Date: 28-11-2021
Location: ಬೆಂಗಳೂರು
'ಸರಸ್ವತಿಯವರ ರಾಮಾಯಣವು, ಅಯೋಧ್ಯೆಯ ರಾಮಾಯಣವಾಗಿರುವುದರ ಜೊತೆಗೆ ಸ್ಥಳೀಯ ರಾಮಾಯಣವಾಗಿದೆ. ಹೀಗಾಗಿ ಇದು ನಮ್ಮ ಮನೆ ಮನೆಗಳಲ್ಲಿ ನಡೆಯುವ ಕತೆಯಾಗಿ ಕಾಣಿಸುತ್ತದೆ' ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ 'ಮಹಿಳಾ ರಂಗಭೂಮಿ’ ಅಂಕಣದಲ್ಲಿ ದು. ಸರಸ್ವತಿ ಅವರ ಸಣ್ತಿಮ್ಮಿ ಪುರಾಣದ ಕುರಿತು ವಿಶ್ಲೇಷಿಸಿದ್ದಾರೆ.
ದು. ಸರಸ್ವತಿಯವರು ಮಹಿಳಾ ಸಂಘಟನೆ, ಅಸಂಘಟಿತ ಕಾರ್ಮೀಕರ ಸಂಘಟನೆಗಳ ಮೂಲಕ ಬೆಳೆದು ಬಂದವರು. ಇವರು ಲೇಖಕಿಯಾಗಿರುವಂತೆ ಉತ್ತಮ ರಂಗಕಲಾವಿದೆಯೂ ಆಗಿದ್ದಾರೆ. ಈಗಾಗಲೇ ಕವನ ಸಂಕಲನ, ಕಥಾಸಂಕಲನಗಳನ್ನು ಪ್ರಕಟಿಸಿರುವ ಇವರು 2018ರಲ್ಲಿ “ಸಣ್ತಿಮ್ಮಿ ಪುರಾಣ” ಎಂಬ ಏಕಾಂಕ ನಾಟಕಗಳ ಸಂಕಲನವನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಬರುವ “ರಾಮಾಯ್ಣ” ಏಕವ್ಯಕ್ತಿ ಪ್ರದರ್ಶನದ ನಾಟಕವಾಗಿದೆ. ಇಲ್ಲಿಯ ಏಕಾಂಕಗಳನ್ನು ಬೀದಿನಾಟಕಗಳಂತೆಯೂ ಪ್ರಯೋಗಿಸಬಹುದಾಗಿದೆ.
ದಲಿತಲೋಕದಲ್ಲಿ ಬೆಳೆದ ದು. ಸರಸ್ವತಿಯವರು ಸಾಹಿತ್ಯವನ್ನು ರಚಿಸುವ ಉದ್ದೇಶವೇ ತುಂಬ ವಿಶಿಷ್ಟ ವಾದುದಾಗಿದೆ. ಇಲ್ಲಿ ಬರುವ “ಸಣ್ತಿಮ್ಮಿ” ಲೇಖಕಿಯೊಳಗಿನ ಪ್ರತಿಬಿಂಬವಾಗಿದ್ದಾಳೆ. ಬೀಚಿಯವರ ತಿಮ್ಮನಂಥೆ, ಸರಸ್ವತಿಯವರ ಸಣ್ತಿಮ್ಮಿ ಕಾಣಿಸಿಕೊಂಡಿದ್ದಾಳೆ. ದೇವನೂರ ಮಹಾದೇವ ಅವರು ಮೈಸೂರು ಪ್ರಾಂತ್ಯದ ಆಡುಭಾಷೆಯನ್ನು ತಮ್ಮ “ಕುಸುಮ ಬಾಲೆ”ಯಲ್ಲಿ ಬಳಸಿದಂತೆ, ಸರಸ್ವತಿಯವರು, ತುಮಕೂರು ಪ್ರದೇಶದ ಗ್ರಾಮೀಣ ಭಾಷೆಯಲ್ಲಿ ಈ ನಾಟಕಗಳನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿರುವುದು ಆಡುಭಾಷೆ ಮಾತ್ರವಲ್ಲ ಅದು ಹೃದಯದ ಭಾಷೆಯೂ ಆಗಿದೆ. ಮೌಖಿಕ ಕಾವ್ಯವನ್ನು ರಂಗಕ್ಕಳವಡಿಸಿಕೊಂಡ ಉದಾಹರಣೆಗಳನ್ನು ಜನಪದ ರಂಗಭೂಮಿಯಲ್ಲಿ ಕಾಣಬಹುದು. ಅದೇ ರೀತಿ ಇಲ್ಲಿ ಸರಸ್ವತಿಯವರೊಳಗಿನ ಕಾವ್ಯ ಏಕವ್ಯಕ್ತಿ ಪ್ರದರ್ಶನದ ಮೂಲಕ ರಂಗ ರೂಪವಾಗಿಸಿಕೊಂಡಿದೆ. ಈ ನಾಟಕಗಳಲ್ಲಿ “ಸಣ್ತಿಮ್ಮಿ” ಎಂಬುದು ಕೇವಲ ಒಂದು ಹೆಸರಾಗಿ ಬಂದಿರದೆ, ಅದು ಅಂತರಂಗದ ಅರಿವಾಗಿ, ಹೃದಯದ ಭಾಷೆಯಾಗಿ, ತಳಸಂಸ್ಕೃತಿಯ ಅನುಭವವಾಗಿ, ಸಮಾನತೆಯ ಸಂಕೇತವಾಗಿ, ಪ್ರತಿರೋಧದ ಅಸ್ತ್ರವಾಗಿ ಕಾಣಿಸಿಕೊಂಡಿದೆ. ಬೀತಿಯವ ತಿಮ್ಮನ ಹಾಗೆ, ಸರಸ್ವತಿಯವರ ಸಣ್ತಿಮ್ಮಿ ಕನ್ನಡ ಸಾಹಿತ್ಯದಲ್ಲಿ ಹೊಸ ಹೆಜ್ಜೆಗಳನ್ನು ಮೂಡಿಸಿದ್ದಾಳೆ. ಹೀಗಾಗಿ ಈ ಸಂಕಲನದ ನಾಟಕಗಳು, ಇತರ ಮಹಿಳೆಯರ ನಾಟಕಗಳಿಗಿಂತ ತುಂಬ ಭಿನ್ನವಾಗಿವೆ ಮತ್ತು ವಿಶಿಷ್ಟವಾಗಿವೆ. ಇಲ್ಲಿಯ ವಾಗ್ವಾದ ಇಂದಿನ ಜಾಗತೀಕರಣಕ್ಕೆ ಮುಖಾಮುಖಿಯಾಗಿದೆ.
ರಾಮಾಯಣ-ಮಹಾಭಾರತ ಕಾವ್ಯಗಳು ಈ ದೇಶದಲ್ಲಿ ಉಂಟುಮಾಡಿದ ಪ್ರಭಾವ ತೀವ್ರತರವಾದುದಾಗಿದೆ. ವಾಲ್ಮೀಕಿ ರಾಮಾಯಣದಿಂದ ಹಿಡಿದು ಇಲ್ಲಿಯವರೆಗೆ ನೂರಾರು ರಾಮಾಯಣಗಳು ರಚನೆಯಾಗಿವೆ. “ತಿಣುಕಿದನು ಘಣಿರಾಯ ರಾಮಾಯಣದ ಕವಿಗಳ ಭಾರದಲ್ಲಿ ಎಂದು ಕುಮಾರವ್ಯಾಸಕವಿ ಹದಿನೈದನೆ ಶತಮಾನದಲ್ಲಿಯೇ ಹೇಳಿದ್ದಾನೆ. ಆ ರಾಮಾಯಣಗಳ ಸಾಲಿಗೆ ಈಗ ಸಣ್ತಿಮ್ಮಿ ರಾಮಾಯಣವೂ ಸೇರಿಕೊಂಡಿದೆ. ಇದನ್ನು ರಾಮಾಯಣ ಎನ್ನವುದಕ್ಕಿಂತ
ಸೀತಾಯಣ ಎನ್ನುವುದೇ ಸೂಕ್ತವಾಗಿದೆ. ಇಲ್ಲಿ ಸೀತೆಯ ಪಾತ್ರವೇ ಪ್ರಧಾನವಾಗಿದೆ. ಉಳಿದ ಲೇಖಕರು ರಾಮಾಯಣವನ್ನು ರಚಿಸುವಾಗ ತಾವು ವಾಲ್ಮೀಕಿ ರಾಮಾಯಣದಿಂದ, ಸ್ಕಂದ ರಾಮಾಯಣದಿಂದ ಪ್ರಭಾವಿತರಾಗಿದ್ದೇವೆಂದು ಬರೆದರೆ ದು.ಸರಸ್ವತಿಯವರು ತಾವು ಯಾರಿಂದ ಪ್ರಭಾವ ಗೊಂಡರೆಂಬುದನ್ನು ಹೀಗೆ ಹೇಳುತ್ತಾರೆ.
“ನಾನು ರಾಮುನ್ನ ಕಂಡಿರಾದು ಆಂಜನೇಸ್ವಾಮಿ ಎದೆವಳ್ಗೆ. ಒಂದ್ ಮಗ್ಲಿಗೆ ಸೀತೆ, ಇನ್ನೊಂದ್ ಮಗ್ಲಿಗೆ ಲಚ್ಮಣ. ನಾನು ರಾಮಾಯ್ಣ ಕೇಳಿರಾದು ನಮ್ ತಾತ್ನ ಬಾಯ್ನಾಗೆ. ನಮ್ ತಾತ್ನ ಹೆಸ್ರು ಗಾರೆ ನರ್ಸಪ್ಪ ಅಂತವ. ವಾರ ಮಾಡಿದ್ದಿನ ಪೇಟ ಕಟ್ಳಂಡು, ಮೂರ್ನಾಮ ಆಕ್ಳಂಡು ಶಂಖ, ಜಾಗ್ಟೆ, ಗಲ್ಡ್ ಗಂಬ ಇಡ್ಳಂಡು ವಂಟ್ರೆ ಅವ್ನೊಂದು ಭಾಗ ದ್ಯಾವ್ರೊಂದು ಭಾಗ ಅನ್ಸದು” (ಪುಟ:30, ಸಣ್ತಿಮ್ಮಿ ಪುರಾಣ, 2018)
ಸರಸ್ವತಿಯವರ ಈ ಮಾತಿನಲ್ಲಿ ಒಂದು ಸಿದ್ಧಾಂತವೇ ಅಡಗಿದೆ. ಆಂಜನೇಯಸ್ವಾಮಿ ಎದೆವಳ್ಗೆ ಕಾಣಿಸುವ ರಾಮ ಇವರು ಕಂಡ ರಾಮನಾಗಿದ್ದಾನೆ. ಆಂಜನೇಯಸ್ವಾಮಿ ತಳಸಂಸ್ಕೃತಿಯ ಪ್ರತೀಕವಾಗಿದ್ದಾನೆ. ಇಂದು ಹಳ್ಳಿ ಹಳ್ಳಿಗಳಲ್ಲಿ ಆಂಜನೇಯಸ್ವಾಮಿ ದೇವಸ್ಥಾನಗಳಿವೆಯೇ ಹೊರತು, ರಾಮನ ದೇವಸ್ಥಾನಗಳಿಲ್ಲ. ತಳಸಂಸ್ಕೃತಿಯ ಶಿಶುವಾಗಿ ಹುಟ್ಟಿಕೊಂಡ ಶಿಷ್ಟ ಸಂಸ್ಕೃತಿ ಇಂದು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಸಿಕ್ಕು ನಲುಗಿ ಹೋಗುತ್ತಿರುವ ಸಂದರ್ಭದಲ್ಲಿ ಸರಸ್ವತಿಯವರು ಕಂಡ ಆಂಜನೇಯಸ್ವಾಮಿ ಎದೆಯೊಳಗಿನ ರಾಮ ಕುತೂಹಲ ಹುಟ್ಟಿಸುತ್ತಾನೆ. ಇವರ ತಾತ ಗಾರೆ ನರ್ಸಪ್ಪ ದೇವರ ಒಂದು ಭಾಗವಾಗಿರೋದು, ಮನುಷ್ಯ ಪ್ರಯತ್ನಕ್ಕೆ ಸಿಕ್ಕ ಫಲವಾಗಿದೆ.
ಸರಸ್ವತಿಯವರ “ರಾಮಾಯ್ಣ” ನಾಟಕದ ವ್ಯಾಪ್ತಿ ಇರುವುದು ಕೇವಲ ಹನ್ನೆರಡು ಪುಟಗಳಲ್ಲಿ; ಆದರೆ ಇದು ಮಾಡುವ ಪ್ರಭಾವ ಮಾತ್ರ ತೀವ್ರತರವಾದುದಾಗಿದೆ. ಏಕವ್ಯಕ್ತಿ ಪ್ರದರ್ಶನದಲ್ಲಿ ನಾಟಕ ಅರ್ಧ ತಾಸಿನೊಳಗೆ ಮುಗಿದು ಹೋಗುತ್ತದೆ. ನಾಟಕ ನೋಡಿದ ನಂತರ ಇದರ ಚಿಂತನ-ಮಂಥನ ಕ್ರಿಯೆ ಪ್ರೇಕ್ಷಕರ ಮನಸ್ಸಿನಲ್ಲಿ ತಿಂಗಳುಗಟ್ಟಲೇ ನಡೆಯುತ್ತಿರುತ್ತದೆ. ಹಸಿಗೋಡೆಗೆ ಒಗೆದ ಹರಳುನೆಟ್ಟಂತೆ, ಕೃತಿ ಚಿಕ್ಕದಾದರೂ ಸಾಮಾನ್ಯ ಪ್ರೇಕ್ಷಕರ ಮನಸ್ಸಿಗೆ ನಾಚಿ ಬಿಡುತ್ತದೆ. ಸ್ವತಃ ಸರಸ್ವತಿಯವರೇ ಈ ನಾಟಕವನ್ನು ಏಕವ್ಯಕ್ತಿ ಪ್ರದರ್ಶನದ ಮೂಲಕ ರಂಗಕ್ಕೆ ತಂದಿದ್ದಾರೆ. ಈ ನಾಟಕದ ಅನೇಕ ಪ್ರಯೋಗಗಳು ಯಶಸ್ಸು ಕಂಡಿವೆ.
ಈ ನಾಟಕದ ಕಥಾನಕ ತುಂಬ ಸಂಕ್ಷಿಪ್ತವಾಗಿದೆ. ಕೇವಲ ಹನ್ನೆರಡು ಪುಟಗಳಲ್ಲಿ ಇಡೀ ರಾಮಾಯಣದ ಕಥೆಯನ್ನೇ ತೆರೆದು ತೋರಿಸುತ್ತದೆ. ಕಥೆಯನ್ನು ಹೇಳುವ ಕ್ರಮ ಸಂಕ್ಷಿಪ್ತವಾಗಿರುವುದರ ಜೊತೆಗೆ ಸಶಕ್ತವೂ, ಪರಿಣಾಮಕಾರಿಯೂ, ಆಗಿದೆ. ಉಸಿರಿನಷ್ಟೇ ಸಹಜವಾಗಿ ಇಲ್ಲಿಯ ಮಾತುಗಳು ಪ್ರೇಕ್ಷಕರ ಒಳಗೆ ಸೇರಿಕೊಂಡು ಗಾಢ ಪ್ರಭಾವವನ್ನುಂಟು ಮಾಡುತ್ತವೆ.
“ಇದಾನ್ ಸೋದ, ಎಲೆಕ್ಸನ್ನು ಇಲ್ದೆ ಇದ್ದಂತಹ ಕಾಲದಲ್ಲಿ ಜನ್ಕ ಅಂಬೋ ರಾಜ್ನ” ಇದ್ದ ಎಂದು ಕತೆ ಪ್ರಾರಂಭವಾಗುತ್ತದೆ. ಆ ಜನಕರಾಜನು ಉಳುಮೆ ಮಾಡುವಾಗ ಭೂಮಿಯೊಳಗಿರುವ ಹೆಣ್ಣು ಕೂಸು ಕಾಣಿಸುತ್ತದೆ, ಅದಕ್ಕೆ ಸೀತೆ ಎಂಬ ಹೆಸರಿಟ್ಟು ಜನಕರಾಜ ಆ ಕೂಸನ್ನು ಸಾಕುತ್ತಾನೆ ಎನ್ನುವ ಲೇಖಕಿಯ ಸಂಭಾಷಣೆಗಳಲ್ಲಿ ಪಡೆನುಡಿಗಳು, ಗಾದೆಮಾತುಗಳು, ತುಂಬ ಪರಿಣಾಮಕಾರಿಯಾಗಿ ಬಂದಿವೆ. ಸೀತೆ ಬೆಳೆದು ದೊಡ್ಡವಳಾಗುತ್ತಾಳೆ, ನಂತರ ಸೀತಾಸ್ವಯಂವರ ನಡೆಯುತ್ತದೆ. ಆ ಸ್ವಯಂವರದಲ್ಲಿ ಶಿವಧನಸ್ಸನ್ನು ಮೇಲೆತ್ತಿ ಮುರಿದು ಹಾಕಿದ ರಾಮನು ಗೆಲ್ಲುತ್ತಾನೆ. ಸೀತೆಯನ್ನು ಮದುವೆಯಾಗಿ ಅಯೋಧ್ಯೆಗೆ ಕರೆತರುತ್ತಾನೆ.
ದಶರಥ ಮಹಾರಾಜನಿಗೆ ವಯಸ್ಸಾಯಿತೆಂದು ರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂದು ಸಿದ್ಧತೆ ನಡೆಯುತ್ತಿರುವಾಗಲೇ ಕೈಕೇಯಿಯು, ಹಿಂದೆ ದಶರಥ ತನಗೆ ಕೊಟ್ಟ ಎರಡು ವರಗಳ ಪ್ರಸ್ತಾಪ ಮಾಡುತ್ತಾಳೆ. ತನ್ನ ಮಗ ಭರತನಿಗೆ ಪಟ್ಟಕಟ್ಟಬೇಕು, ರಾಮನು ಹದಿನಾಲ್ಕು ವರ್ಷ ವನವಾಸಕ್ಕೆ ಹೋಗಬೇಕೆಂದು ಹಠ ಹಿಡಿಯುತ್ತಾಳೆ. ಈ ಮಾತನ್ನು ಕೇಳಿ ದಶರಥ ನೆಲ ಹಿಡಿದವ ತೀರಿ ಕೊಳ್ಳುತ್ತಾನೆ. ತಂದೆ ಕೊಟ್ಟ ಮಾತನ್ನು ನಡೆಸಲು ರಾಮ ವನವಾಸಕ್ಕೆ ಹೋಗುತ್ತಾನೆ. ರಾಮನಜತೆಯಲ್ಲಿ ಸೀತೆಯೂ ವನವಾಸಕ್ಕೆ ಹೋಗುತ್ತಾಳೆ. ಅಣ್ಣನ ಸಹಾಯಕ್ಕೆಂದು ತಮ್ಮ ಲಕ್ಷ್ಮಣನೂ ಹೋಗುತ್ತಾನೆ. ಆಮೇಲೆ ಕಾಡಿನಲ್ಲಿರುವಾಗ ಸೂರ್ಪನಕಿ ಬರುತ್ತಾಳೆ. ರಾಮನ ಚೆಲುವಿಕೆಯನ್ನು ಕಂಡು ಮದುವೆಯಾಗಬೇಕೆಂದು ಹಠಹಿಡಿಯುತ್ತಾಳೆ. ರಾಮನು ಲಕ್ಷ್ಮಣನಿಗೆ ಹೇಳಿದಾಗ, ಲಕ್ಷ್ಮಣನು ಅವಳ ಮೂಗು-ಮೊಲೆಯನ್ನು ಕೊಯ್ದು ಅವಮಾನ ಮಾಡಿ ಕಳಿಸುತ್ತಾನೆ. ಅಳುತ್ತ ರಾವಣನ ಹತ್ತಿರ ಹೋದ ಸೋದರಿ ಸೂರ್ಪನಕಿ ನಡೆದ ಘಟನೆಯನ್ನು ಅಣ್ಣ ರಾವಣನೆದುರು ಹೇಳುತ್ತಾಳೆ. ಆಗ ರಾವಣನು ಸೀತೆಯನ್ನು ಅಪಹರಿಸಿ ಕೊಂಡು ಬರುತ್ತಾನೆ. ಈಕಡೆ ರಾಮ ಕಪಿಗಳನ್ನೆಲ್ಲ ಸೇರಿಸಿಕೊಂಡು ಹನುಮಂತನ ಸಹಾಯದಿಂದ ಸಮುದ್ರ ದಾಟಿಕೊಂಡು ಲಂಕೆಮೇಲೆ ಯುದ್ಧಮಾಡಿ ರಾವಣನ್ನ ಕೊಂಡು ಸೀತೆಯನ್ನು ಕರೆದುಕೊಂಡು ಬರುತ್ತಾನೆ.
ವನವಾಸ ಮುಗಿಸಿಕೊಂಡು ಬಂದಮೇಲೆ, ಅಯೋಧ್ಯೆಯಲ್ಲಿ ಸೀತೆಗೆ ಅಗ್ನಿ ಪರೀಕ್ಷೆ ನಡೆಯುತ್ತದೆ. ಅದರಲ್ಲಿಯೂ ಅವಳು ಗೆದ್ದು ಬಂದಮೇಲೆ ಅಗಸನ ಅಪವಾದದ ಮಾತಿಗೆ ಹೆದರಿ ರಾಮನು ತುಂಬ ಗರ್ಭಿಣಿಯಾಗಿದ್ದ ಸೀತೆಯನ್ನು ಕಾಡಿಗಟ್ಟಿ ಬರಲು ಲಕ್ಷ್ಮಣನಿಗೆ ಹೇಳುತ್ತಾನೆ. ಸೀತೆ ಕಾಡಿನಲ್ಲಿದ್ದಾಗ ವಾಲ್ಮೀಕಿ ಋಷಿಗಳು ಬಂದು ಆಕೆಯನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತಾರೆ, ಅಲ್ಲಿ ಆಕೆ ಲವ-ಕುಶರಿಗೆ ಜನ್ಮ ನೀಡುತ್ತಾಳೆ. ನಂತರದಲ್ಲಿ ಬೆಳೆದು ದೊಡ್ಡವರಾದ ಮಕ್ಕಳು ರಾಮನ ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿಹಾಕುತ್ತಾರೆ. ಆಗ ಸ್ವತಃ ರಾಮನೇ ಕಾಡಿಗೆ ಬರುತ್ತಾನೆ. ಋಷಿಗಳನ್ನು ಭೇಟಿಯಾಗಿ ಲವ-ಕುಶರನ್ನು ಕರೆದುಕೊಂಡು ಅಯೋಧ್ಯೆಗೆ ಹೋಗುತ್ತಾನೆ. ಆದರೆ ಈ ಕಥೆಯಲ್ಲಿ ಸೀತೆ ರಾಮನೊಂದಿಗೆ ಹೋಗುವುದಿಲ್ಲ. ಆಶ್ರಮದಲ್ಲಿಯೇ ಉಳಿಯುತ್ತಾಳೆ.
ಸೀತೆಯೇ ಭೂಮಿಯಾಗಿ ಕಾಣಿಸಿಕೊಳ್ಳುತ್ತಾಳೆ. ಅಲ್ಲಿಗೆ ನಾಟಕ ಮುಗಿಯುತ್ತದೆ. ಹೀಗಾಗಿ ಈ ನಾಟಕದಲ್ಲಿ ಮೂಲ ರಾಮಾಯಣ ಕತೆಗೆ ಯಾವುದೇ ಧಕ್ಕೆಯುಂಟಾಗಿಲ್ಲ. ಆದರೆ ಅದನ್ನು ಹೇಳುವ ರೀತಿ ತುಂಬ ಕುತೂಹಲಕಾರಿಯಾಗಿದೆ. ಅಕ್ಕ-ತಂಗಿಯರು ಅಡುಗೆಮನೆಯಲ್ಲಿ ಮಾತನಾಡಿದಂತೆ ಇಲ್ಲಿಯ ಕತೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಹೆಣ್ಣಿನ ಸಾಧ್ಯತೆಗಳಿಗೆ ಇಲ್ಲಿ ಹೆಚ್ಚಿನ ಗಮನ ಕೊಡಲಾಗಿದೆ.
14ವರ್ಷ ವನವಾಸ ಮುಗಿಸಿ ಮರಳಿ ಅಯೋಧ್ಯೆಗೆ ಬಂದಾಗ ಸೀತೆ ಮೊದಲು ತಬ್ಬಿಕೊಂಡಿದ್ದು ಊರ್ಮೀಳೆಯನ್ನು. ಹದಿನಾಲ್ಕು ವರ್ಷ ಲಕ್ಷ್ಮಣನನ್ನು ಬಿಟ್ಟು ಒಂಟಿಯಾಗಿದ್ದ ಅವಳ ಬಗ್ಗೆ ಸೀತೆಗೆ ಅನುಕಂಪ. 14ವರ್ಷಗಳಲ್ಲಿ ಊರ್ಮೀಳೆ ಅಯೋಧ್ಯೆಯಲ್ಲಿ ಸಾವಿರಾರು ಮರಗಳನ್ನು ಬೆಳೆಸಿದ್ದಳು. ಅವುಗಳೇ ತನ್ನ ಮಕ್ಕಳೆಂದು ತಿಳಿದುಕೊಂಡಿದ್ದೇನೆಂದು ಸೀತೆಗೆ ಹೇಳುತ್ತಾಳೆ. ಹೀಗೆ ಇಲ್ಲಿ ಊರ್ಮೀಳೆಯ ಎತ್ತರದ ವ್ಯಕ್ತಿತ್ವವೂ ಬೆಳಕಿಗೆ ಬಂದಿದೆ.
ರಾಮ-ಸೀತೆ-ಲಕ್ಷ್ಮಣ ವನವಾಸ ಮುಗಿಸಿ ಮರಳಿ ಬಂದಾಗ ಅಯೋಧ್ಯಯ ಖಜಾನೆ ಖಾಲಿ ಆಗಿತ್ತು. ಆಗ ರಾಜನಿಗೆ ಚಿಂತೆಯಾಯಿತು. ಹೇಗೆ ಮಾಡೋದೆಂದು ರಾಮ ಚಿಂತಿಸತೊಡಗಿದಾಗ, ತಲೆ ಇರೋದು ಚಿಂತೆ ಮಾಡೋಕಲ್ಲ, ಉಪಾಯ ಕಂಡಹಿಡಿಯೋಕೆ ಎಂದು ಹೇಳಿದ ಸೀತೆ, ರಾಜ್ಯದ ಬೊಕ್ಕಸವನ್ನು ಹೆಚ್ಚಿಸಲು ಒಂದು ಉಪಾಯ ಹೇಳುತ್ತಾಳೆ. ಇದು ಸರಸ್ವತಿಯವರು ರಾಮಾಯಣಕ್ಕೆ ಸೇರ್ಪಡೆ ಮಾಡಿದ ಹೊಸ ಸೃಷ್ಟಿಯಾಗಿದೆ. ಕುಂಬಳಕಾಯಿ ಬೀಜಗಳನ್ನೆಲ್ಲ ಒಳಗಿಸಿಟ್ಟುಕೊಂಡ ಸೀತೆ, ರಾಮನಿಗೆ ಹೇಳುತ್ತಾಳೆ. ಈ ಕುಂಬಳ ಬೀಜಗಳನ್ನು ಪ್ರಜೆಗಳ ಮನೆ ಮನೆಗೆ ಎರಡರಂತೆ ಕೊಡಬೇಕು, ಬೀಜ ಮೊಳೆತು ಬಳ್ಳಿಹಬ್ಬಿ ಕಾಯಿಬಿಟ್ಟ ಮೇಲೆ ಪ್ರತಿ ಮನೆಯಿಂದ ಅರಮನೆಗೆ ಎರಡೆರಡು ಕುಂಬಳಕಾಯಿಗಳನ್ನು ತಂದು ಕೊಡಬೇಕೆಂದು ಷರತ್ತು ಹಾಕಿದಳು. ಒಂದುವೇಳೆ ಕುಂಬಳಕಾಯಿ ತಂದು ಕೊಡೋದು ಆಗಿದ್ದರೆ ಕುಂಬಳಕಾಯಿ ಗಾತ್ರದ ಒಡವೆ, ಬಂಗಾರ ತಂದು ಕೊಡಬೇಕೆಂದು ಕರಾರು ಹಾಕಿದಳು. ಇದನ್ನು ಕೇಳಿದ ರಾಮ ಅವಳನ್ನು ಮಿಕಿಮಿಕಿ ನೋಡಿದ. ಕೊನೆಗೆ ಅವಳ ಮಾತಿಗೆ ಒಪ್ಪಿಕೊಂಡು ಎಲ್ಲರಿಗೂ ಕುಂಬಳ ಬೀಜಗಳನ್ನು ಕೊಟ್ಟುಕಳಿಸಿದ. ಯಾರ ಮನೆಯಂಗಳದಲ್ಲಿಯೂ ಕುಂಬಳ ಬಳ್ಳಿ ಬೆಳೆಯಲೇ ಇಲ್ಲ. ಸುಂಕಕೊಡದೇ ಇದ್ದುದಕ್ಕೆ ಬಳ್ಳಿ ಬೆಳೆದಿಲ್ಲವೆಂದು ತಿಳಿದುಕೊಂಡ ಪ್ರಜೆಗಳು ಕುಂಬಳಕಾಯಿ ಗಾತ್ರದಷ್ಟೇ ಒಡವೆ-ಬಂಗಾರವನ್ನು ಅರಮನೆಗೆ ತಂದು ಕೊಟ್ಟರು. ಆಗ ಅರಮನೆಯ ಭಂಡಾರ ಹೆಚ್ಚಾಯಿತು. ಸೀತೆಯ ಈ ಉಪಾಯವನ್ನು ಕಂಡು ರಾಮನಿಗೆ ಆಶ್ಚರ್ಯವಾಗುತ್ತದೆ. ಆಗ ಆತ ಸೀತೆಯನ್ನು ಕೇಳಿದಾಗ ಆಕೆ ಹೇಳುತ್ತಾಳೆ. “ಏ ದಡ್ಡನೀನು, ಬೀಜನೆಲ್ಲಾ ಹುರದು ಕೊಟ್ಟಿದ್ದೆ ಅದಕ್ಕೆ ಅವು ಚಿಗುರಲಿಲ್ಲ.” ಎನ್ನುತ್ತಾಳೆ. ಸೀತೆಯ ಈ ಉಪಾಯದಿಂದ ರಾಜ್ಯದ ಬೊಕ್ಕಸ ತುಂಬಿದ್ದಕ್ಕೆ ರಾಮ ಸಂತೋಷಗೊಳ್ಳುತ್ತಾನೆ. ಸೀತೆ ಕೇವಲ ಒಂದು ಹೆಣ್ಣು ಮಾತ್ರವಲ್ಲ, ಅವಳು ಚತುರಳೂ, ರಾಜ್ಯವನ್ನು ನಡೆಸಬಲ್ಲ ಶಕ್ತಿಯುಳ್ಳವಳೂ ಎಂಬುದನ್ನು ಈ ನಾಟಕದಲ್ಲಿ ಮೊದಲ ಬಾರಿಗೆ ಹೀಗೆ ಸರಸ್ವತಿಯವರ ರಾಮಾಯಣ ಅನೇಕ ವಿಶಿಷ್ಟತೆಗಳಿಂದ ಕೂಡಿದೆ.
ಸೀತೆ ಈ ಎಲ್ಲ ತಿಳೂವಳಿಕೆಯನ್ನು, ಜ್ಞಾನವನ್ನು ಪ್ರಕೃತಿಯಿಂದಲೇ ಪಡೆದಳು. ಹೀಗಾಗಿ ಕಾಡಿನವಾಸ ಸೀತೆಗೆ ಅನೇಕ ಸಂಗತಿಗಳನ್ನು ಕಲಿಸಿಕೊಟ್ಟಿತು. ಕಾಡಿನಲ್ಲಿರುವ ವಿಷದ ಬಳ್ಳಿ, ಅಮೃತಬಳ್ಳಿ ಯಾವುದೆಂದು ಗುರುತಿಸಿದಳು. ಹರಿಯೋ ನೀರು, ಬೀಸೊ ಗಾಳಿ, ಉರಿಯೋ ಬೆಂಕಿಯನ್ನು ನೋಡಿ ಬದುಕಿನ ಮರ್ಮವನ್ನು ಕಂಡುಕೊಂಡಳು. ಬಿಸಿಲಿನಲ್ಲಿ ಬೆಂದು, ಮಳೆಯಲ್ಲಿ ನೆಂದು ಮಾಗಿದಳು. ಎಲ್ಲರಿಗೂ ನೆರಳುಕೊಡುವ, ಹಣ್ಣು ಹಂಪಲ ಕೊಡುವ ಮರಗಳನ್ನು ಕಂಡು ಕೃತಜ್ಞಳಾದಳು. ರಾಮ, ಕಾಡಿನಲ್ಲಿ ನಡೆದು ಸುಸ್ತಾದಾಗ ಅವನ ಕಾಲಿಗೆ ನೆಟ್ಟ ಮುಳ್ಳನ್ನು ತೆಗೆಯುವಳು, ಅವನು ಸ್ನಾನ ಮಾಡುವಾಗ ಸಣ್ಣಕಲ್ಲಿನಿಂದ ಬೆನ್ನುತಿಕ್ಕುವಳು. ಅವನಿಗೆ ನಿದ್ದೆ ಬಂದರೆ ತೊಡೆಮೇಲೆ ತಲೆ ಇರಿಸ್ಕೊಂಡು ತಲೆಯಲ್ಲಿದ್ದ ಹೇನು-ಸೀರು ತೆಗೆಯುವಳು. ಆದರೆ ಸೀತೆಯ ಬೇಸರ, ನೋವು, ಕಷ್ಟವನ್ನು ಕೇಳುವವರು ಯಾರೂ ಇಲ್ಲ. ಹೀಗೆ ಸರಸ್ವತಿಯವರು ರೂಪಿಸಿದ ಸೀತೆ ಅಗಾಧ ಪ್ರೀತಿಯ, ಅಂತಃಕರಣದ ವಿಶಾಲಮನಸ್ಸಿನ ಭೂಮಿ ತೂಕದ ಹೆಣ್ಣಾಗಿ ಕಾಣಿಸಿಕೊಂಡಿದ್ದಾಳೆ.
ಸರಸ್ವತಿಯವರ ರಾಮಾಯಣವು, ಅಯೋಧ್ಯೆಯ ರಾಮಾಯಣವಾಗಿರುವುದರ ಜೊತೆಗೆ ಸ್ಥಳೀಯ ರಾಮಾಯಣವಾಗಿದೆ. ಹೀಗಾಗಿ ಇದು ನಮ್ಮ ಮನೆ ಮನೆಗಳಲ್ಲಿ ನಡೆಯುವ ಕತೆಯಾಗಿ ಕಾಣಿಸುತ್ತದೆ. “ಅಂಗು-ಇಂಗು ನಡ್ಕೊಂಡು ತುಂಕೂರ್‍ಗಂಟ ಬಂದ್ ಬುಟ್ಟಿದ್ರು. ನಡ್ಡುನಡ್ಡು ಸೀತ್ಗೆ ಸ್ಯಾನೆ ಸುಸ್ತಾತು, ದಾವ್ರಾತು. ಆಗ ರಾಮ, ಅಯ್ಯಯ್ಯೋ ಸೀತೆದೆಂತ ಪಾಡಾಯ್ತಲ್ಲ ಅಂದ್ಕೊಂಡನೆ ಬಾಣ ತಗ್ದು ಬಂಡ್ಗ ಬುಟ್ಟ ಗುರಿ ಇಟ್ಟು. ಬುಟ್ಟೇಟ್ಗೆ ನೀರ್ ಮ್ಯಾಕೆ ಚುಮ್ ಬುಡ್ತು, ಆಗ ಸೀತೆ ವಟ್‍ತುಂಬ ನೀರ್ ಕುಡ್ಕಂಡ್ಲು.” (ಪುಟ:33)
ಅದು ಯಾವ್ ಜಾಗ ಅಂದ್ಕಂಡ್ರಿ? ದೇವ್ರಾಯ್ನ ದುರ್ಗದಾಗೆ ನಾಮ್ದ ಚಿಲ್ಮೆ ಇಲ್ವ ಅದೆಯ. ನೀರೊಳ್ಳೆ ಎಳ್ನಿರಿದ್ದಂಗವೆ” (ಪುಟ:34) “ಕುದ್ರೆ ಗೋಳು ಬಂದ್‍ವು ಬಂದ್‍ವು ಈ ಕಡೆ ಕೋಲಾರ್ಗಂಟ ಬಂದ್ ಬುಟ್‍ವು. ಲವ-ಕುಸ್ರು ಅಲೇಲೆ ಏಸ್ ಚೆಂದಾಗವೆ ಕುದ್ರೆ ಅಂತ ಇಡ್ಕಂಡ್ರು... (ಪುಟ:40)
ಈ ಎಲ್ಲ ಸಂಭಾಷಣೆಗಳನ್ನು ಗಮನಿಸಿದ ಮೇಲೆ ರಾಮಾಯಣ ನಡೆದದ್ದು ಇಲ್ಲೇ ನಮ್ಮ ಸುತ್ತಮುತ್ತಲಿನ ಊರುಗಳಲ್ಲಿ ಎಂಬ ವಿಷಯ ತಿಳಿಯುತ್ತದೆ. ಕೇಂದ್ರೀಕೃತ ವಸ್ತುವನ್ನೊಳಗೊಂಡ ವಾಲ್ಮಿಕೀ ರಾಮಾಯಣವನ್ನು ಸರಸ್ವತಿಯವರು ವಿಕೇಂದ್ರಿಕರಿಸಿದ್ದಾರೆ. ತುಮಕೂರು, ದೇವರಾಯ್ನದುರ್ಗ, ಕೋಲಾರ ಇಲ್ಲೆಲ್ಲ ಇವರ ರಾಮಾಯಣ ಕಾಣಿಸಿಕೊಂಡಿದೆ. ಇದು ಈ ನಾಕಟದ ಹೊಸ ಸಾಧ್ಯತೆಯಾಗಿದೆ.
ಸರಸ್ವತಿಯವರ ಈ ನಾಟಕದ ಭಾಷೆಯ ಬಗೆಗೇನೆ ಒಂದು ಪ್ರಬಂಧ ರಚಿಸಬಹುದು. ತುಮಕೂರ-ಚಾಮರಾಜನಗರ ಪ್ರದೇಶಗಳ ಆಡು ಭಾಷೆ ಇಲ್ಲಿ ಕಸಿ ಮಾಡಿಸಿಕೊಂಡು ಬೆಳೆದಿದೆ. ಅವರು ಬಳಸಿದ ಕೆಲವು ನುಡಿಗಟ್ಟುಗಳನ್ನು ಪಡೆನುಡಿಗಳನ್ನಿಲ್ಲಿ ನೋಡಬಹುದಾಗಿದೆ.
1.“ಕೆಳ್ಗೆಬಿಟ್ರೆ ಇರ್ವೆ ಕಚ್ಕಂಡೊದಾವೇನೋ, ಮ್ಯಾಕೆ ಇಡ್ಕಂಡ್ರೆ ಕಾಗೆ ಕಚ್ಕಂಡೋದಾವೇನೋ ಅನ್ನಾಂಗೆ ಕಣ್ಣೌಗಿಕ್ಕಂಡು ಸಾಕ್ದ. (ಪುಟ:31)
2.“ಸೀತೆಗೆ ಚಿಮ್ಮೊವಯಸ್ಸು, ಆಸೆನಾಗೆನೋಡೋಳು ರಾಮನ್ನ. ಅವ್ನಂತು ಕಮುಕ್ ಕಿಮುಕ್ ಅಂತಿರ್ಲಿಲ್ಲ.” (ಪುಟ:34)
3.“ಕೊಟ್‍ಮಾತು ಅವ್ನ ವಯ್ಸಿಗಿನ್ನ ಬಾರ್ವಾಗಿತ್ತಲ್ಲ” (ಪುಟ: 34)
4.“ಲೇ ಬಾಡ್ಕ ಇನ್ನೊಂದೆಜ್ಜೆ ಮುಂದಿಕ್ಕೊಯೋ ಉಸಾರ್! ಎಣ್ಣು ಗಂಡಿನ ಸಂಬಂದ ಅಂದ್ರೆ ಏನಂದ್ಕಂಡಿದಿಯೋ ಬೇಕೂಫ?... ನಿಂತ್ಕಳ ದೂರ ಅತ್ರುಕೆ ಬಂದ್ರೆ ಸಿಗ್ದಾಕ್ ಬುಡ್ತೀನಿ ಅಂದೇಟ್ಗೆ ರಾವ್ಣ ಉಸ್ರು ಬುಡ್ಲಿಲ್ಲ.” (ಪುಟ: 36)
5.“ಆದ್ರೆ ಗೆಣೆಕಾರ ರಾಮನ್ನ ರಾಜಾರಾಮ ಮುಚ್ಚಾಗ್ದ. ಸೀತೆನ ಕರ್ಕೊಂಡೋಗಿ ಕಾಡ್ನಾಗೆ ಬಿಟ್ ಬಾ ಅಂತ ಲಚ್ಮಣನಿಗೆ ತಾಕಿತ್ ಮಾಡ್” (ಪುಟ: 39)
6.“ಯಾವ್ದಪ್ಪ ನನ್ ತಾವು? ಈಗ ಈ ಬೂಮ್ತಾಯಿನೇ ನನ್ನ ತಾವು. ಮಕ್ಳು ದೊಡ್ಡವಾದ್‍ವು ಅವ್ಕೆನೂ ನನ್ನ ಅಗತ್ಯ ಇಲ್ಲ. ನಿಂಗಂತು ಕುದ್ಯೋವಯಸ್ನಾಗೆ ನನ್ನ ಅಗತ್ಯ ಇರ್ಲಿಲ್ಲ.” (ಪುಟ: 41)
7.“ಮುಳ್ಗ ಸೂರ್ಯಾನೂ ಎಸ್ ಚೆಂದಾಗವ್ನೆ ವತ್ತಾರಿಂದ ಉರ್ದುರ್ದು ರಚ್ಚೆ ಇಡ್ದು ಸುಸ್ತಾಗಿ ಮಲಿಕ್ಕಳಕ್ಕೆ ತೂಗಡ್ಸೊ ಮಗಿನಂಗೆ ಕಾಣ್ತಾವ್ನೆ” (ಪುಟ: 42)
ಇಂತಹ ಅನೇಕ ನುಡಿಗಟ್ಟುಗಳಿಂದ ಈ ನಾಟಕ ಕಳೆಕಟ್ಟಿದೆ. ಕೆಲವು ಗಾದೆಮಾತುಗಳು ಬಳಕೆಯಾಗಿವೆ. “ಉಗ್ರಲ್ಲಿವೋಗೋದ್ಕೆ ಕೊಡ್ಲಿ ತಾಂಡ್ರಂತೆ” (ಪುಟ:36) ಇಂತಹ ಗಾದೆಮಾತುಗಳಿಂದ ಪಡೆನುಡಿಗಳಿಂದ ನಾಟಕ ಕುತೂಹಲಕಾರಿಯಾಗಿ ಕಾಣಿಸುತ್ತದೆ.
ವಾಲ್ಮಿಕೀ ಆಶ್ರಮಕ್ಕೆ ಬಂದು ಲವ ಕುಶರನ್ನು ಕರೆದುಕೊಂಡು ಹೋಗುವಾಗ, ಸೀತೆಯನ್ನೂ ರಾಮ, ಅಯೋಧ್ಯೆಗೆ ಕರೆಯುತ್ತಾನೆ, ಒತ್ತಾಯಿಸುತ್ತಾನೆ. ಆದರೆ ಆಕೆ ಕೇಳುವುದಿಲ್ಲ. ಹದಿನಾಲ್ಕು ವರ್ಷ ಕಾಡಿನಲ್ಲಿದ್ದು, ನಂತರದಲ್ಲಾದರೂ ಅರಮನೆಯ ಸುಖವನ್ನನುಭವಿಸಬೇಕೆಂಬುದು ಅವಳಿಚ್ಛೆಯಾಗಿರಲಿಲ್ಲ. ಆಶ್ರಮದಲ್ಲಿದ್ದು ವನದಲ್ಲಿ ವನವಾಗಿ, ಭೂಮಿಯೊಂದಿಗೆ ಭೂಮಿಯಾಗಿ ಬಿಡುತ್ತಾಳೆ. ಇಂತಹ ಸೀತೆಯನ್ನು ಇಲ್ಲಿ ಪ್ರಕೃತಿಗೆ-ಭೂತಾಯಿಗೆ ಹೋಲಿಸಿರುವುದು ತುಂಬ ಸೂಕ್ತವಾಗಿದೆ. ಸರಸ್ವತಿಯವರಿಂದ ಇದೇ ಭಾಷೆಯಲ್ಲಿ ಮಹಾಕಾವ್ಯಗಳ ರಳಲೆಂದು ಹಾರೈಸುತ್ತೇನೆ.
ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220
ಈ ಅಂಕಣದ ಹಿಂದಿನ ಬರಹಗಳು:
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.