“ದೂರದಿಂದ ನದಿಯನ್ನು ಕಂಡು ಅದರ ಸೊಬಗು—ಹರಿವುಗಳನ್ನು ದಾಖಲಿಸುವುದು ಒಂದು ಬಗೆಯಾದರೆ ನದಿಯೊಳಗೇ ಹುಟ್ಟುಹಾಕಿಕೊಂಡು ಅದರ ಭಾಗವಾಗಿಯೇ ಸಾಗುತ್ತಾ ಅದರ ಪರಿಕ್ರಮಣವನ್ನು ಪರಿಭಾವಿಸುವುದು ಮತ್ತೊಂದು ಬಗೆ,”ಎನ್ನುತ್ತಾರೆ ಶ್ರೀನಿವಾಸ ಪ್ರಭು. ಅವರು ಸತ್ಯವತಿ ಮೂರ್ತಿ ಅವರ “ಬಿಳಿಯರ ಬದುಕು” ಕೃತಿ ಕುರಿತು ಬರೆದ ವಿಮರ್ಶೆ.
ಸತ್ಯವತಿ ಮೂರ್ತಿ ಅವರು ಕನ್ನಡ—ಇಂಗ್ಲೀಷ್ ಸಾಹಿತ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾರಷ್ಟೇ ಅಲ್ಲ, ಕೃತಿ ರಚನೆಯಲ್ಲೂ ಸೃಜನಾತ್ಮಕವಾಗಿ ತೊಡಗಿಕೊಂಡಿದ್ದಾರೆ. ಅವರ ಇತ್ತೀಚಿನ ಕೃತಿ—'ಬಿಳಿಯರ ಬದುಕು'. ಕೃತಿಯ ಹೆಸರೇ ಅದರ ಹೂರಣವೇನೆಂಬುದನ್ನು ಸ್ಪಷ್ಟಪಡಿಸಿಬಿಡುವುದರಿಂದ ಅದನ್ನು ವಿವರಿಸುವ ಅಗತ್ಯವಿಲ್ಲ. ಸತ್ಯವತಿಯವರು ಹಲವಾರು ವರ್ಷಗಳಿಂದ ಇಂಗ್ಲೆಂಡ್ ನಲ್ಲಿ ನೆಲೆಸಿದ್ದು ಇಲ್ಲಿಯ ಭೌಗೋಳಿಕತೆ, ಚರಿತ್ರೆಗಳ ಜತೆಗೇ ಜನಮಾನಸವನ್ನೂ ಹತ್ತಿರದಿಂದ ಕಂಡು ಅರ್ಥ ಮಾಡಿಕೊಂಡಿರುವಂಥವರು. ದೂರದಿಂದ ನದಿಯನ್ನು ಕಂಡು ಅದರ ಸೊಬಗು—ಹರಿವುಗಳನ್ನು ದಾಖಲಿಸುವುದು ಒಂದು ಬಗೆಯಾದರೆ ನದಿಯೊಳಗೇ ಹುಟ್ಟುಹಾಕಿಕೊಂಡು ಅದರ ಭಾಗವಾಗಿಯೇ ಸಾಗುತ್ತಾ ಅದರ ಪರಿಕ್ರಮಣವನ್ನು ಪರಿಭಾವಿಸುವುದು ಮತ್ತೊಂದು ಬಗೆ. ಸತ್ಯವತಿಯವರದು ಈ ಎರಡನೆಯ ವರ್ಗ. ಬಿಳಿಯರ ಬದುಕನ್ನು ಒಬ್ಬ ವೀಕ್ಷಕಳ ಹಾಗೆ ದೂರದಿಂದ ಕಂಡು ವಿವರಗಳನ್ನು ವಸ್ತುನಿಷ್ಠವಾಗಿ ದಾಖಲಿಸುವ ಒಂದು ವಿಸ್ತೃತ ವರದಿಯನ್ನು ನೀಡುವಷ್ಟಕ್ಕೆ ತಮ್ಮ ಬರಹವನ್ನು ಅವರು ಮಿತಿಗೊಳಿಸಿಕೊಳ್ಳುವುದಿಲ್ಲ. ಈ ಸಿದ್ಧ ಸಾಮಾನ್ಯ ಚೌಕಟ್ಟುಗಳ ಆಚೆಗೆ ಚಾಚಿರುವ ಒಂದು ಜನಾಂಗದ ಬದುಕನ್ನು, ಒಂದು ಸಂಸ್ಕೃತಿಯನ್ನು, ಒಂದು ನಾಗರಿಕತೆಯನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಾ ಸ್ವಾರಸ್ಯಕರವಾಗಿ ಓದುಗರಿಗೆ ತಲುಪಿಸುತ್ತಾ ಹೋಗುತ್ತಾರೆ ಸತ್ಯವತಿಯವರು. ಈ ಕೃತಿಯ ಗೆಲುವಿರುವುದೂ ಇಲ್ಲಿಯೇ ಎಂದು ನಾನು ಭಾವಿಸುತ್ತೇನೆ. ವರದಿಗಳನ್ನು ಸ್ವಾರಸ್ಯಕರ ಕಥನವಾಗಿಸುವ ಕಲೆ ಸತ್ಯವತಿಯವರಿಗೆ ಸಿದ್ಧಿಸಿದೆ. ಈ ಕೃತಿಯ ಮತ್ತೂ ಹಲವಾರು ಧನಾತ್ಮಕ ಅಂಶಗಳನ್ನು ಗಮನಿಸುವುದಾದರೆ:
ಬ್ರಿಟಿಷರ ಸಂಸ್ಕೃತಿ—ಜೀವನಕ್ರಮವನ್ನು ಪರಿಶೀಲಿಸುತ್ತಲೇ ನಮ್ಮ ಭಾರತೀಯ ಸಂಸ್ಕೃತಿ—ಜೀವನಕ್ರಮಗಳೊಂದಿಗೆ ಒಂದು ತೌಲನಿಕ ಸಮೀಕ್ಷೆಯನ್ನೂ ನಡೆಸುತ್ತಾ ಹಲವಾರು ಒಳನೋಟಗಳನ್ನು ನೀಡುತ್ತಾ ಹೋಗುತ್ತಾರೆ ಲೇಖಕಿ. ಅಂತೆಯೇ ಒಂದು ವಿಷಯವನ್ನು ಕುರಿತು ಚರ್ಚಿಸುತ್ತಲೇ ಪ್ರಾಸಂಗಿಕವಾಗಿ ಬರುವ ಹತ್ತು ಹಲವು ಸಂಗತಿಗಳ ಕಡೆಗೂ ನಮ್ಮ ಗಮನವನ್ನು ಸೆಳೆಯುತ್ತಾ ಹೋಗುತ್ತಾರೆ. ಮೂಢನಂಬಿಕೆಗಳ ಬಗ್ಗೆ ಮಾತಾಡುತ್ತಿರುವಾಗಲೇ ವರ್ಡ್ಸ್ ವರ್ತ್ ಕವಿಯ ಕಾವ್ಯಜಗತ್ತಿನ ಮಿಂಚೊಂದು ಹೊಳೆದುಬಿಡುತ್ತದೆ! ಮೂಢನಂಬಿಕೆಗಳ ಬಗ್ಗೆ ಮಾತಾಡುತ್ತಲೇ ಅವುಗಳ ಹಿಂದೆ ಇದ್ದಿರಬಹುದಾದ ವೈಜ್ಞಾನಿಕತೆಯನ್ನು ಹುಡುಕುವ ಕೆಲಸವನ್ನೂ ಅವರ ಚಿಕಿತ್ಸಕ ಮನಸ್ಸು ಮಾಡುತ್ತದೆ! ಕುಕ್ಕೆಯಲ್ಲಿ ಅಮ್ಮನ ವಿಗ್ರಹವನ್ನಿಟ್ಟುಕೊಂಡು ಕೋಲು ತಿರುಗಿಸುತ್ತಾ ಬರುವ ಕೊರವಂಜಿಯರೊಂದಿಗೆ ಅಲ್ಲಿನ ಜಿಪ್ಸಿ romanies ರನ್ನು ಹೋಲಿಸಿ ಹೇಳಿರುವುದು ಬಲು ಸ್ವಾರಸ್ಯಕರ. "ಈ ಮೂಢನಂಬಿಕೆಗಳ ಬಗ್ಗೆ ಬರೆಯುತ್ತಾ ಹೋದಷ್ಟೂ ದ್ರೌಪದಿಯ ವಸ್ತ್ರದಂತೆ ಉದ್ದವಾಗುತ್ತಿದೆ! ಇಲ್ಲೇನೂ ಯಾವ ದುಃಶಾಸನನೂ ಇಲ್ಲ..ಆದರೂ ಬರೆಯುತ್ತಾ ಹೋದಷ್ಟೂ ಹಿಗ್ಗುತ್ತಿದೆ" ಎನ್ನುವಲ್ಲಿರುವ ಲೇಖಕಿಯ ಸೂಕ್ಷ್ಮ ನೋಟ—ಹಿತ ಹಾಸ್ಯಪ್ರಜ್ಞೆಗಳು ಮುದಗೊಳಿಸುತ್ತವೆ.
ಈ ಕೃತಿಯಲ್ಲಿ ಒಟ್ಟು 21 ಅಧ್ಯಾಯಗಳಿದ್ದು ಅವುಗಳ ಮೂಲಕ ಒಂದಿಡೀ ಜೀವನಕ್ರಮವನ್ನೂ ಅದರೊಂದಿಗೇ ಮಿಳಿತವಾಗಿರುವ ಅವರ ಆಚಾರ ವಿಚಾರಗಳನ್ನೂ ಕೌಟುಂಬಿಕ ಮೌಲ್ಯ ಹಾಗೂ ಸಂಪ್ರದಾಯಗಳನ್ನೂ ಮದುವೆ ಇತ್ಯಾದಿ ಸಾಮಾಜಿಕ ಒಪ್ಪಂದಗಳನ್ನೂ ಅಲ್ಲಿನ ಒಂದಷ್ಟು ಪ್ರೇಕ್ಷಣೀಯ ಸ್ಥಳಗಳನ್ನೂ ನಮಗೆ ಪರಿಚಯಿಸುತ್ತಾ ಹೋಗುತ್ತಾರೆ ಸತ್ಯವತಿ ಅವರು.
ಬಿಳಿಯರ ಹಬ್ಬಗಳ ಬಗ್ಗೆ ಅವುಗಳ ಆಚರಣೆಯ ವಿಧಿ ವಿಧಾನಗಳ ಬಗ್ಗೆ ಸಾಕಷ್ಟು ವಿವರಗಳನ್ನು ನೀಡಿದ್ದಾರೆ. ಅಂತೆಯೇ ಕ್ಯಾಲೆಂಡರ್ ಕುರಿತಾಗಿ ನೀಡಿರುವ ವಿವರಗಳೂ ಸ್ವಾರಸ್ಯಕರವಾಗಿವೆ.
ಬಿಳಿಯರ ಮದುವೆಯ ಬಗ್ಗೆ ಎರಡು ಭಾಗಗಳಲ್ಲಿ ಬರೆದಿರುವುದಂತೂ ಅತ್ಯಂತ ಸ್ವಾರಸ್ಯಕರವಾಗಿದ್ದು ಅನೇಕ ವಿಶಿಷ್ಟ ಹಾಗೂ ಕುತೂಹಲಕಾರಿ ಮಾಹಿತಿಗಳನ್ನು ನಮಗೆ ನೀಡುತ್ತದೆ. ಪ್ರೀತಿ—ಪ್ರೇಮ—ಮದುವೆಗಳ ಬಗ್ಗೆ ಮಾತಾಡುತ್ತಾ ಶತಶತಮಾನಗಳಿಂದ ಈ ಸಾಮಾಜಿಕ ವ್ಯವಸ್ಥೆ—ಒಪ್ಪಂದ ಬೆಳೆದುಬಂದಿರುವ ರೀತಿಯನ್ನೂ ಅದು ದಾಟಿಬಂದ ಹಲಹತ್ತು ಅವಸ್ಥಾಂತರಗಳನ್ನೂ ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ ಸತ್ಯವತಿಯವರು. ಬ್ರಿಟಿಷ್ ಯುವಕ—ಯುವತಿಯರಿಗೆ ಪಕ್ಕದ ಸ್ಕಾಟ್ಲೆಂಡ್ ನ ಗೆಟ್ನ ಗ್ರೀನ್ ಎಂಬ ಗ್ರಾಮ ಹೇಗೆ ಆಶ್ರಯತಾಣವಾಗಿತ್ತು ಎಂಬುದನ್ನು, ಆ ಗ್ರಾಮದಲ್ಲಿ ಒಬ್ಬ ಕಮ್ಮಾರನೇ ಲಗ್ನದ ವಿಧಿವಿಧಾನಗಳನ್ನು ನಡೆಸುವ ಪುರೋಹಿತನಾದ ಪ್ರಸಂಗವನ್ನು ಲೇಖಕಿ ವಿವರಿಸಿರುವ ಬಗೆ ಮುದ ನೀಡುತ್ತದೆ.
ನಮ್ಮ ಹಾಗೂ ಬ್ರಿಟಿಷರ ಕೌಟುಂಬಿಕ ಮೌಲ್ಯಗಳನ್ನು ಲೇಖಕಿ ತೌಲನಿಕವಾಗಿ ವಿಶ್ಲೇಷಿಸಿರುವ ಬಗೆ ಪ್ರಬುದ್ಧವಾಗಿದೆ.
ಬ್ರಿಟಿಷ್ ಸರಕಾರದ ಈಗಿನ ಕಾರ್ಯವೈಖರಿ ಹಾಗೂ ತನ್ನ ಪ್ರಜೆಗಳನ್ನು — ಅವರು ವಲಸಿಗರಾಗಿದ್ದರೂ ಸಹಾ—ಅದು ಜತನದಿಂದ ನೋಡಿಕೊಳ್ಳುವ ರೀತಿಯನ್ನು ಶ್ಲಾಘಿಸುತ್ತಲೇ ನಮ್ಮಲ್ಲಿರುವ ವರ್ಣವ್ಯವಸ್ಥೆ—ಅವರಲ್ಲಿರುವ ವರ್ಗವ್ಯವಸ್ಥೆಯ ಪಿಡುಗುಗಳನ್ನು ದೊಡ್ಡದನಿಯಲ್ಲೇ ಟೀಕಿಸುತ್ತಾರೆ ಲೇಖಕಿ. ಅಂತೆಯೇ ದಾಸ್ಯಮನೋಭಾವದ ನಮ್ಮವರ ಕೀಳರಿಮೆಯ ಕುರಿತಾಗಿ ಚಾಟಿ ಬೀಸುವುದನ್ನೂ ಮರೆಯುವುದಿಲ್ಲ.
ಒಟ್ಟಿನಲ್ಲಿ ನಾನು ಮೊದಲೇ ಹೇಳಿದಂತೆ ಇದೊಂದು ಡಾಕ್ಯುಮೆಂಟರಿ ಮಾದರಿಯ ವರದಿಯಾಗದೇ ಸತ್ಯವತಿಯವರ ಸೃಜನಶೀಲತೆಯ ಕಲಾತ್ಮಕ ಸ್ಪರ್ಶದಿಂದ ಒಂದು ಸಂಸ್ಕೃತಿಯ ಅನಾವರಣವೂ ಎರಡು ಸಂಸ್ಕೃತಿಗಳ ತೌಲನಿಕ ಸಮೀಕ್ಷೆಯೂ ಆಗಿ ನಮ್ಮನ್ನು ಆವರಿಸಿಕೊಳ್ಳುವ ಕೃತಿಯಾಗಿದೆ. ಇಂಥದೊಂದು ಸಾರ್ಥಕ ಕೃತಿಯನ್ನು ಕನ್ನಡ ಓದುಗನಿಗೆ ನೀಡಿದ ಸತ್ಯವತಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
"ಅರ್ಜುನ್ ಯುವ ಬರಹಗಾರ ಅನ್ನುವುದಕ್ಕಿಂತ ಈಗಿನ ಯುವ ಜನತೆಗೆ ಏನು ಬೇಕು ಎಂಬ ನಾಡಿಮಿಡಿತ ಬಲ್ಲ ಬರಹಗಾರ. ಹಾಗಾಗಿ ಅ...
“ಗ್ರಾಮ್ಯ ಸೊಗಡಿನ ಭಾಷೆಯನ್ನು ಬಳಸಿರುವುದು ಈ ಕೃತಿಗೆ ಪರಿಪೂರ್ಣತೆಯನ್ನು ತಂದುಕೊಟ್ಟಿದೆ. ಅಣ್ಣಯ್ಯ, ಅಮ್ಮಯ್ಯ, ...
“ಒಟ್ಟಾರೆಯಾಗಿ ಇಲ್ಲಿ ವಿಕಾಸ್ ಅವರು ಸರಳವಾಗಿ, ಸುಲಭವಾಗಿ ಮತ್ತು ಅರ್ಥಪೂರ್ಣವಾಗಿ ಎಲ್ಲಾ ವರ್ಗದ ಓದುಗರಿಗೂ ಇಷ್ಮ...
©2025 Book Brahma Private Limited.