Date: 15-10-2025
Location: ಬೆಂಗಳೂರು
"ಒಂದು ಮಗುವಿನೊಂದಿಗೆ ಬೆರೆಯಲು ಇಷ್ಟು ಸಿದ್ಧತೆ ಎಂದರೆ ಮಂದೆ ಮಕ್ಕಳೊಂದಿಗೆ ಒಂದು ‘ವ್ಯವಸ್ಥೆ’ ರೂಪಿಸಿಕೊಳ್ಳುವುದಕ್ಕೆ ಕಾಲಾವಕಾಶ ಅಗತ್ಯವಾಗುವುದು. ಈ ಕಾಲಾವಕಾಶಕ್ಕೆ ಬರುವ ಮುನ್ನಿನ ಸಿದ್ಧತೆಯೆಂದರೆ, ಯಾವುದೇ ಕಾರಣಕ್ಕೆ ಇವರಲ್ಲಿ ‘ಯಾರೂ ಮುಖ್ಯರಲ್ಲ, ಅಮುಖ್ಯರಲ್ಲ’ ಎಂಬ ಖಚಿತ ನಿಲುವು ತಳೆಯುವುದು, ಆದಿಯಿಂದ ಅಂತ್ಯದವರೆಗೆ ಅದನ್ನು ಆಚರಣೆಯಲ್ಲಿಡುವುದು," ಎನ್ನುತ್ತಾರೆ ಸ. ರಘುನಾಥ. ಅವರು ತಮ್ಮ ʻಬೆರಕೆ ಸೊಪ್ಪುʼ ಅಂಕಣಕ್ಕೆ ಬರೆದ ಲೇಖನ ನಿಮ್ಮ ಓದಿಗಾಗಿ..
ಮಕ್ಕಳ ಆಲೋಚನೆಗಳು ಮತ್ತು ಅವುಗಳ ಕ್ರಮ, ಅವುಗಳ ಚಲನೆ, ದಿಕ್ಕುಗಳನ್ನು ಗ್ರಹಿಸುವುದು ಕಷ್ಟ. ಈ ಮಗು ಈ ರೀತಿ ಆಲೋಚಿಸುತ್ತಿದೆ, ಈ ದಿಕ್ಕಿನಲ್ಲಿಟ್ಟು ಅದಕ್ಕೆ ಚಲನೆ ಕೊಡುತ್ತಿದೆ ಅಂದುಕೊಳುತ್ತಿರುವಾಗಲೇ ಆ ಎಲ್ಲವನ್ನೂ ಬದಲಿಸಿಕೊಂಡಿರುತ್ತದೆ. ಈ ಪರಿಯನ್ನು ಅದು ಮಾತುಗಳನ್ನಾಡುತ್ತಿರುವಾಗ ಗಮನಿಸಿದರೆ ತಿಳಿಯುತ್ತದೆ. ಅದರ ವಯಸ್ಸು, ಮನೆ ಮತ್ತು ಅದರ ಪರಿಸರ, ಶಾಲೆ, ಮತ್ತಲ್ಲಿಯ ಪರಿಸರ, ಅದು ಬೆಳೆಸಿಕೊಳ್ಳುವ ಸಂಬಂಧಗಳು, ಅವನ್ನು ಏರ್ಪಡಿಸಿಕೊಳ್ಳುವ ಕ್ರಮ, ಪಡೆದುಕೊಳ್ಳುವ ಅನುಭವಗಳು ಅದರ ಕ್ರಿಯೆ ಹಾಗು ಪ್ರತಿಕ್ರಿಯೆಗಳಲ್ಲಿ ಆ ಮಗುವಿನ ಮನೋಭಾವ ತೆರೆದುಕೊಳ್ಳುತ್ತಿದೆ ಅಂದುಕೊಳ್ಳುವಾಗಲೇ ಮುಚ್ಚಿಕೊಳ್ಳುವುದುಂಟು. ಇದನ್ನು ಆ ಮಗು ಒದಗಿಸುವ ಅವಕಾಶದಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಅದರೊಂದಿಗೆ ಒಡನಾಟ ಬೆಳೆಸಿಕೊಳ್ಳಬೇಕು.
ಕಥೆ ಕೇಳುತ್ತೇನೆನ್ನುವ ಮಗು, ಕಥೇ ಹೇಳಿತ್ತಿರುವಾಗ ನಾನೊಂದು ಕಥೆ ಹೇಳುತ್ತೇನೆ ಅನ್ನುತ್ತದೆ. ಹೇಳಲು ಅವಕಾಶ ಕೊಡದೆ, ಹೇಳುವುದನ್ನು ಕೇಳಿಸಿಕೊಂಡು ಮೇಲೆ ಹೇಳೆಂದರೆ ಅದು ಕೇಳಿಸಿಕೊಳ್ಳುವುದಿಲ್ಲ, ಹೇಳುತ್ತೇನೆಂದುದನ್ನು ಹೇಳುವುದಿಲ್ಲ. ಕಥೆ ಕೇಳಿಸಿಕೊಳ್ಳುವ ಮಧ್ಯೆ ಕಥೆಬೇಡ ಪದ್ಯ ಹೇಳೆನ್ನಬಹುದು, ಇಲ್ಲವೆ ತಾನೇ ಹೇಳಬಹುದು. ತಾನು ಹೇಳುವ ಕಥೆಯನ್ನು ಪೂರ್ಣ ಮಾಡುವ ಮಕ್ಕಳು ಕಡಿಮೆ. ಇನ್ನೇನೋ ಮಾತು, ಚೇಷ್ಟೆಯಲ್ಲಿ ತೊಡಗುವುದೂ ಉಂಟು. ತಾನು ಹೇಳಲು ಮೊದಲಿಟ್ಟ ಕಥೆಯನ್ನು ಪೂರ್ತಿ ಹೇಳಿದರೆ, ನಾವು ಹೇಳುವುದು ಪೂರ್ಣವಾಗುವವರೆಗೆ ಕೇಳಿಸಿಕೊಂಡರೆ ನಮ್ಮ ಪುಣ್ಯ ಎಂದುಕೊಳ್ಳಬಹುದು. ಇಲ್ಲಿ ಮಕ್ಕಳು ಕೆಲವರಿದ್ದರೆ ಹೇಳುವ ಸ್ಪರ್ಧೆ ಅವರಲ್ಲಿ ತಂತಾನೇ ಹುಟ್ಟಿಕೊಂಡು ಬಿಡುತ್ತದೆ. ಮಧ್ಯೆ ಇನ್ನೊಬ್ಬರ ಪ್ರವೇಶವೂ ಆಗುತ್ತದೆ. ಇದನ್ನು ತಡೆಯುವುದಾಗದು. ತಡೆಯುವುದಾದರೆ ಯಾರನ್ನು ತಡೆಯುವುದು? ಆಗ ಬೇರೊಂದು ವಿಷಯವನ್ನು ತೆಗೆದುಕೊಳ್ಳುವುದು ಜಾಣತನ. ಮುಂದೊಂದು ದಿನ ‘ಅವತ್ತು ಹೇಳುತ್ತಿದ್ದ ಕಥೆಯನ್ನು ಹೇಳು’ ಎಂದು ಕೇಳಬಹುದು. ಅದಕ್ಕಾಗಿ ಆ ಕಥೆಯನ್ನು ನೆನಪಿಟ್ಟುಕೊಂಡಿರಬೇಕು. ಪದ್ಯದ ವಿಷಯವೂ ಅಷ್ಟೇ. ಸಹನೆ ಇರಬೇಕು. ಸಹನೆ ಇರದಿದ್ದರೆ ಮಗುವಿನೊಂದಿಗೆ ಬೆರೆಯುವುದಾಗದು.
ಒಂದು ಮಗುವಿನೊಂದಿಗೆ ಬೆರೆಯಲು ಇಷ್ಟು ಸಿದ್ಧತೆ ಎಂದರೆ ಮಂದೆ ಮಕ್ಕಳೊಂದಿಗೆ ಒಂದು ‘ವ್ಯವಸ್ಥೆ’ ರೂಪಿಸಿಕೊಳ್ಳುವುದಕ್ಕೆ ಕಾಲಾವಕಾಶ ಅಗತ್ಯವಾಗುವುದು. ಈ ಕಾಲಾವಕಾಶಕ್ಕೆ ಬರುವ ಮುನ್ನಿನ ಸಿದ್ಧತೆಯೆಂದರೆ, ಯಾವುದೇ ಕಾರಣಕ್ಕೆ ಇವರಲ್ಲಿ ‘ಯಾರೂ ಮುಖ್ಯರಲ್ಲ, ಅಮುಖ್ಯರಲ್ಲ’ ಎಂಬ ಖಚಿತ ನಿಲುವು ತಳೆಯುವುದು, ಆದಿಯಿಂದ ಅಂತ್ಯದವರೆಗೆ ಅದನ್ನು ಆಚರಣೆಯಲ್ಲಿಡುವುದು.
ಒಂದು ನಿಖರ ವಿಷಯದಲ್ಲಿ ಮಕ್ಕಳನ್ನು ತೊಡಗಿಸಿದಾಗ ಕೊಂಚ ಆ ಬದಿ, ಈ ಬದಿಯಾಗಿ ಒಂದು ಶಿಸ್ತಿನ ಆವರಣ ನಿರ್ಮಾಣವಾಗುತ್ತದೆ. ಅಲ್ಲೊಂದು ನಿರ್ದೇಶನವಿರುತ್ತದೆ. ತರಗತಿಯ ಕೋಣೆಯಲ್ಲಿಯೂ ಹೀಗಿರುತ್ತದೆ. ಅಲ್ಲಿ ನಿರ್ದೇಶನ ಮತ್ತು ನಿಯಂತ್ರಣದಿಂದಾಗಿ ದಿಕ್ಕು ದಿಕ್ಕುಗಳಿಗೆ ಮನಸ್ಸಿನ ಸ್ವತಂತ್ರ ಸಂಚಾರವಿರದು. ಚಲನೆಯೂ ನಿಯಂತ್ರಣದ ಒಳಗೇ ಇರುತ್ತದೆ. ಮಾನೀಟರಿಂಗ್ ಅಲ್ಲಿ ಕೆಲಸ ಮಾಡುತ್ತಿರುತ್ತದೆ. ಈ ಮಾನೀಟರಿಂಗ್ ಪಠ್ಯಪುಸ್ತಕದ ಮೂಲಕ ನಡೆಯುತ್ತಿರುತ್ತದೆ. ಈ ಮಾನೀಟರಿಂಗ್‌ನಲ್ಲಿರುವುದು ಅಂಕ ಗಳಿಸಲು ಲಕ್ಷ್ಮ ರೇಖೆಗಳ ಮಧ್ಯೆ ಮಗುವನ್ನು ಬಂಧಿಸಿಡುವ ಮನೋಕ್ರಿಯೆ. ಇದಕ್ಕೆ ಮಕ್ಕಳ ಮನೋಸಂಚಾರ ಅಗತ್ಯವೆನ್ನಿಸಿರುವುದಿಲ್ಲ. ಇದರ ತತ್ವ: ಮಿತಿ ಮತ್ತು ಮಿತ.
ಶಾಲೆಯ ಕೋಣೆಗಳೊಳಗೆ ಹೇಗಿರಬೇಕಿತ್ತೋ ಹಾಗಿದ್ದು ಹೊರಬಂದ ಮಕ್ಕಳ ಎಲ್ಲ ಇಂದ್ರಿಯಗಳು ಸಹಜ ಸಂಚಾರಕ್ಕೆ ಬರುವುದು ಹೊರಬಂದ ಮೇಲೆಯೇ. ಇದನ್ನು ಮುಕ್ತ ಚಟುವಟಿಕೆ ಅನ್ನಬಹುದೊ?
ವರ್ತಮಾನದ ದಿನಗಳಲ್ಲಿ ಮನೆಗಳು ಮಕ್ಕಳಿಗೆ ಇನ್ನೊಂದು ತೆರನಾಗಿ ತರಗತಿಯ ಕೋಣೆಗಳಂತೆಯೇ ಆಗಿವೆ. ಅಲ್ಲಿ ತಂದೆ ತಾಯಿ ನಿಯಂತ್ರಕ ಪಾತ್ರ ತಮ್ಮದಾಗಿಸಿಕೊಂಡಿರುತ್ತಾರೆ. ಇವರಲ್ಲಿ ಬಹುತೇಕರು ಅಂಕಗಳ ತುಲನೆದಾರರು. ಅಂಕಗಳ ವಿಷಯದಾಚೆಗೆ ತಮ್ಮ ಮಕ್ಕಳ ಕಲಿಕೆ, ಜ್ಞಾನ, ಅರಿವುಗಳನ್ನು ತಿಳಿಯುವ ಪುರುಸತ್ತು ಇವರಿಗಿರದು. ಮಕ್ಕಳ ವಿಶ್ವಾಸ ಗಳಿಸಿ, ಏಕಾಂತದಲ್ಲಿ ಕೇಳಿದರೆ, ‘ಸ್ಕೂಲಲ್ಲೂ ಟಾರ್ಚರ್, ಮನೇಲೂ ಟಾರ್ಚರ್’ ಅನ್ನುವ ಮಕ್ಕಳ ಸಂಖ್ಯೆಯೇ ಹೆಚ್ಚು. ಈ ಭಾರದ ಮನಸ್ಸುಗಳನ್ನು ಹಗುರಗೊಳಿಸುವ ಹೊಣೆ ಉಪಾಧ್ಯಾಯ, ಪೋಷಕ, ಮಕ್ಕಳ ಪ್ರೇಮಿ ಚಿಂತಕರ ಮೇಲಿದೆ. ಈ ತ್ರಿವರ್ಗಗಳ ಸಹಕಾರದಿಂದ ಮಕ್ಕಳ ಪರಿಪೂರ್ಣ ವಿಕಾಸ ಸಾಧ್ಯವಾಗುವುದು. ರುಚಿ-ಅಭಿರುಚಿಗಳು ಅರಳುವುವು.
ಮಕ್ಕಳಿಗೆ ಆಸಕ್ತಿಯಿಲ್ಲ, ಶ್ರದ್ಧೇಯಿಲ್ಲ, ಸ್ಥಿಮಿತತೆಯಿಲ್ಲ ಎಂಬುದು ಜಾರಿಕೊಳ್ಳಲು ಹೇಳುವ ನೆಪಗಳು. ಸ್ಥಿಮಿತತೆ ಅನ್ನುವುದು ಸರಳವಾದುದಲ್ಲ. ದೊಡ್ಡವರಲ್ಲಿಯೇ ಇದು ವಿರಳ. ಇನ್ನು ಮಕ್ಕಳಲ್ಲಿ ಕಾಣಲಾದೀತೆ? ಚಂಚಲತೆಯೇ ಮಕ್ಕಳ ಸಹಜ ಗುಣ. ಇನ್ನು ಆಸಕ್ತಿ ಮತ್ತು ಶ್ರದ್ಧೆ. ಅವು ಮೂಡುವಂತೆ ನಡೆದುಕೊಳ್ಳಬೇಕಿರುವುದು ಯಾರು? ಇದಕ್ಕೆ ಉತ್ತರವಿರುವುದು ನಮ್ಮ ಮನಸ್ಸಿನಲ್ಲಿಯೇ.
ಸಾಹಿತ್ಯ, ಸಂಗೀತ, ಅಭಿನಯ, ನೃತ್ಯ, ಚಿತ್ರಕಲೆ, ಜಾನಪದ ಸಾಹಿತ್ಯ ಕಲೆಗಳು ಇಂತಹವೆಲ್ಲ ಮನಸ್ಸು ಮತ್ತು ಮನೋಭಾವದ ವಿದ್ಯೆಗಳು. ಗುರುತಿಸುವಿಕೆ, ಪ್ರೇರಣೆ, ಪ್ರೋತ್ಸಾಹದಲ್ಲಿ ಇವು ಮಕ್ಕಳಲ್ಲಿ ವಿಕಸಿಸುತ್ತವೆ. ಇಲ್ಲಿ ಅವರು ಯಶಸ್ಸು ಗಳಿಸಲು ‘ಕಲಿಕೆಯೇ ಜಾಣ ಬಲ್ಲ ಕ್ರಮ’ ಎಂಬುದನ್ನು ಮನವರಿಕೆ ಮಾಡಿಕೊಡಬೇಕು.
ನಲುಮೆಯೇ ಮಕ್ಕಳು. ಅವರಲ್ಲಿನ ನಲುಮೆ ಪ್ರಮುಖವಾಗಿ ಗೆಳೆತನ, ಕೂಡಿ ಕಲಿಯುವಿಕೆ, ಆಟ, ಸಹಕಾರ, ತಿರುಗಾಟ ಮುಂತಾದವುಗಳ ಮೂಲಕ ಪ್ರಕಟವಾಗುತ್ತಲೇ ಇರುತ್ತದೆ. ಇದೊಂದು ಹರಿವು. ಈ ಹರಿವನ್ನು ಸಮಾಜದೆಡೆಗೆ ತಿರುಗಿಸುವ ಜವಾಬ್ದಾರಿ ಶಿಕ್ಷಕರದು ಮತ್ತು ತಾಯಿತಂದೆಯರದು. ಇದನ್ನು ಸ್ವಾರ್ಥದ ಕಡೆಗೆ ತಿರುಗಿಸಿದರೆ ಮಕ್ಕಳು ಸ್ವಾರ್ಥಿಗಳಾಗುವ ಅವಕಾಶವೇ ಹೆಚ್ಚು. ಹೀಗಾದ ಮುಂದಿನ ದಿನಗಳಲ್ಲಿ ಸ್ವಾರ್ಥವು ತಾಯಿತಂದೆಯರನ್ನೂ ದೂರ ಮಾಡಿಸುವುದು. ಹೀಗೆ ಮಾಡಿಸಿದ ನಿದರ್ಶನಗಳಿಗೆ ಕೊರತೆಯಿಲ್ಲ. ಇದಾದಾಗ ಮಾಡಿದ ತಪ್ಪನ್ನು ಅರಿಯದೆ ಇಲ್ಲವೆ ಮುಚ್ಚಿಡಲು ಮಕ್ಕಳನ್ನು ದೂರುವುದು ಸಾಮಾನ್ಯ ನಡವಳಿಕೆಯಾಗಿ ಕಾಣಿಸುತ್ತದೆ. ಈ ಎಚ್ಚರದಲ್ಲಿ ಮಕ್ಕಳನ್ನು ಬೆಳೆಸಿದವರಿಗೆ ವೃದ್ಧಾಶ್ರಮಗಳಿಗೆ ಸೇರುವ ಅವಕಾಶಗಳು ಕಡಿಮೆ ಇರುತ್ತವೆ. ಈ ಸಮಸ್ಯೆ ಇಲ್ಲದಾಗಲು ಸಹನೆ ಸಹಿತವಾದ ಉದಾರ ಭಾವನೆಗಳನ್ನು ಬಿತ್ತಲು ಇರುವ ಮಾರ್ಗಗಗಳನ್ನು ತೆರೆದಿಟ್ಟುಕೊಂಡೇ ಇರಬೇಕಾಗುತ್ತದೆ. ಈ ಮಾರ್ಗಗಗಳು ಕುಟುಂಬ ಹಾಗು ಸಮಾಜದತ್ತಲೇ ಇರಬೇಕು. ‘ಮನೆಯೆ ಮೊದಲ ಪಾಠಶಾಲೆ’ ಎಂಬುದರ ಅರ್ಥ, ಭಾವ ಇದೇ. ಮನೆ, ಶಾಲೆ, ಸಮಾಜ ಇದು ಆ ಮಾರ್ಗದ ಸೂತ್ರ. ಇತ್ತಿಚೆಗೆ ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ಥಾಪಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಸಿದ್ಧ ಸಾಹಿತಿ ಶ್ರೀ ಜಯಂತ ಕಾಯ್ಕಿಣಿ “ಬೆಳಕಿನ ಕಡೆಗೆ ಚಾಚಿಕೊಂಡು ಹೋಗುವುದೇ ಶಿಕ್ಷಣ’ ಅಂದರು. ಈ ಮೇಲಿನೆಲ್ಲ ಶಬ್ದಗಳ ಸಾರಾಂಶ ಅವರ ಮಾತಿನಲ್ಲಿದೆ.
*
ಖಚಿತ ಆಲೋಚನೆ, ಚಿಂತನೆಗಳ ರೀತಿಯಂತೆಯೇ ಕಾರ್ಯ, ಕ್ರಿಯಾ ಯೋಜನೆಗಳು ರೂಹು ತೆಳೆಯುತ್ತವೆ. ಯಾರಿಗಾಗಿ, ಏತಕ್ಕಾಗಿ ಎಂಬುದು ನಿಧಾರಿತವಾಗಿರಬೇಕಷ್ಟೆ. ಆಗಷ್ಟೇ ಒಂದು ಸ್ವರೂಪ ಬರಲು ಸಾಧ್ಯ.
ಕುಂಬಾರ ಮಣ್ಣಿನ ಮುದ್ದೆಯನ್ನು ತಿಗರಿಯ ಮೇಲಿಟ್ಟು ತಿರುಗಿಸಿದರೆ ಯಾವ ಆಕೃತಿಯೂ ಮೂಡದು. ದೊಡ್ಡ ದೊಡ್ಡ ಮಡಿಕೆ, ಗಡಿಗೆ, ಹರಿವಿ, ಗುಡಾಣಗಳನ್ನು ತಯಾರಿಸಿದರೆ ಅವುಗಳನ್ನು ಬಳಸುವ ಸಂದರ್ಭಗಳೇ ಬೇರೆ. ಅವನ್ನು ಮಕ್ಕಳ ಆಟಕ್ಕೆ ಕೊಡಲಾಗದು. ಕೊಟ್ಟರೂ ಪ್ರಯೋಜನವಿರದು. ಅವುಗಳನ್ನು ಮಕ್ಕಳಾಟಕ್ಕೆಂದೇ ಕುಂಬಾರ ಪುಟ್ಟಪುಟ್ಟದಾಗಿ ತಯಾರಿಸುತ್ತಾನೆ. ಇದೊಂದು ಶಿಕ್ಕಣ. ಇದನ್ನೇ ಮಕ್ಕಳಿಗೆ ಕಲಿಸಿದರೆ ಈ ಕಲಿಕೆ ನಿರ್ಮಾಣದ್ದಾಗುತ್ತದೆ. ನಿರ್ಮಾಣ ಕ್ರಿಯೆಯಲ್ಲಿ ಸೃಜನ ಕಲೆಗಳೂ ಇರುತ್ತವೆ.
ಮಕ್ಕಳಿಗೆ ಸಮಯ ಮತ್ತು ಅವಕಾಶ ಕಲ್ಪಿಸಬೇಕು. ಓದಲು ಪ್ರೇರೇಪಿಸಬೇಕು. ಈ ವಿಷಯಕ್ಕೆ ಬಂದಾಗ ತರ‍್ಬೆಳು ಶಿಕ್ಷಕ ಮತ್ತು ಪೋಷಕರರತ್ತ ಚಾಚುತ್ತದೆ.
ಅನುಭವದ ಗಳಿಕೆಗೆ ಅಗತ್ಯವಾದ ಎಲ್ಲ ಅವಕಾಶ, ಅನುಕೂಲಗಳನ್ನು ಕಲ್ಪಿಸಿ ಮಕ್ಕಳ ಮನಗಳಲ್ಲಿ ಭಾವಗಂಗೆಯನ್ನು ತುಂಬಬೇಕು. ಆಗದಿದ್ದರೆ ಇರುವ ಗಂಗೆಯಾದರೂ ಬತ್ತದಂತೆ ನೋಡಿಕೊಳ್ಳಬೇಕು.
"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...
"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...
"ದಾವಣಗೆರೆಯಲ್ಲಿ ಇಳಿದಾಗ ರಾತ್ರಿ ಎರಡೂವರೆ. ಆಟೋಕ್ಕೆ ಹೋಗಲೂ ಕಾಸಿಲ್ಲ. ಅದ್ಯಾರೋ ಪುಣ್ಯಾತ್ಮನಿಗೆ ಇರುವ ಸ್ಥಿತಿ ...
©2025 Book Brahma Private Limited.