ಐದು ಭಾಷೆಗಳಲ್ಲಿ ಓದಬಹುದಾದ ಕಾದಂಬರಿ ಇದು


“ಬದುಕಿನ ಹೊಡೆತಗಳನ್ನೇ ಕಥೆ, ಕಾದಂಬರಿಯಾಗಿಸಿ. ನೋಡಿದ್ದು, ಕೇಳಿದ್ದು, ಅನುಭವಿಸಿದ್ದನ್ನು ವಾಸ್ತವ ರೂಪದಲ್ಲಿಯೇ ಸಾಹಿತ್ಯ ರೂಪದಲ್ಲಿಯೇ ಉಣಬಡಿಸಿದೆ.” ಎನ್ನುತ್ತಾರೆ ಭದ್ರಾವತಿ ರಾಮಾಚಾರಿ. ಅವರು ‘ಅಮ್ಮ ನನ್ನನ್ನೂ ಸ್ವಲ್ಪ ಅರ್ಥ ಮಾಡ್ಕೊ’ ಸಾಮಾಜಿಕ ಕಾದಂಬರಿಗೆ ಬರೆದ ಅನಿಸಿಕೆ ನಿಮ್ಮ ಓದಿಗಾಗಿ.

ಆಮೇಲೆ ಏನಾಯಿತೆಂದರೆ, ಬದುಕು ಭಾರವಾಗತೊಡಗಿತು. ನನ್ನವರು ತನ್ನವರು ಅಂತ ಯಾರೂ ಇರದ ವಿಕ್ಷಿಪ್ತ ಬದುಕಿನಲ್ಲಿ ನನ್ನದೇ ಆದ ಹೊಸ ಪ್ರಪಂಚವನ್ನು ಸೃಷ್ಟಿಸಿಕೊಳ್ಳುವುದಾದರೂ ಹೇಗೆ? ಎಂಬ ದ್ವಂದ್ವದಲ್ಲಿದೆ. ಬಡತನ, ಕ್ರೂರ ಬಡತನ ಯಾರಿಗೂ ಧಾವಿಸಬಾರದೆಂದು ಆಶಿಸುವಷ್ಟು ಅಬ್ಬೇಪಾರಿಯಂತಹ ವಿಚಿತ್ರ ಜೀವನವನ್ನು ಶೂನ್ಯದಿಂದ, ಯಾರ ಬಲವಿಲ್ಲದೇ ಕಟ್ಟಿಕೊಳ್ಳುವುದರಲ್ಲಿ ಸಾಕು ಸಾಕಾಗಿತ್ತು.

ಬದುಕು ಚೆಂದವಾಗಿ ಕಟ್ಟಿಕೊಳ್ಳಲು ಯಾರದ್ದಾದರೂ ಸಲಹೆ, ಸಹಕಾರ ಬೇಕಾಗಿತ್ತು. ಅನೇಕ ಮಿತ್ರರಿಗೆ ಅದು ದೊರಕಿ ತನ್ನದೊಂದು ಹೂವು ಅರಳಿಸಿಕೊಂಡಿದ್ದರು. ಸಾಧನೆಯ ಹಾದಿಯಲ್ಲಿ ಸಾಗಿ ಕನಸು ನನಸನ್ನಾಗಿ ಮಾಡಿಕೊಂಡು ಗುರಿ ತಲುಪಿ ಸಂತೋಷದಿಂದ ಬೀಗಿದ್ದರು. ನನಗೂ ನೂರಾರು ಕನಸುಗಳಿದ್ದವು. ಸಾಹಿತ್ಯವನ್ನು ಮೆದುಳಿಗೇರಿಸಿಕೊಂಡಿದ್ದೆ, ಸಂಗೀತವನ್ನು ಆಹ್ಲಾದಿಸುತ್ತಿದೆ, ಚಲನಚಿತ್ರ ನಿರ್ದೇಶನ ವಿಭಾಗದಲ್ಲೂ ಲಗ್ಗೆಯಿಟ್ಟಿದ್ದೆ, ಪ್ರತಿದಿನ ರಾತ್ರಿ, ಹಗಲು ಕಾಣುತ್ತಿದ್ದದ್ದು ಕಲೆ, ಕುಂಚ, ಪೆನ್ನು ನನ್ನ ಪ್ರಾಣವಾಯಿತು. ಬದುಕಾಯಿತು. ಸಾಧನೆಯ ಹಾದಿಯಲ್ಲಿ ಬೈಸಿಕಲ್ಲು ತುಳಿಯತೊಡಗಿದೆ. ಊಹಿಸಿಕೊಳ್ಳಲಾರದಷ್ಟು ಅವಮಾನ, ತುಳಿತ ಮೆಟ್ಟಿನಿಂತೆ.

ನನ್ನ ಮೇಲೆಯೇ ನಾನು ಸವಾಲುಗಳನ್ನು ಎಸೆದುಕೊಳ್ಳತೊಡಗಿದೆ. ಅದರಿಂದ ಯಶಸ್ಸಿನ ಮೆಟ್ಟಿಲು ನಿಲುಕಿತು. ಬದುಕಿನ ಹೊಡೆತಗಳನ್ನೇ ಕಥೆ, ಕಾದಂಬರಿಯಾಗಿಸಿದೆ. ನೋಡಿದ್ದು, ಕೇಳಿದ್ದು, ಅನುಭವಿಸಿದ್ದನ್ನು ವಾಸ್ತವ ರೂಪದಲ್ಲಿಯೇ ಸಾಹಿತ್ಯ ರೂಪದಲ್ಲಿಯೇ ಉಣಬಡಿಸಿದೆ. ಕನ್ನಡದ ಓದುಗರು ಮೆಚ್ಚಿದರು. ಶಹಬ್ಬಾಸ್ ಹೀಗೇ ಬರೀ ಅಂತ ಪತ್ರ ಬರೆದು, ಫೋನು ಮಾಡಿ ಹುರುಪು ತುಂಬಿದರು. ಅಂಥದ್ದೇ ವಾಸ್ತವದ ಚಿತ್ರಣ ಈ ಕಾದಂಬರಿ. ಎಲ್ಲಾ ಹಸಿ ಹಸಿ ಘಟನೆಗಳೇ ಆಗಿದ್ದರಿಂದ ಕಲ್ಪನೆಯ ಹೊದಿಕೆ ಹೊದಿಸಲಿಲ್ಲ. ಈ ಕಾದಂಬರಿಯಲ್ಲಿನ ಅಮ್ಮ ಮಾತನಾಡುವ ರೀತಿ, ಅವಳ ನಡವಳಿಕೆ, ನಾಯಕನ ವಿಕ್ಷಿಪ್ತ ವರ್ತನೆ ಕೂಡ ನಾನು ಕಣ್ಣಾರೆ ನೋಡಿದ್ದು, ಹೀಗೆ ಇರಲು ಸಾಧ್ಯವಿಲ್ಲ ಅಂತ ಅಂದುಕೊಳ್ಳಬೇಡಿ. ಆಣೆ ಪ್ರಮಾಣ ನಿಜವೇ ಆಗಿದ್ದಲ್ಲಿ ಅವುಗಳನ್ನು ಹಾಕಲು ಹಿಂದೇಟು ಹಾಕಲಾರೆ.

ಕುಟುಂಬವೊಂದರ ಸಮಗ್ರ ಚಿತ್ರಣ, ವಿಚಿತ್ರದಲ್ಲಿ ವಿಚಿತ್ರ ಚಿತ್ರಣಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಪ್ರಸ್ತುತ ಕಾದಂಬರಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಲು ಮೂವರು ಅನುವಾದಕರಿಗೆ ಕೊಟ್ಟಿದ್ದೆ. ಇಲ್ಲಿನ ಭಾಷೆಯ ಪ್ರಯೋಗಕ್ಕೆ ಪದಗಳೇ ಇಲ್ಲ ಅಂತ ವಾಪಸ್ಸು ಕೊಟ್ಟರು. ಆದರೆ ತೀರ್ಥಹಳ್ಳಿಯ ಪದ್ಮಜಾ ಜೋಯ್ಸ್ ಎಂಬ ಕವಯಿತ್ರಿ, ಅನುವಾದಕಿ ಇಂಗ್ಲಿಷ್, ಹಿಂದಿಗೆ ನಾನು ಅನುವಾದ ಮಾಡುತ್ತೇನೆ ಎಂದು ಧೈರ್ಯದಿಂದ ಪಡೆದು ಅನುವಾದ ಮಾಡಿದ್ದಾರೆ.. ತೆಲುಗು, ತಮಿಳು ಭಾಷೆಗೆ ಅನುರಾಧ ತುಳಸಿಯವರು ಅನುವಾದಿಸಿದ್ದಾರೆ. ಇಬ್ಬರು ಭಾಷಾಂತರ ಲೇಖಕಿಯರಿಗೂ, ಕನ್ನಡದಲ್ಲಿ ಅಚ್ಚುಕಟ್ಟಾಗಿ ಛಾಯಾಕ್ಷರ ಜೋಡಣೆ ಮಾಡಿಕೊಟ್ಟ ಎಸ್. ರಾಜು ಅವರಿಗೆ ನನ್ನ ಅಭಿನಂದನೆಗಳು.

‘ಅಮ್ಮಾ ನನ್ನನ್ನೂ ಸ್ವಲ್ಪ ಅರ್ಥಮಾಡ್ಕೊ…ಎಂಬ ಕಾದಂಬರಿ ಭಾಷೆ ಬಲ್ಲವರು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲೂ ಓದಬಹುದು. ಆದರೆ ಅಭಿಪ್ರಾಯ ಏನೇ ಇರಲಿ, ಮುಕ್ತವಾಗಿ ತಿಳಿಸಿ.

- ಭದ್ರಾವತಿ ರಾಮಾಚಾರಿ

MORE FEATURES

ಅಜ್ಞಾತವೆಂಬುದು ಬಗೆದಷ್ಟೂ ಹಿರಿದಾಗುವ, ಅರಿತಷ್ಟೂ ಆಳವಾಗುವ ಕ್ರಿಯೆ

23-09-2024 ಬೆಂಗಳೂರು

“ಅಜ್ಞಾತವೆಂಬುದು ಬಗೆದಷ್ಟೂ ಹಿರಿದಾಗುವ, ಅರಿತಷ್ಟೂ ಆಳವಾಗುವ, ಒಳಗೆ ಹೊಕ್ಕಷ್ಟೂ ವಿಸ್ತಾರವಾಗುವ ಅಚ್ಚರಿ ಎನ್ನುತ...

ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ: ರಾಜಕುಮಾರ ಮಾಳಗೆ

23-09-2024 ಬೆಂಗಳೂರು

“ಜಿ.ಬಿ.ವಿಸಾಜಿ ಅವರು ಸಾಹಿತ್ಯದ ಜೊತೆಗೆ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಭಾಲ್ಕಿ ತಾಲೂಕು ವರದಿಗಾರ...

ಸಾವು ಯಾವಾಗಲೂ ಕಂಡ ಅನುಭವವೇ ಹೊರತು ಉಂಡ ಅನುಭವ ಅಲ್ಲ!

22-09-2024 ಬೆಂಗಳೂರು

“ಸಾವನ್ನು ಹಲವು ದಿಕ್ಕುಗಳಿಂದ ನೋಡಲು ಸಾಧ್ಯ. ಸ್ವಂತ ಸಾವಿನ ಆಚೆಗೂ ಹಲವು ಬಗೆಯ ಸಾವುಗಳಿವೆ. ಈ ಸಂಕಲನ ಅಂತಹ ಬಹು...