Date: 23-01-2025
Location: ಬೆಂಗಳೂರು
"ಅನುಭವದ ಸಾಮಾಜಿಕ, ಭೌತಿಕ ದಂದ್ವಗಳನ್ನು ಮೀರುವುದೇ ಅನುಭಾವ. ಅನುಭವ ಯಾವುದನ್ನು ನಂಬುತ್ತದೋ ಅದು ಆ ಕ್ಷಣದಲ್ಲಿ ಬೇರೆ ಸ್ವರೂಪ ಪಡೆಯುತ್ತದೆ. ಅದು ಸಹಜವಾದುದು. ಅದನ್ನು ದೈನಂದಿನ ಬದುಕಿನಲ್ಲಿ ಸಹಜವಾಗಿ ಅನುಭವಿಸುತ್ತಿರುತ್ತೇವೆ. ಈ ಅನುಭವ ಸ್ವರೂಪದ ಸಾಮಾಜಿಕ ಮತ್ತು ಧಾರ್ಮಿಕ ಅಂತಸ್ಥಿತಿಯನ್ನು ಅರಿತುಕೊಳ್ಳುವುದು ಅನುಭಾವ," ಎನ್ನುತ್ತಾರೆ ರಾಜಶೇಖರ ಹಳೆಮನೆ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ‘ಅನುಭಾವದರಳು’ ವಚನದ ಕುರಿತು ಬರೆದ ಲೇಖನ.
ಶ್ರೀ ನಿರುಪಾದೀಶ್ವರ ಅವರ ಅನುಭಾವದರಳು ವಚನಕಾರರ, ತತ್ವಪದಕಾರರ ಚಿಂತನೆ ಮತ್ತು ಭಾಷಿಕ ನೆಲೆಯ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸುವ ಕೃತಿ. ಭಾಷೆ ಮತ್ತು ಬದುಕು ವಿಭಿನ್ನ ಎಂಬ ದಂದ್ವವನ್ನು ದಾಟಿದ ಏಕೀಕೃತ ಬದುಕಿನ ಸಾಧ್ಯತೆಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಈ ಕೃತಿ ಮಾಡುತ್ತದೆ. ಬದುಕಿನ ವಿನ್ಯಾಸಗಳು ಭಾಷಿಕ ಲಯದಲ್ಲಿ ಅಭಿವ್ಯಕ್ತಿಗೊಳ್ಳವಾಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತದೆ. ಬದುಕನ್ನು ಹಿಡಿದಿಡುವ ಭಾಷೆ ಬದುಕಿನ ಲಯದೊಂದಿಗೆ ಒಂದಾಗಬೇಕು. ಆಗ ಅದು ಬದುಕನ್ನು ಒಳಗೊಳ್ಳುತ್ತದೆ. ಈ ಒಳಗೊಳ್ಳುವ ಪ್ರಕ್ರಿಯೆಯು ಭಾಷಿಕವಾಗಿ ಅನುಭವದೊಂದಿಗೆ ಬೆರೆತರೆ ಸಾಲದು. ಅನೇಕ ಸಮುದಾಯಗಳಿರುವ ಕಾಲದಲ್ಲಿ ಅನುಭವವವನ್ನು ಮರು ರೂಪಿಸುವುದು ಸಹಜವಾದುದು. ಆದರೆ ಆ ಅನುಭವವೂ ಏನನ್ನು ಧ್ವನಿಸುತ್ತದೆ ಎಂಬುದು ಮುಖ್ಯ. ಅನುಭವ ನುಡಿಸುವ ಚಿಂತನೆಯ ಧ್ವನಿಗಳು ಯಾವುವು ಎಂಬುದನ್ನು ಕಂಡುಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಅನುಭವದೊಂದಿಗೆ ಕಟ್ಟುವ ಭಾಷಿಕ ಲಯವೂ ಉಪದೇಶ ಅಥವಾ ವಿದ್ವತ್ತಿನ ಕಟ್ಟನ್ನು ಹೊಂದಿರುತ್ತದೆ. ಏಕೆಂದರೆ, ಈ ಭಾಷಿಕ ಕಟ್ಟುವಿಕೆಯ ನುಡಿಗಾರರು ಸಾಮಾಜಿಕ ಸಹಜ ಸ್ಥಿತಿಯಿಂದ ಭಿನ್ನರಾಗಿರುವದರಿಂದ ಆ ಭಿನ್ನತೆಯನ್ನು ಭಾಷೆಯಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇದರಿಂದ ಅಲ್ಲಿ ಅನುಭವ ಮತ್ತು ಹೇಳುವಿಕೆಯ ದಾಖಲೆಯು ಮುಖ್ಯವಾಗುತ್ತದೆ. ಈ ದಾಖಲೆಯು ಕೆಲವು ಸಾರಿ ಸಾಮಾಜಿಕ ವಿನ್ಯಾಸದಿಂದ ದೂರ ಉಳಿಯುತ್ತದೆ. ಅಥವಾ ಇದರ ಅಗತ್ಯ ಭಾಷಿಕ ಅನುಭವದಲ್ಲಿ ಇರಬೇಕಾಗಿಲ್ಲ ಎಂಬ ನಿಲುವು ಕೂಡ ಇರುತ್ತದೆ. ಅಂದರೆ, ಶ್ರೇಣೀಕೃತ ಸಾಮಾಜಿಕ ವಿನ್ಯಾಸವನ್ನು ನಮ್ಮೊಳಗಿನ ಜ್ಞಾನದ ಶ್ರೇಣೀಕೃತ ಅಹಂಕಾರದೊಂದಿಗೆ ಅಭಿವ್ಯಕ್ತಿಸಿದರೆ ಅಲ್ಲಿ ವಿಘಟನೆ ಇರುತ್ತದೆ. ಈ ವಿಘಟನೆಯು ಮತ್ತೊಂದು ಭಯ ಮತ್ತು ಶೇಷ್ಟತೆಯ ದಾರಿಯನ್ನು ತುಳಿಯುತ್ತದೆ. ಇದರಿಂದ ಧರ್ಮಚಿಂತನೆ, ಸಾಹಿತ್ಯ ಚಿಂತನೆ ಕೇವಲ ನಿರೂಪಣೆಯ ನೆಲೆಯನ್ನು ಪಡೆಯುತ್ತವೆ. ಅವು ಬದುಕಿನೊಂದಿಗೆ ಒಂದಾಗುವುದಿಲ್ಲ. ಈ ವಿಘಟನೆ ಮತ್ತು ಬೌದ್ಧಿಕ ಶೇಣೀಕೃತ ಅಹಂಕಾರವನ್ನು ಜ್ಞಾನದ ದೀವಿಗೆಯಲ್ಲಿ ಕತ್ತಲುಗೊಳಿಸುವ, ಬೆಳಕಾಗಿಸುವ ಎರಡು ನೆಲೆಗಳು ಇರುತ್ತವೆ. ಕತ್ತಲಾಗಿಸುವ ಪ್ರಕ್ರಿಯೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಾದರಿಯೊಂದು ಹುಟ್ಟು ಹಾಕುವುದು ಅನುಭಾವದ ನೆಲೆಯಾಗಿರುತ್ತದೆ. ಈ ಭಿತ್ತಿಯಲ್ಲಿ ಅನುಭಾದರಳು ಕೃತಿಯನ್ನು ನೋಡಬೇಕಾಗುತ್ತದೆ.
ಅನುಭವದ ಸಾಮಾಜಿಕ, ಭೌತಿಕ ದಂದ್ವಗಳನ್ನು ಮೀರುವುದೇ ಅನುಭಾವ. ಅನುಭವ ಯಾವುದನ್ನು ನಂಬುತ್ತದೋ ಅದು ಆ ಕ್ಷಣದಲ್ಲಿ ಬೇರೆ ಸ್ವರೂಪ ಪಡೆಯುತ್ತದೆ. ಅದು ಸಹಜವಾದುದು. ಅದನ್ನು ದೈನಂದಿನ ಬದುಕಿನಲ್ಲಿ ಸಹಜವಾಗಿ ಅನುಭವಿಸುತ್ತಿರುತ್ತೇವೆ. ಈ ಅನುಭವ ಸ್ವರೂಪದ ಸಾಮಾಜಿಕ ಮತ್ತು ಧಾರ್ಮಿಕ ಅಂತಸ್ಥಿತಿಯನ್ನು ಅರಿತುಕೊಳ್ಳುವುದು ಅನುಭಾವ. ಅನುಭವವನ್ನು ನಿರಂತರ ನಿಕಷಕ್ಕೊಡ್ಡುತ್ತಾ ಸಾಂಸ್ಕೃತಿಕ ಎಲ್ಲೆಗಳನ್ನು ಮೀರುತ್ತಾ ಸಾಗುವ ಪ್ರಕ್ರಿಯೆ ಅನುಭಾದ್ದಾಗಿರುತ್ತದೆ. ಇದು ಭೌತಿಕ ಮತ್ತು ಬೌದ್ಧಿಕ ಸ್ಥಿತಿಯಿಂದ ದೂರ ಸಾಗಿ ಮತ್ತೆ ಅದೇ ಸ್ಥಿತಿಗೆ ಮತ್ತೊಂದು ಮರಳುವ ಜ್ಞಾನದ ದಾರಿ. ಆದ್ದರಿಂದ ಈ ದಾರಿಯನ್ನು ತುಳಿಯುವವರು ಲೌಕಿಕ್ಕಿಂತ ಭಿನ್ನರಾಗಿ ಬದುಕುತ್ತಾರೆ. ಲೌಕಿಕ ದಂದ್ವಗಳಿಗೆ ಸಂತ್ವಾನವನ್ನು ಹೇಳುತ್ತಿರುತ್ತಾರೆ. ಅದನ್ನು ಜನರು ನಂಬಿಕೊಂಡು ಸಮಧಾನಿಗಳು ಆಗುತ್ತಾರೆ. ಈ ರೀತಿಯ ದೊಡ್ಡ ಪರಂಪರೆಯನ್ನು ಶರಣರು ಹುಟ್ಟು ಹಾಕಿದ್ದನ್ನು ನೋಡಿದ್ದೇವೆ. ಅಂದರೆ, ಅನುಭವದೊಳಗೆ ತೊಳಾಡುವ ಬದುಕು ಅದರಿಂದ ಬಿಡಿಸಿಕೊಂಡು ಇನ್ನೊಂದು ಅನುಭವದ ತುದಿಯನ್ನು ತಲುಪುವುದು ಹೇಗೆ ಎಂಬ ಚಿಂತನೆಯನ್ನು ಮಾಡುವ ವಿಧಾನವೇ ಅನುಭಾವವಾಗುತ್ತದೆ. ಇಲ್ಲಿ ಎರಡು ನೆಲೆಗಳಿರುತ್ತವೆ. ಲೋಕವನ್ನು ಅರಿಯುವದು. ಲೋಕವನ್ನು ಇನ್ನೊಂದು ಲೋಕವನ್ನಾಗಿ ಪರಿವರ್ತಿಸುವುದು. ಸಾಮಾನ್ಯವಾದ ಅನುಭವಲೋಕ ಮೋಸ, ವಂಚನೆ, ದ್ವೇಷ, ಕಲಹ, ಹಿಂಸೆ, ಅಸಮಾನತೆ, ಅಪನಂಬಿಕೆ, ಲೋಭ, ವಿಲಾಸ, ವೈಭೋಗ, ದುರ್ಮಾರ್ಗ ಮುಂತಾದ ಸಂಗತಿಗಳಿಂದ ಕೂಡಿರುತ್ತದೆ. ಇದು ಸಹಜ ಎಂಬಂತೆ ಬದುಕುತ್ತಿರುತ್ತೇವೆ. ಇದನ್ನು ಮೀರಿಯೂ ಕೂಡ ಬದುಕುವ ಸಾಧ್ಯತೆಗಳಿವೆ ಎಂಬ ಗಾಢ ಚಿಂತನೆಯನ್ನು ರೂಢಿಸಿಕೊಳ್ಳುವುದು, ಬದುಕುವುದು ಅನುಭಾವದ ಅರಿವಾಗಿರುತ್ತದೆ. ಈ ನಡೆಯ ದಾರಿಯನ್ನು ಮುಖ್ಯವಾಗಿ ಅನುಭಾವದರಳು ಕೃತಿ ಕಟ್ಟಿಕೊಡುತ್ತದೆ.
ಅನುಭಾದಲ್ಲಿ ಬುದುಕುತ್ತಿರುವ ಶ್ರೀ ನಿರುಪಾದ ಸ್ವಾಮಿಗಳು ತಮ್ಮ ಚಿಂತನೆಯನ್ನು ದಾಟಿಸಲು ತ್ರಿಪದಿ ಮತ್ತು ಚೌಪದಿ ಎಂಬ ಸಾಹಿತ್ಯ ಪ್ರಕಾರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅನುಭಾವ ಚಿಂತನೆಯನ್ನು ಅಭಿವ್ಯಕ್ತಿಸಲು ಈ ಪ್ರಕಾರಗಳು ಒಗ್ಗುತ್ತವೆ. ಯಾಕೆಂದರೆ, ನಮ್ಮ ಅನುಭವವನ್ನು ಶೋಧಿಸಿಕೊಳ್ಳಲು ಸಣ್ನ ದಾರಿಗಳೇ ನೆರವಾಗುತ್ತವೆ. ನೋಡುತ್ತಾ ನೋಡುತ್ತಾ ನಡೆಯುತ್ತ ಹೋದಂತೆ ದಾರಿ ಸಾಗುವುದು ಗೊತ್ತಾಗುವುದಿಲ್ಲ, ಭಾರವೂ ಆಗುವುದಿಲ್ಲ. ಒಂದು ವ್ಯವಧಾನವೂ ಇರುತ್ತದೆ. ಆದ್ದರಿಂದ ಅನುಭಾವದ ಅಭಿವ್ಯಕ್ತಿಗೆ ಈ ಸಾಹಿತ್ಯ ಪ್ರಕಾರಗಳನ್ನು ಸೃಷ್ಟಿಸಿಕೊಂಡಿರುವುದು ನಮ್ಮ ಪರಂಪರೆಯಲ್ಲಿ ಮುಖ್ಯವಾದುದು. ಯಾವುದೇ ಚಿಂತನೆಯು ಹೊಸ ದಾರಿಯನ್ನು ತುಳಿಯತ್ತದೆ ಅಂದಾಗ ತಾನೆ ಒಂದು ಭಾಷಿಕಲಯವನ್ನು ಕಂಡುಕೊಳ್ಳುತ್ತದೆ. ಈ ಭಾಷಿಕ ಲಯ ಹೊಸದಾಗಬೇಕಾದರೆ ನಮ್ಮ ಬದುಕಿನಲ್ಲಯೂ ಕೂಡ ಮಾರ್ಪಾಡಾಗಬೇಕಾಗುತ್ತದೆ. ಅನುಭವವನ್ನು ಅರ್ಥಮಾಡಿಕೊಳ್ಳುವುದು, ಅರ್ಥೈಯಿಸುವುದು ಏಕಕಾಲಕ್ಕೆ ಈ ಸಂದರ್ಭದಲ್ಲಿ ನಡೆಯುತ್ತದೆ. ಆಗ ಭಾಷೆಗೂ ಮತ್ತು ಬದುಕಿಗೂ ಹೊಸ ಬನಿ ದಕ್ಕುತ್ತದೆ. ಈ ದಕ್ಕುವಿಕತೆಯನ್ನು ಸರಳವಾಗಿ, ನೇರವಾಗಿ ಆತ್ಮೀಯ ದಾಟಿಯಲ್ಲಿ ಈ ಕೃತಿ ನಿರೂಪಿಸುತ್ತದೆ. ಇಲ್ಲಿಯ ತ್ರಿಪದಿ ಮತ್ತು ಚೌಪದಿಗಳು ಜ್ಞಾನದ ಭಾರದಿಂದ ಬಳಲುವುದಿಲ್ಲ. ಬದುಕಿನೊಂದಿಗೆ ಪ್ರೀತಿಯ ಸಂವಾದವನ್ನು ಮಾಡುತ್ತವೆ.
ಈ ಕೃತಿಯಲ್ಲಿ ಎರಡು ಭಾಗಗಳಿವೆ. ಒಂದು ತ್ರಿಪದಿ ತೋರಣ ಎರಡು ಚೌಪದಿ ಚಂಪಕ. ತ್ರಿಪದಿ ತೋರಣದಲ್ಲಿ ಶ್ರುತಿಶ್ರೀ, ಶಬ್ದಶ್ರೀ, ಸುಜ್ಞಾನಶ್ರೀ, ಸ್ವರಶ್ರೀ, ಸಂಕೇತಶ್ರೀ ಎಂಬ ಐದು ಚಿಂತನಾ ಭಾಗಗಳಿವೆ. ಚೌಪದಿ ಚಂಪಕದಲ್ಲಿ ಸ್ತುತಿ ಶ್ರೀ, ಚಿಂತನಶ್ರೀ, ವಿಚಾರಶ್ರೀ, ಧರ್ಮಶ್ರೀ, ಸಂಕೀರ್ಣಶ್ರೀ, ಸಂಸ್ಕೃತಶ್ರೀ, ಶಿಕ್ಷಣಶ್ರೀ, ಸಾಹಿತ್ಯಶ್ರೀ, ಆರೋಗ್ಯಶ್ರೀ, ಸಮಯಶ್ರೀ ಎಂಬ ಹತ್ತು ಭಾಗಗಳಿವೆ. ಈ ಭಾಗಗಳು ಕನ್ನಡದಲ್ಲಿಯೇ ಹೊಸ ಪ್ರಯೋಗಳಾಗಿವೆ. ಇವು ಸಾತ್ವಿಕ ಚಿಂತನೆಯಿಂದ ಮನುಷ್ಯನ ಕೇಡುಗಳನ್ನು ತಿದ್ದಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತವೆ. ಇವು ಕೇವಲ ಉಪದೇಶದಿಂದ ಕೂಡಿಲ್ಲ. ಕಾವ್ಯದ ಅಂಶಗಳನ್ನು ಒಳಗೊಂಡಿವೆ. ವಚನಗಳು ಯಾವ ಸಮಾನತೆಯ, ಧರ್ಮದ ದಯೆಯ ಸತ್ವವನ್ನು ಸಾರಿದವೋ ಅದೇ ಚಿಂತನೆಯನ್ನು ಇಲ್ಲಿಯ ತ್ರಿಪದಿ, ಚೌಪದಿಗಳು ಮಾಡುತ್ತವೆ. ಕನ್ನಡದಲ್ಲಿಯೇ ಇವು ಹೊಸ ಪ್ರಯೋಗಗಳು. ಈ ಪ್ರಕಾರಗಳು ಎಲ್ಲಿಯೂ ಲಯ ತಪ್ಪದಂತೆ ಆದ್ಯಾತ್ಮ ಚಿಂತನೆಯಿಂದ ಹರಿಯುತ್ತವೆ. ಲೌಕಿಕದ ಭವವನ್ನು ಮೀರಿ ಅನುಭಾವ ಪಡೆಯುವ ಕಡೆಗೆ ನಮ್ಮನ್ನು ಚಲಿಸುವಂತೆ ಮಾಡುತ್ತವೆ. ಹೀಗಾಗಿ ಕ್ನಡದಲ್ಲಿ ಇವು ವಿಶಿಷ್ಟ ರಚನೆಗಳು.
ಕಷ್ಟಗಳು ಬರಲೆನಿತು ನಿಷ್ಠೆ ನಿಶ್ಚಿತಗೊಳಿಸು
ಭ್ರಷ್ಟರಿಂ ತಡೆಯು ಬರಲು ದಾಟುವ ಶಕ್ತಿ
ಶ್ರೇಷ್ಠ ಗುಣ ನೀಡು ಅಡವೇಶ
ಜೀವನದಲ್ಲಿ ಕಷ್ಟಗಳು ಬುರುವುದು ಸಹಜ. ಕಷ್ಟಗಳನ್ನು ನಿವಾರಿಸಲು ಅಡ್ಡದಾರಿ ತುಳಿಯುವದು ಸರಿಯಾದುದಲ್ಲ. ಬದುಕಿನ ನಿಷ್ಠೆಯನ್ನು ಕಳೆದುಕೊಳ್ಳಬಾರದು. ಬದುಕನ್ನು ಅದಮ್ಯವಾಗಿ ಪ್ರೀತಿಸಬೇಕು. ಕಷ್ಟಗಳು ಬಂದಾಗ ಅವುಗಳನ್ನು ಎದುರಿಸಬೇಕು. ಅದಕ್ಕಾಗಿ ಅಡ್ಡದಾರಿಗಳನ್ನು ತುಳಿಯಬಾರದು. ಕೆಲವು ಸಾರಿ ಕಷ್ಟಗಳನ್ನು ದಾಟಲು ಭ್ರಷ್ಟರು ಆಗುತ್ತೇವೆ. ಅದು ಸಹಜವಾಗಿಯೂ ನಡೆದು ಹೋಗುತ್ತದೆ. ಇಂತಹ ಸಂದರ್ಭಗಳಲ್ಲಿ ನೈತಿಕವಾಗಿ ಕಷ್ಟಗಳನ್ನು ಎದುರಿಸುವ ಶಕ್ತಿ ಕೊಡು ಎಂದು ತಮ್ಮ ಆತ್ಮ ಸಾಕ್ಷಿಯಾದ ಅಡವೇಶನನ್ನು ಕವಿ ಬೇಡುತ್ತಾನೆ. ಬದುಕಿನ ಶ್ರೇಷ್ಠ ಗುಣ ನಿಷ್ಠೆಯಿಂದ ಬದುಕನ್ನು ಬದುಕುವುದು.
ಸತ್ಯವೆನ್ನುವ ಕೆಲವರು ಮಿಥ್ಯವೆನ್ನುವ ಕೆಲವರು
ನಿತ್ಯ ನಾನಾರ್ಥವಿರಲೆನ್ನ ನಮನ ಸಾ
ಕ್ಷಿತ್ವವಿಹುದದಕೆ ಅಡಿವೇಶ
ಲೋಕಭಿರುಚಿ ಸಹಜವಾಗಿ ಇರುತ್ತದೆ. ಕೆಲವರು ಸತ್ಯದಿಂದ ನಡೆಯುತ್ತಾರೆ. ಇನ್ನೂ ಕೆಲವರು ಮಿಥ್ಯದಿಂದ ನಡೆಯುತ್ತಾರೆ. ಇವೆರಡು ದಾರಿಗಳು ಜೀವನದಲ್ಲಿ ಇರುತ್ತವೆ. ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದು ಮುಖ್ಯ. ಈ ವಿವೇಕ ನಮಗಿರಬೇಕು. ಆ ವಿವೇಕ ಇಲ್ಲದಿದ್ದರೆ ಬದುಕಿನಲ್ಲಿ ಅಶಾಂತಿ ನೆಲೆಸುತ್ತದೆ. ಅಡವೇಶ ನಿನ್ನ ಸಾಕ್ಷಿಯಲ್ಲಿ ಈ ಮನುಷ್ಯರನ್ನು ಸತ್ಯದ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸು ಎಂಬ ಭಾವ ಇದೆ.
ಶಿವ ಜೀವಿಗಳ ಸೃಷ್ಟಿ ಕವಿ ಸೃಷ್ಟಿ ವೈಶಿಷ್ಟ್ಯ
ವರನು ಹೇಳಿ ರವಿಯಾಗಿ ಹೇಳುವಿರಾ
ಕವಿಯಾಗಿ ಮತ್ತೆ ಅಡವೇಶ
ಕವಿ ಶಿವನಷ್ಟೇ ಮುಖ್ಯನಾದವನು. ಶಿವನ ಸೃಷ್ಟಯ ಶಕ್ತಿ ಕವಿಗೂ ಇರುತ್ತದೆ. ಕವಿಗೂ ಒಂದು ಅದಮ್ಯ ಶಕ್ತಿ ಇರುತ್ತದೆ. ಆ ಶಕ್ತಿಯನ್ನು ಯುಕ್ತಿಯಿಂದ ಬಳಸಿ ಹೊಸ ಸೃಷ್ಟಿಯನ್ನು ಮಾಡಬೇಕಾಗುತ್ತದೆ. ಆ ಸೃಷ್ಟಿಯೂ ಜಗತ್ತನ್ನು ಬೆಳಗಬೇಕು. ಇಲ್ಲದಿದ್ದರೆ ಸೃಷ್ಟಿ ವ್ಯರ್ಥವಾಗುತ್ತದೆ. ಆದ್ದರಿಂದ ಕವಿ ಸೃಷ್ಟಿ ಶಿವ ಸೃಷ್ಟಿಗಿಂತಲೂ ವಿಭಿನ್ನ ಮತ್ತು ವೈಶಿಷ್ಟ್ಯ ಎಂದು ಕವಿ ಹೇಳುತ್ತಾನೆ.
ಕಾವ್ಯ ಶಾಸ್ತ್ರವನರಿತು ಕಾವ್ಯವನು ಬರೆಯದಿರೆ
ಸವಿಹಾಲು ಹುಣುಚಿ ಸರಿ ಬೆರಸಿತುಂಬಂತೆ
ಕಾವ್ಯ ಕವಿರೂಪು ಅಡವೇಶ
ಕಾವ್ಯ ಬರೆಯಲು ಸಿದ್ದತೆ ಬೇಕು. ಯಾವ ಸಿದ್ದತೆ ಇಲ್ಲದೆ ಬರೆದರೆ ಪ್ರಯೋಜನವಿಲ್ಲ. ಕಾವ್ಯ ಕ್ರಿಯ ಧ್ಯನಕ್ಕೆ ಸಮಾನವಾದುದು. ಧ್ಯಾನ ದೊರೆಯುವುದು ಅಧ್ಯಯನದಿಂದ. ನಿರಂತರ ಕಾವ್ಯ ಅಧ್ಯಯನ ಹೊಸದರ ಹುಟ್ಟಿಗೆ ಕಾರಣವಾಗುತ್ತದೆ. ಆ ಹೊಸತು ಜೀವನಕ್ಕೆ ಹೊಸ ಚೈತನ್ಯ, ಕಳೆಯನ್ನು ನೀಡುತ್ತದೆ. ಸುಮ್ಮನೆ ಕಾವ್ಯ ಬರೆದರೆ ಅದು ಸೊಗಸುವುದಿಲ್ಲ. ಸವಿ ಹಾಲಿನಲ್ಲಿ ಹುಳಿ ಹಿಂಡಿದಂತೆ ಆಗುತ್ತದೆ. ಆದ್ದರಿಂದ ಕಾವ್ಯ ರಚನೆಗೆ ಶಾಸ್ತ್ರಗಳ ಅಧ್ಯಯನ ಬೇಕಾಗುತ್ತದೆ.
ಛಂದ ಸಿಂಹಾಸನವು ಹೊಂದಿರುವ ಶಬ್ದರಸ
ನಂದುಂಗರವು ರಸಪ್ರಭೆಯ ಮುಕುಟವಿಡ
ಲಂದು ಶೋಭಾಂಗ ಅಡವೇಶ
ಮೀಮಾಂಸೆಯ ವಿವರಗಳು ಕವಿಗೆ ಬೇಕು. ಛಂದಸ್ಸು ಕಾವ್ಯಕ್ಕೆ ಸಿಂಹಾಸನ ಛಂದಸ್ಸು. ಛಂದಸ್ಸಿನಿಂದ ಕಾವ್ಯ ರಚಿಸಿದರೆ ಶಬ್ದಗಳು ರಸವನ್ನು ಉಕ್ಕಿಸುತ್ತವೆ. ಜೀವರಸವನ್ನು ಹರಿಸುತ್ತವೆ. ಕಾವ್ಯ ಮತ್ತು ಜೀವನಕ್ಕೆ ಸೌಂದರ್ಯವನ್ನು ತರುತ್ತವೆ. ಜೀವರಸ ಹೊಮ್ಮುವಂತೆ ಕಾವ್ಯ ಮಾಡಬೇಕಾಗುತ್ತದೆ. ಕಾವ್ಯ ಮತ್ತು ಜೀವನ ಬೆರೆಯಬೇಕು. ಆಗ ಕಾವ್ಯರುಚಿ ಜೀವನರುಚಿ ಏಕವಾಗುತ್ತದೆ. ಆದ್ದರಿಂದ ಕಾವ್ಯ ರಚನೆ ಮೀಮಾಂಸೆಯ ಅಧ್ಯಯನದಿಂದ ನವಶಕ್ತಿಯನ್ನು ಪಡೆಯುತ್ತದೆ ಎಂಬುದನ್ನು ಗಮನಿಸಬೇಕು.
ಸಾಹಿತ್ಯ ಬುಧರಂಗೆ ಅಹಂಕಾರ ಸಲ್ಲದು
ಸಹದೋಷ ತಿದ್ದಿ ತಿಳಿಸುವಾ ಪಥದರ್ಶಿ
ಮಹಾಸ್ಥಲಕ್ಕೆ ಯೋಗ್ಯ ಅಡವೇಶ
ಯಾವದೇ ಕವಿಗೆ ಅಹಂಕಾರ ಸಲ್ಲದು. ಅಹಂಕಾರವಿದ್ದರೆ ಕಾವ್ಯ ಬದುಕಿಗೆ ಎನನ್ನೂ ಹೇಳುವುದಿಲ್ಲ.
ಮಾನವನ ದೋಷಗಳನ್ನು ಕಾವ್ಯ ತಿದ್ದಬೇಕು. ಜೀವನದ ದೋಷಗಳನ್ನು ತಿದ್ದುವ ದಾರಿ ಕಾವ್ಯದ್ದಾಗಬೇಕು. ಈ ದಾರಿ ಸಿಗಬೇಕಾದರೆ ಮೊದಲು ಕವಿ ತನ್ನ ಒಳಗಿನ ಅಂಕಾರವನ್ನು ಕಳೆದುಕೊಳ್ಳಬೇಕು. ಆಗ ಬದುಕಿಗೆ ಸತ್ಪಥ ತೋರಿಸಲು ಸಾಧ್ಯವಾಗುತ್ತದೆ.
ಸಾಹಿತಿಯು ಸಾಹಸಿಯು ಬಾಹುಬಲದಿಂದಲ್ಲ
ಮಹತೆ ಮತಿಯಿಂದ ಕಿಂತುಸ್ಥಿತಿ ಸಾಯುತಿಹು
ಬಹು ಹಸಿವೆಯಿಂದ ಅಡವೇಶ
ಸಾಹಿತಿಗೆ ಸರಿಯಾದ ವಿವೇಕ ಇರಬೇಕು. ಆತನ ಸಾಹಸ ಬುದ್ದಿಯಿಂದ ಬರುತ್ತದೆ. ಅರಿವು ವಿವೇಕವೇ ದೊಡ್ಡ ಸಾಹಿತಿಗೆ ದೊಡ್ಡ ಶಕ್ತಿ. ಅದನ್ನು ಸದಾ ಜಾಗೃತಾವಸ್ಥೆಯಲ್ಲಿಟ್ಟುಕೊಳ್ಳಬೇಕು. ಬದುಕಿನ ಎಲ್ಲಾ ಆಯಾಮಗಳಿಗೆ ಸ್ಪಂದಿಸುವ ಚಿಂತನೆ ಸಾಹಿತ್ಯದ್ದಾಗಬೇಕು. ಇಲ್ಲದಿದ್ದರೆ ಜೀವನ ಕಂದುತ್ತದೆ. ದೈಹಿಕ ಸಾಹಸಕ್ಕಿಂತ ಬೌದ್ಧಿಕ ಸಾಹಸ ಮಾನವನಿಗೆ ಬೇಕು.
ನಾಲಿಗಿಲ್ಲದ ಘಂಟೆ ಮೊಲೆಹಾಲುವಿರದವಳು
ಜಲರಹಿತ ಭಾವಿ ಕರುಣವಿಲ್ಲದ ಕಾಯ
ಬೆಲೆಯೇನು ಕೇಳಿ ಅಡವೇಶ
ಈ ಕಾಯಕ್ಕೆ ಕರುಣೆ ಬೇಕು. ಕರುಣೆ ಇಲ್ಲದಿದ್ದರೆ ಕಾಯವಿದ್ದು ಪ್ರಯೋಜವಿಲ್ಲ. ಅದು ನಾಲಗೆಯಿಲ್ಲದೆ ಘಂಟೆಯಂತೆ, ಹಾಲಿಲ್ಲದ ಮೊಲೆಗಲಂತೆ, ನೀರಿಲ್ಲದ ಬಾವಿಯಂತೆ. ಯಾವುದೇ ಚಿಂತನೆಯಿರಲಿ, ಜ್ಞಾನವಿರಲಿ ಅದಕ್ಕೆ ಕರುಣೆ ಬೇಕು. ಕರುಣಯಿಲ್ಲದ ಜ್ಞಾನ, ಕಾವ್ಯ, ಸಾಹಿತ್ಯ ಕಲೆ ವ್ಯರ್ಥ. ಆದ್ದರಿಂದ ಈ ಕಾಯ ಸಾರ್ಥಕತೆಯನ್ನು ಪಡೆಯಬೇಕಾದರೆ ಕರುಣೆಯನ್ನು ಒಳಗೊಂಡಿರಬೇಕು.
ಅಲ್ಲಿಲ್ಲವೆನಬೇಡ ಎಲ್ಲಿಲ್ಲವೆನಬೇಡ
ವೆಲ್ಲರೊಳಗೊಂದು ನಾದವಿರಲೆನ್ನೊಳಗ
ಸಲ್ಲು ದಾಸೋಹ ಅಡಿವೇಶ
ಸಾಮಾನ್ಯವಾಗಿ ಮಾನುಷ್ಯ ತನ್ನ ಕಾರ್ಯಗಳನ್ನು ಸಮರ್ಪಕವಾಗಿ ಮಾಡದೆ ಸುಮ್ಮನೆ ಇನ್ನೊಬ್ಬರನ್ನು ಹಳಿಯುತ್ತ ಕಾಲ ಕಳೆಯುತ್ತಾನೆ. ಇದು ಲೋಕರೂಢಿಯಾದ ಗುಣ. ಈಗುಣವನ್ನು ಬಿಟ್ಟಾಗ ಮಾತ್ರ ಮನುಷ್ಯ ಏನಾದರೂ ಸಾಧಿಸಲು ಸಾಧ್ಯ. ಹೀಗಾಗಿ ಎಲ್ಲರನ್ನು ಒಳಗೊಂದು ಲಯವಿರುತ್ತದೆ. ಅದನ್ನು ಅರಿತುಕೊಂಡು ಮುನ್ನಡೆಯುವದು ಜೀವನವಾಗಬೇಕು. ಎಲ್ಲರೊಳಗೆ ಜೀವನ ನಾದವನ್ನು ಹುಡುಕುವುದು ನಿಜವಾದ ದಾಸೋಹವಾಗುತ್ತದೆ.
ಹಾಡಿದರೆ ದ್ರೋಹಿಗುಣ ರಾಡಿ ತೊಳದಿರಬೇಕು
ಮೋಡೋಡಿದಂತೆ ಸುರಿದಂತೆ ಶರಣಗುಣ
ಕುಡಿಯೊಡೆಯಬೇಕು ಅಡಿವೇಶ
ಶರಣರ ಗುಣಗಳು ಮಳೆ ನೀರಿನಂತೆ ಶುದ್ಧವಾಗಿರಬೇಕು. ಮೋಡ ನೀರನ್ನು ತುಂಬಿಕೊಂಡಂತೆ ಶರಣರು ಗುಣಗಳನ್ನು ತುಂಬಿಕೊಂಡಿರಬೇಕು. ಬದುಕನ್ನು ಅಶುದ್ಧಗೊಳಿಸದೆ ಶುದ್ಧಗೊಳಿಸುವ ಪ್ರಯತ್ನ ಮಾಡಬೇಕು. ಸಮಾಜದಲ್ಲಿ ಸದಾ ದುರ್ಗಣಗಳನ್ನು ಬಿತ್ತುವ ಅಜ್ಞಾನಿಗಳು ಇರುತ್ತಾರೆ. ಈ ಅಜ್ಞಾನವನ್ನು ನಾಶ ಮಾಡಿ ಸುಜ್ಞಾನವನ್ನು ಬೆಳೆಸುವುದು ಶರಣರ ಗುಣವಾಗಬೇಕು.
ಏನಿವುದು ಉದ್ದೇಶವೇನು ಬೇಕಾಗಿದೆಯೋ
ತಾನು ವೇಕಾಕಿ ಯಾವ ಪುರುಷನಿಗಾಗಿ ಅನುದಿನದ ಶೋಧ ಅಡಿವೇಶ
ನಮ್ಮ ಉದ್ದೇಶ ಏನಾಗಬೇಕೆಂಬ ತಿಳಿವಳಿಕೆ ಮನುಷ್ಯನಿಗಿರಬೇಕು. ಇಲ್ಲದಿದ್ದರೆ ಒಳ್ಳೆಯ ಮಾಡಲು ಸಾಧ್ಯವಿಲ್ಲ. ತನ್ನ ಒಳ್ಳೆಯತನವನ್ನು ಕಂಡುಕೊಳ್ಳುವುದು ಜೀವನದ ಉದ್ದೇಶವಾಗಿರಬೇಕು. ತಾನು ಏನನ್ನು ಯೋಚಿಸುತ್ತೇನೆ ಎಂಬುದನ್ನು ಕಂಡುಕೊಂಡು ಅದರಂತೆ ಬದುಕುವುದು ಪುರಷಾರ್ಥವಾಗಬೇಕು. ಈ ಮನೋಭಾ ಇಲ್ಲದಿದ್ದರೆ ಪುರಷಾರ್ಥ ಸಿದ್ದಿಸುವುದಿಲ್ಲ.
ಕುಲ ಕೇಳಬೇಡವಳ ಕುಲ ನಿನ್ನದಾವುದಿದೆ
ಮಲಮೂತ್ರ ರಕ್ತಮಾಂಸತ್ವಕ್‌ದೆಲವುಗಳೆ
ಕುಲ ನಿನಗೆಯಲ್ವೆ ಅಡವೇಶ
ಕುಲಗಳ ಮಾಡಿಕೊಂಡ ಮಾನವ ಅವುಗಳಲ್ಲಿ ಶ್ರೇಷ್ಠ ಕನಿಷ್ಟ ಎಂಬ ಭೇದ ಭಾವವನ್ನು ಮಾಡಿಕೊಂಡು ನಿರಂತರ ಸಂಘರ್ಷದಲ್ಲಿ ತೊಡಗಿರುವುದನ್ನು ಕಾಣುತ್ತೇವೆ. ಮನಷ್ಯನನ್ನು ಕುಲದ ಹೆಸರಿನ ಮೇಲೆ ಅಳತೆ ಮಾಡುತ್ತೇವೆ. ಇದು ಸರಿಯಾದುದಲ್ಲ. ಮಾನವನೇ ಒಂದು ಕುಲ ಎಂಬ ಭಾವನೆ ನಮ್ಮಲ್ಲಿ ಬೆಳೆಯಬೇಕು. ನಮ್ಮ ದೇಹಕ್ಕೆ ಯಾವ ಕುಲವಿದೆ. ಯಾರದೇ ಇರಲಿ ಅದನ್ನು ದೇಹವೆಂದೇ ಗುರುತಿಸುತ್ತೇವೆ. ರಕ್ತವನ್ನು ಕೂಡ ಬೇರೆ ಬೇರೆ ಎಂದು ಗುರುತಿಸಲು ಸಾಧ್ಯವಿಲ್ಲ. ಆದ್ದರಿಂದ ಮಾನವರೆಲ್ಲಾ ಒಂದೇ ಎಂಬ ಮನೋಭಾದಿಂದ ಇರುವುದು ಮುಖ್ಯ.
ಅಳಕದಿರುವಂಜದಿರು ಕಳೆಗುಂದುತ ವಿಚಾರ
ದೊಳು ಸಿಲುಕದಿರು ಋಣವಳಿದು ಋಣಿಯಾಗು
ಚಲ್ಲಿ ಚಲುವೆಯಡಿ ಅಡಿವೇಶ
ಜೀವನವನ್ನು ಸಂತಸದಿಂದ ಅನುಭವಿಸಬೇಕು. ಎನೇ ಕಷ್ಟ ಬಂದರೂ ಎದುರಿಸಬೇಕು. ಇಲ್ಲದಿದ್ದರೆ ಸೋಲುತ್ತೇವೆ. ಕೆಲವು ಸಾರಿ ಯಾರ್ಯಾರೋ ಏನೇನೋ ವಿಚಾರಗಳನ್ನು ಹೇಳುತ್ತಾ ನಮ್ಮಲ್ಲಿ ಅಸಮಧಾನ ಹುಟ್ಟಿಸಲು ಪ್ರಯತ್ನಿಸುತ್ತಾರೆ. ಅಂತವರ ವಿಚಾರಗಳನ್ನು ಅನುಸರಿಸಬಾರದು. ಜೀವನಕ್ಕೆ ಯಾರು ಸತ್ ವಿಚಾರಗಳನ್ನು ಹೇಳುತ್ತಾರೋ ಅವರು ವಿಚಾರವಂತರು. ಅಂತವರ ವಿಚಾರಗಳನ್ನು ಅರಿತುಕೊಂಡು ಜೀವನವನ್ನು ಮುನ್ನಡೆಸಬೇಕು.
ನೂರಾರು ಜನರಿರಲು ಬೆರೆಯುವದನು ಮರೆಯದಿರು
ವರನು ಮಂಟಪದಿ ವಧುವಿನೆಡೆ ನೋಟವನು
ಹರಿಸುತಿರೆ ಹರ್ಷ ಅಡವೇಶ
ಸಮಾಜದಲ್ಲಿ ನಾವು ದ್ವೀಪದಂತೆ ಬದುಕಬಾರದು. ಎಲ್ಲರೊಡನೆ ಬೆರೆತು ಜೀವನ ಮಾಡಬೇಕು. ಆಗ ಸಮೃದ್ಧಿಯಾಗುತ್ತದೆ. ಬೇರೆ ಬೇರೆ ಇರುವುದರಿಂದ ಒಗ್ಗಟ್ಟು ಮುರಿಯುತ್ತದೆ. ಪರಸ್ಪರ ಅರ್ಥ ಮಾಡಿಕೊಳ್ಳಲು ಕೂಡಿ ಬಾಳಬೇಕು. ಮದುವೆಯ ಸಂಬ್ರಮ ಹೇಗೆ ಜೀವನವನ್ನು ಉಲ್ಲಾಸಗೊಳಿಸುವುದೋ ಹಾಗೆ ಹಾಗೆ ಜನರೊಡನೆ ಬೆರೆಯುವದು ಸಂತಸ ನೀಡುತ್ತದೆ. ಎಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸುತ್ತದೆ.
ವಶೀಲಿ ಪ್ರಶಸ್ತಿಗಳು ಯಶಫಲವೆನಬೇಡ
ಹೊಸದರಿವೆ ಮುಚ್ಚಿರುವ ಹೇಸಿಕೆಯ ಪಾತ್ರೆ
ರಸಹೀನ ಮಾತ್ರೆ ಅಡವೀಶ
ಮಾನವನಿಗೆ ಆಶೆಗಳು ಬಹಳ. ಏನಾದರೂ ಕಾರ್ಯಗಳನ್ನು ಮಾಡಿದರೆ ಅದಕ್ಕೆ ಪ್ರತಿಫಲ ಬೇಕೆಂದು ಬಯಸುತ್ತಾನೆ. ಅದನ್ನು ಎಲ್ಲರು ಗುರುತಿಸಿ ಹೊಗಳಬೇಕೆಂದು ಬಯಸುತ್ತಾನೆ. ಇದರಿಂದ ಅವನಿಗೆ ದೊಡ್ಡ ಪ್ರಯೋಜನವಾಗುವುದಿಲ್ಲ. ಏನೇ ಕಾರ್ಯಗಳನ್ನು ಮಾಡಿದರೂ ನಿರ್ಲಿಪ್ತತೆಯಿಂದ ಇರಬೇಕು. ಆಗ ನಾವು ಮಾಡಿದ ಕಾರ್ಯಗಳು ಸಾರ್ಥಕವಾಗುತ್ತವೆ. ಆದ್ದರಿಂದ ಪ್ರಶಸ್ತಿಗಳು ಬಂದಾಗ ಅದನ್ನು ಯಶಸ್ಸು ಎನ್ನದೆ ಇರಬೇಕು.
ವರಕೃತಿಗೆ ಬೆಲೆಯಿಲ್ಲ ಬರಿದೆ ಕೃತಿಗುಂಟು ಬೆಲೆ
ಬರೆದವನ ಮರಣನಂತರದೀ ಘನಮಾನ್ಯ
ದೊರೆತು ಫಲವೇನು ಅಡವೇಶ
ಯಾವುದೇ ಕಲೆ, ಸಾಹಿತ್ಯವನ್ನು ಸೃಷ್ಟಿಸಿದ ವ್ಯಕ್ತಿಗೆ ಬದುಕಿರುವಾಗಲೆ ಗೌರವ ಕೊಡಬೇಕು. ಆಗ ಆ ವ್ಯಕ್ತಿಗೆ ಸಂತೋಷವಾಗುತ್ತದೆ. ತನ್ನ ಸೃಷ್ಟಿಯ ಬಗ್ಗೆ ಹೆಮ್ಮೆಯೆನಿಸುತ್ತದೆ. ವಾಸ್ತವದಲ್ಲಿ ಹಾಗೆ ಇರುವುದಿಲ್ಲ. ಅವರ ಸೃಷ್ಟಿಗಳನ್ನು ಯಾರು ಗಮನಿಸುವುದಿಲ್ಲ. ಸೃಷ್ಟಿಕರ್ತರಿಗೂ ಗೌರವ ಕೊಡುವುದಿಲ್ಲ. ಅವರು ಇಲ್ಲವಾದ ಮೇಲೆ ಹೊಗಳಿಕೆ, ತೆಗಳಿಕೆ ಮಾಡುತ್ತೇವೆ. ಇಲ್ಲ ಮಹತ್ವವನ್ನು ಸಾರುತ್ತೇವೆ. ಇದರಿಂದ ಸೃಷ್ಟಿಸಿದವರಿಗೆ ಯಾವುದೇ ಪ್ರಯೋಜನವಿಲ್ಲ. ಮಾನವ ವಿಕಾಸವನ್ನು ಚಿಂತಿಸುವ ಯಾವುದೇ ಸೃಷ್ಟಿಯನ್ನು ಅವರು ಬದುಕಿರುವಾಗಲೇ ಮನ್ನಣೆ ನೀಡುವುದು ಮುಖ್ಯ.
ನಿಂದಕನೆ ಸಹೃದಯಿಯೆಂದು ಚೆನ್ನುಡಿಯುಂಟು
ವೆಂದು ನಿಶ್ಚಿಯಿಸಿ ದಾಸೋಹಿ ಶರಣರರು
ಮುಂದಿಡುತ ಪದವ ಅಡಿವೇಶ
ಹೊಗಳಕೆಯನ್ನು ಮಾತ್ರ ನಾವು ಬಯಸಬಾರದು. ನಿಂದನೆಯನ್ನು ಸ್ವೀಕರಿಸಬೇಕು. ನಿಂದನೆಯಲ್ಲಿಯೂ ಕೆಲವು ಸತ್ಯಗಳಿರುತ್ತವೆ. ಆ ಸತ್ಯಗಳನ್ನು ಅರ್ಥ ಮಾಡಿಕೊಂಡು, ಅವಲೋಕನ ಮಾಡಿಕೊಂಡು ಇನ್ನಷ್ಟೂ ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಶರಣರು ನಿಂದನೆಗಳ ಯೋಚಿಸುವುದಿಲ್ಲ. ಅವುಗಳನ್ನು ಸಕಾರಣದಿಂದ ಸ್ವೀಕರಿಸುತ್ತಾರೆ. ನಿಂದನೆಗಳನ್ನೇ ತಮ್ಮ ಅರಿವಿಗೆ ದಾರಿಯನ್ನಾಗಿ ಮಾಡಿಕೊಳ್ಳುತ್ತಾರೆ. ಇಂತಹ ಸಾತ್ವಿಕ ಗುಣ ಮಾನವನಿಗೆ ಬೇಕು.
ಜಾತಿ ಸಿರಿವಂತಿಕೆಯು ಖ್ಯಾತದನುಪಮರೂಪು
ಮಾತು ಬಲ್ಲಿತನ ಬೇಕಿಲ್ಲ ಕೃಪೆಗೆ ನೀ
ರ್ಭೀತ ಸುಪ್ರೇಮ ಅಡಿವೇಶ
ಪ್ರಖ್ಯಾತಿ, ಸಿರಿವಂತಿಕೆ ಶಾಸ್ವತವಲ್ಲ. ಅವು ಮಾನವನನ್ನು ಅಹಂಕಾರಿಗಳನ್ನಾಗಿ ಮಾಡುತ್ತವೆ. ಸಮಾಜದ ಬಗ್ಗೆ ಸರಿಯಾಗಿ ಚಿಂತನೆ ಮಾಡದಂತೆ ತಡೆಯುತ್ತವೆ. ಸ್ವಾರ್ಥದಲ್ಲಿ ಮುಳುಗುವಂತೆ ಮಾಡುತ್ತವೆ. ಜಾತಿಗಳು ಅಡ್ಡಗೋಡೆಗಳು. ಅವು ಮಾನವನನ್ನು ಬೆಳೆಯಲು ಅಡ್ಡಿಯಾಗುತ್ತವೆ. ಸಮಾನತೆ, ಸಹಬಾಳ್ವೆ, ಶಾಂತಿಯನ್ನು ಮುರಿಯುತ್ತವೆ. ಅದ್ದರಿಂದ ಇವುಗಳ ಮೋಹಕ್ಕೆ ಬಲಿಯಾಗದೆ ಸಮಚಿತ್ತದಿಂದ ಚಿಂತನೆಯನ್ನು ಮಾಡಬೇಕು. ಆಗ ಯಾರಿಗೂ ದಾಸರಾಗುವ ಪ್ರಶ್ನೆಯೇ ಬರುವುದಿಲ್ಲ.
ಪ್ರತಿಯೊಬ್ಬ ಶರಣರು ತಮ್ಮನ್ನು ಅವಲೋಕನ ಮಾಡಿಕೊಳ್ಳಲು ಅಂತರಂಗದಲ್ಲಿಯೇ ದೇವರನ್ನು ಸ್ಥಾಪಿಸಿಕೊಂಡವರು. ಆ ದೇವರ ಮಾರ್ಗದರ್ಶದಂತೆ ತಮ್ಮ ಜೀವನ ತತ್ವವನ್ನು ರೂಪಿಸಿಕೊಂಡವರು. ಶ್ರೀ ನಿರುಪಾದ ಸ್ವಾಮಿಗಳು ಶರಣರ ದಅರಿಯಲ್ಲಿ ನಡೆದವರು. ಅವರ ಆತ್ಮದೈವ ಅಡವಿಸಿದ್ದ. ತಮ್ಮ ಎಲ್ಲಾ ಬಗೆಯ ಚಿಂತನೆಯನ್ನು ಅಎವಿಸಿದ್ದನಿಗೆ ನಿವೇದನೆ ಮಾಡಿಕೊಳ್ಳುತ್ತಾರೆ.
ಬಿಸಿಲೊಳು ಬೆಂದಿಲ್ಲ ಕಳೆದಿಲ್ಲ ಕತ್ತಲೆಯೆ
ಹೊಸಹೊಸತು ಪರಿಸರಕೆ ಬೇಸರಿಸದ
ಅಸಲಮಯ ಬಯಲವೇ ನೀನೆಂಬ ದೃಢತರದ
ಉಸಿರುನನದಾಗಿರಲಿ-ಅಡವಿಸಿದ್ದ
ಅಡವಿಸಿದ್ದನ ಕೃಪೆಯಿಂದ ಬದುಕಿನಲ್ಲಿ ಸದಾ ಹೊಸದನ್ನೇ ಪಡೆಯುತ್ತಾ ಬಂದಿದ್ದೇನೆ. ಬಿಸಿಲು, ಕತ್ತಲು ಎಲ್ಲವನ್ನು ಆತನ ದಯೆಯಿಂದ ಮೀರಲು ಸಾಧ್ಯಾಗಿದೆ. ನೀನು ಬಯಲಾಗಿ ನಮ್ಮನ್ನು ಪೊರೆಯುತ್ತಿರುವಾಗ ನಮಗೆ ಯಾತರದ ಚಿಂತೆ ಇಲ್ಲ. ನಿನ್ನ ಧ್ಯಾನದಿಂದ ನನ್ನ ಉಸಿರು ಮತ್ತಷ್ಟು ಶಕ್ತಿಯನ್ನು ಪಡೆಯುತ್ತಿದೆ. ದೃಢತನದಿ ಬದುಕುವ ಹುಮ್ಮಸ್ಸು ನನ್ನದಾಗುತ್ತಿದೆ ಎಂಬ ಚಿಂತನೆಯನ್ನು ಇಲ್ಲಿ ಕಾಣುತ್ತೇವೆ.
ಆನಂದದೊಳು ಜನನ ಆನಂದದೊಳು ಜತನ
ಆನಂದದೊಳು ಲೀನ ಕೊನೆ ಪಯಣದಿ
ಆನಂದ ತೈತ್ತರಿಯ – ಸೂತ್ರ ಸಂದೇಶ ಪರ-
ಮಾನಂದದೊಳಿರಿಸು- ಅಡವಿಸಿದ್ದ
ಜೀವನದ ಪರಮ ಉದ್ದೇಶ ಆನಂದದಿಂದ ಇರುವುದು. ಆ ಆನಂದ ಎಲ್ಲಿಂದ ಬರುತ್ತದೆ. ಅದನ್ನು ಪಡೆಯುವ ಬಗೆ ಹೇಗೆ ಎಂಬುದನ್ನು ಚಿಂತನೆ ಮಾಡಬೇಕು. ಆನಂದೊಳು ಲೀನವಾಗುವಂತೆ ತನ್ನನ್ನು ಹರಿಸು ಎಂದು ಅಡವಿಸಿದ್ದನನ್ನು ಬೇಡುತ್ತಾನೆ. ಜನನ ಮರಣ ಆನಂದಮಯವಾಗಿರಬೇಕು. ಸಹಜ ಸ್ಥಿತಿಯನ್ನು ರೂಢಿಸಿಕೊಂಡಾಗ ಈ ಆನಂದ ಸಾಧ್ಯವಾಗುತ್ತದೆ.
ಗುರುಹಿರಿಯರನು ಕಾಡಿಹುದ ಕಂಡೆನಂದಂತು
ಶರಣರನು ಪೀಡಿಸಿದ ಬಗ್ಗೆ ಕ್ರಾಂತಿ
ಚರಿತೆ ಅವರದೆ ಹಾಗೆ ನಂದೇನು ಅರೆದರು
ಸರಿಬಂದ ತೆರನಿರಿಸೊ – ಅಡವಿಸಿದ್ದ
ಶರಣರ ದಾರಿಯಲ್ಲಿ ನಾವು ನಡೆಯಬೇಕು. ಅವರು ಸಾಮಾಜಿಕ ಕ್ರಾಂತಿ ಮಾಡಲು, ಪರಿವರ್ತನೆ ಮಾಡಲು ಎಷ್ಟು ಪಡಿಪಾಟಲು ಪಟಿದ್ದಾರೆ. ಅವರಂತೆ ನಾವು ಇರಲು ಸಾಧ್ಯವಿಲ್ಲ ಎಂಬ ಸೌಜನ್ಯ ಅವರಲ್ಲಿದೆ. ಆದರೂ ಅವರ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸು ಎಂದು ಪ್ರಾರ್ಥಿಸುತ್ತಾರೆ. ಅವರ ಚರಿತೆ ಘನವಾದುದು. ಅವರಂತೆ ನಾವಿಲ್ಲ ಎಂಬ ಸತ್ಯ ಗೊತ್ತಿದೆ. ಇದರ ಒಳ ಉದ್ದೇಶ ಅವರಂತೆ ನಾವು ಆಗಬೇಕು ಎಂಬ ಆಶಯ.
ಕಲಿಯುವದು ಬದುಕಲ್ಕೆ , ಪಶುಪಕ್ಷಿ ಜೀವನದ
ಕುಲಿಮೆಯೊಳು ಕಲಿಯುತಿವೆ ಬದುಕುತ್ತವೆ
ಕಲಿತದ್ದು ಮರೆಯದಲೆ ಮುಂದಿನಾ ಪೀಳಿಗೆಗೆ
ಸಲಿಸುತಿವೆ ಬೆಳೆಸುತಿವೆ-ಅಡವಿಸಿದ್ದ
ಇಡೀ ನಿಸರ್ಗವೂ ಎಂದಿಗೂ ಯಾರಿಗೂ ಹಾನಿಯನ್ನುಂಟುಮಾಡುವುದಿಲ್ಲ. ಅದು ಸಹಜವಾಗಿ ಹರಿಯುತ್ತದೆ. ತನ್ನನ್ನು ಕಾಪಾಡಿಕೊಳ್ಲುತ್ತದೆ. ಆದರೆ ಮಾನವ ತನ್ನ ಸ್ವಾರ್ಥಕ್ಕಾಗಿ ಎಲ್ಲವನ್ನು ನುಂಗಿ ಹಾಕುತ್ತಾನೆ. ನಾವು ನಿಸರ್ಗದಿಂದ ಬಹಳಷ್ಟು ಕಲಿಯುವದಕ್ಕಿದೆ. ನಿಸರ್ಗದಲ್ಲಿರುವ ಜೀವಿಗಳು ಹೇಗೆ ತಮ್ಮ ಮುಂದಿನ ಪೀಳಿಗೆಗೆ ಬೇಕಾದದ್ದನ್ನು ಉಳಿಸಿಕೊಂಡು ಹೋಗುತ್ತವೋ ಮಾನವನು ಕೂಡ ಮುಂದಿನ ಪೀಳಿಗೆಯ ಬಗ್ಗೆ ಯೋಚಿಸಬೇಕು. ಈ ಜೀವಿಗಳಿಂದ ಕಲಿಯಬೇಕು. ಆಗ ಮನುಷ್ಯ ಸಂತತಿ ಉಳಿಯಲು ಸಾಧ್ಯ.
ಹಳೆಯ ಇತಿಹಾಸಗಳು ಹಾಡುತಿವೆ ಹರಡುತಿವೆ
ಹುಳಿ ಹಿಂಡುವಾಚಾರ ಕೆಲವು ಪಾತ್ರ
ಸುಳಿವಿಡಿದು ಸಾರುತಿವೆ ಕಾರುತಿವೆ ಕಾರ್ಗಿಲ್ಲ
ಚಳಿಚೆಲುವ ಕುಲಿಮೆಯೊಳು- ಅಡವಿಸಿದ್ದ
ಇತಿಹಾಸವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರು ಇಂದಿನ ಸ್ಥಿತಿಯನ್ನು ಹಾಳು ಮಾಡುತ್ತಾರೆ. ಜನರ ಮಧ್ಯೆ ಹುಳಿ ಹಿಂಡಿ ಹಿಂಸಾಚಾರವನ್ನು ಮಾಡುತ್ತಾರೆ. ಈ ಬಗ್ಗೆ ಎಚ್ಚರದಿಂದ ಇರಬೇಕು. ಇಂದಿನ ಜೀವನವನ್ನು ಸರಿ ಮಾಡುವ ಚಿಂತನೆಯನ್ನು ನಾವು ಪಡೆದುಕೊಳ್ಳಬೇಕು. ಪರಸ್ಪರ ದ್ವೇಷ, ವೈರತ್ವ ಬೆಳೆಸುವ ಇತಿಹಾಸವನ್ನು ಮರು ರಚಿಸಬಾರದು ಎಂಬ ಕಳಕಳಿ ಇಲ್ಲಿ ಕಾಣಬಹುದು.
ನಗುವೆ ನಗುತಿರಬೇಕು ನಗಿಸುತ್ತಲಿರಬೇಕು
ಗೆಬೇಕು ಬಗೆಬೇಕು ಭಾವಬೇಕು
ಹೊಗೆಯೆನದ ನಿಲ್ಲದಾ ನಲುಮೆಯದ ನಿಷ್ಪಕ್ಷ
ಸೊಗಸಿಗರೆ ಶಿವನಪ್ಪ
ಶಿವನ ಸಾನಿದ್ಯ ದೊರೆಯಲು ನಾವು ಸದಾ ಸಂತಸವನ್ನು ಎಲ್ಲರಿಗೂ ಹಂಚಬೇಕು. ಲೋಕವನ್ನು ಪ್ರೀತಿಸಬೇಕು. ಲೋಕವನ್ನು ಪ್ರೀತಿಸದಿದ್ದರೆ ಶಿವನ ಸಾನಿಧ್ಯ ದೊರೆಯುವದಿಲ್ಲ. ನಗುವು ಬಾಳಿನ ತತ್ವವಾಗಬೇಕು. ಆ ತತ್ವ ಹರಿಯುತ್ತಿರಬೇಕು. ಆಗ ಎಲ್ಲರೂ ಸಂತಸದಿಂದ ಇರಲು ಸಾಧ್ಯ. ನಮ್ಮ ಬದುಕು ಇನ್ನೊಬ್ಬರಿಗೆ ದುಃಖವನ್ನುಂಟುಮಾಡಬಾರದು.
ಹಿಂದು – ಮುಸ್ಲಿಂ- ಪಾರ್ಸಿ- ಕ್ರೈಸ್ತ ಚಾರ್ವಾಕಿರಲಿ
ಬಂಧು ಜೈನನು ಬೌದ್ಧ ಶೀಖನಿರಲಿ
ಕುಂದು- ವಾಮಾಚಾರಿಯೊಳಗದುವೆ ಮನಮಾಯೆ
ಹೊಂದಿಕೊಂಡಿದೆಯೆಲ್ಲ- ಅಡವಿಸಿದ್ದ
ಹಲವು ದರ್ಮ, ಜಾತಿಗಳು, ಸಮುದಾಯಗಳು ಒಂದೆಡೆ ವಾಸ ಮಾಡುತ್ತಿವೆ. ಸಾವಿರಾರು ವರ್ಷಗಳಿಂದ ಸಹಬಾಳ್ವೆಯಿಂದ ಬದುಕುತ್ತಿವೆ. ಅವುಗಳ ನಡುವೆ ಯಾವ ಭೇದವನ್ನು ಮಾಡದೆ ಪರಸ್ಪರ ಒಳ್ಳಯದನ್ನು ವಿನಿಮಯ ಮಾಡಿಕೊಂಡು ಬದುಕುತ್ತಿವೆ. ಈ ಬಂಧ ಹೀಗೆ ಮುಂದುವರೆಯಬೇಕು. ಆಧರೆ, ಕೆಲವು ಸ್ವಾರ್ಥಿಗಳು ಈ ಸಂಬಂಧವನ್ನು ಸಡಿಲಗೊಳಿಸುತ್ತವೆ. ಆದ್ದರಿಂದ ಎಲ್ಲಾ ದರ್ಮಗಳು ಪ್ರೀತಿಯಿಂದ ಇರಬೇಕು. ಪ್ರೀತಿಯಿಂದ ಇರುವಂತೆ ವಾತಾವರಣವನ್ನು ನಿರ್ಮಾಣ ಮಾಡಬೇಕು.
ವೀರಶೈವ ಬೇರೆ ಲಿಂಗವಂತಿಕೆ ಬೇರೆ
ಬೇರೆನ್ನುವ ಬಡಬಡಿಸುವದೇಕೋ
ಚಾರುವಚನಾಬ್ದಿಯೊಳು ಆ ಶಬ್ದ ಬಳಕೆಯಿರೆ
ತಾರತಮ್ಯ ಸಾಕೊ- ಅಡವಿಸಿದ್ದ
ನಿಜದಲ್ಲಿ ಎಲ್ಲಾ ಧರ್ಮಗಳ ದಾರಿ ಒಂದೆ. ಆದರೆ ಇದನ್ನು ಅರ್ಥ ಮಾಡಿಕೊಳ್ಲದ ಮಾನವ ಕಚ್ಚಾಡುತ್ತಾನೆ. ಅದು ಅತಿರೇಕಕ್ಕೆ ಹೋಗಿ ಹಿಂಸೆಯನ್ನುಂಟುಮಾಡುತ್ತದೆ. ಈ ಬಗ್ಗೆ ಎಚ್ಚರವಿರಬೇಕು. ಎಚ್ಚರ ತಪ್ಪಿದರೆ ಈ ದರ್ಮಗಳ ನಡುವೆ ಒಡಕು ಬರುತ್ತವೆ. ಈ ಒಡಕನ್ನು ಸರಿ ಮಾಡಲು ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಜನಾಂಗಗಳ ನಡುವೆ ಭೇದ ಭಾವ ಮೂಡಿ ಸಮಾಜ ಅಧೋಗತಿಗಿಳಿಯುತ್ತದೆ. ಈ ಸಂದರ್ಭವನ್ನು ಅನ್ಯರು ದುರುಪಯೋಗ ಮಾಡಿಕೊಂಡು ನಮ್ಮನ್ನು ಅಧೀನಗೊಳಿಸುವ ಪ್ರಕ್ರಿಯೆಯೂ ನಡೆತ್ತದೆ. ಆದ್ದರಿಂದ ಈ ಧರ್ಮಗಳ ನಡುವಿನ ಜಗಳ ನಿಲ್ಲಬೇಕು.
ಹಣತೆಯೆಂಬುದೆ ಧರ್ಮ, ತೈಲವೆಂಬುದೆ ಅರ್ಥ
ಹೆಣೆದ ಬತ್ತಿಯೆ ಕಾಮ ಬೆಳಗುವಿಕೆಯೆ
ಮನಕೆ ನಿಲುಕದ ಮೋಕ್ಷ ತೋರದಾನಂದವದೆ
ಅನಘದನುಪಮ ಚನ್ನ- ಅಡವಿಸಿದ್ದ
ಜೀವನವು ಎಲ್ಲವನ್ನು ಅನುಭವಿಸಬೆಕು. ಎಲ್ಲಿಯೂ ಹದಗೆಡದಂತೆ ಇರಬೇಕು. ಎಣ್ಣೆ, ಬತ್ತಿ, ಪ್ರಣತಿ, ಬೆಳಕು ಹೇಗೆ ಒಟ್ಟಿಗೆ ಇರುತ್ತವೆಯೋ ಹಾಗೆ ಜೀವನ ಇರಬೇಕು. ಅವು ಬೇರೆ ಬೇರೆಯಾದರೆ ಬೆಳಕಿಲ್ಲ. ಹಾಗೆ ಬದುಕಿನಲ್ಲಿ ಕೂಡ ಧರ್ಮ, ಅರ್ಥ, ಕಾಮ, ಮೋಕ್ಷ ಒಂದರೊಳಗೊಂದು ಬೆರೆತಿರಬೇಕು. ಆಗ ಜೀವನಕ್ಕೆ ಅರ್ಥ ಬರುತ್ತದೆ. ಅಂತಹ ಅರ್ಥವಂತಿಕೆಯ ಜೀವನವನ್ನು ಮಾಡಬೇಕು.
ಹೀಗೆ ಈ ತ್ರಿಪದಿ ಚೌಪದಿಗಳು ಜೀವನದ ಸತ್ಯವನ್ನು ಶೋಧಿಸುತ್ತಾ ಹೋಗುತ್ತವೆ. ಇವು ಪಾರಮಾರ್ಥ, ಅಲೌಕಿಕವನ್ನು ಕುರಿತು ಚಿಂತಿಸುವದಿಲ್ಲ. ಪಲಾಯನದಿಂದ ಮೋಕ್ಷ ಎಂದು ಹೇಳುವದಿಲ್ಲ. ಜೀವನದ ಎಲ್ಲಾ ಸಂಗತಿಗಳ ಜೊತೆಗೆ ನಿರಂತರ ಮುಖಾಮುಖಿಯಾಗಬೇಕು. ದುರ್ವಿಧಿಗಳನ್ನು ನಿವಾರಿಸಿ ಹೊಸ ಜೀವನವನ್ನು ಕಟ್ಟಬೇಕು ಎಂಬುದು ಇವುಗಳ ಆಶಯವಾಗಿದೆ.
ಇಲ್ಲಿ ಅನುಭಾವವೆಂಬುದು ವಾಸ್ತವನ್ನು ಒಳಗೊಂಡೆ ಇದೆ. ಭವದ ಕೇಡುಗಳನ್ನು ಮೀರುವುದೆ ಅನುಭಾವ. ಯವುದು ಸಮಾಜವನ್ನು ಹಾಳು ಮಾಡುತ್ತದೋ ಅದನ್ನು ಸರಿ ಮಾಡುವುದು ಅನುಭಾವ. ಈ ಸ್ಥಿತಿಯನ್ನು ತಲುಪಲು ಆತ್ಮಸಾಕ್ಷಿ ಬೇಕು. ಆತ್ಮಸಾಕ್ಷಿಯನ್ನು ಗಟ್ಟಿಗೊಳಿಸಲು ಮನಸ್ಸು ತಿಳಿಯಾಗಬೇಕು. ಲೋಕದ ಬಗ್ಗೆ ಪ್ರೀತಿ ಬೆಳಸಿಕೊಳ್ಳಬೇಕು. ಸದಾ ಮಾರ್ಗದರ್ಶನ ಮಾಡಲು ಆರಾಧ್ಯ ದೈವವನ್ನು ನಮ್ಮೊಳಗೆ ಸ್ಥಾಪಿಸಿಕೊಳ್ಳಬೇಕು. ಆಗ ಅನುಭಾವದ ತತ್ವ ಅರಳುತ್ತದೆ. ಅದಕ್ಕೆ ನಿರಂತರ ಕಲೆ, ಸಾಹಿತ್ಯ, ಸಂಗೀತ, ನಾಟಕ, ಶಿಲ್ಪಕಲೆಯಂತಹ ಅಂತರಂಗ ಅರಳಿಸುವ ಜ್ಞಾನದ ಜೊತೆಗೆ ಇರಬೇಕು. ಇವುಗಳ ಜೊತೆಗೆ ಶ್ರೀ ನಿರುಪಾದರು ಇದ್ದ ಫಲವಾಗಿ ಇಂತಹ ಚಿಂತನೆ ಹೊರಹೊಮ್ಮಲು ಸಾಧ್ಯವಾಗಿದೆ.
ಈ ಚಿಂತನೆಯ ದಾರಿಯಲ್ಲಿ ಇಂದಿನ ಮಾನವ ಕುಲ ಮುನ್ನಡೆಯಬೇಕಾಗಿದೆ. ಲೋಕದಲ್ಲಿ ಶಾಂತಿ, ನೆಮ್ಮದಿಯನ್ನು ಸ್ಥಾಪಿಸಬೇಕಾಗಿದೆ.
- ಹಳೆಮನೆ ರಾಜಶೇಖರ,
ಕನ್ನಡ ವಿಭಾಗ, ಶ್ರೀ ಧ. ಮಂ. ಕಾಲೇಜು(ಸ್ವಾಯತ್ತ)
ಉಜಿರೆ- 574240, 9008528112
ಈ ಅಂಕಣದ ಹಿಂದಿನ ಬರಹಗಳು:
ಹೊಸ ರೂಪಕದ ಕವಿತೆಗಳು
ಅನುಭಾವದರಳುಃ ಭವದ ಕೇಡಿಗೆ ದಿವ್ಯತೆಯ ಬೀಜಗಳು
ಮೃತ್ಯುಂಜಯ ಕಾದಂಬರಿ ತಾತ್ವಿಕ ವಿಶ್ಲೇಷಣೆ
ಪ್ರಗತಿಶೀಲ ಸಾಹಿತ್ಯ ಮತ್ತು ನಿರಂಜನರು
ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ
ಆದಿಪುರಾಣ – ವೈಭೋಗ ಮತ್ತು ವೈರಾಗ್ಯದ ತಾತ್ವಿಕತೆ
ನಳ ಚರಿತ್ರೆ : ಪ್ರೇಮದ ಅವಿಷ್ಕಾರ
ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ
ಧರ್ಮಾಧಿಕಾರದ ಆಶಯಗಳು
ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ
ಘಾಂದ್ರುಕ್ ಕಾದಂಬರಿ: ಜೀವನ ಮುಕ್ತಿಯ ಶೋಧ
ಧನಿಯರ ಸತ್ಯನಾರಾಯಣ ಕತೆಃ ಕಾಲಮಾನದ ಶೋಷಣೆಯ ಸ್ವರೂಪ
ಸಾಲಗುಂದಿ ಗುರುಪೀರಾ ಖಾದರಿ ತತ್ವಪದಗಳಲ್ಲಿ ಬದುಕಿನ ಚಿಂತನೆ
ಇದ್ದೂ ಇಲ್ಲದ್ದೂಃ ಪರಂಪರೆಯ ಸಾತತ್ಯ ಹಾಗೂ ದೇವರ ಬಿಕ್ಕಟ್ಟಿನ ಕಥನ
ಕಾಂತಾವರ ಕನ್ನಡ ಸಂಘದ ಕನ್ನಡ ಕಾಯಕ
`ಹೆಣ್ತನದ’ ಕತೆಗಳು
ಡಾ. ಪೂವಪ್ಪ ಕಣಿಯೂರು ಸಂಶೋಧನೆಗಳು: ಜಾನಪದೀಯ ಬಹು ಪ್ರಮಾಣಗಳ ಆಖ್ಯಾನ
ಡಾ. ಮಲ್ಲಿಕಾ ಘಂಟಿ ಕಾವ್ಯ: ಪುರುಷ ಪ್ರಮಾಣಗಳ ಭಂಜನ
ಡಾ. ಚೇತನ ಸೋಮೇಶ್ವರ ಕವಿತೆ `ಹೊಸ ನುಡಿಗಟ್ಟಿನ ಲಯಗಳು'
ಮನುಷ್ಯನ ವೈರುಧ್ಯಗಳನ್ನೆಲ್ಲ ಹೇಳುವ ಲಂಕೇಶರ ಕವಿತೆಗಳು
"ಚರಿತ್ರೆಯ ಆತ್ಮವಿಮರ್ಶೆಯಂತೆಯೆ ಸಾಹಿತ್ಯದ ಆತ್ಮವಿಮರ್ಶೆಯೂ ನಮ್ಮಲ್ಲಿ ತೀರಾ ಕಡಿಮೆ. ಅಂದರೆ ನಾವು ನಮ್ಮ ರಾಜಮಹಾರ...
"ಇಂದು ಶಿಕ್ಶಣ ಅಕ್ಶರ ಕಲಿಯುವುದಕ್ಕೆ, ಬದುಕು, ಸಮಾಜವನ್ನು ತಿಳಿದುಕೊಳ್ಳುವುದಕ್ಕೆ, ಉದ್ಯೋಗ ಪಡೆಯುವುದಕ್ಕೆ ಹೀಗೆ...
"ಕಥೆಗಳ ಆಯ್ಕೆಯ ಕ್ರಮವನ್ನು ಹೀಗೆ ಹೇಳುತ್ತಾರೆ `ಕಥೆಗಳ ಆಯ್ಕೆ ಕೂಡ ವ್ಯಕ್ತಿಯ ಆಸಕ್ತಿ, ಅಭಿರುಚಿ ಮತ್ತು ಮನೋಧರ್ಮ...
©2025 Book Brahma Private Limited.