ಅಧ್ಯಾತ್ಮ ನಮ್ಮಲ್ಲಿ ಹಲವಾರು ಸ್ತರಗಳಲ್ಲಿವೆ


"ದೇವಸ್ಥಾನ, ಪೂಜೆ, ಹೋಮ, ವೃತ, ಉಪವಾಸ, ಯಾತ್ರೆ,ಸಂಸ್ಕೃತದಲ್ಲಿರುವ ಸ್ತ್ರೋತ್ರ ಪಾರಾಯಣ, ಭಜನೆ ಅದರ ಒಂದು ಸ್ತರ. ಇವರ ಮೂಲ ಉದ್ದೇಶ ಬದುಕಿನ ಕಷ್ಟಕೋಟಲೆಗಳ ಪರಿಹಾರ, ಯಶಸ್ಸು, ತೊಡಕುಗಳ ನಿವಾರಣೆ, ಸತ್ತ ನಂತರದ ಸದ್ಗತಿ. ಇವರು ಜಾತಿ, ಮೇಲು-ಕೀಳು, ಮಡಿ-ಮೈಲಿಗೆ, ಆಹಾರದ ಪರಿಶುದ್ಧತೆ ಇತ್ಯಾದಿಗಳಿಗೆ ಮಹತ್ವ ಕೊಡುವವರು ಕೂಡಾ ಆಗಿರುತ್ತಾರೆ," ಎನ್ನುತ್ತಾರೆ ನರೇಂದ್ರ ಪೈ. ಅವರು ಜೋಗಿ ಅವರ ‘ಇಳಂಗೋವನ್’ ಕೃತಿ ಕುರಿತು ಬರೆದ ವಿಮರ್ಶೆ.

ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ...

"ದೇವರ ಹುಚ್ಚು" ಬರೆದ ಜೋಗಿಯವರು ಇದೀಗ "ಇಳಂಗೋವನ್" ಕೃತಿಯೊಂದಿಗೆ ನಿಂತಿದ್ದಾರೆ. ಇದರೊಂದಿಗೇ ಅವರ ಪ್ರಕಟಿತ ಪುಸ್ತಕಗಳ ಸಂಖ್ಯೆಯೂ ನೂರು ತಲುಪಿದೆ. ಅವರಿಗೆ ಅಭಿನಂದನೆಗಳು.

ಅಧ್ಯಾತ್ಮ ನಮ್ಮಲ್ಲಿ ಹಲವಾರು ಸ್ತರಗಳಲ್ಲಿ ಇದೆ.

ದೇವಸ್ಥಾನ, ಪೂಜೆ, ಹೋಮ, ವೃತ, ಉಪವಾಸ, ಯಾತ್ರೆ,ಸಂಸ್ಕೃತದಲ್ಲಿರುವ ಸ್ತ್ರೋತ್ರ ಪಾರಾಯಣ, ಭಜನೆ ಅದರ ಒಂದು ಸ್ತರ. ಇವರ ಮೂಲ ಉದ್ದೇಶ ಬದುಕಿನ ಕಷ್ಟಕೋಟಲೆಗಳ ಪರಿಹಾರ, ಯಶಸ್ಸು, ತೊಡಕುಗಳ ನಿವಾರಣೆ, ಸತ್ತ ನಂತರದ ಸದ್ಗತಿ. ಇವರು ಜಾತಿ, ಮೇಲು-ಕೀಳು, ಮಡಿ-ಮೈಲಿಗೆ, ಆಹಾರದ ಪರಿಶುದ್ಧತೆ ಇತ್ಯಾದಿಗಳಿಗೆ ಮಹತ್ವ ಕೊಡುವವರು ಕೂಡಾ ಆಗಿರುತ್ತಾರೆ.

ಇನ್ನೊಂದು ಸ್ತರದಲ್ಲಿ ಪ್ರಸ್ಥಾನತ್ರಯಗಳ ಅಧ್ಯಯನ, ದರ್ಶನಗಳ ಅಧ್ಯಯನ, ಬೇರೆ ಬೇರೆ ಧರ್ಮಗಳ ಮೂಲಗ್ರಂಥಗಳ ಅಧ್ಯಯನ. ಇವರಿಗೆ ಸಾಮಾನ್ಯವಾಗಿ ಜಾತಿ, ಧರ್ಮದ ಕಟ್ಟಳೆಗಳಲ್ಲಿ ಅರ್ಥವಿಲ್ಲ ಅನಿಸುತ್ತಿರುತ್ತದೆ. ಅದನ್ನು ಆಚರಿಸುವವರೂ ಇರುತ್ತಾರೆ.

ಮೂರನೆಯ ಸ್ತರದಲ್ಲಿ ಬೇರೆ ಬೇರೆ ಸಾಧಕರ ಹಿಂಬಾಲಕರಿದ್ದಾರೆ. ಅಮ್ಮ, ಅಸಾರಾಮ, ಸದ್ಗುರು, ನಿತ್ಯಾನಂದ, ಸಾಯಿಬಾಬ ಹೀಗೆ. ಇವರಿಗೆ ದೇವರಿಗಿಂತ ಈ ಗುರುಗಳಲ್ಲಿ ಹೆಚ್ಚು ನಂಬಿಕೆ, ಅವರಿಂದ ತಮಗೆ ಒಳ್ಳೆಯದಾಗಿದೆ ಎಂಬ ದೃಢವಿಶ್ವಾಸ. ಲಕ್ಷಗಟ್ಟಲೆ ಡೊನೇಶನ್ ಕೊಡಬಲ್ಲ ಭಕ್ತರೇ ಈ ಸ್ತರದಲ್ಲಿ ಹೆಚ್ಚಾಗಿರುತ್ತಾರೆ. ಇದರದ್ದೇ ಇನ್ನೊಂದು ಮುಖ ಮಾಟ ಮಂತ್ರ ಮಾಡುವವರ ಹಿಂದೆ, ದೈವ, ಹುಯಿಲು ಕೊಡುವುದು, "ನೋಡಿಕೊಳ್ಳಲು" ಅಪೀಲು ಕೊಡುವುದು ಇತ್ಯಾದಿ ಮಾಡುವ ವರ್ಗದವರ ಹಿಂದೆ ಬಿದ್ದಿರುತ್ತದೆ. ತಾತ್ವಿಕವಾಗಿ ಎರಡೂ ಪಂಗಡಗಳದ್ದು ಒಂದೇ ಸ್ತರ.

ಮತ್ತೊಂದು ಸ್ತರದಲ್ಲಿ ಕೇವಲ ಜಿಜ್ಞಾಸುಗಳಿದ್ದಾರೆ. ಇವರು ಬದುಕನ್ನು ಸ್ವಲ್ಪ ಅತಿ ಎನ್ನಬಹುದಾದಷ್ಟು ಪ್ರೊಫೆಟಿಕ್ ಆಗಿ ನೋಡುವ ಚಟಕ್ಕೆ ಸಿಲುಕಿರುತ್ತಾರೆ. ಯಾರೋ ಸತ್ತಿದ್ದು ತಮಗೆ ಎರಡು ಗಂಟೆ ಮೊದಲೇ ಸೂಚನೆ ಸಿಕ್ಕಿತ್ತು, ಅಪಘಾತವಾಗುವುದಿದೆ ಅಂತಲೇ ತಮ್ಮನ್ನು ಯಾವುದೋ ಶಕ್ತಿ ಆ ಬಸ್ಸಿನಲ್ಲಿ ಹೋಗದಂತೆ ತಡೆಯಿತು, ಇತ್ಯಾದಿಗಳನ್ನು ಇವರು ಹೇಳುತ್ತಿರುತ್ತಾರೆ. ಇವರು ಅಷ್ಟಿಷ್ಟು ಎಲ್ಲಾ ಓದಿಕೊಂಡಿರುತ್ತಾರೆ, ಆದರೆ ಪರಿಪೂರ್ಣತೆ ಇರುವುದಿಲ್ಲ. ಗೊಡ್ಡು ಎನಿಸಿಕೊಳ್ಳಲು ನಾಚುವ ಇವರು ರೇಶನಲ್ ಆಗಿ ಕಾಣಿಸಿಕೊಳ್ಳುತ್ತ ಜಸ್ಟಿಫೈಡ್ ಮೂಢನಂಬಿಕೆಗಳನ್ನು ಹಬ್ಬಿಸುತ್ತಿರುತ್ತಾರೆ. ದೇವರು ಎನ್ನುವುದಕ್ಕಿಂತ ನಮಗೆ ಗೊತ್ತಿಲ್ಲದ ಯಾವುದೋ ಒಂದು ಶಕ್ತಿ ಎಂದೇ ಮಾತನಾಡುವುದು ಇವರ ಕ್ರಮ.

ಒಂದರ್ಥದಲ್ಲಿ ಈ "ಇಳಂಗೋವನ್" ಕೃತಿಯಲ್ಲಿ ಜೋಗಿಯವರು ಸಮನ್ವಯಕಾರರಾಗಿ ಕೆಲಸ ಮಾಡುತ್ತಾರೆ. ಅಂದರೆ, ಇಲ್ಲಿ ನಮ್ಮ ನಿಮ್ಮಂಥ ಸಾಮಾನ್ಯ ಮನುಷ್ಯನ ನೆಲೆಯಿಂದಲೇ ನಾನು ಯಾರು, ಯಾಕಾಗಿ ಇಲ್ಲಿ ಹುಟ್ಟಿದ್ದೇನೆ, ನನ್ನ ಬದುಕಿಗೆ ಒಂದು ಉದ್ದೇಶವಿದೆಯೆ? ಇದ್ದರೆ ಅದು ಏನು, ನಾನು ಬಂದಿರುವುದು ಎಲ್ಲಿಂದ ಅಥವಾ ನಾನು ಇಲ್ಲಿ ಹೀಗೆ ಬರುವುದಕ್ಕೂ ಮೊದಲು ಏನಾಗಿದ್ದೆ, ಸತ್ತ ಮೇಲೆ ಏನಾಗುತ್ತದೆ, ನಾನು ಎಂದು ನಾನು ಗುರುತಿಸಿಕೊಳ್ಳುತ್ತಿರುವುದು ದೇಹವನ್ನೆ ಅಥವಾ ಅದಕ್ಕೆ ಮೀರಿದ್ದು ಇದೆಯೆ? ಅದೇ ಆತ್ಮವೆ, ಅದನ್ನು ಗುರುತಿಸುವುದು ಹೇಗೆ? ಗಾಢ ನಿದ್ದೆಯಲ್ಲಿ ನಾನು ಎನ್ನುವುದು ಏನಾಗಿರುತ್ತದೆ? ಪುನರ್ಜನ್ಮ ನಿಜವೆ, ಸತ್ತ ಮೇಲೆ ಏನೂ ಇಲ್ಲ ಎನ್ನುವುದಾದರೆ ಇಲ್ಲಿ ಇಷ್ಟೆಲ್ಲ ಕಷ್ಟಪಡುವುದು, ಜ್ಞಾನಾರ್ಜನೆ, ಪುಣ್ಯಸಂಪಾದನೆ ಎಲ್ಲ ಯಾಕೆ, ಕೆಲವರಲ್ಲಿ ಹುಟ್ಟುವಾಗಲೇ ಕಂಡು ಬರುವ ವಿಶಿಷ್ಟ ಪ್ರತಿಭೆ ಎಲ್ಲಿಂದ ಬಂತು? ಒಬ್ಬ ಗಾಂಧಿ, ಒಬ್ಬ ವಿವೇಕಾನಂದ, ಒಬ್ಬ ಮದರ್ ಥೆರೆಸಾ ಯಾಕೆ ಜೀನ್ಸ್ ಮುಖೇನ ಮತ್ತೆ ಮತ್ತೆ ಕಾಣಿಸಿಕೊಳ್ಳಲಿಲ್ಲ ಎಂಬ ತರದ ನೂರಾರು ಪ್ರಶ್ನೆಗಳನ್ನು ಎದುರಿಸಿ, ಅದಕ್ಕೆಲ್ಲ ಉತ್ತರವನ್ನು ಅರಸಿ ಹೊರಟ ಜರ್ನಿ ಇದು. ಪ್ರಧಾನವಾಗಿ ಯೂಜಿ, ಜಿಡ್ಡು ಕೃಷ್ಣಮೂರ್ತಿ, ಓಶೋ ಕಾಣಿಸಿಕೊಂಡರೂ, ಪುತ್ತೂರಿನ ಅಜ್ಜನಿಂದ ಹಿಡಿದು ಗಿಬ್ರಾನ್, ಮಾರ್ಕಸ್ ಅರೇಲಿಯಸ್, ರಮಣ ಎಂದೆಲ್ಲ ನಾವು ನೀವು ಕೇಳಿಸಿಕೊಂಡ ಹೆಸರಿನವರೆಲ್ಲರೂ ಇಲ್ಲಿದ್ದಾರೆ. ಅವರನ್ನೆಲ್ಲ ಜೋಗಿ ಇಷ್ಟು ಸೀರಿಯೆಸ್ ಆಗಿ ಓದಿಕೊಂಡಿರುವುದು, ಅದರ ಹಿಂದೆ ಸ್ವಲ್ಪ ಹೆಚ್ಚೇ ಅನಿಸುವಷ್ಟು ದೂರ ಹೋಗಿ ಬಂದಿರುವುದು ಅಚ್ಚರಿ ಹುಟ್ಟಿಸುತ್ತದೆ.

ಅದಕ್ಕಿಂತ ಮುಖ್ಯವಾದದ್ದು, ಇದು ಕಳೆದ ಒಂದೆರಡು ವರ್ಷಗಳ ಟೂರ್ ಆಗಿರಲಿಲ್ಲ ಎನ್ನುವ ಸ್ಪಷ್ಟ ಪರಿಕಲ್ಪನೆ ಮೂಡಿಸುವ ಪಯಣದ ಹರಹು. ಬಹುಶ: ಅವರ ಹದಿಹರೆಯದ ದಿನಗಳಿಂದ ಇಂದಿನ ತನಕದ ಎಲ್ಲ ಅನುಭವ, ಗಮನಾರ್ಹ ಎನಿಸಿದ ವಿಚಾರಗಳನ್ನು ನೆನಪಿಗಿಂತ ಹೆಚ್ಚು ದಾಖಲಿಸಿಟ್ಟುಕೊಂಡಲ್ಲಿಂದ ನಮಗೆ ಒದಗಿಸುತ್ತಿದ್ದಾರೆ ಅನಿಸುತ್ತದೆ. ಅಷ್ಟು ಸ್ಪಷ್ಟತೆ, ವಿವರ ಮತ್ತು ಆಯಾ ಕಾಲದ ಜಿಜ್ಞಾಸೆ ಇಲ್ಲಿ ನಮಗೆ ಸಿಗುತ್ತದೆ.

ಹೋಗಿ ಬಂದಿರುವುದು ಸರಿಯಾದ ಶಬ್ದ ಎನಿಸುತ್ತದೆ. ಏಕೆಂದರೆ, ಇಲ್ಲಿ ಉದ್ದಕ್ಕೂ ನಮಗೆ ಕಾಣಸಿಗುವುದು ಶರಣಾಗತನಾದ ಭಕ್ತನಲ್ಲ; ಜಿಜ್ಞಾಸು ಮಾತ್ರ. ಅಥವಾ ಇದನ್ನು ಈಗ ಬರೆಯುತ್ತಿರುವ ಜೋಗಿ ಜಿಜ್ಞಾಸು, ಆಗ ಒಬ್ಬ ಪ್ರಾಮಾಣಿಕ ವಿದ್ಯಾರ್ಥಿ ಎಂದಿಟ್ಟುಕೊಳ್ಳಬಹುದು. ಆದರೆ ಆಗಲೂ ಈಗಲೂ ಅವರು ಈ ಎಲ್ಲರ ಜೀವ-ಆತ್ಮ ಅವಸ್ಥೆಯನ್ನು ಕಂಡು, ಕೇಳಿ, ಓದಿ, ಅರ್ಥಮಾಡಿಕೊಂಡೂ ಅನುಮಾನ ಉಳಿಸಿಕೊಂಡವರು ಎನ್ನುವುದನ್ನು ಅಲ್ಲಗಳೆಯುವುದು ಕಷ್ಟ. ಅಷ್ಟರಮಟ್ಟಿಗೆ ಯಾವೊಬ್ಬ ಗುರುವಿನ ಜೊತೆಗೂ, ಮಾರ್ಗದ ಜೊತೆಗೂ ಸಂಪೂರ್ಣ ಶರಣಾಗತಿಯ ಭಕ್ತನ ಅವಸ್ಥೆ ಅವರಿಗೆ ಸಿದ್ಧಿಸಲಿಲ್ಲ. ಬಹುಶಃ ಸಿದ್ಧಿಸದೇ ಇದ್ದಿದ್ದು ಸರಿ.

ಕ್ರಿಸ್ತ ಸಂಕೇತಿಸುವುದು ಅವರವರ ಕ್ರಾಸ್ ಅವರವರೇ ಹೊರಬೇಕು ಎನ್ನುವ ಸಿದ್ಧಾಂತವನ್ನು ಎನ್ನುತ್ತಾರೆ. ಜೋಗಿ ಕೂಡ ಅವರವರ ಜರ್ನಿ ಅವರವರೇ ಹೂಡಬೇಕಾದ್ದು ಎನ್ನುತ್ತಾರೆ. ಮುಗ್ಧರೂ, ಪ್ರಾಜ್ಞರೂ, ಮಾಗಿದವರೂ ಎಲ್ಲರೂ ಈ ಜರ್ನಿಯನ್ನು ಅಷ್ಟಿಷ್ಟಾದರೂ ಮಾಡಿದವರೇ, ಮಾಡುವವರೇ. ಆದರೆ ಯೂಜಿ, ಜೆಕೆ ಅಥವಾ ಓಶೋ ತರದ ಕೆಲವರನ್ನು ಬಿಟ್ಟರೆ ಉಳಿದ ಯಾರೂ ಪ್ರಶ್ನೆಗಳಿಂದ ಮುಕ್ತರಾದವರಲ್ಲ ಎಂದೇ ಅನಿಸುತ್ತದೆ. ಹಾಗಾಗಿಯೇ ಕಾರಂತರು ಇದೆಲ್ಲದರ ಬಗ್ಗೆ ಬಹಳ ಸ್ಪಷ್ಟವಾಗಿದ್ದರು, "ಹುಟ್ಟಿದ್ದಾಗಿದೆ, ಅಂದ ಮೇಲೆ ಉತ್ತರವಿಲ್ಲದ ಪ್ರಶ್ನೆಗಳ ಹಿಂದೆ ಹೋಗುವುದಕ್ಕಿಂತ ಬದುಕಿದ್ದಷ್ಟು ಕಾಲ ನಾಲ್ಕು ಮಂದಿಗೆ ಒಳ್ಳೆಯದಾಗುವ ಹಾಗೆ ಬದುಕುವುದು ಒಳ್ಳೆಯದು."

ಬದುಕಿನಲ್ಲಿ ಕೆಲವೊಮ್ಮೆ ಉತ್ತರಗಳಿಗಿಂತ ಪ್ರಶ್ನೆಗಳೇ ಹೆಚ್ಚು ಅರ್ಥಪೂರ್ಣವಾಗಿರುತ್ತವೆ. ಜೋಗಿಯವರನ್ನು ನಿಜ ಅರ್ಥದಲ್ಲಿ ಜೋಗಿ ಆಗಿಸಿರುವ ಅವರ ಈ "ಇಳಂಗೋವನ್" ಅಂಥ ಎಲ್ಲ ಪ್ರಶ್ನೆಗಳ ಎದುರು ನಮ್ಮನ್ನು ನಿಲ್ಲಿಸುತ್ತದೆ. ಅದಕ್ಕಾಗಿ ಈ ಕೃತಿ ಬಹಳ ಮುಖ್ಯ.

- ನರೇಂದ್ರ ಪೈ

MORE FEATURES

ಸಮ್ಮೇಳನದಲ್ಲಿ ಕೇಳುವವರಿಲ್ಲ, ಸಂತೆಯಲ್ಲಿ ಕೊಳ್ಳುವವರಿಲ್ಲ

01-01-2025 ಬೆಂಗಳೂರು

"ಎಲ್ಲಿದೆ ಕವಿತೆ? ಎಂದು ಪ್ರತಿಯೊಬ್ಬ ಓದುಗನೂ ಕೇಳುವ ಕಾಲದಲ್ಲಿದ್ದೇವೆ.ಅಥವ ಕವಿತೆ ಕೇಳಲು ಕಿವಿಗಳೇ ಇಲ್ಲ ಎನ್ನುವ...

ಜನರ ಜೀವಗಳ ಸುರಕ್ಷತೆಯ ದೃಷ್ಡಿಯಿಂದ ಇದು ಬಹಳ ಒಳ್ಳೆಯ ನಡೆ

31-12-2024 ಬೆಂಗಳೂರು

"ಆಸ್ಟ್ರೇಲಿಯಾದ ಮೊದಲ ಮ್ಯೂಸಿಯಂ ನಲ್ಲಿ ಮೂಲನಿವಾಸಿಗಳು ಹೆಣೆಯುತ್ತಿದ್ದ ಬೆತ್ತದ ಬುಟ್ಟಿಗಳು, ಚಿಪ್ಪುಗಳ ಸರ ಇತ್ಯ...

ಬರೆದಂತೆ ಬದುಕಿದವರಿಗೆ ಬೆಲೆಯುಂಟು, ಅಂಥವರ ಬದುಕೇ ಒಂದು ಮಾದರಿ

31-12-2024 ಬೆಂಗಳೂರು

“ತಪ್ಪು ತಪ್ಪೇ, ಅಪರಾಧ ಅಪರಾಧವೆ ಮತ ಬ್ಯಾಂಕ್ ಗಳ ದುರಾಸೆಯಿಂದ ಸಮರ್ಥನೆಯಾಗಲಿ ದಂಡನೆಗಳಾಗಲಿ, ಸಾಮಾಜಿಕ ನೆಮ್ಮದಿ...