ಈ ಪುಸ್ತಕದಲ್ಲಿ ಪದಗಳಿಗಿಂತ ಮೌನದ್ದೇ ಹೆಚ್ಚು ಕೆಲಸ


“ಪುಸ್ತಕವನ್ನು ಬರೆದದ್ದು ಒಬ್ಬರು, ಒಂದೇ ಸಲವಾದರೂ, ಓದುಗರು ಪ್ರತೀ ಓದಿನಲ್ಲೂ ಮತ್ತಷ್ಟು ಘಟನೆಗಳನ್ನು ಅದಕ್ಕೆ ಸೇರಿಸುತ್ತಾ ಪುಸ್ತಕದ ಗಾತ್ರವನ್ನು ಮಾತ್ರವಲ್ಲ ಅರ್ಥವನ್ನೂ, ಘನತೆಯನ್ನೂ ಹಿಗ್ಗಿಸುತ್ತಾರೆ. ಇಂತಹ ಜಾದೂಗಾರಿಕೆ ಈ ಪುಸ್ತಕ ಓದಿದರೆ ಮಾತ್ರ ನಡೆಯುವಂಥದ್ದು,” ಎನ್ನುತ್ತಾರೆ ಅಂಜಲಿ ರಾಮಣ್ಣ. ಅವರು ಎಸ್ ಸುಶೀಲ ಚಿಂತಾಮಣಿ ಅವರ "ಅವಳ ಇವಳ ಸುತ್ತ" ಕೃತಿ ಕುರಿತು ಬರೆದ ವಿಮರ್ಶೆ.

ಮನುಷ್ಯ ನೆಮ್ಮದಿಯಾಗಿ ಇದ್ದಾನೆ ಎನ್ನಲು ಒಂದೇ ಕಾರಣ ಸಾಕು ಆದರೆ ಬದುಕಿನಲ್ಲಿಯ ಅಶಾಂತಿಗೆ ನಾನಾ ಸ್ವರೂಪಗಳು. ಅದರಲ್ಲೂ ಹೆಂಗಸರು ದಾಂಪತ್ಯದೊಳಗೆ ಕತ್ತು ಹಿಸುಕಿಕೊಳ್ಳುತ್ತಲೇ ಕೆಲವೊಮ್ಮೆ ಕಣ್ಣ ನೀರಿಗೂ ತಾವು ಕೊಡಲಾಗದೆ ಬದುಕುವ ಸ್ಥಿತಿ ಬರಹಕ್ಕೆ ನಿಲುಕದು.

ಲೇಖಕಿ ಶ್ರೀಮತಿ ಎಸ್ ಸುಶೀಲ ಚಿಂತಾಮಣಿ ಅವರು ರಾಜ್ಯದ ಹಿರಿಯ ವಕೀಲರು. ಮೀಡಿಯೇಷನ್ ಕೇಂದ್ರದ ಮುಖ್ಯ ಸಂಧಾನಕಾರರು. ತಾವು ಕಂಡ, ನಿರ್ವಹಿಸಿದ ಪ್ರಕರಣಗಳನ್ನು 38 ಅಧ್ಯಾಯಗಳಲ್ಲಿ ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಅಧ್ಯಾಯಗಳ ಸಂಕ್ಷಿಪ್ತತೆ ನೋಡುವಾಗ ಅನಿಸಿದ್ದು 'ನೋವುಗಳನ್ನು ನಲಿವಿನಷ್ಟು ವಿಸ್ತರಿಸಲು ಅಕ್ಷರಗಳು ಶಕ್ಯವಲ್ಲ'. ಈ ಪುಸ್ತಕದಲ್ಲಿ ಪದಗಳಿಗಿಂತ ಮೌನದ್ದೇ ಹೆಚ್ಚು ಕೆಲಸ. ಓದುಗನ ಕೊರಳುಬ್ಬಿ ಬರದಿದ್ದರೆ ಅಕ್ಷರತೆಯ ಮೇಲಾಣೆ.

ಪ್ರತೀ ಹೆಣ್ಣಿನ ಜೀವನ ಯಾನವನ್ನು ಕೈಯಲ್ಹಿಡಿದ ಪುಸ್ತಕದಿಂದ ಕಣ್ಣಿನ ಮೂಲಕವೇ ನಮ್ಮದೇ ಪ್ರಯಾಣವಾಗಿಸಿಕೊಳ್ಳುವ ನಿಡಿದಾದ ನಿಟ್ಟುಸಿರು ' ಅವಳ ಇವಳ ಸುತ್ತ '. ಲೇಖಕಿಯೇ ಹೇಳಿರುವಂತೆ ' ಇದು ಹೆಣ್ಣು ಮಕ್ಕಳ ಸುತ್ತಲಿನ ಕೆಲವು ಘಟನೆಗಳ ಸಂಕಲನ. ಈ ಘಟನೆಗಳಲ್ಲಿ ಹಲವು ನಮ್ಮ ನಿಮ್ಮ ಕಣ್ಣಿಗೆ ಬಿದ್ದ ಅಥವಾ ನಮ್ಮ ನಿಮ್ಮ ಜೀವನದ ಘಟನೆಗಳೇ ಹೌದೇನೋ ಎನ್ನಿಸಲೂಬಹುದು ಎಲ್ಲೋ ಒಂದು ಕಡೆ ಇವುಗಳಲ್ಲಿ ಕೆಲವು ನಮ್ಮಂತಹ ಹಲವರ ಜೀವನದಲ್ಲಿ ಹಾದು ಹೋಗಿರುವ ಘಟನೆಗಳೇ ಇವು ಎನಿಸಬಹುದು ಬುಡಕೋಚಿ ರಂಗಮ್ಮ ಎನ್ನುತ್ತಾ ಬೇರೆ ದಾರಿಯೇ ಕಾಣದೆ ನೇಣು ಬಿಗಿದುಕೊಂಡ ಶಶಿ, ಕಂಡದ್ದನ್ನು ಕಂಡಹಾಗೆಯೇ ಹೇಳಿ ಗೋಡೆಯ ಮೇಲಿನ ಜೀವವಾದ ಮತ್ತೊಬ್ಬಳು, ಬೆಕ್ಕು ಇಲಿಯ ಆಟ ನೋಡುತ್ತಲೇ ಅದರಲ್ಲೊಂದು ಪಾಠದ ಸೆಲೆ ಹಿಡಿದು ತನ್ನ ಬದುಕನ್ನು ನೆಮ್ಮದಿಯೆಡೆಗೆ ತೆಗೆದುಕೊಂಡು ಹೋದ ಶಶಿ, ಹಿಂಸೆ ಮಿತಿಮೀರಿದಾಗ ಕಾನೂನಿನ ಹಂಗು ತೊರೆದು ಮೌನ ಪ್ರತಿಭಟನೆಯಲ್ಲಿಯೇ ಹೆಣ್ಣುಬಾಕ ಗಂಡನನ್ನು ತೊರೆದು ತನ್ನ ಬದುಕನ್ನು ರೂಪಿಸಿಕೊಂಡ ಸೌಮ್ಯ, ವಿನಾಕಾರಣ ಇವಳನ್ನು ವಿಚ್ಬೇಛೇದಿಸಿ ಅವನು ಬೇರೊಬ್ಬಳನ್ನು ಕಟ್ಟಿಕೊಂಡಾಗ ಸ್ವಾಭಿಮಾನಕ್ಕೆ ಹೊಸ ಭಾಷ್ಯ ಬರೆದ ಮತ್ತೊಬ್ಬಳು, ಜೀವನ ಪೂರ್ತಿ ಜೀವನಾಂಶಕ್ಕಾಗಿ ಎಡಕಾಡಿ ಮುಗಿದುಹೋದ ಗೀತಮ್ಮ, ಸತ್ತು ಬದುಕುವುದು ಹೇಗೆ ಎಂದು ತೋರಿಸಿಕೊಟ್ಟ ಲೇಖಕಿಯ ಸ್ನೇಹಿತೆ, ಉಸಿರೇ ಎತ್ತದೆ ಕೊನೆಯವರೆಗೂ ಕಷ್ಟಗಳ ಮಳೆಗೆ ಸಿಕ್ಕಿ ನೆನೆದು ತೊಪ್ಪೆಯಾದರೂ ನೋಟದಲ್ಲೇ ನಾದಿನಿಗೆ ತಪ್ಪಿನ ಅರಿವು ಮೂಡಿಸಲು ಪ್ರಯತ್ನ ಮಾಡಿದ ಸರೋಜಿ ಮನಸ್ಸನ್ನು ಮೃದುವಾಗಿಸುತ್ತಾರೆ.

ಮದುವೆಯ ವಿಷಯದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡರೂ ಶಿಕ್ಷಕಿಯಾಗಿ ಸರಿಯಾದ ಪಾಠವನ್ನೇ ಮಾಡಿದ್ದ ಅಂಪತ್ತೆ, ದುಡಿಮೆಯಿಲ್ಲದ ಗಂಡನನ್ನು ಪೂರ್ತಿಯಾಗಿ ತಾನೇ ಸಾಕಿ, ಅವನನ್ನು ಮೊಸರಜ್ಜ ಎಂದಾಗ ಮಾತ್ರ ಸಿಡಿಮಿಡಿಗೊಳ್ಳುತ್ತಿದ್ದ ಮೊಸರಜ್ಜಿ ಕಲಿಸುವ identity ಪಾಠ, ಅತ್ತು ಕರೆದು ಗೋಳಾಡದೆ ಸಾವನ್ನು ಒಪ್ಪಿಕೊಳ್ಳುತ್ತಾ ಸಾವನ್ನು ಎದುರಿಸುವ ರೀತಿಯಲ್ಲಿ ಆಗಿರುವ ಬದಲಾವಣೆಯ ಕುರುಹುಗಳಂತೆ ನಿಂತ ಇಬ್ಬರು ಸ್ನೇಹಿತೆಯರು, ಮದುವೆಯಾದ ಹೊಸತರಲ್ಲೂ ಸಹಜವಾದ ಭಾವವೇರಿಳಿತ ಇಲ್ಲದೆ ನಿರ್ಲಿಪ್ತ ಗಂಡನ ಜೊತೆ 15 ವರ್ಷಗಳ ಸಂಸಾರ ಸಾಗಿಸಿ ಕೊನೆಗೆ ಅದನ್ನೇ ಒಪ್ಪಿ ತಾನೂ ನಿರ್ಲಿಪ್ತತೆ ಬೆಳೆಸಿಕೊಂಡು ಮತ್ತೂ 15 ವರ್ಷವಾದ ಮೇಲೆ ಗಂಡ ಲೌಕಿಕಕ್ಕೆ ಬಂದು ತನ್ನನ್ನೂ ಬಲವಂತ ಮಾಡಿದ್ದು ಸರಿಗಾಣದೆ ಗಂಡನನ್ನು ಬಿಟ್ಟು ಸರಿತಪ್ಪುಗಳಾಚೆ ನಿಲ್ಲುವ ರಾಜಿ ನಮ್ಮೆದುರಿನ ನಿಲುವುಗನ್ನಡಿಯಂತೆ.

ಅತ್ತೆಯೆದುರು ಬಗ್ಗಿ ಗಂಡನೆದುರು ತಗ್ಗಿದರೂ ಅವನ ಐಬಿನಿಂದಲೇ ತನಗೆ ಮಕ್ಕಳಾಗುತ್ತಿಲ್ಲ ಎಂದು ಮನವರಿಕೆ ಮಾಡಿಕೊಡಲು ಸೋತು ವಿಚ್ಚೇದನದ ನಂತರದ ಮದುವೆಯಲ್ಲಿ ಪಡೆದ ಇಬ್ಬರು ಮಕ್ಕಳ ಫೋಟೋ ಮತ್ತು ಚಿನ್ನದ ಕಟ್ಟಿನ ಕನ್ನಡಿಯನ್ನು ತನ್ನ ಮಾಜಿ ಅತ್ತೆ ಮತ್ತು ಗಂಡನಿಗೆ ಉಡುಗೊರೆ ಕೊಡುವ ರಮಾ, ತನ್ನನ್ನು ಒಂದು ವಸ್ತುವಿನ ಹಾಗೆ ನೋಡಿಕೊಂಡ ಗಂಡ ತನಗೆ ಜೀವವಿಲ್ಲದ ವಸ್ತುವಾಗಿ ಬೇಕಿಲ್ಲ, ಹಾರಬೇಕಾದರೆ ಮೊದಲು ಪಂಜರದಿಂದ ಹೊರ ಬರಬೇಕು ಮೈ ಒದರಬೇಕು ರೆಕ್ಕೆಗಳನ್ನು ಕುದುರಿಸಿಕೊಳ್ಳಬೇಕು ಪುಟ್ಟ ಪುಟ್ಟ ಹೆಜ್ಜೆ ಇಡಬೇಕು ಸಣ್ಣ ಸಣ್ಣ ಎತ್ತರಗಳಲ್ಲಿ ಹಾರಬೇಕು ಹಾಗೆ ಹಾರುತ್ತಾ ಹೋದಾಗ ಎಲ್ಲವೂ ಸಲೀಸಾಗುತ್ತದೆ ಎನ್ನುವ ಪ್ರೇಮಳ ಕಥೆ ಓದುವಾಗ ಏರೋಪ್ಲೇನ್ ನಲ್ಲಿ ಹಾರಿದಷ್ಟೇ ಹಗುರ ಭಾವ.

ಮೊಮ್ಮಕ್ಕಳ ಕೈ ಹಿಡಿದು ನಡೆವ ವಯಸ್ಸಿನಲ್ಲಿ ಪುರೋಹಿತ ಗಂಡ ಮತ್ತೊಬ್ಬಳನ್ನು ಇಟ್ಟುಕೊಂಡಾಗ ಅವಳ ಬಳಿಯೇ ಹೋಗಿ ಪತಿ ಭಿಕ್ಷೆ ಬೇಡುವ ಪುರೋಹಿತನ ಹೆಂಡತಿ ಯಾವುದೂ ಬದಲಾಗದಾದಾಗ ತೆಂಗಿನ ಕಾಯಿಯ ಮೇಲೆ ದಕ್ಷಿಣೆ ಇಟ್ಟು ಉದ್ದರಣೆ ನೀರು ಬಿಟ್ಟು ತನ್ನ ಗಂಡನನ್ನು ಇಟ್ಟುಕೊಂಡವಳಿಗೆ ಅಕ್ಷರಶಃ ದಾನವಾಗಿ ನೀಡಿ ಕಣ್ಮರೆಯಾಗುವ ಹೆಂಗಸು, ಅತ್ತೆಯ ಕಾಟ ಮುಗುಮ್ಮಗಿಯೇ ಇರುವ ಗಂಡ ಇಬ್ಬರನ್ನೂ ಸಹಿಸಿಕೊಂಡು ಹೋಗು ಎನ್ನುವ ಬುದ್ಧಿ ಮಾತು ಹೇಳುವವರಿಗೆ ಸಂಬಂಧವನ್ನು ಕಳಚಿಕೊಳ್ಳದೆಯೇ ಹೊಸ ರೀತಿಯಲ್ಲಿ ಬುದ್ಧಿ ತಿಳಿಸಿ ತನ್ನ ಅಸ್ತಿತ್ವವನ್ನು ಸಾರಿದ ತಾರಾ ಮತ್ತು ಬದುಕನ್ನು ತಮ್ಮದೇ ರೀತಿಯಲ್ಲಿ ಎದುರಿಸಿರುವ ಮತ್ತಷ್ಟು ಹೆಂಗಸರ ಜೀವನವನ್ನು ಓದುವಾಗ ಬದುಕಲೇ ಬೇಕು ಎನ್ನುವ ಮನಸ್ಸು ಮಾಡಿಬಿಟ್ಟರೆ ಆಯಿತು ಮತ್ತೆಲ್ಲಾ ಸಲೀಸು ಎನಿಸಿಬಿಡುತ್ತದೆ.

ಎಲ್ಲಾ ಹೆಣ್ಮನಗಳ ಕಥನದ ನಡುವೆ ಬದುಕಿರುವ ಹೆಂಡತಿಯನ್ನು ಸತ್ತಿದ್ದಾಳೆ ಎಂದು ಹೇಳಿ ಅವಳ ಬೇಜವಾಬ್ದಾರಿತನವನ್ನು ವಕೀಲರುಗಳಿಗೆ ಮನವರಿಕೆ ಮಾಡಿಕೊಟ್ಟ ಕೆಂಪಣ್ಣ ಒಬ್ಬ ವಿಚಿತ್ರವಾದ ವಾಸ್ತವ. ಅವಳ ಇವಳ ಸುತ್ತಲೂ ಬರೆಯುತ್ತಲೇ ಲೇಖಕಿ ತಮ್ಮ ಜೀವನದ ಕೆಲವು ಘಟನೆಗಳನ್ನು ಅದರಿಂದಾದ ತಮ್ಮ ಕಲಿಕೆಯನ್ನೂ ಕಟ್ಟಿಕೊಟ್ಟಿದ್ದಾರೆ.

" ಅವರಿಂದ ಸ್ಕೇಲನ್ನು ತೆಗೆದುಕೊಂಡು ಉಪಯೋಗಿಸಿ ಮತ್ತೆ ಅದೇ ಜಾಗದಲ್ಲಿ ಇಡದೆ ಹೋದದ್ದಕ್ಕಾಗಿ ಎರಡನೇ ಡಿಗ್ರಿ ಓದುತ್ತಿದ್ದಾಗ ನನ್ನ ಸ್ನೇಹಿತರೆ ಮುಂದೆ ಅಪ್ಪ ಹುಡುಕಿ ತಂದ ಅದೇ ಸ್ಕೇಲಿನಿಂದ ನನ್ನನ್ನು ಥಳಿ ಸಿದಾಗ ನನಗಾದ ನೋವಿನ ನೆನಪಿದೆ. ನನಗೆ ಅಪ್ಪನ ಬಗ್ಗೆ ಮೆಚ್ಚುಗೆ ಇತ್ತು ಪ್ರೀತಿ ಇರಲಿಲ್ಲ. ಪ್ರೀತಿ ಬರಲು ಸಾಧ್ಯವೇ ಇಲ್ಲ ಎನ್ನುವ ಗಟ್ಟಿ ತೀರ್ಮಾನಕ್ಕೆ ನಾನು ಬಂದು ಅದೆಷ್ಟೋ ವರ್ಷಗಳಾಗಿತ್ತು " ಎನ್ನುವ ಲೇಖಕಿ ಅಪ್ಪಾ ಕೊಟ್ಟಿದ್ದೇನು ಎನ್ನುವ ಲೇಖನವನ್ನು ಈ ಪುಸ್ತಕದ ಜೀವಾಳವಾಗಿಸಿದ್ದಾರೆ.

ಅವರು ಒಂದು ತರಬೇತಿ ನೀಡಲು ಹೋಗಿದ್ದಾಗ ಸಹತರಬೇತುದಾರೆ ಮೀನಾ "ಟ್ರೇನಿಂಗ್ ಮಾಡುವ ಕಲೆ ನಿನಗೆ ಎಲ್ಲಿಂದ ಬಂತು?" ಎಂದು ಕೇಳಿದಾಗ " ನಾನು ತುಂಬಾ ಓದಿದ್ದೇನೆ ತುಂಬಾ ಕೃಷಿ ಮಾಡಿದ್ದೇನೆ ಆಳವಾಗಿ ಸಾಧನೆ ಮಾಡಿದ್ದೇನೆ" ಎನ್ನುತ್ತಾರೆ ಲೇಖಕಿ "ಅವೆಲ್ಲ ನಾನು ಮಾಡಿದ್ದೇನೆ ಬೇರೆಯವರು ಮಾಡಿದ್ದಾರೆ ಆದರೆ ನೀನು ಪಾಠ ಮಾಡುವಂತೆ ನೀನು ಟ್ರೇನಿಂಗ್ ಕೊಟ್ಟಂತೆ ಯಾರು ಕೊಡಲಿಕ್ಕೆ ಆಗುತ್ತಿಲ್ಲ ನಿನ್ನಲ್ಲಿ ಬೇರೆ ಏನು ಇದೆ ಅದನ್ನು ನಿನಗೆ ಯಾರು ಕೊಟ್ಟಿದ್ದಾರೆ ನಿಮ್ಮ ಅಪ್ಪ ಕೊಟ್ಟಿರಬಹುದೇ"ಎನ್ನುತ್ತಾರೆ ಮೀನಾ. ಆಗ ಲೇಖಕಿ ಹೇಳುತ್ತಾರೆ, " ಹೌದಲ್ಲ ನನಗೆ ಇದನ್ನು ಯಾರು ಕೊಟ್ಟರು ನನ್ನ ಅಪ್ಪನಲ್ಲವೇ ಒಂದು ಮೂಗು ಬೊಟ್ಟನ್ನೂ ನನ್ನ ಅಪ್ಪ ನನಗೆ ಕೊಡಿಸಲಿಲ್ಲ ಎಂದು ಐವತ್ತು ವರ್ಷಗಳ ಕಾಲ ಹೇಳುತ್ತಾ ಬಂದ ನನಗೆ ಅಪ್ಪ ಕೊಟ್ಟಿದ್ದೇನು ಎಂದು ಅರ್ಥವಾಗಲು 50 ವರ್ಷಗಳ ಆಯ್ತಲ್ಲ ಎನಿಸಿತು ಬದುಕಿದ್ದಾಗ ನಾನು ಪ್ರೀತಿಸದ ಅಪ್ಪನನ್ನು ಸತ್ತಮೇಲಾದರೂ ಪ್ರೀತಿಸುವಂತೆ ಮೀನಾ ಒಂದೇ ಒಂದು ಪ್ರಶ್ನೆಯಲ್ಲಿ ಮಾಡಿದಳಲ್ಲ ಎನಿಸಿತು" ಈ ಸಾಲುಗಳನ್ನು ಓದುವಾಗ ಇಲ್ಲಇಲ್ಲಗಳನ್ನೇ ಗೋಣು ಹಾಕಿಕೊಂಡು ಜೀವನದ ತಿಳಿನೀರನ್ನು ಬಗ್ಗಡಗೊಳಿಸಿಕೊಳ್ಳುವ ನಾವು ಇರುವುದರೆಡೆಗೆ ತುಡಿಯುವುದು ಮಾತ್ರ ನೆಮ್ಮದಿಗೆ ದಾರಿ ಮತ್ತು ರಹದಾರಿ ಎಂದುಕೊಳ್ಳುವುದು ಯಾವಾಗ ಎನ್ನುವ ಪ್ರಶ್ನೆ ಉಳಿದು ಹೋಗುತ್ತದೆ.

"ಅವಳ ಇವಳ ಸುತ್ತ" ಪುಸ್ತಕವನ್ನು ಬರೆದದ್ದು ಒಬ್ಬರು, ಒಂದೇ ಸಲವಾದರೂ, ಓದುಗರು ಪ್ರತೀ ಓದಿನಲ್ಲೂ ಮತ್ತಷ್ಟು ಘಟನೆಗಳನ್ನು ಅದಕ್ಕೆ ಸೇರಿಸುತ್ತಾ ಪುಸ್ತಕದ ಗಾತ್ರವನ್ನು ಮಾತ್ರವಲ್ಲ ಅರ್ಥವನ್ನೂ, ಘನತೆಯನ್ನೂ ಹಿಗ್ಗಿಸುತ್ತಾರೆ. ಇಂತಹ ಜಾದೂಗಾರಿಕೆ ಈ ಪುಸ್ತಕ ಓದಿದರೆ ಮಾತ್ರ ನಡೆಯುವಂಥದ್ದು.

MORE FEATURES

ಕನ್ನಡ ಆಧುನಿಕ ಕಥನ ಸಾಹಿತ್ಯವು ಪ್ರಾರಂಭದಲ್ಲಿ ಹೊಂದಿದ್ದ ವೈವಿಧ್ಯ ಈಗ ಕಾಣಿಸುತ್ತಿಲ್ಲ

23-03-2025 ಬೆಂಗಳೂರು

"ಲೇಖಕರ ಹಾಸ್ಯ, ವ್ಯಂಗ್ಯಗಳು ಮತ್ತು ಕುತೂಹಲ ಉಳಿಸಿಕೊಳ್ಳುವ ನಿರೂಪಣೆ ಈ ಕತೆಗಳ ವೈಶಿಷ್ಟ್ಯ. ಕತೆಗಳು ಒಂದು ಒಂದೂವ...

ಪ್ರಕೃತಿ ಸಹಜವಾದ ಆಕರ್ಷಣೆಯ ಆದರ್ಶ ಜೀವನ ಎಲ್ಲರಿಗೂ ಬೇಕು

23-03-2025 ಬೆಂಗಳೂರು

"ಜಲಪಾತ ಹೆಸರೇ ಸೂಚಿಸುವಂತೆ ನಿರಂತರ ಹರಿಯುತ್ತಿರುವ ಪ್ರಕೃತಿಯ ಶಕ್ತಿಯ ಅಗಾಧತೆಯನ್ನು ಬಿಂಬಿಸುವ ಪ್ರಾಕೃತಿಕ ಸೃಷ್...

ಒಂದು ಐತಿಹಾಸಿಕ ಸಮ್ಮೇಳನಕ್ಕೆ ಹಾಜರಾದ ಸಾರ್ಥಕತೆ

23-03-2025 ಬೆಂಗಳೂರು

"ನಗಲು ತೆರೆದ ಬಾಯನ್ನು ಮುಚ್ಚಲಾಗದಷ್ಟು ಪರಿಚಿತ ಮುಖಗಳು ಸಿಕ್ಕು ತವರಿನ ಕಾರ್ಯಕ್ರಮಕ್ಕೆ ಹೋದಂತೆನಿಸಿತು. ಕವಿಗೋಷ...