ಈ ಕಾದಂಬರಿಯಲ್ಲೊಂದು ಹಿನ್ನೀರಿನಲ್ಲಿ ನಿಂತ ಆನೆಗಳ ಇಮೇಜ್ ಇದೆ


"ಒಬ್ಬ ಪುಟ್ಟ ಹುಡುಗನ ಕಣ್ಣಲ್ಲಿ ಈ ಊರಿನ ಕತೆ ಶುರುವಾಗುತ್ತದೆ. ಊರಿನ ಆಳ ಅಗಲ ವ್ಯಕ್ತಿತ್ವ ಕಾಣುತ್ತಾ ಹೋಗುತ್ತದೆ. ಕಾಡಿನಿಂದ ಇಲ್ಲಿಗೆ ಆನೆಗಳು ಬರಬಾರದು ಎಂದು ಅವುಗಳ ದಾರಿಯಲ್ಲಿ ಅರಣ್ಯ ಇಲಾಖೆಯವರು ತೋಡಿದ ಕಂದಕದೊಳಗೆ ಆನೆ ಮರಿಯೊಂದು ಬಿದ್ದು ಬಿಡುತ್ತದೆ ಎಂಬಲ್ಲಿಗೆ ಆನೆ ಮತ್ತು ಮಾನವನ ಸಂಘರ್ಷದ ತೀವ್ರವಾದ ಕಥೆಯೊಂದು ತೆರೆದುಕೊಳ್ಳುತ್ತದೆ," ಎನ್ನುತ್ತಾರೆ ರಾಜೇಶ್ ಶೆಟ್ಟಿ. ಅವರು ಭಾರದ್ವಾಜ ಕೆ. ಆನಂದತೀರ್ಥ ಅವರ ಕಾದಂಬರಿ ‘ಕಂದಕ’ ಕೃತಿ ಕುರಿತು ಬರೆದ ವಿಮರ್ಶೆ.

ಅಮೆಜಾನ್ ಪ್ರೈಮ್ ನಲ್ಲಿ ಪೋಚರ್ ಎಂಬ ಸೀರೀಸ್ ಬಂದಿದೆ. ಆನೆಗಳ ಬೇಟೆಯ ಹಿನ್ನೆಲೆಯಲ್ಲಿ ಕಾಡಿನ ಕಥೆ, ಮಾನವನ ದುರಾಸೆ, ವೈಲ್ಡ್ ಲೈಫ್ ಕನ್ಸರ್ವೇಷನ್ ಕೆಲಸಗಳ ಬಗ್ಗೆ ಇರುವ ಸೀರೀಸ್ ಅದು. ಅದನ್ನು ನೋಡುತ್ತಿದ್ದಂತೆ ನಂಗೆ ನೆನಪಾಗಿದ್ದು ಆನಂದತೀರ್ಥ ಭಾರದ್ವಾಜರ ಕಾದಂಬರಿ `ಕಂದಕ'.

ಅದು ಕಾಡಿನ ಪ್ರೀತಿ, ಆನೆಗಳ ಮೇಲೆ ಆಸಕ್ತಿ ಇರುವ ಪ್ರತಿಯೊಬ್ಬರೂ ಓದಬೇಕಾದ ಕೃತಿ ಎಂದೇ ನನಗೆ ಅನ್ನಿಸುತ್ತದೆ. ಈಗ ವೀರಲೋಕ ಪ್ರಕಾಶನ ಪ್ರಕಟಿಸಿದೆ. ಸಾಧ್ಯ ಆದವರು ಒಮ್ಮೆ ಓದಿ. ಈ ಕಾದಂಬರಿ ಓದಿದ ಕ್ಷಣ ಖುಷಿಯಿಂದ ಬರೆದಿದ್ದ ನಾಲ್ಕು ಸಾಲುಗಳು ಮತ್ತೆ ನಿಮ್ಮ ಅವಗಾಹನೆಗೆ.

***

ಕಾಡಿನ ಪಕ್ಕ ಇರುವ ಪ್ರದೇಶ. ದೂರದೂರದಲ್ಲಿ ಮನೆಗಳು. ಊರು ಪೊರೆಯುವು ದಿಂಡಿಗಮ್ಮನ ಒಂದು ದೇಗುಲ. ಅದರ ಪಕ್ಕದಲ್ಲಿ ಕೆರೆ. ಆ ಕೆರೆಗೆ ಆನೆಗಳು ನೀರು ಕುಡಿಯಲು ಬರುತ್ತವೆ. ಆಟ ಆಡುತ್ತವೆ. ಅಕ್ಕಪಕ್ಕ ಏನಾದರೂ ತಿಂಡಿ ಸಿಕ್ಕಿದರೆ ತಿಂದು ಹೋಗುತ್ತವೆ. ಏನಾದರೂ ಡ್ರೋನ್ ಶಾಟಲ್ಲಿ ಮೇಲಿನಿಂದ ಕೆಳಗೆ ನೋಡಿದರೆ ಸಂಜೆಯಾದ ಮೇಲೆ ಅಲ್ಲಿ ಬೆಳಕು ಕಾಣಿಸುವುದಿಲ್ಲ. ಜನ ಓಡಾಡುವುದಿಲ್ಲ.

ಒಬ್ಬ ಪುಟ್ಟ ಹುಡುಗನ ಕಣ್ಣಲ್ಲಿ ಈ ಊರಿನ ಕತೆ ಶುರುವಾಗುತ್ತದೆ. ಊರಿನ ಆಳ ಅಗಲ ವ್ಯಕ್ತಿತ್ವ ಕಾಣುತ್ತಾ ಹೋಗುತ್ತದೆ. ಕಾಡಿನಿಂದ ಇಲ್ಲಿಗೆ ಆನೆಗಳು ಬರಬಾರದು ಎಂದು ಅವುಗಳ ದಾರಿಯಲ್ಲಿ ಅರಣ್ಯ ಇಲಾಖೆಯವರು ತೋಡಿದ ಕಂದಕದೊಳಗೆ ಆನೆ ಮರಿಯೊಂದು ಬಿದ್ದು ಬಿಡುತ್ತದೆ ಎಂಬಲ್ಲಿಗೆ ಆನೆ ಮತ್ತು ಮಾನವನ ಸಂಘರ್ಷದ ತೀವ್ರವಾದ ಕಥೆಯೊಂದು ತೆರೆದುಕೊಳ್ಳುತ್ತದೆ.

ಭಾರದ್ವಾಜ ಕೆ. ಆನಂದತೀರ್ಥರು ಬರೆದ ಈ ಕಾದಂಬರಿಯಲ್ಲಿ ಒಂದು ಊರಿನ ಕತೆ ಇದೆ. ನಾಡಿನ ಕತೆ ಇದೆ. ದುರಾಸೆಯ ಕತೆ ಇದೆ. ಬದುಕು ಹೇಗೆ ಬದಲಾಯಿತು ಎಂಬ ಕತೆ ಇದೆ. ವಿದ್ಯುತ್ ಸಂಪರ್ಕ ಸಿಕ್ಕಿ ಕೊಳವೆ ಬಾವಿಗಳು ಬಂದು ದೂರದೂರಿನ ದೊಡ್ಡ ಮನುಷ್ಯರ ಕಾರುಗಳು ಬಂದು ಒಂದು ಪುಟ್ಟ ಹಳ್ಳಿಯ ಮಣ್ಣು ರಸ್ತೆಯ ವ್ಯಕ್ತಿತ್ವ ಹೇಗೆ ಬದಲಾಗುತ್ತದೆ ಎಂಬುದನ್ನು ಆನಂದತೀರ್ಥ ಭಾರದ್ವಾಜರು ಎಷ್ಟು ವಿವರವಾಗಿ ಬರೆಯುತ್ತಾರೆ ಎಂದರೆ ಆ ಹಳ್ಳಿಯ ಚಿತ್ರಗಳು ಕಣ್ಮುಂದೆ ಮೆರವಣಿಗೆ ಹೊರಡುತ್ತವೆ.

ಊರು ಬದಲಾಯಿತು. ಕಾಡು ಕಡಿಮೆಯಾಯಿತು. ಮನುಷ್ಯರು ಬದಲಾದರು. ದುಡ್ಡು ಹೆಚ್ಚಾಯಿತು. ಆದರೆ ಆನೆಗಳ ಕಷ್ಟ ಯಾರಿಗೂ ಬೇಡವಾಯಿತು. ಆನೆಗಳ ನಿಟ್ಟುಸಿರು ಆಲಿಸುವ ಆಸಕ್ತಿ ಇರುವವರು, ಆನೆ ಮತ್ತು ಮಾನವನ ಸಂಘರ್ಷದ ಕತೆಗಳನ್ನು ತಿಳಿಯುವ ಕುತೂಹಲ ಉಳ್ಳವರು ಈ ಕಾದಂಬರಿಯನ್ನು ಓದಬೇಕು.

ಪತ್ರಿಕೋದ್ಯಮದ ಒಳಹೊರಗು, ಕಾಡಿನ ಪಕ್ಕದ ಹಳ್ಳಿಗಳ ಆತ್ಮ, ದಾರಿ ತಪ್ಪಿದ ಆನೆ ಮರಿಗಳ ಕಣ್ಣೀರು, ವಿದ್ಯಾಭ್ಯಾಸಕ್ಕೆ ಒದ್ದಾಡುವ ಮಕ್ಕಳ ಸಂಕಷ್ಟ, ದಾರಿಗಳಲ್ಲಿ ಅಡಗಿರುವ ಆನೆಗಳ ಜೀವ, ಸಿಟಿ ಸೇರುವಾಗ ಹೃದಯದಿಂದ ದೂರಾಗುವ ಕೃಷಿ ಪ್ರೀತಿ, ಹಿರಿಯ ಜೀವಗಳ ನಗರ ವಿರೋಧಿ ಮನಸ್ಥಿತಿ ಎಲ್ಲವೂ ಒಂದಕ್ಕೊಂದು ಹೆಣೆದುಕೊಂಡು ಸೂಕ್ಷ್ಮವಾಗಿ ಕಾಡುವುದೇ ಈ ಕಾದಂಬರಿಯ ಸಾರ್ಥಕತೆ. ಓದಿಸಿಕೊಂಡು ಹೋಗುವ ಸರಳ ನಿರೂಪಣೆ, ಯಾವುದನ್ನೂ ಚಂದ ಮಾಡದ ಕತೆ ಕಟ್ಟುವ ಶೈಲಿ ನಂಗಂತೂ ತುಂಬಾ ಇಷ್ಟವಾಯಿತು.

ಈ ಕಾದಂಬರಿಯಲ್ಲೊಂದು ಹಿನ್ನೀರಿನಲ್ಲಿ ನಿಂತ ಆನೆಗಳ ಇಮೇಜ್ ಇದೆ. ಆ ಇಮೇಜ್ ಅನ್ನು ನಾನು ವಿವರಿಸಬಾರದು. ನೀವು ಓದಬೇಕು. ಆದರೆ ಇಮೇಜ್ ನಲ್ಲಿ ಸೊಂಡಿಲು ಎತ್ತಿಕೊಂಡು ನಿಂತ ಆನೆಯ ಚಿತ್ರ ನನ್ನ ಮನಸ್ಸಲ್ಲಿದೆ. ಅದರ ಆರ್ತನಾದ ಕಿವಿಯಲ್ಲಿದೆ.

MORE FEATURES

'ಕೂಡಿಟ್ಟ ಹಣ ಎಲ್ಲಿ ಹೋಯಿತು?'

07-09-2024 ಬೆಂಗಳೂರು

“ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅ...

ಅಂತಃಕರಣ ಎಂದರೆ ಆಂತರಿಕ ಕಾರ್ಯಗಳು

07-09-2024 ಬೆಂಗಳೂರು

"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂ...

ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ

07-09-2024 ಬೆಂಗಳೂರು

“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರ...