ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

Date: 15-09-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ಇದು. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಚೀನಾಸೈ ಗು-ಚಾಂಗ್ ಅವರ ಬಗ್ಗೆ ಬರೆದಿದ್ದಾರೆ.

ಕಲಾವಿದ: ಸೈ ಗು-ಚಾಂಗ್ (Cai Gou-Qiang)

ಜನನ: 8 ಮಾರ್ಚ್ 1957 (ಚ್ವಾಂಜು, ಫುಜಾನ್ ಪ್ರಾಂತ್ಯ, ಚೀನಾ)

ಶಿಕ್ಷಣ: ಷಾಂಘೈ ಡ್ರಾಮಾ ಇನ್ಸ್ಟಿಟ್ಯೂಟ್ ನಿಂದ ರಂಗ ವಿನ್ಯಾಸದಲ್ಲಿ BFA (1957)

ವಾಸ: ನ್ಯೂಯಾರ್ಕ್, ಅಮೆರಿಕ

ಕವಲು: ಕಂಟೆಂಪೊರರಿ ಆರ್ಟ್

ವ್ಯವಸಾಯ: ಕಾನ್ಸೆಪ್ಚುವಲ್ ಆರ್ಟ್, ಇನ್ಸ್ಟಾಲೇಷನ್ ಗಳು, ಪರ್ಫಾರ್ಮೆನ್ಸ್ ಆರ್ಟ್, ಪೇಂಟಿಂಗ್ ಗಳು.

ಸೈ ಗು-ಚಾಂಗ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಸೈ ಗು-ಚಾಂಗ್ ಅವರ ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಜಗತ್ತಿಗೇ ಸುಡುಮದ್ದುಗಳನ್ನು ತಯಾರಿಸಿಕೊಡುವ ಪುಟ್ಟ ಊರೊಂದರ ಸಮಕಾಲೀನ ಕಲಾವಿದರೊಬ್ಬರು ಸುಡುಮದ್ದುಗಳನ್ನೇ ಕಲೆಯನ್ನಾಗಿ ಪರಿವರ್ತಿಸಿಕೊಂಡ ಕಥೆ ಇದು. ಗಂಧಕ, ಪೆಟ್ಲುಪ್ಪು,ಮಸಿ ಸೇರಿ ನಾವು ಕರೆಯುವ ಗನ್ ಪೌಡರ್ ಬಳಸಿಕೊಂಡು ಸ್ಫೋಟಕ ಪೇಂಟಿಂಗ್ ಗಳನ್ನೂ ಮತ್ತು ಪಟಾಕಿಯ ಜೊತೆ ಸಿಡಿಯುವ ಬೆಳಕು-ಬೆಂಕಿ-ಹೊಗೆಗಳನ್ನು ತನ್ನ ಹದ್ದುಬಸ್ತಿನಲ್ಲಿರಿಸಿಕೊಂಡು ಆಕಾಶದಲ್ಲೆ ಅದ್ಭುತ ಚಿತ್ತಾರಗಳನ್ನೂ ಸೃಷ್ಟಿಸಬಲ್ಲ ಮಹತ್ವದ ಕಲಾವಿದ ಸೈ ಗು-ಚಾಂಗ್.

ಇಟ್ಟರೆ ಔಷಧಿಯಾದೆ ಹೊಟ್ಟಿದರೆ ಬಾಂಬಾದೆ ಎಂಬಂತಹ ಗನ್ ಪೌಡರ್ ಹುಟ್ಟಿದ್ದೇ ಚೀನಾದಲ್ಲಿ. ಅಲ್ಲಿ ಅದನ್ನು ಔಷಧಿಯಾಗಿಯೂ ಬಳಸುತ್ತಾರೆ, ಸಾಂಪ್ರದಾಯಿಕ ಸುಡುಮದ್ದಾಗಿಯೂ ಬಳಸುತ್ತಾರೆ ಮತ್ತು ಅದೀಗ ಜಗತ್ತಿನಾದ್ಯಂತ ಹಿಂಸೆಯಲ್ಲಿಯೂ ಬಳಕೆ ಆಗುತ್ತಿದೆ. ಊರಿನ ಕ್ಯಾಲಿಗ್ರಾಫಿ ಕಲಾವಿದರೊಬ್ಬರ ಮಗನಾದ ಚಾಂಗ್, ತನ್ನ ಚಿತ್ರಗಳಿಗೆ ಬೆಂಕಿಯ ಪ್ರಯೋಗ ಆರಂಭಿಸಿದ್ದು 1985ರ ಸುಮಾರಿಗೆ. 1986-1995ರ ನಡುವೆ ಜಪಾನ್ ನಲ್ಲಿ ನೆಲೆಸಿದ್ದ ಚಾಂಗ್, 1989ರಲ್ಲಿ ಮೊದಲಬಾರಿಗೆ ಪಟಾಕಿಗಳ ಸ್ಫೋಟದ ಸಾರ್ವಜನಿಕ ಪ್ರದರ್ಶನ ಕಲೆ (ಪರ್ಫಾರ್ಮಿಂಗ್ ಆರ್ಟ್) ಪ್ರದರ್ಶಿಸಿದರು. ಅಲ್ಲಿಂದ ಮುಂದೆ ಅಮೆರಿಕದ ನ್ಯೂಯಾರ್ಕ್ ಗೆ ವಲಸೆ ಹೋದ ಚಾಂಗ್, ಈಗಲೂ ಅಲ್ಲಿನ ನಿವಾಸಿ.

ಕ್ಯಾನ್ವಾಸಿನ ಮೇಲೆ ಪಟಾಕಿ ರಾಸಾಯನಿಕಗಳನ್ನು ಹರಡಿ, ಅವನ್ನು ಬಹಳ ನಿಯಂತ್ರಿತವಾಗಿ ಸ್ಫೋಟಿಸುವ ಮೂಲಕ ತನ್ನ ಕಲಾಕೃತಿಗಳನ್ನು ಕಟ್ಟಿಕೊಡುವ ಚಾಂಗ್, ನ್ಯೂಯಾರ್ಕ್ ಗೆ ಹೋದ ಆರಂಭದಲ್ಲಿ ಅಲ್ಲಿನ ನ್ಯೂಕ್ಲಿಯರ್ ಟೆಸ್ಟ್ ನಡೆದ ಜಾಗಗಳಲ್ಲಿ ಮತ್ತು ಲ್ಯಾಂಡ್ ಆರ್ಟ್ ಸೈಟ್ ಗಳಲ್ಲಿ ಪಟಾಕಿಗಳನ್ನು ಸ್ಫೋಟಿಸಿ ಅದರ ದಟ್ಟ ಹೊಗೆಯ ಮೂಲಕವೇ ಕಲಾಕೃತಿಗಳನ್ನು ಕಟ್ಟಿಕೊಡುವ The Century with Mushroom Clouds: Project for the 20th Century (1996) ಸರಣಿ ಪ್ರದರ್ಶನಗಳನ್ನು ನಡೆಸಿದರು. ಅವರ ಬೆಂಕಿಯಾಟದ ಮಹತ್ವದ ಕಲಾಕೃತಿ ಎಂದರೆ, ಅವರ ಹುಟ್ಟೂರಿನಲ್ಲಿ ನಡೆಸಿದ ಆಕಾಶಕ್ಕೆ ಏಣಿ ಇಡುವ Sky Ladder (2015). ಪ್ರದರ್ಶನ (ಈ ಪ್ರದರ್ಶನದ ಕುರಿತು ಬಹಳ ಪ್ರಸಿದ್ಧ ವಾದ ಒಂದು ಡಾಕ್ಯುಮೆಂಟರಿ ಚಿತ್ರ, Sky Ladder: The Art of Cai Guo Qiangನೆಟ್ ಫ್ಲಿಕ್ಸ್ ನಲ್ಲಿ ಲಭ್ಯವಿದೆ. ಸಾರ್ವಜನಿಕವಾಗಿ ಅವರಿಗೆ ಪ್ರಸಿದ್ಧಿ ತಂದುಕೊಟ್ಟ ಇನ್ನೊಂದು ಪ್ರದರ್ಶನ ಎಂದರೆ ಬೀಜಿಂಗ್ ಒಲಿಂಪಿಕ್ಸ್ (2008) ಉದ್ಘಾಟನಾ ಸಮಾರಂಭಕ್ಕೆ ಮತ್ತು ಮುಕ್ತಾಯ ಸಮಾರಂಭಕ್ಕೆ ಅವರ ನಿರ್ದೇಶನದಲ್ಲಿ ನಡೆದ ಸುಡುಮದ್ದು ಪ್ರದರ್ಶನ.

ಇದಲ್ಲದೆ ಪೌರಾತ್ಯ ಚಿಂತನೆಗಳನ್ನು ಒಂದು ಚಾರಿತ್ರಿಕ ಮತ್ತು ಪ್ರದರ್ಶಕ ಚೌಕಟ್ಟಿನಲ್ಲಿರಿಸಿ ಸಮಕಾಲೀನ ಕಲೆಯಾಗಿ ಕಟ್ಟಿಕೊಟ್ಟ ಚೀನಾದ ಆರಂಭಿಕ ಕಲಾವಿದರಲ್ಲಿ ಮಹತ್ವದ ಸ್ಥಾನ ಸೈ ಗು-ಚಾಂಗ್ ಅವರದು. ಅವರ ಇನ್ಸ್ಟಾಲೇಷನ್ ಗಳೂ ತಮ್ಮ ಗಾತ್ರ ಮತ್ತು ವಸ್ತುವಿನ ಕಾರಣದಿಂದಾಗಿ ಗಮನ ಸೆಳೆಯುತ್ತವೆ Cai Guo-Qiang: Inopportune (2004) ರಲ್ಲಿ ಪ್ರದರ್ಶಿತವಾದ ಬಾಣಜರ್ಝರಿತ ಹುಲಿಗಳ ಶಿಲ್ಪ; Cai Guo-Qiang: Head On (2006, Berlin) ಪ್ರದರ್ಶನದಲ್ಲಿ ತೋಳಗಳು ಬಂದು ಗೊಡೆಗಪ್ಪಳಿಸುವ ಇನ್ಸ್ಟಾಲೇಷನ್, Heritage, 2013 ಪ್ರದರ್ಶನದಲ್ಲಿ 99ಸ್ಟಫ್ ಮಾಡಲಾದ ಪ್ರಾಣಿಗಳು ನೀರು ಕುಡಿಯುವ ಇನ್ಸ್ಟಾಲೇಷನ್ ಗಳು ಅವರ ಗಮನಾರ್ಹ ಕೃತಿಗಳು. ಇವು ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂಗಳಲ್ಲಿ ಟ್ಯಾಕ್ಸಿಡರ್ಮಿ ವಿಧಾನ ಬಳಸಿ ಪ್ರಾಣಿಗಳ ಚರ್ಮದೊಳಕ್ಕೆ ಜೀವ ಸ್ಟಫ್ ಮಾಡುವ ತಂತ್ರ ಬಳಸಿ ತಯಾರಿಸಿದ ಕಲಾಕೃತಿಗಳು.

ಅವರ ಕಲಾಕೃತಿಗಳಲ್ಲಿ ಚೀನೀತನ ಕಾಣಿಸಿಕೊಳ್ಳುವ ಬಗ್ಗೆಅವರ ಅಭಿಪ್ರಾಯ ಕೇಳಿದಾಗ ಅವರು “ಅದು ಸಹಜ. ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮಗೆ ಬಳುವಳಿಯಾಗಿ ಬಂದದ್ದನ್ನೇ ಬಳಸುತ್ತಾರೆ. ಆದರೆ ಆ ಬಳುವಳಿಯನ್ನು ನೀವು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತೀರಿ ಎಂಬುದು ಪ್ರಶ್ನೆ. ನಮಗೆ ಪೌರಾತ್ಯ ಕಲಾವಿದರಿಗೆ ಪಾಶ್ಚಾತ್ಯರ ಸಂಪ್ರದಾಯಗಳೂ ಹಾಗೇ ಕಾಣಿಸುತ್ತವೆ. ಅವು ಸಂಪ್ರದಾಯವನ್ನು ಮೀರಿ ಜಾಗತಿಕ ನೆಲೆಯಲ್ಲಿ ಮಾನವೀಯ ಕಳಕಳಿಗಳನ್ನು ತೋರಿಸಿದಾಗ ನಮಗವು ಸೃಜನಾತ್ಮಕವಾಗಿ ತಟ್ಟುತ್ತವೆ. ಇಲ್ಲಿ ವಿಷಯ ಇರುವುದು ನಮ್ಮ ಸಾಂಪ್ರದಾಯಿಕ ಬಳುವಳಿಗಳನ್ನು ನಾವು ನಮ್ಮ ಈವತ್ತಿನ ಕಳವಳಗಳಿಗೆ ಹೇಗೆ ಬಳಸಿಕೊಳ್ಳುತ್ತಿದ್ದೇವೆ ಮತ್ತವು ಹೇಗೆ ಹೊಸ ರೀತಿಯಲ್ಲಿ ಅಭಿವ್ಯಕ್ತಿಗೊಳ್ಳುತ್ತವೆ ಎಂಬುದಾಗಿದೆ.” ಎಂದು ಉತ್ತರಿಸಿದ್ದರು (ಜೆರಾಲ್ಡ್ ಮ್ಯಾಟ್ ಅವರ ಇಂಟರ್ವ್ಯೂಸ್ ಪುಸ್ತಕದಲ್ಲಿ2007).

ಸೈ ಗು-ಚಾಂಗ್ ಅವರ ಒಂದು ಸಂದರ್ಶನ ಇಲ್ಲಿದೆ:

ಸೈ ಗು-ಚಾಂಗ್ ಅವರ ಸುಡುಮದ್ದು ಪರ್ಫಾರ್ಮಿಂಗ್ ಆರ್ಟ್ ಕುರಿತ ಚಿತ್ರ ಇಲ್ಲಿದೆ:

ಚಿತ್ರಗಳು

Inopportune (2004) Stage Two Cai Guo-Qiang, MASS MoCA ನಲ್ಲಿ ನಡೆದ ಪ್ರದರ್ಶನ. ಚಿತ್ರ: Kevin Kennefick

Cai Guo-Qiang: Head On (2006, Berlin) 99 ತೋಳಗಳೂ ಮತ್ತು ಗಾಜಿನ ಗೋಡೆ. ಡಚ್ ಗುಗ್ಗಿನ್ಹ್ಯಾಂ ಗ್ಯಾಲರಿ, ಬರ್ಲಿನ್ . ಚಿತ್ರ: Hiro Ihara

Heritage, (2013) 99 ಪ್ರಾಣಿಗಳ ಪ್ರತಿಕೃತಿ ಕ್ವೀನ್ಸ್ ಲ್ಯಾಂಡ್ ಆರ್ಟ್ ಗ್ಯಾಲರಿ, ಬ್ರಿಸ್ಬನ್. ಚಿತ್ರ: Natasha Harth.

Crocodile and Sun (2007) ಕಲಾವಿದನ ಸಂಗ್ರಹ ಚಿತ್ರ: Hiro Ihara

Remembrance, chapter two of Elegy: Explosion Event for the Opening of Cai Guo-Qiang: The Ninth Wave, ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಸುಡುಮದ್ದು ಕಲಾಕೃತಿ, ಚಿತ್ರ: JJY Photo,

100 foot long panoramic painting "The Bund Without Us", depicting Shanghai's riverfront

ಈ ಅಂಕಣದ ಹಿಂದಿನ ಬರೆಹಗಳು

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...