ಮಹಿಳೆ : ಸ್ವಂತ ಚಹರೆಯ ಹುಡುಕಾಟ: ಡಾ. ಎಚ್.ಎಸ್. ಶ್ರೀಮತಿ

Date: 22-03-2025

Location: ಬೆಂಗಳೂರು


ಸಮ್ಮೇಳನಾಧ್ಯಕ್ಷರ ನುಡಿ,

ಕರ್ನಾಟಕ ಲೇಖಕಿಯರ ಸಂಘವು ಆಯೋಜಿಸಿರುವ ಎಂಟನೆಯ ಸಮ್ಮೇಳನಕ್ಕೆ ನನ್ನನ್ನು ಅಧ್ಯಕ್ಷಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಅವರು ಹೇಳಿದಾಗ ನನಗೆ ಸ್ವಲ್ಪ ಆಶ್ಚರ್ಯವಾಯಿತು. ನಾನು ಯೋಚಿಸಿದೆ. ಸಾಹಿತ್ಯ ವಲಯದಲ್ಲಿ ನೇರವಾಗಿ ಏನೂ ಕೆಲಸ ಮಾಡಿಲ್ಲ ಎಂದರೂ, ನಾನು ಕನ್ನಡದಲ್ಲಿ ಬರೆಯುತ್ತಿದ್ದೇನೆ ಎಂಬುದರಿಂದ ನಾನು ಒಬ್ಬ ಕನ್ನಡ ಲೇಖಕಿಯಂತೂ ಹೌದು. ಹಾಗೆಂದು ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಈ ಕಾರಣ ಸಾಕಾಗುವುದಿಲ್ಲ. ನನ್ನ ವಯಸ್ಸು ಕಾರಣವೇ? ನನಗೆ ಎಪ್ಪತ್ತೈದು ವರ್ಷ. ಈಗಿನ ಕನ್ನಡ ಲೇಖಕಿಯರಲ್ಲಿ ಎಪ್ಪತ್ತೈದು ದಾಟಿದ ವಯಸ್ಸಿನವರ ಸಂಖ್ಯೆ ಹತ್ತಿಪ್ಪತ್ತಕ್ಕಿಂತ ಹೆಚ್ಚಿರಲಾರದು. ಹಿರಿಯ ಲೇಖಕಿ ವೈದೇಹಿಯವರು ಮೊನ್ನೆ ನನಗೆ ಅಭಿನಂದನೆ ಹೇಳಲು ಫೋನ್ ಮಾಡಿದ್ದರು. ಮಾತಿನ ಮಧ್ಯೆ ನೀವು ನನಗಿಂತ ಚಿಕ್ಕವರು ಎಂದರು. ಎಪ್ಪತ್ತು ದಾಟಿದ ನಂತರದ ನಾವೆಲ್ಲರೂ ಹಿರಿಯ ತಲೆಮಾರಿನವರೇ. ವರ್ಷಗಳ ವ್ಯತ್ಯಾಸ ಇರುವುದೇ ಇಲ್ಲ. ನನಗೂ ಎಪ್ಪತ್ತೈದು ತುಂಬಿತು ಅಷ್ಟೇ. ಅಂದರೆ, ನನ್ನ ವಯಸ್ಸು ಕೂಡಾ ಕಾರಣವಲ್ಲ. ಎಂದ ಮೇಲೆ ನನ್ನ ಯಾವ ಐಡೆಂಟಿಟಿಯು ಈ ಆಯ್ಕೆಗೆ ಕಾರಣವಾಯ್ತು ಎಂಬ ಪ್ರಶ್ನೆ ನನ್ನನ್ನು ಕಾಡಿತು.

ಕೆಲವು ದಿನಗಳ ನಂತರದಲ್ಲಿ ಸಂಘದ ಕಾರ್ಯದರ್ಶಿ ಭಾರತಿ ಹೆಗಡೆಯವರು ಕಾರ್ಯಕ್ರಮದ ವಿವರಗಳನ್ನು ಕಳಿಸಿದರು. ಇಡೀ ಸಮ್ಮೇಲನದಲ್ಲಿ ಮಹಿಳಾ ಸಾಹಿತ್ಯಕ್ಕೆ ನೇರವಾಗಿ ಸಂಬಂಧಿಸಿದ ಗೋಷ್ಠಿಗಳು ಇದ್ದದ್ದು ಕಡಿಮೆಯೇ. ಹಾಗೆ ನೋಡಿದರೆ ಇದು ಕರ್ನಾಟಕ ಲೇಖಕಿಯರ ಸಮ್ಮೇಲನವೇ ಹೊರತು ಮಹಿಳಾ ಸಾಹಿತ್ಯಕ್ಕೆ ಸೀಮಿತವೇನೂ ಅಲ್ಲ. ಹೆಚ್ಚಿನ ಗೋಷ್ಠಿಗಳು ಮಹಿಳೆಯ ಭಾಷೆ, ಅದರ ಬಳಕೆಯ ಸಾಧ್ಯತೆಗಳು, ಸವಾಲುಗಳು, ಅವಳ ಮೇಲೆ ಹೇರಲಾಗಿರುವ ಸಾಮಾಜಿಕ ಪಾತ್ರ ನಿರ್ವಹಣೆಯ ಪ್ರಶ್ನೆಗಳು, ಇದರಾಚೆಗೆ ಅವಳಿಗೆ ಎದುರಾಗುವ ಅಧಿಕಾರ ವಲಯ, ಆಧುನಿಕತೆ, ತಂತ್ರಜ್ಞಾನಗಳ ನಡುವೆ ಅವಳ ಬರಹಗಳು, ಸಂಕಥನಗಳು ಎಂಬ ಸಾವಿರ ಸವಾಲುಗಳ ನಡುವೆ, ಅವಳ 'ಸ್ವ' ನಿರ್ವಹಣೆಯ ಪ್ರಶ್ನೆಗಳು ಏನಾಗುತ್ತವೆ ಎಂಬ ಹುಡುಕಾಟಕ್ಕೆ ಇಂಬುಕೊಡುವಂತೆ ಇದ್ದವು. ಈ ಸಮ್ಮೇಲನದಲ್ಲಿ ಭಾಗವಹಿಸಲು ನನಗೆ ಆಸಕ್ತಿ ಹೆಚ್ಚಿತು.

ಸ್ತ್ರೀವಾದವು ಇಂಥಾ ಹಲವು ಮಹಿಳಾ ಪ್ರಶ್ನೆಗಳಿಂದ ತೊಡಗಿ, ಸ್ವಂತದ ಚಹರೆಯ ಅರಿವನ್ನು ಪಡೆಯುವ ಹಾದಿಯಲ್ಲಿ ನಡೆಯುತ್ತಾ, ಸಾಕಷ್ಟು ದೂರ ಸಾಗಿ ಬಂದಿದೆ. ಇಂದು ಪುರುಷರನ್ನೂ ಒಳಗೊಂಡು ಮುನ್ನಡೆಯುವ ಹಾದಿಗಳನ್ನು ಶೋಧಿಸುವತ್ತ ತನ್ನ ದಾರ್ಶನಿಕ ನೋಟವನ್ನು ವಿಸ್ತರಿಸುತ್ತಿದೆ. ಏಕೆಂದರೆ ನಾವು ಸಾಧಾರಣವಾಗಿ ಭಾವಿಸುವಂತೆ ಮಹಿಳೆಯರು ಮಾತ್ರವೇ ತಮ್ಮ ಸ್ವಂತದ ಚಹರೆಯ ಗೊಂದಲಗಳಲ್ಲಿ ಇಲ್ಲ, ಪುರುಷರು ಕೂಡಾ ಈ ಗೊಂದಲಗಳಲ್ಲಿ ಇದ್ದಾರೆ. ಆದರೆ ಅವರಿಗೆ ಇದು ಏಕಾಏಕಿ ಅರಿವಿಗೆ ಬರುವುದಿಲ್ಲ ಅಷ್ಟೇ. ಸ್ವಂತದ ಚಹರೆಯ ಅರಿವು ಎಂದರೆ ಇನ್ನೇನಲ್ಲ. ನಾನು ಯಾರು, ಮತ್ತು ನನ್ನ ಬದುಕಿನ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಲು ನನಗೆ ಸಾಧ್ಯವಾಗುತ್ತಿದೆಯೇ ಎಂಬ ಸ್ಪಷ್ಟತೆ. ನನ್ನ ಬದುಕನ್ನು ನಾನೇ ನಡೆಸಬೇಕಿದೆ ಎಂಬ ಹೊಣೆಗಾರಿಕೆ ಅಷ್ಟೇ. ಆದರೆ ನಮಗೆ ಇವೆಲ್ಲದರ ಬಗೆಗೂ ಯಾವುದೋ ಮರೆವು ಆವರಿಸಿಬಿಟ್ಟಿದೆ. ಈ ವಿಸ್ಮತಿ ಕಳೆದು ಸ್ವಂತದ ಅರಿವು ಬರುವುದು ಸುಲಭದ ಮಾತಲ್ಲ. ನಮ್ಮ ಬದುಕಿನ ಎಲ್ಲಾ ಗೊಂದಲಗಳಿಗೂ, ಎಲ್ಲಾ ತೊಳಲಾಟಗಳಿಗೂ ಕಾರಣವಾಗುವ ಮುಖ್ಯ ಸಂಗತಿ ಇದೇ ಆಗಿದೆ

ಅರಿವೆಂಬುದು ಬಿಡುಗಡೆ ಎಂಬುದು ಈ ಸಮ್ಮೇಲನದ ಆಶಯ ವಾಕ್ಯ. ಸ್ವಂತದ ಚಹರೆಯ ಅರಿವಿನಿಂದಲೇ ನಮ್ಮ ಈ ಅರಿವಿನ ಪಯಣ ಮೊದಲಾಗಬೇಕಾಗುತ್ತದೆ. ಹಾಗಲ್ಲದೆ ಪಡೆದ ಅರಿವು ಹೆಚ್ಚೆಂದರೆ ಬೌದ್ದಿಕ ನೆಲೆಗೆ ತಲುಪಬಹುದೇ ಹೊರತು. ನಮ್ಮ ಬದುಕಿನ ಭಾಗವಾಗಿ ಉಳಿಯಲಾರದು.

ಸ್ವಂತದ ಚಹರೆ ಎಂದರೇನು? ನಾನು ಯಾರು ಎಂಬ ಅರಿವು. ಆದರೆ ನಮಗೆ ಈ ಅರಿವು ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಸ್ವಂತದ ಚಹರೆಯನ್ನು ಅರಿಯುವ ಹಾದಿಯಲ್ಲಿ ನಡೆಯುವುದಕ್ಕೂ ಮೊದಲು ನಾವು ತಿಳಿದಿರಬೇಕಾದ ಕೆಲವು ಪ್ರಾಥಮಿಕ ಸಂಗತಿಗಳಿವೆ. ಹುಟ್ಟಿನಿಂದ ಪ್ರಕೃತ್ತಿದತ್ತವಾಗಿ ನಮಗೆ ಒಂದು ಚಹರೆ ಬರುತ್ತದೆ. ಹುಟ್ಟಿನ ದೇಹಲಕ್ಷಣಗಳನ್ನು, ವಿಶೇಷವಾಗಿ ಲೈಂಗಿಕ ಅಂಗಲಕ್ಷಣಗಳನ್ನು ಹಿಡಿದು ನಾವೆಲ್ಲರೂ ಹೆಣ್ಣು ಅಥವಾ ಗಂಡು ಎಂಬ ಒಂದು ಚಹರೆಯನ್ನು ಪಡೆಯುತ್ತೇವೆ. ಸಾಮಾನ್ಯವಾಗಿ ಹುಟ್ಟಿನಿಂದ ಪ್ರಕೃತಿದತ್ತವಾಗಿ ಬರುವ ಈ ಚಹರೆಯು, ನಮ್ಮ ಆಯ್ಕೆಯದೇನೂ ಅಲ್ಲವಾದರೂ, ನಮಗೆ ಆಪ್ತವೆನಿಸುತ್ತದೆ. ಆನಂದ, ತೃಪ್ತಿಗಳನ್ನೂ ನೀಡುತ್ತದೆ. ಇದು ತೀರಾ ಸ್ಕೂಲವಾದ ಒಂದು ವಿವರಣೆ ಮಾತ್ರ. ಏಕೆಂದರೆ ಕೆಲವೊಮ್ಮೆ ವ್ಯಕ್ತಿಗಳಿಗೆ ತಮ್ಮ ದೇಹಲಕ್ಷಣಗಳು ತೋರುವ ಚಹರೆಗಳು ತಮ್ಮವಲ್ಲ ಎಂದು ತೀವ್ರವಾಗಿ ಅನುಭವವಾಗುತ್ತದೆ. ದೇಹಲಕ್ಷಣವು ತಮ್ಮ ಆಂತರಿಕ ವ್ಯಕ್ತಿತ್ವದೊಂದಿಗೆ ಮೇಲೈಕೆ ಆಗುತ್ತಿಲ್ಲ ಎಂಬ ಅನುಭವಕ್ಕೆ ತುತ್ತಾಗುತ್ತಾರೆ. ಈ ಚಹರೆಯೊಂದಿಗೆ ಆಪ್ತತೆ, ಜೀವನಾನಂದ, ತೃಪ್ತಿಗಳನ್ನು ಕಾಣಲಾರದೆ ಹೋಗುತ್ತಾರೆ. ಅಂಥವರಲ್ಲಿ ಚಹರೆಯ ಬಗೆಗಿನ ತೊಳಲಾಟ ಆಗಲೇ ಮೊದಲಾಗುತ್ತದೆ. ಉಳಿದವರಿಗೆ ಈ ಚಡಪಡಿಕೆಯು ಬಹುಶಃ ಪ್ರೌಢ ವಯಸ್ಕರಾಗುವ ವೇಳೆಗೆ ಮೊದಲಾಗುತ್ತದೆ.

ಈ ಮೊದಲ ಚಹರೆಯ ನಂತರದಲ್ಲಿ, ಅಥವಾ ಇದರ ಜೊತೆಜೊತೆಗೇ ನಾವು ನಮ್ಮನಮ್ಮ ಸಾಮಾಜಿಕ ಚಹರೆಗಳನ್ನು ಪಡೆದುಕೊಳ್ಳುತ್ತೇವೆ; ಇದನ್ನು ನಮ್ಮ ಮೇಲೆ ಹೇರಲಾಗುತ್ತದೆ. ಇದರಲ್ಲಿ ನಮಗೆ ಆಯ್ಕೆಯ ಅವಕಾಶವೇನೂ ಇಲ್ಲ; ಮತ್ತು ಬೇಕೆಂದರೂ ಬೇಡವೆಂದರೂ ಇದು ನಮಗೆ ಅಂಟಿಕೊಂಡೇ ಉಳಿಯುತ್ತದೆ. ಸಾಮಾಜಿಕ ಚಹರೆ ಎಂಬುದು ನಮ್ಮನ್ನು ಆವರಿಸಿರುವ ವ್ಯವಸ್ಥೆಯು ತನ್ನ ಆಳ್ವಿಕೆಯ ಪ್ರಾಬಲ್ಯಕ್ಕಾಗಿ ರೂಪಿಸಿ ಜಾರಿಗೊಳಿಸುವ ಒಂದು ರಾಜಕಾರಣ, ಒಂದು ತಂತ್ರಗಾರಿಕೆ. ಮನುಷ್ಯ ಚರಿತ್ರೆಯ ಒಂದು ಹಂತದಲ್ಲಿ ಪಿತೃಪ್ರಧಾನತೆಯು ಪ್ರಭಾವಶಾಲಿಯಾಗಿ ನೆಲೆಸಿದ ನಂತರದಲ್ಲಿ ಸಾಮಾಜಿಕ ಚಹರೆ ಎಂಬ ಈ ತಂತ್ರಗಾರಿಕೆಯು ನಮ್ಮೆಲ್ಲರ ಮೇಲೂ ಅಧಿಕಾರವನ್ನು ಸ್ಥಾಪಿಸಿಬಿಟ್ಟಿದೆ. ಇದರ ಸಾಧನೆಗಾಗಿ ಅದು ಪ್ರತ್ಯೇಕೀಕರಣ ತಂತ್ರವನ್ನು ಬಳಸುತ್ತದೆ. ಅಂದರೆ ನಮ್ಮನಮ್ಮಲ್ಲೇ ಶ್ರೇಣೀಕರಣವನ್ನು ಏರ್ಪಡಿಸಿ, ನಾವು ಪರಸ್ಪರ ದ್ವೇಷದಲ್ಲಿ ಬೀಳುವಂತೆ ಮಾಡುತ್ತದೆ. ನಮ್ಮೆಲ್ಲರ ಬದುಕುಗಳ ವೈಯಕ್ತಿಕ ಹಾಗೂ ಸಾಮಾಜಿಕ ತೊಳಲಾಟಗಳೂ ಇಲ್ಲಿಂದಲೇ ಮೊದಲುಗೊಳ್ಳುತ್ತವೆ.

ಪಿತೃಪ್ರಧಾನತೆಯು ಹೇರುವ ಸಾಮಾಜಿಕ ಚಹರೆಯು ಮುಖ್ಯವಾಗಿ ಅಧಿಕಾರ ಮತ್ತು ಅಧೀನತೆಯ ಮಾದರಿಯದಾಗಿದೆ. ಬಲಾಡ್ಯರು ಬಲಹೀನರನ್ನು ತುಳಿದು, ಸಂಪನ್ಮೂಲಗಳ ಮೇಲೆ ನಿಯಂತ್ರಣವನ್ನು ಸಾಧಿಸುವ ತಂತ್ರಗಾರಿಕೆ. ಈ ತಂತ್ರಗಾರಿಕೆಯು ಹೇಗೆ ಕೆಲಸ ಮಾಡುತ್ತದೆ ಎಂಬ ವಿವರಗಳನ್ನು ಸಮಾಜಶಾಸ್ತ್ರಜ್ಞರು ಅಧ್ಯಯನ ಮಾಡಿದ್ದಾರೆ; ಮತ್ತು ಇದನ್ನು ಸಾಮಾಜೀಕರಣ ತರಬೇತಿ ಎನ್ನುತ್ತಾರೆ. ಈ ತರಬೇತಿಯಲ್ಲಿ ಹೆಣ್ಣು ಅಥವಾ ಗಂಡು, ಅಥವಾ ಭಿನ್ನಲಿಂಗೀ ಲೈಂಗಿಕತೆ ಎಂಬ ಭೇದವೇ ಇಲ್ಲದೆ, ನಾವೆಲ್ಲರೂ ರೋಬೋಗಳಂತೆ ಪರಿವರ್ತಿತರಾಗಿಬಿಡುತ್ತೇವೆ. ನಮ್ಮ ದೇಹ, ಬುದ್ದಿ, ಮನಸ್ಸು ಒಟ್ಟಾರೆ ನಮ್ಮಿಡೀ ಚೈತನ್ಯವೇ ಪಿತೃಪ್ರಧಾನ ವ್ಯವಸ್ಥೆಯ ನಿಯಂತ್ರಣಕ್ಕೆ ಒಳಗಾಗಿ ಬಿಡುತ್ತದೆ. ಅದು ಜಾರಿಗೊಳಿಸುವ ನಿಯಮಾವಳಿಗಳನ್ನು ನಮ್ಮ ಸ್ವಂತದ ನಿರ್ಧಾರವೋ ಎಂಬಂತೆ ಚಾಚೂ ತಪ್ಪದೆ ಪಾಲಿಸುತ್ತೇವೆ; ಮತ್ತು ತಲೆಮಾರಿನಿಂದ ತಲೆಮಾರಿಗೆ ಅವನ್ನು ಶ್ರದ್ಧೆಯಿಂದ ದಾಟಿಸುತ್ತೇವೆ. ನಾವು ಯಾರು, ಏನು ಮಾಡುತ್ತಿದ್ದೇವೆ ಎಂಬ ಅರಿವನ್ನೇ ಕಳೆದುಕೊಂಡು ವಿಸ್ಮೃತಿಗೆ ಒಳಗಾಗಿಬಿಡುತ್ತೇವೆ. ಬಹುತೇಕ ನಾವೆಲ್ಲರೂ ಈ ಸಾಮಾಜಿಕ ಚಹರೆಯನ್ನೇ "ನಾವು" ಎಂದು ಗ್ರಹಿಸುತ್ತೇವೆ. ಕಷ್ಟವೋ ಸುಖವೋ ಇದು ನಮ್ಮ ಹಣೆಬರಹ ಎಂಬಂತೆ ಬದುಕುತ್ತೇವೆ. ಅಂದರೆ, ಹುಟ್ಟಿದ ಯಾವುದೇ ಒಂದು ಜೀವವು ಸ್ವಂತಕ್ಕೆ ಹೊರಲೇಬೇಕಾದ ಹೊಣೆಗಾರಿಕೆಯನ್ನೇ ಮರೆತುಬಿಡುತ್ತೇವೆ. ಈ ವಿಸ್ಮತಿ, ನಮ್ಮ ಬದುಕಿನ ಬಗೆಗೇ ಬರುವ ಈ ಮರೆವು, ಜೀವಸಹಜವಂತೂ ಅಲ್ಲ. ಇದು ಸಾಧ್ಯವಾದದ್ದಾದರೂ ಹೇಗೆ? ನಾವು ಅದೆಲ್ಲಿ, ಅದಾವಾಗ, ಹೇಗೆ ಕಳೆದುಹೋದೆವು? ನಮ್ಮ ನಿಜದ ಚಹರೆ ಯಾವುದು? ಅಂದರೆ ನಾವು ಯಾರು? ಇಂಥಾ ಯಾವ ಪ್ರಶ್ನೆಗಳೂ ನಮಗೆ ಬರುವುದೇ ಇಲ್ಲ.

ಅಪರೂಪದ ಕೆಲವರಿಗೆ ಈ ವಿಸ್ಕೃತಿಯು ಕಳಚಿದಂತಾಗಿ ಇಂಥಾ ಪ್ರಶ್ನೆಗಳನ್ನು ಎತ್ತುತ್ತಾರೆ ಎಂಬುದಕ್ಕೆ ಮಾನವ ಚರಿತ್ರೆಯ ಉದ್ದಕ್ಕೂ ಉದಾಹರಣೆಗಳು ಇವೆ. ಅಂಥವರು ಹುಡುಕಾಟಗಳಲ್ಲಿ ತೊಡಗಿ, ತಮಗೆ ಸರಿಕಂಡ ಉತ್ತರಗಳನ್ನು

ಇತರರಲ್ಲಿ ಹಂಚಿಕೊಂಡದ್ದೂ ಇದೆ. ಕೆಲವರು ಈ ಲೋಕ ವ್ಯವಹಾರದಿಂದಲೇ ಹೊರನಡೆದುಬಿಡುವ ಬಗ್ಗೆ ಮಾತಾಡಿದ್ದಾರೆ. ಆದರೆ, ಈ ಹಾದಿ ಜನಸಾಮಾನ್ಯರಿಗೆ ಯಾವ ಬಗೆಯ ನೆರವನ್ನೂ ನೀಡಲಾರದು. ಅಪರೂಪದ ಕೆಲವರು ಇಲ್ಲಿನ ಮಾನವ ಸಂಬಂಧಗಳನ್ನು ನೇರ್ಪುಗೊಳಿಸಿ ನಿರ್ವಹಿಸುವ ಮೂಲಕವೇ ನಮ್ಮ ಸ್ವಂತದ ಚಹರೆಯನ್ನು ಅರಿಯಬಹುದು. ಇದು ನಮ್ಮ ಆಂತರಿಕ ತೊಳಲಾಟಗಳನ್ನು ತಹಬಂದಿಗೆ ತರಬಲ್ಲ ಸಹಜ ದಾರಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದು ವೈಯಕ್ತಿಕವಾಗಿಯೂ, ಸಾಮುದಾಯಿಕವಾಗಿಯೂ ಸಹಜ ಬದುಕನ್ನು ನೆಲೆಗೊಳಿಸುತ್ತದೆ ಎಂಬುದನ್ನು ತಿಳಿಸಿದ್ದಾರೆ. ಮುಖ್ಯವಾಗಿ ಅಧಿಕಾರ ವ್ಯವಸ್ಥೆಯು ಹೇರುವ ಸಾಮಾಜಿಕ ಚಹರೆಯು, ನಮ್ಮಲ್ಲಿ ಪ್ರತಿಯೊಬ್ಬರನ್ನೂ ಒಂಟಿದ್ವೀಪವಾಗಿಸುತ್ತದೆ. ಸಮುದಾಯ ಶಕ್ತಿಯನ್ನು ಎದುರಿಸಿ ಯಾವ ಅಧಿಕಾರ ರಾಜಕಾರಣವೂ ಯಶಸ್ವಿ ಎನಿಸಲಾರದು. ನಮ್ಮ ಚಹರೆಗಳನ್ನು ಅರಿಯುವ ಹಾದಿಯಲ್ಲಿ ಈ ಪ್ರೀತಿಯ ಆಪ್ತತೆಯ ರಾಜಕಾರಣದ ಅಗತ್ಯವನ್ನು ನಾವು ಗ್ರಹಿಸಬೇಕಿದೆ. ಸ್ತ್ರೀವಾದ ಎಂಬುದು ಹೆಣ್ಣಿನ ಚಹರೆಯ ಹುಡುಕಾಟದ ಪ್ರಶ್ನೆಯೊಂದಿಗೆ ಮೊದಲಾದ ಒಂದು ಚಿಂತನೆ ಎಂಬುದು ನಿಜ. ಆದರೆ, ಅದು ಮಾಗುತ್ತಾ ನಡೆದ ಹಾದಿಯಲ್ಲಿ ಸಮಗ್ರ ಮಾನವ ಕುಲದ ಸುಸಂಗತ ಬದುಕಿಗೆ ನೆರವಾಗುವ ಒಂದು ದಾರ್ಶನಿಕ ಚಿಂತನೆಯಾಗಿ ಬೆಳೆದಿದೆ. ಪಿತೃಪ್ರಧಾನತೆಯ ತರಬೇತಿಯ ಪಾಠಗಳನ್ನು ಮರೆಯದೆ ಸ್ವಂತದ ಚಹರೆಯನ್ನು ಅರಿಯಲು ಸಾಧ್ಯವಾಗದು ಎಂಬ ಸ್ಪಷ್ಟತೆಯನ್ನು ಕಾಣಿಸುತ್ತಿದೆ.

ನಾನು ಈ ಸ್ತ್ರೀವಾದೀ ದಾರ್ಶನಿಕತೆಯನ್ನು ಕೂಡಿಸಿಕೊಳ್ಳಲು ಹವಣಿಸುತ್ತಿರುವವಳು. ಅದೂ ತೀರಾ ಇತ್ತೀಚೆಗೆ ಎಂದರೂ ಸರಿಯೇ. ನಾನು ಹೆಣ್ಣಾಗಿ ಹುಟ್ಟಿದ್ದರಿಂದ, ನನ್ನ ತೊಳಲಾಟಗಳ ಜೊತೆಗೇ ನನ್ನ ಸುತ್ತಲಿನ ಹೆಂಗಸರ ತೊಳಲಾಟಗಳನ್ನು ಗಮನಿಸಿರಬಹುದು. ಮನೆಯಲ್ಲಿ, ಸಂಬಂಧಗಳಲ್ಲಿ, ಸಾರ್ವಜನಿಕ ವಲಯಗಳಲ್ಲಿ, ಕೊನೆಗೆ ಸಂತೆ ಮಾರುಕಟ್ಟೆಗಳಲ್ಲೂ ಹೆಣ್ಣು ಗಂಡುಗಳ ನಡುವೆ ಅಧಿಕಾರ-ಅಧೀನತೆಯ ಸಂಬಂಧಗಳೇ ಕಾಣುತ್ತವೆ ಎಂಬ ಅನುಭವದಲ್ಲಿ ಗಂಡಸರೊಂದಿಗೆ ಆಪ್ತವಾಗಿ ಬೆರೆಯಲು ಹಿಂಜರಿಕೆಯನ್ನು ಬೆಳೆಸಿಕೊಂಡದ್ದೂ ಇದೆ. ನಾನು ಹುಟ್ಟಿದ್ದು ಬ್ರಾಹ್ಮಣ ಕುಟುಂಬದಲ್ಲಿ. ದೊಡ್ಡ ಕೂಡು ಕುಟುಂಬ. ಆದರೆ

ಹೆಣ್ಣು ಹೆಂಗಸು ಎನಿಸಿ ಹುಟ್ಟಿದ್ದರಿಂದ. ಕುಟುಂಬದ ಜಾತಿ, ವರ್ಗ ಎಂಬ ಸಂಗತಿಗಳು ನನಗೆ ಸಾಮಾಜಿಕ ಬಂಡವಾಳವಾಗೇನೂ ಒದಗಿ ಬರಲಿಲ್ಲ. ಊಟಕ್ಕೆ ಕೊರತೆ ಇಲ್ಲದಿದ್ದರೂ, ಶಿಕ್ಷಣ, ಉದ್ಯೋಗ, ಎಲ್ಲಕ್ಕಿಂತ ಮುಖ್ಯವಾಗಿ ಮದುವೆ ಎಂಬ ವಿಚಾರಗಳಲ್ಲಿ ಇನ್ನಿಲ್ಲದ ನಿರ್ಬಂಧಗಳನ್ನು ಎದುರಿಸಲೇಬೇಕಾಯಿತು. ಈಗ ತಿರುಗಿ ನೋಡಿದರೆ, ಈ ಎಲ್ಲವನ್ನೂ ನನಗೆ ಬೇಕಾದಂತೆ ಪಡೆದುಕೊಂಡಿದ್ದೇನೆ ಎಂಬುದೂ ಕಾಣುತ್ತದೆ. ಆದರೆ, ಇದೆಲ್ಲದರ ಹಿಂದೆ ನನ್ನ ಜಾಗೃತ ಮನಸ್ಥಿತಿ ಕೆಲಸ ಮಾಡಿತ್ತೇ, ಅಥವಾ ನನ್ನ ಹಟಮಾರಿತನದ ಫಲವಾಗಿ ಇವು ದೊರೆತಿದ್ದವೇ ಎಂದರೆ ಹಟ, ಕೂಡಿ ಬಂದ ಸಮಯ, ಸಂದರ್ಭಗಳಲ್ಲಿ ಇವೆಲ್ಲವೂ ಹೇಗೋ ಸಾಧಿತವಾಗಿದ್ದವು ಅಷ್ಟೇ. ಅದು ಬಿಟ್ಟರೆ, ನನ್ನ ಸಾಮಾಜಿಕ ಚಹರೆಯನ್ನು ಪ್ರಶ್ನಿಸಿ, ನಾನು ಯಾರು ಎಂಬ ಹುಡುಕಾಟಕ್ಕೆ ನಾನೇನೂ ತೊಡಗಲಿಲ್ಲ. ಇದರ ಪರಿಣಾಮವೆಂದರೆ, ನನ್ನಲ್ಲಿ ಹೇಳಿಕೊಳ್ಳಲಾರದ ಮಾನಸಿಕ ದ್ವಂದ್ವಗಳು, ಕಾರಣವೇ ಇಲ್ಲದ ಕೋಭೆಗಳು. ಇದನ್ನೇ ಬೆಟ್ಟಿ ಫ್ರೀಡನ್ ಹೆಣ್ಣಿನ ಹೆಸರಿಲ್ಲದ ರೋಗಲಕ್ಷಣಗಳು ಎಂದು ಕರೆದದ್ದು. ಈ ಮನಃಸ್ಥಿತಿಯ ಮಹಿಳೆಯರು ತಮ್ಮ ಕಿರಿಯ ತಲೆಮಾರಿನ ಹೆಣ್ಣು ಮಕ್ಕಳಿಗೆ ಯಾವ ನೆರವನ್ನೂ ನೀಡಲಾರರು.

ನಾನು ಎಲ್ಲ ಸಾಮಾನ್ಯ ಮಹಿಳೆಯರಂತೆಯೇ ನನ್ನದು ಎಂಬ ಒಂದು ಚಹರೆ ಇದ್ದೀತು ಎಂಬ ಅನುಮಾನವೂ ಇಲ್ಲದೆ ನನ್ನ ಆಯಸ್ಸಿನ ಬಹುಭಾಗವನ್ನು ಕಳೆದುಬಿಟ್ಟೆ. ನನಗೆ ಸ್ತ್ರೀವಾದದ ದಾರಿಯೊಂದಿದೆ ಎಂಬ ಅರಿವು ಬಂದದ್ದೇ ಒಂದು ಆಕಸ್ಮಿಕವಾಗಿ ಹಾಗೂ ಬಲು ತಡವಾಗಿ. ಆದರೆ, ಈ ಅರಿವಿನೊಂದಿಗೆ ನನ್ನ ಜೀವನಯಾನದ ಕ್ರಮವೇ ಬದಲಾಗತೊಡಗಿತು. ಸ್ತ್ರೀವಾದವನ್ನು ಕುರಿತ ಓದು, ಅಧ್ಯಯನಗಳು ಬೌದ್ಧಿಕವಾಗಿ ನನ್ನನ್ನು ಎಷ್ಟು ಬೆಳೆಸಿದವೋ ಕಾಣೆ. ಆದರೆ, ನಾನು ಲೋಕವನ್ನು ನೋಡುವ ಬಗೆಯಲ್ಲಂತೂ ಅಗಾಧವಾದ ಬದಲಾವಣೆ ಆಯಿತು. ತಾನಾಗಿಯೇ ಎಂಬಷ್ಟು ಸಹಜವಾಗಿ. ನನ್ನ ಚಹರೆಯ ಅರಿವು ನನಗೆ ಈಗೀಗಷ್ಟೇ ಸ್ಪಷ್ಟವಾಗಿ ಆಗಲಾರಂಭಿಸಿದೆ. ಸ್ತ್ರೀವಾದವನ್ನು ಓದಿ ಅರ್ಥ ಮಾಡಿಕೊಳ್ಳುವುದು ಅಂಥಾ ಕಷ್ಟದ ಕೆಲಸವೇನೂ ಅಲ್ಲ. ಆದರೆ ಸ್ತ್ರೀವಾದ ಎನ್ನುವುದು ಬೌದ್ಧಿಕ ಸಾಮರ್ಥ್ಯವನ್ನು ಸಾಬೀತು ಪಡಿಸಬೇಕಾದ ಜ್ಞಾನವಲ್ಲ. ಸ್ತ್ರೀವಾದವನ್ನು ಅರಿಯುವುದು ಎಂದರೆ, ಅದನ್ನು ಬದುಕುವುದು ಎಂದೇ ಅರ್ಥ. ನಾನು ಹೀಗೆ ಬದುಕಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತೇನೆ. ಪಿತೃಪ್ರಧಾನತೆಯ ತರಬೇತಿಯ ಪಾಠಗಳನ್ನು ಮರೆತು ಹೊರಬರಲು ಶ್ರಮಿಸುತ್ತೇನೆ. ನನ್ನ ಸುತ್ತಲಿನ ಎಲ್ಲರೂ ಈ ದಾರಿಯನ್ನು ಹಿಡಿಯಲಿ ಎಂದು ಆಶಿಸುತ್ತೇನೆ.

ಸ್ತ್ರೀವಾದವನ್ನು ಬದುಕುವುದು ಎಂದರೆ ಏನು? ನನ್ನ ದಿನನಿತ್ಯದ ಮಾತುಕತೆ, ನಡೆನುಡಿಗಳನ್ನು ಅನುಕ್ಷಣವೂ ಗಮನಿಸುವುದು. ಪಿತೃಪ್ರಧಾನತೆಯ ಪಾಠಗಳು ಒಮ್ಮೆಗೇ ನಾಶವಾಗುವುದಿಲ್ಲ. ಯಾವ ಸಂದಿಯಿಂದಲೋ ಹಣಕಿಬಿಡಬಹುದು. ಇದನ್ನು ತಡೆಗಟ್ಟುವ ನಿರಂತರ ಜಾಗೃತಿ ನನಗೆ ಇರಬೇಕು. ಹಾಗೆಯೇ ನನ್ನ ಸುತ್ತಲಿನಲ್ಲಿ ಕಾಣುವ ಅಂಥ ಎಲ್ಲಾ ಪ್ರಸಂಗಗಳನ್ನೂ ವಿರೋಧಿಸುವ, ಸಾಧ್ಯವಾದಲ್ಲಿ ತಡೆಗಟ್ಟುವ ಸಾಮರ್ಥ್ಯವನ್ನು ಕೂಡಿಸಿಕೊಳ್ಳುವುದು. ನಾನು ತೊಡಗಿಕೊಳ್ಳುವ ಯಾವುದೇ ದೈಹಿಕ, ಬೌದ್ಧಿಕ, ಹಾಗೂ ಮಾನಸಿಕ ಚಟುವಟಿಕೆಗಳಲ್ಲೇ ಆಗಲಿ, ನನ್ನ ಈ ವ್ಯಕ್ತಿತ್ವವೇ ಮುಂದೆ ನಿಲ್ಲಬೇಕು. ನನ್ನ ಬದುಕಿನ ಎಲ್ಲ ನಿರ್ಧಾರಗಳಲ್ಲೂ ನನ್ನ ಈ ವ್ಯಕ್ತಿತ್ವವೇ ಅಂತಿಮವೆನಿಸಬೇಕು. ಅದು ದಿನನಿತ್ಯದ ಮನೆಗೆಲಸವೇ ಇರಲಿ, ಓದು, ಬರಹ, ವೃತ್ತಿ, ಹವ್ಯಾಸ ಎಂಬ ಯಾವುದು ಬೇಕಾದರೂ ಆಗಿರಬಹುದು. ಉದಾಹರಣೆಗೆ ಸಾಹಿತ್ಯ ವಲಯ ನನ್ನ ಆಸಕ್ತಿ ಎಂದುಕೊಂಡರೆ, ನನ್ನ ಓದು, ಬರಹಗಳ ಒಟ್ಟಾರೆ ಕ್ರಮದಲ್ಲಿಯೇ ಮಾನವ ಬದುಕಿನ ಸುಸಂಗತತೆಯ ಶೋಧವೇ ನನಗೆ ಮುಖ್ಯ ಕೇಂದ್ರ ಎನಿಸಬೇಕು. ಸಾಹಿತ್ಯವಲಯದಲ್ಲಿ ತೊಡಗಿಕೊಂಡಿರುವವರು, ಸ್ತ್ರೀವಾದೀ ಸಾಹಿತ್ಯ, ಓದು, ಸ್ತ್ರೀ ಸಂವೇದನೆ, ಮಹಿಳೆಯ ಮನೋಲೋಕ ಇಂಥಾ ಮಾತುಗಳನ್ನು ಆಡುವುದಿದೆ. ಆದರೆ ಇವುಗಳನ್ನು ಬಳಸುವಾಗ, ನಾವು ಅವಕ್ಕೆ ಹಚ್ಚುವ ಅರ್ಥವು ಪಿತೃಪ್ರಧಾನ ವ್ಯಾಖ್ಯೆಯನ್ನು ಮೀರಿದೆಯೇ ಎಂಬುದರ ಸೂಕ್ಷ್ಮ ಅರಿವು ತುಂಬಾ ಅಗತ್ಯವಾಗುತ್ತದೆ. ಎಷ್ಟೋ ಸಲ ನಾವು ಹೆಣ್ಣನ್ನು ಗೌರವಿಸುವ ಸೋಗಿನಲ್ಲಿ ಅವಳ ಸೇವಾ ವಲಯವನ್ನು ವೈಭವೀಕರಿಸುವ ಚಮತ್ಕಾರವನ್ನು ಅರಿಯಲಾರದೆ ಹೋಗುವುದಿದೆ. ಇಂಥವನ್ನೆಲ್ಲಾ ಗಮನಿಸುವ ಸೂಕ್ಷತೆಯ ಬಗ್ಗೆ ಸ್ತ್ರೀವಾದಿಗಳು ಎಚ್ಚರಿಸುತ್ತಾರೆ.

ಹಿಂದಣ ಹೆಜ್ಜೆಯ ಅರಿವು, ಮುಂದಣ ಹಾದಿಗೆ ನೆರವು ನೀಡುತ್ತದೆ ಎಂಬುದು ಒಂದು ನಂಬಿಕೆ. ಹಿರಿಯ ತಲೆಮಾರಿನವರು ತಮ್ಮ ಈ ಪಯಣದ ಅನುಭವಗಳನ್ನು ಕಿರಿಯ ತಲೆಮಾರಿನವರಿಗೆ ದಾಟಿಸಬೇಕು ಎನ್ನುತ್ತಾಳೆ, ಕಪ್ಪು ಸ್ತ್ರೀವಾದಿ ಬೆಲ್- ಹುಕ್ಸ್. ಅದಕ್ಕೆ ಕಾರಣವೆಂದರೆ, ಈ ದಾರಿಯನ್ನು ಕಂಡುಕೊಳ್ಳುವಲ್ಲಿ ನಾವು ಎದುರಿಸಿದ ಬಿಕ್ಕಟ್ಟುಗಳ ಪರಿಚಯ ಕಿರಿಯರಿಗೆ ಇದ್ದರೆ, ಈ ಅರಿವು ಅವರ ಪ್ರಯಾಣದಲ್ಲಿ ಒಂದು ಮುನ್ಸೂಚಿಯಾಗಿ, ಒಂದು ನೀಲ ನಕ್ಷೆಯಾಗಿ ಒದಗಬಹುದು. ನಾವು ಆಯಸ್ಸಿನ ಕೊನೆಗಾಲಕ್ಕೆ ನಾವು ಪ್ರಯಾಣಿಸಬೇಕಾದ ಹಾದಿಯ ಪ್ರವೇಶ ದ್ವಾರದಲ್ಲಿ ನಿಂತಿದ್ದೇವೆ. ಇದು ಹತಾಶೆಯ ಮಾತು ಎನಿಸುವ ಬದಲು ನಮ್ಮ ಎಳೆಯರಿಗೆ ನೆರವು ನೀಡುವ ಮಾತು ಎನಿಸಬೇಕು. ಅವರು ಚಿಕ್ಕ ವಯಸ್ಸಿನಲ್ಲೇ ಈ ಹಾದಿಯ ಕುರುಹುಗಳನ್ನು ಅರಿತು ನಡೆದಾಗ, ದೀರ್ಘಕಾಲ ಸ್ವಂತದ ಗುರುತಿನ ಬದುಕನ್ನು ಬದುಕುವ ಅವಕಾಶ ಕಲ್ಪಿತವಾಗುತ್ತದೆ.

ನನ್ನ ಬದುಕಿನ ಒಂದು ಹಂತದಲ್ಲಿ, ಸ್ತ್ರೀವಾದ ಎಂಬ ಅರಿವಿನ ವಲಯಕ್ಕೆ ನನಗೆ ಪ್ರವೇಶ ದೊರೆಯಿತು. ಒಬ್ಬ ಹೆಣ್ಣಿನ ಕಷ್ಟ ಸುಖಗಳನ್ನು ಅರಿಯುವುದು, ಸಂತೈಸುವುದು ಬೇರೆ. ಇಡೀ ಹೆಣ್ಣು ಸಮುದಾಯಕ್ಕೆ ಅನ್ವಯಿಸಿದಂತೆ ಅಧ್ಯಯನ ನಡೆಸಿ ಅವಳ ಮೂಲ ಚಹರೆಯನ್ನು ಅರಿಯುವಲ್ಲಿ ನೆರವಾಗಿ ನಿಲ್ಲುವುದೇ ಬೇರೆ. ಸ್ತ್ರೀವಾದದ ಆವರಣಕ್ಕೆ ಬಂದ ಮೇಲೆ ನಿಜವಾದ ಅರ್ಥದಲ್ಲಿ ನನ್ನನ್ನು ನಾನು ಅರಿಯಲು ಆರಂಭಿಸಿದ್ದು. ನನ್ನ ಈ ಕತೆಯನ್ನು ಹೇಳಲು ಇಲ್ಲಿ ಕಾರಣವಿದೆ.

ಎಪ್ಪತ್ತೈದರ ವಯಸ್ಸಿಗೆ ಕಡಿದು ಕಟ್ಟೆ ಹಾಕಿದ್ದಾದರೂ ಏನು, ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವೇನೂ ಇಲ್ಲ. ಆದರೆ, ಮನಸ್ಸು ಮಾಡಿದರೆ ಏನನ್ನಾದರೂ ಮಾಡಬಹುದು ಎಂಬ ಆತ್ಮವಿಶ್ವಾಸ ಈಗೀಗಷ್ಟೇ ಮೊಳೆಯುತ್ತಿದೆ. ಆದರೆ ನನ್ನಲ್ಲಿ ಹೆಚ್ಚಿನ ಸಮಯವಿಲ್ಲ. ಇದಕ್ಕೆ ನಾನು ಪಶ್ಚಾತ್ತಾಪವೇನೂ ಪಡುವುದಿಲ್ಲ. ಆದರೆ, ನಾವು ಹಿರಿಯರು ಎಳವೆಯಲ್ಲಿ ಗೊತ್ತುಗುರಿ ಇಲ್ಲದೆ, ಕ್ರಮವೂ ಇಲ್ಲದೆ ನಮ್ಮ ಅಗತ್ಯಗಳಿಗಾಗಿ ಹೋರಾಡಿದೆವು. ಹೋರಾಟ ಎಂದರೆ, ಚಂಡಿ ಹಿಡಿಯುವುದು ಅಷ್ಟೇ. ಈ ಬಗೆಯ ಗಳಿಕೆ ಅಧಿಕಾರ ಸ್ಥಾನವು ಕೊಡುವ ದಾನ ಎನಿಸಬಹುದೇ ಹೊರತು ಇದರಲ್ಲಿ ನಮ್ಮ ಸಾಧನೆ. ನಮ್ಮ ಚಹರೆ ಎಂಬ ಯಾವ ಸ್ವಂತಿಕೆಯೂ ಇಲ್ಲ. ಆದರೆ, ನಮ್ಮ ದಾರಿಯ ಅನುಭವಗಳನ್ನು ಕಿರಿಯರಿಗೆ- ಮಹಿಳೆಯರು ಪುರುಷರು ಎಲ್ಲರಿಗೂ ದಾಟಿಸುವುದರಿಂದ, ಅವರು ಚಿಕ್ಕ ವಯಸ್ಸಿನಲ್ಲೇ ತಮ್ಮ ಸ್ವಂತದ ಚಹರೆಯನ್ನು ಅರಿಯುತ್ತಾರೆ; ಮತ್ತು ಅವರು ಹೆಚ್ಚು ಕಾಲ ಸ್ವಂತದ ಚಹರೆಯ ಆನಂದ, ತೃಪ್ತಿಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂಬುದು ನನ್ನ ಅನಿಸಿಕೆ.

ಈ ಸ್ತ್ರೀವಾದೀ ದಾರ್ಶನಿಕ ಅರಿವು ನಮ್ಮೆಲ್ಲರದೂ ಆಗಲಿ ಎಂದು ಹಾರೈಸುತ್ತೇನೆ. ಮನುಷ್ಯ ಸಂಬಂಧಗಳು ಸುಸಂಗತವಾಗಿರಲಿ ಎಂದು ಆಶಿಸುತ್ತೇನೆ. ಇಲ್ಲಿ ನಿಂತು ಇಷ್ಟು ಮಾತನಾಡಲು ನನಗೆ ಅವಕಾಶವನ್ನು ಕಲ್ಪಿಸಿದ ಕರ್ನಾಟಕ ಲೇಖಕಿಯರ ಸಂಘದ ಎಲ್ಲರಿಗೂ ನಮಸ್ಕಾರ. ಇದನ್ನು ಕೇಳಿಸಿಕೊಂಡ ನಿಮಗೆ ಇದರಲ್ಲಿ ಒಂದಿಷ್ಟು ಅರ್ಥವಿದೆ ಎನಿಸಿದರೆ, ಈ ಕುರಿತು ಇನ್ನಷ್ಟು ಚರ್ಚೆಗಳು ಬೆಳೆಯಲು ಸಾಧ್ಯವಾದರೆ ತುಂಬಾ ಸಂತೋಷವಾಗುತ್ತದೆ.

ಎಲ್ಲರಿಗೂ ನನ್ನ ತುಂಬು ಪ್ರೀತಿ

MORE NEWS

ಎರಡನೇ ವರ್ಗದ ಪ್ರಕಾಶಕರಿಂದ ಮಾತ್ರ ಕನ್ನಡ ಸಾಹಿತ್ಯ ಶ್ರೀಮಂತವಾಗಲು ಸಾಧ್ಯ: ಬಂಜಗೆರೆ

23-04-2025 ಬೆಂಗಳೂರು

ಬೆಂಗಳೂರು: ಕರ್ನಾಟಕ ಪ್ರಕಾಶಕರ ಸಂಘ ಹಾಗೂ ಬಿ.ಎಂ.ಶ್ರೀ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ವ...

ಕನ್ನಡ ಪುಸ್ತಕ ಪ್ರಾಧಿಕಾರದ 3 ವರ್ಷದ ಐದು ಪ್ರಶಸ್ತಿಗಳ ಪ್ರಕಟ; ಇಲ್ಲಿದೆ ಸಂಪೂರ್ಣ ಮಾಹಿತಿ

22-04-2025 ಬೆಂಗಳೂರು

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ 2022, 2023 ಮತ್ತು 2024ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳಾದ, ಅತ್ಯುತ್ತ...

ವಿಶ್ವ ಪುಸ್ತಕ ದಿನದಂದು ಚಾಲನೆ ಪಡೆಯಲಿರುವ 'ಕರ್ನಾಟಕ ಪುಸ್ತಕ ಮಾರಾಟಗಾರರು, ಪ್ರಕಾಶಕರು ಹಾಗೂ ಲೇಖಕರ ಸಂಘ'

22-04-2025 ಬೆಂಗಳೂರು

ಕನ್ನಡ ಪುಸ್ತಕೋದ್ಯಮ ಓದುಗರ ಕೊರತೆ, ಹೊಸ ಆಲೋಚನೆಗಳ ಅಲಭ್ಯತೆ ಮತ್ತು ಸರ್ಕಾರ-ಸಂಸ್ಥೆಗಳ ಸಮರ್ಪಕ ಬೆಂಬಲವಿಲ್ಲದೆ ಸಂಕಷ್ಟ...