ಇದು ಕಾದಂಬರಿಯೇ ಹೊರತು, ಚರಿತ್ರೆಯ ಮಾಹಿತಿ ಕೋಶವಲ್ಲ

Date: 16-11-2024

Location: ಬೆಂಗಳೂರು


“ಚರಿತ್ರೆಯ ವಿವರಗಳು ಭಿತ್ತಿಯಾಗಿದ್ದು, ಅದರ ಮೇಲೆ ಮಹಾನ್ ಚಕ್ರವರ್ತಿ ಕೃಷ್ಣದೇವರಾಯನ ಚಾರಿತ್ರ್ಯ, ಅವನ ಪರಿವಾರದವರ ಚಾರಿತ್ರ್ಯ ಮತ್ತು ಆ ಕಾಲದ ಚಾರಿತ್ರ್ಯವನ್ನು ಶೋಧಿಸಿ ಚಿತ್ರಿಸಲು, ಎಂದಿನಂತೆ ನಾನು ನಿಷ್ಠೆಯಿಂದ ಪ್ರಯತ್ನಪಟ್ಟಿದ್ದೇನೆ”, ಎನ್ನುತ್ತಾರೆ ಸು. ರುದ್ರಮೂರ್ತಿ ಶಾಸ್ತ್ರಿ ಅವರು ತಮ್ಮ “ಶ್ರೀ ಕೃಷ್ಣದೇವರಾಯ” ಕೃತಿಗೆ ಬರೆದ ಮುನ್ನುಡಿ.


ನನ್ನ ಹೊಸ ಚಾರಿತ್ರಿಕ ಕಾದಂಬರಿ 'ಶ್ರೀಕೃಷ್ಣದೇವರಾಯ' ಕೃತಿಯನ್ನು, ಕನ್ನಡ ಓದುಗ ಬಂಧುಗಳಿಗೆ ಸಮರ್ಪಿಸಲು ಸಂತೋಷವಾಗುತ್ತಿದೆ. ಬದುಕಿನ ಬವಣೆಗಳ ನಡುವೆ, ಕುಸಿದು ಬೀಳುವುದರಿಂದ ಪಾರಾಗಿ, ಕನ್ನಡದ ಕೆಲಸ ಮಾಡಲು ಅವಕಾಶ ದೊರೆತಿರುವುದರಿಂದ ನನ್ನ ಜನ್ಮ ಸಾರ್ಥಕವಾದ ಭಾವನೆ ಬರುತ್ತಿದೆ.

ಈ ದಿಶೆಯಲ್ಲಿ ಹಲವರು ಮಿತ್ರರು ಮತ್ತು ಹಿತೈಷಿಗಳ ಸದಾಶಯವೂ ನನ್ನಲ್ಲಿ ನೈತಿಕ ಸ್ಥರವನ್ನು ತುಂಬಿದೆಯೆಂದರೆ ಅತಿಶಯೋಕ್ತಿಯಲ್ಲ.

ಕನ್ನಡದ ವಿಶ್ವವಿಖ್ಯಾತ, ವೈಭವೋಪೇತ ವಿಜಯನಗರ ಸಾಮ್ರಾಜ್ಯದ ಉಜ್ವಲ ದೀವಿಗೆಯಾಗಿ ಬೆಳಗಿದ ಸಾಮ್ರಾಟ ಕೃಷ್ಣದೇವರಾಯನನ್ನು ಕುರಿತು ಕನ್ನಡದಲ್ಲಿ ಕೆಲವಾರು ಕಾದಂಬರಿಗಳ ರಚನೆಯಾಗಿದ್ದರೂ ಒಂದು ಮಹತ್ವದ ಕಾದಂಬರಿ ಬಂದಿಲ್ಲವೆಂಬುದು ನನ್ನ ನಮ್ರ ತಿಳುವಳಿಕೆ. ತೆಲುಗಿನಲ್ಲಿ ಅಂಥ ಹಲವು ಕೃತಿಗಳಿರುವುದನ್ನು ಪ್ರಿಯ ಮಿತ್ರ ಶೇಷಶಾಸ್ತ್ರಿ ನನ್ನ ಗಮನಕ್ಕೆ ತಂದಿದ್ದಾನೆ.

ಚರಿತ್ರೆಯಲ್ಲಿ ದಾಖಲಾಗಿರುವ ಸಾವಿರಾರು ವಿವರಗಳು, ಕನ್ನಡ, ತೆಲುಗು, ಸಂಸ್ಕೃತ ಮತ್ತು ತಮಿಳಿನ ಸಾವಿರಾರು ಶಿಲಾಶಾಸನಗಳು, ಹಲವಾರು ಸಾಹಿತ್ಯ ಕೃತಿಗಳಲ್ಲಿ ಬರುವ ಸಂಗತಿಗಳು, ಜೊತೆಗೆ ಐತಿಹ್ಯಗಳೂ ಕಡಿಮೆಯೇನಲ್ಲ. ಅವುಗಳನ್ನೆಲ್ಲ ಗುಡ್ಡೆ ಹಾಕಿಕೊಂಡು, ಕಾದಂಬರಿ ರೂಪಕ್ಕೆ ಅಗತ್ಯವಾದಷ್ಟನ್ನು ಸಂಯೋಜಿಸಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ಹೌದು, ಸಮೃದ್ಧವಾದ ಐತಿಹಾಸಿಕ ವಿವರಗಳ ರಾಶಿಯಲ್ಲಿ ಕೃಷ್ಣದೇವರಾಯನ ವ್ಯಕ್ತಿತ್ವದ ರೇಖೆಗಳನ್ನು ಹುಡುಕುವ ಕೆಲಸ ತುಸು ಜಟಿಲವಾದರೂ, ಲೇಖಕನಾದವನಿಗೆ ಅದು ಸಂತೋಷ ಕೊಡುವ ವಿಷಯ.

ಈ ಕಾದಂಬರಿಯಲ್ಲಿ ನಾನು ಆ ಪ್ರಯತ್ನ ಮಾಡಿದ್ದೇನೆ. ಚರಿತ್ರೆಯ ವಿವರಗಳು ಭಿತ್ತಿಯಾಗಿದ್ದು, ಅದರ ಮೇಲೆ ಮಹಾನ್ ಚಕ್ರವರ್ತಿ ಕೃಷ್ಣದೇವರಾಯನ ಚಾರಿತ್ರ್ಯ, ಅವನ ಪರಿವಾರದವರ ಚಾರಿತ್ರ್ಯ ಮತ್ತು ಆ ಕಾಲದ ಚಾರಿತ್ರ್ಯವನ್ನು ಶೋಧಿಸಿ ಚಿತ್ರಿಸಲು, ಎಂದಿನಂತೆ ನಾನು ನಿಷ್ಠೆಯಿಂದ ಪ್ರಯತ್ನಪಟ್ಟಿದ್ದೇನೆ.

ಕಾಲಾನುಕ್ರಮಣಿಕೆಯಲ್ಲಿ ಕೆಲವು ಗೊಂದಲಗಳಿದ್ದರೂ, ಅವನ್ನು ನನ್ನ ನಿರೂಪಣೆಯ ದೃಷ್ಟಿಕೋನಕ್ಕೆ ಅನುಗುಣವಾಗಿ ಸರಿಪಡಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ಕೆಲವು ಸಂದೇಹ ಗಳಿಗೆ ತಾರ್ಕಿಕವಾದ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದೇನೆ. ಬಹುವ ಕೆಲವು ಆಕ್ಷೇಪಗಳಿಗೆ ಸಮರ್ಥನೀಯ ಸಮಾಧಾನವನ್ನೂ ಕಾಣಬಹುದು. ಇದು ಕಾದಂಬರಿಯೇ ಹೊರತು, ಚರಿತ್ರೆಯ ಮಾಹಿತಿ ಕೋಶವಲ್ಲ ಎಂಬ ಅರಿವು ನನ್ನ ಓದುಗ ಬಂಧುಗಳಿಗಿರುತ್ತದೆ ಎಂದು ನಂಬುತ್ತೇನೆ.

'ಶಾಸ್ತ್ರಿಗಳು ಐನೂರು ಆರುನೂರು ಪುಟಗಳಿಗಿಂತ ಕಡಿಮೆ ಬರೆಯುವುದೇ ಇಲ್ಲ' ಎಂದು ತಮಾಷೆ ಮಾಡಿದರೂ, ಪ್ರೀತಿಯಿಂದ ಪ್ರಕಾಶಕ ಮಿತ್ರ ಪ್ರಕಾಶ್ ಕಂಬತ್ತಳ್ಳಿಯವರು ಈ ಕಾದಂಬರಿಯನ್ನು ಪ್ರಕಟಿಸುತ್ತಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ನನ್ನ ಬರವಣಿಗೆಯ ಬದುಕು ಮತ್ತು ಭೌತಿಕ ಬದುಕಿನ ನಿರಾಳತೆಗೆ ನೆರವಾದ ಕೆಲವರು ಪ್ರಕಾಶಕ ಮಿತ್ರರಲ್ಲಿ ಕಂಬತ್ತಳ್ಳಿ ದಂಪತಿಯ ಔದಾಸ್ಯದ ಪಾಲು ಹೆಚ್ಚಿನದು.

ಹಿಂದೆ 'ದಾನಚಿಂತಾಮಣಿ ಅತ್ತಿಮಬ್ಬೆ' ಪೊನ್ನ ಕವಿಯಿಂದ 'ಶಾಂತಿನಾಥ ಪುರಾಣ'ವನ್ನು ಬರೆಸಿ, ಅದರ ಸಾವಿರ ಪ್ರತಿಗಳನ್ನು ಮಾಡಿಸಿ ಜಿನಮೂರ್ತಿಗಳೊಂದಿಗೆ ಹಂಚಿದಳು. ಓಲೆಗರಿಗಳ ಮೇಲೆ ಕಬ್ಬಿಣದ ಕಂಠದಿಂದ ಆ ಬೃಹತ್ ಗ್ರಂಥದ ಸಾವಿರ ಪ್ರತಿ ಮೂಡಿಸುವುದು, ಎಷ್ಟು ಶ್ರಮದ, ಎಷ್ಟು ವೆಚ್ಚದ, ಎಷ್ಟು ನಿಷ್ಠೆಯ ಕೆಲಸವೆಂಬುದನ್ನು ಊಹಿಸಿಕೊಳ್ಳಬಹುದು. ಅದನ್ನು ಆಗ 'ಶಾಸ್ತ್ರದಾನ' ಎಂದು ಬಹಳ ಗೌರವ ಭಾವನೆ ಯಿಂದ ಪರಿಗಣಿಸಲಾಗುತ್ತಿತ್ತು.

ಈಗ ಲಾಭ ನಷ್ಟದ ವ್ಯಾವಹಾರಿಕ ಗೆರೆ ದಾಟಿ, ಮಿತ್ರ ಕಂಬತ್ತಳ್ಳಿಯವರು ಕನ್ನಡದ ಹಲವು ಗಣ್ಯ ಲೇಖಕರ, ಹಲವಾರು ಘನವಾದ ಕೃತಿಗಳನ್ನು ನಿರಂತರವಾಗಿ ಪ್ರಕಟಿಸುತ್ತ, ಇನ್ನೊಂದು ರೀತಿಯಲ್ಲಿ 'ಶಾಸ್ತ್ರದಾನ' ಅಥವಾ 'ಸಾಹಿತ್ಯದಾನ' ಮಾಡುತ್ತಿದ್ದಾರೆಂದು ಹೇಳಬಹುದು. ನಾನು ಅವರಿಗೆ ಕೃತಜ್ಞತೆ ಸಲ್ಲಿಸುವುದು ಕೇವಲ ಔಪಚಾರಿಕ, ಅಷ್ಟೆ.

- ಸು. ರುದ್ರಮೂರ್ತಿ ಶಾಸ್ತ್ರಿ

MORE NEWS

ಇದರಲ್ಲಿ ನಾಡಜನರ ಪಾಲುಕೂಡ ಇದೆ

23-12-2024 ಬೆಂಗಳೂರು

“ಮಾತೃಭಾಷೆ, ಮಾತೃಭಾಷೆಯಲ್ಲಿನ ಕಲಿಕೆ ಅದರ ಅನಿವಾರ್ಯ ಅವಶ್ಯಕತೆ, ಮಹತ್ವ ಕುರಿತು ಇಲ್ಲಿನ ಎಲ್ಲ ಲೇಖನಗಳು ಹಲವು ನ...

ಸಾಹಿತ್ಯದಲ್ಲಿ ಪತ್ತೇದಾರಿ ಕಥೆ-ಕಾದಂಬರಿಗಳ ಪ್ರಸ್ತುತತೆ ಏನು?

02-12-2024 ಬೆಂಗಳೂರು

“ಈ ಕಾದಂಬರಿ ತನ್ನ ೧೦೩ ಪುಟಗಳ ಉದ್ದಕ್ಕೂ ಕುತೂಹಲ ಮೂಡಿಸಿಕೊಂಡು ಹೋಗುತ್ತದೆ. ಇಲ್ಲಿ ಪತ್ತೇದಾರಿ ಕಥೆ ಮಾತ್ರವಲ್ಲ...

ಈ ಕಥಾ ಸಂಕಲನದಲ್ಲಿ ದಟ್ಟ ಕಾಡಿನ ರೌದ್ರ ವರ್ಣನೆ ಓದುಗರನ್ನು ಮೋಹಗೊಳಿಸುತ್ತದೆ‌

22-10-2024 ಬೆಂಗಳೂರು

“ಈ ಸಂಕಲನ ಮಲೆಯ ಮಹದೇಶ್ವರದ ತಪ್ಪಲಿನ ಗುಡ್ಡಗಾಡು ಜನರ ಬದುಕುಗಳ ಚಿತ್ರಣಗಳನ್ನು ಬಲು ನಿಖರವಾಗಿ ಕೊಡುತ್ತದೆ&rdqu...