Date: 13-04-2025
Location: ಬೆಂಗಳೂರು
ಬಸವಕಲ್ಯಾಣ: "ಯೂರೋಪ್ ನಮಗೆ ಅರ್ಥವಾದಷ್ಟು ಯೂರೋಪಿಗೆ ನಾವು ಅರ್ಥವಾಗಿಲ್ಲ. ಕನ್ನಡ ಸಾಹಿತ್ಯ ಅನುವಾದಿಸುವ ಮೂಲಕ ಕನ್ನಡದ ಜ್ಞಾನ ಪರಂಪರೆಗೆ ಜಾಗತಿಕ ಮಹತ್ವ ತಂದುಕೊಡುವ ಅಗತ್ಯವಿದೆ," ಎಂದು ಕಲಬುರ್ಗಿಯ ಸಿಯುಕೆ ಪ್ರಾಧ್ಯಾಪಕ ಪ್ರೊ. ವಿಕ್ರಮ ವಿಸಾಜಿ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಬಸವಪೀಠದ ಸಹಯೋಗದಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ನಗರದ ಅಕ್ಕ ನಾಗಮ್ಮನವರ ಗವಿ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 'ವಚನಗಳ ಅನುಸಂಧಾನ ಹಾಗೂ ಅನುವಾದದ ಆಯಾಮ' ಕುರಿತ ಪ್ರತಿಷ್ಠಾನದ 93ನೇ ಉಪನ್ಯಾಸ ಮತ್ತು ಸಂವಾದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎರಡು ಸಂಸ್ಕೃತಿಗಳ ನಡುವೆ ಸಂವಾದ ಸಾಧ್ಯವಾಗಲು ಅನುವಾದ ಬೇಕು ಎಂದರು.
"ಜಗತ್ತಿನ ಎಲ್ಲ ಜನಾಂಗಗಳ ನಡುವೆ ಅರ್ಥಪೂರ್ಣವಾದ ತಿಳುವಳಿಕೆ ಸಾಧ್ಯವಾಗುತ್ತದೆ. ಗ್ರೀಕ್, ಮಧ್ಯಪ್ರಾಚ್ಯ, ಆಫ್ರಿಕನ್, ಯೂರೋಪಿಯನ್ ಸಾಹಿತ್ಯ ಅನುವಾದದ ಮೂಲಕ ಅರ್ಥ ಮಾಡಿಕೊಂಡಿದ್ದೇವೆ. ಈಗ ಭಾರತದ ಸಾಹಿತ್ಯ ಹಾಗೂ ಕನ್ನಡದ ಸಾಹಿತ್ಯ ಜಗತ್ತಿನ ಬೇರೆ ಬೇರೆ ಭಾಷೆಗೆ ಹೋಗುವ ಅಗತ್ಯವಿದೆ. ಬಸವ ಸಮಿತಿ, ಸಿಯುಕೆ ವಚನಗಳನ್ನು ಅನುವಾದಿಸುವ ಮೂಲಕ ಜಾಗತಿಕ ಸಾಹಿತ್ಯ ವಲಯಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿದೆ," ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಬಸವ ಪೀಠದ ಸಂಯೋಜಕ ಪ್ರೊ. ಗಣಪತಿ ಸಿನ್ನೂರ ಮಾತನಾಡಿ, "ವಚನಗಳ ತಾತ್ವಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಯಾಮ ಹೊರ ಜಗತ್ತಿಗೆ ಪರಿಚಯಿಸಲು ಅನುವಾದ ಒಂದು ದಾರಿಯಾಗಿದೆ. ಕಳೆದ ಎರಡುವರೆ ವರ್ಷದಿಂದ ಬಸವ ಸಮಿತಿ ಜೊತೆಗೆ ಕಲಬುರ್ಗಿಯ ಸಿಯುಕೆ, ಬೆಂಗಳೂರು ನಗರ ವಿವಿ ಜರ್ಮನ್ , ಸ್ಪಾನಿಷ್, ಜಾಪನಿಸ್ ಈ ಮೂರು ಭಾಷೆಗಳಲ್ಲಿ ವಚನ ಅನುವಾದದ ಕೆಲಸ ಮಾಡಿದೆ. ಈ ಮೂಲಕ ಕನ್ನಡ ಸಾಹಿತ್ಯದ ಮುಖ್ಯ ದರ್ಶನವನ್ನು ಜಗತ್ತಿಗೆ ಪರಿಚಯಿಸುವ ಅಳಿಲು ಸೇವೆ ಸಲ್ಲಿಸುತ್ತಿದೆ," ಎಂದರು.
ಬೆಂಗಳೂರು ನಗರ ವಿವಿ ಪ್ರಾಧ್ಯಾಪಕಿ ಪ್ರೊ. ಭಾನುಮತಿ ವಿಜಯ್ ಕೃಷ್ಣನ್ ಮಾತನಾಡಿ, "ವಚನಗಳು ಭಾರತೀಯ ಸಾಂಸ್ಕೃತಿಕ ಲೋಕದಲ್ಲಿ ಬಹುದೊಡ್ಡ ಸ್ಥಾನ ಪಡೆದಿವೆ. ಅವುಗಳ ಓದು ಒಂದು ತತ್ವಶಾಸ್ತ್ರೀಯ ಪಯಣವಿದ್ದಂತೆ. ವಚನ ಸ್ವಾತಂತ್ರ್ಯ ಮತ್ತು ಸಮಾನತೆಯ ಸಮಾಜದ ಪರಿಕಲ್ಪನೆ ರೂಪಿಸಿದ ದಾರ್ಶನಿಕ ಪಠ್ಯಗಳು. ಇವುಗಳ ಬಗೆಗೆ ಹೊರ ಜಗತ್ತಿ ಅರಿವ ಅಗತ್ಯವಿದೆ. ಭಾಷಾಂತರಗೊಂಡ ವಚನಗಳು ಮುಂದೊಂದು ದಿನ ವಿದೇಶಗಳಲ್ಲಿ ಸಂಶೋಧನಾತ್ಮಕ ಆಯಾಮ ಪಡೆಯುತ್ತವೆ," ಎಂದರು.
"ಸೃಜನಶೀಲ ಸಾಹಿತ್ಯ ಪ್ರಕಾರಗಳಾದ ಕತೆ, ಕಾದಂಬರಿ, ನಾಟಕದ ಅನುವಾದ ಸಹಜವಾಗಿ ಮಾಡಬಹುದು. ವಚನಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ಆಧ್ಯಾತ್ಮಿಕ , ಸಾಂಸ್ಕೃತಿಕ ಆಯಾಮಗಳಿವೆ. ಅವುಗಳ ತರ್ಜುಮೆಯ ಹಲವು ಬಿಕ್ಕಟ್ಟುಗಳು ಎದುರಾದವು . ಹಿರಿಯ ವಿದ್ವಾಂಸರ ಸಹಕಾರ ಈ ಸಂದರ್ಭದಲ್ಲಿ ನೆರವಾಯಿತು," ಎಂದರು.
ಬೆಂಗಳೂರು ನಗರ ವಿವಿ ಪ್ರಾಧ್ಯಾಪಕಿ ಪ್ರೊ. ಸುಧಾ ಶ್ರೀಧರ್ ಮಾತನಾಡಿ, "ವಚನಗಳ ಅನುವಾದವು ಕನ್ನಡದ ಸಾಂಸ್ಕೃತಿಕ ಜಗತ್ತಿನ ಹೊಸ ಚಹರೆಯನ್ನು ಹೊರ ಜಗತ್ತಿಗೆ ಪರಿಚಯಿಸುವ ಸಣ್ಣ ಪ್ರಯತ್ನವಾಗಿದೆ. ಮಹಿಳಾ ಅಸ್ತಿತ್ವದ, ಮಾನವೀಯತೆಯ ನೆಲೆಯ, ಜಾತ್ಯತೀತ ಆಲೋಚನೆಯ, ದಾರ್ಶನಿಕ ಪ್ರಭೆಯ ತಾತ್ವಿಕ ವಾಗ್ವಾದಗಳು ವಚನಗಳು ಪ್ರತಿಪಾದಿಸಿವೆ," ಎಂದರು.
"ಅಲ್ಲಮ, ಅಕ್ಕಮಹಾದೇವಿ, ಬಸವಣ್ಣ ಸೇರಿ ಎಲ್ಲ ವಚನಕಾರರು ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರು ಇಲ್ಲಿ ಕಟ್ಟಿಕೊಟ್ಟ ಚಿಂತನೆ ಎಂದಿಗೂ ಹೊಸತಾಗಿವೆ. ಬೇರೆ ದೇಶದವರು ವಚನಕಾರರನ್ನು ಸಂಶೋಧನಾತ್ಮಕ ಆಯಾಮದಲ್ಲಿ ಗ್ರಹಿಸಲು ಆರಂಭಿಸಿದರೆ ನಾವು ಕೆಲಸ ಮಾಡಿದ್ದು ಸಾರ್ಥಕತೆ ಪಡೆಯುವುದು," ಎಂದರು.
ಸಿಯುಕೆ ಪ್ರಾಧ್ಯಾಪಕ ಡಾ. ಪಿ. ಕುಮಾರ್ ಮಂಗಲಮ್ ಮಾತನಾಡಿ, "ವಚನಗಳು ಅತ್ಯಂತ ವಿಸ್ಮಯ ಹುಟ್ಟಿಸಿವೆ. ಸಾಂಸ್ಕೃತಿಕ , ಅಭೌತಿಕವಾದ ಪರಿಭಾಷೆಯಲ್ಲಿರುವ ವಚನಗಳ ಆಧ್ಯಾತ್ಮ ತುಂಬಾ ಭಿನ್ನವಾಗಿದೆ. ವಚನ ಸಾಹಿತ್ಯ ಹೇಳುವ ತತ್ವಜ್ಞಾನ , ಲಿಂಗ, ದಾಸೋಹ, ಕಾಯಕ ಸೇರಿ ಹಲವು ತಾತ್ವಿಕ ಪರಿಕಲ್ಪನೆಗಳು ಸ್ಪಾನಿಷ್ ಭಾಷೆಗೆ ಅನುವಾದಿಸುವಾಗ ಸವಾಲು ಸೃಷ್ಟಿಸಿದವು," ಎಂದರು.
ಸಿಯುಕೆ ಪ್ರಾಧ್ಯಾಪಕಿ ಪ್ರೊ. ಪಿಯಾಲಿ ರಾಯ್ ಮಾತನಾಡಿ, "ಜಾಪನಿಸ್ ಮತ್ತು ಭಾರತದ ಅಥವಾ ಕನ್ನಡ ಎರಡರಲ್ಲೂ ಹಲವು ಸಾಂಸ್ಕೃತಿಕ ಭಿನ್ನತೆಗಳಿವೆ. ವಚನಗಳನ್ನು ಜಪಾನ್ ಭಾಷೆಗೆ ಭಾಷಾಂತರಿಸುವಾಗ ಪದದ ಅರ್ಥದ ಜೊತೆ ಸಾಂಸ್ಕೃತಿಕ ಅರ್ಥಕ್ಕೂ ಮಹತ್ವ ನೀಡಲಾಗಿದೆ," ಎಂದರು.
ಸಿಯುಕೆ ಪ್ರಾಧ್ಯಾಪಕ ಶಿವಮ್ ಮಿಶ್ರಾ ಮಾತನಾಡಿ, "ಕನ್ನಡದ ದುಡಿಯುವ ಸಮುದಾಯದ ಒಂದು ಕಾಲದಲ್ಲಿ ಹೇಗೆಲ್ಲ ಆಲೋಚನೆಗಳು ಕಟ್ಟಿಕೊಟ್ಟಿದೆ. ಅವರ ಚಿಂತನೆಗಳು, ಸಿದ್ಧಾಂತಗಳು ಬೇರೆ ಭಾಷೆಗೆ ತೆಗೆದುಕೊಂಡು ಹೋಗುವುದು ಸವಾಲಿನ ಕೆಲಸವಾಗಿತ್ತು. ಕನ್ನಡ ಸಾಂಸ್ಕೃತಿಕ ಸಂದರ್ಭ ವೊಂದನ್ನು ಅನ್ಯ ಭಾಷೆಗೆ ದಾಟಿಸುವ ಕೆಲಸ ಖುಷಿ ತಂದಿದೆ," ಎಂದರು.
ಬಸವ ಸಮಿತಿಯ ನವಿನ್, ಪ್ರತಿಷ್ಠಾನದ ಅಧ್ಯಕ್ಷ ಎಸ್. ಜಿ. ಹುಡೇದ, ಕಾರ್ಯದರ್ಶಿ ದೇವೇಂದ್ರ ಬರಗಾಲೆ, ಶರಣಪ್ಪ ಸೇರಿ ಹಲವರಿದ್ದರು. ಶಿವಾಜಿ ಮೇತ್ರೆ ಕಾರ್ಯಕ್ರಮವನ್ನು ನಿರೂಪಿಸಿದರು. ಭೀಮಾಶಂಕರ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು
ಬೆಂಗಳೂರು: ಕರ್ನಾಟಕ ಪ್ರಕಾಶಕರ ಸಂಘ ಹಾಗೂ ಬಿ.ಎಂ.ಶ್ರೀ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ವ...
ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ 2022, 2023 ಮತ್ತು 2024ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳಾದ, ಅತ್ಯುತ್ತ...
ಕನ್ನಡ ಪುಸ್ತಕೋದ್ಯಮ ಓದುಗರ ಕೊರತೆ, ಹೊಸ ಆಲೋಚನೆಗಳ ಅಲಭ್ಯತೆ ಮತ್ತು ಸರ್ಕಾರ-ಸಂಸ್ಥೆಗಳ ಸಮರ್ಪಕ ಬೆಂಬಲವಿಲ್ಲದೆ ಸಂಕಷ್ಟ...
©2025 Book Brahma Private Limited.