Date: 11-10-2023
Location: ಬೆಂಗಳೂರು
“ಸಾಮಾಜಿಕ ಅರಿವಿನ ಹರಿಕಾರರಾದ ಬುದ್ಧ, ಬಸವಣ್ಣ, ಅಕ್ಕಮಹಾದೇವಿ, ಕಾರ್ಲ್ ಮಾರ್ಕ್ಸ್, ಗಾಂಧೀಜಿ, ಲೋಹಿಯಾ, ಅಂಬೇಡ್ಕರ್, ದೇವರಾಜ ಅರಸು, ಶಾಂತವೇರಿ ಗೋಪಾಲಗೌಡ ಅವರ ಚಿಂತನ ಧಾರೆಗಳು ಕಾವ್ಯದ ಒಡಲೊಳಗೆ ಅಂತರ್ ವಾಹಿನಿಯಾಗಿ ಹರಿಯುತ್ತದೆ. ಇದು ಕಾವ್ಯಕ್ಕೆ ದೂರಗಾಮಿ ಪರಿಣಾಮವನ್ನು ತಂದಿದೆ,” ಎನ್ನುತ್ತಾರೆ ರಾಜಶೇಖರ ಹಳೆಮನೆ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ‘ಡಾ. ಮಲ್ಲಿಕಾ ಘಂಟಿ ಕಾವ್ಯ: ಪುರುಷ ಪ್ರಮಾಣಗಳ ಭಂಜನ’ ಕುರಿತು ವಿವರಿಸಿದ್ದಾರೆ.
ಬೆವರು ಸುರಿಸಿ ಮಣ್ಣು ಹದ ಮಾಡಿ, ಬೀಜವೂರಿ ಬೆಳೆ ಬೆಳೆದು ಯಜಮಾನರ ಒಡಲ ತುಂಬಿಸಿ, ದಿಕ್ಕಿಲ್ಲದೆ ಬದುಕುವ ಜೀವಿಗಳ ನೆಲೆಯಲ್ಲಿ ನಿಂತು ಇವರ ಕಾವ್ಯ ಲೋಕವನ್ನು ನೋಡುತ್ತದೆ. ಶಾಸ್ತ್ರಬದ್ಧ ಮೀಮಾಂಸೆಯ ಹಂಗಿಲ್ಲದೆ ತನ್ನದೇ ಕಾವ್ಯಬಂಧವನ್ನು ಸೃಷ್ಟಿಸಿಕೊಂಡಿದೆ. ಪ್ರಭುತ್ವದ ಕುರೂಪಿ ಕಬಂಧ ಬಾಹುಗಳ ಚಾಚುವಿಕೆಯಿಂದ ಸಾಮಾನ್ಯರು ಅನುಭವಿಸುವ ಬವಣೆಗಳನ್ನು ಕಾವ್ಯ ಕಟ್ಟುತ್ತದೆ. ತೀವ್ರವಾದ ಆಕ್ರೋಶದ ಒಡಲುರಿಯಲ್ಲಿ ಬೇಯುವಂತೆ ಏಕಮುಖವಾಗಿ ಲೋಕವನ್ನು ಕಾವ್ಯ ನೋಡುವುದಿಲ್ಲ. ಮಾನವೀಯ ಸ್ಪರ್ಶದ ಮೂಲಕ ವ್ಯವಸ್ಥೆಯ ಕರಾಳತೆಯನ್ನು ಚಾರಿತ್ರಿಕವಾಗಿ ಪ್ರತಿನಿಧಿಸುತ್ತದೆ. ಧರ್ಮ, ಅಧಿಕಾರ, ಪ್ರಭುತ್ವ, ಪುರುಷಕೇಂದ್ರಿತ ಮನೋಭಾವಗಳು 'ಮಹಿಳೆ’ಯರ ಭಾವಕೋಶವನ್ನು ಕರಿಗಿಸಿ ತನ್ನ ಅಧೀನಕ್ಕೆ ಈಡು ಮಾಡಿದ ಸಾಂಸ್ಕೃತಿಕ ಸಂಗತಿಗಳನ್ನು ವಿಷಾದ, ವ್ಯಂಗ್ಯದಲ್ಲಿ ನೋಡುತ್ತದೆ. ಅಮಾನವೀಯ ಕ್ರೌರ್ಯಕ್ಕೆ ಒಳಗಾಗುವ ಜೀವಿಗಳ ಅಸಹಾಯಕ ಬದುಕಿನ ವಿನ್ಯಾಸವನ್ನು ಕಾವ್ಯ ಚಿಂತಿಸುತ್ತದೆ. ಶುದ್ಧ ಕಲಾತ್ಮಕತೆಯ ಗೊಡವೆಗೆ ಹೋಗದೆ ಸಾಮಾನ್ಯರ ಬಾಳನ್ನು ಕಾವ್ಯ ಹೇಗೆ ಹಸನು ಮಾಡಬಹುದು ಎಂಬುದರ ಕಡೆ ಕಾವ್ಯದ ಆಸಕ್ತಿ ಇದೆ. ಪುರಾಣ, ಸಾಮಾಜಿಕ ನಂಬಿಕೆಗಳ ಜೊತೆ ಕಾವ್ಯ ಮುಖಾಮುಖಿಯಾಗುತ್ತದೆ. ಹೆಣ್ತನಕ್ಕಂಟಿದ ಚಾರಿತ್ರಿಕ ಶಾಪವನ್ನು ವಿಮೋಚನೆಗೊಳಿಸುವ ಚಿಂತನೆಯನ್ನು ಕಾವ್ಯ ಗಂಭೀರವಾಗಿ ಮಾಡುತ್ತದೆ. `ಹೆಣ್ಣು’ ಅನ್ನುವ ಕಾರಣಕ್ಕೆ ಹರಿದು ಮುಕ್ಕಿ ತಿನ್ನುವ ವ್ಯವಸ್ಥೆಯನ್ನು ತಾಯ್ತನದಿಂದ ಸರಿ ದಾರಿಗೆ ತರುವ ಪರ್ಯಾಯ ಅನ್ವೇಷಣೆಯನ್ನು ಕಾವ್ಯ ಮಾಡುತ್ತದೆ. ಸಾಮಾಜಿಕ ಅರಿವಿನ ವಿವೇಕವು ಕಾವ್ಯದ ಮುಖ್ಯ ಬಿತ್ತಿಯಾಗಿದೆ.
ಸಾಮಾಜಿಕ ಅರಿವಿನ ಹರಿಕಾರರಾದ ಬುದ್ಧ, ಬಸವಣ್ಣ, ಅಕ್ಕಮಹಾದೇವಿ, ಕಾರ್ಲಮಾರ್ಕ್ಸ, ಗಾಂಧೀಜಿ, ಲೋಹಿಯಾ, ಅಂಬೇಡ್ಕರ್, ದೇವರಾಜ ಅರಸು, ಶಾಂತವೇರಿ ಗೋಪಾಲಗೌಡ ಅವರ ಚಿಂತನ ಧಾರೆಗಳು ಕಾವ್ಯದ ಒಡಲೊಳಗೆ ಅಂತರ್ ವಾಹಿನಿಯಾಗಿ ಹರಿಯುತ್ತದೆ. ಇದು ಕಾವ್ಯಕ್ಕೆ ದೂರಗಾಮಿ ಪರಿಣಾಮವನ್ನು ತಂದಿದೆ. ಮುಖ್ಯವಾಗಿ ದುಡಿವ ಮಹಿಳಾ ಸಮುದಾಯಗಳ ಧಾರಣ ಶಕ್ತಿಯಲ್ಲಿ ಅಪಾರ ನಂಬಿಕೆಯನ್ನು ಕಾವ್ಯ ಹೊಂದಿದೆ. ಬಂಡೆಗಲ್ಲಿನಂತ ಸಮಸ್ಯೆಗಳು ಈ ಸಮುದಾಗಳಿಗೆ ಬಂದರೂ, ಎದುರಿಸಿ ಬದುಕನ್ನು ಕಟ್ಟಿಕೊಳ್ಳುತ್ತವೆ. ಅವುಗಳ ಒಡಲ ಧಾತು ಹೊಸ ಹೆಜ್ಜೆಗೆ ದಾರಿಯನ್ನು ನೀಡುತ್ತವೆ. ಕಾವ್ಯದಲ್ಲಿ ಬಳಕೆಯಾಗುವ ನುಡಿಗಟ್ಟುಗಳು ಈ ತಳ ಸಮುದಾಯದ ನೆಲೆಯಿಂದಲೇ ಬಂದಿವೆ. ಅವು ಕಾವ್ಯದಲ್ಲಿ ಯಥಾವತ್ತು ಇಳಿಯದೆ ಹೋರಾಟದ ತಾತ್ವಿಕತೆಯನ್ನು ಪಡೆಯುತ್ತವೆ. ಇವರ ಜೊತೆಗೆ ವಚನಕಾರರು ಕಟ್ಟಿದ ಕಾವ್ಯದ ಸಾಮಾಜಿಕ ವಿನ್ಯಾಸವು ಈ ಕಾವ್ಯದಲ್ಲಿ ಲಯವನ್ನು ಪಡೆದಿದೆ. ವಚನಕಾರರ ಆಶಯಗಳು ಕಾವ್ಯದಲ್ಲಿ ಮೈದಳೆಯುತ್ತವೆ. ಜಾತಿ, ಧರ್ಮಗಳ ಕಟ್ಟುಪಾಡುಗಳು ಸೃಷ್ಟಿಸಿದ ವಿಘಟನೆಗಳನ್ನು ಸಾಮಾಜಿಕವಾಗಿ ಮಹಿಳಾ ಅಸ್ಮಿತೆಯ ನೆಲೆಯಲ್ಲಿ ನಿರಾಕರಿಸುತ್ತವೆ. ಲಿಂಗ ಸಮಾನತೆಯ ಆಶಯದಲ್ಲಿ ಸಾಂಸ್ಕೃತಿಕ ಸಮಾನತೆಯನ್ನು ನೋಡುತ್ತವೆ. ಯಾವುದೇ ಆದರ್ಶವಾದಿ ತತ್ವದಲ್ಲಿ ಮಹಿಳೆಗೆ ಸ್ಥಾನವಿಲ್ಲವೆಂದರೆ ಅದನ್ನು ಒಪ್ಪುವದಿಲ್ಲ. ಆ ತಾತ್ವಿಕತೆಯನ್ನು ಪ್ರಶ್ನಿಸುವುದರ ಮೂಲಕ ಹೊಸ ತಾತ್ವಿಕತೆಯನ್ನು ಕಾವ್ಯ ಕಟ್ಟುತ್ತದೆ.
ಈ ಕಾವ್ಯದಲ್ಲಿ ಆಕ್ರೋಶ ಮಂಜಿನಂತೆ ಹರಿಯುತ್ತದೆ. ಆ ಆಕ್ರೋಶಕ್ಕೆ ನೈತಿಕತೆಯ ಸ್ಪರ್ಷವಿದೆ. ಇದರಿಂದ ಅದು ವಾಚ್ಯವಾಗಿ ಕಾಣಿಸಿಕೊಳ್ಳುವುದಿಲ್ಲ. ಪ್ರಭುತ್ವದ ಕರಿನೆರಳು ಆವರಿಸಿಕೊಳ್ಳುವ ಬಗೆಯನ್ನು ಕಾವ್ಯ ತೀವ್ರವಾಗಿ ತಿರಸ್ಕರಿಸುತ್ತದೆ. ಹೊಸ ಬೆಳಕಿಗಾಗಿ ಹಂಬಲಿಸುತ್ತದೆ. ಮಹಿಳೆಯ ಬೌದ್ಧಿಕತೆಯನ್ನು ತನ್ನಾಧೀನ ಮಾಡಿಕೊಂಡ ಪುರುಷ ಪ್ರಭುತ್ವವನ್ನು ನಿರಸನಗೊಳಿಸುವ ನಿಲುವು ಕಾವ್ಯಕ್ಕಿದೆ. ಲೋಕದ ಎಲ್ಲಾ ಅಧಿಕಾರ ಕೇಂದ್ರಗಳನ್ನು ತನ್ನದನ್ನಾಗಿ ಮಾಡಿಕೊಂಡ ಪುರುಷ ಪ್ರಭುತ್ವವನ್ನು ಮೀರುವ ಬಗೆಯನ್ನು ಕಾವ್ಯ ಶೋಧಿಸುತ್ತದೆ. ಸಾಮಾಜಿಕ ಜನಪದ ನಂಬಿಕೆಗಳೊಳಗಿನ ಆತ್ಮಶಕ್ತಿಯನ್ನು ತನ್ನದಾಗಿಸಿಕೊಂಡು ಪರ್ಯಾಯಗಳನ್ನು ಹುಡುಕುವ ಗಾಢ ಚಿಂತನೆ ಕಾವ್ಯಕ್ಕಿದೆ. ಪ್ರಜಾಪ್ರಭುತ್ವ ಜಾತ್ಯಾತೀತ ಸಮಾನತೆಯ ತತ್ವವನ್ನೇ ಕಾವ್ಯ ಪ್ರಣಾಳಿಕೆಯನ್ನಾಗಿ ಮಾಡಿಕೊಂಡಿದೆ. ಹಾಗಂತ ಅದು ತನ್ನ ಕಲಾತ್ಮಕತೆಯನ್ನು ಬಿಟ್ಟು ಕೊಡುವದಿಲ್ಲ. ರಾಜಕೀಯ ಅಧಿಕಾರದ ಪಾಲನ್ನು ಮಹಿಳೆ ಗಟ್ಟಿಯಾಗಿ ಪಡೆದುಕೊಳ್ಳಬೇಕೆಂಬ ಒತ್ತಾಯವನ್ನು ಮಾಡುತ್ತದೆ. ಈ ನೆಲೆಯಲ್ಲಿ ಡಾ. ಮಲ್ಲಿಕಾ ಘಂಟಿಯವರ ಕಾವ್ಯವನ್ನು ನೋಡಬೇಕಿದೆ.
ಸ್ಥಳೀಯತೆಯಲ್ಲಿ ಅಪಾರ ನಂಬಿಕೆ ಹೊಂದಿದ ಕಾವ್ಯ ಕೆರೆ, ಹಳ್ಳ, ಹೊಳೆಯನ್ನು ತನ್ನ ಭೂಮಿಕೆಯನ್ನಾಗಿ ಮಾಡಿಕೊಂಡಿದೆ. ಆ ಸ್ಥಳೀಯತೆ ಜಾತಿ, ಧರ್ಮಾಂಧತೆ, ಉಳ್ಳವರ ಕ್ರೌರ್ಯದ ಕಿಲುಬಿಲ್ಲದ ಪರಿಶದ್ಧ ತಿಳಿನೀರಿನ ಒರತೆ. ಕಾವ್ಯಕ್ಕೆ ಅದುವೇ ಜೀವದಾಯಿನಿಯಾಗಿ ಹರಿಯುವ ಅಂತರ್ ಗಂಗೆ. ಮಹಿಳಾ ಬವಣೆಗಳು ಹರಿಯುವ ಹೊಳೆಯಲ್ಲಿ ತೊಳೆದುಕೊಂಡು ಹೊಸ ಉಸಿರು ಪಡೆಯುತ್ತವೆ. ಹೊಳೆ ಹೇಗೆ ಮನುಷ್ಯನಿಗೆ ಜೀವಶಕ್ತಿಯೋ ಹಾಗೆ ಇವರ ಕಾವ್ಯಕ್ಕೂ ಜೀವದುಸುರು.
ಅರಗಿಸಿಕೊಳ್ಳುವೆ ಕರಗಿಸಿಕೊಳ್ಳುವೆ
ನಿನ್ನ ನನ್ನ ಕಣ್ಣೀರ
ನೆಲ ಪಿಸು ನುಡಿಯದಂತೆ
ಆಕಾಶ ಮಿಸುಕದಂತೆ
ಹೊಳೆಯ ನೀರು
ಹಡೆದ ತಾಯಿಯ ಮಡಿಲು
ತೊಳೆಯುತ್ತದೆ ತನ್ನ ಗತದ
ಕಲೆಗಳ ಮೈದಡವಿ ಮುದ್ದಿಸುತ್ತದೆ
ನನ್ನಂತೆ ನೀನು ಹರಿಯುತ್ತಿರೆಂದು
ತುಂಬುತ್ತದೆ ನನ್ನೆದೆಯೊಳಗೆ ಛಲದುಸಿರ
(ಹೊಳೆ ಮತ್ತು ನಾನು, ಕಾಮನಬಿಲ್ಲು ಬೆಳಕಲ್ಲ, ಪುಟ- 156, ಪ್ರ. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು- 2018)
ಈ ಕಾವ್ಯ ಹೊಳೆಯನ್ನು ತನ್ನ ಶಕ್ತಿಯನ್ನಾಗಿ ಮಾಡಿಕೊಳ್ಳುತ್ತದೆ. ಬೃಹತ್ತಾದ ಜಲಪಾತಗಳಿಗೆ ಹೊಳೆಯನ್ನು ಎದುರಾಗಿಸುತ್ತದೆ. ಮಹಿಳೆಯ ಧ್ವನಿ ಉಡಿಗಿಸಿದ ಜಗತ್ತನ್ನು ಸಹಿಸಿಕೊಂಡು ಸಾಕಾದ ಜೀವ ಹೊಳೆಯಂತೆ ನಿರಂತರ ಹರಿಯುತ್ತಿರಬೇಕು. ಹೊಳೆ ಬಂದು ಬೀಳುವ ನೂರಾರು ಬಗೆಯ ಕಸ ಕಡ್ಡಿಗಳನ್ನು ಹೊತ್ತುಕೊಂಡು ಚಲಿಸುತ್ತದೆ. ಮಹಿಳೆಯು ತನ್ನ ಜೀವನದಲ್ಲಿ ದೊಡ್ಡ ನೊಗವನ್ನೇ ಹೊತ್ತುಕೊಂಡು ಹೋಗಬೇಕು. ಪುರುಷನ ಅಣ್ಣಂಚಿನಲ್ಲಿಯೇ ಬದುಕಬೇಕಾದ ಮಹಿಳೆ ಹೊಳೆಯೊಂದಿಗೆ ತನ್ನ ಸುಖ ದುಃಖವನ್ನು ನಿವೇದಿಸಿಕೊಳ್ಳಾತ್ತಾಳೆ. ಆಕೆಯ ಸ್ಥಿತಿಯನ್ನು ಯಾರು ಕೇಳಲಿಕ್ಕೆ ತಯಾರಿಲ್ಲ. ಅದು ಆಕೆಯ ಹಣೆಬರಹ ಮತ್ತು ಜೀವನ ವಿಧಾನವೆಂದೆ ಭಾವಿಸುತ್ತಾರೆ. ಆದ್ದರಿಂದ ಆಕೆ ಹೊಳೆಯನ್ನು ನಂಬುತ್ತಾಳೆ. ಅದರಿಂದ ಶಕ್ತಿಯನ್ನು ತುಂಬಿಕೊಳ್ಳುತ್ತಾಳೆ.
ಕಣ್ಣಲ್ಲಿ ಮೊಳೆ ಹೊಡೆದವರ
ಮರೆಯಲು ಆಗು ನನ್ನಂತೆ
ನಿಲ್ಲದಿರೂ ಎಲ್ಲಿಯೂ ಆಸರೆಗೆ
ನಿಂತ ನೆಲವೆಲ್ಲವೂ ವಿಷ ಈ
ಸತ್ಯ ತಿಳಿದಿರಲಿ ನಿನಗೆ
ಶಿಲುಬೆ ಹೊತ್ತು
ನಡೆಯುತ್ತಿರು ಏಸುವಿನಂತೆ (ಅದೇ)
ಮಹಿಳೆ ಅಸ್ತಿತ್ವ ಇಲ್ಲದಂತೆ ಬದುಕುತ್ತಾಳೆ. ಸದಾ ಪುರುಷನ ಆಧೀನ, ತೊತ್ತಾಗಿ ಇರಬೇಕಾದ ಸಾಮಾಜಿಕ ಸುರುಳಿಯಲ್ಲಿ ಆಕೆ ಇದ್ದಾಳೆ. ಆಕೆಯ ಪಾಲಿಗೆ ನೆಲವೆಲ್ಲವೂ ವಿಷ. ಅಂದರೆ ಮಹಿಳೆ ಬಗ್ಗೆ ಇರುವ ಸಾಮಾಜಿಕ ನಿಲುವುಗಳು ವಿಷಪೂರಿತವಾದುವು. ಆಕೆಯ ಸ್ವಾತಂತ್ಯ್ರ, ಹಕ್ಕುಗಳನ್ನು ಧಮನ ಮಾಡುವಂತವು. ಆದ್ದರಿಂದ ಈ ಸಮಾಜದ ವಿಷವನ್ನು ಉಂಡು ಅವರೆದುರಿಗೆ ಕರುಣೆಯಿಂದ ಬದುಕುವ ಇಚ್ಚಾಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಅದುವೆ ಲೋಕವನ್ನು ಎದುರಿಸುವ ಪರಿ.
ನಸು ನಗುತ್ತ ಮತ್ತೆ ಪೂರ್ಣಮೆಗೆ ಹಂಬಲಿಸು
ಕರಾಳ ರಾತ್ರಿಗಳಿಗೆ ನಿಧಾನಿಸು
ಬತ್ತಿದೆದೆಯಲ್ಲಿ ಬೇವು
ಬೆಲ್ಲ ತುಂಬಿಕೊಂಡು
ಹರಿಯುತ್ತಿರು ನನ್ನಂತೆ
ಅನವರತ ನಿರ್ಮಲ ಚಿತ್ತದಿಂದ (ಅದೇ)
ಲೋಕದ ಎಲ್ಲಾ ನಿಂದೆ, ಕಹಿ, ಅಪಮಾನ, ತುಚ್ಚತೆಯನ್ನು ಅನುಭವಿಸಿ ಎದೆಗುಂದದೆ ಬದುಕಬೇಕು. ಸಮಾಜ ಸೃಷ್ಟಿಸಿದ ನಿಯಮಗಳನ್ನು ದಿಕ್ಕರಿಸಿ ಬೇವು ಬೆಲ್ಲವನ್ನು ತುಂಬಿಕೊಂಡು ಪುರುಷಾಹಂಕಾರವನ್ನು ಸೋಲಿಸಿ ನಿರ್ಮಲ ಚಿತ್ತದಿಂದ ನೈತಿಕವಾಗಿ ಹರಿಯುತ್ತಿರಬೇಕು. ನೈತಿಕತೆಯ ನೆಲೆಯಲ್ಲಿಯೇ ಲೋಕವನ್ನು ಎದುರಿಸಬೇಕು.
ಪತಿವೃತೆಯ ಹಗ್ಗದಿಂದ
ಸೀತವ್ವ ಉಸಿರು ಬಿಟ್ಟಳು
ಅಮಾನುಷ ಪ್ರಜಾಪ್ರೇಮಿಯ ಸಮ್ಮುಖದಲ್ಲಿ
ಅಂದಿಗೂ ಇಂದಿಗೂ ನೆಲಮುಗಿಲುಗಳ ತುಂಬ
ಸೀತವ್ವನ ತಂಗೇರು ನೇಣುಹಾಕಿಕೊಂಡು
ತೂಗಾಡುತ್ತಾರೆ ರಾಮರ ಹಾದಿಯಲಿ
ಪತಿವೃತೆಯರ ಸಾಲಿಗೆ ಸೇರಲು (ಸೀತವ್ವ, 134)
ಹೆಣ್ತನವನ್ನು ಮೌಲ್ಯವಾಗಿ ನಂಬಿಸುವ ಪುರಾಣಗಳನ್ನು, ಚಾರಿತ್ರಿಕ ಸಂಗತಿಗಳನ್ನು ಕಾವ್ಯ ನಿರಸನಗೊಳಿಸುತ್ತದೆ. ಸೀತೆಯನ್ನು ಆದರ್ಶ ಪತ್ನಿಯೆಂದು ಕಾವ್ಯ ನೋಡುವುದಿಲ್ಲ. ಆಕೆ ರಾಮನ ಮರ್ಯಾದೆಗೆ ಬಲಿಪಶುವಾಗುತ್ತಾಳೆ. ಆಕೆಯ ಒಳ ಮನಸ್ಸಿಗೆ ಸ್ಥಾನವೇ ಇಲ್ಲ. ರಾಮನ ಕೀಲಿ ಗೊಂಬೆಯಾಗುತ್ತಾಳೆ. ಮಹಿಳೆಯ ರಕ್ಷಣೆಯ ಹೆಸರಿನಲ್ಲಿ ಸ್ವಾತಂತ್ಯ್ರದ ಹರಣ ನಡೆಯುತ್ತದೆ. ಸೀತೆಯನ್ನು ಸಮಾಜ ಮತ್ತು ಚರಿತ್ರೆ ಒಂದು ಮೌಲ್ಯವಾಗಿ ರೂಪಿಸಿದೆ. ಹೆಣ್ತನಕ್ಕೆ ಮಾದರಿಯಾಗಿ ಮಾಡಿದೆ. ರಾಮನನ್ನು ಆದರ್ಶ ಪುರುಷನನ್ನಾಗಿ ಮಾಡಿದೆ. ಆದರೆ ಈ ಎರಡು ಆದರ್ಶ ಮೌಲ್ಯಗಳು ಮಹಿಳೆಗೆ ಹೊರೆಯಾಗಿವೆ. ಆಕೆಯನ್ನು ಬಿಗಿಯಾಗಿ ಉಸಿರಾಡದಂತೆ ಬಂಧಿಸಿವೆ. ಆದ್ದರಿಂದ ಈ ಮೌಲ್ಯಗಳನ್ನು ಕಾವ್ಯ ನಿರಾಕರಿಸುತ್ತದೆ. ಸಾವಿರಾರು ವರ್ಷ ಗತಿಸಿದರೂ ಪುರುಷ ಸಮಾಜ ಬದಲಾಗಲಿಲ್ಲ. ಮಹಿಳೆಯನ್ನು ಅದೇ ಮೌಲ್ಯದ ಹುದುಲಲ್ಲಿ ಹೂತಿಡುತ್ತಿದೆ. ಪತಿವೃತೆ ಅನ್ನುವ ಮೌಲ್ಯ ಪುರುಷ ರೂಪಿಸಿದ ಸುಂದರ ಕುಣಿಕೆ. ಅದಕ್ಕೆ ಮಹಿಳೆ ನೇಣಿಗೇರುತ್ತಲೆ ಇದ್ದಾಳೆ.
ಕದ್ದಿಲ್ಲ ಸುಲಿದಿಲ್ಲ
ಸುಳ್ಳು ದರೋಡೆಯಂತೂ
ಮೊದಲೆ ಮಾಡಿಲ್ಲ
ಆದರೂ ನಾವುಗಳು ಖೈದಿಗಳು
ಹಳೆಯ ಖೈದಿಗಳ ಖಾಸಸಂಸ್ಕೃತಿಗೆ
ಹುಟ್ಟಿದ ಎಳೆಯ ಪೋರಿಗಳೆಲ್ಲ ಸೇರಿ
ಒಳಹೊರಗಿನಿಂದ ತೂರಿ ಬರುವ
ಬಾಣಬರ್ಚಿಗಳಿಗೆ ಎಳೆಯ ದೇಹ ಒಡ್ಡುತ್ತಲೇ
ದಡ್ಡು ಗಟ್ಟುತ್ತ ಬೆಳೆಯುತ್ತವೆ (ಕೈದಿ, ೧೩೧)
ಮಹಿಳೆ ಪರಂಪರಾನುಗತವಾಗಿ ರೂಢಿಸಿಕೊಂಡು ಬಂದ ಕ್ರಮದಲ್ಲಿಯೇ ಜೀವಿಸಬೇಕು. ಅದರಂತೆ ಬದುಕಲು ಇಡೀ ಸಮಾಜ ಒಪ್ಪಸುತ್ತದೆ. ಒಪ್ಪದಿದ್ದರೆ ಅದು ಸಾಮಾಜಿಕ ಅಪರಾಧವಾಗುತ್ತದೆ. ಅದಕ್ಕೆ ತಲೆಕೊಟ್ಟು ಬದುಕಬೇಕು. ಮಹಿಳೆ ಅನ್ನುವ ಕಾರಣಕ್ಕೆ ಪುರುಷನ ಬಂಧಿಯಾಗಿ ಬದುಕಬೇಕು. ಯಾವ ಅಪರಾಧ ಮಾಡದಿದ್ದರು ನಾಲ್ಕು ಗೋಡೆಯ ಮಧ್ಯೆ ಕಳೆಯಬೇಕು. ಸ್ವಂತಿಕೆಯಿಂದ ತನ್ನ ಜೀವನವನ್ನು ಬದುಕುವ ಸ್ವಾಯತ್ತತೆಯನ್ನು ಸಮಾಜ ಮಹಿಳೆಗೆ ನೀಡಿಲ್ಲ. ಪುರುಷ ಎಷ್ಟೇ ಉದಾರವಾಗಿ ನಡೆದುಕೊಂಡರೂ ತನ್ನಾದಿನದಲ್ಲಿಯೇ ಇರಬೇಕೆಂಬ ವಾತವರಣವನ್ನು ಸೃಷ್ಟಿಸುತ್ತಾನೆ. ಅದಕ್ಕನುಗುಣವಾಗಿ ಬದುಕುವ ಮನೋಭಾವವನ್ನು ಮಹಿಳೆ ಹೊಂದುತ್ತಾ ಹೋಗುತ್ತಾಳೆ. ಈ ಬಂಧನದಿಂದ ಮಹಿಳೆಗೆ ಮುಕ್ತಿ ಸಿಗಬೇಕು.
ಸುಡುವ ಸೂರ್ಯನಿಗೆ
ಕಂಬಳಿಯ ಮುಸುಕು ಹಾಕಿ
ಚಿಕ್ಕೆ ಚಿತ್ತಾರಗಳನ್ನೆಲ್ಲ ಬಟ್ಟಲಲ್ಲಿ ಬಳದಿಟ್ಟು
ಕಾಮನಬಿಲ್ಲು ಕುಟ್ಟಿ ಪುಡಿ ಮಾಡಿ
ಮನದಂಗಳಲ್ಲಿ ರಂಗೋಲಿ ಬರೆದು
ಕಾಯುತ್ತಿರುವಳಲ್ಲ ನನ್ನೊಳಗಿನ ಶಬರಿ
ಬಂದಾನೋ ಬಾರನೋ ಎಂದು
ಕೊನೆಗೂ ಬಂದ ಪುರುಷೋತ್ತಮ
ಶಬರಿ ಸಂತತಿಯ
ಕುರುಳಿನಲ್ಲೆಲ್ಲ ಕತ್ತಿ ಆಡಿಸಿ
ಬಾಳೆ ಬನವನ್ನೆಲ್ಲ ಸವರಿ
ರಕ್ತಸಿಕ್ತ ಖಡ್ಗ ಹಿಡಿದು ( ನನ್ನೊಳಗಿನ ಶಬರಿ ಪು.೧೩)
ಯಾವುದನ್ನ ಪುರುಷ ಮಹಿಳೆಯ ಅಸ್ಮಿತೆ ಎಂದು ಕರೆಯುವನೊ ಅದರ ಬಗ್ಗೆ ಕವಿತೆ ತಕರಾರು ಎತ್ತುತ್ತದೆ. ಶಬರಿಯನ್ನು ರಾಮನ ಮಹಾ ಭಕ್ತಗಳನ್ನಾಗಿ ರೂಪಿಸಿದ್ದೇವೆ. ಶಬರಿ ತನ್ನ ಜೀವವನ್ನೇ ರಾಮನಿಗೆ ಮೀಸಲಿಟ್ಟು ಕಾಯುತ್ತಿದ್ದಾಳೆ. ಶಬರಿಯ ಶ್ರದ್ಧೆ ಚುಕ್ಕೆಗಳನ್ನು ಬಟ್ಟಲಲ್ಲಿ ತುಂಬಿ, ಕಾಮನಬಿಲ್ಲನ್ನು ಕುಟ್ಟಿ ಪುಡಿ ಮಾಡಿ ಮನದಂಗಳಲ್ಲಿ ರಂಗೋಲಿ ಬರೆಯುವಂತದ್ದು. ಕವಿತೆಗೆ ಈ ಕಾಯುವಿಕೆ, ಶ್ರದ್ದೆ, ನಿಷ್ಠೆ ಒಂದು ಆದರ್ಶವಾಗಿ ಕಾಣುವುದಿಲ್ಲ. ಪುರುಷನ ಮನಸ್ಥಿತಿ ಮಹಿಳೆಯ ಈ ಶ್ರದ್ದೆ, ಮುಗ್ಧತೆ, ಕಾಯಕವನ್ನು ತನ್ನಾಳ್ವಿಕೆಯ ಸೋಪಾನ ಎಂದು ಭಾವಿಸಿಕೊಳ್ಳುತ್ತದೆ. ಆಕೆಯ ಬಾಳಿನ ಬನವನ್ನೆಲ್ಲಾ ಸವರಿ ಹಾಕುತ್ತದೆ. ಪುರುಷ ರೂಪಿಸಿದ ಅಚ್ಚುಗಳಂತೆ ಮಹಿಳೆ ಆಕಾರ ಪಡೆಯುತ್ತಾಳೆ. ಈ ಪುರುಷರೂಪಿ ಅಚ್ಚುಗಳನ್ನು ಈ ಕವಿತೆ ಒಡೆಯುತ್ತದೆ.
ಕೋಗಿಲೆಯ ಮಡಿಲಲ್ಲಿದ್ದು
ಸಾವನ್ನು ಪ್ರಶ್ನಿಸಿದೆ
ಇನ್ನೆಷ್ಟು ದಿನ ನೀನು
ಗಸ್ತು ತಿರುಗುತ್ತಿ ಎಂದು
ಗರಿಕೆಯ ಮೇಲಿನ
ಮಂಜಿನ ಹನಿ ನಕ್ಕು
ಪಕ್ಕನೆ ಜಾರಿ
ಉತ್ತರಿಸಿತು
ಬದುಕಿನ ಸತ್ಯವ (ಸತ್ಯ ೧ ೭೪)
ಮಹಿಳೆ ಹುಟ್ಟಿದಂದಿನಿಂದಲೂ ಅತಂತ್ರದಲ್ಲಿಯೇ ಬದುಕಬೇಕು. ಇನ್ನೊಬ್ಬರ ಆಶ್ರಯದಲ್ಲಿ ಬೇಯಬೇಕು. ಆಕೆಗೆ ಲೋಕದಲ್ಲಿ ಭದ್ರತೆಯನ್ನೀಯುವ ವಿದ್ಯಾಮಾನಗಳಿಲ್ಲ. ಸುಖದ ಸುಪ್ಪತ್ತಿಗೆಯಲ್ಲಿ ಬದುಕುವ ಮಹಿಳೆ ಕೂಡ ಪುರುಷಾಧೀನವಾಗಿಯೇ ಬದುಕಬೇಕು. ಕೋಗಿಲೆಯ ಮಧುರ ಮಡಲಲ್ಲಿದ್ದರೂ ನಿರ್ದೇಶನ ಪುರುಷಂದಾಗಿರುತ್ತದೆ. ಈ ಸತ್ಯವನ್ನು ಅರಿತವರು ತಮ್ಮ ಅಸ್ತಿತ್ವವನ್ನು ಕಟ್ಟಿಕೊಳ್ಳುತ್ತಾರೆ. ಮಹಿಳೆ ಇನ್ನೊಬ್ಬರ ಆಶ್ರಯದಲ್ಲಿ ಬದುಕುವುದೆ ಸತ್ಯ ಎಂದು ನಂಬಿಸಲಾಗಿದೆ. ಈ ನಂಬಿಕೆಯಲ್ಲಿ ಸತ್ಯವಿಲ್ಲ ಎಂದು ಕವಿತೆ ಅರಿತುಕೊಳ್ಳುತ್ತದೆ.
ಇಹದಲ್ಲಿರುವುದ ಬಿಟ್ಟು ಪರಕ್ಕೆ ಹಪಹಪಿಸುವ
ಗೌತಮರಿಗೆಲ್ಲ ಇಂದ್ರನೈರಾವತದ ಕನಸು
ಹೆಣ್ತನದ ಭಾರದಿಂದ ಬಾಗಿದ
ಅಹಲ್ಯೆಯರ ಮೇಲೆ ಇಂದ್ರರ ನೂರು ಕಣ್ಣು
ಹೆಂಡತಿಯ ಮಾರುವ
ಗಂಡಸರೈವರಲ್ಲಿಯೂ ಪಾಂಚಾಲಿಗೆ
ಕರ್ಣನ ಉಕ್ಕಿನೆದೆಯಲ್ಲಿ ಕರಗುವ
ಕೆಂಡದುಂಡೆಯ ಕಣ್ಣಲ್ಲಿ ಬೆಚ್ಚಗಾಗುವ ಬಯಕೆ
ಕಾಲಚಕ್ರದಿಂದಲೂ ತೀರದಲ್ಲ. (ತೀರದ ಬಯಕೆ ಪು. ೭೨)
ಮಹಿಳೆಯನ್ನು ದೇಹವನ್ನಾಗಿ ಕಾಣುವ ಪುರುಷನ ಮನೋಭಾವ ಬದಲಾಗಿಲ್ಲ. ತನ್ನ ಭೋಗಕ್ಕೆ ಎಂದು ಭಾವಿಸಿರುವ ಪುರುಷ ಹಲವು ವೇಷಗಳ ಮೂಲಕ ನಿರಂತರ ಆಕೆಯ ಮೇಲೆ ದಾಳಿ ಮಾಡುತ್ತಲೇ ಇರುತ್ತಾನೆ. ಅದಕ್ಕೆ ಅಹಲ್ಯೆಯ ಮೇಲೆ ಇಂದ್ರರ ನೂರು ಕಣ್ಣು. ಮಹಿಳೆಯನ್ನು ತನ್ನ ಸ್ವತ್ತೆಂದು ಭಾವಿಸಿ ಜೂಜಲ್ಲಿ ಒತ್ತೆ ಇಡುವುದು, ಮಾರಾಟ ಮಾಡುವುದು ಸಹಜವಾದ ಪ್ರಕ್ರಿಯೆ ಎಂದೇ ಪುರುಷ ನಂಬುತ್ತಾನೆ. ನಿಜವಾದ ಹೆಣ್ತನದ ಮನಸ್ಥಿತಿಯನ್ನು ಗಮನಿಸುವದಿಲ್ಲ. ಆದ್ದರಿಂದ ಪಾಂಚಾಲಿಯ ಬಯಕೆಯನ್ನು ಕಾಲಚಕ್ರದಿಂದಲೂ ತೀರಿಸಲು ಸಾದ್ಯವಾಗಿಲ್ಲ. ತಮಗೆ ಬೇಕಾದ ಜೀವವನ್ನು ಮಹಿಳೆಯರು ಹುಡುಕುತ್ತಲೇ ಇದ್ದಾರೆ. ಈಗಲೂ ಅವರಿಗೆ ಆಯ್ಕೆಗಳಿಲ್ಲ. ಪುರುಷ ನಿರ್ದೇಶಿತ ಆಯ್ಕೆಗಳಿವೆ. ಬೌತಿಕವಾಗಿ ಕೊಂಚ ಆಯ್ಕೆ ನೀಡಿದರೂ ಮಾನಸಿಕವಾಗಿ ಸಂಪೂರ್ಣ ಒಪ್ಪಿಕೊಂಡಿಲ್ಲ. ಪುರುಷರ ಗೆರೆಯಲ್ಲಿಯೇ ಜೀವಿಸಬೇಕೆಂದು ಬಯಸುತ್ತೇವೆ.
ಭರವಸೆಯ ಬೆಳಕಲಿ ಕೇಳಿದಳು ಜಗಕೆ
ಬಾಗಿದ ಬೆನ್ನಿಗೆ ಊರುಗೋಲು ಗಂಡು ಮಾತ್ರ ಎಂದಿರಲ್ಲ
ಹೇಳಿ ಈಗ ಸಾಲು ಸಾಲಾಗಿ ಹುಟ್ಟಿದ
ಗಂಡುಗಳೆಲ್ಲ ಊರುಗೋಲಾಗದೆ ಉರಿವಕೊಳ್ಳಿಯಾದರೇಕೆ?
ತೂತು ಸೀರೆಯ ಮೇಲೆ ಬಿದ್ದ
ನಕ್ಷತ್ರ ಹೆತ್ತವರ ಬೆನ್ನಿಗಂಟಿದ ಹೊಟ್ಟೆಗೆ ಆಧಾರ (ರೊಟ್ಟಿ ಮತ್ತು ಹುಡುಗಿ ಪು. ೭೦)
ಕುಟುಂಬಗಳು ಮೊದಲು ಗಂಡು ಜನಿಸಬೇಕು, ವಂಶವನ್ನು ಬೆಳೆಸುತ್ತವೆ ಎಂದು ನಂಬುತ್ತವೆ. ವಾಸ್ತವ ಬೇರೆ ಇದೆ. ಹೆಚ್ಚಿನ ತಂದೆ ತಾಯಿಗಳ ಆರೈಕೆಯನ್ನು ಮಹಿಳೆಯರೆ ಮಾಡುತ್ತಾರೆ. ಹಿರಿ ಜೀವಗಳನ್ನು ಕರುಣೆಯಿಂದ ನೋಡಿಕೊಳ್ಳುವುದು ಕೂಡ ಮಹಿಳೆ. ಆದರೂ ಮಹಿಳೆಯನ್ನು ಎರಡನೆಯ ದರ್ಜೆಯ ನಾಗರಿಕಳನ್ನಾಗಿ ಕುಟುಂಬದಲ್ಲಿ ನೋಡಲಾಗುತ್ತದೆ. ಪುರುಷರಿಗೆ ಮೊದಲ ಆದ್ಯತೆ ನೀಡುಲಾಗುತ್ತದೆ. ಆದರೆ ಕೊನೆಗೆ ಕುಟುಂಬದ ಸದಸ್ಯರನ್ನು ಸಲುಹುವುದು ಮಹಿಳೆ. ಅದು ಆಕೆಯ ಜವಬ್ದಾರಿ ಎಂಬ ಮೌಲ್ಯಕ್ಕೆ ಕಟ್ಟಿ ಹಾಕಲಾಗುತ್ತದೆ. ಆದ್ದರಿಂದ ಕವಿತೆ ಈಗ ಸಾಲಾಗಿ ಹುಟ್ಟಿದ ಗಂಡುಗಳೆಲ್ಲ ಊರುಗೋಲಾಗದೆ ಉರಿವಕೊಳ್ಳಿಯಾದರೇಕೆ? ಎಂದು ಪ್ರಶ್ನಿಸುತ್ತದೆ. ಗಂಡು ಹೆಣ್ಣು ಎಂಬ ಭ್ರಮೆಯನ್ನೇ ಇಲ್ಲಿಯ ಕವಿತೆಗಳು ಒಪ್ಪುವುದಿಲ್ಲ. ಮಹಿಳೆಯ ಸ್ವತಂತ್ರ ಅಸ್ತಿತ್ವವನ್ನು ಸಾಬೀತು ಪಡಿಸುತ್ತವೆ. ಇದಕ್ಕೆ ಅಡ್ಡಿಯಾದ ಹೊರೆಯನ್ನು ಇಳಿಸುವ ಚಿಂತನೆಯನ್ನು ಮಾಡುತ್ತವೆ.
ಛಲದ ಕೈ ದೀವಿಗೆ ಹಿಡಿದು
ನೆಟ್ಟದೃಷ್ಟಿಯ ಕೀಳದೆ
ಗುರಿ ಮುಟ್ಟಲು ಸಹಬಾಳ್ವೆಯ
ಪಥದಲ್ಲಿ ಹೊರಟ ನಮ್ಮಗಳ
ಎದೆಯಲ್ಲಿ ಪ್ರೀತಿ ಒರತೆಯಿರುವಾಗ
ಮರೆತುಬಿಡು ಹೆಣ್ಣಾಗಿರುವುದು (ಹೆಮ್ಮೆ ಪಡುತ್ತೇನೆ ಹೆಣ್ಣಾಗಿ ಹುಟ್ಟಿದ್ದಕ್ಕೆ ಪು. ೬೪)
ಅಕ್ಕಮಹಾದೇವಿಯ ಚಿಂತನೆಯಲ್ಲಿ ನಂಬಿಕೆಯಿಟ್ಟ ಈ ಕವಿತೆಗಳು ಗಂಡು ಹೆಣ್ಣು ಎಂಬ ಸಾಮಾಜಿಕ ಭೇದವನ್ನು ಒಪ್ಪುವದಿಲ್ಲ. ಹೆಣ್ಣಾಗಿ ಹುಟ್ಟಿದ್ದನ್ನು ಸಂಭ್ರಮಿಸುತ್ತವೆ. ಅದೊಂದು ಶಾಪ ಎಂದು ಭಾವಿಸುವದಿಲ್ಲ. ಪುರುಷ ಸೃಷ್ಟಿಸಿದ ಎಲ್ಲಾ ಕಟ್ಟುಗಳನ್ನು ಒಡೆದು ತನ್ನತನವನ್ನು ಹೋರಾಟದಿಂದಲೆ ಪಡೆಯಬೇಕೆಂದು ಹೇಳುತ್ತವೆ. ಅದಕ್ಕೆ ಛಲದ ಕೈದೀವಿಗೆ ಹಿಡಿದು ಮುನ್ನಡೆಯಬೇಕೆನ್ನುತ್ತವೆ. ಸಹಬಾಳ್ವೆಯ ಪಥದಲ್ಲಿ ಚಲಿಸಬೇಕೆನ್ನುವುದು ಕಾವ್ಯದ ನಿಲುವು. ಪುರುಷನನ್ನು ದ್ವೇಷದಿಂದ ನೋಡದೆ, ಪ್ರೀತಿಯಿಂದ ನೋಡುತ್ತವೆ. ಪ್ರೀತಿಯಿಂದಲೇ ಈ ಲೋಕವನ್ನು ಪರಿವರ್ತಿಸಬೇಕೆಂಬ ಬುದ್ದನ ಆಶಯವನ್ನು ಸಾಕಾರಗೊಳಿಸಲು ಮುನ್ನಡಿಯಿಡುತ್ತವೆ. ಪ್ರೀತಿಯ ಒರತೆಯಲ್ಲಿ ಮನುಷ್ಯನಾಗುವ ಪ್ರಕ್ರಿಯೆಗೆ ಚಾಲನೆ ನೀಡುತ್ತವೆ.
ಕತ್ತಲೆಯ ಅಧೋಲೋಕದಿಂದ
ಅಮ್ಮ ಹಚ್ಚಿದ ದುಡಿಮೆಯ
ಕೈದೀವಿಗೆಯ ಬೆಳಕಿನಲ್ಲಿ
ಬಾಳದಾರಿಯ ಕಂಡು ನಡೆಯುತ್ತೇನೆ
ಸತ್ಯ, ನ್ಯಾಯಗಳ ಚಪ್ಪಲಿ ಮೆಟ್ಟಿ
ಹರಳಯ್ಯನ ಚರ್ಮ
ಮಧುವಯ್ಯನ ಮರ್ಮ
ಬೆರೆತು ಹದಗೊಂಡ ಚಪ್ಪಲಿಗಳಿವು
ಅದಕ್ಕೆಂದೆ
ಚುಚ್ಚುತ್ತವೆ, ಒತ್ತುತ್ತವೆ
ಹೆಜ್ಜೆ ಹೆಜ್ಜೆಗೂ ಎಚ್ಚರಿಸುತ್ತವೆ (ಚಪ್ಪಲಿಗಳು ಪು. ೬೧)
ಮಹಿಳೆ ಅನ್ನುವ ಕಾರಣಕ್ಕೆ ಯಾವ ರಿಯಾಯಿತಿಯನ್ನು ಕೇಳುವದಿಲ್ಲ. ದಿಟ್ಟತನದಿಂದ ವ್ಯವಸ್ಥೆಯ ಅನ್ಯಾಯಗಳನ್ನು ಎದುರಿಸುವ ಪಣ ತೊಡುತ್ತವೆ. ವಚನಕಾರರು ಹುಟ್ಟುಹಾಕಿದ ಸಾಮಾಜಿಕ ಸುಧಾರಣೆ ಚಿಂತನೆಯಿಂದ ಪ್ರಭಾವಿತವಾದ ಕವಿತೆಗಳು ಅವರ ಪರಂಪರೆಯನ್ನು ಮುಂದುವರಿಸುತ್ತವೆ. ನಡೆ ನುಡಿ ಶುದ್ಧತೆಯಿಂದ ಬದುಕಿದ ರೀತಿಯಲ್ಲಿ ಸಮಾಜ ಬದುಕಬೇಕು. ಮದಲು ವ್ಯಕ್ತಿಗತವಾಗಿ ಶುದ್ದವಾಗಿ ಮುನ್ನಡೆಯಬೇಕು. ಕಾಯಕ ನಿಷ್ಠೆಯನ್ನು ಮೈಗೂಡಿಸಿಕೊಳ್ಳಬೇಕು. ಹರಳಯ್ಯ ಮಧುವಯ್ಯ ಎಂಬ ಎರಡು ದ್ರುವಗಳು ಒಂದಾಗಬೇಕು. ಇದರಿಂದ ಜಾತಿ ನಿರಸವು ಆಗಬೇಕು. ಆ ಮೂಲಕ ನ್ಯಾಯ ನೀತಿಯ ಸಮಾನತೆಯ ಸಮಾಜ ನಿರ್ಮಾಣವಾಗಬೇಕು. ಇದೇನು ಸುಲಭದ ದಾರಿಯಲ್ಲ. ಆದ್ದರಿಂದ ಸದಾ ಎಚ್ಚರದಲ್ಲಿ ಬದುಕಬೇಕು. ವಚನಕಾರರ ಅರವಿನ ಆಂದೋಲನವನ್ನು ಕೈದಿವಿಗೆಯಾಗಿ, ಎಚ್ಚರದ ಚಪ್ಪಲಿಗಳನ್ನಾಗಿ ಕವಿತೆಗಳು ಮಾಡಿಕೊಂಡಿವೆ.
ಬ್ರಾಹ್ಮಣರ ಕಂಚಿನ ಬಿಂದಿಗಿ
ನನ್ನ ಕರಿಮೈ ಬಿಂದಿಗೆ ಕಂಡ
ಖುಶಿಯಿಂದ ಕಿಸಿ ಕಿಸಿ ನಕ್ಕದ್ದು, ಕಕ್ಕಿದ್ದು
ನೀರಲ್ಲಿ ಮುಳಿಗಿ ತಳದಲ್ಲಿ ಸೇರಿದ್ದು, ಸುಖಿಸಿದ್ದು
ಮೇಲೆ ಬರುವಾಗ ಕಣ್ಣೀರು ಸೋರಿಸಿದ್ದು
ಗಡೆಗಡೆ ಕಿರುಗುಟ್ಟಿ ಅತ್ತಿದ್ದು ನೋಡಿ, ಕೇಳಿ
ಬಚ್ಚಬಾಯಿ ಅಜ್ಜನಿಗೆ ತಳಮಳ
ಜಾತಿಸೂತಕದ ಒಳಗಿನ
ಬೇಗುದಿಗೆ ನೀರೊಳಗಿನ
ಬಿಂದಿಗೆಗಳು ಸಾಂತ್ವನ ನೀಡುತ್ತವೆ (ನಮ್ಮೂರ ಬಾವಿ ಪು. ೫೦)
ಜಾತಿ ಅವಮಾನವನ್ನು ಈ ಕವಿತೆ ಸಾದರಪಡಿಸುತ್ತದೆ. ನೀರಿಗೆ ಯಾವ ಜಾತಿ, ಮಡಿ ಮೈಲಿಗೆ ಇಲ್ಲ. ಆದರೆ ನೀರನ್ನು ಬಳಸುವವರು ಮಾತ್ರ ಸಾಮಾಜಿಕ ತಾರತಮ್ಯ ಮಾಡುತ್ತಾರೆ. ಬಾವಿ, ಗಡಗಡೆ, ಕೊಡಗಳ ರೂಪಕದ ಮೂಲಕ ಕವಿತೆ ಶಕ್ತವಾಗಿ ಜಾತಿ ಸೂತಕದ ಬೇಗುದಿಯನ್ನು ಕಟ್ಟಿಕೊಡುತ್ತದೆ. ಬ್ರಾಹ್ಮಣರ ಕೊಡ ಮತ್ತು ಕರಿಮೈಬಿಂದಿಗೆ ಪರಸ್ಪರ ನೀರಲ್ಲಿ ಬಿದ್ದು, ಬ್ರಾಹ್ಮಣರ ಕಂಚಿನ ಬಿಂದಿಗಿ ನಗುವುದು ಸಾಮಾಜಿಕ ಜಾತೀಯತೆಯ ಕಿಲುಬನ್ನು ಮನಗಾಣಿಸುತ್ತದೆ. ಗಡಗಡೆ ಕಣ್ಣೀರು ಸುರಿಸಿದ್ದು ಅಪಮಾನಿತ ಸಮುದಾಯದ ಸಂಕೇತವಾಗಿ ಬರುತ್ತದೆ. ಇದು ಶೂದ್ರ ಸಮುದಾಯದಿಂದ ಬಂದವರ ನೋವನ್ನು ಅನಾವರಣಗೊಳಿಸುತ್ತದೆ. ಜಾತಿ ಸೂತಕಕ್ಕೆ ಬಿಂದಿಗೆಗಳು ಸಂತ್ವಾನ ನೀಡುತ್ತವೆ. ನೀರು ಬದುಕಿನ, ಸಹಬಾಳ್ವೆಯ, ಎಲ್ಲರನ್ನು ಒಳಗೊಳ್ಳುವ ಸಮಾನತೆಯ ರೂಪಕವಾಗಿದೆ. ಮೇಲ್ವರ್ಗದ ಸಮುದಾಯಗಳು ಶೂದ್ರ ವರ್ಗದ ಮೇಲೆ ಜಾತಿ ಕಾರಣಕ್ಕೆ ಮಾಯಲಾರದ ಗಾಯಗಳನ್ನು ಮಾಡಿವೆ. ಹುಟ್ಟುತ್ತಲೆ ಜಾತಿಯನ್ನು ಗುರುತಿಸಿ, ಆ ಮೂಲಕ ಸಾಮಾಜಿಕ ಕೀಳುರಮೆಯನ್ನುಂಟುಮಾಡುವ ಜಾತಿ ಕ್ರೂರತೆಯನ್ನು ಕಾವ್ಯ ನಿರಾಕರಿಸುತ್ತದೆ. ಜಾತಿ ಸೂತಕಗಳು ಕಳೆದು ಎಲ್ಲರೊಳಗೆ ಮಾನವೀಯತೆಯ ಬೀಜಗಳು ಮೊಳೆಯಬೇಕೆಂಬುದು ಕವಿತೆಯ ಧ್ವನಿಯಾಗಿದೆ.
ನೋಡಿ ಅಯ್ಯಾ
ಲೋಕದ ಡೊಂಕ ನಾನೇಕೆ ತಿದ್ದಲಿ
ನನ್ನ ತನು, ಮನವೇ ಸಂತೃಪ್ತಿಗೊAಡಿಲ್ಲ
ಕೂಲಸಂಗಮದಲ್ಲಿ
ಕುತ್ತಿಗೆವರೆಗೆ ಮಾತ್ರ ನೀರು ಬಂದಿದೆ
ಪೂರ್ತಿಯಾದ ಮೇಲೆ ತಮಗೆ
ನನ್ನ ಅಭಿಪ್ರಾಯ ತಿಳಿಸಿ ಓಲೆ ಬರೆಯುವೆ
ಬರಲೇ, ಶರಣು ಶರಣಾರ್ಥಿಗಳು (ಬಸವಣ್ಣನ ಭೇಟಿಯಾದಾಗ ಪು. ೪೨)
ಬಸವಣ್ಣ ಕಟ್ಟಿದ ಅರಿವಿನ ಸಮಾಜ ಯಾವ ಸ್ಥಿತಿ ತಲುಪಿದೆಂಬುದನ್ನು ಈ ಕವಿತೆ ಶಕ್ತವಾಗಿ ಅಭಿವ್ಯಕ್ತಿಸುತ್ತದೆ. ಬಸವಣ್ಣನ ಆಶಯಗಳಿಗೆ ವಿರುದ್ದವಾಗಿ ಬಸವಣ್ಣನನ್ನು ಮೆರೆಸುತಿರುವುದು, ಆರಾಧಿಸುತ್ತಿರುವುದು, ಪ್ರತಿಮೆಗಳನ್ನಾಗಿ ಪೂಜಿಸುತ್ತಿರುವುದನ್ನು ಕವಿತೆ ನಿರಾಕರಿಸುತ್ತದೆ. ವ್ಯಂಗ್ಯಾತ್ಮಕವಾಗಿ ಚಾಟಿ ಬೀಸುತ್ತದೆ. ಆತನ ಅನುಯಾಯಿಗಳು ಬಸವಣ್ಣನನ್ನು ದಾಳವನ್ನಾಗಿ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ರಾಜಕಾರಣಕ್ಕೆ ಆತನ ಹೆಸರನ್ನು ಎಳೆದು ತಂದಿದ್ದಾರೆ. ಸಮಾನತೆಯ ಬೀಜ ಬಿತ್ತಿದ ಆತನ ಆಶಯಗಳಿಗೆ ಮಸಿ ಬಳಿಯುತ್ತಿದ್ದಾರೆ. ಆತನ ಹೆಸರಿನಲ್ಲಿ ತಮ್ಮ ಸ್ವಾರ್ಥವನ್ನು ಮೆರೆಯುತ್ತಿದ್ದಾರೆ. ಆತನ ಚಿಂತನೆಯನ್ನು ಸಮಾಧಿ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲಸಂಗಮದಲ್ಲಿ ಕುತ್ತಿಗೆವರೆಗೆ ಮಾತ್ರ ನೀರು ಬಂದಿದೆ, ಪೂರ್ತಿಯಾದ ಮೇಲೆ ತಮಗೆ ತಿಳಿಸಿ ಪತ್ರ ಬರೆಯುವೆ ಎಂದು ಕವಿತೆ ಹೇಳುತ್ತದೆ. ಬಸವಣ್ಣನ ಕನಸುಗಳನ್ನು ಹೊತ್ತ ಕವಿತೆಗಳು ಆ ಕನಸುಗಳಿಗೆ ಆಗುತ್ತಿರುವ ಗಾಯಗಳನ್ನು ನೋಡಿ ವಿಷಾದದಿಂದ ಮರುಗುತ್ತದೆ. ಬಸವಣ್ಣನ ಆಶಯಗಳು ಸಾಮಾಜಿಕವಾಗಿ ಸಾಕಾರ ಪಡೆಯುವ ಕಡೆ ಚಲಿಸುತ್ತದೆ.
ಮಲೆತು ನಾರುತ್ತಿರುವ
ವ್ಯವಸ್ಥೆಯ ಹುದುಲಿನಲ್ಲಿ ಸಿಲಿಕಿದ್ದೇನೆ
ಉಸಿರುಗಟ್ಟಿ ಸಾಯುತ್ತಿರುವವರ
ಕಪಿಮುಷ್ಟಿಯಿಂದ ಬಿಡಿಸಿಕೊಂಡು
ಹಾರಬೇಕೆಂದಿರುವೆ ನೀಲಬಾಂದಳದಲ್ಲಿ
ಸ್ವಚ್ಚಂದವಾಗಿ, ಬೀಸುವಗಾಳಿ
ತಿಳಿಯಾಗಿ ತೇಲುವ ಮೋಡಗಳ
ಜೊತೆಗೂಡಿ ನಾನೇ ನಾನಾಗಿ
ಹಾರಬೇಕೆಂದಿರುವೆ (ತುಳಿಯದಿರಿ ನನ್ನ ಪು. ೩೫)
ವ್ಯವಸ್ಥೆಯ ಸ್ಥಿತಿಗೆ ಕವಿತೆ ಮುಖಾಮುಖಿಯಾಗುತ್ತದೆ. ಮನುಷ್ಯನನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಧಿಕ್ಕರಿಸುತ್ತದೆ. ಉಳ್ಳವರ ಪ್ರಭುತ್ವಗಳು ಅಧಿಕಾರದ ಮೂಲಕ ಬಹುಜನರನ್ನು ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಅನೇಕ ಹುನ್ನಾರಗಳ ಮೂಲಕ ಯಶಸ್ವಿಯೂ ಆಗುತ್ತದೆ. ವ್ಯವಸ್ಥೆಯ ಎಲ್ಲಾ ಅನುಕೂಲಗಳು, ಸವಲತ್ತುಗಳು ಉಳ್ಳವರ ಕಡೆಯೇ ಇರುತ್ತವೆ. ಇಂತವರಿಂದ ಬಿಡಿಸಿಕೊಂಡು ಸ್ವತಂತ್ರವಾಗಿ ಬದುಕುವುದು ದೊಡ್ಡ ಸವಾಲು. ಈ ಸವಾಲಿಗೆ ಒಳಗಾಗದ ಹಾಗೆ ಮಂಕುಬೂದಿ ಎರಚಿ ಜನರು ನಿದ್ದೆ ಮಾಡುವಂತೆ ಮಾಡುತ್ತಾರೆ. ಈ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಸ್ವತಂತ್ರವಾಗಿ ಹಾರುವ ಕನಸನ್ನು ಕವಿತೆ ಕಾಣುತ್ತದೆ. ಸ್ವತಂತ್ರಕ್ಕಾಗಿ ಹಂಬಲಿಸುವ ಕವಿತೆ ನೀಲಬಾಂದಳದಲ್ಲಿ ಸ್ವಚ್ಚಂದವಾಗಿ ಹಾರುವ, ಮೋಡದಲ್ಲಿ ತೇಲುವ ತಾನೇ ತಾನಾಗುವ ಸದಾಶಯವನ್ನು ತಾಳುತ್ತದೆ.
ಹೂವಿನಂತೆ ಕೋಮಲಾಂಗಿ ನೀನೆಂದು
ಆಲಂಗಿಸಲು ಬಂದಾಗ
ನಿನ್ನ ಭಾವನೆಗಳ ಬಲಿಗೊಟ್ಟು
ತ್ಯಾಗದ ಬಲಿಪೀಠವೇರಿ ಯಂತ್ರದಂತೆ
ಬಿಚ್ಚಿಕೊಳ್ಳದೆ ನಿನ್ನ ನೀ ಉಳಿಸಿಕೊಳ್ಳಲು
ಮೈತುಂಬಾ ವಿವೇಕದ ಮುಳ್ಳುಗಳ ಬೆಳಸಿಕೋ
ಮೃದು ಮನಸಿನವಳೆಂದು ಮಧುರವಾಗಿ
ನಿನ್ನ ಹದಗೊಳಿಸಿ ಶೃತಿಗೊಸಬಂದಾಗ
ಕಠಿಣವಾಗು ನಿನ್ನ ಭಾವನೆಗಳಿಗೆ
ಕೊಳ್ಳಿಯಿಡುವ ಪ್ರಸಂಗಗಳೆದುರಾದಾಗ
ಬದುಕುವುದು ಅನಿವಾರ್ಯವೆಂದು
ನನ್ನಂತೆ ನೀ ಒಪ್ಪಂದ ಮಾಡಿಕೊಳ್ಳದಿರು.
ನನ್ನಿತಿಹಾಸ ನೀ ಮರೆತರೆ
ಹೊಸ ಇತಿಹಾಸ ನೀ ಬರೆಯುವದೆಂತು(ಮಗಳಿಗೊಂದು ಕಿವಿ ಮಾತು ಪು.೧೨೫)
ಮಹಿಳೆ ದಿಟ್ಟವಾಗಿ ತನ್ನ ಬದುಕನ್ನು ರೂಪಿಸಿಕೊಳ್ಳಬೇಕು. ಹಿಂದನವರು ಸರ್ವಸ್ವವನ್ನು ತ್ಯಾಗ ಮಾಡಿ ಬದುಕಿದಂತೆ ಮುಂದಿನ ತಲೆಮಾರಿನವರು ಬದುಕು ಸವೆಸುವುದು ಬೇಡ ಎನ್ನುತ್ತದೆ ಕವಿತೆ. ಮಹಿಳೆಯನ್ನು ಕೋಮಲಾಂಗಿ, ಹೂ ಎಂದೆಲ್ಲಾ ಹೊಗಳಿ ತನ್ನಾಧೀನ ಮಾಡಿಕೊಳ್ಳುವ ಮನಸ್ಥಿತಿಯನ್ನು ನಿರಾಕರಿಸಬೇಕು. ನಿನ್ನ ಭಾವನೆಗಳನ್ನು ಬಲಿಕೊಟ್ಟು ನಿನ್ನನ್ನು ಕಳೆದುಕೊಳ್ಳಬೇಡ. ನಿನ್ನ ಸ್ವಾತಂತ್ಯ್ರಕ್ಕೆ ಅಡ್ಡಿತರುವ ಮೃದು ಮಾತುಗಳಿಗೆ ಒಳಗಾಗದೆ ವಿವೇಕದ ಮುಳ್ಳುಗಳನ್ನು ಬೆಳೆಸಿಕೊಳ್ಳಬೇಕು. ನಿನ್ನ ಮನಸ್ಸನ್ನು ಕಠಿಣವಾಗಿಸಿ ಬದುಕನ್ನು ಕಟ್ಟಿಕೊಳ್ಳಬೇಕು. ತನ್ನಂತೆ ಒಪ್ಪಂದ ಮಾಡಿಕೊಂಡು ಬದುಕಬಾರದೆಂದು ತಾಯಿ ಮಗಳಿಗೆ ಹೇಳುತ್ತಾಳೆ. ಪುರುಷರ ಅಣತಿಯಂತೆ ಬದುಕುವ ಸ್ಥಿತಿಯಿಂದ ಹೊರ ಬಂದು ತಮ್ಮ ಮನಸ್ಸಿನಂತೆ ಸಮಾಜಕ್ಕೆ ಹಾನಿಯಾಗದಂತೆ ಬದುಕುವ ದಾರಿಯನ್ನು ಹೊಸ ತಲೆಮಾರಿನ ಮಹಿಳೆಯರು ಕಂಡುಕೊಳ್ಳಬೇಕಾಗಿದೆ. ಹಿಂದಿನ ಚರಿತ್ರೆಯನ್ನು ಅರ್ಥ ಮಾಡಿಕೊಂಡು ಹೊಸ ಚರಿತ್ರೆಯನ್ನು ಬರೆಯುವ ವ್ಯಕ್ತಿತ್ವನ್ನು ಪಡೆದುಕೊಳ್ಳಬೇಕು.
ಧರ್ಮಶಾಸ್ತ್ರ-ವೇದ-ಪುರಾಣ
ಪಾಪ-ಪುಣ್ಯ ಸ್ವರ್ಗ-ನರಕದ
ಮುಳ್ಳಿನ ಹಾಸಿಗೆಯ ಮೇಲೆ
ನನ್ನ ದೇಹಚೆಲ್ಲಿ
ಗಳಿಗೆ ಗಳಿಗೆಗೊಮ್ಮೆ ಸಾವಿನ
ಸಂಗ ಮಾಡಿ ಸತ್ತಂತೆ ಇರಬೇಕಾಗಿದೆ (ಇರುವಿಕೆ ಪು. ೧೨೧)
ಧರ್ಮಶಾಸ್ತ್ರ-ವೇದ-ಪುರಾಣಗಳು ಮಹಿಳೆಯನ್ನು ಪರಾಧೀನಳನ್ನಾಗಿ ಮಾಡಿವೆ. ಆಕಗೆ ಸ್ವತಂತ್ರ ಅಸ್ತಿತ್ವವನ್ನು ನಿರಾಕರಿಸಿವೆ. ಪುರಷಾಧೀನವಾಗಿ ಬದುಕುವ ಸಿದ್ದಾಂತವನ್ನು ರೂಪಿಸಿವೆ. ಪುರುಷನ ಸೇವೆ ಮಾಡಿಕೊಂಡು ಇರುವುದೆ ಮಹಿಳೆಯ ಜೀವನದ ಗುರಿ ಎಂದು ನಂಬಿಸಿವೆ. ಪುರುಷನಿಗಾಗಿ ಜೀವ ತೆಯ್ದಷ್ಟು ಜೀವನ ಪಾವನವಾಗುತ್ತದೆ, ಸ್ವರ್ಗದ ದಾರಿ ಹಿಡಿಯುತ್ತದೆಂದು ಹೇಳುತ್ತವೆ. ಸಾವಿರಾರು ವರ್ಷಗಳಿಂದ ಇದನ್ನೇ ಸತ್ಯವೆಂದು ಮಹಿಳೆ ಬದುಕುತ್ತಾ ಬಂದಿದ್ದಾಳೆ. ಆದರೆ ಆಕೆಗೆ ಅದು ಮುಳ್ಳಿನ ದಾರಿ. ಅದು ದಿನ ನಿತ್ಯದ ಸಾವು. ಅದರಿಂದ ಬಿಡಿಸಿಕೊಂಡು ಬಂದಾಗ ಆಕೆಗೆ ನಿಜದ ಬದುಕು. ಅದಕ್ಕೆ ಈ ಧರ್ಮ ಶಸ್ತçಗಳನ್ನು ಧಿಕ್ಕರಿಸಿ ಹೊಸ ಸ್ತ್ರೀ ಸಂವೇದನೆಯ ಧರ್ಮವನ್ನು ಕಟ್ಟಿಕೊಳ್ಳಬೇಕಿದೆ.
ನನ್ನಿಂದಲೇ ಸ್ವರ್ಗವನ್ನು ಸಿಂಗರಿಸಿದ
ದಿನದಿನವು ಬಂದು ತೊಡೆಯ
ಸಂದಿ ಸಂದಿಯಲ್ಲಿ ಹರಿದಾಡುವ ಕೂರಿಯಾದ
ಬಣ್ಣ ಬದಲಿಸುವ, ಮುಖವಾಡ ಕೇವಲ ಮುಖವಾಡ
ನೋಡಿಯೂ ನನ್ನ ಬಾಯಿ
ಚರ್ಮ ಹರಿದ ನಗಾರಿಯಂತೆ ಇರಬೇಕಾಗಿದೆ (ಇರುವಿಕೆ ಪು. ೧೨೧)
ನಿರಂತರ ತನ್ನ ಭೋಗಕ್ಕೆ ಬಳಸುವ ಪುರುಷನ ಸ್ಥಿತಿಯನ್ನು ಗೊತ್ತಿದ್ದೂ ಮಹಿಳೆ ಸಹಿಸಿಕೊಂಡು ಬದುಕುವ ವಾತವರಣವನ್ನು ಸೃಷ್ಟಿಸಲಾಗಿದೆ. ನಗಾರಿ ಹೊರಡಿಸುವ ಧ್ವನಿಶಕ್ತಿ ಮಹಿಳೆಗಿದ್ದರು ಹರಿದ ನಗಾರಿ ಚರ್ಮದಂತೆ ಇರುವ ಸ್ಥಿತಿ ಆಕೆಯದಾಗಿದೆ. ಚಾರಿತ್ರಿಕ ಸಾಮಾಜಿಕ ವ್ಯವಸ್ಥೆಯನ್ನು ಈ ನಿಟ್ಟಿನಲ್ಲಿ ರೂಪಿಸುತ್ತಾ ಬಂದಿದ್ದರಿಂದ ಅದನ್ನೇ ಅನುಸರಿಸಿಕೊಂಡು ಬದುಕುವುದು ಅನಿವಾರ್ಯ ಎಂದು ತಿಳದಿದ್ದಾಳೆ. ಪುರುಷ ಹೇಗೆ ಬದುಕಿದರೂ ಆಕೆ ಮಾತ್ರ ನಿಷ್ಠೆಯಿಂದಲೇ ಇರಬೇಕೆಂಬ ಅವ್ಯಕ್ತ ನಿಯಮವನ್ನು ಮಾಡಲಾಗಿದೆ. ಎಲ್ಲಾ ನೋವುಗಳಲ್ಲಿ ನೊಂದು ಬೆಂದರೂ ಮಾತಾಡದೆ ಇರಬೇಕಾದದು ಹಣೆಬರಹವೆ ಎಂದುಭಾವಿಸಲಾಗುತ್ತದೆ. ಈ ಪರಧಿಯಿಂದ ಮಹಿಳೆ ಹೊರ ಬಂದು ನವ ಚೈತನ್ಯ ಹೊಂದಬೇಕಿದೆ.
ನನ್ನ ಹೃದಯದಲ್ಲಿ ಪ್ರೀತಿಯಿತ್ತು
ಒಲೆಯ ಬೆಂಕಿಗೆ ಝಳ ತೋರುವಂತೆ
ನೀ ಬಂದು ಒಲೆಯೊಳಗಿನ ಬೂದಿಯಲ್ಲಿ
ಚೇಳಿನಂತೆ ಕೊಂಡಿ ಎತ್ತಿ ಕುಳಿತದ್ದು ತಿಳಿಯಲಿಲ್ಲ (ಪ್ರೀತಿ ಪು. ೧೧೮)
ಸಹಜವಾದ ಪ್ರೀತಿಯಲ್ಲಿ ಮುಳುಗುವ ಮಹಿಳೆಯನ್ನು ಮೋಸಗೊಳಿಸುವ ಪ್ರಮೇಯಗಳು ನಿತ್ಯವು ಸಮಾಜದಲ್ಲಿ ನಡೆಯುತ್ತಿರುತ್ತವೆ. ಮೋಸಕ್ಕೆ ಬಲಿಯಾದ ಮಹಿಳೆಗೆ ಯಾವ ನ್ಯಾಯ ಸಿಗುವುದಿಲ್ಲ. ಮಹಿಳೆಯನ್ನೇ ಅಪರಾಧಿಯನ್ನಾಗಿ ಮಾಡಲಾಗುತ್ತದೆ. ನವಿರಾದ ಮಾತು ನಡತೆಯಿಂದ ಒಲಸಿಕೊಂಡು ಭೋಗಿಸಿ ಬಿಸಾಕುವ ಪುರುಷ ಸಂತತಿ ಬೂದಿಯಲ್ಲಿನ ಕಾವ್ಯಕ್ಕೆ ಚೇಳಿನಂತೆ ಕಾಣುತ್ತದೆ. ಆಕೆಯ ಪ್ರೀತಿಯ ಒರತೆಯನ್ನು ಸುಟ್ಟು ಭಸ್ಮ ಮಾಡುವ ಭಸ್ಮಾಸೂರರು ಚೇಳುಗಳಾಗಿ ವಿಷ ಕಕ್ಕುತ್ತಲೇ ಇದ್ದಾರೆ. ಇವರ ಈ ಮರ್ಮವನ್ನು ಮಹಿಳೆ ಅರಿಯಬೇಕಿದೆ. ಇಲ್ಲದಿದ್ದರೆ ಆಕೆಯ ಚಂದ್ರನಂತ ಪ್ರೀತಿಯ ಕೊಳಕ್ಕೆ ಕಲ್ಲು ಹಾಕುವ ಧೂರ್ತರಿಗೆ ಬಲಿಯಾಗಬೇಕಾಗುತ್ತದೆ.
ದೇಶ ಭಕ್ತನ ಫೋಜು ಕೊಟ್ಟು
ಹಗಲು ದರೋಡೆ ಮಾಡುವ
ಬೆಳ್ಳಕ್ಕಿಗಳು ಹಾರದಂತೆ
ರೆಕ್ಕೆ ಕತ್ತರಿಸಲಿಲ್ಲ ಕವನ
ಹಸುಗೂಸಿನ ಕಣ್ಣಲ್ಲಿಯ
ತಿಂಗಳ ಬೆಳಕ ರಾಹು
ನುಂಗದಂತೆ ತಡೆಯಲಿಲ್ಲ ಕವನ (ಕವನ ಕೊಟ್ಟಿದ್ದು ಪು. ೧೧೭)
ಸಾಮಾಜವನ್ನು ಹಾಳು ಮಾಡುವ ಜನರನ್ನು ಕಾವ್ಯ ಬದಲಾಯಿಸಲು ಆಗುತ್ತಿಲ್ಲ ಎಂಬ ಕೊರಗು ಇದೆ. ದೇಶ ಭಕ್ತರ ಹೆಸರಿನಲ್ಲಿ ನಡೆಯುವ ದರೋಡೆಯನ್ನು ಕವಿತೆ ತಡೆಯಲಿಕ್ಕೆ ಆಗುತ್ತಿಲ್ಲ. ಹಸುಗೂಸುಗಳ ತಿಂಗಳ ಬೆಳಕನ್ನು ನಾಶ ಮಾಡುವ ಮನೋಭಾವಗಳು ಬೆಳೆಯುತ್ತಲೇ ಇವೆ. ಇದೆಲ್ಲವನ್ನು ನೋಡಿ ಇರುವ ಸ್ಥಿತಿಯ ಬಗ್ಗೆ ಕವಿತೆ ವಿಷಾದಿಸುತ್ತದೆ. ಕಲೆಯ ಕಾರ್ಯದ ಬಗ್ಗೆ ಕವಿತೆ ಚಿಂತಿಸುತ್ತದೆ. ಸಾಮಾಜಿಕ ವಿದ್ಯಾಮಾನಗಳಿಗೆ ಕಾವ್ಯ ಸ್ಪಂದಿಸಬೇಕು. ಈ ಸ್ಪಂದನೆ ಇಲ್ಲದಿದ್ದರೆ ಕಾವ್ಯಕ್ಕೆ ಅರ್ಥವೇ ಇಲ್ಲ ಎಂಬ ನಿಲುವನ್ನು ಕಾಣುತ್ತೇವೆ. ಕಾವ್ಯಕ್ಕೆ ಕಲಾ ಸೌಂದರ್ಯಕ್ಕಿಂತ ಸಾಮಾಜಿಕ ಬದುಕನ್ನು ಹಸನು ಮಾಡುವುದೆ ಮುಖ್ಯ ಎಂಬ ತತ್ವ ಇಲ್ಲಿದೆ.
ಹೊಕ್ಕಳ ಬಳ್ಳಿಯ ಸಂಬಂಧ ಕಡಿದುಕೊಂಡು
ಅನಾಥ ಬದುಕಿಗೆ ಹೆಸರಾದವರು
ಮೈ ಚರ್ಮ ಸುಲಿದು ನಿಮ್ಮ ಕಾಲಿಗೆ
ಪಾದುಕೆ ಮಾಡುವ ನಾವು ಭಾರತಾಂಬೆ ಮಕ್ಕಳೆ(ಭಾರತಂಬೆ ಮಕ್ಕಳು ಪು. ೧೧೫)
ಭಾರತಾಂಬೆಯ ಮಕ್ಕಳಲ್ಲಿ ತುಂಬಾ ಅಸಮಾನತೆ ಇದೆ. ಕೆಲವರು ಊಟಕ್ಕೆ ಗತಿಯಿಲ್ಲದಂತೆ ಬದುಕಿದರೆ ಕೆಲವರು ಉಂಡದ್ದು ಅರಗಿಸಿಕೊಳ್ಳುವ ಬಗ್ಗೆ ಯೋಚಿಸುವ ಸ್ಥಿತಿ ಇದೆ. ರಾಜಕಾರಣವೂ ಭಾರತಾಂಬೆಯನ್ನು ಭಾನಾತ್ಮಕವಾಗಿ ಬಳಸಿಕೊಂಡು ಜನರ ಮಧ್ಯೆ ವಿಘಟನೆಯನ್ನು ತರುತ್ತಿದೆ. ಇದರ ನಡುವೆ ನಿಜವಾದ ಸಮಸ್ಯೆಗಳು ಕಣ್ಣಿಗೆ ಕಾಣದೆ ಮರೆಯಾಗುತ್ತಿವೆ. ಹಸುವು, ನಿರುದ್ಯೋಗ ಬಡತನದ ಬಗ್ಗೆ ಯೊಚಿಸದೆ ಕೇವಲ ಬೌಗೋಳಿಕವಾಗಿ ದೇಶವನ್ನು ಪರಿಭಾವಿಸುತ್ತಿದ್ದೇವೆ. ಅದಕ್ಕೆ ಕವಿತೆ ನಿಜವಾದ ಭಾರತಾಂಬೆಯ ಮಕ್ಕಳನ್ನು ಪರಿಚಯಿಸುತ್ತಿದೆ. ಅವರು ನಿತ್ಯವು ದುಡಿವವರು. ಬೆವರು ಸುರಿಸುವವರು. ಉಳ್ಳವರಿಗೆ ತಮ್ಮ ಚರ್ಮವನ್ನೇ ಸುಲಿದು ಪಾದುಕೆ ಮಾಡುವವರು. ಇವರು ನಿಜವಾದ ಭಾರತಾಂಬೆಯ ಮಕ್ಕಳು. ಇವರನ್ನು ಕುರಿತು ಚಿಂತಿಸುವುದು, ಪ್ರೀತಿಯಿಂದ ಕಾಣುವುದು ದೇಶಭಕ್ತಿ.
ಹುಬ್ಬ ಏರಿಸಿದರು
ಗಡ್ಡದವನ ಕಮಂಡಲಿನ ಹಿಡಿಯಲಿ
ಹೇಗೆ ಸಿಕ್ಕಿತು ಈ ಬೆಳದಿಂಗಳ ಬಾಲೆ
ಬಯಕೆಯ ಕಲ್ಲಿಗೆ ತಿಕ್ಕಿದರು, ಮಸೆದರು
ಆಸೆಯ ಹರಿತ ಚೂರಿಯ
ಮರೆತರು ರಕ್ಷಕ ಧರ್ಮವ
ಆದರೂ ಗಂಡಸರು ಬರೀ ಗಂಡಸರು (ಎಷ್ಟೊಂದು ವೇಷ ಎಷ್ಟೊಂದು ಮೋಸ ೧೦೯)
ಪುರಾಣ ಪುರುಷರು, ಋಷಿಗಳು, ಅಧಿಕಾರವಂತರು, ಆಡಳಿತದವರು ಪುರುಷರೆನ್ನಿಸಿಕೊಳ್ಳುವವರು ಮಹಿಳೆಯನ್ನು ಬಯಕೆಯ ಕಣ್ಣುಗಳಿಂದಲೇ ನೋಡುತ್ತದೆ. ತನ್ನ ಬಯಕೆಯನ್ನು ತೀರಿಸಿಕೊಳ್ಳಲು ಹಲವು ವೇಷಗಳನ್ನು ಹಾಕುತ್ತಾರೆ. ಆಸೆಯ ಹರಿತ ಚೂರಿಯಿಂದ ಮಹಿಳೆಯರನ್ನು ಕತ್ತರಿಸುತ್ತಲೇ ಇರುತ್ತಾರೆ. ಮಹಿಳೆಯನ್ನು ಸಂರಕ್ಷಣೆ ಮಾಡಬೇಕಾದ ಇವರು ಮೃಗಗಳಾಗಿ ಮಹಿಳೆಯನ್ನು ಮುಕ್ಕಿ ತಿನ್ನುತ್ತಾರೆ. ಆದರೂ ಮಹಿಳೆ ಪುರುಷನನ್ನು ಪೊರೆಯುತ್ತಿದ್ದಾಳೆ ಭೂಮಿಯಂತೆ. ಪುರುಷನ ಮೂರ್ಖತನಕ್ಕೆ ಕರುಣೆ ತೋರಿಸುತ್ತಲೇ ಇದ್ದಾಳೆ. ಇದು ಆಕೆಯ ದೌರ್ಬಲ್ಯವಲ್ಲ. ಸಮಾಜವನ್ನು ಕಟ್ಟುವ ಪರಿಯೂ ಕೂಡ. ಈ ಸ್ಥಿತಿಯನ್ನು ಪುರುಷ ಅರ್ಥ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಮಹಿಳೆ ಸಿಡಿಮದ್ದಾಗುತ್ತಾಳೆ.
ಸತಿ ಧರ್ಮದ ಮದರಂಗಿಯ ಚಿತ್ತಾರ
ಕೈತುಂಬಾ ಬಿಡಿಸಿಕೊಂಡು ಪತಿಯ
ಹೆಜ್ಜೆಯಲಿ ಹೆಜ್ಜೆ ಬೆಸೆಯುತ್ತ
ಮುಳ್ಳು ಬಿತ್ತಿದ ರಾಜ ಮಾರ್ಗದಲಿ
ರನ್ನದ ಗಿಳಿಗೆ ಚಿನ್ನದ ಪಂಜರ
ಹಿಂದೆ ಮುಂದೆ ಕಾಯಲು ಲಕ್ಷ್ಮಣ ರೇಖೆ (ಎಷ್ಟೊಂದು ವೇಷ ಎಷ್ಟೊಂದು ಮೋಸ ೧೦೯)
ಮಹಿಳೆ ಎಷ್ಟೇ ಶ್ರೀಮಂತಿಕೆಯ ಮನೆತಕ್ಕೆ ಮಡದಿಯಾಗಿ ಹೋದರು ಆಕೆಯ ಸ್ಥಿತಿಯಲ್ಲಿ ಬದಲಾವಣೆಯಾಗುವದಿಲ್ಲ. ಅವರು ಅಲ್ಲಿ ರನ್ನದ ಗಿಳಿಗೆ ಚಿನ್ನದ ಪಂಜರ ಹಾಕಿದಂತೆ ಬಂಧಿಯಾಗಿರುತ್ತಾರೆ. ಅವರನ್ನು ಕಾಯಲು ಪುರುಷ ಪಡೆ. ಅವರ ಬೆಂಗಾವಲಿನಲ್ಲಿಯೇ ಇರಬೇಕಾಗುತ್ತದೆ. ಎಲ್ಲಾ ವರ್ಗಗಳಲ್ಲಿಯೂ ಮಹಿಳೆ ಅಸ್ತಿತ್ವವಿಲ್ಲದ ಪರತಂತ್ರತೆಯನ್ನು ಅನುಭವಿಸಬೇಕಾಗುತ್ತದೆ. ಅದಕ್ಕೆ ಮಹಿಳೆ ಲಕ್ಷ್ಮಣ ರೇಖೆಯಲ್ಲಿಯೇ ಬದುಕಬೇಕು. ಈ ಬದುಕು ಬದಲಾಗಬೇಕುಂಬುದು ಕವಿತೆಯ ಇಚ್ಚೆ.
ಯುದ್ಧ ಭೂಮಿಯಲ್ಲಿ ಸತ್ತರೆ
ಸ್ವರ್ಗ ಸಿಗುತ್ತದೆ ಸುರಾಂಗನೆಯರು
ಬಿಗಿದಪ್ಪಿ ಚುಂಬಿಸುತ್ತಾರೆAದು
ಕಲ್ಲಿನ ಮೇಲೆ ನೆಲ್ಲಿನ ಮೇಲೆ
ಬಡಪೆಟ್ಟಿಗೆಗಳ ಹೃದಯದ ಮೇಲೆಯೂ
ಕೊರೆದರು ಅಳಿಸಲಾರದಂತೆ
ಹೇಡಿಗಳು ಸಾವಿಗಂಜಿ
ಬದುಕುವ ಹೆಂಡಿಹುಳುಗಳು ಅಂದು (ಸೈನಿಕರ ಸಾವು ಮತ್ತು ಓಟು ಬ್ಯಾಂಕು ೯೭)
ಯುದ್ಧ ಪ್ರಭುತ್ವಕ್ಕೆ ಬೇಕು. ರಾಜ್ಯ ವಿಸ್ತರಣೆಗಾಗಿ ರಕ್ಷಣೆಯ ಹೆಸರಿನಲ್ಲಿ ಅಮಾಯಕರ ಮಾರಣ ಹೋಮ ನಡೆಯುತ್ತದೆ. ಜನಸಾಮಾನ್ಯರಿಗೆ ಯುದ್ಧ ಬೇಕಾಗಿರುವದಿಲ್ಲ. ಯುದ್ಧಗಳು ಅನಿವಾರ್ಯ ಎಂಬ ವಾತವರಣವನ್ನು ಪ್ರಭುತ್ವಗಳು ಸೃಷ್ಟಿ ಮಾಡುತ್ತವೆ. ಯದ್ಧದಲ್ಲಿ ಮಡಿದವರು ಸ್ವರ್ಗಕ್ಕೆ ಹೋಗುತ್ತಾರೆ. ಬದುಕುಳಿದರೆ ಬೇಕಾದಷ್ಟು ಭೂಮಿಯಲ್ಲಿ ಸಿರಿ ಸಂಪತ್ತು ಸಿಗುತ್ತದೆ ಎಂಬ ಭ್ರಮೆಯನ್ನು ಹುಟ್ಟುಹಾಕುತ್ತಾರೆ. ಇದಕ್ಕೆ ಬಲಿಯಾದ ಅಮಾಯಕರು ಇದನ್ನು ನಂಬಿ ಉಗ್ರಭಿಮಾನವನ್ನು ಬೆಳಸಿಕೊಳ್ಳುತ್ತಾರೆ. ಪ್ರಭುತ್ವದ ಮಾತುಗಳಿಗೆ ಒಳಗಾಗುತ್ತಾರೆ. ಈ ಯುದ್ಧೋನ್ಮಾದವನ್ನು ಕವಿತೆ ನಿರಾಕರಿಸುತ್ತದೆ. ಪ್ರಭುತ್ವದ ಉನ್ನಾರವನ್ನು ಬಯಲಿಗೆಳೆಯುತ್ತದೆ. ಶಾಂತಿಯೆಡೆಗೆ ಮನುಷ್ಯನ್ನು ಮುನ್ನಡೆಸುತ್ತದೆ.
ನದಿದಂಡೆ ಗುಂಟ ಜಿಗಿತ
ಕರಿಕೆಯ ಬೇರು-ನಾರು-ಮಣ್ಣು
ಸಮಸಮ ಪಾಲುಂಡು ಒತ್ತಿ ಬಂದ
ನಿರಿಗೆ ಕೈ ಕೈ ಹಿಡಿದು ಉಳಿದು
ಕೊಳ್ಳುವ ಜಿಗುಟುತನ
ಗಂಡಸರು ಸುತ್ತಿದ
ಹಾವಿನ ಸಿಂಬಿ ಬಿಚ್ಚಿ
ಪತಿವ್ರತೆಯರು ಹೊತ್ತ
ಉಸುಕಿನ ಬಿಂದಿಗೆ ಒಡೆದು
ಜೋಗಿಯ ಕೈಯಲ್ಲಿಯ
ತಂಬೂರಿಗೆ ಸ್ವರ ಸೇರಿಸುವ
ಗಾಳಿಗುದುರೆಯನೇರಿ
ಸೂರ್ಯ ನೆತ್ತಿಯ ತಂಪು
ಗೊಳಿಸುವ ಹಂಬಲ (ಕವಿತೆ ಹಂಬಲ ೧೦೦)
ಪುರುಷನ ಪ್ರಮಾಣಗಳನ್ನು ಒಡೆದು ಹೊಸ ಬನಿಯನ್ನು ಕಟ್ಟುವ ಆಶಯ ಕವಿತೆಗಿದೆ. ಬದುಕಿನ ಸ್ವರ ನುಡಿಸಿ ಸೂರ್ಯನನ್ನು ತಂಪು ಮಾಡುವ ಹಂಬಲ ಇಲ್ಲಿಯ ಕವಿತೆಗಳಲ್ಲಿ ಜೀವ ಪಡೆಯುತ್ತದೆ.
ಇಲ್ಲಿಯ ಕವಿತೆಗಳು ಲಯಬದ್ಧವಾದ ದೇಶಿ ನುಡಿಗಟ್ಟೊಂದನ್ನು ಸೃಷ್ಟಿಸಿಕೊಂಡಿವೆ. ಮಹಿಳೆ ಅನುಭವಿಸುವ ಹಿಂಸೆಯ ನೆಲೆಗಳನ್ನು ನಿಕಷಕ್ಕೊಡ್ಡುತ್ತವೆ. ಪುರುಷ ನಂಬಿಕೊಂಡು ಬಂದ ಪ್ರಮಾಣಗಳನ್ನು ಅವಲೋಕನ ಮಾಡಿಕೊಳ್ಳುವ ಒತ್ತಾಯವನ್ನು ಮಾಡುತ್ತವೆ. ತಣ್ಣಗೆ ಹಿಮದಂತೆ ಪುರುಷರ ಕ್ರೌರ್ಯವನ್ನು ಬಯಲುಗೊಳಿಸುತ್ತವೆ. ಮಹಿಳೆ ವಹಿಸಬೇಕಾದ ಎಚ್ಚರವನ್ನು ತುಂಬುತ್ತವೆ. ಮಹಿಳೆ ತನ್ನ ಧಾರಣ ಶಕ್ತಿಯನ್ನು ಬಳಸಿಕೊಂಡು ಮುನ್ನಡೆಯಬೇಕಾದ ನೈತಿಕ ದಾರಿಯನ್ನು ತೋರಿಸುತ್ತವೆ. ಬೆವರುಂಡ ಜೀವಿಗಳು ನವ ಜೀವನವನ್ನು ಪಡೆಯುವ ಬಗೆಯನ್ನು ಶೋಧಿಸುತ್ತವೆ. ಪುರುಷನ ಪ್ರಮಾಣಗಳನ್ನು ಭಂಜನಗೊಳಿಸಿ ಸ್ತ್ರೀ ಅಸ್ಮಿತೆಯನ್ನು ಸ್ಥಾಪಿಸುತ್ತವೆ.
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.