಂಪ್ಲೇಂಟ್ ಮೋಡಿನಲ್ಲಿದ್ದೇವೆ. ಬೆಳಗೆದ್ದರೆ ಪ್ರತಿಯೊಬ್ಬರೂ ಯಾರ ಮೇಲಾದರೂ ಏನಾದರೂ ಒಂದು ಕಂಪ್ಲೇಂಟ್ ಬರಿತಿರ್ತಾರೆ. ಹಳಬರು ಹೊಸಬರ ಮೇಲೆ, ಹೊಸಬರು ಹಳಬರ ಮೇಲೆ. ಎಡದವರು ಬಲದವರ ಮೇಲೆ, ಬಲದವರು ಎಡದವರ ಮೇಲೆ.. ಹೆಂಗಸರು ಗಂಡಸರ ಮೇಲೆ, ಗಂಡಸರು ಹೆಂಗಸರ ಮೇಲೆ.
ಎಲ್ಲರಿಗೂ ಎದುರಿಗಿರುವವನಲ್ಲಿಯೇ ಸಮಸ್ಯೆ ಕಂಡರೆ, ತಪ್ಪು ಎನಿಸಿದರೆ, ಸರಿ ಅಂತ ಯಾರಿದಾರೆ ಇಲ್ಲಿ?
ಸಮಸ್ಯೆ ಎಲ್ಲಿ ಅದಿಕ್ಕೊಂಡಿದೆ, ಯಾರ ಜೇಬಲ್ಲಿದೆ?
ಮನುಷ್ಯನ ಮನೋಸ್ಥಿತಿ ಸೈನುಸಾಯ್ಡಲ್ ಓಡ್ತಿರುತ್ತದೆ. ಅವನಿಂದಾಗಿ ಸಮಾಜದ ಒಟ್ಟು ಮನಸು ಸಹ ಹಾಗೆ ನದಿಯಂತೆ ಅಥವಾ ಅಲೆಯಂತೆ ಏರಿಳಿಯುತ್ತಿರುತ್ತದೆ. ಪ್ರತಿ ನೂರಿನ್ನೂರು ವರುಷಗಳಿಗೆ ಸಮಾಜ ತಿರುವು ಪಡೆಯುತ್ತದೆ. ಅಗತ್ಯ ಅನಿವಾರ್ಯಗಳಿಂದಲೂ ಹೌದು ಬೇಜಾರಿಂದಲೂ ಹೌದು. ಸುಮ್ಮನೆ ಕೂತರೆ ಬೋರಾಗುತ್ತದೆ. ಸಮಾಜದಲ್ಲಿ ಎಲ್ಲವೂ ಸರಿಯಿದ್ದರೂ ಚೇಂಜ್ ಬೇಕು ಅನಿಸುತ್ತದೆ.
ವೇದಿಕ್ ಏಜಿನಲ್ಲಿ ವರ್ಣಾಶ್ರಮ ಇತ್ತು. ನಾವೆಲ್ಲ ಬೇರೆ ಬೇರೆ ಅಂತ ಮನೋಭಾವ. ಸಮಾಜ ಅಧೋಗತಿಗೆ ಇಳಿಯಿತು. ಬುದ್ಧಿಸಮ್ ಜೈನಿಸಮ್ ಬಂತು. ನಾವೆಲ್ಲರೂ ಒಂದೇ ಅಂತ. ಅದೂ ಬೇಜಾರಾಯ್ತು. ಗುಪ್ತನ ಕಾಲಕ್ಕೆ ತಿರಗ ನಾವೆಲ್ಲ ಬೇರೆ ಬೇರೆ ಅಂತ ಆಯ್ತು. ಆಗಲೇ ವರ್ಣ ಇದ್ದದ್ದು ಜಾತಿಯಾಯ್ತು ಅಂತಾರೆ. ಅದು ಸಮಸ್ಯೆಯಾಯ್ತು ಅಂತೇಳಿ ಭಕ್ತಿ ಚಳುವಳಿ ಬಂತು. ತಿರಗ ನಾವೆಲ್ಲಾ ಒಂದೇ ಅಂತ.
ಬ್ರಿಟೀಷರು ಬಂದರು. ಇಲ್ಲಪಾ ನೀವೆಲ್ಲ ಬೇರೆ ಬೇರೆ ಅಂತಾ ಮತ್ತೆ ಹಳೇದನ್ನು ನೆನಪಿಸಿದರು! ಅಂಗಂತಂತ ಹಿಂದ್ಲಿಂದ ಎಲ್ಲನೂ ದೋಚಿಬಿಟ್ಟರು. ಲಂಗೋಟಿ ಉಳಿಸಿ. ಸ್ವಾತಂತ್ರ ಹೋರಾಟಗಾರರು ಬಂದರು. ಗಾಂಧಿ, ಬೋಸ್, ಭಗತ್- ಇಲ್ಲ ಇಲ್ಲಾ ನಾವೆಲ್ಲಾ ಒಂದೇ ಅಂತ ಜನರಿಗೆ ನೆನಪಿಸಿದರು. ಒಟ್ಟಾಗಿಸಿ ಬ್ರಿಟೀಷರನ್ನು ಓಡಿಸಿದರು.
ಸ್ವಾತಂತ್ರ ಬಂತು. ಆಯ್ತಲ ಸ್ವಾತಂತ್ರ ಬಂತಲ ಇನ್ನೇನು ಅಂತೇಳಿ ತಿರಗ ನಾವೆಲ್ಲ ಬೇರೆ ಬೇರೆ ಅಂತ ಶುರುವಾಯ್ತು. ಹಿಂದೂ ಮುಸ್ಲಿಂ, ಆರ್ಯ ದ್ರಾವಿಡ, ಉತ್ತರ ದಕ್ಷಿಣ, ಜೆನರಲ್, ಒಬಿಸಿ, ಎಸ್ಸಿ ಎಸ್ಟಿ ಅಂತ. ಆಯ್ತು ಆಯ್ತು ಇಪ್ಪತ್ತನೇ ಶತಮಾನದ ಅಂತ್ಯದಷ್ಟತ್ತಿಗೆ ಮತೀಯ ಗಲಭೆಗಳಾದ್ವು. ಕ್ಯಾಸ್ಟ್ ಜಗಳಗಳಾದ್ವು. ದೇಶ ಸಹ ಬಡವಾಯ್ತು. ಗ್ಲೋಬಲೈಜೇಶನ್ ಬಂತು. ದುಡ್ ಬಂತು!
ಅರೆ ತಡೀರಿ ತಡೀರಿ, ನಾವೆಲ್ಲಾ ಒಂದೇ ಬರ್ರೀ , ಒಟ್ಗೇ ಸೇರಿ ಒಂಚೂರ್ ದುಡ್ ಮಾಡಣ ಅಂತ ಆಯ್ತು. ಕ್ಯಾಪಿಟಲಿಸಮ್ಮಿಗೆ 'ಬ್ಯಾರೆ ಬ್ಯಾರೆ' ಅನ್ನೋದು ಆಗ್ತಿರಲಿಲ್ಲ ಆಗ. ಆದ್ದರಿಂದ.
ದುಡ್ ಬಂತು. ಡಿಗ್ರಿ ಬಂತು. ಮನೆ ಕಟ್ಟಿಸಿದ್ದಾಯ್ತು. ಕಾರ್ ಬಂತು. ಫೋನ್ ಸಿಗ್ತು. ಸೊಶಿಯಲ್ ಮಿಡಿಯಾ ಬಂತು. ಹಳೇ ಫ್ರೆಂಡ್ಸು ಸಿಕ್ಕಿದ್ರು. ಹಂಗೇ ಜಗತ್ತಿನಾದ್ಯಂತ ಹಬ್ಬಿರೋ ನಮ್ಮ ಜನಾನೂ ಸಿಕ್ಕಿ ನಮ್ ತರ ತಿನ್ನೋರು ನಮ್‌ತರ ಕಾಣೊರು, ನಮ್ ತರ ಡ್ರಸ್ ಹಾಕ್ಕೊಳೋರು, ನಮ್ ತರ ಯೋಚ್ನೆ ಮಾಡೋರು... ಅರರೆ ನಮ್ಮ ತರ ಇರೋರೆಲ್ಲ ಸಿಕ್ಬಿಟ್ರಲ್ಲ ಇನ್ಯಾಕೆ ಇವರು ನಾವೆಲ್ಲಾ ಒಂದೂ ಒಂದೂ ಅನ್ನೊ ಮಂತ್ರ ಯೂಜ್ಲೆಸ್ಸು ಅಂತೇಳಿ ಈ ಆಸ್ಮಿತೆ ಅನ್ನೊದು ಎಷ್ಟೊಂದು ಚಂದ, ಎಷ್ಟೊಂದು ಸುಂದರ ಅಂತೇಳಿ ಎಲ್ಲರೂ ಒಕ್ಕೋರಲಿನಿಂದ ನಾವೆಲ್ಲ ಬೇರೆ ಬೇರೆ ಅನ್ನುವ ಮನೋಸ್ಥಿತಿಗೆ ಬಂದಿದ್ದೇವೆ. ಎ ಟು ಜಡ್. ಇದ್ರಲ್ಲಿ ನಾನಿಲ್ಲಾ ಅನ್ನಂಗಿಲ್ಲರೀ. ನೀವೆಲ್ಲ ಇದೀರಿ. ಮತ್ತೆ ಇದು ಬರೀ ಲೋಕಲ್ ಅಲ್ಲ. ಗ್ಲೋಬಲ್ ಟ್ರೆಂಡು.
ಇಷ್ಟೇ ವಾಸ್ತವ. ಇದು ಆಗತ್ತೆ. ಯಾರಿಂದಲೂ ತಡೆಯಕ್ಕಾಗಲ್ಲ. ಇದರಲ್ಲಿ ಯಾರದೂ ಸೋಲಿಲ್ಲ. ಗೆಲುವಿಲ್ಲ. ಸ್ವಲ್ಪ ಮುಂದಕ್ಕಾಕ್ಬೋದಷ್ಟೇ. ಈ ಪ್ರವಾಹಗಳನ್ನು ಒಂದಷ್ಟು ವರುಷ ಮುಂದೆ ಹಾಕಿದ ಉದಾಹರಣೆ ಇದಾವೇ ಹೊರತು ಪ್ರವಾಹವನ್ನೇ ತಡೆದ ಉದಾಹರಣೆ ಇತಿಹಾಸದಲ್ಲಿಲ್ಲ.
ಆದ್ದರಿಂದ ನಾವೆಲ್ಲ ಕಂಪ್ಲೇಂಟ್ ಮೋಡಿಂದ ಹೊರಬಂದು ಪರಸ್ಪರ ಏನಾದರೂ ಒಳ್ಳೇದು ಮಾಡಬಹುದಾ, ಜೊತೆಗೆ ನಗಬಹುದಾ, ಒಟ್ಟಿಗೆ ಪಾರ್ಟಿ ಮಾಡಬಹುದಾ.. ಈ ಥರಾ ಯೋಚಿಸಿದರೆ ಮನ್ಸಿಗೆ ಸ್ವಲ್ಪ ನೆಮ್ದಿ ಅನ್ಸುತ್ತೆ. ನಮ್ಮ ಕೈಲಿರೋದಷ್ಟೇ. ಎನರ್ಜಿ ಇದ್ದರೆ ರಸ್ತೆ ಸರಿ ಮಾಡಿಸಬಹುದು. ಪ್ರಕೃತಿ ಉಳಿಸಬಹುದು. ದುರಂತಗಳನ್ನ ಮುಂದಕ್ಕಾಕ್ಬೋದು.
- ಮಧು ವೈ.ಎನ್
`ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: ಕನ್ನಡದ ಖ್ಯಾತ ಕಾದಂಬರಿಕಾರ ವಿವೇಕ ಶಾನಭಾಗ ಅವರ `ಸಕೀನಾಳ ಮುತ್ತ...
‘ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: ಇಲ್ಲಿನ ಕಡಲ ತಡಿಯಲ್ಲಿ ನಾಳೆ ಆರಂಭವಾಗುವ ಏಷ್ಯಾದ ಅತಿದೊಡ...
’ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: ಏಷ್ಯಾದ ಅತಿ ದೊಡ್ಡ ಸಾಹಿತ್ಯೋತ್ಸವ ಎಂದೇ ಹೆಸರುವಾಸಿಯಾಗಿ...
©2025 Book Brahma Private Limited.