‘ಬೆಂಗಳೂರು’ ಚಹರೆ ಇಲ್ಲದ ನಗರ


"ಕರ್ಣಾಟಕದ ರಾಜಕೀಯ ಪರ್ವದ ಹೃದಯವಾಗಿರುವ ಬೆಂಗಳೂರಿನ ವನಪರ್ವ ಸಭಾಪರ್ವಗಳು ಇಲ್ಲಿ ಸುಂದರವಾಗಿ ಮೂಡಿದೆ. ನಗರವು ಮಹಾನಗರವಾಗಿ ಬೆಳೆಯುವಾಗ ಕಳೆದು ಹೋದ ಗ್ರಾಮಪರ್ವ-ಅರಣ್ಯಪರ್ವಗಳ ನೆನಪು ಖಚಿತವಾಗಿ ಮೂಡಿದೆ," ಎನ್ನುತ್ತಾರೆ ಡಾ. ಜಿ.ಬಿ.ಹರೀಶ ಆವರು ಎಂ.ನರಸಿಂಹಮೂರ್ತಿ ಅವರ "ನೆನೆ ಮನವೇ" ಕೃತಿಗೆ ಬರೆದ ಮುನ್ನುಡಿ.

ನರಸಿಂಹಮೂರ್ತಿ ಅವರನ್ನು ನಾನು ಹದಿನೈದು - ಹದಿನೆಂಟು ವರ್ಷಗಳಿಂದ ಬಲ್ಲೆ. ಅವರ ನೌಕರಿ, ವೃತ್ತಪತ್ರದ ಚಾಕರಿ, ರಾಜಕೀಯ ಜೀವನದ ಪೇಚಾಟ, ಬ್ರಹ್ಮಚಾರಿಯ ತಪಸ್ಸು! ಅವರು ಕವಿಗಳು, ಚಿತ್ರ ಕಲಾವಿದರು, ಲೋಕ ಶಿಕ್ಷಕರು, ಇತಿಹಾಸ ದಾಖಲಿಸುತ್ತಾ ಬಂದವರು, ಸೊಗಸಾಗಿ ಹಾಡಬಲ್ಲರು. ಹಿಂದಿ ಭಾಷೆಯ ಮೇಲೆ ಪ್ರಭುತ್ವ ಉಳ್ಳವರು. ವಿಚಾರ ಮಂಥನವು ಅವರಿಗೆ ಬಾಲ್ಯದ ಪರಿಸರ- ಸಂಘ ಜೀವನಂದಿಂದಲೇ ಬಂದಿದೆ. ಅವರೂ ವಿವೇಕದ ಗರಡಿಯಲ್ಲಿ ಅದರ ಸಾಧನೆ ಬೆಳೆಸಿಕೊಂಡಿದ್ದಾರೆ. ಹಳೆಯ ಮೈಸೂರಿನ ಕಡೆ ಥಳಥಳಿಸುತ್ತಿದ್ದ ಜಟ್ಟಿಗಳ ಲೋಕವನ್ನು ಕೆಲವು ವರ್ಷಗಳ ಹಿಂದೆ ‘ಮಲ್ಲ ಪ್ರಪಂಚ’ವೆಂಬ ಸೊಗಸಾದ ಗ್ರಂಥದಲ್ಲಿ ದಾಖಲಿಸಿದ್ದರು. ಜೀವನ ಅವರನ್ನು ಬೇತಾಳನಂತೆ ಕಾಡಿದೆ. ಅವರೂ ಅದರೊಂದಿಗೆ ವಿಕ್ರಮ-ಬೇತಾಳ ಸ್ವರೂಪದ ಸ್ನೇಹ ಬೆಳೆಸಿದ್ದಾರೆ. ನೀನು ಎಷ್ಟು ಕಾಡಿದರು ನನ್ನ ತುಟಿಯ ಅಂಚಿನ ನಗು ಕಿತ್ತುಕೊಳ್ಳುವಷ್ಟು ನೀನೇನು ಶಕ್ತಿಶಾಲಿಯಲ್ಲ ಎಂದು ಜೀವನವನ್ನು ಇನ್ನೂ ಕೆಣಕುತ್ತಲೇ ಇದ್ದಾರೆ. ಇವರ ಜೀವನ ವ್ಯಕ್ತಿ-ಭಾವಜೀವನ ಮತ್ತು ನಾಡಿನ ಜೀವನಾಡಿಯೊಂದಿಗಿನ ತಾದಾತ್ಮ್ಯತೆ ಹುರಿಗೊಂಡಿದೆ. ಈ ಮೂರು ಒಲೆಯ ಮೇಲೆ ಅವರ ಜೀವನ ಪಾಕವು ಸಿದ್ಧವಾಗಿದೆ. ಈಗ ನನ್ನ ಮುಂದಿರುವ ‘ನೆನೆ ಮನವೇ’ ಕೃತಿಯ ಹೊರ ಮೈ ಬೆಂಗಳೂರಿನ ಅವರು ಕಂಡುಂಡ ನೆನಪುಗಳಾದರೆ, ಅದರ ಒಳಮೈ ಶುದ್ಧವಾದ ಪ್ರಬಂಧ. ಹೀಗೆ ಅವರ ಈ ನೂತನ ಪುಸ್ತಕಕ್ಕೆ ಧರ್ಮಕ್ಷೇತ್ರಕ್ಕೆ ಕುರುಕ್ಷೇತ್ರದ ಕಳೆ ಬಂದಿದೆ. ಪರಿಸರ, ಪರಂಪರೆಯ ಕಾಳಜಿ ಪ್ರತಿ ಲೇಖನದಲ್ಲೂ ಎದ್ದು ಕಾಣುತ್ತದೆ.

ಸುಮಾರು ಮುನ್ನೂರಕ್ಕೂ ಹೆಚ್ಚಿನ ಪುಟಗಳಾಗುವ ಅವರ ಪುಸ್ತಕಕ್ಕೆ ಅವರೆ ಸುಂದರವಾದ ಚಿತ್ರಗಳನ್ನು ರಚಿಸಿದ್ದಾರೆ. ಇವುಗಳಿಗೆ ಚಾರಿತ್ರಿಕ ನೆನಪುಗಳಿವೆ. ಯಾವ ಕ್ಯಾಮರಾ ಸಹ ಸೆರೆ ಹಿಡಿದಿಡದ ಬೆಂಗಳೂರಿನ ರಸ್ತೆಗಳು, ಹನುಮಂತನಗರ ಪ್ರದೇಶದಲ್ಲಿದ್ದ ಹಳೆಯ ಕೆರೆಗಳು, ಗಿಡಮರ, ಪರಿಸರ, ಹಕ್ಕಿಗಳು, ಅವರ ಬಾಲ್ಯ ಕಾಲದಲ್ಲಿ ರಸ್ತೆಯ ಮೇಲೆ ಚಿಣ್ಣರು ಆಡುತ್ತಿದ್ದ ಆಟಗಳು ಎಲ್ಲವೂ ಚಿತ್ರಗಳಲ್ಲಿ ಮೈತುಂಬಿಕೊಂಡು ಬಂದಿವೆ.

ಯಾವುದೋ ಹಳೆಯ ನೆನಪು, ಒಂದು ನೆನಪಿನ ಪಕಳೆ, ಒಂದು ಹೂವಿನ ಅಂದ, ಮೂಗಿಗೆ ಹೀರಿಕೊಂಡ ಸೌರಭ ಎಲ್ಲವೂ ನರಸಿಂಹಮೂರ್ತಿಯವರಿಗೆ ಮುಖ್ಯ. ಹಳೆಯ ಸಿನಿಮಾ ಟೆಂಟುಗಳು, ಆ ಕಾಲದ ಸಿನಿಮಾ ನಟರು, ಬೆಂಗಳೂರಿನ ಕೆರೆ, ಹೊಲ, ಗದ್ದೆ ಬೆದ್ದಲಗಳು ಈ ಪುಸ್ತಕದಲ್ಲಿ ಮತ್ತೆ ಪುನರ್ಜನ್ಮ ಪಡೆದಿವೆ.

ಇಂದು ಬೆಂಗಳೂರು ಚಹರೆ ಇಲ್ಲದ ನಗರ. ಹಳಬರಿಗೆ ಅದನ್ನು ಕಂಡರೆ ಹಳವಂಡ; ಹೊಸಬರಿಗೆ ಉದ್ಯೋಗಪರ್ವದ ಹೇಷಾರವ. ನಾಗರಿಕತೆಯ ಕುರುಡು ರಚನೆಗೆ ಹಳೆಯ ಚಿತ್ರ ಮಾಸಲಾಗಿದೆ, ಚಿತ್ರಪಟ ಹರಿದುಹೋಗಿದೆ. ಆದರೂ ವೃದ್ಧ ಕಲಾವಿದನ ಜಬ್ಬಲು ಬಟ್ಟೆ ಬರೆ ಒಂದು ಕಾಲಕ್ಕೆ ಆತ ಗೌರವಾನ್ವಿತವಾಗಿ ಬಾಳಿದ್ದನ್ನು ಸೂಚಿಸುವಂತೆ ಹಳೆಯ ಬೆಂಗಳೂರಿನ ಗೌರವಶಾಲಿ ಬಾಳು ಇಲ್ಲಿ ರೇಖಾಂಕಿತವಾಗಿದೆ. ಬರುವ ದಿನಗಳಲ್ಲಿ ನರಸಿಂಹಮೂರ್ತಿಯವರ `ನೆನೆ ಮನವೇ’ ಪುಸ್ತಕ ಕಳೆದುಹೋದ ದಕ್ಷಿಣ ಬೆಂಗಳೂರಿನ ಸಾಂಸ್ಕೃತಿಕ ನೆನಪಿನ ಶಾಲೆಯಾಗಿ ಉಳಿಯಲಿದೆ.

ಕೆಲವು ಕಡೆ ಬಾಲ್ಯದ ನೆನಪುಗಳು ವಿಸ್ತಾರಗೊಂಡಿವೆ. ಇನ್ನು ಕೆಲವು ಕಡೆ ಭಾವನೆಯ ಹಿಂದೆ ಯಾವುದೋ ಅಳಲು ಬಚ್ಚಿಟ್ಟುಕೊಂಡಿದೆ. ಹನುಮಂತನಗರ, ಗವಿಪುರ, ಚಾಮರಾಜಪೇಟೆ, ಬಸವನಗುಡಿ, ಹೊಸಕೆರೆಹಳ್ಳಿ, ಇನ್ನೂ ತಲೆ ಎತ್ತಿರದಿದ್ದ ರಾಜರಾಜೇಶ್ವರಿನಗರದ ಗುಡ್ಡಗಳ ವಿವರಣೆಗಳು ಸ್ಫುಟವಾಗಿ ಮೂಡಿವೆ.

ವ್ಯಕ್ತಿಚಿತ್ರ, ಪ್ರದೇಶದ ಚಿತ್ರಣ ಹಾಗೂ ಹಳೆಯ ಸಿನಿಮಾಗಳ ನೆನಪು ಮೂರು ಇಲ್ಲಿ ಮುಪ್ಪರಿಗೊಂಡಿವೆ. ನರಸಿಂಹಮೂರ್ತಿಯವರು ತಮ್ಮದೇ ಆದ ಪ್ರಬಂಧ ಶೈಲಿಯನ್ನು ಬೆಳೆಸಿಕೊಂಡಿದ್ದಾರೆ. ಇದಕ್ಕೆ ಕಾರಣ ಒಂದು ಬಗೆಯ ಅರೆ ಸುಪ್ತಾವಸ್ಥೆಯಲ್ಲಿ ಸದಾ ಇರುವ ಅವರ ವ್ಯಕ್ತಿತ್ವ. ಹೀಗಾಗಿ ಹೊರಮೈಯಲ್ಲಿ ಅವರು ಜನಸಂಘ, ಬಿಜೆಪಿ, ಆರ್ಎಸ್ಎಸ್ - ಹೀಗೆ ಸಾಮಾಜಿಕ ಚಹರೆ ಹೊಂದಿದ್ದರೂ ಅದು ಅವರ ಭಾವಲೋಕವನ್ನು ಸಂಪೂರ್ಣ ವಶಪಡಿಸಿಕೊಂಡಿಲ್ಲ. ಹೀಗಾಗಿ ಅವರ ಒಳಮೈಯಲ್ಲಿ ಒಬ್ಬ ಕವಿ, ಲಾವಣಿಕಾರ, ಸಾಮಾಜಿಕ ವ್ಯಕ್ತಿ ಜೀವಂತವಾಗಿದ್ದಾನೆ.

ಪೂರ್ವ ಪ್ರಬಂಧಕಾರರಾದ ವಿ. ಸೀತಾರಾಮಯ್ಯ, ತೀ.ನಂ.ಶ್ರೀಕಂಠಯ್ಯ, ವಿನಾಯಕ ಗೋಕಾಕ, ಜಿ.ಪಿ.ರಾಜರತ್ನಂ, ಶಿವರುದ್ರಪ್ಪ, ಹಾ.ಮಾ.ನಾಯಕ ಇವರ ಪ್ರಬಂಧಗಳನ್ನು ಶ್ರೀಯುತರು ಅಭ್ಯಾಸ ಮಾಡಿದ್ದಾರೆ. ಹಿಂದಿ-ಉರ್ದುವಿನ ಹಳೆಯ ಹಾಡುಗಳ ಭಾವ ಭಂಡಾರ-ಪದ ಸಂಪತ್ತು ಅವರಲ್ಲಿ ಮನೆ ಮಾಡಿದೆ. ಜೊತೆಗೆ ರಾಷ್ಟ್ರವಾದಿ ಚಿಂತಕರು, ಮಾಸ್ತಿ, ಡಿ.ವಿ. ಗುಂಡಪ್ಪ ಅವರು ಓಡಾಡಿ ಬಾಳಿದ ಪರಿಸರದಲ್ಲೇ ಇವರ ಬಾಲ್ಯ ವಿಕಸಿತವಾದುದರಿಂದ ಆ ಚೇತನಗಳ ಪ್ರಭಾವವೂ ಉಂಟು.

ಕರ್ಣಾಟಕದ ರಾಜಕೀಯ ಪರ್ವದ ಹೃದಯವಾಗಿರುವ ಬೆಂಗಳೂರಿನ ವನಪರ್ವ ಸಭಾಪರ್ವಗಳು ಇಲ್ಲಿ ಸುಂದರವಾಗಿ ಮೂಡಿದೆ. ನಗರವು ಮಹಾನಗರವಾಗಿ ಬೆಳೆಯುವಾಗ ಕಳೆದು ಹೋದ ಗ್ರಾಮಪರ್ವ-ಅರಣ್ಯಪರ್ವಗಳ ನೆನಪು ಖಚಿತವಾಗಿ ಮೂಡಿದೆ. ಹೀಗಾಗಿ ನಮ್ಮ ನಾಡಿನ ಸಮಾಜಶಾಸ್ತ್ರ , ನಗರಶಾಸ್ತ್ರದ ಇತಿಹಾಸವನ್ನು ಅಭ್ಯಾಸ ಮಾಡುವ ಜಿಜ್ಞಾಸುಗಳಿಗೆ ನರಸಿಂಹಮೂರ್ತಿಯವರ ಈ ಪುಸ್ತಕವು ಅತ್ಯಂತ ಅನಿವಾರ್ಯ.

ಸಂಸ್ಕೃತಿಯು ಉಳಿಯಬೇಕಾದರೆ ಪ್ರಕೃತಿಯನ್ನು ವಿಕೃತಿ ಮಾಡಿಕೊಳ್ಳದೆ ಇಲ್ಲದ್ದನ್ನು ಉಬ್ಬಿಸದೆ, ಇದ್ದದ್ದನ್ನು ತಗ್ಗಿಸದೆ ರಸಕ್ಕೆ ವಂಚನೆ ಮಾಡದೆ ಬರೆಯುವ ಕಲೆ ಬೇಕು. ಅದಕ್ಕೆ ಅನುಭವ-ಓಡಾಟದ ಅಧಿಕಾರವಾಣಿಯೂ ಬೇಕು. ಅಧಿಕಾರವಾಣಿ ಇಲ್ಲದೇ ಸಂಸ್ಕೃತಿಯನ್ನು ಕುರಿತು ಮಾತನಾಡಿದರೆ ರಾಜ್ಯವಿಲ್ಲದೆ ಸುಗ್ರೀವ ಸುಗ್ರೀವಾಜ್ಞೆ ಹೊರಡಿಸಿದಂತೆ. ಯಜ್ಞ ದೃಷ್ಟಿ-ಶಿವ ದೃಷ್ಟಿ- ನಾಥ ಪಂಥದ ದೃಷ್ಟಿ, ಕ್ರಿಸ್ತ ದೃಷ್ಟಿಯಿಂದ ವಿಕಸಿತವಾದ ಬೆಂಗಳೂರಿನ ಜೀವನವನ್ನು ತಮ್ಮ ಅನುಭವ ದೃಷ್ಟಿಯಿಂದ ಪಂಚೀಕರಣ ಮಾಡಿ ಓದುಗರಿಗೆ ನರಸಿಂಹಮೂರ್ತಿಯವರು ಉಣಬಡಿಸಿದ್ದಾರೆ.

ಇನ್ನು ಮುಂದಾದರೂ ಹೊಸ ಬಡಾವಣೆಗಳನ್ನು ಕಟ್ಟುವಾಗ ವಹಿಸಬೇಕಾದ ಎಚ್ಚರಿಕೆಯಾಗಿಯೂ ಅವರ ಅನುಭವ ನಿಷ್ಠ ಈ ಕೃತಿಯನ್ನು ಆಡಳಿತ ವರ್ಗದವರು ಅಧ್ಯಯನ ಮಾಡಬೇಕು. ಮಾಡುವರೆ ಗೊತ್ತಿಲ್ಲ!

ಯಾವ ಸಿದ್ಧಾಂತವನ್ನೂ ಪ್ರತಿಪಾದಿಸದೆ, ಯಾರನ್ನೂ ವಿರೋಧಿಸದೆ ತಾನು ಕಂಡ ಬೆಳದಿಂಗಳಿನಂತಹ ಬೆಂಗಳೂರನ್ನು ಕಟ್ಟಿಕೊಟ್ಟಿರುವ ನರಸಿಂಹಮೂರ್ತಿಯವರ ಬತ್ತಳಿಕೆಯಲ್ಲಿ ಇನ್ನೂ ಸಾಕಷ್ಟು ನೆನಪಿನ ಬಾಣಗಳಿವೆ. ಅವುಗಳನ್ನು ಒಂದೊಂದಾಗಿ ಸಹೃದಯರ ಮೇಲೆ ಪ್ರಯೋಗಿಸಲಿ. ಒಬ್ಬ ಸಹೃದಯನಾದ ಸನ್ಮಿತ್ರ ಇದಕ್ಕೂ ಬೇರೆ ಏನು ಹಾರೈಸಬಹುದು. ಅವರೆ ಉಲ್ಲೇಖ ಮಾಡಿರುವಂತೆ

ಕಾಲದ ಚಕ್ರವು ಉರುಳುತಿರೆ
ಬಾಳಿನ ಬಂಡಿಯು ತೆರಳುತಿರೆ
ಹಕ್ಕಿಯು ಹಾರುತಿದೆ
ದೂರಕೆ ಹಕ್ಕಿಯು ಹಾರುತಿರೆ

- ಡಾ. ಜಿ.ಬಿ.ಹರೀಶ

MORE FEATURES

ಬದುಕಿನಲ್ಲಿ ನಾವೇನಾಗಬಲ್ಲೆವೂ ಅದಾಗಬೇಕು

03-01-2025 ಬೆಂಗಳೂರು

“ಈ ಪುಸ್ತಕ ಓದಿ ನಾನು ಯಾರು ಎಂದು ಗೊತ್ತಾಯಿತು ಮಾತ್ರವಲ್ಲ; ಬೇರೆಯವರು ಯಾಕೆ ಹೀಗೆ? ಎಂದು ತಿಳಿಯಿತು,” ಎ...

ಕತೆಗಳೆಲ್ಲವೂ ಬದುಕಿನ ಹೆಜ್ಜೆಯಲ್ಲಿ ಹುಟ್ಟಿದ ಜೀವತಂತುಗಳು

03-01-2025 ಬೆಂಗಳೂರು

“ಇಲ್ಲಿನ ಎಲ್ಲಾ ಕತೆಗಳಲ್ಲೂ ಕತೆಗಾರನಿಗೆ ಅರಿವಿದ್ದೋ, ಇಲ್ಲದೆಯೋ ಪ್ರಾದೇಶಿಕ ಪ್ರಜ್ಞೆ ಸ್ಥಾಯಿಭಾವವಾದರೆ, ಮನುಷ್...

ಈ ಪುಸ್ತಕ ಇರುವುದು ಒಂದೇ ಸಂಗತಿಯ ಸುತ್ತ

03-01-2025 ಬೆಂಗಳೂರು

“ಈ ಪುಸ್ತಕದ ಬಹುಪಾಲು ವಿಚಾರಗಳು ಗ್ರಂಥಋಣದಲ್ಲಿ ಸೂಚಿಸಿರುವ ಪುಸ್ತಕಗಳು ಮಾತ್ರವಲ್ಲದೆ ಇನ್ನೂ ಅನೇಕ ಪುಸ್ತಕಗಳಿಂ...