Date: 07-04-2024
Location: ಬೆಂಗಳೂರು
"ಮನುಷ್ಯ ಎಷ್ಟೇ ಶಕ್ತಿಯುತವಾಗಿ ಹಿಂಸೆಯನ್ನು ಬೆಳೆಸಿದ್ದರೂ ಪ್ರಕೃತಿಯ ನಿಗೂಢತೆಯ ಬಗ್ಗೆ ಭಯವಿದೆ. ಅದನ್ನು ಆರಾಧಿಸುತ್ತಲೇ ಬಂದಿದ್ದಾನೆ. ಭಾರತದಂತಹ ದೇಶದಲ್ಲಿ ಪ್ರಾದೇಶಿಕ ವೈವಿಧ್ಯಕ್ಕನುಗುಣವಾಗಿ ಆರಾಧಿಸುವ ಮನೋಭಾವ ಭಿನ್ನವಿರಬಹುದು. ಅವುಗಳ ಆಶಯ ಮಾತ್ರ ಮನುಷ್ಯನ ನೆಮ್ಮದಿ ಮತ್ತು ಶಾಂತಿ ಇದನ್ನು ಭದ್ರಗೊಳಿಸುವ ಪ್ರಯತ್ನ ಅನೇಕ ಧರ್ಮಗಳು ಮಾಡಿವೆ," ಎನ್ನುತ್ತಾರೆ ಹಳೆಮನೆ ರಾಜಶೇಖರ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ‘ಧರ್ಮಾಧಿಕಾರದ ಆಶಯಗಳು’ ಕುರಿತು ಬರೆದಿದ್ದಾರೆ.
ಮನುಷ್ಯ ಮೂಲತಃ ಸ್ವಾರ್ಥಿ ಮತ್ತು ಹಿಂಸಾಮಯಿ, ಮನುಷ್ಯನ ಚಾರಿತ್ರಿಕ ವಿಕಾಸದಲ್ಲಿ ಈ ಅಂಶಗಳು ಕಾಣುತ್ತವೆ. ಮುಖ್ಯವಾಗಿ ಹಿಂಸೆಯೇ ಅಧಿಕಾರದ, ಪ್ರಭುತ್ವದ ಪ್ರಯೋಗ ನೆಲೆಯಾಗಿ ಪರಸ್ಪರ ಸಮುದಾಯಗಳ ನಡುವೆ ಸವಾರಿಯ ಸ್ವರೂಪ ಪಡೆದಿದೆ. ಧಮನಕಾರಿ ಆಯಾಮಗಳಿಗೆ ಹಿಂಸೆಯೇ ಮಾನದಂಡವಾದುದು ಎಂದು ಮನುಷ್ಯ ಬಲವಾಗಿ ನಂಬಿದ್ದಾನೆ. ಹಿಂಸೆಯಿಲ್ಲದೆ ಅಧಿಕಾರ ಮತ್ತು ಪ್ರಭುತ್ವ ಸ್ಥಾಪನೆಯಿಲ್ಲ. ಅದಕ್ಕೆ ನಾಶ ಮಾಡುವ ಅಸ್ತ್ರಗಳನ್ನು ಸೃಷ್ಟಿಸಿದ್ದಾನೆ. ವೈಜ್ಞಾನಿಕತೆ ಬೆಳೆದ ಮೇಲಂತೂ ಹಿಂಸೆಯ ಸ್ವರೂಪ ಅಗೋಚರ ಸ್ಥಿತಿಯನ್ನು ಪಡೆಯಿತು. ಪ್ರಕೃತಿಯ ಅದಮ್ಯ ಶಕ್ತಿಯನ್ನು ಸರ್ವನಾಶ ಮಾಡುವ ದುರಾಲೋಚನೆ ಹಿಂಸೆಯೊಂದಿಗೆ ಸೇರಿಕೊಂಡಿತು. ಭಯ ಮೀರಿದ ಪ್ರಕೃತಿಯ ಆಕ್ರಮಣ ಮನುಷ್ಯ ಸರ್ವಾಧಿಕಾರಿ, ವಿಕೋಪಕ್ಕೊಳಗಾಗಲು ಸಹಕಾರಿಯಾಯಿತು. ಅದಕ್ಕೆ ಹಿಂಸೆಯೇ ಆಕ್ರಮಣಕ್ಕೆ ದಾರಿಯೆಂದು ತಿಳಿಯಲಾಯಿತು. ಸದಾ ಆಕ್ರಮಣಕಾರಿ ನಿಲುವುಗಳೇ ಮನುಷ್ಯನೊಳಗೆ ಬೆಳೆಯುತ್ತಾ ಹೋದವು. ಆಕ್ರಮಣದ ನಿಲುವುಗಳು ಉಳಿಯಲು ಸಂಪತ್ತಿನ ಅಗತ್ಯತೆ ಬೇಕಾಯಿತು. ಸಂಪತ್ತಿನ ವಿಸ್ತರಣೆಗೆ ಕೇಂದ್ರೀಕರಣಕ್ಕೆ ಆಕ್ರಮಿಸುವುದು ಸೋಲಿಸುವುದು ಮುಖ್ಯವಾಯಿತು. ಅದೇ ಮನುಷ್ಯನಲ್ಲಿ ವಿಜೃಂಭಣೆಯ ಮನ್ನಣೆಯಾಯಿತು. ಇದರಿಂದ ಮನುಷ್ಯನನ್ನು ಒಡೆಯಲು, ವಿಭಜಿಸುವ ರಾಕ್ಷಸತ್ವದ ಚಿಂತನೆಯು ಬೆಳೆಯಿತು. ಆಕ್ರಮಣದಲ್ಲಿ ಜಯಶೀಲರಾದವರೆಲ್ಲ ಶ್ರೇಷ್ಠರಾದರು. ಸೋತವರು ಗುಲಾಮರು, ದುರ್ಬಲರು, ಕನಿಷ್ಠರು, ದಾಸುಗಳು ಆದರು. ಈ ಬೆಳವಣಿಗೆ ಮನುಷ್ಯನಲ್ಲಿ ಕಂದರ ಸೃಷ್ಟಿಸಿತು. ಈ ಕಂದರ ಆಕ್ರಮಣದಿಂದ ಸೃಷ್ಟಿಯಾದದ್ದು. ಅದಕ್ಕೆ ಪ್ರಕೃತಿ ಸಹಜತೆಯನ್ನು ಆರೋಪಿಸಲಾಯಿತು. ಶ್ರೇಷ್ಠರೆಲ್ಲರು ಸಾಮಾಜಿಕ ಮರ್ಯಾದೆ, ಅನುಕೂಲಕ್ಕೆ ಭಾಜನರಾದರು. ಸಾಮಾಜಿಕ ನಿರ್ದೇಶಿತ ನಿಯಮಗಳನ್ನು ರೂಪಿಸಿದರು. ಈ ನಿಯಮಗಳು ಮನುಷ್ಯನ ನಡುವಿನ ಕಂದರವನ್ನು ಮತ್ತಷ್ಟು ಬಲಗೊಳಿಸಿದವು. ಮನುಷ್ಯ ಮನುಷ್ಯರ ನಡುವೆ ಸವಾರಿ ಮಾಡುವ ಪ್ರವೃತ್ತಿಗೆ ಸಾಮಾಜಿಕ ನಿಯಮಗಳು ಅಧಿಕೃತ ಮುದ್ರೆಯೊತ್ತಿದವು. ಜಾತಿ, ಅಸ್ಪೃಶ್ಯತೆ, ಅಸಮಾನತೆ. ಲಿಂಗಭೇದಗಳು ಶಾಶ್ವತ ಸಾಮಾಜಿಕ ನಿಯಮಗಳಾದವು. ಈ ಬೆಳವಣಿಗೆ ಮನುಷ್ಯನ ವಿಕಾರಗಳನ್ನು ಹೊರಗೆಡವಿತು. ಇಂತಹ ಹಿಂಸಾಮಯ ಸ್ಥಿತಿಯನ್ನು ವಿರೋಧಿಸುವ, ಸಮಾನತೆಯ ಮೌಲ್ಯವನ್ನು ಬಿತ್ತುವ ಆಶಯದೊಂದಿಗೆ ಧರ್ಮ ಸೃಷ್ಟಿಯಾಯಿತು. ಪ್ರಕೃತಿ ಸಹಯೋಗದೊಂದಿಗೆ ಮನಸ್ಸಿನ ವಿಕಾರಗಳನ್ನು ದರ್ಶಿಸುವ ನೆಲೆಗಳನ್ನು ಸ್ಥಾಪಿಸುವ ಧೋರಣೆ ಧರ್ಮದ್ದಾಗಿತ್ತು. ಆದರೆ, ಪ್ರಭುತ್ವ ಮತ್ತು ಅಧಿಕಾರಗಳು ಧರ್ಮವನ್ನು ತಮ್ಮ ಉಳಿವಿಗೆ ಬಳಸಿಕೊಂಡವು. ಧರ್ಮವನ್ನು ಪ್ರಭುತ್ವ ಮತ್ತು ಅಧಿಕಾರದ ಮಟ್ಟಕ್ಕೊಯ್ದವು. ಧರ್ಮವು ಹಿಂಸೆಯ ವಲಯದೊಳಗೆ ಸೇರ್ಪಡೆಯಾಯಿತು. ಇದು ಮನುಷ್ಯನ ದೊಡ್ಡ ದುರಂತ. ಮತ್ತೆ ಈ ದುರಂತದಿಂದ ಬಿಡುಗಡೆಯಾಗಲು ಧರ್ಮವೇ ಪರ್ಯಾಯವಾಯಿತು. ಜನಸಮುದಾಯಗಳು ಕಾಲ ಕಾಲಕ್ಕೆ ಧರ್ಮವನ್ನು ಬೇರೆ ಬೇರೆ ನೆಲೆಯಲ್ಲಿ ಭಾವಿಸುವ ಆಲೋಚನೆಯನ್ನು ಮಾಡಿವೆ. ಹಿಂಸೆಗೆ ವಿರುದ್ಧವಾದ ಧಾರ್ಮಿಕ ಆಂದೋಲವನ್ನು ಸೃಷ್ಟಿಸಿವೆ. ಅದಕ್ಕೆ ಅನೇಕ ಧಾರ್ಮಿಕ ಚಿಂತಕರು ಕಾರಣರಾಗಿದ್ದಾರೆ.
ಮನುಷ್ಯ ಎಷ್ಟೇ ಶಕ್ತಿಯುತವಾಗಿ ಹಿಂಸೆಯನ್ನು ಬೆಳೆಸಿದ್ದರೂ ಪ್ರಕೃತಿಯ ನಿಗೂಢತೆಯ ಬಗ್ಗೆ ಭಯವಿದೆ. ಅದನ್ನು ಆರಾಧಿಸುತ್ತಲೇ ಬಂದಿದ್ದಾನೆ. ಭಾರತದಂತಹ ದೇಶದಲ್ಲಿ ಪ್ರಾದೇಶಿಕ ವೈವಿಧ್ಯಕ್ಕನುಗುಣವಾಗಿ ಆರಾಧಿಸುವ ಮನೋಭಾವ ಭಿನ್ನವಿರಬಹುದು. ಅವುಗಳ ಆಶಯ ಮಾತ್ರ ಮನುಷ್ಯನ ನೆಮ್ಮದಿ ಮತ್ತು ಶಾಂತಿ ಇದನ್ನು ಭದ್ರಗೊಳಿಸುವ ಪ್ರಯತ್ನ ಅನೇಕ ಧರ್ಮಗಳು ಮಾಡಿವೆ. ಬುದ್ಧ, ಮಹಾವೀರ, ಲೋಕಾಯತ, ಚಾರ್ವಾಕ, ಸಾಂಖ್ಯ, ನಾಥ, ಆರೂಢ, ಅವಧೂತ, ಶೈವ, ವೀರಶೈವ, ದಾಸರ ಪರಂಪರೆಗಳು ಧರ್ಮವನ್ನು ಹೊಸ ರೀತಿಯಲ್ಲಿ ವ್ಯಾಖ್ಯಾನಿಸಿದವು. ವಿಚಲಿತಗೊಂಡ ಸಮುದಾಯಗಳಿಗೆ ಸಹಬಾಳ್ವೆ, ಕರುಣೆಯ ಮಹತ್ವ ಸಾರಿದವು. ಸಾಮಾಜಿಕ ನಿಯಮಗಳ ವಿರುದ್ದ ಪರ್ಯಾಯ ಜೀವನ ಕ್ರಮವನ್ನು ರೂಪಿಸಿದವು. ಅವರ ನಿಲುವುಗಳು ಧರ್ಮಕ್ಕೆ ಹೊಸ ಚೈತನ್ಯ ನೀಡಿದವು. ಸಮುದಾಯಗಳು ಇವರ ನಿಲುವುಗಳನ್ನು ಒಪ್ಪಿಕೊಂಡರು, ಅವರಂತೆ ಬದುಕನ್ನು ರೂಪಿಸಿಕೊಳ್ಳುವ ಆಲೋಚನೆ ಮಾಡಿದರು. ಆದರೆ ಈ ಧರ್ಮಗಳು ಸ್ವತಂತ್ರ ಅಸ್ತಿತ್ವವನ್ನು ರೂಪಿಸುವಲ್ಲಿ ವಿಫಲವಾದವು. ಯಾವುದೇ ಆಂದೋಲನ ರಾಜಕೀಯ ಸ್ವರೂಪ ಪಡೆಯದೆ ಯಶಸ್ವಿಯಾಗುವುದಿಲ್ಲ. ಅದು ರಾಜಕೀಯ ಸ್ವರೂಪ ಪಡೆದುಕೊಂಡಾಗ ತನ್ನ ನಿಲುವಿನಲ್ಲಿ ರಾಜಿಮಾಡಿಕೊಳ್ಳಬೇಕಾಗುತ್ತದೆ. ಆಗ ಪ್ರಭುತ್ವವು ಅದೇ ಧರ್ಮವನ್ನು ತನ್ನ ಆಶಯಕ್ಕನುಗುಣವಾಗಿ ಮಾರ್ಪಡಿಸುತ್ತದೆ. ಅದು ಅಧಿಕಾರ ಕೇಂದ್ರಿತ ಸಾಂಸ್ಥಿಕ ಧರ್ಮವಾಗುತ್ತದೆ. ಈ ಸಮಸ್ಯೆ ಎಲ್ಲಾ ಧರ್ಮಗಳು ಎದುರಿಸಿವೆ. ಧರ್ಮದ ಆಶಯ ಮತ್ತು ಅಧಿಕಾರ ಪರಸ್ಪರ ವಿರುದ್ಧ ನೆಲೆಯಲ್ಲೇ ಚಲಿಸಿವೆ. ಎಲ್ಲಿಯೂ ಒಂದಾಗಿ ಚಲಿಸಿರುವುದನ್ನು ಚರಿತ್ರೆಯಲ್ಲಿ ಕಾಣುವುದಿಲ್ಲ, ಧರ್ಮ ಅಧಿಕಾರದ ವ್ಯಾಪ್ತಿಗೆ ಒಳಗಾದರೆ ತನ್ನ ನಿಜ ಅಸ್ತಿತ್ವವನ್ನು ಉಳಿಸಲು ಕಷ್ಟವಾಗುತ್ತದೆ. ಕಾರಣ ಅಧಿಕಾರವು ಎಂದೂ ಜನರೊಂದಿಗೆ ಸಹತ್ವದಿಂದ ಜೀವಿಸಿಲ್ಲ, ಸಹತ್ವದೊಂದಿಗೆ ಬದುಕುವ ಬೌದ್ಧಿಕ ಸಾಮರ್ಥ್ಯ ಸಮುದಾಯಗಳಿಗೆ ಇನ್ನೂ ಸಾಧಿಸಲಾಗಿಲ್ಲ. ಒಂದು ವೇಳೆ ಸಾಧಿಸಿದರೂ ಅದು ಜಾತೀಂರು ಕಬಂಧ ಬಾಹುವನ್ನು ಭೇದಿಸಿ ಮುನ್ನಡೆಯುವುದಿಲ್ಲ. ಜಾತೀಯತೆಯನ್ನು ಮೀರುವ ಧಾರ್ಮಿಕ ಸಂಗತಿಗಳು ನಿರ್ಮಾಣಗೊಂಡಿಲ್ಲ. ಧರ್ಮದ ಆಶಯ ಜಾತಿರಹಿತ ಸಮುದಾಯಗಳ ಸಹಬಾಳ್ವೆ. ಕಾಕತಾಳಿಯವೆಂಬಂತೆ ಎಲ್ಲಾ ಧರ್ಮಗಳು ಜಾತಿಯೊಂದಿಗೆ ತನ್ನ ಅಸ್ತಿತ್ವ ಗುರುತಿಸಿಕೊಂಡಿದ್ದು, ಇಲ್ಲವೆ ಪ್ರಭುತ್ವವು ಹಾಗೆ ಜಾತೀಕರಣಗೊಳಿಸುತ್ತದೆ.
ಸ್ವಾತಂತ್ರ್ಯೋತ್ತರ ಕಾಲದಲ್ಲಿ ಇದು ಇನ್ನಷ್ಟು ಪ್ರಬಲಗೊಂಡಿದೆ. ಈ ಪ್ರಕ್ರಿಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ. ಸಾಮಾನ್ಯರು ಜಾತಿಹಿಂಸೆಗೆ ಬಲಿಯಾದವರು ಮಾನವೀಯ ಸಂಬಂಧದ ನೆಲೆಯಲ್ಲಿ ಜೀವನವನ್ನು ಕಂಡುಕೊಳ್ಳಲು ಬಯಸಿದಾಗ ಜಾತಿ ಮೀರಿ ಬದುಕಲಾಗಿಲ್ಲ. ಅದನ್ನೇ ಪ್ರಭುತ್ವಶಕ್ತಿಗಳು ಬಂಡವಾಳ ಮಾಡಿಕೊಂಡು ಧರ್ಮಗಳನ್ನು ಜಾತಿ ಆಧಾರಿತವಾಗಿ ನೋಡುವ ದೃಷ್ಟಿಕೋನ ಬೆಳೆಸಿದವು. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇಂತಹ ಸ್ಥಿತಿ ತಲುಪಲು ಧರ್ಮವು ಮೂಲ ಆಶಯವನ್ನು ಕಳೆದುಕೊಂಡು ಪ್ರಭುತ್ವ ಪರವಾಗಿ ತನ್ನನ್ನು ಗುರುತಿಸಿಕೊಂಡಾಗ, ಪ್ರಭುತ್ವ ವಿರೋಧಿಯಾಗಿ ಧರ್ಮವು ಬೆಳೆದಾಗ ಅದು ಜನರನ್ನು ಒಳಗೊಂಡ ಧರ್ಮವಾಗುತ್ತದೆ. ಇತ್ತೀಚಿನ ಧರ್ಮದ ಸ್ವರೂಪ ನೋಡಿದರೆ ಅವೆಲ್ಲವೂ ಹಿಂಸೆಯ ಮಾದರಿಯ, ನೈತಿಕ ಅಧಃಪತನದ ಸ್ವರೂಪದಲ್ಲಿ ಮುನ್ನಡೆಯುತ್ತಿವೆ.
ಧರ್ಮ ಸೃಷ್ಟಿಯಾದದ್ದೇ ದಿಕ್ಕು ತಪ್ಪಿದ ಮನುಷ್ಯನಿಗೆ ಒಂದು ನಿಶ್ಚಿತ ದಿಕ್ಕು ತೋರಿಸಲು. ರಾಜಕಾರಣ ಮತ್ತು ಮೋಹದ ಅಧೀನಕ್ಕೆ ಒಳಗಾದ ಮನುಷ್ಯ ಮಾನಸಿಕ ಕುರುಡತನಕ್ಕೀಡಾಗುತ್ತಾನೆ. ಕುರುಡುತನ ನಿವಾರಿಸಿ ಬೆಳಕು ನೀಡುವುದು ಧರ್ಮ, ಧರ್ಮ ಮನುಷ್ಯಾತೀತವಾದ ಪ್ರಕೃತಿ ನಂಬಿಕೆ. ಪ್ರಕೃತಿಯಷ್ಟೆ ಪವಿತ್ರ ನಿಸ್ವಾರ್ಥ ಮನೋಭಾವ ಸೃಷ್ಟಿಸುವುದು ಧರ್ಮ, ಆ ಹಿನ್ನೆಲೆಯಲ್ಲೇ ಧರ್ಮಗಳು ಯೋಚಿಸುತ್ತವೆ. ಆದರೆ, ಧರ್ಮಗಳು ರಾಜಕೀಯ ವಿನ್ಯಾಸಕ್ಕೆ ಒಳಗಾದಾಗ ಮೂಲ ದಾರಿ ತಪ್ಪುತ್ತವೆ. ಎಲ್ಲಾ ಧರ್ಮಗಳಿಗೂ ಈ ಸಮಸ್ಯೆ ಇದೆ. ಈ ಸಮಸ್ಯೆಯನ್ನು ನಿವಾರಿಸಲು ಜನಪರ ಧರ್ಮವನ್ನು ನಿರ್ಮಿಸಲು
ಆಧ್ಯಾತ್ಮ ದಂಗೆಗಳು ಸಂಭವಿಸಿವೆ. ಆಧ್ಯಾತ್ಮ ದಂಗೆಗಳೇ ಧರ್ಮವನ್ನು ಉಸಿರಾಡುವಂತೆ ಮಾಡಿವೆ. ಬುದ್ಧ, ಬಸವಣ್ಣ, ಕನಕದಾಸರಂತವರ ಆಧ್ಯಾತ್ಮದಂಗೆ ಶಾಶ್ವತ ಧರ್ಮದ ಅಂತರಾತ್ಮವನ್ನು ನಿರೂಪಿಸಿದವು. ಧರ್ಮ ಅಲೌಕಿಕ ಪಾಂಡಿತ್ಯದ ಪ್ರದರ್ಶನ ಮತ್ತು ಅಧಿಕಾರ ರಾಜಕಾರಣದ ಸಂಕೇತವನ್ನು ಮೀರಿದ ಪ್ರಕೃತಿ ಸಂವೇದನೆಯೆಂಬುದನ್ನು ಇವರು ತಮ್ಮ ಬದುಕಿನ ಮೂಲಕ ವಿಶ್ಲೇಷಿಸಿದರು. ಧರ್ಮಕ್ಕೆ ಸಾಮಾಜಿಕ ಚಳುವಳಿಯ ಆದರ್ಶ ನೀಡಿದರು. ಇದರಿಂದಾಗಿ ಮನುಷ್ಯ ಧರ್ಮವನ್ನೂ ಅಮಾನುಷ, ಪ್ರಕೃತಿಯಾತೀತ ತತ್ವವಾಗಿ ಭಾವಿಸಲಿಲ್ಲ. ಅದೊಂದು ಪ್ರೇಮ, ಕಾಮ, ಮೋಹ, ಆಕರ್ಷಣೆ, ರಾಜಕೀಯ, ಸಾಮಾಜಿಕತೆಯನ್ನೊಳಗೊಂಡ ಸಂವೇದನೆ ಎಂದು ತಿಳಿಯಲಾಯಿತು. ಇಲ್ಲಿ ಗಮನಿಸಬೇಕಾದದ್ದು ಈ ಸಂವೇದನೆ ಕುರುಹು ಮತ್ತು ಸಂಕೇತವನ್ನು ಅಲ್ಲಗಳೆಯುವಂತದ್ದು. ಎಲ್ಲಾ ಧರ್ಮಗಳು ಕುರುಹುವಾಗಲು ಪ್ರಯತ್ನಿಸುತ್ತವೆ ಧರ್ಮ ಕುರುಹುವನ್ನು ನಂಬಿದರೆ ಜನವಿರೋಧಿಯಾಗುತ್ತದೆ. ಯಾಕೆಂದರೆ, ಕುರುಹು ಉಳಿಸಿಕೊಳ್ಳುವುದು ಧರ್ಮದ ಮುಖ್ಯ ಧ್ಯೇಯವಾಗುತ್ತದೆ. ಅದಕ್ಕೆ ಧರ್ಮಗಳು ಜಾತಿಗೊಂದು ಮಠ ಸ್ಥಾಪನೆ, ಕಟ್ಟಡ, ಶಿಕ್ಷಣ ಎಂಬ ಮನೋಭಾವ ತಾಳುವುದು. ಈ ಮನೋಭಾವದಲ್ಲಿ ಅರಿವಿಗಿಂತ ಕುರುಹುವೇ ಮುಖ್ಯವಾಗುತ್ತದೆ. ಇಲ್ಲಿ ಅರಿವು ಮುಖ್ಯವಾಗಬೇಕು. ಚರಿತ್ರೆಯಲ್ಲಿ ಅರಿವು ಮಾನ್ಯತೆ ಪಡೆಯಲಿಲ್ಲ. ಆಗ ಮನುಷ್ಯನಿಂದ ಧರ್ಮದ ಉಳಿವು ಎಂಬ ಧೋರಣೆ ಹುಟ್ಟುತ್ತದೆ. ಧರ್ಮಕ್ಕಾಗಿ ಮನುಷ್ಯನಲ್ಲ. ಮನುಷ್ಯನಿಗಾಗಿ ಧರ್ಮ ಎಂಬುದು ಮಾಯವಾಗುತ್ತದೆ. ಈಗ ಆಗುತ್ತಿರುವ ಬೆಳವಣಿಗೆ ಈ ಪರಿಯದು. ಇದರಿಂದ ಬಿಡುಗಡೆಯಾಗಿ ಧರ್ಮಕ್ಕೆ ಅರಿವಿನ ಬೆಳಕು ನೀಡಬೇಕಿದೆ. ಅದು ಧರ್ಮಾಧಿಕಾರದ ಮೂಲಕ ಧರ್ಮವನ್ನು ರಕ್ಷಿಸುವುದರಿಂದ ಆಗಬೇಕಿದೆ. ಪ್ರತಿಯೊಂದು ಜಾತಿಗಾಗಿ ಧರ್ಮಕ್ಕೆ ಸ್ಥಾನ ನೀಡಿ, ಧರ್ಮಾಧಿಕಾರಿಯನ್ನು ನೇಮಿಸುತ್ತಿವೆ. ಪ್ರಬಲ ಜಾತಿಗಳು ಧರ್ಮದಿಂದ ರಾಜಕೀಯ ಅಧಿಕಾರ ಪಡೆಯುವ ಪ್ರಯತ್ನ ಮಾಡುತ್ತಿವೆ. ಇದರಿಂದ ದುರ್ಬಲ ಜಾತಿಗಳ ಏನಾಗಬೇಕೆಂಬುದನ್ನು ಗಂಭೀರವಾಗಿ ಯೋಚಿಸಬೇಕು.
ಬಸವಣ್ಣ ಸ್ಥಾವರವನ್ನು ಉಗ್ರವಾಗಿ ವಿರೋಧಿಸಿದರು. ಸ್ಥಾವರವನ್ನು ನಂಬುವವರು ಅಂದರೆ ಧರ್ಮಕ್ಕೊಂದು ಕುರುಹುವನ್ನು ಗುರುತಿಸುವವರು ಸ್ಥಾವರವಾಗುತ್ತಾರೆಯೇ ಹೊರತು ಚಲನಶೀಲರಲ್ಲ ಎಂದರು. ಅದು ಜನರನ್ನು ಹುಸಿ ನಂಬಿಕೆಗೆ ದೂಡುತ್ತದೆ. ಧರ್ಮದ ಪ್ರಕೃತಿತತ್ವ ಮೂಲೋಚ್ಚಾಟನೆಗೆ ಈಡಾಗುತ್ತದೆ. ಧರ್ಮಕ್ಕೆ ವೈಭೋಗ, ವಿಲಾಸದ ಮೆರಗು ಬರುತ್ತದೆ. ಇಂತಹ ಮೆರಗು ಹಿಂಸೆಯದ್ದಾಗಿರುತ್ತದೆ. ಕುರುಹು ಕಾಪಾಡುವ ನೆಪದಲ್ಲಿ ಕುರುಹು ವಿರೋಧಿಗಳನ್ನು ನಾಶ ಮಾಡಲು ಯತ್ನಿಸುತ್ತದೆ. ಕಾರಣ ಚಲನಶೀಲವಾದದ್ದು ಸ್ಥಾವರವನ್ನು ವಿರೋಧಿಸುತ್ತದೆ. ಹೀಗೆ ಸನಾತಿಗಳು ದೇವಾಲಯ, ಮಸೀದಿ, ಬಸೀದಿಗಾಗಿ ರಕ್ತ ಹರಿಸುವುದು. ಧರ್ಮವನ್ನು ಕಾಪಾಡುವ ಹೊಣೆ ಹೊತ್ತವರು ರಕ್ತ ಹರಿಸುವ ಪ್ರಮಾಣವನ್ನು ಒಪ್ಪಿ ಬಿಡುತ್ತಾರೆ. ಪ್ರಭುತ್ವದೊಂದಿಗೆ ತಮ್ಮನ್ನು ನೇರವಾಗಿ ಗುರುತಿಸಿಕೊಳ್ಳುತ್ತಾರೆ. ತಮ್ಮ ಮನೋಧರ್ಮದವರನ್ನೇ ಧರ್ಮದ ಹೆಸರಿನಲ್ಲಿ ಅಧಿಕಾರ ಹಿಡಿಯಲು ನೆರವು ನೀಡುತ್ತಾರೆ. ಇದೆಲ್ಲವು ಸ್ಥಗಿತ ವ್ಯವಸ್ಥೆಯನ್ನು ಪೋಷಿಸುವುದು, ಸಮುದಾಯಗಳನ್ನು ಕಂದಾಚಾರದಲ್ಲಿ ಮುಳುಗಿಸುವುದು. ಈ ಧೋರಣೆಯಿಂದ ಧರ್ಮಾಧಿಕಾರ ಮುಕ್ತಿ ಪಡೆಯಬೇಕಿದೆ. ಸ್ಥಾವರವನ್ನು ನಂಬುವವರು ಸ್ಥಾವರವನ್ನೇ ಸೃಷ್ಟಿಸುತ್ತಾರೆ.
ಸಾಮುದಾಯಗಳು ಧರ್ಮವನ್ನು ಪವಿತ್ರ ಶುದ್ಧ, ನಿರಾಕಾರದ ನೆಲೆಯಲ್ಲಿ ನೋಡಿವೆ. ಅವಕ್ಕೆ ನೀರೆಲ್ಲವೂ ತೀರ್ಥ, ಪ್ರಕೃತಿಯ ಚೈತನ್ಯವೆಲ್ಲ ದೈವ. ಬದುಕಿನ ಬವಣೆಗಳನ್ನು ನೀಗಿಸುವ ಒಂದು ಹುಲ್ಲುಕಡ್ಡಿಯು ಜೀವ ಪಡೆದು ಧಾರ್ಮಿಕ ಸ್ವರೂಪ ಪಡೆಯುತ್ತದೆ. ಸಾಮುದಾಯಗಳು ಅಷ್ಟು ಸರಳವಾಗಿ ಧರ್ಮವನ್ನು ಭಾವಿಸುತ್ತದೆ. ಇದನ್ನು ಧರ್ಮಾಧಿಕಾರ ಅರ್ಥ ಮಾಡಿಕೊಳ್ಳಬೇಕು. ಆದರೆ, ಧರ್ಮಾಧಿಕಾರ ಗುಲಾಮಿತನ ಬಯಸುತ್ತದೆ. ಧರ್ಮಕ್ಕೆ ಅಧಿಕಾರದ ಸ್ಥಾನ ನೀಡುತ್ತದೆ. ಆ ಅಧಿಕಾರಕ್ಕೆ ತಲೆಬಾಗಲೇಬೇಕಂದು ಬಯಸುತ್ತದೆ. ಜನರ ನಂಬಿಕೆಗೆ ಚರಿತ್ರೆಯಿಂದ ಧರ್ಮಾಧಿಕಾರ ಪಾಠ ಕಲಿಯಬೇಕಿದ, ಸಂಸಾರ ನಿರಾಕರ ಧರ್ಮಾಧಿಕಾರದ ಉದ್ದೇಶವಾಗಬಾರದು.
ಸಂಸಾರದೂಳಗಿದ್ದ ಜನರ ಪರ ಪ್ರಕೃತಿ ತತ್ವದ ಧರ್ಮವನ್ನು ಸ್ಥಾಪಿಸಬೇಕು. ಆ೦ತ ಕ್ರಿಯೆಯನ್ನು ಭಾರತೀಯ ಭಕ್ತಿ ಪರಂಪರೆ ಮಾಡಿದೆ. ಶರಣರು, ದಾಸರು, ತತ್ವಪದಕಾರರು ಮಾಡಿದ್ದಾರೆ. ಇವರು ರಾಜಕಾರಣದೊಂದಿಗೆ ತಮ್ಮನ್ನು ಗುರುತಿಸಿಕೊಂಡವರಲ್ಲ. ಸದಾ ಬೀದಿಯೊಳಗಿದ್ದು ಜನವಿರೋಧಿ ಪ್ರಭುತ್ವವನ್ನು ಎದುರಿಸುತ್ತಾ ಬಂದವರು. ವೈಯಕ್ತಿಕ ಆಶ ಆಮೀಷಗಳಿಂದ ಹೊರಬಂದು ಆರಿವಿನ ಆಸ್ತ್ರ ಹಿಡಿದವರು. ಕುರುಹುವನ್ನು ಕಿತ್ತೊಗೆದು, ಪ್ರಕೃತಿಧರ್ಮವನ್ನು ಎತ್ತಿಹಿಡಿದವರು. ಜನರ ಸಂಕಟ, ಸಮಸ್ಯೆ, ಬವಣೆಗಳಿಗೆ ಆಸರೆಯಾದವರು. ಇಂತಹ ಸರಳ ಧಾರ್ಮಿಕ ದಂಗೆಗಳ ನಾಯಕರು ಧರ್ಮಾಧಿಕಾರದವರಿಗೆ ಮಾದರಿಯಾಗಬೇಕು.
ಈ ಸರಳ ಸತ್ಯ ಮರೆತಿರುವುದರಿಂದ ಧರ್ಮ ಅಧರ್ಮದ ಕೈಗೊಂಬೆಯಾಗುತ್ತಿರುವುದು, ಶೂಲ, ವಿಭೂತಿ, ಕಾವಿಪುರುಷರ ಕೈಯಲ್ಲಿರುವುದು. ಸಮುದಾಯಗಳು ಬಲವಾಗಿ ನಂಬುವುದು ಧರ್ಮದ ಬುನಾದಿಯನ್ನು. ವೈಚಾರಿಕತೆಯ ಹೆಸರಿನಲ್ಲಿ ಧರ್ಮದ ಬುನಾದಿಯನ್ನು ಮರೆಯಲಾಯಿತು. ಅದನ್ನು ಪರಿಷ್ಕರಿಸಿ ಹೊಸ ಕಾಲಕ್ಕೆ ಪ್ರಯೋಗಿಸುವ ಯೋಚನೆ ಪ್ರಗತಿಪರರು ಮಾಡಲಿಲ್ಲ. ಆದ್ದರಿಂದ ಅದು ಕಂದಾಚಾರವನ್ನು ಮತ್ತಷ್ಟು ಬಲಿಷ್ಟಗೊಳಿಸಿ, ರಾಜಕೀಯದೊಂದಿಗೆ ಸಖ್ಯ ಬೆಳೆಸಿತು. ರಾಜಕೀಯ ಅಧೋಗತಿಗೂ ಕಾರಣವಾಯಿತು.
ಧರ್ಮಾಧಿಕಾರದ ಮತ್ತೊಂದು ಅಪಾಯಕಾರಿ ಬೆಳವಣಿಗೆ ಸ್ಮೃತಿಯನ್ನು ಪುನರುತ್ಥಾನಗೊಳಿಸುವುದು. ಕನಕದಾಸ, ಬಸವಣ್ಣ ಬುದ್ಧನಂತವರ ಸ್ಮೃತಿಯನ್ನು ಆವಿಷ್ಕರಿಸುವುದು ಇವರ ಆಲೋಚನೆಯಲ್ಲ. ಯಜ್ಞಾ ಯಾಗಾದಿಗಳನ್ನು ಮತ್ತೆ ಸ್ಥಾಪಿಸುವುದು. ಲೋಕ ಕಲ್ಯಾಣಕ್ಕೆ ಸಾಮೂಹಿಕ ಯಜ್ಞ ಯಾಗಾದಿಯ ಆಚರಣೆಯಲ್ಲಿ ತೊಡಗುವುದು. ಅಧಿಕಾರ ಭದ್ರತೆಗೆ ಮಾನದಂಡವಾಗಿ ಬಳಸುವುದು. ಚರಿತ್ರೆಯಲ್ಲಿ ಈ ಪ್ರಯೋಗ ಮಾಡಿ ಧರ್ಮಾಧಿಕಾರವು ರಾಜಕೀಯದ ಮೇಲೆ ಹಿಡಿತ ಸಾಧಿಸಿದೆ. ಆಗೆಲ್ಲ ಜನರ ಮನೋಭಾವಕ್ಕೆ ವಿರುದ್ಧವಾದ ವ್ಯವಸ್ಥೆಯನ್ನೇ ಪೋಷಿಸಿವೆ. ಇದನ್ನೇ ಪುನರುತ್ಥಾನಗೊಳಿಸುವುದರಿಂದ ಯಾವ ಪ್ರಯೋಜನವಿಲ್ಲ. ಧರ್ಮದ ಹೆಸರಿನಲ್ಲಿ ನಡೆಯುವ ಅನೇಕ ಜಾಗೃತ ಸಮಾವೇಶಗಳು ಪ್ರಭುತ್ವ ಕೇಂದ್ರಿತ, ಪ್ರೋತ್ಸಾಹದ ಆಸರೆಯಲ್ಲಿರುತ್ತವೆ. ಇದನ್ನು ಧರ್ಮಾಧಿಕಾರ ತಿರಸ್ಕರಿಸಬೇಕಿದೆ. ಸಮುದಾಯಕ್ಕೆ ಲೌಕಿಕದಿಂದ ಬಿಡುಗಡೆಯಾಗಿ ಅದೇ ಲೌಕಿಕದಲ್ಲಿ ಮುಳುಗುವ ಧರ್ಮದ ಮಾತುಗಳು, ನೀತಿಗಳು ಬೇಕು. ಈ ಕಾರ್ಯ ಧರ್ಮಧಿಕಾರ ಮಾಡಬೇಕು. ಕೆಲವು ಧರ್ಮಾಧಿಕಾರಿಗಳು ಇಂತಹ ಕಾರ್ಯವನ್ನು ಮಾಡಿದ್ದನ್ನು ಗಮನಿಸಬಹುದು. ಮುಖ್ಯವಾಗಿ ಬಡವರಿಗೆ ಉಪಯೋಗವಾಗುವ ಶಿಕ್ಷಣ ವ್ಯವಸ್ಥೆ ರೂಪಿಸಿರುವುದು. ಬೆಳವಣಿಗೆಯಲ್ಲಿ ಮೂಲ ಆಶಯಕ್ಕೆ ಎಳ್ಳುನೀರು ಬಿಟ್ಟು ಶಿಕ್ಷಣವನ್ನು ವ್ಯಾಪಾರೀಕರಣ, ಜಾತೀಕರಣ ಮಾಡಿರುವುದು ದುರಂತ. ಇದರಿಂದ ಯಾವ ಜಾತೀಯ ಉದ್ಧರಕ್ಕೆ ಧರ್ಮ ಉಗಮವಾಗುತ್ತದೋ ಅದೇ ಜಾತಿಯ ದುರ್ಬಲರನ್ನು, ಅಸಹಾಯಕರನ್ನು ಧ್ವನಿ ಇಲ್ಲದವರನ್ನು ಗಮನಿಸದೆ ಹೋಗುತ್ತದೆ. ಮತ್ತೆ ಯಾರು ಪ್ರಬಲರಾಗಿರುತ್ತಾರೋ ಅವರಿಗೆ ಧರ್ಮಾಧಿಕಾರ ಒಲಿಯುತ್ತದೆ. ಇದು ಬದಲಾಗಬೇಕು. ಆದ್ದರಿಂದ ಸ್ಮೃತಿಗಳನ್ನು ಸಂಕೇತಗಳಾಗಿ ರೂಪಿಸಬಾರದು. ಸ್ಮೃತಿಗಳು ಸಂಕೇತವಾದರೆ ಮತ್ತೆ ಕಾಲ ಹಿಂದಕ್ಕೆ ಚಲಿಸುತ್ತದೆ. ಶೂದ್ರ ವರ್ಗದಲ್ಲಿ ಸೃಷ್ಟಿಯಾದ ಮಧ್ಯಮವರ್ಗ ತನ್ನ ಜೀವನವಿಧಾನವನ್ನು ಸತ್ಯನಾರಾಯಣ ಪೂಜೆಯಲ್ಲಿ ಗುರುತಿಸಿಕೊಳ್ಳುತ್ತದೆ. ತಮ್ಮ ಮೂಲ ದೈವವನ್ನು ಮರೆಗೆಗೆ ಸರಿಸಿ ಪ್ರತಿಷ್ಠೆಯ ದೈವವನ್ನು ಆರಾಧಿಸುತ್ತದೆ.
ಈ ಕಡೆ ಧರ್ಮಾಧಿಕಾರ ಗಮನ ಕೊಡಬೇಕು. ದೈನಂದಿನ ಬದುಕನ್ನು ಎಚ್ಚರಿಸುವ, ಹಸನುಗೊಳಿಸುವ ಧಾರ್ಮಿಕ ಸಂಕೇತಗಳು ರೂಪಗೊಳ್ಳಬೇಕು. ಅದು ಮೈಲಾರ, ಕಾಳಿ, ದುರ್ಗಿ, ಶರಣರ, ದಾಸರ, ತತ್ವಪದಕಾರರ, ಜನಪದ ದೈವಗಳ ಸ್ಮೃತಿ ಇರಬಹುದು. ಇವುಗಳನ್ನು ಆಧುನಿಕ ಧಾರ್ಮಿಕ ಸಂಕೇತಗಳನ್ನಾಗಿ ಮರುಸೃಷ್ಟಿಸಬೇಕು. ಸಮುದಾಯಗಳು ಸಂಕೇತಗಳನ್ನು ಬಯಸುತ್ತವೆ. ಇಂತಹ ಸ್ಮೃತಿಯ ಸಂಕೇತ ನೀಡಬೇಕು. ಬಸವಣ್ಣ ಮತ್ತು ಗಾಂಧೀಜಿಗೆ ಈ ಸಾಮರ್ಥ್ಯ ಇತ್ತು. ಇಬ್ಬರು ಮಹನೀಯರು ಚರಿತ್ರೆಯೊಳಗಿನಿಂದಲೆ ಧರ್ಮವನ್ನು ಆವಿಷ್ಕರಿಸಿ ನವೀಕರಿಸಿದರು. ಜನರ ಒಳತಿಗೆ ಬಳಸಿದರು. ಇವರ ಪ್ರಕಾರ ಧರ್ಮದ ಮತ್ತೊಂದು ರೂಪವೇ ಜೀವನಶ್ರದ್ಧೆ, ಜೀವನಶ್ರದ್ಧೆ ಶಾಂತಿ, ಸಮಾನತೆಯನ್ನು ಬೆಳೆಸುತ್ತದೆ. ಶಾಂತಿ, ಸಮಾನತೆ, ಮಾನವೀಯತೆಗಾಗಿಯೇ ಉತ್ಪಾದನೆ ಚಟುವಟಿಕೆಗಳು ಕ್ರಿಯಾಶೀಲಗೊಳ್ಳಬೇಕೆಂಬ ಸಾಮಾಜಿಕ ಕಳಕಳಿ ಇವರದಾಗಿತ್ತು. ಅದರಂತೆ ಜನರನ್ನು ಅರಿವಿನ ಆಂದೋಲನಕ್ಕೆ ಸಜ್ಜುಗೊಳಿಸಿದರು. ಪ್ರಭುತ್ವ, ಹಿಂಸೆ, ಭ್ರಷ್ಟತೆಯನ್ನು ತೀವ್ರಗೊಳಿಸಿ ವ್ಯವಸ್ಥೆಯನ್ನು ಕುಸಿವಂತೆ ಮಾಡಿದಾಗ ಇಂಥ ಆಂದೋಲನ ಅನಿವಾರ್ಯವಾಗುತ್ತದೆ. ಅದು ಧಾರ್ಮಿಕ ಜೀವನ ಶ್ರದ್ಧೆಯಿಂದ ಮಾತ್ರ ಸಾಧ್ಯ. ಈ ಸಂದರ್ಭದಲ್ಲಿ ಗಾಂಧೀಜಿ ಸಂಪ್ರದಾಯವಾದಿಯಂತೆ ಕಾಣಬಹುದು. ಆತ ಸೃಷ್ಟಿಸಿದ ಉತ್ಪಾದನಾ ಸಂಬಂಧಿ ಜೀವನಶ್ರದ್ಧೆ ಮೌಲ್ಯಯುತ ವಾದುದು. ಸತ್ಯ, ಅಹಿಂಸೆಯನ್ನು ಸಾರ್ವಜನಿಕ ಬದುಕಿನಲ್ಲಿ ಅಷ್ಟೊಂದು ಉಗ್ರವಾಗಿ ಪ್ರಮಾಣೀಕರಿಸಿದ ಮತ್ತೊಬ್ಬ ದಾರ್ಶನಿಕನಿಲ್ಲ. ಸತ್ಯ, ಅಹಿಂಸೆಗಳು ಹುಸಿಯಾದ ಕಾಲದಲ್ಲಿ ನಾವಿದ್ದೇವೆ, ಅವುಗಳನ್ನು ಗಟ್ಟಿಗೊಳಿಸುವ ಕೆಲಸ ಧರ್ಮಾಧಿಕಾರ ಮಾಡಬೇಕು.
ಸಮಾಜ ಸಂಪೂರ್ಣ ಪಶ್ಚಿಮ ಮುಖಿಯಾಗಿ ಚಲಿಸುತ್ತಿದೆ. ಹಾಗೆ ಚಲಿಸುವಂತೆ ರಾಜಕಾರಣ ಒತ್ತಾಯಿಸುತ್ತಿದೆ. ಆ ತೆರನ ನೀತಿ, ನಿಯಮ, ಆಡಳಿತವನ್ನು ರೂಪಿಸುತ್ತಿದೆ. ಅದು ಸಮಾನತೆಯ ಸಮಾಜದ ವಿರೋಧಿಯಾದ ನಿಲುವು, ಸಮಾಜದ ಬಹುಸಂಖ್ಯಾತರ ಬದುಕುಗಳನ್ನು ನಿರ್ನಾಮ ಮಾಡಿ ಕೆಲವರ ಸುಖಕ್ಕೆ ಪಶ್ಚಿಮ ಮುಖಿ ನಿಲುವುಗಳು ಅನುಕೂಲವಾಗುತ್ತಿವೆ. ಭೂಮಿ, ನೀರು, ವಿದ್ಯುತ್, ಪ್ರಕೃತಿ ಸಂಪತ್ತು ಕೆಲವರ ಸ್ವತ್ತಾಗುತ್ತಿರುವುದು ಕಳವಳಕಾರಿಯಾ ದುದು. ಅದಕ್ಕೆ ಕಾರಣ ಸಾಮಾಜಿಕ, ಧಾರ್ಮಿಕ ಶ್ರದ್ಧೆ ಕಳೆದುಕೊಂಡಿರುವುದು. ಧರ್ಮ ಸಮಾನತೆಯನ್ನು ಪ್ರತಿಪಾದಿಸದಿರುವುದು. ಆದ್ದರಿಂದ ಧರ್ಮ ಹೊಸ ಧಾರ್ಮಿಕ ಸಮಾಜವಾದದ ಆಂದೋಲನ ರಚಿಸಬೇಕಿದೆ. ಸಾಮಾಜಿಕ ಸಮಾಜವೂ ಸೋತಿದೆ. ಅದು ಸಮಾಜದೊಳಗೆ ನಂಬಿಕೆ ಕಳೆದುಕೊಂಡಿದೆ. ಬಡತನ ನಿವಾರಣೆಗೆ ಬಡವರನ್ನು ಉಪಯೋಗಿಸಿಕೊಂಡು ಅದರಲ್ಲಿಯೇ ಕೆಲವರು ದುಂಡಗಾಗಿದ್ದಾರೆ. ಅವರು ಬಂಡವಾಳಶಾಹಿಯ ಪೋಷಕರಾಗಿದ್ದಾರೆ. ಇದರಿಂದ ಜನರು ಮುಕ್ತಿ ಪಡೆಯಲು ಧಾರ್ಮಿಕ ಸಮಾಜವೊಂದು ಬೆಳೆಯಬೇಕು. ಅದು ಧರ್ಮಾಧಿಕಾರಿಗಳಿಂದ ಸಾಧ್ಯವಾಗುತ್ತದೆ. ಪರಂಪರೆಯಲ್ಲಿ ಸಮಾಜ ಅಧೋಗತಿಗಿಳಿದಾಗ, ಧರ್ಮವೇ ಸಮಾಜಕ್ಕೆ ನೈತಿಕಶಕ್ತಿ ತುಂಬಿರುವುದು. ಸಮಾಜವನ್ನು ಮುನ್ನೆಡೆಸಿರುವುದು. ಇಂದು ಕೂಡ ಪ್ರಭುತ್ವ ಮೀರಿದ ದೇಶಿ ಉತ್ಪಾದನಾ ವಿಧಾನಗಳನ್ನು ಧಾರ್ಮಿಕವಾಗಿ ಬಲಗೊಳಿಸುವ ಜಾಗೃತಿ ಧರ್ಮಾಧಿಕಾರದಿಂದ ಆಗಬೇಕು.
ಪರ್ಯಾಯಗಳಿಲ್ಲದ ಚಿಂತನೆ ಸಾಮಾಜಿಕವಾಗಿ ಚಲಿಸುವುದಿಲ್ಲ. ಇಪ್ಪತ್ತನೆಯ ಶತಮಾನದಲ್ಲಿ ಇಂತಹ ಗಟ್ಟಿಯಾದ ಧ್ವನಿಗಳಿಲ್ಲ. ಧರ್ಮದ ಪ್ರತಿಗಾಮಿತನವನ್ನು ವಿರೋಧಿಸುವ ಸಾಮಾಜಿಕ ವಾತಾವರಣವೊಂದನ್ನು ಧರ್ಮ ಸೃಷ್ಟಿಸಬೇಕಿದೆ. ಜನರ ಹೃದಯವನ್ನು ಸೆಳೆಯುವ, ಬವಣೆಗಳಿಗೆ ಸ್ಪಂದಿಸುವ, ದೇಶಿ ಸಂಪತ್ತನ್ನು ಸಂರಕ್ಷಿಸುವ ಧಾರ್ಮಿಕತೆ ಬೇಕು. ಸಾಮಾಜಿಕ ನಿಯಂತ್ರಣವಿಲ್ಲದೆ ಅಸಮಾನತೆ ಏರು-ಪೇರಾಗುತ್ತಿದೆ. ರಾಜಕೀಯ ಆಡಳಿತ ಇದನ್ನು ನಿಯಂತ್ರಿಸುವಲ್ಲಿ ಸೋತಿದೆ. ಅದು ಪ್ರತಿಗಾಮಿಯಾಗಿ ಮುನ್ನಡೆಯುತ್ತಿದೆ. ಧರ್ಮಾಧಿಕಾರವು ಇದಕ್ಕೆ ಪೂರಕವಾಗಿ ಸ್ಪಂದಿಸಬಾರದು. ಅದರ ಹುಳುಕುಗಳನ್ನು ಜನತೆಯ ಮುಂದಿಡುವ ಧೈರ್ಯ ಧರ್ಮಾಧಿಕಾರದಿಂದ ಆಗಬೇಕು.
ಧರ್ಮಾಧಿಕಾರವು ಮಠ, ಮಂದಿರ, ಮಸೀದಿ ಗೋಡೆಯೊಳಗೆ ಬಂಧಿಯಾಗಬಾರದು. ಇವೆಲ್ಲವು ಜನತೆಯ ಶ್ರದ್ಧೆಯಿಂದ ನಡೆಯುವಂತವು. ಎಲ್ಲಾ ಧರ್ಮಗಳು ದರ್ಶನವೊಂದನ್ನು ಕಂಡುಕೊಂಡಿವೆ. ಆ ದರ್ಶನದೊಂದಿಗೆ ಧರ್ಮಾಧಿಕಾರ ಬೆರೆಯಬೇಕು. ಈ ಕಾಲದಲ್ಲಿ ಕುರುಹವನ್ನು ನಂಬುವ ಧರ್ಮಾಧಿಕಾರವನ್ನು ಮಾತ್ರ ಕಾಣುತ್ತಿದ್ದೇವೆ, ಕುರುಹುವಿನಿಂದ ಬಿಡುಗಡೆಯಾಗಿ ಬಯಲಿನೆಡೆಗೆ ಚಲಿಸುವ ಕಾಣ್ಕೆ ನಿಜವಾಗಬೇಕು. ಆಗ ಧಾರ್ಮಿಕ ಸಮಾಜವಾದ ಜನಿಸುತ್ತದೆ. ಸಮುದಾಯಗಳು ನೈತಿಕತೆಯನ್ನು ಪಡೆಯುತ್ತವೆ.
ಪ್ರತಿಯೊಂದು ಜಾತಿಯು ತಮ್ಮ ಅನನ್ಯತೆಯನ್ನು ಗುರುಪೀಠ, ಧರ್ಮಗುರುವಿನಲ್ಲಿ ಕಂಡುಕೊಳ್ಳಲು ಹವಣಿಸುತ್ತಿವೆ. ಇದರಿಂದ ಆಯಾ ಜಾತಿಸಮುದಾಯಗಳಿಗೆ ಕೊಂಚ ಅನುಕೂಲಗಳು ದೊರೆಯಬಹುದು. ಅದರ ಅಪಾಯವೆಂದರೆ, ಆಯಾ ಜಾತಿಸಮುದಾಯಗಳಲ್ಲಿಯೇ ವರ್ಗತ್ವವನ್ನು ಸೃಷ್ಟಿಸುವುದು. ವಿಧೇಯತೆಯ ಗುಲಾಮಿತನ ಬಯಸುವುದು. ಧರ್ಮಾಧಿಕಾರ ಇದರಿಂದ ಹೊರಬರಬೇಕು. ಜಾತಿ ಸಮುದಾಯಗಳಲ್ಲಿರುವ ವರ್ಗತ್ವವನ್ನು ಗುರುತಿಸಿ ಅದನ್ನು ಸಮಾನಗೊಳಿಸುವ ಯತ್ನ ಮಾಡಬೇಕು. ಅದು ಧರ್ಮಾದಿಂದಲೇ ಸಾಧ್ಯವಾಗುತ್ತದೆ. ಅದಕ್ಕೆ ಧರ್ಮಾಧಿಕಾರಿಗಳು ಸರಿಯಾಗಿ ಚರಿತ್ರೆಯನ್ನು ಅರಿಯಬೇಕು. ಧಾರ್ಮಿಕ ದರ್ಶನಗಳ ಆಳವಾದ ಅಧ್ಯಯನ ಬೇಕು. ಮುಖ್ಯವಾಗಿ ಸಮುದಾಯಗಳು ಅನುಸರಿಸುವ ವ್ಯಕ್ತಿತ್ವ ಹೊಂದಬೇಕು. ಆಗ ಧರ್ಮ ಮತ್ತು ಧರ್ಮಾಧಿಕಾರದಲ್ಲಿ ಬಲವಾದ ಜೀವನ ಶ್ರದ್ಧೆಯ ನಂಬಿಕೆ ಮೂಡುತ್ತದೆ.
- ಹಳೆಮನೆ ರಾಜಶೇಖರ, ಕನ್ನಡ ವಿಭಾಗ, ಶ್ರೀ ಧ. ಮಂ. ಕಾಲೇಜು(ಸ್ವಾಯತ್ತ), ಉಜಿರೆ-574240
ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ
ಘಾಂದ್ರುಕ್ ಕಾದಂಬರಿ: ಜೀವನ ಮುಕ್ತಿಯ ಶೋಧ
ಧನಿಯರ ಸತ್ಯನಾರಾಯಣ ಕತೆಃ ಕಾಲಮಾನದ ಶೋಷಣೆಯ ಸ್ವರೂಪ
ಸಾಲಗುಂದಿ ಗುರುಪೀರಾ ಖಾದರಿ ತತ್ವಪದಗಳಲ್ಲಿ ಬದುಕಿನ ಚಿಂತನೆ
ಇದ್ದೂ ಇಲ್ಲದ್ದೂಃ ಪರಂಪರೆಯ ಸಾತತ್ಯ ಹಾಗೂ ದೇವರ ಬಿಕ್ಕಟ್ಟಿನ ಕಥನ
ಕಾಂತಾವರ ಕನ್ನಡ ಸಂಘದ ಕನ್ನಡ ಕಾಯಕ
`ಹೆಣ್ತನದ’ ಕತೆಗಳು
ಡಾ. ಪೂವಪ್ಪ ಕಣಿಯೂರು ಸಂಶೋಧನೆಗಳು: ಜಾನಪದೀಯ ಬಹು ಪ್ರಮಾಣಗಳ ಆಖ್ಯಾನ
ಡಾ. ಮಲ್ಲಿಕಾ ಘಂಟಿ ಕಾವ್ಯ: ಪುರುಷ ಪ್ರಮಾಣಗಳ ಭಂಜನ
ಡಾ. ಚೇತನ ಸೋಮೇಶ್ವರ ಕವಿತೆ `ಹೊಸ ನುಡಿಗಟ್ಟಿನ ಲಯಗಳು'
ಮನುಷ್ಯನ ವೈರುಧ್ಯಗಳನ್ನೆಲ್ಲ ಹೇಳುವ ಲಂಕೇಶರ ಕವಿತೆಗಳು
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.