ಸಾವು ಯಾವಾಗಲೂ ಕಂಡ ಅನುಭವವೇ ಹೊರತು ಉಂಡ ಅನುಭವ ಅಲ್ಲ!


“ಸಾವನ್ನು ಹಲವು ದಿಕ್ಕುಗಳಿಂದ ನೋಡಲು ಸಾಧ್ಯ. ಸ್ವಂತ ಸಾವಿನ ಆಚೆಗೂ ಹಲವು ಬಗೆಯ ಸಾವುಗಳಿವೆ. ಈ ಸಂಕಲನ ಅಂತಹ ಬಹುಮುಖಿ ನೆಲೆಯಿಂದಲೇ ರೂಪಿತವಾಗಿದೆ” ಎನ್ನುತ್ತಾರೆ ಎಚ್.ಎಸ್. ರಾಘವೇಂದ್ರ ರಾವ್. ಅವರು ಚನ್ನಪ್ಪ ಕಟ್ಟಿ ಅವರ ‘ಮೃತ್ಯು ಮುಟ್ಟದ ಮುನ್’ ಕವನ ಸಂಕಲನಕ್ಕೆ ಬರೆದ ನುಡಿ ಇಲ್ಲಿದೆ.

ಕನ್ನಡದ ಒಳ್ಳೆಯ ಕಥೆಗಾರರಲ್ಲಿ ಒಬ್ಬರಾದ ಶ್ರೀ ಚನ್ನಪ್ಪ ಕಟ್ಟಿಯವರು ಬಹಳ ಕಾಲ ಪ್ರಸಿದ್ದಿಯ ಬೆಳಕಿನಾಚೆಗೆ ಉಳಿದವರು. ರೋಣ, ಸಿಂದಗಿ ಮುಂತಾದ ದೂರದೂರಿನಲ್ಲಿ ಬೆಳೆದ ಪ್ರತಿಭೆಗಳಿಗೆ ಇಂತಹ ಪಾಡು ಸಹಜವಾಗಿಬಿಟ್ಟಿದೆ. 'ಕಥಾಕಿನ್ನೂರಿ'ಯಲ್ಲಿ ಮೂಡಿಬಂದಿರುವ ಭಾಷೆ-ಭಾವ-ಜೀವನಗಳ ಒಡಬಾಳನ್ನು ಓದಿಯೇ ತಿಳಿಯಬೇಕು. ಅದರ ಜೊತೆಗೆ, ಇಂಗ್ಲಿಷ್ ಕಲಿಸುವ ಹಲವು ಸಂವೇದನಶೀಲರು ತಮ್ಮ ಕಾಯಕವೆನ್ನುವಂತೆ ಮಾಡುತ್ತ ಬಂದಿರುವ ಅನುವಾದದ ಕೆಲಸವನ್ನು ಇವರು ಕೂಡ ತುಂಬು ಪ್ರೀತಿಯಿಂದ ಮಾಡಿದ್ದಾರೆ. ಇವರು ಕನ್ನಡಕ್ಕೆ ತಂದಿರುವ ಜಾಕ್ ಲಂಡನ್, ಚಿನುಆ ಅಚಿಬೆ ಮುಂತಾದ ಲೇಖಕರ ಹಿನ್ನೆಲೆ ಮತ್ತು ಒಲುವೆಗಳನ್ನು ಬಲ್ಲವರಿಗೆ ಚನ್ನಪ್ಪನವರ ಜನಪರವಾದ, ಜೀವನಪರವಾದ ನಿಲುವುಗಳ ತಿಳಿವಳಿಕೆ ಸಿಗುತ್ತದೆ. ಗದ್ಯಾನುವಾದಕ್ಕೆ ಸೀಮಿತವಾಗಿದ್ದ ಅವರು ಈ ಸಂಕಲನದಲ್ಲಿ ಕವಿತೆಗಳ ಅನುವಾದದಂತಹ ಬೇರೆ ಬಗೆಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಸ್ವಂತ ಕವನಗಳ ಮೂರು ಸಂಕಲನಗಳನ್ನು ಹೊರತಂದಿರುವ ಕಟ್ಟಿಯವರು ಇಲ್ಲಿ ಬೇರೆ ಬೇರೆ ಕಾಲ, ದೇಶಗಳ, ಹಾಗಿರುವುದರ ಪರಿಣಾಮವಾಗಿಯೇ ಬೇರೆ ಬೇರೆ ಭಾಷಿಕ ಬಗೆಗಳ ಕವಿತೆಗಳನ್ನು ಅನುಸಂಧಾನ ಮಾಡಿ, ಅಷ್ಟೇ 'ಬಹುಮುಖಿ'ಯಾದ ನಮ್ಮ ಕನ್ನಡಕ್ಕೆ ತರುವ ಪ್ರಯತ್ನವನ್ನು ಸುಮಾರು ಆರು ತಿಂಗಳ ಅವಧಿಯಲ್ಲಿ ಮಾಡಿದ್ದಾರೆ. ಅವರ ಮಿತ್ರರಾದ ಡಾ. ಶ್ರೀರಾಮ ಇಟ್ಟಣ್ಣನವರು ಕಳಿಸಿದ ಇಂಗ್ಲಿಷ್ ಕವಿತೆಯೊಂದನ್ನು ಅನುವಾದ ಮಾಡಿ ಆಮೇಲೆ ಅದರದೇ ಜಾಡು ಹಿಡಿದು ಹಲವು ದಿಕ್ಕಿನ ಪಯಣ ಮಾಡಿ, ಐವತ್ತಕ್ಕೂ ಹೆಚ್ಚು ಕವಿತೆಗಳನ್ನು ನಮಗೆ ಕೊಟ್ಟಿದ್ದಾರೆ. ಈ ಪುಸ್ತಕದ ಸಂಯೋಜನೆಯು ಬಹಳ ಕ್ರಮಬದ್ಧವೂ, ಓದುಗಸ್ನೇಹಿಯೂ ಆಗಿದೆಯೆಂಬ ಮಾತನ್ನು ಮೊದಲೇ ಹೇಳಬೇಕು. ಅವರು ತಮ್ಮ ಕೆಲಸವನ್ನು ಬಹಳ ಪ್ರೀತಿ ಮತ್ತು ಕಾಳಜಿಗಳಿಂದ, ಸಾಕಷ್ಟು ಪರಿಶ್ರಮ ಹಾಕಿ ಮಾಡಿದ್ದಾರೆ. ಇದು 'ಸಾವು' ಎನ್ನುವ ಒಂದೇ ಒಂದು ಥೀಮಿನ ಸುತ್ತಲೂ ರಚಿತವಾಗಿರುವ ಕವಿತೆಗಳ ಗೊಂಚಲು. ಸ್ವತಃ ಕನ್ನಡದಲ್ಲಿಯೇ ಈ ರೀತಿಯ ವಿಷಯಕೇಂದ್ರಿತವಾದ ಸಂಕಲನಗಳು ಬಹಳ ಕಡಿಮೆ. ಕವಿತೆಗಳಿದ್ದರೂ ಅದನ್ನು ಹಾಗೆ ಒಟ್ಟುಗೂಡಿಸಿರುವುದು ಅಪರೂಪ. ಒಂದು ವೇಳೆ ಬಂದರೂ ಸಮಾಜ, ಹೆಣ್ಣು, ಗಾಂಧಿ, ಯುದ್ಧ ಮುಂತಾದ ಇಂದಿನ ತೀವ್ರ ಆಸಕ್ತಿಗಳನ್ನು ಕುರಿತ ಆಂಥಾಲಜಿಗಳು ಬಂದಿವೆಯೇ ವಿನಾ ಸಾವನ್ನು ಕುರಿತ ಕವಿತೆಗಳು ಒಟ್ಟಿಗೆ ಬಂದಿಲ್ಲ.

ಇಂತಹುದೊಂದು ಕವಿತೆಗಳ ಗೊಂಚಲನ್ನು ಸ್ವತಃ ಕಟ್ಟಿಯವರೇ ಮಾಡಿಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ. ಪಂಪ, ರನ್ನರಿಂದ ಮೊದಲಾಗಿ ಇಂದು ನೆನ್ನೆಯವರೆಗೆ ಇಂತಹ ಕವಿತೆಗಳ ಹರಹು ಇದೆ. ಯಾಕೆಂದರೆ ಸಾವು ಅನುಭವ, ಅನುಭಾವ, ಭಾವ, ವಿಚಾರ, ಆಚರಣೆ, ನಂಬಿಕೆ ಮುಂತಾದ ಹಲವು ಸಂಗತಿಗಳ ಕೂಡುಬಿಂದು. ಅಷ್ಟೇ ಮುಖ್ಯವಾಗಿ ಇವೆಲ್ಲವೂ ಕರಗಿ ಒಂದಾಗಿ ಭಾಷೆಯ ಕುಲುಮೆಯಲ್ಲಿ ಹೊಸಮೈ ತಳೆಯಬೇಕು. ಇಲ್ಲದಿದ್ದರೆ, 'ಮರಣತೀರ ಘನತಿಮಿರ' ಕವಿಗೂ ದಕ್ಕುವುದಿಲ್ಲ. ಕಟ್ಟಿಯವರು ಈ ಪುಸ್ತಕಕ್ಕೆ ಬರೆದಿರುವ ಪ್ರಾಸ್ತಾವಿಕ ಮಾತುಗಳಲ್ಲಿ ಈ ವಿಷಯವನ್ನು, ಅಂತೆಯೇ ಈ ಅನುವಾದದ ಕೆಲಸವು ಒಡ್ಡಿದ ಸವಾಲುಗಳನ್ನು ಅವರು ನಿರ್ವಹಿಸಿದ ಬಗೆಯನ್ನು ವಿವರವಾಗಿ ಚರ್ಚಿಸಿದ್ದಾರೆ. ನಾನು ಅದನ್ನು ಬೆಳೆಸುವ ಕೆಲಸಕ್ಕೆ ಹೋಗುವುದಿಲ್ಲ. ಅದರ ಅಗತ್ಯವೂ ಇಲ್ಲ. ಸಾವು ಯಾವಾಗಲೂ ಕಂಡ ಅನುಭವವೇ ಹೊರತು ಉಂಡ ಅನುಭವ ಅಲ್ಲ. ಆದರೆ, ನಾವು ಮನುಷ್ಯರು ಹಬ್ಬಕ್ಕೆ ತಂದ ಹರಕೆಯ ಕುರಿಗಳಂತೆ ಮುಗ್ಧರೇನೂ ಅಲ್ಲ. ಸಾವಿನ ಭಯದಲ್ಲಿಯೇ ಸಾಯುವುದು ಮಾತ್ರ ನಮಗೆ ಸಾಧ್ಯ. ನಾವೆಲ್ಲರೂ 'ಅಂತಕನ ನೆರೆಯೂರವರು'.ಆದರೆ, ಸಾವನ್ನು ಹಲವು ದಿಕ್ಕುಗಳಿಂದ ನೋಡಲು ಸಾಧ್ಯ. ಸ್ವಂತ ಸಾವಿನ ಆಚೆಗೂ ಹಲವು ಬಗೆಯ ಸಾವುಗಳಿವೆ. ಈ ಸಂಕಲನ ಅಂತಹ ಬಹುಮುಖೀ ನೆಲೆಯಿಂದಲೇ ರೂಪಿತವಾಗಿದೆ. ನೆಲ ಉಳುವ ಉಪಕರಣಕ್ಕೆ ಸಿಕ್ಕಿ ಸಾಯುವ ಮುಳ್ಳುಹಂದಿಗಾಗಿ ಮರುಗುವ ಫಿಲಿಪ್ ಲಾರ್ಕಿನ್‌ನಿಂದ, 'ಸಾವೆ, ಸಾಯುವೆ ನೀನು' ಎಂದು ಸಾವಿಗೇ ಸವಾಲು ಹಾಕಿದ ಜಾನ್ ಡನ್ ವರೆಗೆ ಎಷ್ಟೊಂದು ಜನರ ಪ್ರತಿಕ್ರಿಯೆಗಳ ಸರಣಿ. ಸುಮಾರು ಎಂಟು ನೂರು ವರ್ಷಗಳ ಕಾಲ ಕವಿಮನಸ್ಸು ಇತರರ ಎದೆಬಡಿತಗಳನ್ನು ಗುರುತಿಸಿದ ಬಗೆ, ಅಂತೆಯೇ ತನ್ನದೇ ತಲ್ಲಣಗಳನ್ನು ದಾಖಲೆ ಮಾಡಿದ ಬಗೆ! ಇದೆಲ್ಲವೂ ನಮ್ಮದೇ ಹೃದಯದಲ್ಲಿ ಮೂಡಿಸುವ ತರಂಗಗಳೂ ಅಂತಹವೇ ಎಲ್ಲೋ ಯಾರೋ ಹೇಳಿರುವ ತಕ್ಷಣ ನೆನಪಿಗೆ ಬಂದು ಸಾವಿನ ಸ್ವರಮೇಳ ಹುಟ್ಟಿಕೊಳ್ಳುತ್ತದೆ. ಅಶ್ವತ್ಥಾಮನ್ ನಾಟಕದಲ್ಲಿ ಬರುವಂತೆ, "ಇಂದವನ್ ನಾಳೆ ನಾನ್, ಏನ್ ಪಾಡೊ ಆಳ ಬಾಳ್, ಬೀಸುವ ಬಯಲ್ ಗಾಳಿ, ಪರಿದಡಂಗುವ ನೆರಳ್" ಇಂತಹದೊಂದು ಸಂಕಲನದ ಶಕ್ತಿಯೇ ಹಾಗೆ. ಅವು ನಮ್ಮನ್ನು ಬೆಳೆಸುವ ಬಗೆಯೇ ಬೇರೆ. ಇಲ್ಲಿ ಸಾವನ್ನು ವೈಯಕ್ತಿಕವಾಗಿ, ಸಾಮೂಹಿಕವಾಗಿ, ಯುದ್ಧದಂತಹ ಸನ್ನಿವೇಶದ ಹಿನ್ನೆಲೆಯಲ್ಲಿ, ಸಾವಿನ ನಂತರ ಏನು ಎಂಬ ಪ್ರಶ್ನೆಗೆ ಕೊಟ್ಟುಕೊಂಡಿರುವ ಉತ್ತರಗಳ ಹಿನ್ನೆಲೆಯಲ್ಲಿ, ಆತ್ಮೀಯರ ಸಾವನ್ನು ಕಂಡು ಬದುಕಿರುವರ ಮನಃಸ್ಥಿತಿಯ ಹಿನ್ನೆಲೆಯಲ್ಲಿ, ದೇಹ-ಆತ್ಮಗಳ ಸಂಬಂಧದ ಹಿನ್ನೆಲೆಯಲ್ಲಿ, ವಿಭಿನ್ನ ಧರ್ಮಗಳು ಕಂಡುಕೊಂಡಿರುವ ಉತ್ತರಗಳ ಹಿನ್ನೆಲೆಯಲ್ಲಿ ಹೀಗೆಯೇ ಹತ್ತು ಹಲವು ದೃಷ್ಟಿಕೋನಗಳಿಂದ ನೋಡಲಾಗಿದೆ. ನಾವು ಓದುಗರು ಅದೆಲ್ಲವನ್ನೂ ಒಳಗೊಳ್ಳಲು ಪ್ರಯತ್ನಿಸುತ್ತೇವೆ. ಇಂತಹ ಕೆಲಸ ಮಾಡಿರುವ ಕಟ್ಟಿಯವರು ಅಭಿನಂದನೆಗೆ ಪಾತ್ರರಾಗುತ್ತಾರೆ.

ಕವಿತೆಯ ಅನುವಾದವು ಹಲವು ಸಂಕೀರ್ಣ ನೆಲೆಗಳನ್ನು ಒಳಗೊಂಡಿದೆ. ಮೂಲದಲ್ಲಿ ಏನೇ ಇರಲಿ, ಅನುವಾದಕನ ಮನಸ್ಸಿನಲ್ಲಿ ರೂಪು ತಳೆಯುವ ಕವಿತೆಯಷ್ಟೇ ಓದುಗರಿಗೆ ಸಿಗುತ್ತದೆ. ಮೂಲ ಕವಿತೆಯ ಓದುಗರೂ ತಮ್ಮದೇ ಕವಿತೆಯನ್ನು ಕಟ್ಟಿಕೊಳ್ಳುತ್ತಾರೆ. ಅದಕ್ಕಿಂತ ಸೋಜಿಗವೆಂದರೆ, ಅನುವಾದವನ್ನು ಓದುವ 'ನಾನು' ಕಂಡುಕೊಳ್ಳುವ ಕವಿತೆಯು, ಅನುವಾದಕರು ಕಂಡಿರುವುದಕ್ಕಿಂತ ಬೇರೆಯೇ ಇರಬಹುದು. ಭಾಷೆಯ ಚಲನಶೀಲತೆಯಿಂದ ಅಂತೆಯೇ ಸಂದರ್ಭದ ವಿಭಿನ್ನತೆಯಿಂದ ಅರ್ಥಕ್ಕೆ ಹೊಸ ಆಯಾಮಗಳು ಒದಗಿ ಬರುತ್ತವೆ. ಇವುಗಳನ್ನು 'ಸೂಚಿಸುವ' ಹೊಣೆಯೂ ಅನುವಾದಕನಿಗೆ ಇರುತ್ತದೆ. ಆದ್ದರಿಂದಲೇ ಒಂದೇ ಕವಿತೆಗೆ ಎಷ್ಟು ಅನುವಾದಗಳು ಬಂದರೂ ಮತ್ತೊಂದಕ್ಕೆ ಅವಕಾಶವು ತೆರವಾಗಿಯೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಅನುವಾದವೂ ಒಂದು 'ನಿಲುಗಡೆ'ಯೇ ವಿನಾ ಕೊನೆಯ ನಿಲ್ದಾಣವಲ್ಲ. ಆದ್ದರಿಂದಲೇ ಕಟ್ಟಿಯವರ ಈ ಅನುವಾದಗಳು ಮುಖ್ಯವಾಗುತ್ತವೆ. ಸುಮಾರು ಎಂಟು ನೂರು ವರ್ಷಗಳ ಅವಧಿಯಲ್ಲಿ, ಇಂಗ್ಲಿಷ್ ಭಾಷೆಯ ಹಲವು ಅವಸ್ಥೆಗಳಲ್ಲಿ, ಕೆಲವೊಮ್ಮೆ ಬೇರೆ ಸಂಸ್ಕೃತಿಗಳಿಂದ ಬಂದವರ ಕವಿತೆಗಳ ಇಂಗ್ಲಿಷ್ ಅನುವಾದಗಳಲ್ಲಿ, ಜನಾಂಗೀಯ ವೈವಿಧ್ಯದಲ್ಲಿ ಈ ಎಲ್ಲ ಕವಿತೆಗಳನ್ನು ಒಟ್ಟಾಗಿ ಕನ್ನಡಕ್ಕೆ ತಂದಾಗ 'ಯಾವ ಬಗೆಯ ಕನ್ನಡ'ವನ್ನು ಬಳಸಬೇಕು ಎನ್ನುವುದು ಬಹಳ ಬಿಕ್ಕಟ್ಟಿನ ಪ್ರಶ್ನೆ. ಹಲವು ಕಾಲದ ಹಿಂದೆ ಬಿ.ಎಂ.ಶ್ರೀ.ಯವರು 'ಇಂಗ್ಲಿಷ್ ಗೀತ'ಗಳಲ್ಲಿ ಎಲ್ಲವನ್ನೂ ತಾವೇ ಕಂಡುಕೊಂಡ ಹೊಸ ಕನ್ನಡಕ್ಕೆ ಹೊಂದಿಸಿಕೊಂಡರು. ಬೇಂದ್ರೆಯವರು ಮೂಲಕ್ಕೆ ಸರಿಹೊಂದುವ ಅನನ್ಯ ಬಗೆಗಳನ್ನು ಕಂಡುಕೊಂಡರು. ಹೀಗೆಯೇ ಹತ್ತು ಹಲವು ಹಾದಿಗಳು ಮೂಡಿಬಂದಿವೆ. ಚನ್ನಪ್ಪನವರು, ಮೂಲಕೃತಿಯ ಕಾಲವು ಬದಲಾದಂತೆ ತಾವು ಬಳಸುವ ಕನ್ನಡದ ಸ್ವರೂಪವೂ ಬದಲಾಗಬೇಕೆಂದು ತೀರ್ಮಾನಿಸಿರುವಂತೆ ಕಾಣುತ್ತದೆ. ಅದು ಸರಿಯಾದ ನಿಲುವು. ಆದ್ದರಿಂದಲೇ ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದ ಕವಿತೆಗಳ ಅನುವಾದವು ನಮಗೆ ಸಮೀಪವೆನಿಸುತ್ತದೆ. ಅದರಲ್ಲೂ ಟ್ಯಾಗೋರ್, ಗಾಲಿಬ್, ಕಮಲಾ ದಾಸ್ ಮುಂತಾದವರ ಸಂಸ್ಕೃತಿ ಸಾಮ್ಯವೂ ಅನುವಾದಗಳನ್ನು ಆತ್ಮೀಯವೆನಿಸುತ್ತದೆ.

ಇಲ್ಲಿ ಯೋಚನೆ ಮಾಡಬೇಕಾದ ಒಂದು ಸಂಗತಿಯಿದೆ. ಅನುವಾದಕರು ಮಾತ್ರವಲ್ಲ, ಸ್ವಂತ ಕವಿತೆ ಬರೆಯುವವರು ಕೂಡ ಯೋಚಿಸಬೇಕಾದ ವಿಷಯ ಅದು. ಶಾಲಾದಿನಗಳಿಂದಲೂ ಗದ್ಯವೇ ಬೇರೆ, ಪದ್ಯವೇ ಬೇರೆ ಎಂಬ ತಿಳಿವಳಿಕೆ ನಮ್ಮನ್ನು ಆಳುತ್ತದೆ. ಪ್ರಾಸ, ಲಯ, ಅಮೂರ್ತತೆ, ಗೇಯತೆ ಮುಂತಾದವು ಪದ್ಯದ ಸೀಮೆಗೆ ಮಾತ್ರವಲ್ಲ, ಎಲ್ಲ ಕವಿತೆಗೂ ಅನ್ವಯಿಸುವುದೆಂದು ನಾವು ತಿಳಿಯುತ್ತೇವೆ. ಇದು ಅಂತಹ ತಪ್ಪಲ್ಲ. ಆದರೆ ಮೇಲೆ ಹೇಳಿದ ಸಂಗತಿಗಳು ವೈವಿಧ್ಯಮಯವಾದವು ಮತ್ತು ಕವಿಯ ಆಯ್ಕೆಗೆ ಸಂಬಂಧಿಸಿದವು. ಆದರೆ, ಕವಿತೆಗೆ ಸಹಜವಾದ ಒಂದು ಶಬ್ದಕೋಶ ಹಾಗೂ ಪದ/ವಾಕ್ಯ ರಚನೆಯ ಬಗೆಗಳು ಇವೆಯೆಂದು ತಿಳಿಯುವುದು ಅಷ್ಟೇನೂ ಸರಿಯಲ್ಲ. ಅದರಲ್ಲೂ ನಡುಗನ್ನಡವು ಈ ನಿಟ್ಟಿನಲ್ಲಿ ತುಂಬಾ ಪರಿಣಾಮ ಬೀರಿದೆ. ವಾಸ್ತವವಾಗಿ ವಚನಕಾರರು, ಕುಮಾರವ್ಯಾಸ, ಶರೀಫ ಮುಂತಾದ ಯಾವ ಹಳಬರೂ ನಮಗೆ ಮಾದರಿಯಲ್ಲ. ಅವರ ಕವಿತೆ ಎಷ್ಟೇ ಚೆನ್ನಾಗಿದ್ದರೂ ನಮ್ಮ ಕವಿತೆ/ಅನುವಾದ ಹಾಗೆ ಇರುವುದು ಸಾಧ್ಯವಿಲ್ಲ. ವಿಭಕ್ತಿ ಪ್ರತ್ಯಯ, ಕ್ರಿಯಾಪದ, ಪದಗಳು, ವಾಕ್ಯಸ್ವರೂಪ ಯಾವುದೂ ಯಾವುದೂ 'ಸಮಕಾಲೀನ'ವನ್ನು ಒಳಗೊಳ್ಳದೆ ಹಳೆಯದಕ್ಕೆ ಅಂಟಿಕೊಳ್ಳಲು ಸಾಧ್ಯವಿಲ್ಲ. ಹೆಚ್ಚಂದರೆ, ಅವು ಊಟದಲ್ಲಿ ಉಪ್ಪಿನಕಾಯಿ ಆಗಬಹುದೇ ವಿನಾ ಅದೇ ಊಟ ಆಗಬಾರದು. ಹಳೆಯ ಕಾಲದ ಕವಿತೆಗಳೂ ಹೊಸದರಂತೆ ನಳನಳಿಸುವುದು ಹೇಗೆ ಎನ್ನುವುದೇ ದೊಡ್ಡ ಸವಾಲು.

ಇಲ್ಲಿಯೇ ಇನ್ನೊಂದು ಸಮಸ್ಯೆಯೂ ಇದೆ. "ಕವಿತೆಗಳನ್ನು ಓದುವುದು ಹೇಗೆ?" ಎಂಬ ಪ್ರಶ್ನೆಗೆ ಉತ್ತರವನ್ನು ಶಾಲೆ/ಕಾಲೇಜುಗಳಾಗಲೀ ಮಾಧ್ಯಮಗಳಾಗಲೀ ಕೊಡದೆ ಹೋದಾಗ, ಪ್ರತಿಯೊಬ್ಬ ಓದುಗನೂ ತನಗೆ ಇಷ್ಟವಾದ ಮಾದರಿಗಳಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳುತ್ತಾನೆ. ವಾಸ್ತವವಾಗಿ ಪ್ರತಿಯೊಂದು ಕವಿತೆಯೂ ತನ್ನದೇ ಆದ ಓದುವ ಬಗೆಯನ್ನು ಬಯಸುತ್ತದೆ. ಅದು ಕೇವಲ ಲಯಕ್ಕೆ ಸಂಬಂಧಿಸಿದ್ದಲ್ಲ. ಭಾವನೆ, ವಿಚಾರ, ಅನುಭವ ವಿವರ, ಥೀಮು ಮುಂತಾದ ಸಂಗತಿಗಳು ಓದುವ ವೇಗವನ್ನು ಕೂಡ ನಿಯಂತ್ರಿಸುತ್ತವೆ. ಚನ್ನಪ್ಪ ಕಟ್ಟಿಯವರು ಈ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮಾಡಿದ್ದಾರೆ. ಅವರು ನವೋದಯದಂತೆ ನಿಯತವಲ್ಲದಿದ್ದರೂ ನವ್ಯದಂತೆ ಅನಿಯತವಾದ ಲಯಗಳನ್ನು ಎಚ್ಚರಿಕೆಯಿಂದ ಬಳಸಿದ್ದಾರೆ. ಪ್ರಾಸಗಳ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. ಪದ ಮತ್ತು ಪದಸರಣಿಗಳಿಗೆ ಇರುವ ನಾದಗುಣವೂ ಮೂಲದಲ್ಲಿ ಹೇಗಿದೆಯೆಂದು ನಮಗೆ ತಿಳಿಯುವುದು ಸಾಧ್ಯವೇ ಇಲ್ಲ. ಆದರೆ ಭಾವನೆಗಳಿಗೆ ಉಚಿತವಾದ ಪದಗಳ ಆಯ್ಕೆ ಮುಖ್ಯ. ಹಾಗೆ ಆಯ್ದ ಪದಗಳಿಗೂ ತಮ್ಮದೇ ಆದ 'ನಾದಲೀಲೆ' ಇರುತ್ತದೆ. ಈ ಸಂಕಲನದ ಪ್ರತಿಯೊಂದು ಕವನವೂ ಬೇರೆ ಬೇರೆ ಬಗೆಯಲ್ಲಿ ಓದುವುದನ್ನು ಬಯಸುತ್ತದೆ. ಅನುವಾದವೂ ಹಾಗೆಯೇ ಇದೆ. ಶಬ್ದಕೋಶದ ಸಾಮ್ಯ, ನಿಯತಲಯದ ಗೈರುಹಾಜರಿ, ಗದ್ಯಗಂಧಿಯಾದ ವಾಕ್ಯರಚನೆ ಇವೆಲ್ಲವೂ ಕವಿತೆಯ ಸ್ವರೂಪವನ್ನು ನಿರ್ಧರಿಸುತ್ತದೆ. ನಾವು ಅದನ್ನು ಕಂಡುಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ಓದಿಕೊಂಡಾಗ ಮಾತ್ರ ಕವಿತೆಯ ಸಂವಹನ ಅರ್ಥಪೂರ್ಣವಾಗುತ್ತದೆ. ಕಟ್ಟಿಯವರ ಕವಿತೆಗಳಲ್ಲಿ ಸಾಲುಗಳ ಉದ್ದವು ಮೂಲವನ್ನು ಅವಲಂಬಿಸದೆ, ಅರ್ಥಾನುಸಾರಿಯಾಗಿವೆ. ಅದು ಸರಿಯಾದ ಉಪಕ್ರಮ. ಸಾನೆಟ್ ನಂತಹ ಖಚಿತವಾದ ಛಂದೋಬಂಧಗಳನ್ನು ಬೇರೆ ರೀತಿಯಲ್ಲಿ ಬರೆದಾಗ ಪರಿಣಾಮವೇ ಬೇರೆಯಾಗಿಬಿಡುತ್ತವೆ. ಶೇಕ್ಸ್ಪಿಯರನ ಸಾನೆಟ್ ಗಳನ್ನು ಹಾಗೆಯೇ ಕನ್ನಡಕ್ಕೆ ತರುವ ಪ್ರಯತ್ನ ಮಾಡಬೇಕಿತ್ತೆಂದು ನನಗೆ ತೋರುತ್ತದೆ.

ಈ ಸಂಕಲನದ ಎಲ್ಲ ಕವಿತೆಗಳನ್ನೂ ಪರಿಚಯಿಸುವುದು ನನ್ನ ಉದ್ದೇಶವಲ್ಲ. ಹಾಗೆಯೇ ಯಾವುದನ್ನು ಸೇರಿಸಿದ್ದಾರೆ. ಯಾವುದನ್ನು ಬಿಟ್ಟಿದ್ದಾರೆ ಎಂಬ ಖಾನೇಶುಮಾರಿ ಮಾಡುವ ಕೆಲಸವೂ ಅನಗತ್ಯ. ಇಂಗ್ಲಿಷ್‌ನಲ್ಲಿ ಬರೆದಿರುವ ಹತ್ತು ಹಲವು ಮುಖ್ಯ ಕವಿಗಳು ಮತ್ತು ಇಂಗ್ಲಿಷ್ ಮೂಲಕ ನಮಗೆ ಪರಿಚಿತರಾಗಿರುವ ನೆರುಡಾನಂತಹ ಕವಿಗಳು ಇದ್ದಾರೆ. ಇಲ್ಲಿನ ಕವಿತೆಗಳು ಇಂಗ್ಲಿಷ್ ಕಾವ್ಯ ಬೆಳೆದು ಬಂದ ಬಗೆಗೆ ಸಾಕ್ಷಿಯಂತಿದೆ. ಮೊದಮೊದಲ ಸರಳವಾಗಿ ಸಂವಹನವಾಗುವ ಭಾವಗೀತೆಗಳಿಂದ ಮೊದಲಾಗಿ ನೆರುಡಾ, ರಿಲ್ಕ, ಡಿಲಾನ್ ಥಾಮಸ್, ಆಡೆನ್ ಮುಂತಾದವರ ಸಂಕೀರ್ಣ ಬರೆಹಗಳವರೆಗೆ ಇದರ ಹರಹು ಇದೆ. ನಮ್ಮ ಪಠ್ಯಕ್ರಮ ಮತ್ತು ಅನುವಾದದ ಸಂಸ್ಕೃತಿರಾಜಕೀಯದ ಹಿನ್ನೆಲೆಯಲ್ಲಿ ನಮ್ಮ ಮೇಲೆ ಹೇರಲಾದ ಭಾಷೆ/ಕವಿಗಳು ಇಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆಫ್ರಿಕಾ, ಆಸ್ಟ್ರೇಲಿಯಾ, ಭಾರತವನ್ನು ಬಿಟ್ಟಂತೆ ಏಷ್ಯಾದ ಕವಿಗಳ ಗೈರುಹಾಜರಿ ಗಮನ ಸೆಳೆಯುವಂತಿದೆ. ಇದು ಸಹಜ. ಯಾಕೆಂದರೆ ಅವುಗಳ ಮೂಲವೂ ಸುಲಭವಾಗಿ ಲಭ್ಯವಲ್ಲ. ಆದರೂ ಮಹಿಳೆಯರು, ಆಫ್ರಿಕನ್-ಅಮೆರಿಕನ್ ಕವಿಗಳು ಇಲ್ಲಿ ಸಾಕಷ್ಟು ಅವಕಾಶ ಪಡೆದಿದ್ದಾರೆ.

ಕಟ್ಟಿಯವರು ಅನುವಾದಿಸಿರುವ ಹಲವು ಕವಿತೆಗಳು ನನಗೆ ಇಷ್ಟವಾದವು. ಟ್ಯಾಗೋರ್, ಕಮಲಾ ದಾಸ್, ರೂಮಿ, ಗಾಲಿಬ್, ನೆರುಡಾ. ವರ್ಡ್ಸ್‌ ವರ್ತ್, ಗ್ವೆಂಡೊಲಿನ್, ಬ್ರೂಕ್ಸ್, ಎಮಿಲಿ ಡಿಕಿನ್ಸನ್ ಮುಂತಾದವರ ಹಲವು ಕವಿತೆಗಳು ಮನಮುಟ್ಟುತ್ತವೆ. ಇಂಗ್ಲಿಷಿನಲ್ಲಿ ಓದಿರುವ ನಾವು ಇಂಥ ಅನುವಾದಗಳಿಗೆ ನನ್ನಂತಹವರು ಇವಕ್ಕೆ ಸ್ಪಂದಿಸುವ ರೀತಿಗೂ ಹಾಗೆ ಓದಿಲ್ಲದ/ಓದಲಾಗದ ಜನ ಸ್ಪಂದಿಸುವ ರೀತಿಗೂ ವ್ಯತ್ಯಾಸ ಇರುತ್ತದೆ. ಅತ್ಯುತ್ತಮವಾಗಿ ಅನುವಾದವಾಗಿರುವ ಕಥೆ-ಕವಿತೆಗಳಿಗೂ ಈ ಮಾತು ಅನ್ವಯಿಸುತ್ತದೆ. ಬಂಗಾಳೀ ಬರುವವನು ರವೀಂದ್ರರನ್ನು ಬೇರೆ ಯಾವ ಭಾಷೆಯಲ್ಲಿಯೂ ಓದುವುದಿಲ್ಲ. ಆದ್ದರಿಂದ ಕಟ್ಟಿಯವರಂಥ ಹಲವು ಲೇಖಕರ ಪ್ರಯತ್ನಗಳಿಗೆ ಮಹತ್ವವಿದೆ. ಕವಿತೆಯ ಭಾಷೆಯ ಬಗ್ಗೆ ತಮಗಿರುವ ಕೆಲವು ಅನಿಸಿಕೆಗಳನ್ನು ಬದಲಿಸಿಕೊಂಡರೆ ಮತ್ತು ಇಂಥದೇ ವಸ್ತು ಇರಬೇಕು ಎಂಬ ನಿರ್ಬಂಧವಿರದೆ ಇಷ್ಟವಾದ ಕವಿತೆಗಳನ್ನು ಆರಿಸಿಕೊಂಡರೆ ಅವರು ಇನ್ನಷ್ಟು ಮಹತ್ವದ ಕೆಲಸ ಮಾಡಬಹುದು. ಒಬ್ಬನೇ ಕವಿಯ ಕವಿತೆಗಳನ್ನು ಆರಿಸಿಕೊಂಡು ಅನುವಾದಿಸುವುದರಲ್ಲಿಯೂ ಕೆಲವು ಅನುಕೂಲಗಳಿವೆ. ಒಬ್ಬರದೇ ಹಲವು ಕವನಗಳ ಸಂಬಂಧಗಳನ್ನು ಅರಿತುಕೊಂಡಾಗ ಅನುವಾದಕ್ಕೆ ಬೇರೆ ಬಗೆಯ ಚೆಲುವು ಬರುತ್ತದೆ.

ನನಗೆ ಈ ಅವಕಾಶವನ್ನು ಕೊಟ್ಟಿದ್ದಕ್ಕಾಗಿ ಮಿತ್ರರಾದ ಶ್ರೀ ಚನ್ನಪ್ಪ ಕಟ್ಟಿಯವರಿಗೆ ನಾನು ಋಣಿಯಾಗಿದ್ದೇನೆ. ಇಂಥದೊಂದು ಸಂಕಲನದ ಬಗ್ಗೆ ಬರೆಯುವುದೆಂದರೆ ಕವಿತೆ ಅದರ ಅನುವಾದ ಮತ್ತು ಕನ್ನಡವೆಂಬ ಕಿನ್ನರಿಯರ ಹಲವು ನೆಲೆಗಳ ಬಗ್ಗೆ ಯೋಚನೆ ಮಾಡುವ ಸಂತೋಷದ ಕೆಲಸ. ಮುಕ್ಕಾಲು ಶತಮಾನ ಮುಗಿಸಿರುವ, 'ಮುಪ್ಪಿಂದೊಪ್ಪವಳಿಯುವ' ಹಾದಿಯಲ್ಲಿ ಭರದಿಂದ ಸಾಗುತ್ತಿರುವ ನನಗೆ ಈ ಕವಿತೆಗಳ ವಸ್ತು ಕುತೂಹಲ ಹುಟ್ಟಿಸಿತು. ನಂಬಿಕೆಯಿಲ್ಲದವರಿಗೆ ಅಂಜಿಕೆಯೂ ಕಡಿಮೆಯೇನೋ! ಕೊನೆಗೂ ಸಾವು ಬದುಕುವ ಬಗೆಯನ್ನು ಕಲಿಸಬೇಕು. ಕವಿ ಹೇಳಿದಂತೆ, 'ಬಡ ನೂರು ವರುಷಾನ, ಹರುಷಾದಿ ಕಳೆಯೋಣ. ಯಾಕಾರೆ ಕೆರಳೋಣ'. ಎಲ್ಲಕ್ಕಿಂತ ಹೆಚ್ಚಾಗಿ ಕಥೆಗಾರ ಕಟ್ಟಿಯವರು, ತುಂಬಾ ಪ್ರೀತಿ, ಕಾಳಜಿ ಮತ್ತು ಮುತುವರ್ಜಿಗಳಿಂದ ಸಿದ್ಧಪಡಿಸಿರುವ 'ಮೃತ್ಯು ಮುಟ್ಟುವ ಮುನ್ನ'ವನ್ನು ಓದುವ ಅವಕಾಶ ಸಿಕ್ಕಿತು. ಅವರಿಗೆ ಶುಭವಾಗಲಿ. ಅವರ ಪ್ರತಿಭೆಯ ಹೊಳೆ ಇಂತಹುದೇ ಹಲವು ಕಾಲುವೆಗಳಲ್ಲಿ ಹರಿಯುತ್ತಿರಲಿ.


- ಎಚ್.ಎಸ್. ರಾಘವೇಂದ್ರ ರಾವ್

MORE FEATURES

ಅಜ್ಞಾತವೆಂಬುದು ಬಗೆದಷ್ಟೂ ಹಿರಿದಾಗುವ, ಅರಿತಷ್ಟೂ ಆಳವಾಗುವ ಕ್ರಿಯೆ

23-09-2024 ಬೆಂಗಳೂರು

“ಅಜ್ಞಾತವೆಂಬುದು ಬಗೆದಷ್ಟೂ ಹಿರಿದಾಗುವ, ಅರಿತಷ್ಟೂ ಆಳವಾಗುವ, ಒಳಗೆ ಹೊಕ್ಕಷ್ಟೂ ವಿಸ್ತಾರವಾಗುವ ಅಚ್ಚರಿ ಎನ್ನುತ...

ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ: ರಾಜಕುಮಾರ ಮಾಳಗೆ

23-09-2024 ಬೆಂಗಳೂರು

“ಜಿ.ಬಿ.ವಿಸಾಜಿ ಅವರು ಸಾಹಿತ್ಯದ ಜೊತೆಗೆ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಭಾಲ್ಕಿ ತಾಲೂಕು ವರದಿಗಾರ...

ಒಂದು ಅದ್ಭುತ ದೃಶ್ಯ ಕಾವ್ಯ `ಮಹಾಮಹಿಮ ಶ್ರೀ ಜಡೇ ಸಿದ್ಧ ಶಿವಯೋಗಿಗಳ ಲೀಲಾಮೃತ'

22-09-2024 ಬೆಂಗಳೂರು

"ಅವರ ಬರಹದ ಚುಂಬಕ ಶಕ್ತಿಯೇ ಹಾಗೆ, ಅವರ ಕಥೆಗಳಾಗಲೀ, ಕಾವ್ಯವಾಗಲೀ, ಲೇಖನಗಳಾಗಲೀ ಓದಲು ಆರಂಭಿಸಿದರೆ ಮುಗಿಯುವವರೆಗ...