Date: 20-09-2020
Location: ಬೆಂಗಳೂರು
ಹಿರಿಯ ವಿಮರ್ಶಕರಾದ ಡಾ. ಎಚ್.ಎಸ್. ರಾಘವೇಂದ್ರರಾವ್ ಅವರು ಬರೆವ ಅಂಕಣ ’ಆವಗೆಯ ಕಿಚ್ಚು’. ಈ ಸರಣಿಯಲ್ಲಿ ಅವರು ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲಿದ್ದಾರೆ. ಹಾಡುವ ಹುಟ್ಟುವ ಬಗೆಯನ್ನು ವಿವರಿಸುತ್ತ ಭಾಷೆ- ಭಾವ ಒಂದಾಗುತ್ತ ಕವಿಯ ಆಶಯ ವ್ಯಕ್ತವಾಗುವ ರೀತಿಯನ್ನು ಸೊಗಸಾಗಿ ವಿವರಿಸಿದ್ದಾರೆ.
ಹಾಡು ಹುಟ್ಟುವುದು ಹೇಗೆ? ಕೊನೆಗೂ ಹಾಡು ಯಾರದು? ‘ಹಾಡುವವನದಲ್ಲ ಹಾಡು ಕೇಳುವವರದು’ ಎಂದರು ನರಸಿಂಹಸ್ವಾಮಿಯವರು. ನನ್ನ ಕೊಳಲು ನಿನ್ನ ಕೊರಳಾಗುತ್ತದೆ ಎಂದು ಬೇಂದ್ರೆಯವರು ಹೇಳಿದರು. ಕವಿಯ ಹೃದಯಕ್ಕೂ ಕೇಳುಗನ ಹೃದಯಕ್ಕೂ ಇರುವ ಸೇತುವೆ ಯಾವುದು ಎನ್ನುವ ಪ್ರಶ್ನೆಗೆ ಇರುವ ಏಕೈಕ ಉತ್ತರ ‘ಭಾಷೆ’. ದೇಶ, ಕಾಲ, ಸಂದರ್ಭಗಳ ಹೊಳೆಹರಿವುಗಳನ್ನು ದಾಟಿ ಕವಿಯನ್ನು ಓದುಗರಿಗೆ ತಲುಪಿಸುವ ದೋಣಿ ಭಾಷೆಯೇ. ಅದು ದೋಣಿಯೂ ಹೌದು, ಅದರೊಳಗಿನ ಸರಕೂ ಹೌದು. ಕೊನೆಗೂ ಉಳಿಯುವುದು ಭಾಷೆಯೇ ಹೊರತು ಕವಿಯಲ್ಲ. ನಮ್ಮ ನುಡಿಯು, ಅನಾದಿಯಾದರೂ ಅನಂತವಾದರೂ ಇಂದಿನ ಕ್ಷಣದಲ್ಲಿ ಮರುಜೀವ ತಳೆದು ಈಗಲೂ ಪ್ರಸ್ತುತವಾಗಬೇಕಾದ ನಡೆಯುವ, ಕುಣಿಯುವ, ಬಾಗುವ, ಬಳುಕುವ, ಬೆಡಗು. ಅದು ವಸ್ತುಲೋಕ, ಭಾವಲೋಕ, ವಿಚಾರಲೋಕಗಳಿಗೆ ಹಿಡಿದ ಕನ್ನಡಿಯಲ್ಲ. ಬದಲಾಗಿ ಅವೆಲ್ಲವನ್ನೂ ಬದಲಿಸಿ ಹೊಸ ಹುಟ್ಟು ಕೊಡುವ ಮರುಜೇವಣಿ. ಇದನ್ನು ಆಗು ಮಾಡುವುದು ಕವಿಯ ದಿನದಿನದ ದಂದುಗ. ಕವಿಯು ಇದನ್ನು ತಾನು ‘ಮಾಡಿದೆನೆಂದು ಮನದಿ ನುಡಿ’ದರೂ ಭಾಷೆಯು ಅವನನ್ನು ಏಡಿಸಿ ಕಾಡುತ್ತದೆ. ಕವಿತೆ ‘ಆಗುತ್ತದೆ’. ಅದರ ಮೂಲಸೆಲೆ ಕವಿಹೃದಯದಲ್ಲಿ ಮನೆಮಾಡಿರುವ ಮೌನ. ಬೇಂದ್ರೆ ಇದನ್ನು ‘ಶಬ್ದಕೆ ಹಾಸಿಗೆಯಾಗಿಹ ತನಿ ಮೌನ’ ಎಂದು ಕರೆಯುತ್ತಾರೆ. ಹೀಗೆ ಹುಟ್ಟುವ ಕವಿತೆಗಾಗಿ ಕಾಯುವುದಷ್ಟೇ ಕವಿಕಾಯಕ. ಅವನು ಸಮುದಾಯದೊಳಗೆ ಮಿಡಿಯುತ್ತಿರುವ ನಗು-ನಿಟ್ಟುಸಿರುಗಳನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಭಾಷಿಕ ಗ್ರಹಿಕೆಯಾಗಿ ಅಲ್ಲ, ವಿಶಿಷ್ಟ ಸಂವೇದನೆಯ ಫಲವಾದ ಇಂದ್ರಿಯ ಸ್ಪಂದನವಾಗಿ. ರೇಡಿಯೋ ಯಂತ್ರವು ಗಾಳಿಯಲ್ಲಿ ಚಲಿಸುವ ಅಲೆಗಳನ್ನು ಸೂಕ್ಷ್ಮದಲ್ಲಿ ಹಿಡಿದು, ಹಿಗ್ಗಿಸಿ ಹಾಡಾಗಿ ಬದಲಿಸುವಂತೆ. ಆದ್ದರಿಂದಲೇ ಪು.ತಿ.ನ. ಅವರು ‘ಪ್ರಕೃತಿಶಿಲ್ಪಿಯು ಸಮೆದ ಚಿದ್ಯಂತ್ರ ನೀನಲಾ’ ಎಂದು ಕವಿಗೆ ಹೇಳಿದ್ದು. ಇದು ಕೇವಲ ಕವಿತೆಯ ಮಾತಲ್ಲ, ಎಲ್ಲ ಬರವಣಿಗೆಯ ಎಲ್ಲ ಕಲೆಯ ಮಾತು.
ಆದರೆ ಸುಪ್ತಪ್ರಜ್ಞೆಯ ಮೇಲಿನ ಈ ಪರಿಯ ಅವಲಂಬನವು ಕವಿಯ ಸಾಮಾಜಿಕ/ವೈಚಾರಿಕ ತೊಡಗುವಿಕೆಗೆ ಭಂಗ ತರುವುದಿಲ್ಲವೇ, ಕೊನೆಗೂ ಬರೆಯುವಿಕೆಯೇ ಒಂದು ಜಾಗೃತವಾದ ಕ್ರಿಯೆ ಅಲ್ಲವೇ ಎಂಬ ಪ್ರಶ್ನೆಯನ್ನು ಹಿರಿಯರು, ಗೆಳೆಯರು ಕೇಳಿಕೊಂಡಿದ್ದಾರೆ. ಅದರಲ್ಲೂ ಸಾಮಾಜಿಕವಾದ ತಿಳಿವಳಿಕೆ ಮತ್ತು ಪ್ರತಿಭಟನೆಗಳು ಕಲಾವಿದರ ಮೂಲಭೂತ ಕಾಳಜಿಯಾಗಿರುವ ನಮ್ಮ ಕಾಲದಲ್ಲಿ ‘ಒಳಗು’ ಮತ್ತು ‘ಹೊರಗು’ಗಳ ಸಮತೋಲನವನ್ನು ಸಾಧಿಸುವುದು ಹೇಗೆ ಎನ್ನುವುದು ಮುಖ್ಯವಾದ ಪ್ರಶ್ನೆ. ಇದಕ್ಕೆ ಉತ್ತರವನ್ನು ಹುಡುಕಲು ನಾನು ಈ ಬರವಣಿಗೆಯ ಶೀರ್ಷಿಕೆಯಾಗಿರುವ ಕವಿತೆಯ ಕಡೆ ಹೋಗುತ್ತೇನೆ. ಅಲ್ಲಿ ಬೇಂದ್ರೆಯವರು
“ನಮ್ಮ ನಿಮ್ಮ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ’
ಎಂದು ಬರೆಯುತ್ತಾರೆ. ನಾನು ಈ ಸಾಲುಗಳನ್ನು ‘ಗಮಗಮಾ ಗಮಾಡಸತಾವ ಮಲ್ಲಿಗಿ’ ಕವಿತೆಯ ಸಂದರ್ಭದಿಂದ ಹೊರಗೆ ತೆಗೆದು ಬಳಸಿಕೊಳ್ಳುತ್ತಿದ್ದೇನೆ. ನಿಜವಾದ ಕವಿತೆಯು ಕವಿ ಮತ್ತು ಜನತೆಯ ಸಹಯೋಗದಿಂದ ಹುಟ್ಟುತ್ತದೆ. ಆಗ ಕವಿಯು ಜನತಾಂತರ್ವಾಣಿ ಆಗುತ್ತಾನೆ. ಆದರೆ, ಅಂಥ ಕವಿತೆಯು ಹೀಗೆ ನೋಡಿ ಹಾಗೆ ಬರೆಯುವ ಹಸಿ ಹಸಿ ಪ್ರತಿಕ್ರಿಯೆ ಆಗಿರುವುದಿಲ್ಲ. ವ್ಯವಧಾನದಲ್ಲಿ ‘ಆಗುವ’ ಆ ಕೆಲಸವು ಬನದ ತುಂಬ ಹರಡಿಕೊಳ್ಳುವ ಬೆಳದಿಂಗಳು ಆಗುತ್ತದೆ, ಆರ್ದ್ರವಾದ ಸಂತೋಷವನ್ನು ಸೂರೆಮಾಡುತ್ತದೆ. ಈ ಹಾಡು ಸಾರ್ಥಕವಾಗಲು ಓದುಗನ ಸಹಕಾರ ಸಹಯೋಗಗಳೂ ಬೇಕು. ಇಷ್ಟಕ್ಕೂ ಬನದ ಬೆಳದಿಂಗಳು ರಸಿಕರಿಲ್ಲದೆ ‘ಕಾಡು ಬೆಳುದಿಂಗಳು’ ಕೂಡ ಆಗಬಹುದು.
ಲೋಕವು ಕವಿಯೊಳಗೆ ಸೇರಿ ಮತ್ತೇನೋ ಆಗಿ, ಹೊಸಹುಟ್ಟು ಪಡೆಯುವ ಈ ಗಾರುಡಿಯನ್ನು ವಿವರಿಸಲು ನಾನು ಎಷ್ಟೇ ಪ್ರಯತ್ನಿಸಿದರೂ ಬೇಂದ್ರೆಯವರ ಮಾತಿಗೆ ಸಮನಲ್ಲ:
“ಕತ್ತಲಲ್ಲೆ ಬೆಳಕು ಮಿಂಚಿ ಪಡೆದಿತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿ ಸಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣಾ
ಅಂತರಂಗದಾ ಮೃದಂಗ ಅಂತು ತೋಂ ತನಾನಾ……” (‘ಕಣ್ಣ ಕಾಣಿಕೆ’, ಗಂಗಾವತರಣ)
ಇದು ಕವಿತೆಗೆ ಹೆಚ್ಚು ಸಹಜವೆನಿಸಿದರೂ ಕಥೆ, ಕಾದಂಬರಿ ಕೊನೆಗೆ ವಿಮರ್ಶೆ ಎಲ್ಲವೂ ಈ ಹದದಲ್ಲಿಯೇ ಮೂಡುತ್ತವೆ. ಬರೆಯುವವನು ತನ್ನ ವ್ಯಕ್ತಿತ್ವವನ್ನು ‘ನಿರಸನ’ಗೊಳಿಸಿಕೊಂಡು, ಬೇರೆ ಯಾವುದಕ್ಕೋ ತನ್ನನ್ನು ಕೊಟ್ಟುಕೊಂಡು ಬರೆಯುವಾಗಲೂ ಅವನ ವ್ಯಕ್ತಿತ್ವದ ಎಲ್ಲ ಆಯಾಮಗಳೂ ಹಾಜರಾಗಿಯೇ ಇರುತ್ತವೆ. ಆದರೆ ಆಗ ಅವನು ವಕೀಲನಾಗಿರದೆ ದಾರ್ಶನಿಕನಾಗಿರುತ್ತಾನೆ. ‘ರಾಮಾಯಣ ದರ್ಶನಂ’ ಕಾವ್ಯವೇ ಕುವೆಂಪು ಅವರನ್ನು ನಿರ್ಮಿಸುತ್ತದೆ. ಈ ಸ್ಥಿತಿಯನ್ನು ಕುವೆಂಪು ‘ವ್ಯಕ್ತಿತನವೆ ಕವಿಗೆ ಇಲ್ಲ, ಅವನು ಇಲ್ಲ ಅಥವ ಎಲ್ಲ’’ ಎಂದು ವರ್ಣಿಸುತ್ತಾರೆ. ಲೇಖಕನು ಈ ಸ್ಥಿತಿಯನ್ನು ಪಡೆಯುವುದು ಸುಲಭವಲ್ಲ. ಅನುಭವಗಳು, ಭಾವನೆಗಳು, ಆಲೋಚನೆಗಳು, ವಿಚಾರಗಳು ಎಲ್ಲವೂ ಕಣ್ಕಟ್ಟುಗಳಂತೆ ಕೆಲಸ ಮಾಡುತ್ತವೆ. ಯಾವುದನ್ನು ಹೇಳಬೇಕು, ಯಾಕೆ ಹೇಳಬೇಕು, ಹೇಗೆ ಹೇಳಬೇಕು ಎನ್ನುವ ಸೆನ್ಸಾರ್ ವ್ಯವಸ್ಥೆಯು ಸೃಜನಶೀಲತೆಯನ್ನು ಹೊರಗಿಡುವ ತಡೆಗೋಡಯಾಗುತ್ತದೆ. ‘ಅದೃಶ್ಯ ಲೋಕದ, ಅನೂಹ್ಯರೂಪದ ಅನಂತ ಕಾಲದ ಯಾತ್ರಿಕರಾ’ದ ‘ಒಳಲೋಕದ ಸಣ್ಣಸಣ್ಣರು’ ಬರುವುದೇ ಇಲ್ಲ.(‘ಅತಿಥಿಗಳು’, ಗೋಪಾಲಕೃಷ್ಣ ಅಡಿಗ) ಪ್ರತಿಭೆಯ ಕಣ್ಣು ಮುಚ್ಚಿದ ಈ ಬರವಣಿಗೆಯೂ ಎಲ್ಲ ಕಾಲದಲ್ಲಿಯೂ ಇರುತ್ತದೆ. ಆದರೆ, ನಮ್ಮ ಕಾಲದ ಹಲವು ಒತ್ತಡಗಳು ಇದನ್ನು ಜಾಸ್ತಿಮಾಡಿವೆ. ಸುಲಭ ಸಂವಹನ, ವಾದಮಂಡನೆ, ತಕ್ಷಣದ ಪ್ರತಿಕ್ರಿಯೆ ನೀಡಬೇಕೆಂಬ ಆಸೆ, ಮಾಧ್ಯಮಗಳ ಧೋರಣೆ, ಭಾಷೆಯ ಬಗೆಗಿನ ನಿರ್ಲಕ್ಷ್ಯ ಮುಂತಾದ ಹಲವು ಕಾರಣಗಳನ್ನು ಕೊಡಬಹುದು. ಪ್ರಾದೇಶಿಕ ಮತ್ತು ಸಾಮಾಜಿಕ ಉಪಭಾಷೆಗಳ ಬಳಕೆಯು ಅನುಕ್ತವಾಗಿ ಉಳಿದಿರುವ ಸಂಗತಿಗಳ ‘ಮರುಸೃಷ್ಟಿ’ಗೆ ಅನುಕೂಲವಾಗುವಂತೆಯೇ ಕೇವಲ ‘ನಾವೆಲ್ಟಿ’ಗೋಸ್ಕರ ಬಳಸುವ ಯಾಂತ್ರಿಕ ಸಲಕರಣೆಯೂ ಆಗಿಬಿಡಬಹುದು. ಸಾಹಿತ್ಯಕೃತಿಯ ಭಾಷೆಯು ಆಡುಮಾತಿನ ನಕಲು ಆಗಲಾರದು, ಆಗಬಾರದು. ಬದಲಾಗಿ ಅದು ಲೇಖಕನಿಗೆ ಲಭ್ಯವಿರುವ ಸಂಪನ್ಮೂಲವಾಗಬೇಕು. ಅದು ಇಟ್ಟಿಗೆಯೇ ಹೊರತು ಕಟ್ಟಡವಲ್ಲ.
ನಮ್ಮ ಕಾಲದ ಬಹುಪಾಲು ಕವಿತೆಯು ಕಿವುಡರ ಆಡುಂಬೊಲವಾಗಿದೆ. ಕೇಳುಗರಲ್ಲ, ಸ್ವತಃ ಕವಿಗಳೇ ತಮ್ಮದೇ ಕವಿತೆಯನ್ನು ‘ಕೇಳಿಸುತ್ತಿಲ್ಲ’ ಮತ್ತು ‘ಕೇಳಿಸಿಕೊಳ್ಳುತ್ತಿಲ್ಲ.’ಲಯ, ನಾದ ಮತ್ತು ಶಬ್ದಗುಣಗಳಿಗೆ ಎರವಾದ ಕೆಟ್ಟ ಗದ್ಯವು ಕವಿತೆಯ ವೇಷ ಹಾಕಿಕೊಂಡು ಮೆರೆಯುತ್ತಿದೆ. ಬರೆದ ಮರುದಿನವೇ ಮರವೆಗೆ ಪಕ್ಕಾಗುತ್ತಿದೆ. ಕವಿತೆಗೆ ಇರಬೇಕಾದ, ಇರಬಹುದಾದ ಬೇರೆ ಹಲವು ಗುಣಲಕ್ಷಣಗಳು ಇದ್ದರೂ ಅದರ ಭಾಷಿಕ ಅನನ್ಯತೆಯು ಕಾಣೆಯಾಗುತ್ತಿದೆ. ಹೀಗೆಂದರೆ ಹಳೆಯ ಛಂದೋರೂಪಗಳಿಗೆ ಅಥವಾ ಕಳೆದ ಕಾಲದ ಸ್ಟಾಂಜಾಯಿಕ್ ರಚನೆಗಳಿಗೆ ಮರಳಿ ಹೋಗಿ ಪದ್ಯ ಬರೆಯಬೇಕೆಂದು ಅರ್ಥವಲ್ಲ. ನಾನು ಕಾವ್ಯದ ಅನಂತ ಹೊಸ ಸಾಧ್ಯತೆಗಳನ್ನು ನಿರಾಕರಿಸುತ್ತಿಲ್ಲ. ಆದರೆ ಶಬ್ದ ಮತ್ತು ಅರ್ಥಗಳ ಅವಿನಾ ಸಂಬಂಧದ ಕಡೆಗೆ ಗಮನ ಸೆಳೆಯುತ್ತಿದ್ದೇನೆ. ಎಲ್ಲ ಕಲೆಯೂ ಮೂಲಭೂತ ಘಟಕಗಳ ವಿಭಿನ್ನ ಸಂಯೋಜನೆಗಳಿಂದ ಹುಟ್ಟುತ್ತದೆ. ಇದು ದೇಶದಲ್ಲಿಯೂ ನಡೆಯಬಹುದು, ಕಾಲದಲ್ಲಿಯೂ ನಡೆಯಬಹುದು. ಸಾಹಿತ್ಯದಲ್ಲಿ ಧ್ವನಿ, ಪದ, ವಾಕ್ಯ, ಚಿತ್ರ, ಘಟನೆ ಎಲ್ಲವೂ ಇಂತಹ ಸಂಯೋಜನೆಗೆ ತೆತ್ತುಕೊಳ್ಳುವ ಘಟಕಗಳೇ. ಒಂದು ಬಗೆಯ ಕವಿತೆಯನ್ನು ನಾದವು ನಿಯಂತ್ರಿಸಿದರೆ ಮತ್ತೊಂದು ಬಗೆಯನ್ನು ಪ್ರತಿಮೆಗಳ ಸಂಯೋಜನೆಯು ನಿಯಂತ್ರಿಸಬಹುದು. ಆದರೆ ಎಲ್ಲದರಲ್ಲಿಯೂ ಕಿವಿಗೆ ಅನ್ನವಾಗುವ ಭಾಷೆ ಇರುತ್ತದೆ. ನಿಜವಾದ ಕವಿತೆ ಕಿವಿಗೆ ತಲುಪಿ ಅಲ್ಲಿಯೇ ನೆಲೆಸುತ್ತದೆ. ಹೀಗೆ ಕಿವಿಯೇ ನಿಲ್ದಾಣವಾಗಿ ಇಂದ್ರಿಯ ಲೋಕವನ್ನು ಮತ್ತೆ ಕಟ್ಟಿಕೊಡುವ ಕವಿತೆಯನ್ನು ಜರ್ಮನ್ ಕವಿ ರಿಲ್ಕ ಹೀಗೆ ವರ್ಣಿಸುತ್ತಾನೆ:
From this one bliss of song and of lyre
It rises, like a maiden
Shining clear through its spring veil
And comes to rest in my ear,
And slumbers within me. And its sleep is
All trees I have admired, distances which are tangible,
Meadows that can be touched
And every astonisment at myself.
The world sleeps within it.” (Sonnets to Orpheus 1-2, Eng Trns Robert Temple)
ಅವನು ವರ್ಣಿಸಿರುವುದೂ ‘ನಾದಲೀಲೆ’ಯೇ. ಆದ್ದರಿಂದಲೇ ಹಲವು ಪ್ರಸಿದ್ಧ ಕವಿತೆಗಳಲ್ಲಿ ಮೊದಲ ಸಾಲು ಒಟ್ಟು ಕವಿತೆಯ ವಿನ್ಯಾಸವನ್ನೇ ತೀರ್ಮಾನಿಸುತ್ತದೆ. ಇಂಥ ರಚನೆಗಳಿಂದ ಬಿಡುಗಡೆ ಪಡೆಯುವೆವೆಂದು ಹೊರಟ ಪ್ರಮುಖ ನವ್ಯ ಕವಿಗಳೂ ಲಯವಿನ್ಯಾಸದ ಸೂಕ್ಷ್ಮಗಳನ್ನು ಕೈಬಿಡಲಿಲ್ಲ. ಅಡಿಗ, ರಾಮಚಂದ್ರಶರ್ಮ, ಲಂಕೇಶ್, ನಿಸಾರ್ ಅಹಮದ್ ಎಲ್ಲರೂ ಅಷ್ಟೆ. ರಾಮಾನುಜನ್ ಅವರ ಗದ್ಯವೂ ಲಯರಹಿತವಲ್ಲ. ಎಚ್.ಎಸ್. ಶಿವಪ್ರಕಾಶ್, ವೆಂಕಟೇಶಮೂರ್ತಿ, ಸಿದ್ದಲಿಂಗಯ್ಯನವರೂ ಹಾಗೆಯೇ. ಆದರೆ ಬಹುಪಾಲು ಕವಿಗಳು ಈ ಗುಟ್ಟನ್ನು ಮರೆತಿರುವರೆನ್ನುವುದು ದುರಂತ. ನಾದದಲ್ಲಿ ಮೊದಲಾದರೂ ಅರ್ಥದಲ್ಲಿ ಮೊದಲಾದರೂ ಚಿತ್ರದಲ್ಲಿ ಮೊದಲಾದರೂ ಭಾಷಿಕ ಲಯಗಳಿಂದ ಬಿಡುಗಡೆಯಿಲ್ಲ. ಹೊಸ ಲಯಗಳು ಹುಟ್ಟುತ್ತವೆ. ಆದರೆ ಲಯರಾಹಿತ್ಯವು ಸರಿಯಲ್ಲ.
ಇದುವರೆಗೆ ಹೇಳಿದ ಮಾತುಗಳಲ್ಲಿ ಕವಿತೆಗೆ ಕೊಂಚ ಜಾಸ್ತಿ ಒತ್ತು ಸಿಕ್ಕಿದೆ. ಕಥೆ, ಕಾದಂಬರಿಗಳ ಮಾತೂ ಹೀಗೆಯೇ. ಅಲ್ಲಿ ಕಲ್ಪನೆಯಿಂದ ಮೈದಳೆದ ವಾಸ್ತವದ ಸಂಯೋಜನೆ ಇರುತ್ತದೆ. ಒಳ್ಳೆಯ ಕಾದಂಬರಿಯಲ್ಲಿ, ಒಂದೇ ಒಂದು ವಾಕ್ಯವೂ ನಿಜವಲ್ಲ. ಕಾದಂಬರಿಕಾರನು ಹೇಳುವ ನಿಜವೂ ಅವನು ಬಳಸುವ ಭಾಷೆಯೆಂಬ ಸೆರೆಮನೆಯಲ್ಲಿ ಇರುತ್ತದೆ. ಓದುಗನು ಅದನ್ನು ಅನುಭವದ ಗೋಡೆಗಳ ಒಳಗೆ ಮರುರೂಪಿಸಿಕೊಳ್ಳುತ್ತಾನೆ. ಆದ್ದರಿಂದ ಕಾದಂಬರಿಯು ಓದುಗನಿಂದ ಹಿಗ್ಗುತ್ತದೆ ಅಥವಾ ಕುಗ್ಗುತ್ತದೆ. ಹಾಗೆಯೇ ಓದುಗನ ಲೋಕವೂ ಕಾದಂಬರಿಯಿಂದ ಹಿಗ್ಗುತ್ತದೆ. ಮತ್ತೆ ನಮ್ಮ ನಿಮ್ಮ ಒಂದುತನದಲ್ಲಿ ಇನ್ನೇನೋ ಹುಟ್ಟುವ ಪವಾಡ. ನಾಟಕವೂ ಹಾಗೆಯೇ.. ‘ಸಂಕ್ರಾಂತಿ’, ‘ತಲೆದಂಡ’, ಮಹಾಚೈತ್ರ’…. ಇವುಗಳಲ್ಲಿ ಯಾವುದು ವಾಸ್ತವ ಯಾವುದು ಕಲ್ಪನೆ? ಎಂಟು ನೂರು ವರ್ಷಗಳ ಹಿಂದೆ ಇದ್ದ ‘ನಿಜ’ ಎಲ್ಲಿ, ಹೇಗೆ, ಏನಾಗಿ ಈ ಕೃತಿಗಳನ್ನು ಕೊಟ್ಟಿದೆ. ನೆನಪಿಡಿ. ಇವು ಯಾವುದೂ ಒಣ ವೈಚಾರಿಕತೆಯಿಂದ ಮೂಡಿದ ಕಾಗದದ ಹೂಗಳಲ್ಲ. ವಿಚಾರ, ಭಾವನೆ, ಅನುಭವಗಳು ಕೇವಲ ವಿಚಾರ, ಭಾವನೆ, ಅನುಭವಗಳಾಗದೆ, ಬನದೊಳಗಿನ ಬೆಳದಿಂಗಳಾಗಿವೆ.
ಈ ಪವಾಡದ ಬಗ್ಗೆ, ಇದನ್ನು ಕಾಪಾಡಿಕೊಳ್ಳುವ ಬಗ್ಗೆ, ಇದು ಪಡೆಯಬಹುದಾದ ಹೊಸ ಆಕೃತಿಗಳನ್ನು ಸ್ವಾಗತಿಸುವ ಬಗ್ಗೆ, ವಿಕೃತಿಗಳನ್ನು ಕಟುವಾಗಿ ನಿರಾಕರಿಸುವ ಬಗ್ಗೆ ಓದುವ ಬರೆಯುವ ನಾವು ನೀವು ಎಚ್ಚರ ವಹಿಸಬೇಕು. ಅದು ಭಾಷೆಯನ್ನು ಸಂಸ್ಕೃತಿಯನ್ನು ಸೃಜನಶೀಲತೆಯನ್ನು ಕಾಪಿಡುವ ಬಗೆ. ಮತ್ತೆ ಬೇಂದ್ರೆಯವರ ಮಾತುಗಳಲ್ಲೇ ಹೇಳುವುದಾದರೆ,
“ಆಡಿದಂತೆ ಮೂಡುತಿಹುದು ಕನ್ನಡವೇ ಕನ್ನಡಿ.” (‘ಗಾಳಿಗಡಲಿನಲ್ಲಿ’, ಗಂಗಾವತರಣ)
ಈ ಅಂಕಣದ ಹಿಂದಿನ ಬರೆಹ
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.