Date: 23-04-2025
Location: ಬೆಂಗಳೂರು
ಬೆಂಗಳೂರು: ಕರ್ನಾಟಕ ಪ್ರಕಾಶಕರ ಸಂಘ ಹಾಗೂ ಬಿ.ಎಂ.ಶ್ರೀ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಪುಸ್ತಕ’ ಮತ್ತು ‘ಕೃತಿ ಸ್ವಾಮ್ಯ’ ದಿನಾಚರಣೆಯನ್ನು 2025 ಏ.23 ಬುಧವಾರದಂದು ನಗರದ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಡಾ.ಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಯನ್ನು ಶಿವಮೊಗ್ಗದ ಅಹರ್ನಿಶಿ ಪ್ರಕಾಶನದ ಶ್ರೀಮತಿ ಅಕ್ಷತಾ ಹುಂಚದಕಟ್ಟೆ ಅವರಿಗೆ ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿಯನ್ನು ರಾಯಚೂರು ಜಿಲ್ಲೆಯ ಬಂಡಾರ ಪ್ರಕಾಶನದ ಶ್ರೀಮತಿ ರೇಣುಕಾ ಕೋಡಗುಂಟಿ ಅವರಿಗೆ ನೀಡಲಾಯಿತು.
ಪುಸ್ತಕ ಗೌರವ ಪುರಸ್ಕಾರವನ್ನು ಸಾಹಿತ್ಯಲೋಕ ಪಬ್ಲಿಕೇಷನ್ಸ್ ನ ರಘವೀರ ಸಮರ್ಥ, ಅಮೂಲ್ಯ ಪುಸ್ತಕದ ಕೃಷ್ಣ ಚೆಂಗಡಿ, ಅವ್ವ ಪುಸ್ತಕಾಲಯದ ಅನಂತ್ ಕುಣಿಗಲ್, ಕದಂಬ ಪ್ರಕಾಶನದ ನಾಗೇಶ್, ಬುಕ್ ಸರ್ಕಲ್ ನ ಶ್ರೀನಾಥ್ ಅವರು ಪಡೆದುಕೊಂಡರು.
ನಂತರದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಾಹಿತಿ ಬೈರಮಂಗಲ ರಾಮೇಗೌಡ, "ಲೇಖಕರು ಪ್ರಕಾಶಕರ ಒಡನಾಟದಲ್ಲಿ ಅನುಭವಿಸಿದ ಸಂಕಟಗಳು, ತಳಮಳಗಳಿಂದ ಹೊರಬರುವ ಅಂಗವಾಗಿ ಕೆಲವು ಲೇಖಕರು ಸ್ವತಂತ್ಯ್ರವಾಗಿ ಪುಸ್ತಕ ಪ್ರಕಾಶನವನ್ನು ಆರಂಭಿಸಿದರು. ಈ ಎರಡು ರೀತಿ ಪ್ರಕಾಶಕರು ಮತ್ತು ಲೇಖಕರ ನಡುವೆ ಇರುವ ಸಂಬಂಧ ನಮ್ಮ ನಡುವೆ ಇರುವ ಸಂದರ್ಭದಲ್ಲಿ, ಅಕ್ಷತಾ ಮತ್ತು ರೇಣುಕಾ ಅವರು ಪ್ರಕಾಶನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಎಲ್ಲರೂ ಮೆಚ್ಚುವಂತೆ ಬಹು ಮುಖ್ಯವಾದ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಷ್ಟೇಅಲ್ಲದೆ ಈ ಎರಡು ಪ್ರಕಾಶಕಿಯರು ಕೃತಿಗಳ ಮಾರಾಟದ ಜಾಲವನ್ನು ಅನುಸರಿಸಿ, ಓದುಗರಿಗೆ ಕೃತಿಯನ್ನು ತಲುಪಿಸುತ್ತಿದ್ದಾರೆ," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವೈದ್ಯೆ, ಲೇಖಕಿ ವಸುಂಧರಾ ಭೂಪತಿ ಮಾತನಾಡಿ, "ಈ ಮೊದಲು ಸರ್ಕಾರ 300 ಪ್ರತಿಗಳನ್ನು ಖರೀದಿಸುತ್ತಿದ್ದು, ಅದು ಬಹಳಷ್ಟು ಲೇಖಕ, ಪ್ರಕಾಶಕರಿಗೆ ಉಪಕಾರಿಯಾಗಿತ್ತು. ಆದರೆ ಸರ್ಕಾರ ಇದೀಗ ಆ ಯೋಜನೆಯನ್ನು ನಿಲ್ಲಿಸಿದೆ. ಸರ್ಕಾರ ಪುಸ್ತಕದ ಕುರಿತು ಹೊಸ ಹೊಸ ಯೋಜನೆಗಳನ್ನು ತಂದರೆ ಪ್ರಕಾಶಕ, ಲೇಖಕರ ಸಹಿತ ಪುಸ್ತಕೋದ್ಯಮವು ಬೆಳವಣಿಗೆಯನ್ನು ಕಾಣುತ್ತದೆ. ಸರ್ಕಾರ ಪ್ರತೀ ವರ್ಷ 20 ಕೋಟಿಯಷ್ಟು ಮೊತ್ತವನ್ನು ಗ್ರಂಥಾಲಯ ಮತ್ತು ಪುಸ್ತಕೋದ್ಯಮಕ್ಕೆ ಮೀಸಲಿಡಬೇಕು. ಇದರಿಂದ ಮಾತ್ರ ಸಾಹಿತ್ಯ ಕ್ಷೇತ್ರದ ಪ್ರಗತಿ ಸಾಧ್ಯ," ಎಂದರು.
ಸಾಹಿತಿ ಬಂಜಗೆರೆ ಜಯಪ್ರಕಾಶ ಮಾತನಾಡಿ, "ಪುಸ್ತಕೋದ್ಯಮ ಒಂದು ರೀತಿಯಲ್ಲಿ ಸುಖದ ಹಾದಿ ಮತ್ತೊಂದು ಕಡೆಗೆ ದುಃಖದ ಹಾದಿ ಕೂಡ ಹೌದು. ಅದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರವೇ. ಒಂದು ವರ್ಗದ ಪ್ರಕಾಶಕರು ಓದುಗರನ್ನ ಮನಸ್ಸಿನಲ್ಲಿಟ್ಟುಕೊಂಡು ಕೃತಿಗಳನ್ನು ಪ್ರಕಟಿಸುತ್ತಾರೆ, ಇನ್ನೊಂದು ವರ್ಗದ ಪ್ರಕಾಶಕರು ತಮಗೆ ಬೇಕಾದ ಕೃತಿ ವಿಚಾರಗಳನ್ನು ಆಯ್ದು ಓದುಗರಿಗೆ ಯಾವ ಕೃತಿಗಳನ್ನು ಕೊಟ್ಟರೆ ಸೂಕ್ತ ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಿ ಬಹಳ ಶ್ರೇಷ್ಠವಾದ ಕೃತಿಗಳನ್ನು ಹೊಸಬರಿಂದಲೂ ಬರೆಸುತ್ತಾರೆ. ಇದು ನಿಜವಾದ ಪ್ರಕಾಶಕನ ಕರ್ತವ್ಯ. ಈ ಎರಡನೇಯ ಹಂತದ ಪ್ರಕಾಶಕರ ಕೆಲಸ ಬಹಳ ಕಷ್ಟು. ಆದರೆ ಇಂತಹ ಪ್ರಕಾಶಕರಿಂದ ಮಾತ್ರ ಕನ್ನಡ ಸಾಹಿತ್ಯವನ್ನು ಶ್ರೀಮಂತ ಮತ್ತು ಸಾರ್ಥಕಗೊಳಿಸಲು ಸಾಧ್ಯ," ಎಂದು ಹೇಳಿದರು.
ಸಮಾರಂಭದಲ್ಲಿ ಜಿ.ಎನ್. ಮೋಹನ್, ಅಂಕಿತ ಪ್ರಕಾಶಕ ಪ್ರಕಾಶ್ ಕಂಬತ್ತಳ್ಳಿ, ನ. ರವಿಕುಮಾರ, ವಸುಧೇಂದ್ರ, ರವೀಂದ್ರನಾಥ ಸಿರಿವರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು
"ಯೌವ್ವನದ ಆರಂಭದಲ್ಲಾದ ಪ್ರೇಮವೊಂದು ಬದುಕಿನ ಪೂರ್ತಿ ಅದೇ ಪ್ರೇಮಕ್ಕೆ ಹಂಬಲಿಸುವ ಕಥೆ ಮಾಂಡೋವಿ. ಪ್ರೀತಿ ಒಬ್ಬ ಮನ...
ಕುಂದಾಪುರ: ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಯಾಗಿದ್ದ ಸ್ವಪ್ನಶಿಲ್ಪಿ ಡಾ. ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಕುಂದಾಪು...
ಬೆಂಗಳೂರು: ಸಾಹಿತ್ಯ ಅಕಾದೆಮಿಯು 2025ನೇ ಸಾಲಿನ ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿದೆ. ...
©2025 Book Brahma Private Limited.