ಅಸಹಾಯಕ ಗಡಿರೇಖೆಯ ಕನಸಿನ ಪಯಣ Crash Landing on You

Date: 05-02-2022

Location: ಬೆಂಗಳೂರು


“ನಾನಿನ್ನೂ ಉಸಿರಾಡುತ್ತಿರುವುದಕ್ಕಾಗಿ ನನ್ನಲ್ಲಿ ಸಂತಾಪವಿದೆ" ಎಂದು ತಾಯಿಗಾಗಿ ಹಂಬಲಿಸುವ ಅವಳ ದುಃಖವನ್ನು ದೂರಮಾಡಲು ಗಡಿಯನ್ನು ದಾಟಿ ಬೀಸಿಬಂದ ಗಾಳಿಯೇ ಕಾರಣವಾಗುವುದಾದರೆ, ತಣ್ಣನೆಯ ಸಮುದ್ರದಲ್ಲೊಂದು ಬೆಚ್ಚಗಿನ ಗಾಳಿ ಬೀಸುತ್ತಲೇ ಇರಲಿ ಎನ್ನುತ್ತಾರೆ ಲೇಖಕಿ ಅಂಜನಾ ಹೆಗಡೆ. ಅವರು ತಮ್ಮ ಬೆಳ್ಳಕ್ಕಿ ಸಾಲು ಅಂಕಣದಲ್ಲಿ ‘Crash Landing on You’ ಎಂಬ ಕೊರಿಯನ್ ಡ್ರಾಮಾದ ಕುರಿತು ಬರೆದ ಸುಂದರ ಬರಹ ಇಲ್ಲಿದೆ.

ಕನಸುಗಳು ನಿಜವಾಗುವ ಸಂದರ್ಭಗಳಿಗೆ ನಾವು ಹೇಗೆ ಸ್ಪಂದಿಸುತ್ತೇವೆ; ಅದು ನಿದ್ರೆಯಲ್ಲಿ ಕಂಡ ಕನಸೇ ಇರಬಹುದು, ಹಗಲುಗನಸಾಗಿದ್ದಿರಲೂಬಹುದು ಅಥವಾ ಬದುಕಿನ ಬಗ್ಗೆ ನಾವೇ ಕಟ್ಟಿಕೊಂಡ ಖಾಸಗಿಯಾದ ಕನಸೂ ಆಗಬಹುದು! ಕನಸು ಸುಂದರವಾಗಿದ್ದರೂ ಅದು ನಿಜವಾಗುವ ದಾರಿ ನಾವಂದುಕೊಂಡಷ್ಟು ಸುಲಲಿತವಾಗಿಯೂ, ಸರಾಗವಾಗಿಯೂ ನಮ್ಮೆದುರು ತೆರೆದುಕೊಳ್ಳುವುದಾದರೆ ಅಥವಾ ಹಾಗೆ ಕೈಗೂಡಿದ ಕನಸು ನಾವು ಊಹಿಸಿದಷ್ಟು ತೃಪ್ತಿಯನ್ನು ಬದುಕಿಗೆ ನೀಡಿದ್ದಾದರೆ ಎಲ್ಲರ ಬದುಕೂ ರಮಣೀಯವಾಗಿಯೇ ಇರುತ್ತಿತ್ತು. ಕನಸುಗಳದ್ದೇ ಒಂದು ಅರಮನೆ ಇದ್ದಿದ್ದರೆ ಆ ಕನಸುಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ದರ್ಬಾರು ನಡೆಸುವ ಮಹಾರಾಜನದಾಗಿರುತ್ತಿತ್ತೇ, ಕನಸುಗಳ ಒಳ-ಹೊರಗುಗಳನ್ನು ಅರಿತ ಆಸ್ಥಾನ ಪಂಡಿತನದಾಗಿರುತ್ತಿತ್ತೇ ಅಥವಾ ಅವುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಕಾವಲುಗಾರನದಾಗಿರುತ್ತಿತ್ತೇ! ಅಂತಹ ಕನಸಿನ ಅರಮನೆಯೊಳಗೆ ದಾಸಿಯರ ದೇಖರೇಖಿಯಲ್ಲಿ ನೆಮ್ಮದಿ ಅರಸುವ ಮಹಾರಾಣಿಯರ ಕನಸುಗಳಿಗೆ ಹೊರಪ್ರಪಂಚದೊಂದಿಗೆ ಹೊಂದಾಣಿಕೆ ಸಾಧ್ಯವಾಗುತ್ತಿತ್ತೇ ಅಥವಾ ಅಂತಃಪುರದ ಕನಸುಗಳದ್ದೇ ಒಂದು ಹೊಸ ಜಗತ್ತು ಸೃಷ್ಟಿಯಾಗುತ್ತಿತ್ತೇ! ಹಾಗೊಂದು ಕನಸಿನ ಪ್ರಪಂಚದಿಂದ ನಮ್ಮನ್ನು ಅನಾಮತ್ತಾಗಿ ಎತ್ತಿ ವಾಸ್ತವಕ್ಕೆ ತಂದು ನಿಲ್ಲಿಸಿ, ಎರಡೂ ಜಗತ್ತುಗಳ ಸುಖ-ದುಃಖಗಳನ್ನು ಮುಖಾಮುಖಿಯಾಗಿಸುವ ಕಥಾಸರಣಿ Crash Landing on You.

ಅವಳು ಅವಳದೇ ಅಂತಃಪುರದಲ್ಲಿ ಸುಖವಾಗಿ ಬದುಕುತ್ತಿದ್ದರೂ ನೆಮ್ಮದಿಯನ್ನು ಕಂಡವಳಲ್ಲ. ಬಾಲ್ಯದಲ್ಲೇ ತನ್ನನ್ನು ದೂರಮಾಡಿದ ತಾಯಿ, ಆಸ್ತಿಗಾಗಿ ಹೊಡೆದಾಡುವ ಸಹೋದರರು, ಹಣಕ್ಕಾಗಿ ತನ್ನನ್ನು ಮದುವೆಯಾಗಲು ಬಯಸುವವರ ಮಧ್ಯದಲ್ಲಿ ಗಟ್ಟಿಯಾಗಿ ಬೇರೂರಿ ಬೆಳೆದವಳು. ಅಗತ್ಯಕ್ಕಿಂತ ಹೆಚ್ಚೇ ಹಣವನ್ನು ಕಂಡವಳಾದರೂ ನಿಜವಾದ ಪ್ರೀತಿಯ ಅನುಭವವೇ ಇಲ್ಲದೇ ತನ್ನದೇ ಆದ ಅತ್ಯಾಧುನಿಕ ಜೀವನಕ್ಕೆ ಒಗ್ಗಿಹೋದವಳು. ಹಾಗಿದ್ದವಳು ತಾನು ಕಂಡ ಕನಸೊಂದನ್ನು ಸವಾಲಾಗಿ ಸ್ವೀಕರಿಸಿ, ಹಣೆಬರಹವನ್ನೇ ಪ್ರಶ್ನಿಸಲು ಹೊರಟವಳಂತೆ ಅಪಘಾತವೊಂದನ್ನು ಮೈಮೇಲೆ ಎಳೆದುಕೊಳ್ಳುತ್ತಾಳೆ. ಹಾಗೆ ಆಕಸ್ಮಿಕವಾಗಿ ಅವಳು ಹೋಗಿ ಬೀಳುವುದು ತನ್ನ ದೇಶದೊಂದಿಗೆ ಸಾಮರಸ್ಯವಿಲ್ಲದ ನೆರೆದೇಶವೊಂದರ ಗಡಿಯಲ್ಲಿ. ತನ್ನೆಲ್ಲ ಸುಖ-ವೈಭೋಗಗಳನ್ನು ತೊರೆದು ಆ ದೇಶದ ಹಳ್ಳಿಯ ಬದುಕಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತ ಅವಳ ಬದುಕು, ಬದುಕಿನ ಕುರಿತಾದ ಅನಿಸಿಕೆಗಳು ಬೇರೆಯದೇ ಆದ ತಿರುವುಗಳನ್ನು ಪಡೆದುಕೊಳ್ಳುತ್ತವೆ. ಅಲ್ಲಿಯವರೆಗೂ ಅವಳ ಅನುಭವದಿಂದ ಹೊರಗುಳಿದಿದ್ದ ಸ್ನೇಹ-ಪ್ರೀತಿ-ವಿಶ್ವಾಸಗಳು ಅವಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಒಂದೊಂದು ತಿರುವಿನಲ್ಲಿಯೂ ಹೊಸದೊಂದು ಅನುಭೂತಿಯನ್ನು ಒದಗಿಸುತ್ತ ಹೋಗುತ್ತವೆ.

ಹಾಗೊಂದು ಹೊಸ ಜಗತ್ತಿಗೆ ಅವಳನ್ನು ಪರಿಚಯ ಮಾಡಿಸುವ ಮನುಷ್ಯ ಕಾರಣಾಂತರಗಳಿಂದ ತನ್ನೆಲ್ಲ ಸಂವೇದನೆಗಳಿಗೆ ವಿಮುಖನಾಗಿ ನಿರ್ಲಿಪ್ತ ಬದುಕು ಸಾಗಿಸುತ್ತಿರುವವನು; ಕನಸುಗಳೇ ಇಲ್ಲದವನಂತೆ ನಗುವುದನ್ನೂ ಮರೆತು ಬದುಕಿನೊಂದಿಗೆ ಹೊಂದಾಣಿಕೆ ಮಾಡಿಕೊಂಡವನು. ಅವನಿಗೆ ತಾನೇನು ಮಾಡುತ್ತಿದ್ದೇನೆ ಎನ್ನುವುದರ ಕುರಿತಾಗಿ ನಿರ್ದಿಷ್ಟವಾದ ನಿಲುವಿದೆ; ತಾನೇನು ಮಾಡಬೇಕು ಎನ್ನುವುದು ಕೂಡಾ ಖಚಿತವಾಗಿ ತಿಳಿದಿದೆ. ಸಂದರ್ಭಕ್ಕೆ ತಕ್ಕಂತೆ ಎಲ್ಲವನ್ನೂ ನಿರ್ಧರಿಸಿ ನಿಭಾಯಿಸುವ ಆತ ಗೊಂದಲಕ್ಕೆ ಒಳಗಾಗುವುದು ಅಚಾನಕ್ಕಾಗಿ ತನ್ನೆದುರು ಪ್ರತ್ಯಕ್ಷಳಾಗಿಬಿಡುವ ಮುಚ್ಚುಮರೆಯಿಲ್ಲದ ನೇರಮಾತಿನ ಹೆಣ್ಣಿನಿಂದಾಗಿ. ತನ್ನ ಕರ್ತವ್ಯವನ್ನು ಪಾಲಿಸುವ ಸಲುವಾಗಿ ಅಪರಾಧವನ್ನೇ

ಮಾಡಿರದ ಅವಳನ್ನು ಕಾನೂನಿನ ಕೈಗೆ ಒಪ್ಪಿಸಲಾರ; ಹಾಗೆಂದು ಗುರುತು-ಪರಿಚಯಗಳಿಲ್ಲದ ಅವಳ ಜವಾಬ್ದಾರಿಯನ್ನು ತನ್ನ ಹೆಗಲಮೇಲೆ ಹೊತ್ತುಕೊಳ್ಳಲಾರ. ಅವನಿಗೆ ತಾನು ತೆಗೆದುಕೊಳ್ಳುವ ನಿರ್ಧಾರದಿಂದಾಗಿ ಅವಳ ಬದುಕಿನಲ್ಲಿ ಸಂಭವಿಸಬಹುದಾದ ಸ್ಥಿತ್ಯಂತರಗಳ ಅರಿವಿದೆ; ಹಾಗೆಯೇ ತನ್ನ ಕರ್ತವ್ಯನಿಷ್ಠೆಯನ್ನೇ ಪ್ರಶ್ನಿಸುವ ಪರಿಸ್ಥಿತಿ ಎದುರಾಗಬಹುದೆನ್ನುವ ಭಯವೂ! ಅಂತಹ ಸಂದಿಗ್ಧ ಸಂದರ್ಭವನ್ನು ಬುದ್ಧಿವಂತಿಕೆಯಿಂದ ಎದುರಿಸಲು ಪ್ರಯತ್ನಿಸುವ ಸಮಯದಲ್ಲಿ ಅವಳ ಮೇಲೊಂದು ಪ್ರೀತಿಯ ಭಾವನೆ ಹುಟ್ಟಿಕೊಳ್ಳುತ್ತದೆ. ಮಾತಿನ ಅಗತ್ಯವೂ ಇಲ್ಲದ ಮುದ್ದಾದ ಆ ಮುಗ್ಧ ಪ್ರೀತಿಯೊಂದಿಗೇ ಅವನ ಬದುಕಿಗೊಂದು ಉದ್ದೇಶವೂ ಕಾಣಿಸಿಕೊಳ್ಳುತ್ತದೆ. ಎಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಪ್ರೀತಿಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆಯೇ ಅವನ ಮುಖದಲ್ಲಿ ನಗುವನ್ನೂ ಅರಳಿಸುತ್ತದೆ.

"ನನಗಾಗಿ ಆಕಾಶದಿಂದ ಉದುರಿದವಳು ನೀನು. ಇದು ಕೇವಲ ಕಾಕತಾಳೀಯವಲ್ಲ; ಹಣೆಬರಹ. ಏನೇ ಕಷ್ಟಗಳು ಎದುರಾದರೂ ನಾನು ನಿನ್ನನ್ನು ಮರೆಯುವುದಿಲ್ಲ" ಎನ್ನುವ ಅವನ ಮಾತುಗಳು ಕೇವಲ ಮಾತುಗಳಲ್ಲ; ಅವರಿಬ್ಬರ ಬದುಕನ್ನೂ ಬದಲಿಸುವ ಪ್ರೀತಿಯ ಹೊಳಹುಗಳು. ಸದ್ಯಕ್ಕೆ ತಮ್ಮಿಬ್ಬರ ಸಾಮೀಪ್ಯವನ್ನು ಸಾಧ್ಯವಾಗಿಸುವ ಯಾವ ಅದ್ಭುತಗಳೂ ಘಟಿಸುವುದಿಲ್ಲ ಎನ್ನುವುದು ಇಬ್ಬರಿಗೂ ಗೊತ್ತಿದೆ. ತಮ್ಮ ಪ್ರೀತಿಯ ಹೂವಿನ ಗಿಡವೊಂದು ನೆನಪಿನಂಗಳದಲ್ಲಿ ಮಾತ್ರ ಚಿಗುರಬಹುದಾದ ಕಳವಳ ಇಬ್ಬರನ್ನೂ ಬಿಟ್ಟಿಲ್ಲ. ಆದರೂ ಈಗಿನ್ನೂ ಮೊಳಕೆಯೊಡೆಯುತ್ತಿರುವ ಪ್ರೀತಿಯನ್ನು ಬಿಟ್ಟುಕೊಡಲಾರದ ತನ್ಮಯತೆ ಇಬ್ಬರ ಹೃದಯದಲ್ಲೂ! ಮೇಲ್ನೋಟಕ್ಕೆ ಅದೊಂದು ಅಸಾಧ್ಯವೆನ್ನಿಸುವ ಪ್ರೀತಿಯ ಹಾದಿಯಂತೆ ತೋರಿದರೂ, ನಿಜದಲ್ಲಿ ಆ ಹಾದಿಯ ದಿಕ್ಕನ್ನು ಬದಲಿಸುವ ತಾಕತ್ತು ದೇಶಗಳ ನಡುವೆ ಎಳೆದ ಗಡಿರೇಖೆಗಳಿಗಿಲ್ಲ. ಕಾಲ ತಂದೊಡ್ಡುವ ಅಡಚಣೆಗಳು ಆಕಾಶದಲ್ಲೆಲ್ಲೋ ಹುಟ್ಟಿದ ಆ ಪ್ರೀತಿಯನ್ನು ಕೊನೆಗಾಣಿಸುವ ಲಕ್ಷಣಗಳೂ ಇಲ್ಲ. ಎಲ್ಲ ಅಡೆತಡೆಗಳನ್ನು, ಗಡಿರೇಖೆಗಳನ್ನು ಮೀರಿ ಅಸ್ತಿತ್ವ ಕಂಡುಕೊಳ್ಳುವ ಶಕ್ತಿ ಅದಕ್ಕಿದೆ. ತನ್ನವರನ್ನು ಕಳೆದುಕೊಳ್ಳಬೇಕಾಗಿ ಬಂದಾಗ ಅನುಭವಿಸುವ ದುಃಖವೊಂದು ಮತ್ತೆ ಮರುಕಳಿಸದಿರಲಿ ಎನ್ನುವ ಅವನ ಮುಗ್ಧ ಸ್ವಾರ್ಥದಲ್ಲಿ ಅವಳ ಬದುಕನ್ನು ಸಲಹುವ ಸರಕುಗಳ ಮಳಿಗೆಯೇ ಇದೆ. ಆ ಗೋದಾಮಿನ ಚಿಕ್ಕಪುಟ್ಟ ವಸ್ತುವಿನಲ್ಲಿಯೂ ಅವಳ ಬದುಕಿಗೆ ನೆಮ್ಮದಿಯನ್ನು ಒದಗಿಸುವ ಅತ್ಯಮೂಲ್ಯ ಸಂಗತಿಗಳು ಅಡಗಿಕೊಂಡಿವೆ.

Crash Landing on You ವೆಬ್ ಸರಣಿಯ ಹಾಡು:


ಹಾಗೊಂದು ವಿಲಕ್ಷಣವಾದ ಸನ್ನಿವೇಶದಲ್ಲಿ ಹುಟ್ಟಿಕೊಂಡ ಪ್ರೀತಿಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವವರ ದೊಡ್ಡ ಪಡೆಯೊಂದು ಅವರ ಅಕ್ಕಪಕ್ಕದಲ್ಲಿಯೇ ಇದೆ; ಅದನ್ನು ಕಾಪಾಡಿಕೊಳ್ಳಲು ಕೈಜೋಡಿಸುವ ಸ್ನೇಹಿತರ ಸಮೂಹವೂ ಜತೆಗಿದೆ. ಆ ಸಮೂಹದಲ್ಲಿ ಮಕ್ಕಳ ಒಳಿತಿನ ಹೊರತಾಗಿ ಬೇರೆ ಯಾವ ಆಶಯವೂ ಇಲ್ಲದ ತಾಯಂದಿರೂ ಇದ್ದಾರೆ. ಬಡತನವೆನ್ನುವುದು ಕ್ರಮೇಣ ಜಗತ್ತಿನಿಂದ ಮರೆಯಾಗುತ್ತಿರುವ ಕಾಲಘಟ್ಟದಲ್ಲಿಯೂ ಸಾವು-ನೋವುಗಳನ್ನು ದೂರಮಾಡುವ ಶಕ್ತಿ ಸೃಷ್ಟಿಕರ್ತನಿಗೂ ಇದ್ದಂತಿಲ್ಲ. ತಾವಾಗಿಯೇ ಮಕ್ಕಳನ್ನು ದೂರಮಾಡಿಕೊಂಡ ತಾಯಂದಿರ ತಪ್ಪಿತಸ್ಥ ಪ್ರಜ್ಞೆ, ತಮ್ಮ ಜೀವಿತಾವಧಿಯಲ್ಲಿಯೇ ಮಕ್ಕಳ ಸಾವನ್ನು ನೋಡಬೇಕಾಗುವ ತಾಯಂದಿರ ಅಸಹಾಯಕ ಸ್ಥಿತಿ, ಮಕ್ಕಳ ಬದುಕಿನ ಸುಖ-ಸಂತೋಷಗಳು ತಮ್ಮ ಕಣ್ಣೆದುರೇ ಕಣ್ಮರೆಯಾಗುತ್ತಿದ್ದರೂ ತಮ್ಮನ್ನು ತಾವೇ ಸಂತೈಸಿಕೊಳ್ಳಬೇಕಾದ ತಾಯಂದಿರ ಅನಿವಾರ್ಯತೆಗಳು ಎಲ್ಲವೂ ಇಲ್ಲಿವೆ. ಸ್ನೇಹ-ಪ್ರೀತಿಗಳ, ಸುಖ-ಸಂತೋಷಗಳ, ನೋವು-ಸಂಕಟಗಳ ಪ್ರಮಾಣವನ್ನು ಅಳೆಯುವ ತಕ್ಕಡಿಯೊಂದರ ಸೃಷ್ಟಿಯೇ ಆಗಿಲ್ಲ. ಹಾಗಾಗಿಯೇ ಜೀವಂತವಾಗಿರುವವರೆಗೂ ಯಾರನ್ನಾದರೂ ಪ್ರೀತಿಸಬೇಕು ಎನ್ನುವ ಬಯಕೆ, ಸಂಕಟಗಳು ದೂರವಾಗಿ ಸಂತಸದ ದಿನಗಳು ಎದುರಾಗಲಿ ಎನ್ನುವ ಹಂಬಲ, ಈಗಿರುವ ಸುಖಕ್ಕಿಂತ ಇನ್ನೇನೋ ಬೇಕೆನ್ನುವ ಆಸೆ ಎಲ್ಲವೂ ಖಾಯಂ ಆಗಿ ಉಳಿದುಕೊಳ್ಳುವಂಥವುಗಳು. ಹಾಗೆ ಅಂದುಕೊಂಡಿದ್ದು ಯಾವುದೂ ಸಂಭವಿಸಲು ಸಾಧ್ಯವೇ ಇಲ್ಲ ಎಂದು ಖಚಿತವಾದ ಸಂದರ್ಭಗಳಲ್ಲಿ ಮಾತ್ರ ಮನುಷ್ಯ ತನ್ನ ಪರಿಸ್ಥಿತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ನೆಮ್ಮದಿಯನ್ನು ಕಂಡುಕೊಳ್ಳಬಲ್ಲ.

ಇಲ್ಲಿ ಎದುರಾಗುವ ಎಲ್ಲ ಪರಿಸ್ಥಿತಿಗಳಿಗೂ ಅವುಗಳದ್ದೇ ಆದ ಅಸಹಾಯಕತೆಯ ಕೈಕೋಳ; ಎಲ್ಲ ಸಂಬಂಧಗಳಿಗೂ ದ್ವಂದ್ವ ಮನಃಸ್ಥಿತಿಯ ನಿಗ್ರಹ! ಅಧಿಕಾರದ ಬಲವಿದ್ದೂ ಒಬ್ಬ ಮಗನ ಜೀವವನ್ನು ಉಳಿಸಿಕೊಳ್ಳಲಾರದ, ಇನ್ನೊಬ್ಬ ಮಗನ ಪ್ರೀತಿಯನ್ನು ಉಳಿಸಿಕೊಳ್ಳಲು ನೆರವಾಗಲಾರದ ತಂದೆಯಿದ್ದಾನೆ ಇಲ್ಲಿ; ಈಗಿನ್ನೂ ಪ್ರಪಂಚವನ್ನು ನೋಡುತ್ತಿರುವ ಮಗನನ್ನು ಉಳಿಸಿಕೊಳ್ಳುವ ಸಲುವಾಗಿ ಕೆಟ್ಟಕೆಲಸವೆಂದು ಅರಿವಿದ್ದೂ ಅದರಿಂದ ದೂರ ಸರಿಯಲಾರದ, ತಾನು ಮಾಡುತ್ತಿರುವ ಕೆಲಸಕ್ಕಾಗಿ ತನ್ನನ್ನು ತಾನೇ ಹಳಿದುಕೊಳ್ಳುತ್ತ ಕಣ್ಣೀರು ಸುರಿಸುವ ತಂದೆಯೂ ಇದ್ದಾನೆ; ಗಂಡುಮಕ್ಕಳ ಹಣದಾಸೆಗೆ ಬೇಸತ್ತು ಇದ್ದೊಬ್ಬ ಮಗಳಲ್ಲಿ ತನ್ನನ್ನು ತಾನು ಕಂಡುಕೊಳ್ಳುವ, ಅವಳ ಯಶಸ್ಸಿನಲ್ಲಿ ಸಂತೋಷವನ್ನು ಕಾಣುವ ಅಂತರ್ಮುಖಿ ತಂದೆಯೊಬ್ಬನ ವ್ಯಕ್ತಿತ್ವವಂತೂ ಎಲ್ಲ ವಿಶ್ಲೇಷಣೆಗಳನ್ನೂ ಮೀರಿ ನಿಲ್ಲುವಂಥದ್ದು. ಪ್ರೀತಿ-ವಿಶ್ವಾಸಗಳು ಹುಟ್ಟಿಕೊಳ್ಳಲು ಬದುಕನ್ನೇ ಬದಲಿಸಿಬಿಡುವಂತಹ ಅದ್ಭುತವೇನೋ ಘಟಿಸಿಬಿಡುವ ಅಗತ್ಯವಿಲ್ಲ. ಈಗಾಗಲೇ ಇರುವ ಬದುಕಿಗೊಂದು ಉತ್ಸಾಹವನ್ನು ತುಂಬಬಲ್ಲ, ಕಷ್ಟಸಾಧ್ಯವೆಂದುಕೊಂಡ ಕ್ಷಣಗಳನ್ನು ದಾಟಲು ಆಸರೆಯಾಗಬಲ್ಲ, ಸುಖದ ದಿನಗಳಲ್ಲಿ ನಗುವನ್ನು ಹಂಚಿಕೊಳ್ಳಲು ಜತೆಯಾಗಬಲ್ಲ ಜೀವಗಳೊಂದಿಗೆ ಕಾಲ-ದೇಶಗಳನ್ನು ಮೀರಿದ ಸಂವಹನವೊಂದು ಸಾಧ್ಯವಿದೆ. ಅಂತಹ ಮೌಲ್ಯವರ್ಧಿತ ಸಮಾಚಾರಗಳನ್ನು ವರ್ಗಾಯಿಸುವ ಎಲ್ಲ ಸಂವಹನಗಳೂ ಅವುಗಳದೇ ಆದ ವಿಧಾನದಲ್ಲಿ ಎದುರಿಗಿರುವವರ ಬದುಕುಗಳನ್ನು ಸುಂದರವಾಗಿಸುತ್ತವೆ.

ಅದು ಕನಸೇ ಆಗಿರಲೀ, ಎಚ್ಚರದ ಸ್ಥಿತಿಯೇ ಆಗಲೀ, ಎಲ್ಲವೂ ಅಂದುಕೊಂಡಂತೆಯೇ ಜರುಗಿದ ಸುಖಸಮೃದ್ಧ ಬದುಕೇ ಆಗಿರಲೀ ನಿರೀಕ್ಷೆಯೆನ್ನುವುದು ಅನುಗಾಲವೂ ಅಸ್ತಿತ್ವದಲ್ಲಿರುವಂಥದ್ದು. ಇದಿರು ಕಾಯುವುದನ್ನು ಮರೆತ ಮರುಕ್ಷಣವೇ ಕಳೆದುಕೊಳ್ಳುವ ನೋವು ಬಾಧಿಸತೊಡಗುತ್ತದೆ. ನಿರೀಕ್ಷೆಗಳ ನೋಟ ಆಗಸದೆಡೆಗೇ ಮುಖಮಾಡಿದ್ದಾದರೂ ಸಮಯಕ್ಕೆ ಅನುಗುಣವಾಗಿ ಭೂಮಿಯನ್ನು ಆಶ್ರಯಿಸಬೇಕಾದ ಅನಿವಾರ್ಯತೆ ತಪ್ಪಿದ್ದಲ್ಲ. ಹಾಗೆ ನಿರೀಕ್ಷೆ-ವಾಸ್ತವಗಳ ನಡುವಿನ ಸಮಯೋಚಿತ ಸಂವಹನವನ್ನು ಜಾರಿಯಲ್ಲಿಡಲೆಂದೇ ಬೀಸುವ ಗಾಳಿ ಯಾರನ್ನು ಯಾರ ತೆಕ್ಕೆಯಲ್ಲಿ ಬೀಳಿಸುತ್ತದೆ ಬಲ್ಲವರಾರು! ಚಲನೆಯನ್ನು ಚಿರಂತನವಾಗಿಸುವ, ಹಗುರಾಗಿ ಹಾರಾಡುವ ಆನಂದವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವ ಗಾಳಿಗೊಂದು ಗಡಿರೇಖೆಯನ್ನು ಎಳೆದು ಬಂಧಿಸಲಾದೀತೇ! "ನೀನು ನನ್ನನ್ನು ಬಿಟ್ಟುಹೋದ ಆ ದಿನದಿಂದ ಶೀತಲರಾತ್ರಿಯ ಸಮುದ್ರವೊಂದು ನನ್ನ ಹೃದಯದಲ್ಲಿ ಉಳಿದುಹೋಗಿದೆ. ಆ ಸಮುದ್ರದಲ್ಲಿ ಸೂರ್ಯನ ಕಿರಣವೆಂದಿಗೂ ಕಾಣಿಸಿಕೊಳ್ಳುವುದೇ ಇಲ್ಲ. ಅಂದಿನಿಂದ ಇಂದಿನವರೆಗೂ ನನ್ನ ಮನಸ್ಸಿನಲ್ಲಿ ಮತ್ತೆಮತ್ತೆ ಹಾದುಹೋಗುವ ಯೋಚನೆಯೆಂದರೆ, ನಿನ್ನ ಬದುಕನ್ನು ನರಕವನ್ನಾಗಿಸಿದ ನಾನು ಹುಟ್ಟಲೇಬಾರದಾಗಿತ್ತು. ನಾನಿನ್ನೂ ಉಸಿರಾಡುತ್ತಿರುವುದಕ್ಕಾಗಿ ನನ್ನಲ್ಲಿ ಸಂತಾಪವಿದೆ" ಎಂದು ತಾಯಿಗಾಗಿ ಹಂಬಲಿಸುವ ಅವಳ ದುಃಖವನ್ನು ದೂರಮಾಡಲು ಗಡಿಯನ್ನು ದಾಟಿ ಬೀಸಿಬಂದ ಗಾಳಿಯೇ ಕಾರಣವಾಗುವುದಾದರೆ, ತಣ್ಣನೆಯ ಸಮುದ್ರದಲ್ಲೊಂದು ಬೆಚ್ಚಗಿನ ಗಾಳಿ ಬೀಸುತ್ತಲೇ ಇರಲಿ. "ನೀನು ಭೂಮಿಯ ಮೇಲೆ ಹುಟ್ಟಿರುವುದಕ್ಕಾಗಿ, ಇಂದಿಗೂ ಉಸಿರಾಡುತ್ತಿರುವ ಒಂದೇ ಕಾರಣಕ್ಕಾಗಿ ನಾನು ಆಭಾರಿಯಾಗಿದ್ದೇನೆ" ಎನ್ನುತ್ತ ಅವಳ ಕನಸುಗಳನ್ನು ಬೆಚ್ಚಗಿಡುವ, ನಿರೀಕ್ಷೆಗಳೆಂದಿಗೂ ನೆಲಕಚ್ಚದಂತೆ ಕಾಪಾಡಿಕೊಳ್ಳುವ ಹೂಗನಸಿನಂಥ ಹುಡುಗನ ತೆಕ್ಕೆಗೆ ಅವಳು ಮತ್ತೆಮತ್ತೆ ಬೀಳುತ್ತಲೇ ಇರಲಿ.
ಈ ಅಂಕಣದ ಹಿಂದಿನ ಬರಹಗಳು:
ಮುಗುಳ್ನಗೆಯ ಆಲಿಂಗನ SOMETHING IN THE RAIN (KOREAN ROMANTIC DRAMA)
ಒಳತಾರಸಿಯ ಒಂಟಿ ಚೌಕಗಳು THE QUEEN'S GAMBIT
ಅನುರಾಗದ ಮಧುರ ಆಲಾಪ BANDISH BANDITS (INDIAN ROMANTIC DRAMA)
ಆಧುನಿಕ ಲೋಕದ ಆತ್ಮಾವಲೋಕನ MADE IN HEAVEN (INDIAN ROMANTIC DRAMA)
ನೋವು-ನಲಿವುಗಳ ಪಂಚಾಯಿತಿ PANCHAYAT (HINDI COMEDY-DRAMA)
ಬಿಡುಗಡೆಯ ಹಾದಿಯ ಪಿಸುಮಾತು IT'S OKAY TO NOT BE OKAY(KOREAN DRAMA)

MORE NEWS

ತ್ರಿಕೋನಾಸನ ಹಾಗೂ ಪರಿವೃತ್ತ ತ್ರಿಕೋನಾಸನ

03-07-2024 ಬೆಂಗಳೂರು

"ತ್ರಿಕೋನಾಸನವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಹಾಗೂ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್...

ಇಂಗ್ಲೀಶು ಕನ್ನಡ ಬದುಕಿನೊಳಗೆ

01-07-2024 ಬೆಂಗಳೂರು

"ಇಂಗ್ಲೀಶು ಕನ್ನಡದೊಳಗೆ ಪಸರಿಸಿಕೊಂಡ ಬಗೆ ವ್ಯಾಪಕತೆಯನ್ನೂ ಹಲವು ಆಯಾಮಗಳನ್ನೂ ಪಡೆದುಕೊಂಡಿದೆ. ಹಿಂದೆ ಸಂಸ್ಕೃತ-ಪ...

ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಮತ್ತಿತರೆ ಬೆಳವಣಿಗೆಗಳು

30-06-2024 ಬೆಂಗಳೂರು

"ಕೆ.ಪಿ.ಸಿ.ಸಿ. ಕಚೇರಿಯ ಈ ಸಭೆಯ ಕುರಿತು ಪತ್ರಿಕೆಗಳಲ‌್ಲಿ ಮರುದಿನ ಫೋಟೋ ಸಮೇತ ಸಂಕ್ಷಿಪ್ತ ಸುದ್ದಿ ಪ್ರಕಟವ...