ಗಟ್ಟಿ-ಟೊಳ್ಳು ಸಾಹಿತ್ಯ ಮಧ್ಯೆ ಅಂತರವಿರಿಸಿ…!

Date: 13-04-2020

Location: ಬೆಂಗಳೂರು


‘ಹೊಸ ಲೇಖಕನು ಅನೇಕ ವೇಳೆ ಹಳೆಯವರು ಹೇಳಿದ ಉತ್ತಮ ವಿಷಯಗಳನ್ನು, ಮನಸ್ಸು ಹಿಡಿಯುವ ದೃಷ್ಟಾಂತಗಳನ್ನು, ಬಹು ಸಮಂಜಸವಾದ ಅಭಿಪ್ರಾಯಗಳನ್ನು ಬಿಟ್ಟುಬಿಡುತ್ತಾನೆ. ಅವುಗಳ ಬೆಲೆಯು ಅವನಿಗೆ ಕಾಣುವುದಿಲ್ಲ. ಅವು ಎಷ್ಟು ಅರ್ಥಪೂರ್ಣವಾದವು ಎಂಬುದು ಅವನ ಅನುಭವಕ್ಕೆ ಬರುವುದಿಲ್ಲ. ಅವನ ಮನಸ್ಸಿಗೆ ಹಿಡಿಯುವುದು ಅಲ್ಪವಾದುದು, ಆಳವಿಲ್ಲದುದು ಮಾತ್ರ.’

ಲೇಖಕರ ಇಂತಹ ಮನಸ್ಥಿತಿಯಿಂದ ಮೂಡಿದ ಸಾಹಿತ್ಯ ಟೊಳ್ಳಾಗಿರುತ್ತದೆ ಎಂಬುದು ತತ್ವಜ್ಞಾನಿ ಷೋಪನ್ ಹೌರ್ ಅವರ ಅಭಿಪ್ರಾಯ. (ಸಾಹಿತ್ಯದ ಜೀವಾಳ: ಷೋಪನ್ ಹೌರ್ ಬರೆದ ಪ್ರಬಂಧಗಳನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರರು ಅನುವಾದಿಸಿದ ಕೃತಿ-1942). 

ಈ ವಿಚಾರಕ್ಕೆ ಪರ-ವಿರೋಧಗಳು ವ್ಯಕ್ತವಾಗಬಹುದು. ಆದರೆ,  ಸಾಹಿತ್ಯಕ ದ್ರವ್ಯದ ಗುಣಮಟ್ಟ ಕಡಿಮೆಯಾಗುತ್ತಿರುವ ಬಗ್ಗೆ ಚರ್ಚೆಗೆ ಎತ್ತಿಕೊಂಡರೆ ಆರೋಗ್ಯಪೂರ್ಣ ವೇದಿಕೆ ಸಿದ್ಧವಾಗುತ್ತದೆ.

ಟೊಳ್ಳು ಸಾಹಿತ್ಯ ಸೃಷ್ಟಿಯ ಲೇಖಕರು ತಮ್ಮದೇ ಕೃತಿ ಶ್ರೇಷ್ಠ ಎಂಬ ಭ್ರಾಂತಿಯಲ್ಲಿರುತ್ತಾರೆ ಎಂದೂ, ಹಣದ ಅವಶ್ಯಕತೆ ಇರುವವರು ಕುಳಿತು ಬರೆಯುತ್ತಾರೆ. ಅದನ್ನು ಕೊಳ್ಳುವ ಜನರೂ ಇರುತ್ತಾರೆ. ಇದರ ಫಲ-ಭಾಷೆಯ ನಾಶ ಎಂದೂ, ಹಣ-ಗೌರವ ಎಂದೂ ಒಟ್ಟಿಗೆ ಇರದು; ಹಣಕ್ಕಾಗಿ ಬರೆಯುತ್ತಿರುವುದೇ ಸಾಹಿತ್ಯ ಇಷ್ಟೊಂದು ಹೀನಾಯ ಸ್ಥಿತಿಗೆ ತಲುಪಿದೆ ಎಂದು ಅವರು ಎಚ್ಚರಿಸುತ್ತಾರೆ. ಮಾತ್ರವಲ್ಲ; ತಾವು ಬರೆದಿದ್ದನ್ನು ಎಲ್ಲವೂ ತಿಳಿದುಕೊಂಡು ಬರೆದಿದ್ದರೆ ಅನೇಕರು ಜ್ಞಾನಿಗಳೇ ಆಗಿರುತ್ತಿದ್ದರು ಎಂದೂ ಹೇಳುತ್ತಾರೆ. 

ಈ ವಿಚಾರಕ್ಕೆ ಹಳೆಯವರೂ ಹೊರತಲ್ಲ. ಆದರೆ, ಈ ಜ್ಞಾನಿಗಳಾಗುವವರ ಸಾಲಿನಲ್ಲಿ ಹೊಸ ಲೇಖಕರ ಸಂಖ್ಯೆ ತೀರಾ ಕಡಿಮೆ ಎಂಬುದು ಇಲ್ಲಿ ಗಮನಾರ್ಹ. ಲೇಖನ ಕಲೆ-ಎಂಬ ಪ್ರಬಂಧದಲ್ಲಿ ಮಂಡಿತವಾದ ಇಂತಹ ವಿಚಾರಗಳ ಕಿಡಿಗಳಿವೆ. 

ಸಾಹಿತ್ಯದಲ್ಲಿ `ಅನುಕರಿಸು’ ಎಂದರೆ ಕದಿಯುವುದು

ಮಗುವು ಮಾತು-ವರ್ತನೆ-ಭಾವಾಭಿವ್ಯಕ್ತಿ ಹೀಗೆ ಎಲ್ಲವೂ ತಂದೆ-ತಾಯಿ-ಸುತ್ತಲಿನ ಪರಿಸರದಲ್ಲಿ ಅನುಕರಣೆಯ ಮೂಲಕವೇ ಕಲಿಯುತ್ತದೆ. ಆದರೆ, ಸಾಹಿತ್ಯದಲ್ಲಿ ‘ಅನುಕರಿಸು’ ಎಂದರೆ ಕದಿಯುವುದು ಎನ್ನುತ್ತಾನೆ-ಷೋಪನ್ ಹೌರ್. 

ಸಾಹಿತ್ಯದ ಉಸಿರು ಸೃಜನಶೀಲತೆ; ಅನುಕರಣೆಯಲ್ಲ ಎಂಬುದು ಆತನ ಗಟ್ಟಿ ಪ್ರತಿಪಾದನೆ. ಈ ಹಂತದಲ್ಲಿ ಆತನ ವಿವರಣೆ ಹೀಗಿದೆ; 1). ಯೋಚನೆ ಮಾಡದೇ ಬರೆಯುವವರು, 2).ಬರೆಯುವುದಕ್ಕಾಗಿಯೇ ಯೋಚನೆ ಮಾಡುವವರು. 3) ಬರೆಹ ಆರಂಭಕ್ಕೆ ಮುನ್ನವೇ ಯೋಚಿಸುವವರು. ಅದರಲ್ಲೂ, ಬರೆಯಬೇಕಾದ ವಿಷಯ ಕುರಿತೇ ಯೋಚಿಸುವವರ ಸಂಖ್ಯೆಯೂ ತೀರಾ ವಿರಳ. 

 ಮೊದಲನೆಯವರು-ಬೇರೆಯವರ ಆಲೋಚನೆಗಳನ್ನೇ ತಮ್ಮದಾಗಿಸಿಕೊಳ್ಳುತ್ತಾರೆ. ಹೀಗಾಗಿ ಓದುವುದು ವ್ಯರ್ಥ್ಯ. ಎರಡನೇಯವರು, ಇತರರ ಅಚ್ಚಿನಲ್ಲಿ ತಮ್ಮ ವಿಚಾರಗಳನ್ನು ಎರಕ ಹೊಯ್ಯುತ್ತಾರೆ. ಬಹುತೇಕ ವೇಳೆ, ಪಡಿಯಚ್ಚಿನಲ್ಲಿ ವಿಗ್ರಹ ಯಾವುದು ಎಂಬುದನ್ನೂ ಸಹ ಪತ್ತೆ ಹಚ್ಚಲು ಕಷ್ಟವಾಗುತ್ತದೆ ಮೂರನೇಯವರು-ಬರೆಯಬೇಕಾದ ವಿಷಯ ಕುರಿತೇ ಬರೆಯುತ್ತಾರೆ. ಇದರಲ್ಲಿ ರಾಜಿಯ ಮಾತೇ ಇಲ್ಲ. ಹಣಕ್ಕಾಗಿ ಬರೆಯುವವರಿಗೆ ಸ್ವಾರ್ಥವೇ ಮುಖ್ಯ. ತಾವು ಬರೆದಿದ್ದೆಲ್ಲವೂ ಶ್ರೇಷ್ಠ. ಅದಕ್ಕಾಗೇ, ಅವರು  ಶಾಶ್ವತ ಸತ್ಯವನ್ನು ಸುಳ್ಳು ಎಂದೂ ವಾದಿಸಲೂ ಹಿಂಜರಿಯುವುದಿಲ್ಲ. ವಿಷಯ ಪ್ರತಿಪಾದನೆಯು ಅವರಿಗೆ ಮುಖ್ಯವಲ್ಲ; ಬರೆಯುವುದಕ್ಕಾಗಿಯೇ ಬರೆಯುವವರು ಎಂಬುದು ಷೋಪನ್ ಹೌರ್ ಅವರ ನೇರ ವಿವರಣೆ.

ಕೃತಿ ಶೀರ್ಷಿಕೆಯೂ ಕದಿಯುತ್ತಾರೆ

ಪುಸ್ತಕದ ಶೀರ್ಷಿಕೆ ತಪ್ಪಾಗಿರಬಾರದು. ಅದು ತಪ್ಪು ವಿಳಾಸದ ಪತ್ರದಂತೆ ಮೂಲೆ ಸೇರುತ್ತದೆ. ಇತರರು ತಮ್ಮ ಪುಸ್ತಕಗಳಿಗೆ ಇಟ್ಟಿರುವ ಹೆಸರನ್ನೇ ಇವರೂ ಇಡುವುದು ಅತ್ಯಂತ ಕೆಟ್ಟ ಚಾಳಿ. ಇದು-ಒಂದರ್ಥದಲ್ಲಿ ಕಳವು, ಮತ್ತೊಂದರ್ಥದಲ್ಲಿ; ಲೇಖಕನಿಗೆ ಸ್ವಲ್ಪವೂ ಕಲ್ಪನಾ ಸಾಮರ್ಥ್ಯ ಇಲ್ಲದಿರುವುದು. ಇಂತಹವರೇ ಕೃತಿಯ ಶೀರ್ಷಿಕೆಯನ್ನೂ ಕದಿಯುತ್ತಾರೆ ಎನ್ನುತ್ತಾನೆ ಷೋಪನ್ ಹೌರ್. 

ಲೇಖಕರ ಈ ರೀತಿಯ ಮನಸ್ಥಿತಿಯನ್ನು ಈ ತತ್ವಜ್ಞಾನಿ ಅತ್ಯಂತ ಕಟುವಾಗಿ ಟೀಕಿಸುತ್ತಾನೆ; ‘ಯಾವ ಮನುಷ್ಯನಿಗೆ ತನ್ನ ಪುಸ್ತಕಕ್ಕೆ ಹೊಸ ಹೆಸರನ್ನು ಕಂಡು ಹಿಡಿಯುವ ಊಹಾ ಶಕ್ತಿ ಇರುವುದಿಲ್ಲವೋ ಅವನಿಗೆ ಪುಸ್ತಕಗಳನ್ನು ಬರೆಯುವ ಉತ್ಪಾದಕ ಶಕ್ತಿಯೂ ಕಡಿಮೆಯಾಗಿರುತ್ತದೆ’ ಎನ್ನುತ್ತಾನೆ. ಇಂದಿನ ಸಂಶೋಧನಾತ್ಮಕವಾದ ಬಹುತೇಕ  ಗ್ರಂಥಗಳ ಶೀರ್ಷಿಕೆಯ ಹಾಗೂ ಅಧ್ಯಯನ ರೀತಿಗಳು ಇದಕ್ಕೆ ಸಾಕ್ಷಿ ಎಂಬುದನ್ನು ತಳ್ಳಿ ಹಾಕುವಂತಿಲ್ಲ. 

ವಸ್ತು ಒಂದೇ ಇದ್ದರೂ ಹಳೆಯ ಕವಿಯಿಂದ ಕವಿಗೆ ನಿರೂಪಣಾ ಶೈಲಿ ಹಾಗೂ ದೃಷ್ಟಿಕೋನ ವಿಭಿನ್ನವಾಗಿದ್ದು ಕಾಲ-ದೇಶ ಮೀರಿಯೂ ಓದಿಸಿಕೊಳ್ಳುತ್ತದೆ. ಇಂತಹ ನಾವಿನ್ಯತೆ ಹೊಸಬರ ಸಾಹಿತ್ಯ ಸೃಷ್ಟಿಯಲ್ಲಿ ಬರುತ್ತಿಲ್ಲ. ವಿಷಯ ವಸ್ತುವಿಗಷ್ಟೇ ಜೋತು ಬೀಳುತ್ತಾರೆ. ಏಕೆಂದರೆ, ಸೃಜನಶೀಲತೆಯ ಕೊರತೆ. ಸಾಮಾನ್ಯ ಲೇಖಕರು ತಮ್ಮ ಮನಸ್ಸಿನ ಪಡಿಯಚ್ಚಿನಲ್ಲೇ ಸಾಹಿತ್ಯ ರಚಿಸುತ್ತಾರೆ. ಹೀಗಾಗಿ, ವಿಭಿನ್ನತೆ ಕಾಣದು.  ಅದೇ ಮನಸ್ಸಿನಿಂದ ವಿಭಿನ್ನ ಪಡಿಯಚ್ಚು ತಯಾರಿಸಲು ಬರುತ್ತದೆ ಎಂಬ ಚಿಂತನೆಯ ಗೋಜಿಗೇ ಹೋಗುವುದಿಲ್ಲ ಎಂಬುದು ಆತನ ವಾದ.

ಉತ್ತಮವಾದದ್ದನ್ನೂ ಕೆಡಿಸುತ್ತವೆ..!

ಉತ್ತಮ ಕೃತಿ ರಚನೆ ಅಸಾಧ್ಯವಾದರೂ ಹೊಸ ಲೇಖಕರು ಮತ್ತೀನ್ನೇನು ಮಾಡುವರು ಎಂಬ ಬಗ್ಗೆಯೂ ಷೋಪನ್ ಹೌರ್, ಹೇಳಿರುವ ಮಾತುಗಳು ವ್ಯಂಗ್ಯವಲ್ಲ; ಬದಲಾಗಿ ಅವುಗಳಲ್ಲಿ ಆಕ್ರೋಶ ತುಂಬಿದೆ ಎಂಬುದನ್ನು ಗಮನಿಸಬೇಕು. ಏಕೆಂದರೆ, ಉತ್ತಮ ಸಾಹಿತ್ಯವೂ ಸಹ ಹೊಸ ಲೇಖಕರ ಕೈಗೆ ಸಿಕ್ಕಿ ವಿರೂಪಗೊಳ್ಳುತ್ತಿದೆ ಎಂಬುದು ಆತನ ಆತಂಕ. 

ಹೊಸದು ಎಂಬುದು ಹಳೆಯದರಿಂದ ಹುಟ್ಟಿರುತ್ತದೆ. ಆದರೆ, ಹೊಸ ಲೇಖಕ ಮಾತ್ರ ಇದನ್ನು ಒಪ್ಪಲಾರ. ಏಕೆಂದರೆ, ಹಳೆಯ ಪುಸ್ತಕಗಳು ಆತನಿಗೆ ಅರ್ಥವಾಗುವುದಿಲ್ಲ. ಹಳೆಯ ಪುಸ್ತಕಗಳಲ್ಲಿ ಪ್ರತಿಪಾದಿತ ವಿಷಯಗಳನ್ನು ತೆಗೆದುಕೊಳ್ಳಲು ಆತನಿಗೆ ಮನಸ್ಸಿರುವುದಿಲ್ಲ. ಆತ ಸೃಷ್ಟಿಸಿದ್ದೇ ಹೊಸದು ಎಂಬ ಭ್ರಾಂತಿ. ಆದ್ದರಿಂದ, ಆತ ಅವುಗಳನ್ನು ಅಡ್ಡಾದಿಡ್ಡಿಯಾಗಿ ಅರ್ಥೈಸುತ್ತಾನೆ. ಉತ್ತಮವಾದುದ್ದನ್ನೇ ಆತ ಕೆಟ್ಟ ರೀತಿಯಲ್ಲಿ ಹೇಳುತ್ತಾನೆ ಎಂಬುದು ಆತನ ಆಕ್ರೋಶ.

ಮುಂದುವರಿದು  ‘ಪ್ರಪಂಚದಲ್ಲಿ ಕ್ರಿಮಿ-ಕೀಟಗಳು ಇವೆ. ಜ್ಞಾನಿಗಳ ಪಕ್ವವಾದ ಅಭಿಪ್ರಾಯಗಳನ್ನು ತೆಗೆದುಕೊಂಡು ಅವುಗಳನ್ನು ಹೆಚ್ಚು ಚೆನ್ನಾಗಿ ಶುದ್ಧಪಡಿಸುತ್ತೇವೆಂದು ಕುರೂಪವನ್ನಾಗಿಸಲು ಅವು ಸದಾ ಸಿದ್ಧವಾಗಿರುತ್ತವೆ ಎಂದು ಟೀಕಿಸುತ್ತಾನೆ. ವಿಷಯ ಹಳೆಯದಾಗಿದ್ದರೂ ವಿನೂತನ ಶೈಲಿಯಲ್ಲಿ  ಹೇಳುವುದಕ್ಕಾಗಿ ಬರೆಯಬೇಕು. ಇಲ್ಲದಿದ್ದರೆ ನಿಮಗೆ ಬರೆಯುವ ಅಗತ್ಯವೂ ಇಲ್ಲ ಎಂಬುದು ಆತನ ದೃಢ ಸಲಹೆ. 

ಗುಣಮಟ್ಟದ ಅಭಾವದಿಂದ ಇತ್ತೀಚಿನ ಕನ್ನಡ ಸಾಹಿತ್ಯವೂ ನರಳುತ್ತಿದೆ.  ಗಟ್ಟಿ-ಟೊಳ್ಳು ಸಾಹಿತ್ಯದ ಮಧ್ಯೆ ಅಂತರ ಇರಿಸಿಕೊಳ್ಳುವ ಅನಿವಾರ್ಯತೆ ಇದೆ. ಈ ಕುರಿತ ಅವಲೋಕನ ಅಗತ್ಯ ಎನಿಸಿದರೆ ಷೋಪನ್ ಹೌರ್ ನ ಈ ವಿಚಾರಗಳನ್ನು ‘ವ್ಯಕ್ತಿಗತ ಎಂದು ತಳ್ಳಿ ಹಾಕಲಾಗದು. 

1942 ರಷ್ಟು ಹಿಂದೆಯೇ ಶ್ರೇಷ್ಠ ಶ್ರೇಣಿಯ ಸಾಹಿತ್ಯ ಕುರಿತು ಚಿಂತನೆ ನಡೆಸಿದ ಷೋಪನ್ ಹೌರ್ ಹಾಗೂ ಆತನ ವಿಚಾರಗಳನ್ನು ಕನ್ನಡಕ್ಕೆ ತಂದ ಗೊರೂರು ರಾಮಸ್ವಾಮಿ ಅವರನ್ನು ಕನ್ನಡದ ಉತ್ತಮ ಸಾಹಿತ್ಯ ಸೃಷ್ಟಿಯ ಆಶಯದೊಂದಿಗೆ ಲೇಖಕರು ಅಭಿನಂದಿಸಲೇ ಬೇಕು.

-ವೆಂಕಟೇಶ ಮಾನು

MORE NEWS

‘ಈ ಹೊತ್ತಿಗೆ’ ೧೨ನೇ ವಾರ್ಷಿಕೋತ್ಸವ ‘ಹೊನಲು’ ಮಾರ್ಚ್ ೯ರಂದು ಬೆಂಗಳೂರಿನಲ್ಲಿ

07-03-2025 ಬೆಂಗಳೂರು

ಬೆಂಗಳೂರು: ‘ಈ ಹೊತ್ತಿಗೆ’ ಮಾಸಪತ್ರಿಕೆಯ ೧೨ನೇ ವಾರ್ಷಿಕೋತ್ಸವ ‘ಹೊನಲು’ ಕಾರ್ಯಕ್ರಮ ಜೆ ...

MBIFL-2025; ಅಫ್ಘಾನಿಸ್ತಾನ ಚೀನಾ ದೃಢ ಹೆಜ್ಜೆ; ಭಾರತದ ಪಾಲಿಗೆ ನುಂಗಲಾರದ ತುತ್ತು

08-02-2025 ತಿರುವನಂತಪುರ

`ಬುಕ್ ಬ್ರಹ್ಮ’ ವಿಶೇಷ ವರದಿ ತಿರುವನಂತಪುರ: ೨೦೨೧ರ ಆಗಸ್ಟ್ ೮ ರಿಂದ ೧೭ರ ಅವಧಿಯಲ್ಲಿ ಅಫ್ಘಾನಿಸ್ತಾನ ಸರ್ಕಾ...

ನೆನಪಿನ ಪುಟಗಳನ್ನು ಸದ್ದಿಲ್ಲದೆ ತಿರುವಿ ಹಾಕಿತು

25-01-2025 ಬೆಂಗಳೂರು

“ಈ ಕತೆಯನ್ನು ಹೇಳಲು ಲೇಖಕರು ಬಳಸಿದ ಬಾಷೆ ಅತ್ಯಂತ ಆಪ್ತವಾಗಿದೆ. ಬಹುತೇಕ ಪಾತ್ರಗಳ ನಡುವಿನ ಸಂವಾದಗಳಲ್ಲೇ ಸಾಗುವ...