ಡಾ. ಚೇತನ ಸೋಮೇಶ್ವರ ಕವಿತೆ `ಹೊಸ ನುಡಿಗಟ್ಟಿನ ಲಯಗಳು'

Date: 02-10-2023

Location: ಬೆಂಗಳೂರು


''ಕಿಲುಬುಗಟ್ಟಿ ಜಡವಾಗುತ್ತಿರುವ ಲೋಕಕ್ಕೆ `ನಿಜತ್ವ’ವನ್ನು ಚಿಮ್ಮಿಸುವ ಶುದ್ಧ ಸಂಜೀವಿನಿ. ಅಮಾನುಷವಾಗಿ ಆಕ್ರಮಿಸುತ್ತಿರುವ ಇಂಬಳಗಳಿಗೆ ಮದ್ದರೆಯುವ ತಿಳಿವು. ಅವರ ಕವಿತೆಗಳ ಧ್ವನಿಯೊಂದಿಗೆ ನಡೆದಾಗ ಈ ಅಂಶಗಳನ್ನು ಧ್ಯಾನಿಸುತ್ತವೆ. ಈ ಕಾರಣಕ್ಕೆ ಕನ್ನಡ ಕಾವ್ಯ ಪರಂಪರೆಯಲ್ಲಿ ಭಿನ್ನವಾದ ಅಭಿವ್ಯಕ್ತಿಯ ದಾರಿಯನ್ನು ಇವರ ಕವಿತೆಗಳು ತುಳಿಯುತ್ತವೆ,” ಎನ್ನುತ್ತಾರೆ ಲೇಖಕ ರಾಜಶೇಖರ ಹಳೆಮನೆ. ಅವರು ತಮ್ಮ ‘ಓಂದಿನ ಹಂಗು’ ಹೊಸ ಅಂಕಣದಲ್ಲಿ ‘ಡಾ. ಚೇತನ ಸೋಮೇಶ್ವರ ಕವಿತೆಗಳ ಲಯಗಳು’ ಕುರಿತು ವಿವರಿಸಿದ್ದಾರೆ.

`ಈ ಬಾಳಿನ ನಿಜವೇನು ಎಂದು ನೆನಸಿದಾಗ ಅದರ ಗುಟ್ಟನ್ನು ಶಬ್ದದಲ್ಲಿ ಹಿಡಿದಿಡಬೇಕು. ಸಂಖ್ಯೆಯಿಂದ ಅಳೆದು ತೋರಿಸಬೇಕು ಎಂಬ ಆಶೆ ಪ್ರಬಲವಾಗುವುದು. ಅಮೇಯವಾದುದನ್ನು ಒಂದು ಪ್ರಮೇಯವೆಂಬಂತೆ ತರ್ಕತಾಂಡವಕ್ಕಿಳಿಸಿದಾಗ ವಾಚ್ಯದೊಳಗಿಂದ ಧ್ವನಿ ಹೊರಟಂತೆ, ತರ್ಕದ ಹಿಂದೆ ಒಂದು ಅತರ್ಕ್ಯವಾದ ಮೂರ್ತಿ ಎದ್ದು ನಿಲ್ಲುತ್ತದೆ. ಈಶ ಸಂಕಲ್ಪದಂತೆ ಕಲ್ಲಾಗಿ ಜಪಿಸಿ, ಮೂರ್ತಿಯಾಗಿ ಬೆಳೆದು, ಮತ್ತೆ ಕಲ್ಲಾಗಿ ಉಳಿದ ಕೀರ್ತಿಶೇಷ ಮೂರ್ತಿ ಜೀವನದಲ್ಲಿ ಮೃತ್ಯುವನ್ನು ದಾಟಿದ ಅಮರತೆಯಿದೆ. ರಸ ಸಾರುತ್ತಿರುವ ಸಂದೇಶ ಇದು. ಉಳಿದೆಲ್ಲ ಮರ್ತ್ಯ, ವಾಚ್ಯ. ಇದು ಧ್ವನಿ, ಇದು ಅಮೃತ, ಇದು ರಸ’

ವರಕವಿ ದ. ರಾ. ಬೇಂದ್ರೆಯವರು ತಮ್ಮ ಮೂರ್ತಿ ಕವಿತೆಯ ಬಗ್ಗೆ ಸಾಂದರ್ಭಿಕವಾಗಿ ಪ್ರಸ್ತಾಪಿಸಿದ ಮಾತುಗಳಿವು. ಡಾ. ಚೇತನ ಸೋಮೇಶ್ವರ ಅವರ ಕವಿತೆಗಳನ್ನು ಓದಿದಾಗ ಬೇಂದ್ರೆಯವರ ಈ ಮಾತುಗಳು ನೆನಪಾದವು. ಈ ಮಾತಿನ ಹೂರಣವನ್ನು ಇವರ ಕವಿತೆಗಳಿಗೂ ವಿಸ್ತರಿಸಬಹುದು.

ಚೇತನ ಸೋಮೇಶ್ವರ ಅವರು ಕವಿತೆಯನ್ನು ಶಬ್ದಜಾಲದ, ಭಾಷೆಯ ಮಾಂತ್ರಿಕತೆಯ, ರೂಪಕ, ಸಂಕೇತ, ಪ್ರತಿಮೆಗಳ ಆಡಂಬರ ಎಂದು ನಂಬಿದವರಲ್ಲ. ಕವಿತೆ ಅವರಿಗೆ ಜೀವನ ಶೋಧದ ಸೃಜನಶೀಲತೆ. ಸದಾ ಬದುಕನ್ನು ಒಳಗು ಮಾಡಿಕೊಂಡು ವಾಸ್ತವದ ದಂದುಗಕ್ಕೆ ಮಿಡಿಯುವ ಜೀವದಾಯಿನಿ. ವಾಸ್ತವದ ಉರಿಯನ್ನು ಕಣ್ಣುರಿಯಲ್ಲಿ ತುಂಬಿಕೊಂಡು ರೆಪ್ಪೆಯ ತೇವದ ಮೂಲಕ ಧ್ವನಿ ಮಾಡುವ ನೈತಿಕ ವೈಚಾರಿಕತೆಯ ಬತ್ತದ ಸೆಲೆ. ತರ್ಕದ ಮೂಲಕ ಚರಿತ್ರೆ, ಪರಂಪರೆ, ಪುರಾಣ, ದೇವರು, ಧರ್ಮ, ರಾಜಕೀಯ, ಧರ್ಮಾಂಧತೆ, ಕೋಮುವ್ಯಾದಿ, ಜಾತೀಯತೆ, ಅಂಧಕಾರದ ಚಕ್ರದ ಜೊತೆ ಸಂವಾದ ಮಾಡುವ ಅರಿವಿನ ಚೈತನ್ಯ. ಅಮೃತದೆದೆಯ ಮನಸ್ಸುಗಳನ್ನು ವಿಷಮಯವನ್ನಾಗಿ, ಹೂವಿನೆದೆಯನ್ನು ಕಲ್ಲೆದೆಯನ್ನಾಗಿ ರೂಪಿಸುವ ಪ್ರಭುತ್ವ ಶಕ್ತಿಗೆ ಮಿಣಿಕಿನ ಮಿಣಿ. ಕಿಲುಬುಗಟ್ಟಿ ಜಡವಾಗುತ್ತಿರುವ ಲೋಕಕ್ಕೆ `ನಿಜತ್ವ’ವನ್ನು ಚಿಮ್ಮಿಸುವ ಶುದ್ಧ ಸಂಜೀವಿನಿ. ಅಮಾನುಷವಾಗಿ ಆಕ್ರಮಿಸುತ್ತಿರುವ ಇಂಬಳಗಳಿಗೆ ಮದ್ದರೆಯುವ ತಿಳಿವು. ಅವರ ಕವಿತೆಗಳ ಧ್ವನಿಯೊಂದಿಗೆ ನಡೆದಾಗ ಈ ಅಂಶಗಳನ್ನು ಧ್ಯಾನಿಸುತ್ತವೆ. ಈ ಕಾರಣಕ್ಕೆ ಕನ್ನಡ ಕಾವ್ಯ ಪರಂಪರೆಯಲ್ಲಿ ಭಿನ್ನವಾದ ಅಭಿವ್ಯಕ್ತಿಯ ದಾರಿಯನ್ನು ಇವರ ಕವಿತೆಗಳು ತುಳಿಯುತ್ತವೆ.

ಪ್ರಖರ ವೈಚಾರಿಕತೆಯನ್ನು ಮೈಗೂಡಿಸಿಕೊಂಡಿರುವ ಕವಿ ಅದನ್ನು ವಾಚ್ಯಗೊಳಿಸದೆ ಕವಿತೆಯಲ್ಲಿ ಕರಗಿಸಿಬಿಡುವುದು ವಿಶೇಷ. ಈ ಕವಿತೆಗಳು ಓದುಗನೊಳಗೆ ಅರಿವಿನ ಸ್ಪೋಟವನ್ನುಂಟುಮಾಡಿ ಬೆಳದಿಂಗಳ ನೋಟವನ್ನು ಬೀರುತ್ತವೆ. `ವಿಚಾರ ತತ್ವ, ಬದುಕಿನ ವಿನ್ಯಾಸ, ಕಾವ್ಯತ್ವ’ ವನ್ನು ಅಭಿನ್ನಗೊಳಿಸುವ ದೃಷ್ಟಿಕೋನ ಕವಿತೆಗಳಲ್ಲಿ ತಣ್ಣಗೆ ಹರಿಯುತ್ತದೆ. ಕಾಲದ ಚಲನೆಯು ತಲ್ಲಣದ ಕುಲುಮೆಯಲ್ಲಿ ಬೆಂದು, ಬದುಕಿನ ಅಂತಃಸತ್ವವು ಅಪೋಷನಕ್ಕೀಡಾಗುತ್ತಿರುವ ಬಗೆಯನ್ನು ಗಂಭೀರವಾಗಿ ಚಿಂತಿಸುತ್ತವೆ. ವ್ಯಂಗ್ಯ, ಲವಲವಿಕೆಯ ಮೊನಚು ಕಾವ್ಯದ ಬಂಧ. ಆ ಬಂಧವು ಹುಸಿಯಾಗದೆ ಗಟ್ಟಿಯಾಗಿ ನೆಲದಲ್ಲಿ ಬೇರು ಬಿಡುತ್ತದೆ. ತಾತ್ವಿಕ ಸ್ಥತಿಯಿಂದಲೇ ಕವಿತೆಗಳು ಲೋಕವನ್ನು ನೋಡುತ್ತವೆ. ಅಲ್ಲಿ ಬದುಕನ್ನು ನುಂಗುವ ನರಕ ಸದೃಶ್ಯ ಬವಣೆಗಳೆ ಎದ್ದು ಕಾಣುತ್ತವೆ. ಅದಕ್ಕೆ ಕವಿ ತಲ್ಲಣಗೊಂಡು, ಅವುಗಳಿಂದ ಪಾರಾಗುವ ಬಗೆಯನ್ನು ಅನ್ವೇಷಿಸುತ್ತಾನೆ.

ಮನುಷ್ಯ ಜಂತು
ಉನ್ಮತ್ತನಾಗಿ ಸ್ಫೋಟಿಸುವ
ಸುಡು
ಮದ್ದಿನಿಂದಾಗಿ ಬೆಚ್ಚಿ
ಎಚ್ಚತ್ತ ವಿಹ್ವಲ
ಹಕ್ಕಿ ಮರಿಗೆ
ಹೊಸ ವರ್ಷ ಕರಾಳ ದುಸ್ವಪ್ನ...

ಎಂದು ಕವಿ ಮರಗುತ್ತಾನೆ. ಮುಂದಿನ ನಾಳೆಗಳನ್ನು ಹೇಗೆ ಸೃಷ್ಟಿಸುತ್ತಿದ್ದೇವೆ ಎಂಬ ವಿಷಾದ ಸ್ಥಾಯಿಯಾಗಿದೆ. `ಹಕ್ಕಿಮರಿ’ ಎಂಬುದು ಪ್ರಕೃತಿಯ ರೂಪಕವಾಗಿ ಬರುತ್ತದೆ. ಪ್ರಕೃತಿಯನ್ನು ಧೃತಿಗೆಡಿಸಿರುವ ಮನುಷ್ಯ ಕರಾಳತೆಯನ್ನು ಸೃಷ್ಟಿಸುತ್ತಿದ್ದಾನೆ. ಈ ಎಚ್ಚರವನ್ನು ಕವಿತೆ ಮುಂದಿಡುತ್ತದೆ. `ಸ್ಪೋಟಿಸುವ ಸುಡು ಮದ್ದು’ ಹಿಂಸೆಯ ಸಂಕೇತವಾಗಿದೆ. ಯುದ್ಧಾಸ್ತ್ರಗಳಿಂದ ಮನುಷ್ಯನನ್ನು ಗೆಲ್ಲಲು ಹೊರಟಿರುವ ಅರ್ಬುದರು ಹಕ್ಕಿ ಮರಿಗಳ ಪಾಡನ್ನು ನೋಡುತ್ತಿಲ್ಲ. ಈ ಕುರುಡುತನ ವಾಸ್ತವವನ್ನು ಆವರಿಸಿದೆ. ಇದರ ಪೊರೆ ತೆಗೆಯದಿದ್ದರೆ ಭವಿಷ್ಯ ಅಂಧಕಾರವಾಗುತ್ತದೆ. ಈ ಚಿಕ್ಕ ಸಾಲುಗಳು ಅಗಾಧ ಅರ್ಥಧ್ವನಿಗಳನ್ನು ತುಂಬಿಕೊಂಡಿವೆ. `ಅಗಾಧತೆಯ ದರ್ಶನ’ವನ್ನು ಹುಡುಕುವಂತೆ, ಯೋಚಿಸುವಂತೆ ಕಾಲದೊಂದಿಗೆ ಕೊಂಡೊಯ್ಯುವದೆ ಈ ಕವಿತೆಗಳ ವೈಶಿಷ್ಟ್ಯ.

ಮೊತ್ತ ಮೊದಲ ತನ್ನ ಉದ್ಗಾರ
ಬಾಳಿನುದ್ದಕ್ಕೂ
ಅನುಭವಿಸಬೇಕಾದ ದುಃಖ
ತಲ್ಲಣ ಆತಂಕ ವೇದನೆಗಳೆಲ್ಲವನ್ನು
ಅಡಕಗೊಳಿಸಿದ ಬೀಜಮಂತ್ರ
ಎಂದರಿತ
ನವಜಾತ ಶಿಶು ತಡೆಯದೆ
ಹಾರಿ ಚೀರಿ ಅತ್ತಿತು.....

ಹಕ್ಕಿಮರಿಯ ಪಾಡಿಗಿಂತಲೂ ಮನುಷ್ಯನ ಪಾಡು ಬೇರೆಯಿಲ್ಲ. ಮಗುವಿನ ಜನನ ಬಾಳಿನಲ್ಲಿ ಸಂಬ್ರಮವನ್ನುಂಟುಮಾಡದೆ, ಆತಂಕವನ್ನುಂಟುಮಾಡುವುದು ಮನುಷ್ಯನ ನಿರ್ಧಯತೆಗೆ ಸಾಕ್ಷಿಯಾಗಿದೆ. ನಾವು ಮುಂದಿನ ಜನಾಂಗಕ್ಕೆ ವೇದನೆ, ವಿಷಾದ, ರೋಗ-ರುಜಿನಿಗಳನ್ನೇ ಬಿಟ್ಟು ಹೋಗುತ್ತಿದ್ದೇವೆ. ಮಗುವಿನ ಸಹಜ ಚೀತ್ಕಾರ ಕವಿಗೆ ಹೊಸ ಅರ್ಥವನ್ನು ನೀಡಿದೆ. ದೈನಂದಿನ ಬದುಕಿನ ವಿನ್ಯಾಸವನ್ನು ಕಾವ್ಯ ವಿನ್ಯಾಸವನ್ನಾಗಿ ರೂಪಿಸುವದೆ ಕವಿತೆಯ ಸಾಮರ್ಥ್ಯ. `ಹಾರಿ ಚೀರಿ ಅತ್ತಿತು....’ ಎಂಬ ಸಾಲು ಓದುಗನೊಳಗೆ ಕೋಲಾಹಲವನ್ನೇ ಸೃಷ್ಟಿಸುತ್ತದೆ. ಸಂಬ್ರಮವನ್ನು ಮಲಿನಗೊಳಿಸಿದ ಕಾಲವನ್ನು ಸೃಷ್ಟಿಸುತ್ತಿದ್ದೇವೆ ಎಂಬ ಕರುಳ ಸಂಕಟವನ್ನು ಈ ಸಾಲಿನಲ್ಲಿ ಕಾಣುತ್ತೇವೆ.

ಸರ್ಪಸಂಸ್ಕಾರ ಆಗಬೇಕಾದದ್ದು
ಎಲ್ಲೆಲ್ಲೋ ಅಲ್ಲ
ಸ್ಮಾರ್ಟ್ ಫೋನ್‌ಗಳನ್ನೇ ಹುತ್ತವಾಗಿಸಿಕೊಂಡು
ನಂಜು ನಾಲಿಗೆಗಳ ಝಳಪಿಸಿ
ವಿಷ ಕಕ್ಕುತಲಿರುವ
ಮನುಸುಗಳಿಗೆ ಇಲ್ಲೇ
ಅಲ್ಲ?

ತನ್ನೊಳಗೆ ತಂತ್ರಜ್ಞಾನದಿಂದ ಸೃಷ್ಟಿಸಿಕೊಂಡ ನಿರ್ವಾತ ವ್ಯಸನಕ್ಕೆ ಭೌತಿಕ ನಂಬಿಕೆಯ ಅಜ್ಞಾನದಲ್ಲಿ ಹುಡುಕುತ್ತಿದ್ದೇವೆ. `ನಿಜ ವಾಸ್ತವ’ವನ್ನು ಮರೆ ಮಾಚುತ್ತಿದ್ದೇವೆ. ಈ ಭ್ರಮೆಗಳನ್ನು ಸೃಷ್ಟಿಸುವ ಶಕ್ತಿಕೇಂದ್ರಗಳ ಬಗ್ಗೆ

ಮೂಕವಾಗಿದ್ದೇವೆ. `ವಿಷ ಕಕ್ಕುತ್ತಲಿರುವ’ ಮನಸ್ಸುಗಳನ್ನು `ಅಮೃತಮಯ’ವನ್ನಾಗಿ ವಿಕಾಸಗೊಳಿಸುವ ವಿವೇಕವನ್ನು ತುಂಬುತ್ತಿಲ್ಲ. ಮೌಢ್ಯದ ಕಡೆಗೆ ಈ ಮನಸ್ಸುಗಳನ್ನು ಒಯ್ಯುತ್ತಿದ್ದೇವೆ. ಹೊಸ ಜನಾಂಗಕ್ಕೆ ತಂತ್ರಜ್ಞಾನವನ್ನು ಸರ್ಪಸಂಸ್ಕಾರಗೊಳಿಸಿ ಕೊಡಬೇಕಿದೆ. ಒಂದು ನಂಬಿಕೆಯ ಜಗತ್ತನ್ನು ನವ ನಂಬಿಕೆಯನ್ನಾಗಿ ಪರಿವರ್ತಿಸುವ ತುರ್ತನ್ನು ಕವಿತೆ ಧ್ವನಿಸುತ್ತದೆ.

`ಸ್ವಂತಿ’ಯಲ್ಲಿ ಪಡಿಮೂಡತ್ತಲೇ
ಇರುವ ಥಾನುಗಟ್ಟಲೆ
ಭಾವಚಿತ್ರಗಳಲ್ಲಿ ಕೆಲವಾದರೂ
ಎದೆಯ ಭಾವಭಿತ್ತಿಯಲ್ಲಿ
ಶಾಶ್ವತವಾಗಿ ಅಚ್ಚಾಗುತ್ತಿದ್ದರೆ?

ತಂತ್ರಜ್ಞಾನದ ಗುಲಾಮರಾಗಿರುವ ನಾವು ಸ್ವಂತಿಕೆಯನ್ನೇ ಮರೆತಿದ್ದೇವೆ. ಎದೆಯ ಭಾವಗಳನ್ನೆಲ್ಲಾ ಹುಸಿಯಾಗಿಸಿ ಭಾವಚಿತ್ರಗಳನ್ನೇ ನಿಜವೆಂದು ನಂಬುತ್ತಿದ್ದೇವೆ. ಅವುಗಳೊಂದಿಗೆ ಆಟವಾಡುತ್ತಿದ್ದೇವೆ. ಚಂಚಲಚಿತ್ತರಾಗಿ ಮನಸ್ಸಿನ ಮಧುರತೆಯನ್ನು ಕಳೆದುಕೊಂಡು ವ್ಯಾಕುಲಕ್ಕೀಡಾಗುತ್ತಿದ್ದೇವೆ. ನವನಾಗರಿಕತೆ ಎತ್ತ ಸಾಗುತ್ತಿದೆ ಎಂಬ ಭೀತಿ ಮನಸ್ಸನ್ನು ಕಾಡುತ್ತದೆ.

ಕಾರ್ಪರೇಟ್ ಕುಳಗಳು
ನಿಧಾನ ಗತಿಯಲಿ ಪದವೂರುತ್ತ
ಬರುವ ಬಣ್ಣದ ವೇಷಗಳು..
ಅಬ್ಬರದ ಪಾತ್ರಗಳು
ಬಂದದ್ದೇ ತಿಳಿಯದು ಬಹು ಬಾರಿ
ನಮಗೋ ನಿದ್ದೆಗಣ್ಣು
ಎಲ್ಲ ಹೋಗಿ ಎಚ್ಚರವಾದಾಗ
ಬೆಳ್ಳಂಬೆಳಗು ಬಟಾಬಯಲು
ಚುಚ್ಚುವ ಬಿಸಿಲು, ಅಯ್ಯೋ
ಟೆಂಟ್ ಬಿಚ್ಚಿದ್ದೇ ಗೊತ್ತಾಗಲಿಲ್ಲ...

ಈ ಕವಿತೆ ಇಡೀ ಭಾರತದ ಸದ್ಯದ ಸ್ಥಿತಿಯನ್ನು ಮಾರ್ಮಿಕವಾಗಿ ಕಟ್ಟಿಕೊಡುತ್ತದೆ. `ಟೆಂಟ್ ಬಿಚ್ಚಿದ್ದೇ ಗೊತ್ತಾಗಲಿಲ್ಲ’ ಎಂಬ ಸಾಲು ಕಾರ್ಪರೋಟ್

ಜಗತ್ತುಗಳ ಕಾಣದ ಕೈಗಳ ಕರಾಳತೆಯನ್ನು ಸೂಚಿಸುತ್ತದೆ. ಎಲ್ಲವನ್ನು ಅವರಿಗೆ ಒಪ್ಪಿಸಿ, ನಮ್ಮತನವನ್ನೇ ಕಳೆದುಕೊಳ್ಳುವ ಪಾಡು ಬರುತ್ತದೆ. ಮೈ ಮನಗಳನ್ನೇ ಗೊತ್ತಾಗದಂತೆ ಅಪೋಷನ ಮಾಡುವ ಕಲೆ ಅವರಿಗೆ ಕರಗತವಾಗಿದೆ. ನಾವು ಮೈ ಮರೆತರೆ ನಮಗೆ ಟೆಂಟೆ ಇರುವದಿಲ್ಲ. ಜೊತೆಗೆ ನಮ್ಮ ಸಾಂಸ್ಕೃತಿಕ ಜಗತ್ತು ನಾಶವಾಗುತ್ತದೆ. ಟೆಂಟ್ ನಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಧ್ವನಿಸುತ್ತದೆ.

ನಮ್ಮೊಳಗಿನ ಪ್ರೀತಿಯ ಸೆಲೆ
ಬತ್ತಿದಾಗ
ಮುಗಿದಾಗ ರಾಗ
ನರಿನಾಯಿಗಳ ಹಲ್ಕಿರತವೂ
ಮಂದ
ಹಾಸದಂತೆ ಭಾಸ...

ಮನುಷ್ಯನ ಸ್ವಾಭಾವಗಳು ಸಹಜತೆಯನ್ನು ಕಳೆದುಕೊಂಡು ಕೃತಕವಾಗುತ್ತಿರುವ ಸ್ಥಿತಿಯನ್ನು ಕವಿತೆ ವ್ಯಂಗ್ಯವಾಗಿ ಹೇಳುತ್ತದೆ. ಮನಸ್ಸಿನಿಂದ ಮಾತಾಡದೆ ನಾಲಗೆಯಿಂದ ಮಾತಾಡುತ್ತಿದ್ದೇವೆ. ಎಲ್ಲಾ ಸಂಬಂಧಗಳನ್ನು ಲಾಭದ ನೆಲೆಯಲ್ಲೇ ನೋಡುತ್ತಿದ್ದೇವೆ. ಪರಸ್ಪರ ಮುಖಾಮುಖಿಯಾದರೂ ಸಂವೇದನೆಯೇ ಇಲ್ಲದ ನಿರ್ವಾತ ಕಾಣುತ್ತೇವೆ. `ನರಿನಾಯಿಗಳ ಹಲ್ಕಿರತವೂ ಮಂದ ಹಾಸದಂತೆ ಭಾಸ...’ ಎಂಬ ಸಾಲು ಮನುಷ್ಯನ ನಿಜ ಮುಖವಾಡವನ್ನು ಕಳಚಿಡುತ್ತದೆ. ಮನದಲ್ಲಿ ರಜ ತುಂಬಿಕೊಂಡೇ ವ್ಯವಹರಿಸುವ ಮಟ್ಟವನ್ನು ತಲುಪಿದ್ದೇವೆ. ಈ ಸ್ಥಿತಿ ಮನುಷ್ಯನ ಅಂತಃಕರಣವನ್ನು ಕೊಲ್ಲುತ್ತದೆ. ಅಲ್ಲಿ ಕೇಡು ಮನೆ ಮಾಡುತ್ತದೆ.

ವೇದ, ಸತ್ಯವೇದ, ಮುಲ್ಲಾಶಾಸ್ತ್ರಗಳ
ನಿತ್ಯ ಸತ್ಯ ಪಠನದಿಂದ
ಪಾಂಡಿತ್ಯ ರಸದ ಅಮಲೇರಿಸಿ
ಕೊಂಡವರೆಲ್ಲ ತಲೆ
ಭಾರ ಎದೆ ಹಗುರಾಗಿ
ತಮ್ಮ ಆಲಯಗಳೊಳಗೆ ನಿರುಮ್ಮಳವಾಗಿ ತಂಪಾಗಿ
ತೆಪ್ಪಗೆ ಒರಗಿಕೊಂಡ ಕಾಲಕ್ಕೇ
ರಣ
ಬಿಸಿಲಿನ ಬಯಲಲ್ಲಿ
ಹಗುರ ನಾಲಗೆಯ ಖಾಲಿತಲೆಯ
ಭೀಕರ ಭಾಷಣಕೋರರು ಆವಿರ್ಭವಿಸಿದರು

ಧರ್ಮದೊಂದಿಗೆ ಬದುಕುವ ಮಾನವ ವೈಯಕ್ತಿಕ ಪಾಪ-ಪುಣ್ಯಗಳ ಪರಧಿಯಾಚೆಯ ಸ್ಥಿತಿಯಿಂದ ತನ್ನನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾನೆ. ಆತ್ಮ ಸಂಸ್ಕಾರದೊಂದಿಗೆ ಬದುಕನ್ನು ಶುದ್ಧಗೊಳಿಸಿಲೊಳ್ಳುವ ಕ್ರಿಯೆ ಧರ್ಮಾಚರಣೆಯಿಂದ ನಡೆಯುತ್ತದೆ. ಆದರೆ ಪ್ರತಿಯೊಂದು ಧರ್ಮದ ಧರ್ಮಾಂಧರು ಈ ಮನೋಭಾವವನ್ನೇ ಮತ್ತನ್ನಾಗಿಸುವ ವಿದ್ಯಾಮಾನವನ್ನು ಸೃಷ್ಟಿಸುತ್ತಿದ್ದಾರೆ. ಶಾಂತಿ, ನೆಮ್ಮದಿಯೆಡೆಗೆ ಚಲಿಸಬೇಕಾದ ಧರ್ಮಗಳು ರಕ್ತ ಚೆಲ್ಲುವ ಕಡೆ ಮುಖ ಮಾಡುತ್ತಿರುವುದು ಭೀಷಣ ಭಾಷಣಕಾರರಿಂದ. ಇವರು ಧರ್ಮಗಳನ್ನೇ ಬೆಂಕಿಯಾಗಿಸಿ ಸುಟ್ಟು ಅಲ್ಲಿ ಛಳಿ ಕಾಯಿಸುವ ಕಾಯಕ ಮಾಡುವವರು. `ರಣ ಬಿಸಿಲಿನ ಬಯಲಲ್ಲಿ ಹಗುರ ನಾಲಗೆಯ ಖಾಲಿ ತಲೆಯ ಭೀಕರ ಭಾಷಣಕೋರರು’ ಎಂಬ ಸಾಲುಗಳು ಪರಿಣಾಮಕಾರಿಯಾಗಿವೆ. ಅಮಲೇರಿಸುವ ಭೀಷಣರು ರಣ ಬಿಸಿಲಿಗೆ ರಣ ಬಿಸಿಲನ್ನೇ ಸುರಿವವರು. ಬೆಂಕಿ ಮಳೆಯಂತೆ ಮಾತುಗಳನ್ನು ಸುರಿಸಿ ಪ್ರಾಣಘಾತವನ್ನುಂಟು ಮಾಡುವವರು. ಪ್ರಭುತ್ವದ ಮೈಯೊಳಗೆ ಹೊಕ್ಕು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವವರು. ಕವಿತೆ ವಾಸ್ತವವನ್ನು ಮನಗಾಣಿಸುತ್ತಲೆ ನಿಜ ಬದುಕಿನೆಡೆಗೆ ನಡೆಯುವ ದಾರಿಯನ್ನು ಸೂಚಿಸುತ್ತದೆ.

ಸಂವಿಧಾನ
ಜೀವನ ವಿಧಾನವೂ ಆ
ಬಾಳಿಗೆ ಪ್ರಧಾನವೂ ಆದಾಗ,
ಮಾತು ಕೃತಿಗಳಲ್ಲಿ ಹೊಸ
ಬಗೆಯ ನಿಧಾನ ಸ್ಥಾಯಿಯಾದಾಗ,
ನಮ್ಮೆಲ್ಲರ
ನಾಡಿನ
ಕಥಾ ಸಂವಿಧಾನವೇ
ಬದಲಾಗುವುದು...

ಎಂಬ ಉದಾತ್ತ ಪ್ರಜಾಪ್ರಭುತ್ವದ ಮೌಲ್ಯಗಳ ಆಶಯ ಕವಿತೆಯ ನಿಲುವಾಗಿದೆ. ಭಾರತದ ಜನ ಸಾಮಾನ್ಯರ ಬಾಳಿನ ಹಕ್ಕುಗಳ, ಸ್ವಾತಂತ್ರಗಳನ್ನು ರಕ್ಷಿಸುವ ಪರಮೋಚ್ಚ ಸಂವಿಧಾನವನ್ನೇ ಬುಡಮೇಲು ಮಾಡುವ ಕೃತ್ಯಗಳು ನಡೆಯುತ್ತಿವೆ. ಸಂವಿಧಾನ, ಸಹಮತಗಳು ಜೀವನದುಸಿರಾದಾಗ ಬಾಳಿನ ಬೆಳಕೇ ಬೇರೆಯಾಗುತ್ತದೆ. ಆದರೆ ಆ ಬೆಳಕಿನ ಕತ್ತು ಹಿಸುಕಿ, ಘೋರ ಕತ್ತಲನ್ನು ಜನ ಸಾಮಾನ್ಯರಿಗೆ ಹೊರಿಸುವ ಹುನ್ನಾರ ನಡೆಯುತ್ತಿದೆ. ಪರಂಪರಾತ ಅಪಮೌಲ್ಯಗಳ ಕಿಲುಬನ್ನು ಸಂವಿಧಾನಕ್ಕೆ ಮೆತ್ತುವ ಕ್ರೌರ್ಯದ ಕರಾಮತ್ತುಗಳು ವಿಜ್ರಂಭಿಸುತ್ತಿವೆ. ಆದ್ದರಿಂದ ಕವಿತೆ ಮಾತು ಕೃತಿಗಳಲ್ಲಿ ಸಂವಿಧಾನದ ಆಶಯಗಳು ತುಂಬಿಕೊಳ್ಳಬೇಕೆನ್ನುತ್ತದೆ. ಆಗ ಬದುಕಿನ ಕಥೆಯೆ ಬೇರೆಯಾಗುತ್ತದೆ. ಸಂವಿಧಾನವೇ ಭಾರತದ ಧರ್ಮ, ಆತ್ಮ , ಅರಿವು, ವಿವೇಕವಾದಾಗ ಜನಸಾಮಾನ್ಯರ ಏಳಿಗೆಯ ಸ್ವಾತಂತ್ಯ್ರ, ಹಕ್ಕುಗಳು ಹೊಸ ಹಾಡನ್ನು ಹಾಡುತ್ತವೆ. ಆ ಕಡೆ ನಮ್ಮ ಬದುಕಿನ ವಿನ್ಯಾಸ ಮುನ್ನಡೆಯಬೇಕಿದೆ ಎಂಬ ಸದಾಶಯ ಕವಿತೆಯ ಉಸಿರಾಗಿದೆ. ಅದಕ್ಕೆ ಕವಿ ಹೇಳುವುದು

ಸಾಕು ಮಾಡಿ ದಯವಿಟ್ಟು
ಎರಚುವ
ಅನುಗ್ರಹ ಬೆರಕೆಯ
ಹುಳು ಹಿಡಿದ ಅಕ್ಕಿ...
ಪಂಜರವ ತೆರೆದು ಬಿಡಿ,
ರೆಕ್ಕೆ ಬಲದ ನ್ಯಾಯದ ಹಕ್ಕಿ
ನಿಂದಲೇ ಬಾನಾಡಿಯಾಗಲಿ
ಹಳು ಗದ್ದೆ ಪೈರು ಪಚ್ಚೆಯಲ್ಲೆಲ್ಲ ವಿಹರಿಸಿ
ವಿಹಂಗಮ ನೋಟ ಹರಿಸಿ
ಜಗದಗಲ ಹಾರಾಡಲಿ
ಬಿಡಿ
ಸ್ವಾತಂತ್ರö್ಯದ ಹಕ್ಕಿ

ನಮ್ಮ ರಾಜಕಾರಣ ಅನುಗ್ರಹ ಬೆರಕೆಯ ಹುಳು ಹಿಡಿದ ಅಕ್ಕಿಯಾಗಿದೆ. ಅದನ್ನೇ ಜನತೆಗೆ ತಿನ್ನಿಸುತ್ತಿದೆ. ಅದು ಒಳ್ಳೆಯ ಹಕ್ಕಿಯೆಂದು ನಂಬಿಸುತ್ತಿದೆ. ಈ ರಾಜಕಾರಣ ಬದಲಾಗಬೇಕಿದೆ. ಜನ ಸಾಮಾನ್ಯರ ಹಕ್ಕುಗಳನ್ನು ಸಂರಕ್ಷಿಸಿ, ಸ್ವತಂತ್ಯ್ರವಾಗಿ ಹಾರುವ ಸ್ವಾವಲಂಬನೆಯನ್ನು ತುಂಬಬೇಕಿದೆ.

ಅಪವಾದಕ್ಕೀಡಾದ ಜಾನಕಿಯ
ಅವಳಿ ಮಕ್ಕಳು ಮರಳಿ
ರಾಜ್ಯವಾಳುವ ಕಾಲಕ್ಕೆ
ಅಗಸನೇನಾದ...?

ಅಗಸನೇನಾದ? ಎಂಬ ಪ್ರಶ್ನೆ ಕವಿತೆಗೆ ಬಹಳ ಮುಖ್ಯವಾದುದು. ಇಡೀ ರಾಮಾಯಣದ ಆಶಯಗಳನ್ನು ಹೊತ್ತು ನಡೆಯುವವರಂತೆ ನಟಿಸುವವರು ಅಗಸನನ್ನು ಗಮನಿಸಲೇ ಇಲ್ಲ. ಅಗಸ ಕೊಳೆಯನ್ನು ತೊಳೆದು ಶುದ್ದಗೊಳಿಸುವ ಕಾಯಕದವನು. ಆಳುವ ಎಲ್ಲಾ ಪ್ರಭುತ್ವಗಳು ರಾಮನನ್ನು ಜಪಿಸುತ್ತವೆ ಹೊರತು ಅಗಸನನ್ನು ಅಲ್ಲ. ನಿಜವಾಗಿಯೂ ನಾವು ಚಿಂತಿಸಬೇಕಾದುದು ರಾಮನಿಗಿಂತಲೂ ಅಗಸನ ಬಗ್ಗೆ. ಪುರಾಣ, ಮಹಾಕಾವ್ಯಗಳು ಈ ನೆಲದಲ್ಲಿ ಬೆರತು ಹೋಗಿವೆ. ಅವುಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಅವು ಸೃಜನಶೀಲತೆಯ ಒರತೆಗಳು. ಆದರೆ ಅವುಗಳನ್ನು ಪ್ರಭುತ್ವಗಳು ತಮ್ಮ ನಿಲುವಿಗೆ ತಕ್ಕಂತೆ ಬದಲಿಸಿಕೊಳ್ಳುತ್ತವೆ. ಅಲ್ಲಿಯ ಮುಖ್ಯ ಪಾತ್ರಗಳನ್ನು ವಾಸ್ತವಗೊಳಿಸುವದರ ಮೂಲಕ ಜನತೆಯ ಮೇಲೆ ಮಂಕು ಬೂದಿಯನ್ನು ಎರಚಿ, ತಾವು ನುಡಿವದನ್ನೇ ಸತ್ಯ ಎಂದು ನಂಬಿಸುತ್ತವೆ. ಈ ಪ್ರಬಲವಾದ ಪ್ರಭುತ್ವದ ನಂಬಿಕೆಯನ್ನು ಈ ಪುಟ್ಟ ಕವಿತೆ ಒಡೆಯುತ್ತದೆ. ಮತ್ತೊಮ್ಮೆ ನಮ್ಮ ಪರಂಪರೆಯನ್ನು ಮರು ಪರಿಶೀಲಿಸುವಂತೆ ಮಾಡುತ್ತದೆ. ಈ ರೀತಿಯ ಪ್ರಶ್ನೆಗಳ ಮೂಲಕ ಪ್ರಭುತ್ವಗಳ ಮೇಲೆ ಉರಿ ಚಾಟಿಯನ್ನು ಬೀಸಿ ಎಚ್ಚರಗೊಳಿಸುವದೆ ಕವಿತ್ವದ ಅಂತಃಸತ್ವ. ಆ ಸತ್ವವನ್ನು ಸಹಜವಾಗಿಯೇ ಕವಿತೆಗಳು ಧ್ವನಿಸುತ್ತವೆ.

ಅಭೋದ ಶಿಸು ವಿನಿಂದ
ಚೊಚ್ಚಲ ಸುಳ್ಳು ಹೇಳಿಸುವ,
ಅಂತೆಯೇ
ತೊಟ್ಟಿಲ ಎಳಸು ಕಂದಮ್ಮನ
ಯಾರು ನೋಡದಾಗ ಚಿವಿಟಿಸುವ,
ಆಟಿಕೆಯ ಸಂತೆಯಲಿ ಮುಳಿಗಿದಂತೆ ನಟಿಸುತ್ತಲೇ
ಸುತ್ತಣ ಸಕಲ ಕಲಾಪಗಳಿಗೆ
ಕಿವಿ ತೆರೆದಿರಿಸುವಂತೆ ಮಾಡುವ
ಕಳಕೊಂಡ ಮುಗ್ಧತೆಯನು
ಇನ್ನೂ ಇದೆಯೆಂಬಂತೆ ತೋರಿಸುವ
ಜಗದ ಮಾಯಾ ಹಸ್ತವನು ನೆನೆದಂತೆಲ್ಲ
ಕಡು ವ್ಯಾಮೋಹ ಮೂಡುವದು

ಬದುಕಿನ ಭರವಸೆಯು ಕವಿತೆಗಿದೆ. ಯವುದೇ ಕವಿತೆ ಎಷ್ಟೇ ಬದುಕಿನ ಜಂಜಡದಲ್ಲಿ ಬೆಂದು ಹೋದರೂ ಜೀವನ ಪ್ರೀತಿಯಿಂದ ಲೋಕವನ್ನು ಪೊರೆಯುವದು ಮುಖ್ಯ. ಆ ವ್ಯಾಮೋಹ ಕವಿತೆಗಿದೆ. ಬಹುತೇಕ ಕವಿತೆಗಳು ಬದುಕನ್ನು ಬೆಂಬಿಡದೆ ಕಾಡುವ `ಅಪ್ರಜ್ಞೆ’ ಯೊಂದನ್ನು ಕಾಣಿಸುತ್ತಲೇ `ಸ್ವಪ್ರಜ್ಞೆ’ ಯನ್ನು ಬೆಳಸಿಕೊಳ್ಳಬೇಕಾದ ಉತ್ಸಾಹವನ್ನು ತುಂಬುತ್ತವೆ.

ನನ್ನೊಳಗಿನ ಕವಿತ್ವದ ಬೀಜ
ಲೋಕದ ಕುದಿ
ಕುದಿವ ಬಾಣಲೆಗೆ ಬಿದ್ದು
ಪಟಪಟನೆ
ಸಿಡಿದ್ದೊಂದು ಗೊತ್ತು
ಮೊಳಕೆಯೊಡೆಯುವದೆಲ್ಲಿಂದ
ತಿಳಿದಿಲ್ಲ...

ಎಂಬ ಅಸಾಹಕತೆಯನ್ನು ಕವಿತೆ ನುಡಿದರೂ ಆ ಬಾಣಲೆಗೆ ಬಿದ್ದು ಒದ್ದಾಡುವ ಪ್ರಕ್ರಿಯೆಯಲ್ಲಿಯೇ ಅರಿವನ್ನು ನೀಡುತ್ತದೆ. ಪಟ ಪಟನೆ ಸಿಡಿಯುವದು ಕವಿತೆಗೆ ಗೊತ್ತಿದೆ. ಸಿಡಿದು ಬೀಳುವ ಪ್ರತಿ ಬೀಜವೂ ಹೆಮ್ಮರವಾಗುವ, ನೆರಳಾಗುವ ಶಕ್ತಿಯನ್ನು ಪಡೆಯುತ್ತವೆ. ಕವಿಗೆ ಆ ಭರವಸೆ ಇಲ್ಲವೆಂಬಂತೆ ಕಂಡರೂ ಓದುಗನೊಳಗೆ ನೈತಿಕ ಎಚ್ಚರವನ್ನು ತುಂಬುತ್ತದೆ.

ಎದೆಯ ಗಾಯ
ಉರಿವಾಗಲೆಲ್ಲ
ಕಣ್ಣೀರಿನ ಉಪ್ಪಿನ ಅಂಶ
ಅರಿವಾಗಿ ಕಾಡುತ್ತದೆ...

ಎಂದು ಕವಿ ಕಣ್ಣೀರನ್ನು, ತಲ್ಲಣವನ್ನು, ಸಂಕಟವನ್ನು, ದುಃಖವನ್ನು ಅರಿವನ್ನಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿದ್ದಾನೆ. ಬದುಕಿನ ಆಳದ ಚಿಂತನೆ ಅರಳುವುದೇ ಸಂಕಟಗಳ ಬೇಗುದಿಯಲ್ಲಿ. ಕವಿಗೆ ಈ ಚರಿತ್ರೆಯ ಅರಿವಿದೆ. ಆದ್ದರಿಂದ ಲೋಕದ ಮೂರ್ಖತನದ ಅವಗಡಗಳಿಗೆ ಮತ್ತೆ ಮಿಡಿಯುತ್ತಾನೆ. ನಿಜತ್ವವನ್ನು ದರ್ಶನ ಮಾಡಲು ಪ್ರಯತ್ನಿಸುತ್ತಲೇ ತಾನು ನಿಜವಾಗುವ ಅನ್ವೇಷಣೆ ಮಾಡುತ್ತಾನೆ.

ಮರಣದ ಮಹಾಮನೆಗಳಲ್ಲಿ
ಸಾಂದ್ರ ಶೋಕಭಾವ
ಹೊತ್ತಂಥಾ
ಮುಖಗಳೆಲ್ಲವನ್ನೂ ಕ್ರೋಢೀಕರಿಸಿ
ಹೀಗೇ
ಗೋಲಲ್ಲಿ ಕಡೆದಾಗಲೆಲ್ಲ
ಬಹುಬಾರಿ
ದುಃಖದ ಎರಡೇ ಎರಡು ಬಿಂದು
ಜಿಗುಳಲಿಲ್ಲ!

ಮನುಷ್ಯನ ಮುಖವಾಡಗಳು ಮುನ್ನಲೆಗೆ ಬಂದು ನಿಜವಾದ ಹೃದಯಗಳು ಕಲ್ಲಾಗುತ್ತಿವೆ. ಕಾಲ ಆ ರೀತಿಯ ವಾತವರಣವನ್ನು ಸೃಷ್ಟಿಸುತ್ತಿದೆ. ಕಲ್ಲಾಗುವ ಹೃದಯಗಳನ್ನು ಹೂವಾಗಿಸುವ ತುರ್ತು ಲೋಕಕ್ಕಿದೆ. ಲೋಕಕ್ಕೆ ಕವಿತೆಯ ಮೂಲಕ ತಿಳಿಸಬೇಕಾಗಿದೆ.

ಕವಿಯ ಗುಜರಿ ಕಣ್ಣು ಯಾರಿಗೂ ಬೇಡದೆ
ಸವಕಲಾಗಿ ಅಟ್ಟ ಸೇರಿದ
ಮಾತು ಕತೆ ಒಗಟು ಗಾದೆ
ಮನೆಯ ಹಿತ್ತಲ ಮೂಲೆಯಲ್ಲಿ
ಮಂಕಾಗಿ ಕುಕ್ಕರಿಸಿದ ಪಾತ್ರಗಳು
ಸೋರು ನಲ್ಲಿ
ಮುರುಕು ಕನೆಕ್ಷನ್ ಪೈಪ್ ನಿ
ನ್ನೆಯ ಪತ್ರಿಕೆ-ಪುತ್ರಿಕೆ
ಒಳಗೇ ಠಳಾಯಿಸುವ ನಾಯಿ ಚೈನ್
ಹೊರಬಂದು ಬಿದ್ದ ತುಕ್ಕು
ಹಿಡಿದ ಹಳೆಯ ವಾಕಿಂಗ್ ಸ್ಟಿಕ್‌ಗಳಲ್ಲಿ
ನಿಗೂಢಾರ್ಥ ಕಂಡು ಫಳಕ್ಕನೆ
ಮಿನುಗುವದು...

ಕವಿತೆಯ ಬೆಳಕು ಈ ನಿರ್ಲಕ್ಷಿತ ವಸ್ತುಗಳಲ್ಲಿಯೇ ಇದೆ. ಇಲ್ಲಿ ಬರುವ ಪ್ರತಿಯೊಂದು ಹಳೆಯ ವಸ್ತುಗಳು ಈಗಾಗಲೇ ಜೀವ ಸವಿಸಿ ಗೂಡು ಸೇರಿದವು. ಅವುಗಳ ಸಾರ್ಥಕ ಪಡೆಯಬೇಕಿದೆ. ಪರಂಪರೆಯನ್ನು ಈ ನೆಲೆಯಲ್ಲಿ ಪಡೆಯಬೇಕಿದೆ. ಕೇವಲ ಆರ್ಷೇಯ ನಾಯಕರ ಹಿಂಸಾವೃತ್ತಿಯ ಪರಂಪರೆಯಿಂದಲ್ಲ. ಇದನ್ನೇ ಪ್ರಭುತ್ವಗಳು ಮುನ್ನೆಲೆಗೆ ತರುತ್ತವೆ. ಆದರೆ ಕವಿಗೆ ಈ ಪರಂಪರೆ ಮುಖ್ಯವಾಗುವದಿಲ್ಲ. ನಿಜವಾಗಿಯೂ ಪರಂಪರೆಯನ್ನು ಕಟ್ಟುವವರು ಯಾರ ಗಮನಕ್ಕೂ ಬರದೆ, ಎಲ್ಲಿಯೂ ದಾಖಲಾಗದೆ, ಸಾಕ್ಷಿಯಾಗದೆ ಬೆವರು ಸುರಿಸಿ ನೆಲ ಸಂಬಂಧ ಹೊಂದಿದವರಿಂದ. ಆದ್ದರಿಂದ ಕವಿಗೆ ಹಳೆಯ ವಸ್ತುಗಳಲ್ಲಿ ಹೊಳಹು ಕಾಣುತ್ತದೆ.

ಸಕಲ ಕೌಶಲ ಬಳಸಿ ಎದುರಾಳಿಯ
ಪ್ರಾಣವನೇ ಪಣವಾಗಿಸಿ
ಇನ್ನಿಲ್ಲದಂತೆ
ಕಸೂತಿ ಜಾಲ ಹೆಣೆವ ಅಷ್ಟಪದಿಯ
ಅಸಲು ಕಸುಬು
ಮನೆಗೆಲಸದವಳ ಕಣ್ಣಲ್ಲಿ
ಬರಿ ಕಸವಷ್ಟೆ.

ರಾಜಕಾರಣದ ತಂತ್ರಗಳು ತಾತ್ಕಲಿಕ ಜಯವನ್ನು ತಂದು ಕೊಡಬಹುದು. ಆ ತಂತ್ರವನ್ನೇ ಪ್ರಜಾಪ್ರಭುತ್ವವೆಂದು ಭ್ರಮಿಸುವ ನಾಯಕರ ಮುಂದೆ ಕೆಲಸದವಳು `ಅದು ಬರೀ ಕಸವೆಂದು’ ನಿಕೃಷ್ಟಗೊಳಿಸುತ್ತಾಳೆ. ಕವಿಗೆ ಜನ ಸಾಮಾನ್ಯರ ಅರಿವಿನ ಬಗ್ಗೆ ಅಪಾರ ನಂಬಿಕೆ. ಅವರು ದುಡಿವವರು ಇರಬಹುದು. ಆದರೆ ನಿಜವಾದ ಪ್ರಜಾಪ್ರಭುತ್ವ ಕಳಕಳಿ ಅವರಲ್ಲಿ ಹುಟ್ಟುತ್ತದೆ. ವ್ಯವಸ್ಥೆಯನ್ನು ತಮಗೆ ಬೇಕಾದ ರೀತಿಯಲ್ಲಿ ಕಟ್ಟಿಕೊಳ್ಳುವ ತಿಳುವಳಿಕೆ ಅವರೊಳಗೆ ಮೂಡುತ್ತಿರುತ್ತದೆ. ಅದನ್ನು ಕಂಡುಕೊಳ್ಳುವ ಇಚ್ಚಾಶಕ್ತಿ ಕವಿಗೆ ಬೇಕಾಗುತ್ತದೆ. ಕವಿತೆಯ ಕಾರ್ಯವೂ ಇವರ ದುಡಿಮಮೆಯೊಳಗೆ ಒಂದಾಗುವುದು. ಅರಿವನ್ನು ಸೃಜಿಸುವದು. ಈ ಕಾಣ್ಕೆಯನ್ನು ಇಲ್ಲಿಯ ಕವಿತೆಗಳು ತಣ್ಣಗೆ ಕಾಣಿಸುತ್ತವೆ. ಎಲ್ಲಿಯೂ ಭಾಷಾಡಂಬರಕ್ಕೆ ಹೋಗದೆ ವ್ಯವಸ್ಥೆಯ ಕತ್ತಲನ್ನು ಲವಲವಿಕೆಯಿಂದಲೇ ದಾಟಿಸುತ್ತವೆ. ಇದೊಂದು ವಿಭಿನ್ನ ಪ್ರಯೋಗ. ಓದುಗನ ಆಳಕ್ಕಿಳಿದು ಆಲೋಚನೆಗೊಡ್ಡುತ್ತವೆ.

ಹೋ...
ಈ ಸಾರಿ ಜಂಬೂ ಸವಾರಿ ದಾರಿ
ತಪ್ಪಿದೆ...
ರಾಜ ರಸ್ತೆಯಲ್ಲಿ ಸಾಗಬೇಕಿದ್ದ
ಅಂಬಾರಿ ಹೊತ್ತ ಗಜ
ರಾಜ ನಡೆ ನೆರೆ
ಸಂತ್ರಸ್ತರೆದೆ ತುಳಿದು
ಮುಂದಾಗಿದೆ...

ಈ ಕವಿತೆ ನಮ್ಮ ಪ್ರಭುತ್ವಗಳು ಎತ್ತ ಸಾಗಿದೆ ಎಂಬುದನ್ನು ಕರುಳು ಕಲುಕುವಂತೆ ಹೇಳುತ್ತದೆ. `ನೆರೆ ಸಂತ್ರಸ್ತರೆದೆ ತುಳಿದು’ ಸಾಗುವ ಗಜ ನಿಷ್ಕರುಣಿಯಾಗಿದೆ. ಜನ ಸಾಮಾನ್ಯರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಇದು ಅಮಾನವೀಯವಾದ ನಡೆ. ಪ್ರಭುತ್ವದ ಕ್ರೌರ್ಯವನ್ನು ಇಷ್ಟು ಪ್ರತಿಮಾತ್ಮಕವಾಗಿ ಕಾವ್ಯದಲ್ಲಿ ಹಿಡಿದಿಟ್ಟವರು ವಿರಳ. ಕಾವ್ಯತ್ವಕ್ಕೆ ಕುಂದು ಬಾರದಂತೆ ವ್ಯವಸ್ಥೆಯ ಕರಾಳತೆಯನ್ನು ಮನಗಾಣಿಸುವಲ್ಲಿ ಇಲ್ಲಿಯ ಕವಿತೆಗಳು ಯಶಸ್ವಿಯಾಗಿವೆ. ಕವಿತೆಗಳು ಭಷೆ ಭಾರದಿಂದು ಸೋತು ಜನರಿಂದ ದೂರ ಸರಿಯುತ್ತಿರುವಾಗ ಚೇತನ ಸೋಮೇಶ್ವರರ ಕಾವ್ಯ ಬಿಂದುಗಳು ಓದುಗರನ್ನು ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳುತ್ತವೆ. ಅವರಿಗೆ ಅರಿವಿನ ಬೀಜಗಳನ್ನು ಬಿತ್ತುತ್ತವೆ. ಆ ಸೂಕ್ಷö್ಮತೆ ಕವಿತೆಗಳಿಗೆ ಸಹಜವಾಗಿ ದಕ್ಕಿದೆ. ಕವಿಯ ನೈತಿಕ ಸ್ಥಿತಿ ಕವಿತೆಗಳಲ್ಲಿ ಅಂತರ್ ವಾಹಿನಿಯಾಗಿ ಹರಿಯುತ್ತದೆ.

ಈ ಸಂಕಲನದ ಪ್ರತಿಯೊಂದು ಕವಿತೆಯು ವಚನಕಾರರ ತಾತ್ವಿಕತೆಯನ್ನು ನೆನಪಿಸುತ್ತದೆ. ಅಷ್ಟೊಂದು ಗಟ್ಟಿಯಾದ ತಾತ್ವಿಕತೆಯನ್ನು ಹೊಂದಿವೆ. ನಡೆ ನುಡಿಯಲ್ಲಿ ಒಂದಾದ ನುಡಿ ಮಾತ್ರ ಈ ಕಾಣ್ಕೆಯನ್ನು ಓದುಗನ ಮಡಲಿಗೆ ಸಮರ್ಥವಾಗಿ ಸಾಗಿಸಲು ಸಾಧ್ಯ. ಈ ಕವಿತೆಗಳ ನುಡಿಯೇ ಕನ್ನಡಕ್ಕೆ ಹೊಸದು. ದೈನಂದಿನ ಭಾಷಿಕ ವಿನ್ಯಾಸವನ್ನು ಕಾವ್ಯ ಭಾಷೆಯನ್ನಾಗಿ ದುಡಿಸುವದು ಸುಲಭದ ಸಂಗತಿಯಲ್ಲಿ ಘನ ಬದುಕಿನ ಚಿಂತನೆ ಇದ್ದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಇಂತಹ ಸಾಧ್ಯತೆಯನ್ನು ಕಟ್ಟಿಕೊಡುವಲ್ಲಿ ಈ ಕವಿತೆಗಳು ಯಶಸ್ವಿಯಾಗಿವೆ.

ಹಳೆಮನೆ ರಾಜಶೇಖರ,
ಕನ್ನಡ ವಿಭಾಗ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ

ಈ ಅಂಕಣದ ಹಿಂದಿನ ಬರಹಗಳು:
ಮನುಷ್ಯನ ವೈರುಧ್ಯಗಳನ್ನೆಲ್ಲ ಹೇಳುವ ಲಂಕೇಶರ ಕವಿತೆಗಳು

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...