Date: 30-07-2025
Location: ಬೆಂಗಳೂರು
"ಕಡಕೋಳ ಶ್ರೀಮಠದ ಹಿರಿಯ ಗುರುಗಳಾಗಿದ್ದ ಲಿಂಗೈಕ್ಯ ಶ್ರೀವೀರೇಶ್ವರ ಮಹಾದೇವರು ತೋರಿಸಿಕೊಟ್ಟ ಗುರುದಾರಿಯ ಪರಂಪರೆ ಅದಾಗಿದೆ. ಹಾಗೆ ನೋಡಿದರೆ ಅದು ಸಂಪ್ರದಾಯದಂತೆ ಕಂಡು ಬಂದರೂ ಆಂತರ್ಯದಲ್ಲಿ ಅದಕ್ಕೊಂದು ಲೋಕಪ್ರೀತಿಯ ರೂಪ ದೊರಕಿದ ಪ್ರತೀತಿ ಇರುವುದನ್ನು ಅಲ್ಲಗಳೆಯಲಾಗದು," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣದಲ್ಲಿ ʻಚಿಣಮಗೇರಿ ಚೌಡಾಪುರ ಗುಡ್ಡದ ಗುರುಮಠದೆಡೆಗೆ ಕಾಲ್ನಡಿಗೆ ಯಾತ್ರೆʼ ಕುರಿತು ಬರೆದಿದ್ದಾರೆ.
ಕಡಕೋಳ ಮಡಿವಾಳಪ್ಪನ ಮಠದಿಂದ ಚಿಣಮಗೇರಿ ಚೌಡಾಪುರ ಗುಡ್ಡದ ಗುರು ಮಹಾಂತನ ಮಠದೆಡೆಗೆ ಕಾಲ್ನಡಿಗೆ ಯಾತ್ರೆ. ಅದು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಜರುಗುವ ವಾಡಿಕೆಯ ಯಾತ್ರೆಯಾಗಿ ಮಾತ್ರ ಉಳಿದಿಲ್ಲ. ಆದರೆ ಅದೊಂದು ಜನಮಾನಸದ ಸಾಂಸ್ಕೃತಿಕ ಯಾತ್ರೆಯಾಗಿ ಪರಿವರ್ತನೆಗೊಂಡಿದೆ. ಶ್ರಾವಣ ಮಾಸ ಬರುವುದನ್ನೇ ಪಾದಯಾತ್ರಿಗಳು ಸಾರ್ಥಕ್ಯಭಾವದಿಂದ ಎದುರು ನೋಡುತ್ತಿರುತ್ತಾರೆ. ಅದಕ್ಕಾಗಿ ಕೆಲವರು ಸೂಕ್ತ ತಯಾರಿಗಳನ್ನು ಕೂಡಾ ಮಾಡಿಕೊಂಡು ಸಿದ್ದರಾಗುತ್ತಾರೆ.
ಕಡಕೋಳ ಶ್ರೀಮಠದ ಹಿರಿಯ ಗುರುಗಳಾಗಿದ್ದ ಲಿಂಗೈಕ್ಯ ಶ್ರೀವೀರೇಶ್ವರ ಮಹಾದೇವರು ತೋರಿಸಿಕೊಟ್ಟ ಗುರುದಾರಿಯ ಪರಂಪರೆ ಅದಾಗಿದೆ. ಹಾಗೆ ನೋಡಿದರೆ ಅದು ಸಂಪ್ರದಾಯದಂತೆ ಕಂಡು ಬಂದರೂ ಆಂತರ್ಯದಲ್ಲಿ ಅದಕ್ಕೊಂದು ಲೋಕಪ್ರೀತಿಯ ರೂಪ ದೊರಕಿದ ಪ್ರತೀತಿ ಇರುವುದನ್ನು ಅಲ್ಲಗಳೆಯಲಾಗದು. ಹೆಣ್ಣು, ಗಂಡು, ಹಿಂದು, ಮುಸ್ಲಿಂ, ದಲಿತ ಎನ್ನದೇ ಎಲ್ಲಾ ಲಿಂಗ, ಜಾತಿ, ಧರ್ಮದವರು ಭಾಗವಹಿಸುವ ಅದೊಂದು ಲಿಂಗ ಜಾತಿ ನಿರಸನದ ಜನಸಂಸ್ಕೃತಿ ಯಾತ್ರೆಯಾಗಿ
ಸಾಮರಸ್ಯದ ಸ್ವರೂಪ ಪಡೆದುಕೊಂಡಿದೆ.
ಅಷ್ಟಕ್ಕೂ ಶ್ರಾವಣ ಮಾಸ ಎಂಬುದು ಸಾತ್ವಿಕ ಪ್ರಜ್ಞೆಯ ಅನೇಕರಿಗೆ ಶ್ರದ್ಧಾಭಕ್ತಿ ತುಂಬಿದ ಆಚರಣೆಗಳ ತಿಂಗಳು ಎನ್ನುವಂತಿದೆ. ಮಾಂಸಾಹಾರಿಗಳು ಈ ತಿಂಗಳು ಪೂರ್ತಿಯಾಗಿ ಮಾಂಸ ವರ್ಜಿಸುತ್ತಾರೆ. ಇನ್ನು ಕೆಲವರು ಕ್ಷೌರ ಸಹಿತ ಮಾಡಿಸಿಕೊಳ್ಳುವುದಿಲ್ಲ. ಇಂತಹ ಇನ್ನೂ ಕೆಲವು ವ್ರತಾಚರಣೆಗಳು ಕೇವಲ ವೃಥಾಚರಣೆಗಳು ಹೌದು/ಅಲ್ಲ ಎಂಬುದು ಕೆಲವರ ಅಂಬೋಣ. ವೈಜ್ಞಾನಿಕ ಮತ್ತು ವೈಚಾರಿಕ ಸತ್ಯಾಸತ್ಯತೆಗಳೇನೇ ಇರಲಿ, ಜನಸಾಮಾನ್ಯರ ನಂಬುಗೆಗಳಿಗೆ ಇರುವ ಚಾರಿತ್ರಿಕ ಮಹತ್ವವನ್ನು ಅಷ್ಟು ಸರಳವಾಗಿ ಅಲ್ಲಗಳೆಯಲಾಗದು.
ಹಿರಿಯ ಗುರುವರ್ಯರಾದ ಶ್ರೀ ವೀರೇಶ್ವರ ಮಹಾದೇವರು, ಕಡಕೋಳ ಶ್ರೀ ಮಠದ ಸಾರಥ್ಯ ವಹಿಸಿಕೊಂಡ ಕೆಲವು ವರುಷಗಳ ತರುವಾಯ ಆ ಕಾಲದಲ್ಲಿ ಇಂತಹದ್ದೊಂದು 'ಜನನಡೆ'ಯನ್ನು
ಜಾರಿಗೆ ತಂದರು. ಚಿಣಮಗೇರಿ ಚೌಡಾಪುರ ಗುಡ್ಡದ ಗುರುಮಠಕ್ಕೆ ಮೇಳದ ಭಜನೆ ಮೂಲಕ ಪಾದಯಾತ್ರೆಯ ಸಂಕಲ್ಪ ಆರಂಭಿಸುತ್ತಾರೆ. ಅದು ಆ ಕಾಲದ ಭಾವುಕ ಭಕ್ತರ ತುರ್ತುಅಗತ್ಯದಂತೆ ಕಂಡಿದ್ದರೆ ಅಚ್ಚರಿಯೇನಿಲ್ಲ. ಆರಂಭಕ್ಕೆ ಚಿಕ್ಕದಾಗಿ ಶುರುವಾಗಿ ಬರಬರುತ್ತಾ ಅದರ ಮಹತಿ ಹೆಚ್ಚುತ್ತಾ ಹೋಯಿತು. ಗುರುಗಳಿಗೆ ವಯಸ್ಸಾದಂತೆ ಕಾಲ್ನಡಿಗೆ ದುಃಸಾಧ್ಯವಾಗತೊಡಗಿತು. ಅಷ್ಟಕ್ಕೂ ಅವರ ಪಾದಗಳಲ್ಲಿ ಆಲಿಗಳಿದ್ದವು. ಹೆಚ್ಚು ದೂರ ನಡೆಯುವುದು ಆಗುತ್ತಿರಲಿಲ್ಲ. ಹೀಗಾಗಿ ಕೆಲವೊಮ್ಮೆ ಹಿರಿಯ ಗುರುವರ್ಯರು ಕುದುರೆ ಮೇಲೆ ಯಾತ್ರೆ ಕ್ರಮಿಸಿದ ಘಟನೆಗಳಿವೆ.
ಏನಿಲ್ಲವೆಂದರೂ ಅರ್ಧಶತಮಾನಕ್ಕೂ ಹಿಂದೆಯೇ ಆರಂಭಗೊಂಡ ಈ ಕಾಲ್ನಡಿಗೆ ಯಾತ್ರೆಯಲ್ಲಿ ಈಗೀಗ ಕಡಕೋಳದಿಂದಲೇ ಐನೂರಕ್ಕೂ ಹೆಚ್ಚಿನ ಸಂಖ್ಯೆಯ ಭಕ್ತಗಣ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಅದರಲ್ಲಿ ಅರ್ಧದಷ್ಟು ಮಹಿಳೆಯರೇ ಇರುವುದು ವಿಶೇಷ. ಅಜಮಾಸು ಅರವತ್ತು ಕಿಲೋಮೀಟರ್ ದೂರದ ಈ ಯಾತ್ರೆಯುದ್ದಕ್ಕೂ ಮಡಿವಾಳಪ್ಪನ ತತ್ವಪದಗಳ ಭಜನೆಯ ನಾದ ಝೇಂಕಾರ. ಅದು ನಾಲ್ಕು ದಿನಗಳ ಕಾಲ ಜರುಗಿ ಕೊನೆಯ ದಿನ ಚಿಣಮಗೇರಿ ಚೌಡಾಪುರ ಗುಡ್ಡದ ಗುರುಮಠ ಸೇರುತ್ತದೆ.
ಸಾಮಾನ್ಯವಾಗಿ ಶ್ರಾವಣ ಮಾಸದ ಎರಡನೇ ವಾರ ಪಾದಯಾತ್ರೆಯ ನಿಗದಿ ಆಗಿರುತ್ತದೆ. ಪ್ರತಿನಿತ್ಯವೂ ಹದಿನೈದು ಕಿ.ಮೀ. ಕಾಲ್ನಡಿಗೆ. ಈ ಬಾರಿ ೨೦೨೫ ರ ಆಗಷ್ಟ್ ಎಂಟನೇ ತಾರೀಖು ಶುಕ್ರವಾರದಂದು ಪಾದಯಾತ್ರೆ ಆರಂಭ. ಆರಂಭದ ದಿನ ಮುಂಜಾನೆ ಕಡಕೋಳ ಶ್ರೀಮಠದ ಡಾ. ರುದ್ರಮುನಿ ಶಿವಾಚಾರ್ಯರ ಸಾನಿಧ್ಯದಲ್ಲಿ ಮಹಾಂತ ಮಡಿವಾಳರ ಕರ್ತೃ ಗದ್ದುಗೆ ಪೂಜೆ, ಮಂಗಳಾರತಿ ನಂತರ ಭಜನಾ ಮೇಳದೊಂದಿಗೆ ಕಾಲ್ನಡಿಗೆ ಯಾತ್ರೆ ಆರಂಭಗೊಳ್ಳುತ್ತದೆ.
ಕಡಕೋಳದಿಂದಲೇ ಐನೂರು ಮಂದಿ ಪಾದಯಾತ್ರಿಗಳು. ಅದು ಚಿಣಮಗೇರಿ ಚೌಡಾಪುರ ಗುಡ್ಡದ ಗುರುಮಠ ಮುಟ್ಟುವಷ್ಟರಲ್ಲಿ ಎರಡು ಸಾವಿರ ಮಿಕ್ಕಿದ ಸಂಖ್ಯೆ ಮುಟ್ಟಿರುತ್ತದೆ. ಕಡಕೋಳದ ಪಕ್ಕದೂರು ಜೆಂಬೇರಾಳದಿಂದಲೇ ಪರ ಊರಿನ ಪಾದಯಾತ್ರಿಗಳ ಸೇರ್ಪಡೆ ಶುರುವಾಗುತ್ತದೆ. ಜೆಂಬೇರಾಳ ದಾಟಿ ಅರಳಗುಂಡಿಗಿ, ಕುರ್ನಳ್ಳಿ ಮೂಲಕ ಯಾತ್ರೆಯ ವಿಸ್ತಾರ. ಮೊದಲ ದಿನ ಕುರ್ನಳ್ಳಿ ವಸ್ತಿ. ಈ ಪಾದಯಾತ್ರೆಯ ಎರಡನೇ ದಿವಸ ಬಳುಂಡಗಿ ಮೂರನೇ ದಿನ ಬಟಗೇರಿಯಲ್ಲಿ ವಸ್ತಿ. ಅಲ್ಲಿಂದ ಸಂಗಮ, ಗಾಣಗಾಪೂರ, ಚಿಣಮಗೇರಿ ಚೌಡಾಪುರ ಗುಡ್ಡದ ಗುರುಮಠ. ಹೀಗೆ ಮೂರು ವಸ್ತಿಗಳಲ್ಲಿ ಗುರುಗಳಿಗೆ ಸಿಗುವ ಎಲ್ಲ ಪ್ರಸಾದ ಸೌಕರ್ಯಗಳು ಸಹಪಥಿಕ ಸರ್ವ ಪಾದಯಾತ್ರಿಗಳಿಗೆ ದಕ್ಕುತ್ತವೆ. ಗುರುಗಳು ಸಹಿತ ಜಾತಿ ಮತವೆನ್ನದೇ ಎಲ್ಲ ಜಾತಿಯ ಭಕ್ತರ ಮನೆಗಳಲ್ಲಿ ವಸ್ತಿಮಾಡಿ ಪ್ರಸಾದ ಸ್ವೀಕರಿಸುತ್ತಾರೆ.
ಅದರಲ್ಲೂ ಬಟಗೇರಿ ವಸ್ತಿಗೆ ವಿಶೇಷ ಮಹತ್ವ. ಅದಕ್ಕೆ ಹಿರಿಯ ಗುರುಗಳ ಕಾಲದಿಂದಲೂ ಆ ವಸ್ತಿ ಅಂತಹದ್ದೊಂದು ಮಹತ್ವ ಗಳಿಸಲು ಕಾರಣಗಳಿವೆ. ಹಿರಿಯ ಗುರುಗಳ ಕಾಲದಲ್ಲಿ ಹುಟ್ಟುಹಾಕಿ ನಾವೆಯ ಮೂಲಕ ಭೀಮಾನದಿ ದಾಟಿಸಲು ಅಂದು ಸಾಯಿಬಣ್ಣ ಕೋಣಶಿರಸಗಿ ಇದ್ದಕಾಲ. ಅವನದು ನದಿ ದಾಟಿಸುವ ನಾವಿಕ ಕಾಯಕ. ಅದು ಅಕ್ಷರಶಃ ಅಂಬಿಗ ಕಾಯಕ. ಮಡಿವಾಳಪ್ಪನ ಪರಮಶಿಷ್ಯ ಕಡ್ಲೇವಾಡ ಸಿದ್ದಪ್ಪನ ಕುಲಕಾಯಕ ಸಾಯಿಬಣ್ಣನದು. ಎಲ್ಲ ಯಾತ್ರಿಕರನ್ನು ಹಣ ಪಡೆಯದೇ ಜೋಪಾನವಾಗಿ ಭೀಮಾನದಿ ದಾಟಿಸುತ್ತಿದ್ದ. ಅದು ಅಕ್ಷರಶಃ ಸಾಯಿಬಣ್ಣನ ಶ್ರದ್ಧಾಭಕ್ತಿಯೇ ಆಗಿರುತ್ತಿತ್ತು.
ಅಷ್ಟು ಮಾತ್ರ ಆಗಿದ್ದರೆ ಅದೇನು ವಿಶೇಷವಾಗಿರುತ್ತಿರಲಿಲ್ಲ. ಪಾದಯಾತ್ರೆಗೆ ಬಂದಿರುವ ಎಲ್ಲಾ ಭಕ್ತರಿಗೂ ಪ್ರೀತಿಯಿಂದ ಉಣಬಡಿಸುತ್ತಿದ್ದ. ಅದೂ ಕರಿಗಡಬು ಹೋಳಿಗೆ ತುಪ್ಪ, ಕಜ್ಜಭಜ್ಜಿಯ ಅಡಿಗೆ ಮಾಡಿ ಉಣಿಸುವುದಾಗಿತ್ತು. ಅದನ್ನು ಹರಕೆಯ ಸಂಕಲ್ಪದಂತೆ ಆಚರಿಸುತ್ತಿದುದು ಗಮನೀಯ. ತಾನು ಹೊತ್ತ ಸಂಕಲ್ಪ ಪ್ರತಿ ವರುಷವೂ ಈಡೇರಿಸುವ ಶಕ್ತಿ ಸಾಕ್ಷಾತ್ ಸದ್ಗುರುನಾಥ ವೀರೇಶ್ವರ ದೇವರು ತನಗೆ ದಯಪಾಲಿಸೆಂದು ಬೇಡಿಕೊಳ್ಳುತ್ತಾನೆ. ಗುರುದೈವ ಸಾಯಿಬಣ್ಣನ ಬೇಡಿಕೆ ಈಡೇರಿಸುತ್ತಾರೆ. ಅಂತೆಯೇ ಅದನ್ನು ತಾನು ಬದುಕಿರುವಷ್ಟು ಕಾಲವೂ ಗುರು ವೀರೇಶ್ವರ ದೇವರ ಮೇಲಿನ ಭಕ್ತಿಯಂತೆ ನಡೆಸಿಕೊಂಡು ಬಂದರು ಸಾಯಿಬಣ್ಣ.
ಪರಿಣಾಮ ತನ್ನ ಮಗನಿಗೆ 'ಮಡಿವಾಳಪ್ಪ' ಎಂದೇ ಹೆಸರಿಟ್ಟರು. ತಾನು ಸಾಯುವಾಗ ಮಗ ಮಡಿವಾಳಪ್ಪನಿಗೆ ಅದುವರೆಗೆ ತಾನು ಪಾಲಿಸಿಕೊಂಡು ಬಂದ 'ಕಡಕೋಳದಿಂದ ಬರುವ ಪಾದಯಾತ್ರಿಗಳಿಗೆ ಕರಿಗಡಬು ಹೋಳಿಗೆ ತುಪ್ಪದ ದಾಸೋಹ' ಮುಂದುವರೆಸುವಂತೆ ಮಗನಿಂದ ವಚನ ಪಡೆಯುತ್ತಾನೆ. ಅಪ್ಪನಿಗೆ ಕೊಟ್ಟ ವಚನವನ್ನು ಮಗ ಮಡಿವಾಳಪ್ಪ ಇಂದಿಗೂ ಶಿರಸಾವಹಿಸಿ ಪರಿಪಾಲಿಸುತ್ತಿದ್ದಾನೆ. ಅಂತೆಯೇ ಪ್ರತಿವರ್ಷವೂ ಶ್ರಾವಣಮಾಸದ ದಾಸೋಹ ನೆರವೇರಿಸುವ ಸಂಕಲ್ಪ ಮುಂದುವರೆಸಿದ್ದಾರೆ.
ಹಾಗೆಯೇ ಹಿಂದಿನ ರಾತ್ರಿಗಳ ಎರಡು ವಸ್ತಿಗಳಲ್ಲಿ ಭಕ್ತರ ಮನೆಯಲ್ಲಿ ಪಾದಯಾತ್ರಿಗಳೆಲ್ಲರಿಗೂ ಉಳಿದು ಕೊಳ್ಳುವ ಅಲ್ಲಿಯೂ ಉಚಿತ ಪ್ರಸಾದದ ವ್ಯವಸ್ಥೆ ಇರುತ್ತದೆ. ಆದರೆ ಬಟಗೇರಿಯ ವಸ್ತಿಗೆ ಹಿರಿಯ ಗುರುಗಳ ಕಾಲದಿಂದಲೂ ವಿಶೇಷ ಮಹತ್ವ ಪ್ರಾಪ್ತಿ. ಹೀಗಾಗಿ ಹಿರಿಯ ಗುರುಗಳ ಜ್ಞಾಪಕಾರ್ಥ ಸಾಯಿಬಣ್ಣನ ಹೊಲದಲ್ಲಿ ಹಿರಿಯ ಗುರುಗಳ ಸ್ಮಾರಕವನ್ನೇ ಮಡಿವಾಳಪ್ಪ ನಿರ್ಮಿಸಿದ್ದಾರೆ. ಎರಡು ಸಾವಿರ ಮಂದಿಗೆ ಕರಿಗಡಬು, ಹೋಳಿಗೆ, ತುಪ್ಪದ ಮೃಷ್ಟಾನ್ನ ಭೋಜನ. ಅಂದು ರಾತ್ರಿ ಪಾದಯಾತ್ರೆಯ ನೇತೃತ್ವ ವಹಿಸಿದ ಕಡಕೋಳ ಮಠದ ಶ್ರೀಗಳಿಂದ ಪ್ರವಚನ ಮತ್ತು ವಿಶೇಷ ಆಶೀರ್ವಚನ. ಇಡೀ ರಾತ್ರಿ ತತ್ವಪದಗಳ ಮಹಾಭಜನೆ. ಅದರಲ್ಲೂ ವಿಶೇಷವಾಗಿ ಮಡಿವಾಳಪ್ಪ ಮತ್ತು ಶಿಷ್ಯರು ರಚಿಸಿದ ತತ್ವಪದಗಳಿಗೆ ಮೊದಲ ಆದ್ಯತೆ. ಭಜನೆ ಮಾತ್ರ ಈ ಕಾಲ್ನಡಿಗೆ ಯಾತ್ರೆಯ ಉದ್ದಕ್ಕೂ ಅನಾವರಣಗೊಳ್ಳುವ ವಿಶೇಷ.
ಮರುದಿನ ಬೆಳಗ್ಗೆ ಪಾದಯಾತ್ರಿಗಳ ಜಳಕ ಪೂಜೆಯ ನಂತರ ಉಪಹಾರ. ಎಂದಿನಂತೆ ಹುಟ್ಟುಹಾಕಿ ನದಿ ದಾಟಿಸುವ ಪ್ರಕ್ರಿಯೆ. ಆಚೆ ದಡ ಸೇರಿ ಅಲ್ಲಿರುವ ಮುಸ್ಲಿಂ ಸಂತ ಮರ್ಜಿಪೀರನ ಮಜಾರಿಗೆ ಭೇಟಿನೀಡಿ ಕೆಲಹೊತ್ತು ಅಲ್ಲಿ ವಿಶ್ರಾಂತಿ. ಎಲ್ಲಾ ಪಾದಯಾತ್ರಿಕರು ನದಿದಾಟಿ ಬಂದಮೇಲೆ ಸಂಗಮದತ್ತ ಪಯಣ. ಅಲ್ಲಿಂದ ಗಾಣಗಾಪುರದ ದತ್ತಾವಧೂತರು ತಪವಗೈಯ್ದ ಅರಳಿಮರದ ಬಳಿ ಮಂಗಳಾರತಿ ಪೂಜೆ ಸಲ್ಲಿಕೆ. ತದನಂತರ ಚಿಣಮಗೇರಿ ಚೌಡಾಪುರ ಗುಡ್ಡದತ್ತ ಪಾದಯಾತ್ರೆಯ ಪಯಣ. ಅಲ್ಲಿ ಗುಡ್ಡದ ಗುರುಮಠ ತಲುಪಿದ ಸಂತೃಪ್ತಭಾವ. ಗುರುಮಠದಲ್ಲಿ ಇಡೀ ರಾತ್ರಿ ಪ್ರವಚನ ಮತ್ತು ತತ್ವಪದಗಳ ಭಜನೆ. ಕಜ್ಜಭಜ್ಜಿಯ ಮಹಾಪ್ರಸಾದ. ಚಿಣಮಗೇರಿ ಚೌಡಾಪುರ ಗುಡ್ಡದ ಮಹಾಂತೇಶ್ವರ ಗುರುಮಠದ ಈರ್ವರೂ ಶ್ರೀಗಳವರ ಸಮಕ್ಷಮ ಪಾದಯಾತ್ರೆಯ ಸಮಾರೋಪ ಜರುಗುವುದು. ಮರುದಿನ ಮುಂಜಾನೆ ಮರಳಿ ಕಡಕೋಳ ಮಡಿವಾಳಪ್ಪನ ಮಠದತ್ತ ಪಯಣ. ಹೀಗೆ ಈ ಪಾದಯಾತ್ರೆಗೆ ಸಾಂಸ್ಕೃತಿಕ ಮಹತ್ವ ಪ್ರಾಪ್ತವಾಗಿದೆ.
ಪಾದಯಾತ್ರೆ ಕುರಿತು ಮೊನ್ನೆ ನನ್ನೊಂದಿಗೆ ಡಾ. ರುದ್ರಮುನಿ ಶಿವಾಚಾರ್ಯರು ವಾತ್ಸಲ್ಯದಿಂದ ಮಾತಾಡಿದರು. ಒಂದು ವಾರ ಪರ್ಯಂತರ ಜರುಗುವ ಈ ಪಾದಯಾತ್ರೆಗೆ ಹೊಸದೊಂದು ಸ್ವರೂಪ ರೂಪಿಸುವ ಸದಿಚ್ಛೆ ಶ್ರೀಗಳವರದು. ಒಂದೊಂದು ವರುಷ ಒಂದೊಂದು ಬಗೆಯ ಆಶಯಗಳ ಶೀರ್ಷಿಕೆಯೊಂದಿಗೆ ಪಾದಯಾತ್ರೆಗೆ ಹೊಸತನ್ನು ತರುವ ಅಪೇಕ್ಷೆ ಅವರದಾಗಿದೆ. ವರ್ತಮಾನದ ಅಗತ್ಯಗಳು ಮತ್ತು ಬದಲಾಗುತ್ತಿರುವ ಸಾಮಾಜಿಕ ಸ್ಥಿತ್ಯಂತರಗಳಿಗೆ ಸ್ಪಂದಿಸುವುದು ಗುರುಗಳ ಚಿಂತನೆಗಳಾಗಿವೆ. ವಾರದ ಅವಧಿಯ ಈ ಪಾದಯಾತ್ರೆಯಲ್ಲಿ ಮುರ್ನಾಲ್ಕು ಸಾವಿರ ಜನ ಸಾಮೂಹಿಕವಾಗಿ ನಡೆದುಕೊಂಡು ಹೋಗುವ ಕ್ರಮವೇ ಚಿಕಿತ್ಸಕವಾದುದು.
ಅಂತಹ ಅರ್ಥಪೂರ್ಣ ಗಳಿಗೆಗಳನ್ನು ಸಾರ್ಥಕವಾಗುವಂತೆ ಸದ್ಬಳಕೆ ಮಾಡಿಕೊಳ್ಳುವ ಅಗತ್ಯವಿದೆ. ಸಾಮಾಜಿಕ ಜಾಲತಣಗಳು ಯುವಜನತೆಯನ್ನು ದುರಿತಕಾಲಕ್ಕೆ ನೂಕುತ್ತಲಿವೆ. ರೈತರು, ಮಹಿಳೆಯರು, ವಿದ್ಯಾರ್ಥಿಗಳು ದಿಕ್ಕುಕಾಣದ ಸ್ಥಿತಿಗೆ ತಲುಪುವಲ್ಲಿ ರಾಜಕೀಯ ಕೊಳಕಾಟಗಳ ಕಪಟತನವಿದೆ. ಈ ಕುರಿತು ಗಂಭೀರವಾದ ವಿಚಾರಗಳು ಇಂತಹ ಕಾಲ್ನಡಿಗೆ ಯಾತ್ರೆಯಲ್ಲಿ ಚರ್ಚೆಯಾಗಬೇಕಿದೆ. ಪ್ರತಿ ವರ್ಷ ಒಂದೊಂದು ವಿಷಯ ಕುರಿತು ಚಿಂತನೆ ನಡೆಸಬೇಕಿದೆ. ಆರಂಭಕ್ಕೆ ಇದೇ ವರ್ಷದ ಪಾದಯಾತ್ರೆಯಲ್ಲಿ ಕೃಷಿ ಮತ್ತು ಕೃಷಿಕನ ಕುರಿತು ಸಂವಾದ ನಡೆಸೋಣ ಎಂದರು. ಮಡಿವಾಳಪ್ಪ ಅಪ್ಪಟ ಕೃಷಿಕನಾಗಿದ್ದ ನೆನಪು ಮಾಡಿಕೊಂಡರು. ಕಡಕೋಳ ಶ್ರೀಗಳ ಸಾಮಾಜಿಕ ಕಳಕಳಿಯ ಸದಾಶಯ ಸಾದ್ಯಂತವಾಗಿ ಈಡೇರಲಿ.
ಮಲ್ಲಿಕಾರ್ಜುನ ಕಡಕೋಳ
9341010712

"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...
"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...
"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...
©2025 Book Brahma Private Limited.