Date: 31-12-1899
Location: ಬೆಂಗಳೂರು
"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನಾಗಿ ಮಾಡುತ್ತದೆ. ಇಲ್ಲಿ ನಡೆಯುವ ಅನುಕ್ಷಣದ ವ್ಯಾಪಾರಗಳನ್ನು ಒಳಗು ಮಾಡಿಕೊಂಡು ಅದಕ್ಕೊಂದು ಅಸ್ಮಿತೆ ತುಂಬುವ ಕಾವ್ಯ ಸೌಂದರ್ಯ ಇವರದು," ಎನ್ನುತ್ತಾರೆ ಅಂಕಣಕಾರ ಹಳೆಮನೆ ರಾಜಶೇಖರ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ‘ನಾ. ಮೊಗಸಾಲೆ ಅವರ ಕಾವ್ಯ’ ಕುರಿತು ಬರೆದಿರುವ ಲೇಖನ.
ಇದ್ದದ್ದು ಇಲ್ಲದ್ದು ಎಲ್ಲ ಸೇರಿ
ನಕ್ಷತ್ರದಿಂದ ಇಳಿದಂತೆ ಬೆಳಕು
ಧರೆಗೆ
ಆಮೇಲೆ ಕಾಣದ ಹಾಗೆ ಆ ಬೆಳಕು
ಮರಳಿದ ಹಾಗೆ ಆಕಾಶಕ್ಕೆ
ಅನುಕ್ಷಣವೂ ಹೊಸತಕ್ಕೆ ತುಡಿಯುವ ನಾ. ಮೊಗಸಾಲೆಯವರು ಕಳೆದ ಒಂದು ವರ್ಷದಲ್ಲಿ ಹೊಸ ಬಗೆಯ ಕಾವ್ಯವನ್ನು ಕಟ್ಟಿದ್ದಾರೆ. ಗೋಪಾಲಕೃಷ್ಣ ಅಡಿಗ, ಜಿ. ಎಸ್. ಶಿವರುದ್ರಪ್ಪ, ಚನ್ನವೀರ ಕಣವಿ, ಕೆ.ಎಸ್. ನರಸಿಂಸ್ವಾಮಿ, ಕೆ.ಎಸ್. ನಿಸಾರ ಅಹ್ಮದ್‌ರ ಕಾವ್ಯ ಎಳೆಗಳ ಜೊತೆ ಸೇರಿಕೊಳ್ಳುವ ಕಾವ್ಯ ಪ್ರಯೋಗವನ್ನು ಈ ಸಂಕಲನದಲ್ಲಿ ಮಾಡಿದ್ದಾರೆ.
ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನಾಗಿ ಮಾಡುತ್ತದೆ. ಇಲ್ಲಿ ನಡೆಯುವ ಅನುಕ್ಷಣದ ವ್ಯಾಪಾರಗಳನ್ನು ಒಳಗು ಮಾಡಿಕೊಂಡು ಅದಕ್ಕೊಂದು ಅಸ್ಮಿತೆ ತುಂಬುವ ಕಾವ್ಯ ಸೌಂದರ್ಯ ಇವರದು. ಹುಸಿ ಕಾವ್ಯ ಸೊಬಗಿನಲ್ಲಿ ಇವರಿಗೆ ನಂಬಿಕೆಯಿಲ್ಲ. ಅನುಭವದೊಂದಿಗೆ ಬೆರೆಯುವ ಪ್ರಜ್ಞೆಯೆ ಅವರಿಗೆ ಮುಖ್ಯವಾದುದು. ವಾಸ್ತವವನ್ನು ಮೀರುವ ಕಲ್ಪನೆಗಿಂತಲೂ ವಾಸ್ತವವನ್ನು ಹಸನು ಮಾಡುವ ಕಡೆ ಕಾವ್ಯದ ನೋಟವಿದೆ. ಇರುವ ಲೋಕವೇ ಅವರಿಗೆ ಪ್ರಮಾಣ. ಯಾವುದು ಅನುಭವಕ್ಕೆ ದಕ್ಕುತ್ತದೆ, ನಿಲ್ಲುತ್ತದೆ ಅದೇ ಮುಖ್ಯ. ಅದು ಚರಿತ್ರೆ, ಪುರಾಣ, ದೇವರು, ನಂಬಿಕೆ, ದೈವ, ಸಂಬಂಧ ಯಾವುದೇ ಆಗಲಿ ಜೀವದೊಂದಿಗೆ ಮಿಡಿಯಬೇಕು. ಅನುಕ್ಷಣವು ಉತ್ಕಟವಾಗಿ ಬದುಕುವುದು, ಅದನ್ನು ದಾಟಿಸುವುದರಲ್ಲಿಯೇ ಕಾವ್ಯದ ತಲ್ಲೀನತೆ ಇದೆ. ಕಾವ್ಯ ಪ್ರಜ್ಞೆಯ ಕುತ್ತಿಗೆ ಹಿಚುಕಿ ಅದನ್ನು ಮೌನವಾಗಿಸಲು ಜಗತ್ತು ಪ್ರಯತ್ನ ಮಾಡುತ್ತದೆ. ಆದರೆ ಕಾವ್ಯ ಪ್ರಜ್ಞೆಯ ಹಟವು ಕಡಿಮೆಯದಲ್ಲ. ಈ ಪ್ರಜ್ಞೆಯ ಮೌನವೂ ಕೂಡ ಕವಿತೆಯಾಗಬಲ್ಲದು. ಈ ಮೌನದ ಒಳಗಿನ ಕರ್ಷಣವನ್ನು ಕಾವ್ಯದ ಬೆಡಗಿನಲ್ಲಿ ಮಾತಾಗಿಸುತ್ತಾರೆ. ಭೌತಿಕ ಜಗತ್ತಿನ ಪ್ರತಿಯೊಂದು ಗೋಚರ ವಸ್ತುಗಳು ಕಾವ್ಯದ ನೆಲೆಯನ್ನು ಪಡೆಯುತ್ತವೆ. ಇದರೊಂದಿಗೆ ಮನುಷ್ಯರ ಲೋಕವೂ ಅಷ್ಟೇ ತದಾತ್ಮ್ಯತೆ ಪಡೆದುಕೊಳ್ಳುತ್ತದೆ. ಬದಲಾಗುವ ಬದುಕಿನ ಪರಿಣಾಮಗಳು ಇವರ ಕಾವ್ಯವನ್ನು ಕಂಗೆಡಿಸದೆ, ತನ್ಮಯತೆಯ ಸಂವಾದವನ್ನು ಹುಟ್ಟುಹಾಕುತ್ತವೆ.
ಭೌತಿಕ ಪ್ರಪಂಚ ರೂಪ ತಾಳಿ ಕೂಡ ಮೂಲ ನೆಲೆಯನ್ನು ಮರೆಯದ ಉಪಮಾನ, ಉಪಮೇಯವನ್ನು ಮೀರಿ ತಾನೇ ಒಂದು ಕಾವ್ಯವಾಗುವ ವಿಸ್ಮಯ ಈ ಸಂಕಲನದಲ್ಲಿದೆ. ಮೊಗಸಾಲೆಯವರ ಪ್ರತಿಭೆ ಸದ್ದಿಲ್ಲದೆ ಪ್ರೌಢವಾಗುವ, ಪರಿಣತವಾಗುವ, ಊರ್ಧ್ವಗಾಮಿಯಾಗುವ, ಕನಸನ್ನು ನನಸಾಗಿಸಿಕೊಳ್ಳುವ ಮಾಂತ್ರಿಕತೆ ಹೊಸ ಲಯವನ್ನು ಪಡೆದಿದೆ.
ಇಲ್ಲಿನ ಹಲವು ಪದ್ಯಗಳು ಬಿಡಿ ಬಿಡಿ ರಚನೆಗಳಂತೆ ಕಂಡರೂ ಅವುಗಳಲ್ಲಿ ಒಳಸಂಬಂಧದ ಸೆಲೆಯಾಗಿ ತಾತ್ವಿಕ ಚಿಂತನೆ ವಿಸ್ತರಿಸಿಕೊಂಡಿದೆ. ಜಿಜ್ಞಾಸೆಯ ವೃಕ್ಷ ಮೈತಳೆದಂತೆ ಇವರ ಕವಿತೆಗಳ ಸೃಷ್ಟಿ ಇದೆ. ಇವರ ಕವನಗಳಲ್ಲಿ ಲೋಕ ಪದಾರ್ಥಗಳ ಮತ್ತು ಭಾವನೆಗಳ ಅಸಂಖ್ಯಾತ ದಾಖಲೆಗಳು ಮಿಕ್ಕು ಮೀರಿ ಬಳಕೆಯಾಗುವುದನ್ನು ಗುರುತಿಸಬಹುದು. ಮನುಷ್ಯನ ಕೇಡುಗಳನ್ನು ಶೋಧಿಸುತ್ತಲೇ ಅದನ್ನು ಮಾನವೀಯಗೊಳಿಸುವ ತುಡಿತ ತೀವ್ರವಾಗಿ ಇವರ ಕಾವ್ಯದಲ್ಲಿದೆ.
ಅನುಭವನಿಷ್ಠತೆಯೆ ಕೇವಲ ಭಾಷೆಯ ಲೀಲೆಯಾಗಿರುವದಿಲ್ಲ, ಅಲಂಕಾರವೂ ಆಗಿರುವದಿಲ್ಲ. ವ್ಯಕ್ತಿತ್ವದೊಳಗಿನ ಕಿಚ್ಚಿಗೆ, ಉಜ್ವಲತೆಗೆ ಸಂಬಂಧಿಸದ್ದಾಗಿರುತ್ತದೆ. ತಾನೇ ಉರುವಲಾಗಿ, ತಾನೇ ಬೆಂಕಿಯಾಗಿ, ತಾನೇ ಸುಟ್ಟುಕೊಂಡು ತನಗಾಗಿ ನುಡಿದ ಮಾತು ಪುಣ್ಯವಿದ್ದವರಿಗೆ ಬೆಳಕು ತೋರುವ ಮಾತಾಗುತ್ತದೆ. ಇಂತಹ ಅನೇಕ ಕಾವ್ಯ ಜೀವಗಳು ಈ ಸಂಕಲನದಲ್ಲಿವೆ.
ರೂಪ ರೂಪಕಗಳಲ್ಲಿ ಹಿಡಿದಿಡಲು ನಿನ್ನ ಬಯಸಿದೆ
ಸಿಗಲಿಲ್ಲ ನೀನು
ಕುಳಿತಿರುವೆ ಗರಿಕೆ ಹುಲ್ಲಿನ ಮೇಲೆ ಮಂಜಾಗಿ (ಪ್ರಾರ್ಥನೆ)
ಮನುಷ್ಯನ ಪ್ರಜ್ಞೆ ಸೃಷ್ಟಿಸುವ ಸಂಕೇತಗಳನ್ನು ಇವರ ಕವಿತೆಗಳು ಒಪ್ಪುವುದಿಲ್ಲ. ಬಹಳ ಸಹಜವಾದ ಭಾವಲೀಲೆಗಳನ್ನು ತನ್ನರವಿನ ಭಾಗವಾಗಿಸಿಕೊಳ್ಳುತ್ತವೆ. ಕಾವ್ಯ ಮತ್ತು ದೈವತ್ವ ಬೇರೆಯಲ್ಲ. ಒಂದರೊಳಗೊಂದು ಬೆರೆತ ನೀರು ಇಬ್ಬನಿ. ಆ ಭಾವದಲ್ಲಿಯೇ ದೇವರ ಸಾಕ್ಷತ್ಕಾರ ಹಾಗೂ ಕಲೆಯ ದಿವ್ಯತೆ ಇದೆ ಎಂಬ ಅಚಲ ನಂಬಿಕೆ ಇವರ ಕಾವ್ಯಕ್ಕಿದೆ. ಪ್ರಾರ್ಥನೆಯ ಸೌಂದರ್ಯದ ಸಾಕಾರ ರೂಪವನ್ನು ಮಗುತನದ ಮುಗ್ಧತೆಯಲ್ಲಿ ಕಾಣುತ್ತಾರೆ.
ನೀನು ತಾಯಿಯೇ ಆಗಿದ್ದರೆ
ನಿನ್ನ ಮೊಲೆತೊಟ್ಟುಗಳಲ್ಲಿ ತುಟಿಗಳನಿಡುವೆ
ಸಮುದ್ರ ಬರಲಿ ಅಲ್ಲಿಗೆ
ಎಂದು ಪ್ರಾರ್ಥನೆಯ ಸ್ವರೂಪವನ್ನು ಕಂಡುಕೊಳ್ಳುತ್ತಾರೆ. ಯಾಂತಿಕ್ರಗೊಂಡಿರುವ ಪ್ರಾರ್ಥನೆಯ ಪರಿಶುದ್ದತೆಯನ್ನು ಮನಗಾಣಿಸುವ ಲಯ ಇಲ್ಲಿದೆ. ಸಮುದ್ರ, ಕನಸು, ತಾಯಿ, ಮಗು, ಕಾಮನಬಿಲ್ಲು, ದೈವ ಈ ಕವಿತೆಯಲ್ಲಿ ಸಂಗಮಿಸಿ ಬದುಕಿನ ಋಜುತ್ವವನ್ನು ಮನಗಾಣಿಸುತ್ತದೆ.
ಬಹುತ್ವದ ಬಯಲಿಲ್ಲಿ ಬಯಲಾಗಿ ಉಳಿದಿಲ್ಲ
ಎದ್ದು ನಿಂತಿದೆ ಅಲ್ಲಿ ಬಹುಮತದ ಸೌಧ
ಕತ್ತಿಸುತ್ತಿಗೆ ಬಿಲ್ಲು ಬಾಣಗಳ ಹಿಡಿದ ಕೈ
ಕೈಲಾಗದಂತಾಗಿ ನಿಂತಿದೆ, ಅನಾಥ ! (ಪ್ರಭು, ನಿನಗೆ)
ವಾಸ್ತವದ ಕೇಡಿನ ದರ್ಶನವನ್ನು ಈ ಕವಿತೆ ಬಿಂಬಿಸುತ್ತದೆ. ಬಹುತ್ವ ಬದುಕಿನ ಕನಸಾಗಿ ಉಳಿದಿಲ್ಲ. ವೈವಿಧ್ಯತೆಯನ್ನು ಮುರುಟಿಸುವ ಹುನ್ನಾರಗಳು ಮೈ ಪಡೆದು, ಗಾಯಗಳನ್ನು ಬಿತ್ತುವ ಪ್ರಭುತ್ವಗಳು ಬೆಳೆಯುತ್ತಿವೆ. ಇದು ಸೈದ್ಧಾಂತಿಕ ಸಂಕೀರ್ಣದಂತೆ ಕಾಣುತ್ತದೆ. ಪರಂಪರಾನುಗತವಾಗಿ ಬಹುತ್ವದ ಸಂವೇದನೆಗೆ ತುಡಿಯುತ್ತಾ ಬಂದ ಕಾವ್ಯ ಅದನ್ನು ಕಾಪಿಟ್ಟುಕೊಳ್ಳುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಆ ಹೊಣೆಗಾರಿಕೆ `ಕೈಲಾಗದಂತಾಗಿ ನಿಂತಿದೆ’ ಎಂದು ಕವಿತೆ ವಿಷಾದಿಸುತ್ತದೆ.
ಅರಗಿನರಮನೆಯಲಿ ಇದ್ದು ಹೊರಬಂದಿರುವ
ಮಂದಿಯೊಂದಿಗೆ ಈಗ ಕೌರವರು ಸೇರಿದರು
ಕೃಷ್ಣನಿದ್ದರು ವ್ಯರ್ಥ, ಅವನೀಗ ಇತಿಹಾಸ
ಸೇರಿ ಹೋಗಿದ್ದಾನೆ ಅವತಾರ ತೊರೆದು (ಪ್ರಭು, ನಿನಗೆ)
ವಿಷಾದವನ್ನು ಅಮೃತವನ್ನಾಗಿ ಮಾಡುವ ಪವಾಡಗಳು ಈಗಿಲ್ಲ. ಕೌರವರನ್ನು ಎದುರಿಸುವ ಕೃಷ್ಣರೂ ಶಕ್ತಿಹೀನರಾಗಿದ್ದಾರೆ. ಅವರಿದ್ದೂ ವ್ಯರ್ಥವಾಗಿದೆ. ಮರು ಹುಟ್ಟು ಪಡೆಯದೆ ಕೃಷ್ಣ ಚರಿತ್ರೆಯಲ್ಲಿ ಹೂತು ಹೋಗಿದ್ದಾನೆ. ಅವತಾರ ತೊರೆದು ಬಣ್ಣಗೆಟ್ಟಿದ್ದಾನೆ. ಬಹುತ್ವವನ್ನು ಹುಡಿಮಾಡುವವರು ಬಣ್ಣದ ವೇಷದಲ್ಲಿ ರಂಗಿಸುತ್ತಿದ್ದಾರೆ. ಆದರೂ ಕವಿತೆ ಭರವಸೆಯನ್ನು ಬಿಟ್ಟಿಲ್ಲ. ನಿರಾಶೆಯನ್ನು ಹೊತ್ತುಕೊಂಡಿಲ್ಲ. ಪ್ರಜಾಪ್ರಭುತ್ವದಲ್ಲಿ ವೇಷ ಕಳಚುವ ಪವಾಡಗಳು ನಡೆಯುತ್ತವೆ. ಅದರಲ್ಲಿ ನವಿಲುಗರಿಗಳು ಗೂಡುಕಟ್ಟುತ್ತವೆ. ಮರಿ ಹಾಕಿ ಹೊಸ ಧ್ವನಿಯನ್ನು ಹೊರಡಿಸಬಹುದು ಎಂಬ ಭರವಸೆ ಕವಿತೆಗಿದೆ. ಸಾಮಾನ್ಯರೆಲ್ಲಾ ಶ್ರೀಕೃಷ್ಣನ ಪ್ರಜ್ಞೆಯಾಗುವ ಕನಸು ಕವಿತೆಯಲ್ಲಿ ಉಸಿರಾಡುತ್ತದೆ.
ಆದರೂ ನಿರಾಶನಲ್ಲ, ಪ್ರತಿಸಲವು ಮತಗಟ್ಟೆ
ಯಲ್ಲಿ ಹುಡುಕುವೆ ನವಿಲಗರಿ ಇದ್ದಿತೆಂದು
ತಲೆಗೆ ಏರಿಸಿಕೊಳುವೆ ಸಿಕ್ಕಿದರೆ, ಸಾಮಾನ್ಯನೂ
ಆಗಬಹುದಲ್ಲವೆ ಶ್ರೀಕೃಷ್ಣನೆಂದು ? (ಪ್ರಭು, ನಿನಗೆ)
ಗೋಚರಿಸುವ ಸಂಗತಿಗಳನ್ನು ಭಂಗುರಗೊಳಿಸದೆ ಅವಕ್ಕೆ ಕಾವ್ಯಲಯದ ಕುಲಾಯಿಯನ್ನು ತೊಡಿಸುತ್ತಾರೆ. ಪ್ರಾಕೃತಿಕ ಕ್ಷಣಗಳನ್ನು ಸಂಕೇತಗಳನ್ನಾಗಿ ಬಳಸಿ ಕಾವ್ಯಕ್ಕೆ ಹೊಸ ಬನಿಯನ್ನು ನೀಡುವ ಸೋಜಿಗ ಇವರ ಕಾವ್ಯದು.
ಬಿದ್ದ ನವಿಲಗರಿಯ ಕೆಳಗಿರುವ ಇರುವೆಗೆ
ಮೇಲೆ ಗರಿ ಇರುವುದು ತಿಳಿಯದು
ಆ ಗರಿಯನ್ನು ಹೆಕ್ಕಲು ಧಾವಿಸುವ ಮಗುವಿಗೆ
ತನ್ನ ಪಾದದಡಿ ಇರುವೆ ಬಲಿಯಾಗುವುದು ಹೊಳೆಯದು(ಬಿದ್ದ ನವಿಲ ಗರಿಯ ಕೆಳಗಿರುವ ಇರುವೆಗೆ)
ಎಂದು ಜೀವನದ ಸತ್ಯವನ್ನು ಶೋಧಿಸುತ್ತಾರೆ. ಪ್ರಕೃತಿಯ ಸಾಧ್ಯತೆಗಳನ್ನು ಬದುಕಿನ ಲಯದೊಂದಿಗೆ ಸಂಯೋಗಗೊಳಿಸಿ ಹೊಸ ಅರ್ಥವನ್ನು ಹೊಳಿಸುವ ಪ್ರಜ್ಞೆ ಕಾವ್ಯದಲ್ಲಿ ಜಾಗೃತಗೊಳ್ಳುತ್ತದೆ. ಇರುವೆ, ನವಿಲುಗರಿ, ಮಗುವಿನ ಪಾದ ಒಂದಕ್ಕೊಂದು ಸಂಬಂಧ ಹೊಂದುವ ನಿಸರ್ಗ ಸಾಧ್ಯತೆಗಳನ್ನು ಕವಿತೆ ಧ್ವನಿಸುತ್ತದೆ.
ಸ್ವರ್ಗದ ಕನಸು ಬಂತೆಂದರೆ ಹೇಗೆ ಖುಶಿಪಡುತ್ತದೋ ಮನಸ್ಸು
ಹಾಗೇ ತೆವಳುತ್ತ ಹೊರಟಿರಬಹುದೆ ಆ ಬಸವನ ಹುಳು?
ಎಲ್ಲಿಗೆ ಎಂದರೆ ಗೊತ್ತೇ ಗೊತ್ತಿದೆ ಎನ್ನುವ ಹಾಗೆ,
ಅಥವಾ ಗೊತ್ತಿಲ್ಲದಿದ್ದರೂ ಗುರಿಯನ್ನು ಸೃಷ್ಟಿಸಿಕೊಂಬಂತೆ
ಸುಮ್ಮನೆ ಕುಳಿತು ಅದು ತೆವಳುವುದನ್ನು ನೋಡಿದರೆ
ಲೋಕದ ಸುಖವೆಲ್ಲವೂ ಅದರ ನಡೆಯಲ್ಲಿ ಇದ್ದಂತಿದೆ.
ತಾನು ಹೋದಲ್ಲೆಲ್ಲ ಗುರುತು ಹಾಕುತ್ತ ಹೋಗುವ ಅದು
ಮತ್ತೆ ಅದೇ ದಾರಿಯಲ್ಲಿರುವುದಿದೆ, ಅಲ್ಲಿಗೆ ಬಂದಿದ್ದೇನೆಂದು ತಿಳಿಯದೆ! (ಬಸವನ ಹುಳವೆಂಬ ಬಸವನ ಹುಳವು)
ಬಸವನ ಹುಳುವಿನ ವ್ಯವಧಾನ ಬದುಕಿಗೆ ಅಗತ್ಯವಿದೆ. ಆ ವ್ಯವಧಾನವನ್ನು ಕಳೆದುಕೊಂಡಿರುವ ನಾವು ಅವಸರವೇ ಅನಿವಾರ್ಯವೆಂದು ಬದುಕನ್ನು ತಳ್ಳುತ್ತಿದ್ದೇವೆ. `ಲೋಕದ ಸುಖವೆಲ್ಲವೂ ಅದರ ನಡೆಯಲ್ಲಿ ಇದ್ದಂತಿದೆ’ ಎಂಬ ಸಾಲು ಬದುಕಿನ ಸುಖ ಎಲ್ಲಿದೆಂಬುದನ್ನು ಶೋಧಿಸುತ್ತದೆ.
ಮರಬಿದ್ದಿದೆ ಅಡಿಮೇಲಾಗಿ
ನಿನ್ನೆ ಬಂದ ಬಿರುಗಾಳಿ ಮಳೆಗೆ
ಬಿದ್ದ ಮರದ ಕೊಂಬೆಯೊಂದರಲ್ಲಿ
ಹಣ್ಣು ತಿನ್ನುತ್ತಿದೆ ಅಳಿಲು !
ಇತಿಹಾಸ ಬಿಟ್ಟು ಹೋಗದು ಎಂಬಂತೆ
ಮರಮಲಗಿದೆ ವಸ್ತçಹೊದ್ದು ಇತಿಹಾಸದ್ದು
ಜನರು ಸುತ್ತುವರಿದಿದ್ದಾರೆ ಗರಗಸ ಹಿಡಿದು
ನಾವು ಇದೇ ಈಗ ತುಂಡರಿಸುವುದೆಂದು ! (ಇತಿಹಾಸ)
ನಮ್ಮ ಕಣ್ಣೋಟಕ್ಕೆ ತಕ್ಕಂತೆ ಇತಿಹಾಸವನ್ನು ಅರ್ಥ ಮಾಡಿಕೊಳ್ಳುತ್ತೇವೆ. ಆ ಮೂಲಕ ಜನಾಂಗದ ಸಮೃದ್ಧವಾಗಿಯೂ ರೂಪಿಸಿಕೊಳ್ಳುತ್ತೇವೆ. ಈ ಕವಿತೆ ಮರದ ರೂಪಕವನ್ನು ತರುವುದರ ಮೂಲಕ ಇತಿಹಾಸದ ಬಹುರಚನೆಗಳ ಆಯಾಮವನ್ನು ಕಟ್ಟುತ್ತದೆ. ಅದನ್ನು ಹಾಗೇ ಸ್ವೀಕರಿಸುವುದು ಚೆಂದ. ಆದರೆ ನಾವು ಅದನ್ನು ತುಂಡು ತುಂಡು ಮಾಡಿ ಕತ್ತರಿಸಿ ಸಹಬಾಳ್ವೆಯನ್ನು ವೈಕಲ್ಯಗೊಳಿಸುತ್ತೇವೆ. ಹೀಗಾಗಿ ನಾವೆಲ್ಲಾ ಇತಿಹಾಸವನ್ನು ನಮ್ಮ ಮೂಗಿನ ನೇರಕ್ಕೆ ಕತ್ತರಿಸಲು ಗರಗಸ ಹಿಡಿದು ನಿಂತಿದ್ದೇವೆ ಎಂದು ಕವಿತೆ ವ್ಯಂಗ್ಯ ಮಾಡುತ್ತದೆ.
“ಗೊತ್ತೆ ನಿಮಗೆ ಗೋಡೆಗಡಿಯಾರದ ಹಿಂದೆ ಗುಬ್ಬಿ ಗೂಡುಕಟ್ಟಿ
ಇದೀಗ ಮೊಟ್ಟೆಗಳು ಒಡೆದು ಮರಿಗಳು ಹೊರಬಂದಿವೆ
ಇದೇ ದೊಡ್ಡ ಹಬ್ಬ, ನಾವೀಗ ಈ ಲೋಕಕ್ಕೇ ಅಜ್ಜ ಅಜ್ಜಿ (ಯುಗಾದಿ)
ಯುಗಾದಿಯ ಬಗ್ಗೆ ಹೊಸ ನೋಟದಲ್ಲಿ ಕವಿತೆ ಆಲೋಚಿಸುತ್ತದೆ. ಪ್ರಕೃತಿಯ ಚಲನೆಗಳು ಸಹಜವಾದರೂ ಮನುಷ್ಯನಿಗೆ ಬೆರಗನ್ನುಂಟು ಮಾಡುತ್ತವೆ. ಆ ಸಂಗತಿಗಳನ್ನು ಬದುಕಿಗೆ ಅನ್ವಯಿಸಿಕೊಂಡು ತನ್ನ ಬದುಕಿನಲಿ ಹೊಸತನ್ನು ಕಂಡುಕೊಳ್ಳುವುದು ಮುಖ್ಯ. `ಆಡುವ ಮಕ್ಕಳಿಲ್ಲದೆ ಬಯಲಾಗಿದೆ ನಮ್ಮನೆಯಂಗಳ ಹಿಂದೆ ಆಗಿತ್ತದು ಕುಣಿವ ಕಾಲಿಗೆ ರಂಗಸ್ಥಳ ನಾನಿದ್ದೆ, ಅಪ ಇದ್ದರು, ಅಜ್ಜ ಇದ್ದರು ಕುಣಿದು ಅಲ್ಲಿ ಈಗ ಮರೆತರೂ ಅದು, ತನ್ನೊಳಗೇ ಕುಣಿಯುತ್ತಿರಬಹುದಲ್ಲ ಮೆಲ್ಲ’ ಎಂದು ಯುಗಾದಿಗೆ ಬದುಕಿನ ಸಾತತ್ಯವನ್ನು ನೀಡುತ್ತದೆ. `ಇದೀಗ ಮೊಟ್ಟೆ ಒಡೆದು ಮರಿಗಳು ಹೊರಬಂದಿವೆ’ ಎಂಬ ಕಾವ್ಯ ರೂಪಕ ಬದುಕಿನ ಹೊಸತನ ಮತ್ತು ನಿರಂತರತೆಯನ್ನು ಹೇಳುತ್ತದೆ.
ಸುಮ್ಮನೆ ನಿಂತೆ ಭೂಮಿ ಆಕಾಶವ ನೋಡುತ್ತ
ಧ್ಯಾನಿಸುವಂತೆ ಇಹಪರಗಳ
ಇಲ್ಲೇ ಎಲ್ಲೋ ಇರುವಂತಿದೆಯಲ್ಲ ಎರಡೂ
ಆಮೇಲೆ ಯಾಕೆ ಹುಡುಕಬೇಕು ನಾಕ ನರಕ? (ಒಂದು ಮುಂಜಾನೆ)
ಬೆಳಗನ್ನು ಹೀಗೆ ಸಂಭ್ರಸುತ್ತಾರೆ. ಮನುಷ್ಯನ ಎಲ್ಲಾ ತಾಪತ್ರಯಗಳನ್ನು ನೈಸರ್ಗಿಕ ಅಂಶಗಳು ಮಾಯ ಮಾಡುತ್ತವೆ. ಹೊಸ ಹುಮ್ಮಸ್ಸನ್ನು ನೀಡುತ್ತವೆ. ಇಳಿ ವಯಸ್ಸಿಗೆ ನಿಜ ಸಂಗಾತಿಯು ಆಗುತ್ತವೆ. ನಮ್ಮ ಸುತ್ತಮುತ್ತಲಿನ ಪರಿಸರದ ಜೊತೆಗೆ ನಮ್ಮ ನೋಟಗಳು ಸೇರಿಕೊಂಡಾಗ ಆಗುವ ಆನಂದ ಮತ್ತೊಂದಿಲ್ಲ. ಆ ಆನಂದದಲ್ಲಿಯೇ ಬದುಕಿನ ಸ್ವರ್ಗವಿದೆ ಎಂದು ಕವಿತೆ ನಂಬುತ್ತದೆ.
ನಾನು ಕೇಳಿದೆ ಇವಳ ಅಮೇರಿಕೆಯಲ್ಲಿರುವ
ನಮ್ಮ ಮೊಮ್ಮಗ ಈಗ ಹೆಜ್ಜೆ ಇಡಲು
ನಿನ್ನೆ ಕಲಿತಿಹನಂತೆ ಅವನ ಕೈಕೈಹಿಡಿದು
ನಾವು ನಡೆಸಬಹುದಿತ್ತಲ್ಲ ಅವನಿಲ್ಲಿ ಇರಲು
ಇವಳ ಮುಖದಲಿ ಇದ್ದ ಸಂಜೆ ಬಿಸಿಲಿನ ಹೂವಾಗ
ಸರ‍್ಯನೊಂದಿಗೆ ಕಂತಿದಂತಾಗಿ ಇವಳು
ಆದರೂ ಹೇಳಿದಳು ನಮ್ಮನೆಯ ನಾಯಿ ಬೆಕ್ಕುಗಳ
ಕಣ್ಣುಗಳಲಿದ್ದೇವಲ್ಲ ನಾವು, ಸಾಕು ! (ಒಂದು ಶ್ರಾವಣ ಸಂಜೆ)
ಆಧುನಿಕ ಬದುಕಿನ ಬಿಕ್ಕಟ್ಟುಗಳನ್ನು ಈ ಕವಿತೆ ಧ್ವನಿಸುತ್ತದೆ. ಹೊಸ ತಲೆಮಾರಿನವರು ದುಡಿಮೆಗಾಗಿ ಹೊರ ದೇಶಗಳಿಗೆ ಹೋಗಿ ಬದುಕನ್ನು ಕಟ್ಟಿಕೊಂಡು ಬದುಕುತ್ತಾರೆ. ಇಲ್ಲಿರುವ ಹಿರಿಯರನ್ನು ಮರೆಯುತ್ತಾರೆ. ಅವರಿಗೆ ಯಾವ ಸುಖವೂ ಇಲ್ಲದೆ ನರಳುತ್ತಾರೆ. ಮೊಮ್ಮಕ್ಕಳ ಮಮತೆಯಲ್ಲಿ ಬದುಕಬೇಕೆಂಬ ಬಯಕೆ ಅವರಿಗೆ ಕೇವಲ ಕನಸಾಗುತ್ತದೆ. ಆ ಕನಸನ್ನು ನಾಯಿ ಬೆಕ್ಕುಗಳ ಮಮತೆಯಲ್ಲಿ ತುಂಬಿಕೊಳ್ಳುತ್ತಾರೆ.
ನಾಲ್ಕಾರು ತಲೆಮಾರುಗಳ ನೋಡಿದೀ ಮರದ
ಕೆಳಗೆ ಪಟ್ಟಾಂಗ ಹೊಡೆದವರೆಷ್ಟೋ ಮಂದಿ
ಗಾಂಧಿನೆಹರು ಪ್ರಭಾತಫೇರಿ ಇಲ್ಲಿನ ಯುವಕ
ರನ್ನು ಬಡಿದೆಬ್ಬಿಸಿದ ಕತೆ ಇತಿಹಾಸವಾಗಿ.
ಕಾಗೆ ಕೋಗಿಲೆ ನವಿಲು ಗೊರವಂಕ ಇತ್ಯಾದಿ
ಹಕ್ಕಿಗಳ ಚಿಲಿಪಿಲಿಯಿಲ್ಲಿ ಸಂಜೆ ಮುಂಜಾನೆ
ಹಸಿರುಮುಕ್ಕಳಿಸುವೆಲೆಗಳ ನಡುವೆ ಬಿಸಿಲಕೋ
ಲಿನ ಆಟ ! ಇಹಪರವು ಇಲ್ಲಿದ್ದಂತೆ ಕಣ್ಗೆ
ಅನೇಕಾನೇಕ ಚರ್ಚೆ ಸಂವಾದಗಳ
ಬಹುಮತ ಭಿನ್ನಮತ ಬಹುತ್ವದ
ಬೇರು ಇಳಿದಿತ್ತಿಲ್ಲಿ ಅಹಹ ! ಆಕಾಶದಲಿ
ರಾಷ್ಟ್ರಧ್ವಜವು ಹಾರಾಡುವುದು ನಿತ್ಯ ಸತ್ಯ. (ಅಜ್ಜ ನೆಟ್ಟಾಲ ಇದು)
ಪ್ರಕೃತಿಯ ನಾಶವನ್ನು ಮನುಷ್ಯನ ಅದಃಪತನವನ್ನು ಈ ಕವಿತೆ ಚಿಂತಿಸುತ್ತದೆ. ನೂರಾರು ವರ್ಷಗಳ ಕಾಲ ನೆರಳಾಗಿದ್ದ ಹಳೆಯ ಮರವನ್ನು ನಿರ್ಧಯವಾಗಿ ಕತ್ತರಿಸುವಾಗ ಆಗುವ ವಿಷಾದವನ್ನು ಕವಿತೆ ಕಟ್ಟಿಕೊಡುವುದರ ಜೊತೆಗೆ ಅದು ಬದುಕಿನೊಂದಿಗೆ ಹೊಂದಿದ ನಂಟನ್ನು ಅನಾವರಣಗೊಳಿಸುತ್ತದೆ. ಹಳೆಯ ಪರಂಪರೆಯನ್ನೆಲ್ಲಾ ನಮ್ಮ ಭೋಗಕ್ಕೆ ಅವಸಾನಗೊಳಿಸುತ್ತಿದ್ದೇವೆ. ಅದರ ಸೇವೆಯನ್ನು ಮನಸ್ಸಿಗೆ ತಂದುಕೊಳ್ಳದೆ ನಿರ್ಧಯವಾಗಿ ಮಾರಣಹೋಮ ಮಾಡುತ್ತೇವೆ. ಆದರೂ ಭರವಸೆಯೊಂದಿಗೆ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಮಾಡಲೇಬೇಕಾಗುತ್ತದೆ. ರಾಷ್ಟರಧ್ವಜವೂ ಹಾರಾಡಬೇಕು ನಿತ್ಯ ಸತ್ಯ. ಅದು ಹಳೆಯದರ ಮೌಲ್ಯಗಳನ್ನು ಹೀರಿಕೊಂಡು ಹೊಸ ಹೊಂಗನಸನ್ನು ಕಟ್ಟಬೇಕು.
ಗಾಳಿಗಿಂತ ಹಗುರವಾಯಿತೀಗ ಚಿಟ್ಟೆ
ಹೂವನ್ನು ನೋಡಿ ಮೈಮರೆತು ?
ಹೂವಿನ ಇಡೀ ಮೈ ಚಿಟ್ಟೆಯೊಂದಿಗೆ ಎದ್ದು
ಹಾರೀತೇ ಜೇನಿನಲ್ಲಿದ್ದು?
ನನ್ನ ಕಣ್ಣೀಗ ಕಣ್ಣಲ್ಲ
ಹೂವು ಮತ್ತು ಚಿಟ್ಟೆಯ ಒಟ್ಟಿಗೆ ಇದ್ದು
ನಿಜವನ್ನು ಕ್ಷಣಕಾಲ ಮರೆಮಾಚಿ ಆಮೇಲೆ
ಮತ್ತೆ ಮೊದಲಿನ ಸ್ಥಿತಿಗೆ ಹೇಗೆ ಬಂತು? (ಚಿಟ್ಟೆ)
ಪ್ರಕೃತಿಯ ಜೀವರಾಶಿಗಳು ಇವರ ಕಾವ್ಯದಲ್ಲಿ ಹೊಸ ರೂಪವನ್ನು ಪಡೆಯುತ್ತವೆ. ಒಂದು ಚಿಟ್ಟೆ ಮನಸ್ಸಿನ ಸ್ಥಿತಿಯನ್ನು ನಿಷಕ್ಕೊಡ್ಡುತ್ತದೆ. ಹೂ, ಚಿಟ್ಟೆ, ಜೇನು ಒಟ್ಟಾಗುವ ಪರಿ ವಿಶೇಷವೆನಿಸುತ್ತದೆ. ಮನಸ್ಸಿನ ಆಕಾರವೂ ಹೀಗೆ ಪಲ್ಲಟವಾಗಿ ಸಹಜತೆಗೆ ಮರಳುವುದು ಸೋಜಿಗ. ಈ ಸೋಜಿಗವನ್ನು ಕವಿತೆ ಕಟ್ಟಿ ತಾತ್ವಿಕತೆಗೆ ಕೊಂಡೊಯ್ಯುತ್ತದೆ. ಕನಸನ್ನು ಕಡೆದ ಹಾಗಿದೆ ಎಂಬ ಸಾಲು ಹಲವು ಬದುಕಿನ ರ‍್ಥಗಳನ್ನು ಹುಟ್ಟಿಸುತ್ತದೆ.
‘ಇಲ್ಲ ! ನಾನು ಎಲ್ಲವನ್ನೂ ಕೊಯ್ಯುತ್ತೇನೆ
ಹೇಗೆ ಉಳಿದೀತು ಹೇಳಿ ಒಂದು ಮೊಗ್ಗು ?’
ಎನ್ನುತ್ತ ನಕ್ಕು ಹೋದಳು ಒಳಗೆ, ನನ್ನಲ್ಲಿ
ಬಂತು ಸಂಶಯ: ಯಾಕೆ ಹೀಗೆ ಇವಳು ?
ಸಂಜೆ ಬೇಗನೆ ಬಂದು ಅಂಗಳದಲಿ ನಿಂತು
ನೋಡಿದೆನು ಇವಳು ಹೂ ಕೊಯ್ಯುವುದನು
ಕೊಯ್ಯುತ್ತ ಕೊಯ್ಯುತ್ತ ಬಿಟ್ಟಳು ಒಂದು ಮೊಗ್ಗು
ನಾಳೆ ಅರಳಲಿ ಅದು ನನಗೆ ಎಂದು !
ರಾತ್ರೆ ಬರಸೆಳೆದು ಕೇಳಿದೆ ‘ಯಾಕೆ ಸುಳ್ಳು
ಹೇಳುತ್ತಿ ಈ ವಯಸ್ಸಿನಲಿ ನನಗೆ ?
ಆಕೆ ಹೇಳಿದಳು ಬೆಳಗ್ಗೆದ್ದು ನಾನು
ಕೊಡಲಾಗುವುದೇ ನಿಮಗೆ ನನ್ನ ಮುತ್ತು (ಮುತ್ತು)
ಇಳಿ ವಯಸ್ಸಿನ ದಾಂಪತ್ಯದ ಬನಿಯನ್ನು ಕವಿತೆ ಮೊಗ್ಗಿನ ರೂಪಕದ ಮೂಲಕ ಸವಿಯಾಗಿ ಮನಸ್ಸಿಗಿಳಿಸುತ್ತದೆ. ಮುತ್ತು ಮತ್ತು ಮೊಗ್ಗನ್ನು ಸಂಯೋಗಗೊಳಿಸುವ ಕವಿತೆ ಪ್ರೇಮ, ಪ್ರೀತಿ ದೇಹ ಮೀರಿ ಬೆಳೆಯುವ ಪರಿಯನ್ನು ಮನಗಾಣಿಸುತ್ತದೆ.
ಈ ನಡುವೆ ಕಾಲವನ್ನು ನಿಮಿಷ ಗಂಟೆ ದಿನ
ತಿಂಗಳು ವರ್ಷದಲ್ಲಿ ಕಡೆದಿಡಲು ಬಯಸಿ, ಸಂವತ್ಸರಗಳ
ಸೃಷ್ಟಿಸಿ ನೋಡಿದ್ದೇವೆ ನಾವು, ಯುಗಾದಿಯ ಗಾದಿಯ ಮೇಲೆ ! ಯುಗ
ಯುಗಾದಿ ಕಳೆದರೂ ಮತ್ತೆ ಅದೇ ಬರುತ್ತದೆನ್ನುವ ಭ್ರಮೆ
ಯಲ್ಲಿ ಕಳೆಯುತ್ತೇವೆ ವರ್ಷ. ಕಳೆದದ್ದೆಲ್ಲ ವರ್ಷಧಾರೆಯ ಹಾಗೆ
ಆಗಿ ಕಡಲು ಸೇರಿ ಮತ್ತು ಮಳೆಯಾಗಿ ಸುರಿದು ಕಡಲು ಸೇರುವ ಕ್ರಿಯೆ
ಕಾಲಕ್ಕಿಲ್ಲ. ಅದು ಇರುವುದು ಸಮುದ್ರದ ಹಾಗೆ. ಕಂಡಲ್ಲೆಲ್ಲ
ದಿಗಂತವ ಸೃಷ್ಟಿಸಿ, ಆ ದಿಗಂತದ ಆಚೆ ಕಾಣಬೇಕಾದ್ದ
ನ್ನೆಲ್ಲ ಅಡಗಿಸಿ. ತನ್ನಲ್ಲಿ ತಾನೇ ಅಲೆ ಎಬ್ಬಿಸಿ ಭರತ
ಇಳಿತಗಳಿದ್ದರೂ ಇಲ್ಲದ ಹಾಗೆ ನಿಂತು ! (ಕಾಲ : ನಿನ್ನ ಹಾಗೇ ನಾನು)
ನಾವು ಕಾಲವನ್ನು ದೂರುತ್ತಲೇ ಇರುತ್ತೇವೆ. ಕಾಲವನ್ನು ಸರಿಯಾಗಿ ಅರ್ಥಮಾಡಿಕೊಂಡು ಕಾಲದಂತೆ ಬದುಕಬೇಕು. ಕಾಲದ ಗುಣ ಚಲನೆ. ಚಲನೆಯಿಲ್ಲದ ಜೀವನಕ್ಕೆ ಅರ್ಥವಿಲ್ಲ. ಇದನ್ನು ತಿಳಿಯದ ಮನುಷ್ಯ ಕಾಲದೊಂದಿಗೆ ಚಲಿಸದೆ `ಆ ದಿಗಂತದ ಆಚೆ ಕಾಣಬೇಕಾದ್ದನ್ನೆಲ್ಲ ಅಡಗಿಸಿ’ ಬದುಕಲು ಇಚ್ಚಿಸುತ್ತಾನೆ. ಕಾಲದ ನಿಗೂಢತೆಯನ್ನು ತಿಳಿದು ಚಲನೆಯ ಬದುಕು ನಮ್ಮದಾಗಬೇಕು. ಈಗ ಹೇಳುವೆ, ಕಾಲವೇ, ನೀನು ದಿನಾ ನನಗೆ ಇದಿರಾಗಿ ಕಾಣದಂತಿರುತ್ತಿ, ಆದರೂ ನೋಡುತ್ತಿದ್ದು,ಕಾಲಾಯ ತಸೈ ನಮಃ ಎನ್ನುವುದಿಲ್ಲ ನನ್ನಲ್ಲಿ ನೀನು, ನಿನ್ನಲ್ಲಿ ನಾನು ಇರುವ ತನಕ !. ಕಾಲ ಮತ್ತು ಬದುಕು ಬೇರೆಯಲ್ಲ. ಅವು ಒಂದಕ್ಕೊಂದು ಸಂಯೋಗದೊಂದಿಗೆ ಮುನ್ನಡೆಯಬೇಕು.
ನೀನು ಎನ್ನುವುದು ನಾನಾಗುವುದು
ನಾನಿರುವುದರಿಂದ ನಿನಗೆ !
ನಾನು ಎನ್ನುವುದು ನೀನಾಗುವುದು
ನಕ್ಷತ್ರ ಇದ್ದಂತೆ ನಭಕೆ !
ಇಲ್ಲ ಎನ್ನುವುದು ಇಲ್ಲವಾಗುವುದು
ಇದೆ ಎನ್ನುವುದರಿಂದ !
ಇದೆ ಎನ್ನುವುದು ಅಸ್ತಿತ್ವ ಪಡೆಯವುದು
ಇಲ್ಲ ಶಬ್ದದಿಂದ !
ಹೂವು ಅರಳುವುದು ಗಿಡದಿಂದ ಅಲ್ಲ
ಗಿಡವೆ ಹೂವಾಗಿ ಅರಳಿ !
ಸಾವು ಎನ್ನುವುದು ಜೀವದಲ್ಲೇ ಇದ್ದು
ತಾನೆ ಸಾಯುವುದು ನಮಗಾಗಿ !
ಇದ್ದರೂ ಚಿಂತೆ ಎನ್ನುವುದು ಸುಳ್ಳೆ ?
ಸತ್ಯ ಇದ್ದೂ ಇಲ್ಲದಾಗಿ ?
ಎಲ್ಲವೂ ಸಹಜ, ಅಸಹಜವೂ ಹೌದು
ಬದುಕು ಇರಲು ಬದುಕಾಗಿ ! ( ಒಡ್ಡು)
ಬದುಕಿನ ನಿಜವನ್ನು ಈ ಕವಿತೆ ಚಿಂತಿಸುತ್ತದೆ. ನಾವು ಕಟ್ಟಿಕೊಂಡು ಒಡ್ಡುಗಳನ್ನು ಒಡೆಯದಿದದ್ದರೆ ಬದುಕಿನ ಸುಖ ಸಿಗುವುದಿಲ್ಲ. `ನಮ್ಮೊಳಗಿರುವ ಸಾವು ಸಾಯಿತ್ತದೆ ನಾವಲ್ಲ’ ಎಂಬ ಹೊಸ ವ್ಯಾಖ್ಯಾನವನ್ನು ಕವಿತೆ ಮಾಡುತ್ತದೆ. ಸಹಜ ಅಸಹಜಗಳ ನಡುವೆ ಬದುಕಿದೆ ಅದನ್ನು ಹೇಗಿದೆಯೋ ಹಾಗೆ ಅನುಭವಿಸಬೇಕೆಂಬ ಆಶಯ ಕವಿತೆಗಿದೆ.
ಇರುವೆ ಎನ್ನುವುದು ಇರುವೆಯೇ ಎನುವಂತೆ
ಸಾಲಾಗಿ ಹೋಗುತ್ತಿದ್ದುವು ಅಂಗಳದಿ ಹೊರಗೆ
ಕಚ್ಚಿಸಿಕೊಂಡು ಬಂದ ಮೊಮ್ಮಗ ಚೀರಿ ಹೇಳಿದ:
‘ಅಜ್ಜ, ಕೊಲ್ಲಿ ಅವುಗಳನ್ನು ಒಂದೂ ಬಿಡದೇ !’
‘ಕೊಲ್ಲುವುದು ಬೇಡ, ನೋಡದರ ಒಗ್ಗಟ್ಟು
ಹೇಗೆ ಹೋಗುತ್ತವೆ ಒಂದು ಇನ್ನೊಂದಾಗಿ ತಮ್ಮ
ಗುರಿಯೊಂದೆ ಎಂಬಂತೆ. ನಮಗೆ ಒಬ್ಬೊಬ್ಬರಿಗೆ
ಒಂದೊಂದು ಗುರಿ, ಯಾಕದಕೆ ಚಿಂತೆ?’ ಎಂದೆ.
ಒಳಗಿದ್ದ ಇವಳು ಕೇಳಿಸಿಕೊಂಡು ಬಂದಳು ಹೊರಗೆ
‘ಬಹುತ್ವ ಎಲ್ಲಿದೆ ಅಲ್ಲಿ ನಮ್ಮ ಹಾಗೆ?
ಇರುವೆಗಳು ಮಾದರಿಯಲ್ಲ ನಮ್ಮ ಮಕ್ಕಳಿಗೆ
ಗುರುವಾಗಬೇಕಲ್ಲವೇ ನಾವು ನಮಗೆ?’ (ಇರುವೆ)
ಇರುವೆಗಲು ನೋಡಲು ಸಾಮನ್ಯದಂತೆ ಕಾಣುತ್ತವೆ. ಅವುಗಲ ಕತೃತ್ವ ಶಕ್ತಿ ಅಗಾಧವಾದುದು. ಯಾರೇ ಆಗಲಿ ಅವುಗಳನ್ನು ನೋಡಿದ ಕೂಡಲೆ ಕೊಲ್ಲಬೇಕೆನಿಸುತ್ತದೆ. ನಿರ್ಧಯವಾಗಿ ಕೊಲ್ಲುತ್ತೇವೆ ಕೂಡ. ಸಣ್ಣ ಮಕ್ಕಳಂತೂ ಇರುವೆಗಳು ಇರುವುದೆ ಸಾಯಿಸಲಿಕ್ಕೆ ಎಂಬಂತೆ ಬೆನ್ನಟ್ಟಿ ಕೊಲ್ಲುತ್ತವೆ. ಆದರೆ ಅವೇ ಗುರುವಾಗಬೇಕೆನ್ನುದೆ ಕವಿತೆ.
ಕೃಷ್ಣ ನಕ್ಕನು ಮೊಸರಿನಿಂದೆದ್ದ ಬೆಣ್ಣೆಯಾಗಿ
ಆಮೇಲೆ ತಾಯಿಯ ನೆತ್ತಿಮೂಸಿ ನುಡಿದ:
‘ಹೋಗೋಣ ಎಲ್ಲರ ಮನೆಗೆ, ನಾನೆ ಕಡೆಯುವೆ ಮೊಸರು
ಯಾಕೆ ಬಾರದು ಬೆಣ್ಣೆ?’
ಯಶೋದೆ ಕೃಷ್ಣನ ಜೊತೆಗೆ ಹೊರಗೆ ಕಾಲಿಡುವಾಗ
ಗೊಲ್ಲರ ಕೇರಿಯೇ ಮೇಲೆದ್ದು ಬಂತು
ಗೋಪಿಯರು ಹೇಳಿದರು ‘ಗಡಿಗೆ ಒಡೆದಿದೆ ಬೆಣ್ಣೆ ತುಂಬಿ
ಬಾರೋ ಕೃಷ್ಣ ತುಂತುಂ ತುಂಬಿ ಎದೆಗೆ ! (ಬೆಣ್ಣೆ)
ಕೃಷ್ಣ ಎಂಬ ಪರಂಪರೆಯ ಮಹಾ ದೈವಿಶಕ್ತಿ ಎಲ್ಲರ ಮನೆಯಲ್ಲಿ ಇರಬೇಕು. ಆ ಶಕ್ತಿ ಯಾರೊಬ್ಬರ ಸೊತ್ತಾಗದೆ. ಎಲ್ಲರಿಗೂ ಅನ್ನ ನೀಡುವ ಪರಸೆಯಾಗಬೇಕು. ಒಡೆದ ಗಡಿಗೆ ಬದುಕುಗಳನ್ನು ಕೂಡಿಸಿ ಸುಂದರ ಬದುಕನ್ನು ಎಲ್ಲರ ಮನದಲ್ಲಿ ಕೃಷ್ಣ ಕಟ್ಟಬೇಕು ಎಂಬ ಸಮಾನತೆಯ ಕನಸು ಈ ಕವಿತೆಗಿದೆ.
ನಾನು ಹಣ್ಣೆಲೆಯಲ್ಲ, ಹಣ್ಣೆಲೆ ಆಗಲಾರೆ
ಆದರೆ
ಹಣ್ಣೆಲೆಗಳು ಆಗಾಗ ಕಳಚಿಕೊಳ್ಳುವ ಅನುಭವಗಳನ್ನು
‘ಇದಲ್ಲ’ ‘ಇದಲ್ಲ’ ಎನ್ನುವುದಾಗಿ
ಒಪ್ಪಿಕೊಳ್ಳುವೆ
ಸೂರ್ಯನಿಂದ ಪಡೆದುಕೊಂಡದ್ದಿಷ್ಟು
ನೀರಿನಿಂದ ಹೀರಿಕೊಂಡದ್ದಷ್ಟು
ಎನ್ನುವುದು ಘನೀಕರಿಸಿ ನನ್ನೊಳಗೆ
ತಿರುತಿರುಳಾಗಿ ಮನಮನದ ಮನಸಾಗಿ
ಇರುವುದರ ಹಿಂದೆ.
ಇದ್ದ ಒಂದು ಬೀಜ
ಈಗ ಎದ್ದು ಮರವಾಗಿ
ನಾಳೆ ಅದೇ ಮತ್ತೆ ಮರವಾಗಿ
ಹಣ್ಣೆಲೆಯಾಗುವುದರಲ್ಲಿ ತಪ್ಪೇನಿದೆ ?
ಆಗಲಿ, ಆಗಲಿ ! (ಮರ ಒಂದು, ನೋಟ ಎರಡು)
ಬದುಕಿಗೆ ವಯಸ್ಸಾಗುದು, ಮರಕ್ಕೆ ವಯಸ್ಸಾಗುದು ಸಹಜ. ಈ ಸಹಜತೆಯನ್ನು ಅಪ್ಪಿಕೊಂಡು ಜೀವನವನ್ನು ಅನುಭವಿಸಬೇಕು. ಅದು ಬದುಕಿನ ಜೀವಂತಿಕೆ. ಹಣ್ಣೆಲಗಳು ಉದುರುವಾಗ ಮರಕ್ಕೇನು ಬೇಸರವಾಗುವುದಲ್ಲ. ಹೊಸ ಬೀಜಕ್ಕೆ ಗೊಬ್ಬರವಾಗುತ್ತದೆಂಬ ಸಂತೋಷ ಇರುತ್ತದೆ. ಹಾಗೆ ಮನುಷ್ಯ ಹಣ್ಣಾದ ಎಲೆಯಾಗಿ ಬೀಳುವಾಗ ದುಃಖಿಸುವುದ ತರವಲ್ಲ ಎನ್ನುತ್ತದೆ ಕವಿತೆ.
ಅಹಲ್ಯೆ, ನೀರಡಿಕೆ, ಊರ್ಮಿಳೆ,ಎಳೆನೀರು, ಬೆಳಗು, ಏನದು, ಇಷ್ಟಾನಿಷ್ಟ, ಮೊಳಕೆ, ಮರ ಒಂದು, ನೋಟ ಎರಡು, ಸಂಭ್ರಮ, ಅಂತಃಕರಣ
ಎರಡು ಗಂಟಿನ ನಡುವೆ ಇರುವ ಟೊಳ್ಳಿಗೆ ತೂತು
ಕೊರೆದು ಮೆಲ್ಲನೆ ತುಟಿಗೆ ಇಟ್ಟು ಊದ
ತೊಡಗಿದರೆ, ಆಗಲೇ ಅದರೊಳಗೆ ಕಾದಂತಿದ್ದ
ಸಪ್ತಸ್ವರಗಳೊಂದೊಂದಾಗಿ ಬಂದುವು ತನನ
ಎಂಥ ಅಂತಃಕರಣ ಇದು, ಬಹುತ್ವದಿಂದೆದ್ದು
ಏಕತ್ವದೇಕಾಂತಕ್ಕೆ ಬಂದು ಅಲ್ಲಿಂದ
ಜಿಗಿದಂತೆ ಮರಳಿ ಬಹುತ
ನಾನಿರುವೆನೆನ್ನುವುದು ಸಾಮಾನ್ಯವಲ್ಲ ! (ಅಂತಃಕರಣ)
ಲೋಕವನ್ನು ಅಂತಃಕರಣದಿಂದ ನೋಡಬೇಕು. ಏಕತ್ವ ಬಹುತ್ವದ ಗೆರೆಗಳಲ್ಲಿ ಅಳಿಸಿ ಹೋಗದೆ ಸ್ವರಗಳ ನಾದದಂತೆ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಅದಮ್ಯ ಆಶಯ ಈ ಕವಿತೆಗಳಿಗಿದೆ.
ತಲ್ಲಣ ನಿರೀಕ್ಷೆ ನಿರಾಶೆ ವಿಷಾದ ಆದರ್ಶಗಳೆಲ್ಲ
ಕರಿಗಿದಾಗ ಕರಗದೆ ಆಗಿ ಗಾಂಧಿ
ಅಂದೇ ಊರುಗೋಲು ಅದೇ ಕನ್ನಡಕ ಅದೇ ಹೆಜ್ಜೆ
ಮೆಲ್ಲನೆ ಉರಿಯುತ್ತಿರುತ್ತದೆ ದೇವರ ನಂದಾ ದೀಪದಲ್ಲಿ (ಗಾಂಧಿ ನಮ್ಮ ನಡುವೆ)
ಗಾಂಧೀಜಿಯನ್ನು ತಪ್ಪು ವ್ಯಾಖ್ಯಾನಗಳಿಗೆ ಗುರಿ ಮಾಡಿ ಈ ಕಾಲದಲ್ಲಿ ಚಿಂತಿಸುತ್ತಿದ್ದೇವೆ.ಆದರೂ ಗಾಂಧೀಜಿಯ ವ್ಯಕ್ತಿತ್ವ , ಚಿಂತನೆ ಮುಕ್ಕಾಗುವದಿಲ್ಲ. ಏನೇ ತಲ್ಲಣ, ನಿರಾಶೆಗಳು ಜಗತ್ತನ್ನು ಮುತ್ತಿದರೂ ಗಾಂಧೀಜಿಯ ಆಲೋಚನೆಗಳು ಪರ್ಯಾಯವನ್ನು ಸೂಚಿಸುತ್ತವೆ. ಜಗತ್ತಿಗೆ ನಂದಾ ದೀಪವಾಗಿ ಬೆಳಕು ತೋರಿಸುತ್ತವೆ. ಗಾಂಧೀಜಿಯ ಪ್ರಸ್ತುತತೆಯ ಬಗ್ಗೆ ಕವಿತೆ ಚಿಂತಿಸುತ್ತದೆ.
ಅಮ್ಮ ಎನ್ನುವುದು ಆಮೇಲೆ ಅಪ್ಪನಾಗಿ
ಇವಳು ನನ್ನ ಕೊರಳ ಬಳಸಿ ಮುದ್ದಿಸುವಾಗ
ದೇವರ ಕೋಣೆಯ ನಂದಾ ದೀಪದ ಎಣ್ನೆ
ಎನ್ನ ಎದೆಯಿಂದಲೇ ಹರಿದ ಹಾಗೆ ಅಲ್ಲಿಗೆ
ಇರುವುದನ್ನು ಇರುವ ಹಾಗೆ ನೋಡುವ ಸುಖ
ಕೊಟ್ಟವಳಲ್ಲ ಈಕೆ ಇರದುದನ್ನು ಎತ್ತಿ ಕೊಟ್ಟಂತೆ ಕೈಗೆ
ಬಂದು ಹಾರಿ ಹೋಗುವಳು ಆಕಾಶಕ್ಕೆ
ನೆಲದ ಸ್ಪರ್ಶ ಇಲ್ಲದ ಹೂವು ಗಿಡದಲ್ಲಿ ಅರಳಿದಂತೆ (ಮಗಳಿಲ್ಲದ ನನಗೆ ಮಗಳು)
ಮಗಳ ಕುರಿತ ಅಪರೂಪದ ಕವಿತೆ ಇದು. ಹೆಣ್ಣನ್ನು ಹೊಟ್ಟೆಯಲ್ಲಿರುವಾಗಲೆ ಹತ್ಯೆ ಮಾಡುವ ಸಮಾಜ ನಮ್ಮದು. ಹೆಣ್ನು ಸಂತತಿಯೇ ಇಲ್ಲದೇ ಹೋದಾಗ ಹೆಣ್ಣಿನ ಮಹತ್ವ ಗೊತ್ತಾಗುವುದು. ಮಗಳಿಲ್ಲದ ಮನಸ್ಸು ಮಗಳನ್ನು ಕನಸಿಸುತ್ತದೆ. `ಆಕಾಶಕ್ಕೆ ನೆಲದ ಸ್ಪರ್ಶ ಇಲ್ಲದ ಹೂವು ಗಿಡದಲ್ಲಿ ಅರಳಿದಂತೆ’ ಮಗಳು ಮನಸ್ಸಲ್ಲಿ ಸುಳಿದು ಹೋಗುತ್ತಾಳೆ. ಆರ್ದ್ರವಾಗಿ ಮಗಳ ಬಯಕೆಯನ್ನು ಈ ಕವಿತೆ ವ್ಯಕ್ತಪಡಿಸುತ್ತದೆ.
ಅಹಲ್ಯೆ, ನೀರಡಿಕೆ, ಊರ್ಮಿಳೆ,ಎಳೆನೀರು, ಬೆಳಗು, ಏನದು, ಇಷ್ಟಾನಿಷ್ಟ, ಮೊಳಕೆ, ಸಂಭ್ರಮ ಮುಂತಾದ ಕವಿತೆಗಳು ವಿಭಿನ್ನ ವಸ್ತುಗಳ ಆಯ್ಕೆಯಿಂದ ವಿಶೇಷವೆನಿಸುತ್ತವೆ. ಮನುಷ್ಯ ಮತ್ತು ಪ್ರಕೃತಿಯ ಸಂಬಂಧಗಳನ್ನು ಅನ್ವೇಷಿಸುತ್ತವೆ. ಪ್ರತಿ ಕ್ಷಣವನ್ನು ಉತ್ಕಟವಾಗಿ ಅನುಭವಿಸುವ ಜೀವನ ತತ್ವವನ್ನು ಇಲ್ಲಿಯ ಕವಿತೆಗಳು ಧ್ವನಿಸುತ್ತವೆ.
ದೈನಂದಿನ ಬದುಕಿನ ಸೊಬಗಿನ ಕ್ಷಣಗಳನ್ನು ತಾತ್ವಿಕವಾಗಿ ಕಟ್ಟುವ ಕಾವ್ಯ ಕಲೆಯನ್ನು ಮೊಗಸಾಲೆಯವರು ರೂಢಿಸಿಕೊಂಡಿದ್ದಾರೆ. ಸಮುದ್ರ, ಗಿಡ, ಹಕ್ಕಿ, ಇರುವೆ, ಹೂ, ಎಲೆ, ಕಾಂಡ, ಬೇರು, ತಿಳಿನೀರು, ಹಳ್ಳ-ಕೊಳ್ಳ, ಮನೆ, ಸಾಮನ್ಯರು, ಪುರಾಣದ ತ್ಯಕ್ತ ಪಾತ್ರಗಳು ಇವರ ಕಾವ್ಯದಲ್ಲಿ ಹೊಸ ಹುಟ್ಟನ್ನು ಪಡೆಯುತ್ತವೆ. ಅವುಗಳ ಸಹಜತೆಯ ಜೊತೆಗೆ ಬದುಕಿನ ಮರ್ಮವನ್ನು ಅರಿಯುವ ಪ್ರಯತ್ನ ಇವರ ಕಾವ್ಯ ಮಾಡುತ್ತದೆ. ಭೌತಿಕ ಪ್ರಪಂಚದೊಳಗೆ ಸಂತತನವನ್ನು ಕಂಡುಕೊಳ್ಳಲು ಪದ್ಯಗಳು ಹೆಣಗುತ್ತವೆ. ಲಯದ ಹಾದಿ ಕೆಲವು ಸಾರಿ ವಾಚ್ಯದ ನೆಲೆಗೆ ಸರಿಯುತ್ತದೆ. ವಾಚ್ಯ ಮತ್ತು ಲಯವನ್ನು ಬದುಕಿನ ಸಂಕೀರ್ಣತೆಯಲ್ಲಿ ಸಂಯೋಗಗೊಳಿಸುವುದು ಕವಿಗೆ ಬಹು ದೊಡ್ಡ ಸವಾಲು. ಈ ಸವಾಲನ್ನು ಇಲ್ಲಿಯ ಕವಿತೆಗಳು ದಾಟಿವೆ.
ಈ ಕವಿತೆಗಳ ಭಾಷೆ ಮೋಲ್ನೋಟಕ್ಕೆ ಸರಳವೆನಿಸಿದರೂ ಅವು ಹುಟ್ಟಿಸುವ ಅರ್ಥ ಅನುಭಾವಿಕ ಸೆಲೆಯನ್ನು ಹೊಂದಿವೆ. ಪಕೃತಿ ಮತ್ತು ಮನುಷ್ಯನ ಸಂಬಧವನ್ನು ಈ ಕವಿತೆಗಳು ಗಾಢವಾಗಿ ಚಿಂತಿಸುತ್ತವೆ. ಸಹಜತೆಯ ಪ್ರಕೃತಿಯ ಚೆಲುವು ಮನುಷ್ಯನಿಗೆ ದಕ್ಕಲು ಸಾಧ್ಯವಾದರೆ ಬದುಕಿನ ಸೌಂದರ್ಯ ಹೆಚ್ಚಾಗುತ್ತದೆ. ಆದರೆ ದೈನಂದಿನ ದಾವಂತಗಳು ಈ ಸೈಂದರ್ಯವನ್ನು ವಿರೂಪಗೊಳಿಸಿವೆ ಎಂಬ ವಿಷಾದ ಕವಿತೆಯಲ್ಲಿ ಕಂಡರೂ ಹೊಸ ಭರವಸೆಯನ್ನು ಹುಟ್ಟಿಸುತ್ತವೆ.
ಮೊಗಸಾಲೆಯವರ ಕಾವ್ಯ ಪಯಣದಲ್ಲಿ ಈ ಕವಿತೆಗಳು ವಿಶೇಷ ಸ್ಥಾನವನ್ನು ಪಡೆಯುತ್ತವೆ. ಈ ಕಾಲಘಟ್ಟದಲ್ಲಿ ಕಾವ್ಯ ಹೊಸ ದಾರಿಯನ್ನು ತುಳಿಯುವಲ್ಲಿ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಅನಿಸುತ್ತದೆ. ಈ ದ್ವಂದ್ವ ಕಾಲವನ್ನು ಕಾವ್ಯದಲ್ಲಿ ಹೇಗೆ ಹಿಡಿದಿಡಬೇಕೆಂಬ ಭಾಷಿಕ ಸಮಸ್ಯೆ ಇದೆ. ಅದಕ್ಕೆ ಗಾಢ ಚಿಂತನೆ, ಹೊಸ ಭಾಷಿಕಲಯ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಪ್ರಕೃತಿ, ಮನುಷ್ಯ, ಮಹಿಳೆ, ವಾಸ್ತವ, ಪರಂಪರೆ, ರಾಜಕಾರಣ, ಕುಟುಂಬ, ಮಾನವೀಯ ಸಂಬಂಧಗಳ ಪಲ್ಲಟಗಳನ್ನು ಗಮನಿಸುವಾಗ ಹೊಸ ಕಾವ್ಯ ಭಾಷೆ ಬೇಕಾಗುತ್ತದೆ. ಈ ಸ್ಥಿತ್ಯಂತರಗಳನ್ನು ಸರಿಯಾಗಿ ಗ್ರಹಿಸಿದ ಮೊಗಸಾಲೆಯವರು ಹೊಸ ಕಾವ್ಯಭಾಷೆಯನ್ನು ಕಟ್ಟಿದ್ದಾರೆ. ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ- ದಲಿತ ಕಾವ್ಯ ಪರಂಪರೆಯನ್ನು ಅರಗಿಸಿಕೊಂಡು ಹೊಸ ಬಗೆಯ ಕಾವ್ಯವನ್ನು ಬರೆದಿದ್ದಾರೆ. ಇದು ಕಾವ್ಯ ಹೊರಳಬೇಕಾದ ದಾರಿಯನ್ನು ಸೂಚಿಸುತ್ತದೆ. ಏಕತಾನತೆಯಿಂದ ವಿವಿಧೇತೆ, ವಿವಿಧೆತೆಯಿಂದ ಅಗಾಧೆತೆಗೆ ಈ ಕವಿತೆಗಳು ಚಲಿಸುತ್ತವೆ. ಯಾವುದನ್ನು ಆರಾಧನೆಯ ಭಾವದಿಂದ ನೋಡದೆ ಬದುಕಿನ ತದಾತ್ಯದೊಂದಿಗೆ ಚಿಂತಿಸುತ್ತವೆ. ಹೊಸ ತಲೆಮಾರಿನ ಕವಿಗಳಿಗೆ ಭಿನ್ನ ಕಾವ್ಯ ರಚನೆಯ ಮಾದರಿಯನ್ನು ಈ ಕವಿತೆಗಳು ಸೃಷ್ಟಿಸಿವೆ. ಹೀಗಾಗಿ ಈ ಕವಿತೆಗಳು ಕಾವ್ಯ ಪರಂಪರೆಯಲ್ಲಿ ನವ ದಾರಿಯನ್ನು ನಿರ್ಮಾಣ ಮಾಡುತ್ತವೆ.
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...
©2024 Book Brahma Private Limited.