“ಗ್ರಾಮ್ಯ ಸೊಗಡಿನ ಭಾಷೆಯನ್ನು ಬಳಸಿರುವುದು ಈ ಕೃತಿಗೆ ಪರಿಪೂರ್ಣತೆಯನ್ನು ತಂದುಕೊಟ್ಟಿದೆ. ಅಣ್ಣಯ್ಯ, ಅಮ್ಮಯ್ಯ, ಅಕ್ಕಯ್ಯ ಎಂಬ ಸಂಬಂಧಗಳ ಹೆಸರು ಎದೆಯಾಳಕ್ಕೆ ಇಳಿಯುತ್ತವೆ,” ಎನ್ನುತ್ತಾರೆ ಮಂಜುನಾಥ ಕುಣಿಗಲ್. ಅವರು ಕಾವ್ಯ ವನಗೂರು ಅವರ “ಕೃತ” ಕೃತಿ ಕುರಿತು ಬರೆದ ವಿಮರ್ಶೆ.
ಈ ತೊಂಭತ್ತರ ದಶಕದ ನೆನಪಿನ ಮಾಯೆ ಬಿಟ್ಟೇನೆಂದರೂ ಬಿಡುವ ಹಾಗೆ ಕಾಣುತ್ತಿಲ್ಲ. ಈಗ ‘ಕೋವಿಡ್ಡಿನ ಮೊದಲು ಮತ್ತು ನಂತರ’ ಎಂಬ ಕಾಲಘಟ್ಟ ಹೇಗೆ ಸೃಷ್ಟಿಯಾಗಿದೆಯೋ ಹಾಗೆಯೇ ಹಿಂದೆ ‘ಬಾಬರಿ ಮಸೀದಿ ಕೆಡವಿದ ಹಿಂದೆ ಮತ್ತು ನಂತರ’ ಎಂಬ ಕಾಲಘಟ್ಟವಿತ್ತು. ಬಾಬರಿ ಮಸೀದಿ ಕೆಡವಿದ ನಂತರ ಈ ದೇಶ ಹಲವಾರು ತಲ್ಲಣಗಳನ್ನು ಅನುಭವಿಸಿದೆ. ದೂರದಲ್ಲೆಲ್ಲೋ ಆದ ಪ್ರಮಾದವೊಂದು ಗಲಭೆ ರೂಪಹೊದ್ದು ಎಲ್ಲೆಲ್ಲೂ ಹರಡಿತ್ತು. ನಗರಗಳಿಂದಾಚೆಗೆ ಪುಟ್ಟ ಪಟ್ಟಣ, ಹಳ್ಳಿ, ಕೊನೆಗೆ ಕಾಡಿನಂಚಿನ ಊರುಗಳಿಗೆ ಕಾಡ್ಗಿಚ್ಚಿನಂತೆಯೇ ಹಬ್ಬಿ ಎಲ್ಲರನ್ನೂ ಹೈರಾಣಾಗಿಸಿತ್ತು. ಅವು ನಮ್ಮ ಲವಲವಿಕೆಯ ಬಾಲ್ಯದ ದಿನಗಳು. ಸುತ್ತಮುತ್ತ ಏನಾಗುತ್ತಿದೆಯೆಂಬ ಸಂಪೂರ್ಣ ಅರಿವು ಇರದಿದ್ದ ದಿನಗಳು. ನನ್ನ ‘ಶಿವಾಜಿ ಟೆಂಟ್’ ಪುಸ್ತಕದಲ್ಲಿರುವ ‘ನವೀದನ ಕುದುರೆ ಸವಾರಿ’ ಎಂಬ ಕಥೆ ಅದೇ ವಸ್ತುವುಳ್ಳದ್ದು. ಶತಮಾನಗಳಿಂದ ಒಂದೇ ಜಾಗದಲ್ಲಿ ಹುಟ್ಟಿಬೆಳೆದು ಅನ್ಯೋನ್ಯವಾಗಿ ಬಾಳಿ-ಬದುಕುತ್ತಿದ್ದ ನಾನಾ ಸ್ತರದ ಜನರು ಇದ್ದಕ್ಕಿದ್ದ ಹಾಗೆ ವಿನಾಕಾರಣ ಕತ್ತಿಮಸೆಯಲು ಶುರುಮಾಡಿದ ವಿಲಕ್ಷಣ ಕಥೆಯದು.
ಪಶ್ಚಿಮಘಟ್ಟದ ಕಾಡಂಚಿನ ಊರಲ್ಲಿ ನಡೆದ ಇಂಥದೇ ಒಂದು ರೋಚಕ ಕಥೆಯನ್ನು ಹೇಳಲು ಹೊರಟು, ಅಲ್ಲಿನ ಪ್ರಕೃತಿ ಸೌಂದರ್ಯ, ಜನ-ಜೀವನ, ತೊಂಭತ್ತರ ದಶಕದ ಆ ದಿನಗಳು, ಮಲೆನಾಡ ಸಂಸ್ಕೃತಿ, ಶಾಲೆ, ಪೇಟೆ, ಮದುವೆ, ಗದ್ದೆ, ಸೈಕಲ್ಲು, ಆಕರ್ಷಣೆಯ ಹುಡುಗ/ಹುಡುಗಿ, ಸಾಕುನಾಯಿ, ಸಂಬಂಧಗಳು, ಊಟ, ಜಾತ್ರೆ, ಮನೆ, ಮಾಡು, ಕಾಡು ಹೀಗೆ ಎಲ್ಲವನ್ನೂ ಒಂದು ಬಾರಿ ಸುತ್ತಿಸಿಕೊಂಡು ಬಂದು ಕೊನೆಗೆ ಕಥೆ ಏನಾಯ್ತು ಎಂದು ಹೇಳುವ ‘ಕಾವ್ಯ ವನಗೂರು’ ಆವರ ‘ಕೃತ’ ಎಂಬ ಈ ಕೃತಿ ಚಿಕ್ಕದಾಗಿಯೂ ಚೊಕ್ಕವಾಗಿಯೂ ಇದೆ. ಮಲೆನಾಡಿನ ಅವರ ಭಾಷೆ, ಊಟ ಮತ್ತು ಕಾಡಿನ ಪರಿಸರವನ್ನು ಕೊಂಚ ಬದಲಾಯಿಸಿಬಿಟ್ಟರೆ ಅದು ನಮ್ಮ ಊರಿನದೇ ಕಥೆ, ನಮ್ಮ ಊರಿನಂಥದೇ ಎಲ್ಲಾ.
ಯಾರದ್ದೇ ಆಗಿರಲಿ, ಬಾಲ್ಯದ ಮಧುರ ನೆನಪುಗಳು ಅತ್ಯಂತ ಆಪ್ತವಾಗಿ ದಾಖಲಾಗುತ್ತವೆ. ಈ ಕೃತಿಯಲ್ಲಿಯೂ ಅದು ನಿಚ್ಚಳವಾಗಿ ಕಾಣುತ್ತದೆ. ಸಕಲೇಶಪುರ ಸುತ್ತಲಿನ ಗ್ರಾಮ್ಯ ಸೊಗಡಿನ ಭಾಷೆಯನ್ನು ಬಳಸಿರುವುದು ಈ ಕೃತಿಗೆ ಪರಿಪೂರ್ಣತೆಯನ್ನು ತಂದುಕೊಟ್ಟಿದೆ. ಅಣ್ಣಯ್ಯ, ಅಮ್ಮಯ್ಯ, ಅಕ್ಕಯ್ಯ ಎಂಬ ಸಂಬಂಧಗಳ ಹೆಸರು ಎದೆಯಾಳಕ್ಕೆ ಇಳಿಯುತ್ತವೆ. ನಾವು ಮಲೆನಾಡಿನಲ್ಲಿ ಹುಟ್ಟಿ-ಬೆಳೆದಿಲ್ಲವಲ್ಲಾ ಎಂದು ತುಸು ಕರುಬುವಷ್ಟು ಅಲ್ಲಿನ ಚಿತ್ರಣವನ್ನು ಲೇಖಕಿಯು ಚೆಂದ ಕಟ್ಟುಕೊಟ್ಟಿದ್ದಾರೆ. ಕಥೆಗೊಂದು ಸಾದ್ಯಂತ ಕ್ಲೈಮಾಕ್ಸ್ ಸಿಕ್ಕಿದೆಯಾದರೂ ಅದು ಇನ್ನೇನೋ ಪ್ರಮಾದಕ್ಕೆ ಮುನ್ನುಡಿ ಎಂಬಂತೆ ಧ್ವನಿಸಿ ಮುಂದೆ ಇನ್ನೊಂದು ಪುಸ್ತಕ ಬರಬಹುದೆಂಬ ಸಾಧ್ಯತೆಯನ್ನು ಉಳಿಸಿಕೊಂಡಿದೆ.
‘ಇಲ್ಲಿ ಮಹತ್ತರವಾದದ್ದೇನನ್ನೋ ಹುಡುಕಲು ಹೋಗಬೇಡಿ, ಸಿಕ್ಕರೆ ಉಡಿಗೆ ತುಂಬಿಕೊಳ್ಳಿ’ ಎಂಬ ಆಂಟಿಸಿಪೇಟರಿ ಬೇಲನ್ನು ಲೇಖಕಿಯು ಆರಂಭದಲ್ಲೇ ತೆಗೆದುಕೊಂಡಿರುವುದರಿಂದ ನಾನು ಯಾವುದೇ ಕೊಸರನ್ನು ಹುಡುಕಲು ಹೋಗಿಲ್ಲ.
ಆದರೆ ಅನೇಕ ವಿಶಿಷ್ಟ ಸಂಗತಿಗಳು ಅಲ್ಲಲ್ಲಿ ಕಾಣಸಿಗುವುದಂತೂ ದಿಟ. ಒಂದು ಲವಲವಿಕೆಯ ಓದಿಗೆ ಎಲ್ಲಾ ರೀತಿಯಲ್ಲೂ ಹೇಳಿಮಾಡಿಸಿದ ಕೃತಿ ‘ಕೃತ’.
ಅಲೆಮಾರಿಯಾದ ನಾನು ಹಲವಾರು ಬಾರಿ ಬಿಸ್ಲೆಘಾಟಿನ ರಮ್ಯದಾರಿಯಲ್ಲಿ ಬೈಕಿನಲ್ಲಿ ಒಬ್ಬನೇ ತಿರುಗಾಡಿದ್ದೇನೆ. ಮೈಸೂರಿನಿಂದ ಕುಶಾಲನಗರ, ಸೋಮವಾರಪೇಟೆ, ಮಲ್ಲಳ್ಳಿ ಫಾಲ್ಸ್, ಕೂಡುರಸ್ತೆ ಅಲ್ಲಿಂದ ರಿಡ್ಜ್ ದಾಟಿ ಬಿಸ್ಲೆಘಾಟಿನಲ್ಲಿ ಇಳಿದು ಕುಮಾರಪರ್ವತದ ಅನಂತತೆಯನ್ನು ಕಣ್ಣಿನಿಂದ ಮನಸ್ಸಿಗೆ ಇಳಿಸಿಕೊಂಡು ಮರಳಿ ಬಂದಿದ್ದೇನೆ. ಮುಂದಿನ ಸಲ ಅತ್ತ ಹೋದಾಗ ಕೂಡುರಸ್ತೆಯಲ್ಲಿ ಇಳಿದು ಕೈಕಂಬವನ್ನು ದಿಟ್ಟಿಸಿ ನೋಡಬೇಕು. ಬೇಬಿ ಮಸ್ತಾನ್ ಕಾಟನ್ ಫ್ಯಾಕ್ಟರಿ ಎಲ್ಲಿತ್ತು ಎಂದು ಅಲ್ಲಿಯವರನ್ನು ಕೇಳಬೇಕು. ರಿಯಾಜ್ ಭಾಯಿಯ ಬಟ್ಟೆ ಅಂಗಡಿ ನೋಡಬೇಕು. ಸಬ್ಬಮ್ಮ ದೇವಿಗೊಂದು ನಮಸ್ಕಾರ ಹಾಕಬೇಕು. ಕೃತದಲ್ಲಿ ಕಳೆದುಹೋದ ಜಾಗಗಳಲ್ಲೆಲ್ಲಾ ಅಲೆದು ಬರಬೇಕು.
"ರಾಜಮಾತೆ ಕೆಂಪನಂಜಮ್ಮಣ್ಣಿ - ಮಾದರಿ ಮೈಸೂರಿನ ತಾಯಿಬೇರು - ಈ ಪುಸ್ತಕ ಕೊಂಡು ವಾರವೇ ಆದರೂ ರೇಷ್ಮೆ ಬಟ್ಟೆಯ ಓದು ...
"ನಾನೂರು ವರ್ಷಗಳಷ್ಟು ಹಳೆಯ ಥಿಯೇಟರಲ್ಲಿ ನಾಟಕ ನೋಡಿದಾಗ ನೀನಾಸಂ ನೆನಪು, ವಿಸೀಯವರ ಇಂಗ್ಲೆಂಡ್ ಪಯಣ, ವರ್ಡ್ಸ್ ವರ...
"ಕಾವ್ಯದ ಹಿನ್ನೆಲೆ, ತತ್ವ, ಸೌಂದರ್ಯಾನುಭವವದ ಜೊತೆಗೆ ಭಾರತೀಯ ಜೀವನ ದರ್ಶನದ ಅನೇಕ ಹೊಸ ಹೊಳಹುಗಳನ್ನು ತಮ್ಮ ಚಮತ್...
©2025 Book Brahma Private Limited.