"ಆಸ್ಟ್ರೇಲಿಯಾದ ಮೊದಲ ಮ್ಯೂಸಿಯಂ ನಲ್ಲಿ ಮೂಲನಿವಾಸಿಗಳು ಹೆಣೆಯುತ್ತಿದ್ದ ಬೆತ್ತದ ಬುಟ್ಟಿಗಳು, ಚಿಪ್ಪುಗಳ ಸರ ಇತ್ಯಾದಿ ಇವೆ. ಮ್ಯೂಸಿಯಂ ಆಫ್ ಕಂಟೆಂಪರರಿ ಆರ್ಟ್ ನಲ್ಲಿ ಸದಾ ಪ್ರದರ್ಶಿತವಾಗುತ್ತಿರುವ ಕೆಲ್ವಿನ್ ಗಿಲ್ಬರ್ಟ್ ಎಂಬ ಮೂಲನಿವಾಸಿ ಕಲಾವಿದ ಮತ್ತು ಹೋರಾಟಗಾರರ ಎಂಟು ಕಲಾಕೃತಿಗಳಿವೆ. ಜುಮಾದಿಯವರ ಫ್ಯಾಂಟಸಿ ಮತ್ತು ವಾಸ್ತವ ಜಗತ್ತಿನ ಎಲ್ಲೆಗಳನ್ನು ಮೀರಿದ ವಿಶಿಷ್ಟ ಚಿತ್ರಗಳೂ ಇವೆ," ಎನ್ನುತ್ತಾರೆ ಪಾರ್ವತಿ ಜಿ. ಐತಾಳ್. ಅವರು ಪರಮೇಶ್ವರ ಗುರುಸ್ವಾಮಿಯವರ 'ಸಿಡ್ನಿ ಸುತ್ತಾಟ' ಕೃತಿ ಕುರಿತು ಬರೆದ ವಿಮರ್ಶೆ.
'ಸಿಡ್ನಿ ಸುತ್ತಾಟ' ಪರಮೇಶ್ವರ ಗುರುಸ್ವಾಮಿಯವರ ಆಸ್ಟ್ರೇಲಿಯಾ ಪ್ರವಾಸ ಕಥನ. ಉತ್ತಮ ಗುಣಮಟ್ಟದ ಕಾಗದ, ಮುದ್ರಣ, ವಿನ್ಯಾಸ ಮತ್ತು ಬಣ್ಣ ಬಣ್ಣದ ಸಚಿತ್ರ ವಿವರಗಳಿಂದ ಕೂಡಿ ಈ ಪುಸ್ತಕ ಅತ್ಯಾಕರ್ಷಕವಾಗಿದೆ. ಅಲ್ಲಿ ಉದ್ಯೋಗಿಯಾದ ಮಗಳು ಅನಲಾಳನ್ನು ನೋಡಲು ಸಂಗಾತಿ ಮಂಜುಳಾ ಜೊತೆಗೆ ಹೋದವರು ಎರಡು ತಿಂಗಳು ಅಲ್ಲೇ ಇದ್ದು ಅಲ್ಲಿನ ಮಾರಿಕ್ ವಿಲ್ ಪ್ರದೇಶದಲ್ಲಿರುವ (ಪುರಾತನ ಸಿಡ್ನಿ) ಅನೇಕ ಆಕರ್ಷಕ ಸ್ಥಳಗಳನ್ನು ನೋಡಿ ಅವುಗಳೆಲ್ಲದರ ವೈಶಿಷ್ಟ್ಯಗಳನ್ನು ಈ ಕೃತಿಯಲ್ಲಿ ಅವರು ದಾಖಲಿಸಿದ್ದಾರೆ.
ಮಾರಿಕ್ ವಿಲ್ ಪ್ರದೇಶದ ಜೀಬ್ರಾ ಕ್ರಾಸಿಂಗ್ ಗಳಲ್ಲಿ ಪಾದಚಾರಿಗಳಿಗೆ ವಾಹನದವರು ನೀಡುವ ಪ್ರಾಶಸ್ತ್ಯದ ಬಗ್ಗೆ ಮೆಚ್ಚುಗೆಯೊಂದಿಗೆ(ಯಾಕೆಂದರೆ ಬೆಂಗಳೂರಿನಲ್ಲಿ ಆ ವ್ಯವಸ್ಥೆ ಇದ್ದರೂ ಜನಸಾಮಾನ್ಯರು ಅದನ್ನು ಹಾಳುಗೆಡವಿದ್ದಾರೆಂದು ಅವರು ನೆನಪಿಸಿಕೊಳ್ಳುತ್ತಾರೆ.) ಪರಮೇಶ್ವರ್ ಅವರ ಕಥನ ಆರಂಭವಾಗುತ್ತದೆ. ಮುಂದೆ ಆಸ್ಟ್ರೇಲಿಯಾದ ಮೂಲನಿವಾಸಿಗಳು ಅಲ್ಲಿ ಸುಮಾರು ಒಂದೂವರೆ ಲಕ್ಷ ವರ್ಷಗಳಷ್ಟು ಕಾಲ ಜೀವಿಸಿದ್ದರೂ ಅನಂತರ ಬಂದು ಅಲ್ಲಿ ವಸಾಹತುಗಳನ್ನು ಸ್ಥಾಪಿಸಿದ ಬಿಳಿಯರೇ ಮೇಲುಗೈಯಾಗಿ ನಾಗರಿಕತೆಯ ಎಲ್ಲಾ ಕುರುಹುಗಳನ್ನು ಅಲ್ಲಿ ಸ್ಥಾಪಿಸಿದರು ಎನ್ನುತ್ತಾರೆ. ಇಂಗ್ಲೆಂಡಿನಲ್ಲಿ ಕೈದಿಗಳನ್ನು ಹಾಕಲು ಸೆರೆಮನೆಗಳಲ್ಲಿ ಜಾಗ ಕಡಿಮೆಯಾದ್ದರಿಂದ ಅರಂಭದಲ್ಲಿ ನಾಲ್ಕು ನೌಕೆಗಳ ತುಂಬಾ ಕೈದಿಗಳನ್ನು ಅಲ್ಲಿಗೆ ಕರೆತಂದರು. ಅ ಕೈದಿಗಳು ತಮ್ಮ ಶಿಕ್ಷೆಯ ಅವಧಿ ಮುಗಿದ ನಂತರ ಅಲ್ಲೇ ನೆಲೆಸಿ ಆಸ್ಟ್ರೇಲಿಯದ ನಾಗರಿಕರಾದರು. ಇಂದು ಅಲ್ಲಿರುವ ಕೈದಿಗಳ ವಂಶದವರಿಗೆ ತಮ್ಮ ಹಿರಿಯರು ಕೈದಿಗಳಾಗಿದ್ದರು ಎಂದು ಹೇಳಲು ಯಾವುದೇ ಹಿಂಜರಿಕೆ ಇಲ್ಲವಂತೆ.
ಕಥನದ ಮುಂದಿನ ಪುಟಗಳು ಪೂರ್ತಿಯಾಗಿ ಬೇರೆ ಬೇರೆ ಸ್ಥಳಗಳ ಸಚಿತ್ರ ವಿವರಗಳಿಗೆ ಮೀಸಲು. ಓಲ್ಡ್ ಕೊಲೋನಿಯಲ್ ವಾಸ್ತು ಶೈಲಿಯಲ್ಲಿ ಕಟ್ಟಿರುವ ಕ್ಯಾಡ್ ಮನ್ಸ್ ಕಾಟೇಜು, ಸಿಡ್ನಿ ಮ್ಯೂಸಿಯಂ ನಲ್ಲಿರುವ ಮೂಲ ನಿವಾಸಿಯಾದ ಗೊರ್ಡನ್ ಸೈರೆನ್ ಅವರ ಕಲಾಕೃತಿಗಳು, ಬಿಗ್ ಡಿಗ್ ಉತ್ಖನನ ತಾಣಗಳು, ಹೈಡ್ ಪಾರ್ಕ್ ಬ್ಯಾರಾಕ್ಸ್ ಇತ್ಯಾದಿ. ಆರಂಭದಲ್ಲಿ ಸೆರೆಮನೆಯಾಗಿದ್ದು ನಂತರ ಮುಕ್ತ ವಲಸಿಗರ ತಾಣವಾಗಿ ನಂತರ ನ್ಯಾಯಾಲಯವಾಗಿ ನ್ಯಾಯ ತೀರ್ಮಾನಗಳ ಕೇಂದ್ರವಾಗಿ ನಂತರ ಕಾನೂನು ಮತ್ತು ಆಡಳಿತಾತ್ಮಕ ಕಚೇರಿಯಾದ ಹೈಡ್ ಪಾರ್ಕ್ ಬ್ಯಾರಾಕ್ಸ್ ಕಟ್ಟಡವು ಸಿಡ್ನಿಯ ಬೆಳವಣಿಗೆಗೆ ಸಾಕ್ಷಿಯಾಗಿ ನಿಂತಿದೆ.
ಆಸ್ಟ್ರೇಲಿಯಾದ ಮೊದಲ ಮ್ಯೂಸಿಯಂ ನಲ್ಲಿ ಮೂಲನಿವಾಸಿಗಳು ಹೆಣೆಯುತ್ತಿದ್ದ ಬೆತ್ತದ ಬುಟ್ಟಿಗಳು, ಚಿಪ್ಪುಗಳ ಸರ ಇತ್ಯಾದಿ ಇವೆ. ಮ್ಯೂಸಿಯಂ ಆಫ್ ಕಂಟೆಂಪರರಿ ಆರ್ಟ್ ನಲ್ಲಿ ಸದಾ ಪ್ರದರ್ಶಿತವಾಗುತ್ತಿರುವ ಕೆಲ್ವಿನ್ ಗಿಲ್ಬರ್ಟ್ ಎಂಬ ಮೂಲನಿವಾಸಿ ಕಲಾವಿದ ಮತ್ತು ಹೋರಾಟಗಾರರ ಎಂಟು ಕಲಾಕೃತಿಗಳಿವೆ. ಜುಮಾದಿಯವರ ಫ್ಯಾಂಟಸಿ ಮತ್ತು ವಾಸ್ತವ ಜಗತ್ತಿನ ಎಲ್ಲೆಗಳನ್ನು ಮೀರಿದ ವಿಶಿಷ್ಟ ಚಿತ್ರಗಳೂ ಇವೆ. ಮ್ಯೂಸಿಯಂ ಆಫ್ ಸಿಡ್ನಿಯಲ್ಲಿ ಹಲವಾರು ಪ್ರಾಚೀನ ವಸ್ತುಗಳು, ಹಳೆಯ ಮತ್ತು ಹೊಸ ಕಟ್ಟಡಗಳ ಹಾಗೂ ಆರಂಭಕಾಲದ 11 ಹಡಗುಗಳ ಮಾದರಿಗಳಿವೆ. ವಸಾಹತುಶಾಹಿಗಳು ಕಡಲತೀರದಲ್ಲಿ ಮೊದಲು ಕಾಲಿಟ್ಟ ಜಾಗಕ್ಕೆ ರಾಕ್ಸ್ ಎಂದು ಹೆಸರಿಟ್ಟರು. ಈ ಪ್ರದೇಶದ ಸ್ವಾತಂತ್ರ್ಯಕ್ಕಾಗಿ ಮೂಲನಿವಾಸಿಗಳು ಬ್ಯಾಟಲ್ ಫಾರ್ ರಾಕ್ಸ್ ಎಂಬ ಹೆಸರಿನಲ್ಲಿ ಜ್ಯಾಕ್ ಮಂಡೆ ಎಂಬವರ ನಾಯಕತ್ವದಲ್ಲಿ ನಡೆಸಿದ ಹೋರಾಟದ ಕಾರಣಕ್ಕೆ ಜ್ಯಾಕ್ ಮಂಡೆಯನ್ನು ಬಂಧಿಸಿದ ಪರಿಯನ್ನು ಚಿತ್ರದಲ್ಲಿ ನೋಡಿದಾಗ ಲೇಖಕರಿಗೆ ವಾಟಾಳ್ ನಾಗರಾಜ್ ಅವರ ನೆನಪಾಗುತ್ತದೆ. ಆ ನಿರ್ದಿಷ್ಟ ಜಾಗವನ್ನು ರಾಕ್ ಮಂಡೆ ಎಂಬ ಸ್ಮಾರಕವಾಗಿ ಈಗಲೂ ಇಟ್ಟುಕೊಂಡಿದ್ದಾರಂತೆ.
ಮುಂದೆ ಸಿಡ್ನಿಯ ವಿದ್ಯುತ್ ಬೇಡಿಕೆಯನ್ನು ಪೂರೈಸುವ ಕಸೂಲ ಪವರ್ ಹೌಸ್, ಬಹುಶಿಸ್ತುಗಳ ಕಲಾಕೇಂದ್ರ ಆರ್ಟ್ಸ್ ಸೆಂಟರ್, ಹ್ಯಾಂಗ್ ಗ್ಲೈಡಿಂಗ್ ಮತ್ತು ಪ್ಯಾರಾಗ್ಲೈಡಿಂಗ್ ಕೇಂದ್ರ, ಮಹಾ ಕರುಣಾಮಂದಿರ ಎಂಬ ಬೌದ್ಧ ದೇವಾಲಯಗಳ ವಿವರಗಳಿವೆ .ಸಿಡ್ನಿಯ ಓಪೆರಾ ಹೌಸ್,ವಿಕ್ಟೋರಿಯನ್ ಫ್ರೀ ಗಾಥಿಕ್ ಶೈಲಿಯಲ್ಲಿ ರುವ ಮಾರ್ಚುವರಿ ರೈಲ್ವೆ ಸ್ಟೇಷನ್, ಮಾರಿಕ್ ವಿಲ್ ಪ್ರದೇಶದ ಮೊಟ್ಟ ಮೊದಲ ನಿವಾಸ ಸ್ಟೆಡ್ ಹೌಸ್, ಸಿಡ್ನಿಯ ವಿಕ್ಷಣಾಗೊಪುರ , ಆಸ್ಟ್ರೇಲಿಯಾದ ಹಳೆಯ ಮತ್ತು ಹೊಸ ಪಾರ್ಲಿಮೆಂಟ್ ಭವನಗಳು, ಬಸಾಲ್ಟ್ ಶಿಲಾ ಗುಡ್ಡ, ಬಾಲ್ಡ್ ಹಿಲ್ ಲುಕೌಟ್ ನಲ್ಲಿರುವ ವಿಹಾರ ಪ್ರದೇಶ-ಹೀಗೆ ನೂರಾರು ವೈಶಿಷ್ಟ್ಯಳನ್ನು ಲೇಖಕರು ತೋರಿಸುತ್ತ ಹೋಗುತ್ತಾರೆ.
ಸಿಡ್ನಿಯ ನಾಗರಿಕರ ಪುಸ್ತಕ ಪ್ರೀತಿ ಮತ್ತು ಅದಕ್ಕಾಗಿ ಅವರು ಮಾಡುವ ಪ್ರಯತ್ನಗಳು ಹುಬ್ಬೇರಿಸುವಂತೆ ಮಾಡುತ್ತವೆ. ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಾರಾಟ ವ್ಯವಸ್ಥೆ ಅಲ್ಲಿ ಭರ್ಜರಿಯಾಗಿದೆ. ಒಂದು ಮನೆಯ ಕಾಂಪೌಂಡ್ ಗೋಡೆಯ ಮೇಲೆ ಹೊರಗಡೆ ಓಡಾಡುವವರಲ್ಲಿ ಆಸಕ್ತರಿದ್ದರೆ ಅವರಿಗೆ ಮುಕ್ತವಾಗಿ ಓದಲು ಅನುಕೂಲವಾಗುವಂತೆ ಪುಟಾಣಿ ಲೈಬ್ರರಿಗಳನ್ನು ಮತ್ತು ಮಾರಿಕ್ ವಿಲ್ ನ ಶಾಪಿಂಗ್ ಸೆಂಟರ್ ನಲ್ಲು ಬಲಗಡೆಗೆ ಒಂದು ಬುಕ್ ಶೆಲ್ಫ್ ಇದ್ದುದನ್ನು ಅವರು ನೋಡುತ್ತಾರೆ.
ನ್ಯೂ ಸೌತ್ ವೇಲ್ಸ್ ನ ಸ್ಟೇಟ್ ಲೈಬ್ರರಿ ಅಲ್ಲಿರುವ ಅತ್ಯಂತ ದೊಡ್ಡ ಲೈಬ್ರರಿ. ವಸಾಹತುಶಾಹಿಯ ನಂತರ ಅಲ್ಲಿ ಸುತ್ತಮುತ್ತ ಭವ್ಯವಾದ ಕಟ್ಟಡಗಳು ಬಂದಿವೆ. ಆಸ್ಟ್ರೇಲಿಯಾವನ್ನು ಸಂದರ್ಶಿಸಿದ ಇಂಗ್ಲೆಂಡ್ ನ ಪ್ರಸಿದ್ಧ ಸಾಹಿತಿಗಳು -,ವಿಜ್ಞಾನಿಗಳು ಸರ್ಕ್ಯುಲರ್ ಕೀ ಅಕಾರದಲ್ಲಿ ತಮ್ಮ ಐತಿಹಾಸಿಕ ನೆನಪುಗಳನ್ನು ನೆಲದ ಮೇಲೆ ಹೆರಿಟೇಜ್ ವಾಕ್ ಹೆಸರಿನಲ್ಲಿ ಹಾಸಿದ್ದು ಜನರು ಅವನ್ನು ತುಳಿದುಕೊಂಡೇ ಓಡಾಡುತ್ತಾರೆ. 60 ಮಂದಿ ಮಹತ್ವದ ಸಾಹಿತಿಗಳ ಹೆಸರು, ಪರಿಚಯ ಹಾಗೂ ಆಸ್ಟ್ರೇಲಿಯಾ ಕುರಿತ ಅವರ ಅನ್ನಿಸಿಕೆಗಳು ಅಲ್ಲಿ ಲೋಹದ ಫಲಕಗಳಲ್ಲಿವೆ. ಶಾಂತಸಾಗರದ ತೀರದಲ್ಲಿ ಬೊಂಡಾಯ್ ಬೀಚಿನಿಂದ ತಮರಂ ಬೀಚ್ ವರೆಗೆ ಇರುವ ಸ್ಟೀಲಿನಿಂದ ಮಾಡಿದ ಹಾರ್ಬರ್ ಸೇತುವೆ ಇನ್ನೊಂದು ಅದ್ಭುತ. 1654 ಅಡಿ ಉದ್ದದ ಈ ಸೇತುವೆ ಜಗತ್ತಿನಲ್ಲಿ ಹತ್ತನೆಯ ಸ್ಥಾನದಲ್ಲಿದೆ. 2013ರಲ್ಲಿ ಇದಕ್ಕೆ ಕೃತಕ ಬುದ್ಧಿಮತ್ತೆ ಒದಗಿಸುವ 3000 ಸೆನ್ಸರುಗಳನ್ನು ಅಳವಡಿಸಲಾಯಿತು. ಸೇತುವೆಯ ಮೇಲೆ ಓಡಾಡುವ ವಾಹನಗಳ ಸಂಖ್ಯೆ, ಅವುಗಳ ವೇಗ, ಕಂಪನಗಳ ಲೆಕ್ಕಾಚಾರ ಹಾಕಿ ಅಲ್ಲಿ ಬಿರುಕುಂಟಾಗುವ ಸಾಧ್ಯತೆಗಳನ್ನು ಅವು ದಾಖಲಿಸುತ್ತವೆ. ಜನರ ಜೀವಗಳ ಸುರಕ್ಷತೆಯ ದೃಷ್ಡಿಯಿಂದ ಇದು ಬಹಳ ಒಳ್ಳೆಯ ನಡೆ.
ಡಾರ್ಲಿಂಗ್ ಹಾರ್ಬರ್ ನಲ್ಲಿ ಸೀ ಲೈಫ್ ಅಕ್ವೇರಿಯಂ ನಲ್ಲಿ 700 ಪ್ರಭೇದಗಳಿಂದ ಕೂಡಿದ 13,000 ಜಲಚರಗಳನ್ನು, ಟರೊಂಗಾ ಮೃಗಾಲಯದಲ್ಲಿ 350 ಪ್ರಭೆದಗಳಿಗೆ ವಿವಿಧ ಬಗೆಯ ಪ್ರಾಣಿ-ಪಕ್ಷಿಗಳನ್ನು ನೋಡಿದ್ದು, ಡಾರ್ಲಿಂಗ್ ಹಾರ್ಬರ್ ನಲ್ಲಿ ಮ್ಯಡಾಮ್ ಟುಸ್ಸಾಡ್ ಅವರ ಮೇಣದ ಗೊಂಬೆಗಳಿರುವ ಮ್ಯೂಸಿಯಂ ನೋಡಿದ್ದು, ಸೈಂಟ್ ಜೇಮ್ಸ್ ಸ್ಟೆಷನ್ನಿನಲ್ಲಿ ಮೊದಲ ನೆಲಮಾಳಿಗೆ ರೈಲು ನಿಲ್ದಾಣ ನೋಡಿದ್ದು, ಕ್ವೀನ್ ವಿಕ್ಟೋರಿಯಾ ಬಿಲ್ಡಿಂಗ್ ನಲ್ಲಿ ರೋಮನ್ ವಾಸ್ತು ಶೈಲಿಯಲ್ಲಿ ಕಟ್ಟಿದ ಸುಂದರ ವಾಣಿಜ್ಯ ಸಂಕೀರ್ಣ ನೋಡಿದ್ದು ಲೇಖಕರ ಅವಿಸ್ಮರಣೀಯ ಅನುಭವ.
ಫುಟ್ ಪಾಥ್ ಗಳಲ್ಲಿ ಸುಸ್ಥಿತಿಯಲ್ಲಿರುವ ಗೃಹೋಪಯೋಗಿ ವಸ್ತುಗಳನ್ನು ತಮಗೆ ಬೇಡವೆನ್ನಿಸಿದಾಗ ಉಳ್ಳವರು ಕೌನ್ಸಿಲಿಗೆ ತಿಳಿಸಿ ವ್ಯವಸ್ಥಿತವಾಗಿ ಇರಿಸುತ್ತಾರೆ. ಅಗತ್ಯವಿರುವವರು ಅವುಗಳಲ್ಲಿ ತಮಗೆ ಬೇಕಾದುದನ್ನು ಆಯ್ದುಕೊಂಡು ಹೋಗುವುದು ಮತ್ತು ಸಾಲ್ವೇಶನ್ ಸ್ಟೇಷನ್ ನವರು ಅವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದು ಒಂದು ಬಹಳ ಒಳ್ಳೆಯ ಜನಸ್ನೇಹಿ ವ್ಯವಸ್ಥೆ.
ಪುಸ್ತಕದ ಕೊನೆಯ ಭಾಗದಲ್ಲಿ ವನ್ಯಪ್ರದೇಶಗಳಲ್ಲಿ ವಾಸಿಸುವ ಪಾರಿವಾಳದಂತಹ ಹಕ್ಕಿಗಳು, ಝಿಬ್ರಾ ಪಿಂಚ್,ಗಿಣಿಗಳು ಮೊದಲಾದ ಹಕ್ಕಿಗಳು, ಟರೊಂಗಾ ಮೃಗಾಲಯದಲ್ಲಿ ವಿವಿಧ ರೂಪದ ಕಾಂಗರೂಗಳು, ಡಾಸ್ಮೋನಿಯಲ್ ಡೆವಿಲ್ ಗಳು ಮುಳ್ಳು ಇರುವೆ ಬಾಕ್ಗಳು ಇತ್ಯಾದಿ ವಿಶೇಷ ಪ್ರಾಣಿಗಳ ಕುರಿತಾದ ಸಚಿತ್ರ ವಿವರಗಳಿವೆ.
ಒಂದು ಪ್ರವಾಸ ಕಥನದ ಸ್ವರೂಪವು ಆಯ್ಕೆ ಮಾಡುವ ಜಾಗಗಳು, ಜಾಗಗಳನ್ನು ನೋಡುವವರ ಕಣ್ಣು ಮತ್ತು ಬರೆಯುವವರ ದೃಷ್ಟಿಗಳನ್ನು ಅವಲಂಬಿಸಿರುತ್ತದೆ. ಪರಮೇಶ್ವರ್ ಅವರಿಗೆ ನಾಗರಿಕತೆ, ಜನಜೀವನದ ವಿವರಗಳು , ಸಾಮಾಜಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ವಿಚಾರಗಳು, ಪರಿಸರ-ಪ್ರಾಣಿ-ಪಕ್ಷಿ,-ಪ್ರಕೃತಿಗಳಲ್ಲಿ ಆಸಕ್ತಿಯಿರುವುದು ಈ ಕೃತಿಯಲ್ಲಿ ವ್ಯಕ್ತವಾಗುತ್ತದೆ. ಆಧ್ಯಾತ್ಮಿಕ ಮತ್ತು ದೇವರು-ಪೂಜಾಮಂದಿರಗಳು, ದೇವಸ್ಥಾನಗಳು ಮೊದಲಾದ ವಿಷಯಗಳ ಬಗ್ಗೆ ಅವರು ಗಮನ ಹರಿಸಿದಂತೆ ಕಾಣುವುದಿಲ್ಲ. ಜಗತ್ತಿನ ಎಲ್ಲೆಡೆ ಜನಜೀವನವನ್ನು ಆವರಿಸಿಕೊಂಡ ಬಹುದೊಡ್ಡ ಭಾಗವದು.
ಬೇರೆ ಬೇರೆ ಮೂಲಗಳಿಂದ ಚಿತ್ರಗಳನ್ನು ಸಂಗ್ರಹಿಸಿ ಅವಕ್ಕೆ ತಕ್ಕ ವಿವರಣೆಗಳನ್ನು ನೀಡಿ ಪರಮೇಶ್ವರ, ಮಂಜುಳಾ ಮತ್ತು ಅನಲಾ ಮುವರೂ ಸೇರಿ 'ಸಿಡ್ನಿ ಸುತ್ತಾಟ' ಎಂಬ ಈ ಪುಸ್ತಕಕ್ಕೊಂದು ಸುಂದರ ಮತ್ತು ಮೌಲಿಕ ಸ್ವರೂಪ ನೀಡಿ ಕನ್ನಡದ ಓದುಗರಿಗೆ ಒಂದು ಅಮೂಲ್ಯ ಕೊಡುಗೆ ನೀಡಿದ್ದಾರೆ. ಖ್ಯಾತ ಮಾಧ್ಯಮ ಮಿತ್ರರಾದ ಜಿ.ಎನ್.ಮೋಹನ್ ಮತ್ತು ಕೋಟಿಗಾನಹಳ್ಳಿ ರಾಮಯ್ಯನರು ಪುಸ್ತಕದ ಬಗ್ಗೆ ಅಪಾರ ಮೆಚ್ಚುಗೆ ಸೂಸಿ ಬೆನ್ನುಡಿ ಬರೆದಿದ್ದಾರೆ.
- ಪಾರ್ವತಿ ಜಿ.ಐತಾಳ್
“ಈ ಪುಸ್ತಕ ಓದಿ ನಾನು ಯಾರು ಎಂದು ಗೊತ್ತಾಯಿತು ಮಾತ್ರವಲ್ಲ; ಬೇರೆಯವರು ಯಾಕೆ ಹೀಗೆ? ಎಂದು ತಿಳಿಯಿತು,” ಎ...
“ಇಲ್ಲಿನ ಎಲ್ಲಾ ಕತೆಗಳಲ್ಲೂ ಕತೆಗಾರನಿಗೆ ಅರಿವಿದ್ದೋ, ಇಲ್ಲದೆಯೋ ಪ್ರಾದೇಶಿಕ ಪ್ರಜ್ಞೆ ಸ್ಥಾಯಿಭಾವವಾದರೆ, ಮನುಷ್...
“ಈ ಪುಸ್ತಕದ ಬಹುಪಾಲು ವಿಚಾರಗಳು ಗ್ರಂಥಋಣದಲ್ಲಿ ಸೂಚಿಸಿರುವ ಪುಸ್ತಕಗಳು ಮಾತ್ರವಲ್ಲದೆ ಇನ್ನೂ ಅನೇಕ ಪುಸ್ತಕಗಳಿಂ...
©2025 Book Brahma Private Limited.