‘ಎರಡನೇ ದೇವರು’ ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು


ಓದುಗರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಈ ಬರೆವಣಿಗೆ ಇದೆ. ಕಾದಂಬರಿಯು ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು ಎಂದಿದ್ದಾರೆ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರು  ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ಎರಡನೇ ದೇವರು ಕಾದಂಬರಿಯ ಕುರಿತು ಬರೆದ ಆಪ್ತ ಮಾತು ಇಲ್ಲಿವೆ. 

ರಮೇಶರೇ,
ನಮಸ್ಕಾರ.

ನಿಮ್ಮ "ಎರಡನೇ ದೇವರು" ಕಾದಂಬರಿಯನ್ನು ಉಸಿರು ಬಿಗಿ ಹಿಡಿದು ಓದಿದ ಹಾಗೆ ಓದಿದೆ! ಅದು ಸಾಮಾಜಿಕ ವಸ್ತುವನ್ನು ಒಳಗೊಂಡಿದ್ದರೂ ಅದರ ನಡೆ ಸಸ್ಪೆನ್ಸ್ ಥ್ರಿಲ್ಲರ್ ಕಾದಂಬರಿಯದ್ದೇ. ಇಷ್ಟಕ್ಕೂ ಅದು ನಿಮಗೆ ಒಗ್ಗಿದ ಬರೆವಣಿಗೆಯ ರೀತಿಯೇ ಅಲ್ಲವೇ?

ವ್ಯಾಸಭಾರತದಲ್ಲಿ (ವಾಲ್ಮೀಕಿ ರಾಮಾಯಣದಲ್ಲಿ ಕೂಡಾ!) ಒಂದು ಶ್ಲೋಕ ಬರುತ್ತದೆ: ಯಥಾ ಕಾಷ್ಠಂಚ ಕಾಷ್ಠಂಚ...ಅಂತ! ಅಂದರೆ ಮಹಾ ಪ್ರವಾಹದಲ್ಲಿ ಎಲ್ಲಿಂದಲೋ ಬೇರೆ ಬೇರೆಯಾಗಿ ಬಂದ ಎರಡು ಮರದ ತುಂಡುಗಳು ಒಂದೆಡೆ ಜತೆಯಾಗುತ್ತಾ, ಮತ್ತೆ ಬೇರ್ಪಡುತ್ತಾ, ಜತೆಯಾಗುತ್ತಾ...ಸಾಗುತ್ತವೆ ಅಂತ! ನಮ್ಮ ಗಂಡು ಹೆಣ್ಣುಗಳ ಕಥೆಯೂ ಅದೇ ಅಲ್ಲವೇ?

ನಿಮ್ಮ ಕಾದಂಬರಿಯಲ್ಲಿ ಬರುವ ಪೂರ್ಣ ಹಾಗೂ ನೇತ್ರಾರ ಪಾತ್ರಗಳೂ ಇದೇ ರೀತಿ ಎಲ್ಲಿಂದಲೋ ಬಂದು ಜತೆಯಾಗುತ್ತಾ ಬೇರ್ಪಡುತ್ತಾ ಸಾಗಿದವರು. ನಡುವೆ ಅನೇಕ ತಿರುವುಗಳಲ್ಲಿ ನಡೆಯುವ ಅಘಟಿತ ಘಟನಾವಳಿಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾ, ತಪ್ಪುಗಳನ್ನು ಮಾಡುತ್ತಲೇ, ಅದರಿಂದ ಪಾಠ ಕಲಿತು ತಮ್ಮನ್ನು ತಿದ್ದಿಕೊಳ್ಳುತ್ತಾ...ಆ ಪ್ರಕ್ರಿಯೆಯಲ್ಲೇ ಹದಗೊಂಡು ಮಾಗುತ್ತಾ ಹೋಗುವ ರೀತಿ ತುಂಬಾ ಕುತೂಹಲಕಾರಿಯೂ ಸೊಗಸಾದುದೂ ಆಗಿದೆ.

ನಿಮ್ಮ ನಿರೂಪಣಾ ವಿಧಾನ, ಬಳಸಿದ ನಮ್ಮ ಕಡೆಯ ಮಾತಿನ ಧಾಟಿ, ಚಕಚಕನೆ ಘಟನೆಗಳು ಸಂಭವಿಸುತ್ತಾ ಹೋಗುವ ರೀತಿಯು ನಿಮಗೇ ವಿಶಿಷ್ಟವಾದುದು. ಓದುಗರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಈ ಬರೆವಣಿಗೆ ಇದೆ. ಕಾದಂಬರಿಯು ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು. ಅಭಿನಂದನೆಗಳು.

ನೀವು ಸಿಬಿಐ ಆಫೀಸಿನಲ್ಲಿ ಇರಬೇಕಾದವರು ತಪ್ಪಿ ಬೇರೆಡೆ ಉಳಿದು ಬಿಟ್ಟಿರಿ ಅಂತ ನನಗನ್ನಿಸುತ್ತದೆ! ಇಂಥದೇ ಇನ್ನಷ್ಟು ಕೃತಿಗಳನ್ನು ನನ್ನಂಥ ಬಡಪಾಯಿಯ ಓದಿಗೆ ಆಹಾರವಾಗಿ ನೀಡುತ್ತಾ ಇರಿ!

ನಮಸ್ಕಾರ,
ನಿಮ್ಮ,
ಸುಬ್ರಾಯ ಚೊಕ್ಕಾಡಿ

MORE FEATURES

'ಕೂಡಿಟ್ಟ ಹಣ ಎಲ್ಲಿ ಹೋಯಿತು?'

07-09-2024 ಬೆಂಗಳೂರು

“ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅ...

ಅಂತಃಕರಣ ಎಂದರೆ ಆಂತರಿಕ ಕಾರ್ಯಗಳು

07-09-2024 ಬೆಂಗಳೂರು

"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂ...

ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ

07-09-2024 ಬೆಂಗಳೂರು

“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರ...