ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

Date: 08-09-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ಇದು. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಭಾರತದ ಅನೀಶ್‌ ಕಪೂರ್‌‌ ಅವರ ಬಗ್ಗೆ ಬರೆದಿದ್ದಾರೆ.

ಕಲಾವಿದ: ಅನೀಶ್ ಕಪೂರ್ (Anish Kapoor)

ಜನನ: 12 ಮಾರ್ಚ್ 1954 (ಮುಂಬಯಿ, ಭಾರತ)

ಶಿಕ್ಷಣ: ಹಾರ್ನ್ಸೆ ಕಾಲೇಜ್ ಆಫ್ ಆರ್ಟ್, ಚೆಲ್ಸೀ ಕಾಲೇಜ್ ಆಫ್ ಆರ್ಟ್ ಅಂಡ್ ಡಿಸೈನ್, ಇಂಗ್ಲಂಡ್

ವಾಸ: ಲಂಡನ್, ಇಂಗ್ಲಂಡ್

ಕವಲು: ಪೋಸ್ಟ್ ಮಿನಿಮಲಿಸಂ, ನಿಯೊ ಎಕ್ಸ್-ಪ್ರೆಷನಿಸಂ, ಕಂಟೆಂಪೊರರಿ ಆರ್ಟ್

ವ್ಯವಸಾಯ: ಕಾನ್ಸೆಪ್ಚುವಲ್ ಆರ್ಟ್, ಇನ್ಸ್ಟಾಲೇಷನ್ ಗಳು, ಶಿಲ್ಪಗಳು.

ಅನೀಶ್ ಕಪೂರ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ

ಅನೀಶ್ ಕಪೂರ್ ಅವರ ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುಂಬಯಿಯಲ್ಲಿ ಜನಿಸಿದ ಅನೀಶ್ ಕಪೂರ್ ಅವರ ತಂದೆ ಪಂಜಾಬಿತಾಯಿ ಪಾರ್ಸಿ. ದಿಲ್ಲಿಯ ಡೂನ್ ಸ್ಕೂಲ್ ವಿದ್ಯಾರ್ಥಿ ಆಗಿದ್ದ ಅನೀಶ್ ಉನ್ನತ ಶಿಕ್ಷಣಕ್ಕಾಗಿ 70ರ ದಶಕದಲ್ಲಿ ಇಂಗ್ಲಂಡಿಗೆ ತೆರಳಿದವರು ಬಳಿಕ ಶಾಶ್ವತವಾಗಿ ಅಲ್ಲಿನ ಪ್ರಜೆಯಾಗಿ ಉಳಿದರು.

ಆಕಾರಗಳ ಕುರಿತು ಇರುವ ಸಾಮಾನ್ಯ ಗೃಹಿಕೆ, ಅದರ ಗುರುತ್ವ ಇತ್ಯಾದಿಗಳನ್ನು ನಿರಾಕರಿಸುವ ಸಹಜ ಮಿನಿಮಲಿಸ್ಟ್ ಆಕಾರಗಳನ್ನು ಶಿಲ್ಪಗಳಾಗಿ ರಚಿಸುತ್ತಾ ಬರುವ ಮೂಲಕ ಹೆಸರಾದ ಅನೀಶ್ ಕಪೂರ್, ಬರಬರುತ್ತಾ ತನ್ನ ಶಿಲ್ಪಗಳ ಗಾತ್ರ ಮತ್ತು ಸ್ವರೂಪದ ಬಗ್ಗೆ ಮಹತ್ವಾಕಾಂಕ್ಷೆಯ ಕಾರಣದಿಂದಾಗಿ ಪ್ರಸಿದ್ಧಿಗೆ ಬಂದರು. 1978ರಲ್ಲಿ ಲಂಡನ್ ನ ಹೇವಾರ್ಡ್ ಆರ್ಟ್ ಗ್ಯಾಲರಿಯಲ್ಲಿ ಹೊಸ ವಿಧದ ಪೋಸ್ಟ್ ಮಾಡರ್ನ್ ಶಿಲ್ಪಗಳ ಗುಂಪು ಪ್ರದರ್ಶನವೊಂದರ ಮೂಲಕ ಕಲಾಜಗತ್ತಿನ ಗಮನ ಸೆಳೆದ ಅನೀಶ್ ಕಪೂರ್ ಆರಂಭದಲ್ಲಿ ತನ್ನ ಕಲಾಕೃತಿಗಳಲ್ಲಿ ಸುಣ್ಣದಕಲ್ಲು, ಗ್ರಾನೈಟ್, ಕುಂಕುಮ ಪುಡಿಯಂತಹ ನೆಲಕ್ಕೆ ಹತ್ತಿರದ ವಸ್ತುಗಳನ್ನು ಬಳಸುತ್ತಿದ್ದರು. ಸರಳವೆನ್ನಿಸಿದರೂ ಕುತೂಹಲಕರವಾದ ಹೊರಮೈ ರೇಖೆಗಳುಳ್ಳ ಆಕಾರಗಳು, ಪ್ರಖರ ಬಣ್ಣಗಳು, ಶಿಲ್ಪಗಳ ನುಣುಪಾದ ಹೊಳೆಯುವ ಮೇಲ್ಮೈ ಅವರ ಆರಂಭಿಕ ಶೈಲಿಯಾಗಿತ್ತು.

ಆದರೆ ಆ ಬಳಿಕ ಪಿವಿಸಿ, ಫೈಬರ್ ಗ್ಲಾಸ್, ಕಬ್ಬಿಣ ಬಳಸಿ ಗಾತ್ರದಲ್ಲಿ ದೊಡ್ಡದಾದ ಶಿಲ್ಪಗಳತ್ತ ಅವರ ಆಸಕ್ತಿ ಹೊರಳಿತು. ದೊಡ್ಡ ಗಾತ್ರದ ಅವರ ಹಲವು ಸಾರ್ವಜನಿಕ ಶಿಲ್ಪಗಳು ಜಗತ್ಪ್ರಸಿದ್ಧ. ಅಮೆರಿಕದ ಚಿಕಾಗೊ ನಗರದಲ್ಲಿ ಮಿಲೆನಿಯಂ ಪಾರ್ಕ್ ನಲ್ಲಿ ರಚಿಸಿದ Cloud Gate (2004) ಬೀಜದಾಕೃತಿಯ ಬೃಹತ್ ಲೋಹರಚನೆಯಾದರೆ, ನ್ಯೂಯಾರ್ಕಿನ ರಾಕ್ ಫೆಲರ್ ಸೆಂಟರ್ ನಲ್ಲಿ ಅವರು ರಚಿಸಿದ Sky Mirror( 2006), ನ್ಯೂಯಾರ್ಕಿನ ಗಗನಚುಂಬಿಗಳನ್ನು ಪ್ರತಿಫಲಿಸುವ ಕನ್ನಡಿಯಾಗಿದ್ದು, ತಾನು ಸ್ವತಃ ಕಲಾಕೃತಿಯಾಗಿ ಮರೆಯಾಗಿರುತ್ತದೆ. ಲಂಡನ್ ಒಲಿಂಪಿಕ್ಸ್ ಸಮಯದಲ್ಲಿ, ಒಲಿಂಪಿಕ್ ಪಾರ್ಕ್ ನಲ್ಲಿ ರಚಿಸಿದ ArcelorMittal Orbit (2012) ಅವರ ಮಹತ್ವಾಕಾಂಕ್ಷೆಯ ಸಾರ್ವಜನಿಕ ಶಿಲ್ಪಗಳು.

ಕಲಾ ಶಿಕ್ಷಣ ಮುಗಿಸಿ ಒಂದೆರಡು ವರ್ಷ ಭಾರತದಲ್ಲಿ ಕಳೆದ ಬಳಿಕ, ಅವರು ಬಣ್ಣದ ಪುಡಿಗಳನ್ನು ಬಳಸಿ ರಚಿಸಿದ ಶಿಲ್ಪ ಅವರಿಗೆ ಹೊಸ ಅಲೆಯ ಬ್ರಿಟಿಷ್ ಶಿಲ್ಪಿಗಳ ಗಳ ಗುಂಪಿನಲ್ಲಿ ಹೆಸರು ತಂದುಕೊಟ್ಟಿತು. ಬೆಳೆಯುತ್ತಾ ಹೋದಂತೆಲ್ಲ ಮಾತುಗಳ ಮೂಲಕವೂ ಸುದ್ದಿ ಮಾಡಿದ ಅನೀಶ್ ಕಪೂರ್, ಚೀನೀ ಕಲಾವಿದ ಆಯ್ ವೇಯ್ ವೇಯ್ ಅವರನ್ನು ಅಲ್ಲಿನ ಸರಕಾರ ಬಂಧಿಸಿದಾಗ ಬಹಿರಂಗವಾಗಿ ಸ್ವರ ಎತ್ತಿದ್ದರು. ಬಳಿಕ ಏಷ್ಯನ್ ಕಲೆಯನ್ನು ಬದಿಗಿರಿಸುವ ಐರೋಪ್ಯ ಕಲಾರಾಜಕೀಯಕ್ಕೆ “ಅವಾಂತ್ ಗ್ರೇಡ್ ಎಂಬುದಿದ್ದರೆ, ಅದರಲ್ಲಿ ಚೀನಾದ ಅವಾಂತ್ ಗ್ರೇಡ್, ಭಾರತದ ಅವಾಂತ್ ಗ್ರೇಡ್, ರಶ್ಯಾದ ಅವಾಂತ್ ಗ್ರೇಡ್ ಎಂಬುದಿಲ್ಲ. ಇರುವುದು ಒಂದೇ ಅವಾಂತ್ ಗ್ರೇಡ್” ಎಂದು ಕಡ್ಡಿ ಮುರಿದಂತೆ ಹೇಳಿದ್ದರು. (ಅವಾಂತ್ ಗ್ರೇಡ್ ಎಂದರೆ ಹೊಸ ಮಾದರಿಯ ಕಲಾ ಪ್ರಯೋಗಗಳು).

2017ರಲ್ಲಿ ಅವರೊಂದು ಕುತೂಹಲಕರ ವಿವಾದಕ್ಕೆ ಈಡಾದರು. ಇಂಗ್ಲಂಡಿನ ಸರ್ರೆಯಲ್ಲಿರುವ ನ್ಯಾನೊಸಿಸ್ಟಮ್ಸ್ ಸಂಸ್ಥೆ ವೈಮಾನಿಕ ಇಂಡಸ್ಟ್ರಿಯಲ್ಲಿ ಬಳಕೆಗಾಗಿ ಕಂಡುಹಿಡಿದ ವಿಶೇಷ ಕಪ್ಪು ಬಣ್ಣ ಅತ್ಯಂತ ಕರಿ (Blackest black) – Vantablackನ್ನು ಕಲೆಯಲ್ಲಿ ಬಳಸುವುದಕ್ಕೆ ಎಕ್ಸ್ ಕ್ಲೂಸಿವ್ ಹಕ್ಕನ್ನು ಕಪೂರ್ ಪಡೆದುಕೊಂಡರು. ಅಂದರೆ ಬೇರೆ ಕಲಾವಿದರು ಈ ಬಣ್ಣವನ್ನು ಬಳಸುವಂತಿಲ್ಲ! ಇದಕ್ಕೆ ಕಲಾವಲಯದಲ್ಲಿ ಅಸಮಾಧಾನ ವ್ಯಕ್ತವಾಯಿತು. ಸ್ಟುವರ್ಟ್ ಸೆಂಪಲ್ ಎಂಬ ಯುವ ಕಲಾವಿದ ತಾನು “ಅತ್ಯಂತ ಗುಲಾಲಿ (pinkest pink)” ಬಣ್ಣವನ್ನು ಕಂಡುಹಿಡಿದಿದ್ದು, ಅದನ್ನು ಈ ಜಗತ್ತಿನಲ್ಲಿ ಅನೀಶ್ ಕಪೂರ್ ಹೊರತುಪಡಿಸಿ ಯಾರು ಬೇಕಾದರೂ ಬಳಸಬಹುದು ಎಂದು ಘೋಷಿಸಿದ್ದರು! ಅದಕ್ಕೆ ಅನೀಶ್ ಕಪೂರ್ ಆ ಗುಲಾಲಿಯಲ್ಲಿ ತನ್ನ ನಡುಬೆರಳದ್ದಿ ಪ್ರದರ್ಶಿಸಿದ್ದು (ಇನ್ಸ್ಟಾ ಗ್ರಾಂ ನಲ್ಲಿ) ಭಾರೀ ಸುದ್ದಿ ಆಗಿತ್ತು!

ಪೌರಾತ್ಯ ಸಾಂಸ್ಕೃತಿಕ ಹಿನ್ನೆಲೆ ಮತ್ತುಪಾಶ್ಚಾತ್ಯ ಪ್ರಭಾವಗಳ ಹದವಾದ ಮಿಶ್ರಣ ಇರುವ ಅನೀಶ್ ಕಪೂರ್ ಕಲಾಕೃತಿಗಳು, ಅವರನ್ನು ಜಗತ್ತಿನ ಪ್ರಮುಖ ಸಮಕಾಲೀನ ಕಲಾವಿದರಲ್ಲಿ ಒಬ್ಬರನ್ನಾಗಿ ರೂಪಿಸಿದೆ. ಜಾಗತಿಕ ಸನ್ನಿವೇಶದಲ್ಲಿ ಭಾರತೀಯ ಮೂಲದ ಅತ್ಯಂತ ಮಹತ್ವದ ಕಲಾವಿದ ಅನೀಶ್ ಕಪೂರ್.

ಅನೀಶ್ ಕಪೂರ್ ಅವರ ಇತ್ತೀಚಿನ ಸಂದರ್ಶನ ಇಲ್ಲಿದೆ:

ಭಾರತೀಯ ಚಾನೆಲ್ ಒಂದು ನಡೆಸಿದ ಅನೀಶ್ ಕಪೂರ್ ಅವರ ಸಂದರ್ಶನ ಇಲ್ಲಿದೆ:


ಕಲಾಕೃತಿಗಳು

ಅನೀಶ್ ಕಪೂರ್ ಅವರ Cloud Gate (2004)

ಅನೀಶ್ ಕಪೂರ್ ಅವರ ಪಿಗ್ಮೆಂಟ್ ಶಿಲ್ಪಗಳ ಸರಣಿಯ ಒಂದು ಚಿತ್ರ.

ಅನೀಶ್ ಕಪೂರ್ ಅವರು ಕೊಚ್ಚಿಯಲ್ಲಿ ನಡೆದ ಭಾರತದ ಮೊದಲ ಬಯೆನ್ನಾಲ್ ನಲ್ಲಿ ಪ್ರದರ್ಶಿಸಿದ ಶಿಲ್ಪ.

ಲಂಡನ್ ಒಲಿಂಪಿಕ್ಸ್ ಸಮಯದಲ್ಲಿ ಅನೀಶ್ ಕಪೂರ್ ರಚಿಸಿದ ArcelorMittal Orbit (2012).

ಅನೀಶ್ ಕಪೂರ್ ಅವರ ಆರಂಭಿಕ ಶಿಲಾ ಶಿಲ್ಪಗಳ ಸರಣಿಯಲ್ಲಿ ಒಂದು.

ಅನೀಶ್ ಕಪೂರ್ ಅವರ Sky Mirror ಶಿಲ್ಪ ಸರಣಿಯ ಒಂದು ಚಿತ್ರ.

ಪಿಂಕ್ ಬಣ್ಣದಲ್ಲಿ ನಡು ಬೆರಳದ್ದಿ ಪ್ರದರ್ಶಿಸಿದ ಅನೀಶ್ ಕಪೂರ್ ಅವರ ಇನ್ಸ್ಟಾಗ್ರಾಂ ಪೋಸ್ಟ್.


ಈ ಅಂಕಣದ ಹಿಂದಿನ ಬರೆಹಗಳು

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...