"ಎಲ್ಲಿದೆ ಕವಿತೆ? ಎಂದು ಪ್ರತಿಯೊಬ್ಬ ಓದುಗನೂ ಕೇಳುವ ಕಾಲದಲ್ಲಿದ್ದೇವೆ.ಅಥವ ಕವಿತೆ ಕೇಳಲು ಕಿವಿಗಳೇ ಇಲ್ಲ ಎನ್ನುವಂತಹ ಸ್ಥಿತಿಯಲ್ಲಿದ್ದೇವೆ. ಸಮ್ಮೇಳನದಲ್ಲಿ ಕೇಳುವವರಿಲ್ಲ.ಸಂತೆಯಲ್ಲಿ ಕೊಳ್ಳುವವರಿಲ್ಲ.ಮಾರುಕಟ್ಟೆಯ ಸರಕಿನ ಪಟ್ಟಿಯಲ್ಲಿ ನೀನಿಲ್ಲ.ವಾರದ ಟಾಪ್ ಟೆನ್ನಿನ ಪಟ್ಟಿಯಲ್ಲೂ ನೀನಿಲ್ಲ....ಇದೆ...ಇದೆ !," ಎನ್ನುತ್ತಾರೆ ಲಕ್ಷ್ಮಣ ವಿ.ಎ. ಅವರು ಡಾ. ಗೋವಿಂದ ಹೆಗಡೆ ಅವರ ‘ಕವಿತೆಗೆ ಕಾಲುಗಳಿಲ್ಲ’ ಕವನ ಸಂಕಲನದ ಕುರಿತು ಬರೆದಿರುವ ವಿಮರ್ಶೆ.
'ಕವಿತೆಗೆ ಕಾಲುಗಳಿಲ್ಲ' ಡಾ.ಗೋವಿಂದ ಹೆಗಡೆಯವರ ಕವನ ಸಂಕಲನ. ಕವಿತೆಗಿದು ಕಾಲವಲ್ಲ ಅಂತ ಕನ್ನಡ ಕಾವ್ಯ ಪರಂಪರೆಯಲ್ಲಿ ಓದುತ್ತಲೇ ದೊಡ್ಡವರಾಗಿದ್ದೇವೆ. ನಿಜ ! ಎಲ್ಲಿದೆ ಕವಿತೆ ಎಂದು ಹುಡುಕಲು ಹೊರಟವನಿಗೆ ಸಿಕ್ಕಿದ್ದು ನನ್ನ ಇತಿ ಮಿತಿಗೆ ದಕ್ಕಿದ್ದು ಇಷ್ಟು ಸಂಕಲನದ ಈ ಸಾಲುಗಳು -
'ಇರುವೆಯಂತಿದ್ದ ಕನಸುಗಳ
ಮಧ್ಯೆ ಅಸ್ತವ್ಯಸ್ತ ನಾನು
ಆಗಲೇ ಬಂದಿದ್ದು
ಮೊದಲು ಹನಿ ಹನಿಯಾಗಿ
ಇಳಿಯುತ್ತ ಮಳೆಯಾಗಿ '
ಮಳೆಯ ರೂಪಕದಲ್ಲಿ ಹೀಗೆ ಶುರುವಾಗುವ
ಕವಿತೆ ಕೊನೆಯಾಗುವುದು ಕಡಲ ತಡಿಯಲ್ಲಿ
ನಿಂತ ಒಂಟಿ ದೋಣಿಯ ಹಾಗೆ
'ನಾನು ಕುಳಿತೇ ಇರುತ್ತೇನೆ
ಸುಳಿಯಲ್ಲಿ ಕಣ್ಣು ನೆಟ್ಟು
ಕಾಯುತ್ತ ಕಿವಿ ಕೀಲಿಸಿ
ಅಲೆ ಮುರಿವ ಸದ್ದಿಗಾಗಿ'
ಕತೆ ಕವಿತೆ ಬರೆಯುವ ಪ್ರತಿಯೊಬ್ಬರೂ ಭಾಷೆಯಲ್ಲಿ ಕಟ್ಟಿಕೊಡಬಹುದಾದ ಮೌನದ ಬಗ್ಗೆ ಆಳವಾದ ಅರಿವಿಟ್ಟುಕೊಂಡಿರುವುದು ತೀರ ಅತ್ಯಗತ್ಯ ಅಂತ ಇವರ ಸಂಕಲನ ಓದುತ್ತ ಹೋದಂತೆ ಕಂಡು ಬರುವ ಸತ್ಯ.
ಇಂತಹ ಈ ಕಡುಮೌನದಲ್ಲಿ
'ತುಸು ಆಲಿಸಿದರೆ ಕೊಂಬೆಯೊಳಗೆ
ಜೀವ ರಸದ ಸದ್ದೂ ಕೇಳಬಹುದು'
(ಹಾರು ಗರಿ ಬಿಚ್ಚಿ )
ಎಲ್ಲಿದೆ ಕವಿತೆ? ಎಂದು ಪ್ರತಿಯೊಬ್ಬ ಓದುಗನೂ ಕೇಳುವ ಕಾಲದಲ್ಲಿದ್ದೇವೆ. ಅಥವ ಕವಿತೆ ಕೇಳಲು ಕಿವಿಗಳೇ ಇಲ್ಲ ಎನ್ನುವಂತಹ ಸ್ಥಿತಿಯಲ್ಲಿದ್ದೇವೆ. ಸಮ್ಮೇಳನದಲ್ಲಿ ಕೇಳುವವರಿಲ್ಲ, ಸಂತೆಯಲ್ಲಿ ಕೊಳ್ಳುವವರಿಲ್ಲ. ಮಾರುಕಟ್ಟೆಯ ಸರಕಿನ ಪಟ್ಟಿಯಲ್ಲಿ ನೀನಿಲ್ಲ.ವಾರದ ಟಾಪ್ ಟೆನ್ನಿನ ಪಟ್ಟಿಯಲ್ಲೂ ನೀನಿಲ್ಲ....ಇದೆ...ಇದೆ !
ಕವಿತೆ ಇದೆ ಬನ್ನಿ ಇಲ್ಲಿ !
ಕಾಲಿಲ್ಲದ ಕವಿತೆ ನೆರವಿಯ ಆಚೆಯೇ
ನಿಂತು ಕೈ ಚಾಚುತ್ತದೆ - ಆರ್ತ
ನಡಿಗೆ ಮರೆತು ದೌಡೋಡುವವರ ಕಣ್ಣಲ್ಲಿ
ಯಾವ ಬಿಂಬವೂ ಮೂಡುವುದಿಲ್ಲ
ಹೆಡ್ ಲೈಟ್ ಬೆಳಕಿನಲ್ಲಿ
ಆರಿದ ದೊಂದಿಯ ನಿಸ್ತೇಜ ಕವಿತೆ
ಮೊಂಡು ಕೈ ಕಾಲಿನ ನಿರಾಯುಧ ಯೋಧ
ಕವಿತೆಗಿದು ಕಾಲವಲ್ಲ.
( ಕವಿತೆಗಿದು ಕಾಲವಲ್ಲ )
ಆಧುನಿಕ ವಿಕಾರತೆಯನ್ನು ಇದಕ್ಕಿಂತ ಶಕ್ತ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.
'ಇಂದು ಅವ ತೀರಿದನಂತೆ
ತುಂಬ ದಿನಗಳಿಂದ
ಅವ
ಬದುಕಿದ್ದು ಗೊತ್ತೇ ಇರಲಿಲ್ಲ'
( ಷರಾ ಬರೆಯದ ಕವಿತೆ )
ಆ ಕಣ್ಣುಗಳ ಎಲ್ಲಿ ನೆಟ್ಟಿದ್ದೀ
ಮಹಾರಾಯ !
ಲೋಕ ಲೋಕಾಂತರಗಳ ಆಚೆ ?
ಕಲ್ಪಾಂತರಗಳ ದಾಟಿ ?
ಗೊತ್ತು ನಿನಗೆ ,ನನಗಲ್ಲ.
ಬಾಹುಬಲಿಯ ಕುರಿತ ಈ ಸಾಲುಗಳು ಗೋವಿಂದ ಹೆಗಡೆಯವರ ಕವಿತೆಯ ಸಾಲುಗಳಿಗೂ ಅನ್ವಯಿಸಬಹುದು. ಕವಿತೆಗೆ ಕಾಲುಗಳಿಲ್ಲ ಎಂದು ಹೇಳಿದ್ದು ಇಲ್ಲಿ ಸುಳ್ಳಾಗಿ ಇವರ ಕವಿತೆಗಳ ಮೈ ತುಂಬಾ ಕೈ ಕಾಲು ಕಣ್ಣು ಮೂಗು ಕಿವಿ ಪಂಚೇಂದ್ರಿಯಗಳನ್ನೂ ಉದ್ದೀಪಿಸುವಂತಹ ಐವತ್ತೊಂದು ಕವಿತೆಗಳಿವೆ.
- ಲಕ್ಷ್ಮಣ ವಿ.ಎ
“ಈ ಪುಸ್ತಕ ಓದಿ ನಾನು ಯಾರು ಎಂದು ಗೊತ್ತಾಯಿತು ಮಾತ್ರವಲ್ಲ; ಬೇರೆಯವರು ಯಾಕೆ ಹೀಗೆ? ಎಂದು ತಿಳಿಯಿತು,” ಎ...
“ಇಲ್ಲಿನ ಎಲ್ಲಾ ಕತೆಗಳಲ್ಲೂ ಕತೆಗಾರನಿಗೆ ಅರಿವಿದ್ದೋ, ಇಲ್ಲದೆಯೋ ಪ್ರಾದೇಶಿಕ ಪ್ರಜ್ಞೆ ಸ್ಥಾಯಿಭಾವವಾದರೆ, ಮನುಷ್...
“ಈ ಪುಸ್ತಕದ ಬಹುಪಾಲು ವಿಚಾರಗಳು ಗ್ರಂಥಋಣದಲ್ಲಿ ಸೂಚಿಸಿರುವ ಪುಸ್ತಕಗಳು ಮಾತ್ರವಲ್ಲದೆ ಇನ್ನೂ ಅನೇಕ ಪುಸ್ತಕಗಳಿಂ...
©2025 Book Brahma Private Limited.