ಎಲ್ಲವನ್ನೂ ಮೀರಿ ನಿಂತ ಒಂದು ಸುಂದರ ನಿರೂಪಣೆಯುಳ್ಳ ಅನುಭವ ಕಥನವಿದು..


""ಒಂದು ಪುರಾತನ ನೆಲದಲ್ಲಿ" ಪ್ರವಾಸ ಕಥನದ ರೂಪದಲ್ಲಿರುವ ಒಂದು ಮಿಶ್ರ ತಳಿಯ ಇತಿಹಾಸ. ಇದು ಈಜಿಪ್ಟ್ ಸೇರಿದ ಇಬ್ಬರು ಭಾರತೀಯರ ಕಥೆಯನ್ನು ಹೇಳುತ್ತದೆ. ಅವರಲ್ಲಿ ಒಬ್ಬ 12ನೆಯ ಶತಮಾನದಲ್ಲಿ ಬದುಕಿದ್ದ ಬೊಮ್ಮ ಎಂಬ ಹೆಸರಿನ ಗುಲಾಮ. ಇನ್ನೊಬ್ಬರು ಸ್ವತಃ ಲೇಖಕರಾದ ಅಮಿತಾವ್ ಘೋಷ್. ಆ ಗುಲಾಮನ ಯಜಮಾನ ಇನ್ಯಾರಿಗೋ ಬರೆದ ಪತ್ರಗಳಲ್ಲಿ ಉಲ್ಲೇಖಿತವಾದ ಗುಲಾಮನ ಹೆಸರನ್ನು ಲೇಖಕರು ನೋಡುತ್ತಾರೆ," ಎನ್ನುತ್ತಾರೆ ಪಾರ್ವತಿ ಜಿ.ಐತಾಳ್. ಅವರು ಮಿತ್ರಾ ವೆಂಕಟ್ರಾಜ್ ಅವರಒಂದು ಪುರಾತನ ನೆಲದಲ್ಲಿ’ ಕೃತಿ ಕುರಿತು ಬರೆದ ವಿಮರ್ಶೆ..

"ಒಂದು ಪುರಾತನ ನೆಲದಲ್ಲಿ " ಕನ್ನಡದ ಖ್ಯಾತ ಲೇಖಕಿ ಮಿತ್ರಾ ವೆಂಕಟ್ರಾಜ್ ಅವರು ಇಂಗ್ಲಿಷ್ ನಿಂದ ಅನುವಾದಿಸಿದ ಜ್ಞಾನಪೀಠ ಪ್ರಶಸ್ತಿ ವಿಜೇತ ಭಾರತೀಯ ಆಂಗ್ಲ ಲೇಖಕ ಅಮಿತಾವ್ ಘೋಷ್ ಅವರ "ಇನ್ ಆನ್ ಆಂಟೀಖ್ ಲ್ಯಾಂಡ್" ಅನ್ನುವ ಕೃತಿಯ ಅನುವಾದ. ಆಂಗ್ಲ ಶೀರ್ಷಿಕೆಯನ್ನು ನೋಡುತ್ತಲೇ ನೆನಪಿಗೆ ಬರುವುದು ರೊಮ್ಯಾಂಟಿಕ್ ಕವಿ ಪಿ.ಬಿ.ಷೆಲ್ಲಿಯ "ಒಝಿಮ್ಯಾಂಡಿಯಾಸ್" ಅನ್ನುವ ಸಾನೆಟ್. ಎರಡೂ ಕಡೆ ಇರುವುದು ಕಣ್ಣೆತ್ತುವ ತನಕವೂ ಕಾಣಿಸುವಂಥ ಮರಳುಗಾಡಿನ ಮಧ್ಯಪ್ರಾಚ್ಯ ದೇಶವಾದ ಈಜಿಪ್ಟ್. ಆದರೆ ಸಾಮ್ಯವು ಅಲ್ಲಿಗೆ ಮುಗಿಯುತ್ತದೆ. "ಇನ್ ಆನ್ ಆಂಟಿಕ್ ಲ್ಯಾಂಡ್" ಎಂಬ ಈ ಕಾದಂಬರಿಯು ಪೂರ್ತಿ ಭಿನ್ನವಾದ ಒಂದು ವಿಸ್ತಾರವನ್ನು ಹೊಂದಿದೆ. ಭಾರತದಲ್ಲಿ ಮಾನವಶಾಸ್ತ್ರದ ಕುರಿತು ತಮ್ಮ ಶಿಕ್ಷಣವನ್ನು ಮುಗಿಸಿ ಮುಂದಿನ ಸಂಶೋಧನೆಗಾಗಿ ಪ್ರಾಚೀನ ಕಾಲದಲ್ಲಿ ನಾಗರಿಕತೆಯ ಶಿಖರವನ್ನೇರಿದ್ದ ಈಜಿಪ್ಟ್ಗೆ ಪ್ರಯಾಣ ಬೆಳೆಸುವ ಲೇಖಕ ಅಮಿತಾವ್ ಘೋಷ್ ಓದುಗರೊಂದಿಗೆ ತಮ್ಮ ಅನುಭವಗಳನ್ನೂ ಅನ್ನಿಸಿಕೆಗಳನ್ನೂ ಹಂಚಿಕೊಳ್ಳುವುದು ಈ ಕೃತಿಯ ಉದ್ದೇಶ. ಇದು ಕಾದಂಬರಿಯೇ, ಪ್ರವಾಸ ಕಥನವೇ, ಆತ್ಮ ಕಥನವೇ- ಯಾವ ಪ್ರಕಾರಕ್ಕೆ ಸೇರಿದ್ದು ಅನ್ನುವುದು ಚರ್ಚೆಗೆ ಬಿಟ್ಟ ವಿಷಯ. ಎಲ್ಲವನ್ನೂ ಮೀರಿ ನಿಂತ ಒಂದು ಸುಂದರ ನಿರೂಪಣೆಯುಳ್ಳ ಅನುಭವ ಕಥನ ಇಲ್ಲಿದೆ ಅನ್ನುವುದಂತೂ ಸ್ಪಷ್ಟ.

"ಒಂದು ಪುರಾತನ ನೆಲದಲ್ಲಿ" ಪ್ರವಾಸ ಕಥನದ ರೂಪದಲ್ಲಿರುವ ಒಂದು ಮಿಶ್ರ ತಳಿಯ ಇತಿಹಾಸ. ಇದು ಈಜಿಪ್ಟ್ ಸೇರಿದ ಇಬ್ಬರು ಭಾರತೀಯರ ಕಥೆಯನ್ನು ಹೇಳುತ್ತದೆ. ಅವರಲ್ಲಿ ಒಬ್ಬ 12ನೆಯ ಶತಮಾನದಲ್ಲಿ ಬದುಕಿದ್ದ ಬೊಮ್ಮ ಎಂಬ ಹೆಸರಿನ ಗುಲಾಮ. ಇನ್ನೊಬ್ಬರು ಸ್ವತಃ ಲೇಖಕರಾದ ಅಮಿತಾವ್ ಘೋಷ್. ಆ ಗುಲಾಮನ ಯಜಮಾನ ಇನ್ಯಾರಿಗೋ ಬರೆದ ಪತ್ರಗಳಲ್ಲಿ ಉಲ್ಲೇಖಿತವಾದ ಗುಲಾಮನ ಹೆಸರನ್ನು ಲೇಖಕರು ನೋಡುತ್ತಾರೆ. ಆ ಗುಲಾಮನ ಅಸ್ತಿತ್ವದ ಬಗೆಗಿನ ಕುತೂಹಲವು ಅವರನ್ನು ಅದರ ಬೆನ್ನು ಹತ್ತುವಂತೆ ಮಾಡುತ್ತದೆ.

ಲೇಖಕರು 1980ರಲ್ಲಿ ಆ ಗುಲಾಮನ ಬದುಕಿನ ವಿವರಗಳನ್ನು ಹುಡುಕುತ್ತ ಈಜಿಪ್ಟಿಗೆ ಪ್ರವಾಸ ಕೈಗೊಳ್ಳುತ್ತಾರೆ. 10 ವರ್ಷ ಕಾಲ ತೆಗೆದುಕೊಳ್ಳುವ ಆ ಪ್ರವಾಸವು ಅಲೆಗ್ಸಾಂಡ್ರಿಯಾದಿಂದ 2 ಗಂಟೆಗಳಷ್ಟು ದೂರದ, ಮುಗ್ಧ ಜನರಿಂದ ತುಂಬಿದ ಒಂದು ಪುಟ್ಟ ಹಳ್ಳಿಗೆ ಅವರನ್ನು ಕರೆದೊಯ್ಯುತ್ತದೆ. ಅಲ್ಲಿ ಅವರು ಬೇರೆ ಬೇರೆ ರೀತಿಯ, ಬೇರೆ ಬೇರೆ ಸ್ವಭಾವದ ಜನರನ್ನು ಭೇಟಿಯಾಗುತ್ತಾರೆ- ಹೊರಜಗತ್ತನ್ನು ಸದಾ ತಮ್ಮ ಅರಳು ಕಂಗಳಿಂದ ನೋಡುವ ಜನತೆ. ಡೊಳ್ಳುಹೊಟ್ಟೆಯ ದೈತ್ಯಾಕಾರದ ಅಬೂ ಆಲಿ, ಚುರುಕು ಕಣ್ಣುಗಳ ಅವನ ವೈರಿ ಇಮಾಮ್, ನೇಯ್ಗೆಯೇ ವೃತ್ತಿಯಾಗಿರುವ ಝಗ್ಗಲೌಲ್, ಎಳೆಯ ವಯಸ್ಸಿನ ಶಾಂತ ಸ್ವಭಾವದ. ಗಲ್ಫ್ ಯುದ್ಧದ ಆರಂಭದಲ್ಲೇ ಬಾಗ್ದಾದಿನಲ್ಲಿ ಸಿಕ್ಕಿ ಹಾಕಿಕೊಳ್ಳುವ ನಬೀಲ್-ಇವರೆಲ್ಲರೂ ಅತ್ಯಂತ ಉತ್ಸುಕ ಮುಸಲ್ಮಾನ ಮಂದಿ. ಅವರೆಲ್ಲರಿಗೂ ಅಮಿತಾವ್ ಅಂದರೆ ತುಂಬಾ ಆಕರ್ಷಣೆ. ಆದರೆ ಅರ್ಥವಾಗದವನು.

ಆದರೆ ಭಾರತದಿಂದ ಈಜಿಪ್ಟಿನ ವರೆಗೆ ಆ ಗುಲಾಮನ ಪ್ರವಾಸವನ್ನು ವಿಶ್ಲೇಷಿಸುತ್ತ ವಾಸ್ತವ ಮತ್ತು ಕಲ್ಪನೆಗಳನ್ನು ಪ್ರತ್ಯೇಕಿಸುವಲ್ಲಿ ಅವರು ಅವನಿಗೆ ನೆರವಾಗುತ್ತಾರೆ. ಆ ಗುಲಾಮನಲ್ಲಿ ಲೇಖಕರು ಒಂದು ಅಗ್ರಾಹ್ಯವೂ ನಿಗೂಢವೂ ಆದ ಬಂಧವನ್ನು ಕಾಣುತ್ತಾರೆ. ಆತನೊಂದಿಗೆ ಆತ ಬದುಕಿದ 800 ವರ್ಷಗಳ ಹಿಂದಿನ ಅನುಭವ ಪಲ್ಲಟವನ್ನು ಹಂಚಿಕೊಳ್ಳುತ್ತಾರೆ. ಅವನು ಅವರಿಗೆ ಅಲ್ಲಿ ಇರುವ ಹಕ್ಕು ಮತ್ತು ಅಧಿಕಾರಗಳನ್ನು ಕೊಡುತ್ತಾನೆ. ವರ್ತಮಾನ ಮತ್ತು ಪ್ರಾಚೀನಗಳ ನಡುವೆ ಹಾಗೂ ತನ್ನ ಸ್ವಂತ ಜೀವನ ಮತ್ತು ಗುಲಾಮನ ಬದುಕುಗಳ ನಡುವೆ ಸಂಚರಿಸುತ್ತ ಪುಳಕಗೊಳ್ಳುವ ಲೇಖಕರನ್ನು ( ಲೇಖಕರೇ ಇಲ್ಲಿ ಉತ್ತಮ ಪುರುಷ ನಿರೂಪಕರು ಕೂಡಾ ಆಗಿದ್ದಾರೆ)ನಾವಿಲ್ಲಿ ಕಾಣುತ್ತೇವೆ. ವಿವರಗಳು ಮತ್ತು ಘಟನೆಗಳಿಂದ ತುಂಬಿದ ಗುಲಾಮನ ಬದುಕು ಮಾತ್ರವಲ್ಲದೆ ಲೇಖಕರು ಮತ್ತು ಗುಲಾಮ ವಾಸವಾಗಿರಲು ಬಂದ ಒಂದು ಖಾಸಗಿ ಜಗತ್ತನ್ನು ಅದ್ವಿತೀಯ ರೂಪದಲ್ಲಿ ಕೃತಿ ಕಟ್ಟಿ ಕೊಡುತ್ತದೆ.

"ಒಂದು ಪುರಾತನ ನೆಲದಲ್ಲಿ" ಕೃತಿಯಲ್ಲಿ ಈಜಿಪ್ಟಿನ ಎರಡು ಹಳ್ಳಿಗಳಲ್ಲಿ ಲೇಖಕರು ಬದುಕಿದ ಕಾಲ, ಎಂಟು ವರ್ಷಗಳ ನಂತರ ಅವರ ಮರು ಪ್ರಯಾಣ ಹಾಗೂ 12ನೆಯ ಶತಮಾನದ ಉತ್ತರ ಆಫ್ರಿಕಾದ ಯಹೂದಿ ವರ್ತಕ ಬೆನ್ ಯಿಜು ಮತ್ತು ಅವನ ಭಾರತೀಯ ಗುಲಾಮ ಬೊಮ್ಮನ ಬದುಕು ಎಂದು ಹೀಗೆ ಮೂರು ವಿಭಿನ್ನ ಕತೆಗಳಿವೆ..

ಇದು ಅಮಿತಾವ್ ಘೋಷ್ ಅವರು 1992ರಲ್ಲಿ ಬರೆದ ಕಾದಂಬರಿ. ಇಲ್ಲಿ ಎರಡು ಕಥನಗಳಿವೆ. ಮೊದಲನೆಯದು ಮಾನವ ಶಾಸ್ತ್ರೀಯ ಕಥನ. ಲೇಖಕರು ನೈಲ್ ನದಿಯ ಮುಖಜ ಭೂಮಿಗೆ ತಮ್ಮ ಸಂಶೋಧನಾ ಪ್ರಬಂಧ ಬರೆಯುವ ಸಮಯದಲ್ಲಿ (1980-81) ಮತ್ತು ಕೆಲವು ವರ್ಷಗಳ ನಂತರ (1988) ಈಜಿಪ್ಟಿನ ಹಳ್ಳಿಗಳಿಗೆ ಕೊಡುವ ಭೇಟಿಯ ಸುತ್ತ ತಿರುಗುವ ಕಥನ. ಎರಡನೆಯದು ಇದಕ್ಕೆ ಸಮಾಂತರವಾಗಿ ಲೇಖಕರು 12ನೆಯ ಶತಮಾನದ ಯಹೂದಿ ವರ್ತಕ ಬೆನ್ ಯಿಜು ಮತ್ತು ಬೊಮ್ಮ ಎಂಬ ಗುಲಾಮನ ಕುರಿತಾದ ಐತಿಹಾಸಿಕ ಕಥನವನ್ನು ಕೈರೋದ ಗೆನಿಝಾಗಳಲ್ಲಿದ್ದ ದಾಖಲೆ-ದಸ್ತಾವೇಜುಗಳ ಸಹಾಯದಿಂದ ಮರುನಿರ್ಮಾಣ ಮಾಡುವ ಕಥನ.

ಲೇಖಕರು ತಮ್ಮ ಸಂಶೋಧನಾ ಪ್ರಬಂಧಕ್ಕೋಸ್ಕರ ಲಟೈಫಾ ಎಂಬ ಈಜಿಪ್ಟಿನ ಹಳ್ಳಿಯೊಂದಕ್ಕೆ 1980ರಲ್ಲಿ ಹೋಗಿ 12ನೆಯ ಶತಮಾನದ ಬೆನ್ ಯಿಜು ಮತ್ತು ಅವನ ಭಾರತೀಯ ಗುಲಾಮ ಬೊಮ್ಮನ ಕುರಿತು ನಡೆಸುವ ತನಿಖೆಯಿಂದ ಕಾದಂಬರಿ ಆರಂಭವಾಗುತ್ತದೆ. ಲಟೈಫದಲ್ಲಿ ಅವರು ಭೇಟಿಯಾಗುವ ಶೇಖ್ ಮೂಸಾ ಎಂಬ ಹಿರಿಯ ವ್ಯಕ್ತಿ, ಜಬೀರ್, ಅಹಮದ್, ಮೊದಲಾದವರೊಂದಿಗೆ ಅವರು ಆತ್ಮೀಯ ಸಂಬಂಧ ಬೆಳೆಸಿಕೊಳ್ಳುತ್ತಾರೆ. ಹಿಂದೂ ಧರ್ಮದ ಬಗ್ಗೆ, ಆ ಧರ್ಮದ ಅನುಯಾಯಿಗಳ ಬಗ್ಗೆ ಅರೆಬರೆಯಾಗಿ ತಿಳಿದುಕೊಂಡ ಅವರು ಮುಗ್ಧತೆಯಿಂದಲೋ ಅಜ್ಞಾನದಿಂದಲೋ ಕೇಳುವ ಪ್ರಶ್ನೆಗಳಿಗೆ ಏನು ಹೇಳುವುದೆಂದು ತಿಳಿಯದೆ ಲೇಖಕರು ಗೊಂದಲದಲ್ಲಿ ಬೀಳುತ್ತಾರೆ. ಆ ಭೇಟಿಯ ಕೊನೆಗೆ ಅವರು ಪಕ್ಕದ ನಷಾವಿ ಎಂಬ ಇನ್ನೊಂದು ಹಳ್ಳಿಗೆ ಸಂಶೋಧನೆಯ ಬೆನ್ನು ಹತ್ತಿ ಹೋಗುತ್ತಾರೆ. ಅಲ್ಲಿ ಅವರು ಭೇಟಿಯಾಗುವ ಹಲವಾರು ಜನರು, ಅವರ ಜೀವನ ಕ್ರಮ, ಅವರ ನಡುವಣ ಸಂಬಂಧಗಳ ಸ್ವರೂಪ, ತಮ್ಮನ್ನು ಮುಸಲ್ಮಾನನಾಗಿ ಪರಿವರ್ತಿಸಲು ಅವರು ಮಾಡುವ ಪ್ರಯತ್ನ ಮುಂತಾದ ವಿಷಯಗಳನ್ನು ಲೇಖಕರು ಹಲವಾರು ವಿವರಗಳೊಂದಿಗೆ ವರ್ಣಿಸುತ್ತಾರೆ.

ಲೇಖಕರು 1981ರಲ್ಲಿ ಈಜಿಪ್ಟ್ ಬಿಡುತ್ತಾರೆ. ಮುಂದಿನ ಹಲವಾರು ವರ್ಷಗಳನ್ನು ಅವರು ಅರೇಬಿಕ್ ಭಾಷೆ ಕಲಿಯುತ್ತ ಬೆನ್ ಯಿಜು ತನ್ನ ದಸ್ತಾವೇಜುಗಳಲ್ಲಿ ಬರೆಯುತ್ತಿದ್ದ ಆಡುಭಾಷೆಯನ್ನು ಕಲಿಯುತ್ತ ಕಳೆಯುತ್ತಾರೆ. ಅನಂತರ 1988ರಲ್ಲಿ ಪುನಃ ಅವೇ ಹಳ್ಳಿಗಳಿಗೆ ಮರಳಿ ಬರುತ್ತಾರೆ. ತಾವು ಕಲಿತ ಆಡುಭಾಷೆಯು ಆ ಹಳ್ಳಿಗರು ಮಾತನಾಡುವ ಭಾಷೆಯೇ ಎಂದು ತಿಳಿದಾಗ ಅವರಿಗೆ ಸಂತೋಷವಾಗುತ್ತದೆ.

ಲೇಖಕರು ಕೈರೋದಲ್ಲಿ ತಮ್ಮನ್ನು ದಸ್ತಾವೇಜುಗಳ ಉಗ್ರಾಣಕ್ಕೆ ಕರೆದೊಯ್ದ ಘಟನೆಗಳ ಸರಣಿಯನ್ನು ವಿವರಿಸುತ್ತಾರೆ. ಕೈರೋ ಗೆನಿಝಾ( ದಸ್ತಾವೇಜುಗಳ ಉಗ್ರಾಣ) ದಲ್ಲಿದ್ದ ಆ ದಸ್ತಾವೇಜುಗಳನ್ನು ಅವರು ಪ್ರತಿಲಿಪಿಸುತ್ತಾರೆ. ಅವು ಬೆನ್ ಯಿಜೂನ ಪ್ರಾರ್ಥನಾಮಂದಿರ(ಸಿನಗಾಗ್)ದ ಆಸ್ತಿ. ಅನೇಕ ಶತಮಾನಗಳಿಂದ ಜತನದಿಂದ ಕಾದಿರಿಸಿದ್ದ ಅವನ್ನು ಅನಂತರ ಆಸಕ್ತಿಯುಳ್ಳ ವಿವಿಧ ವಿದ್ವಾಂಸರ ಗಮನಕ್ಕೆ ತರಲಾಗಿತ್ತು.

ಕೃತಿಯ ಪೀಠಿಕೆಯಲ್ಲಿ ಮಧ್ಯಪ್ರಾಚ್ಯದ ಕಾಸ್ಮೋಪೊಲಿಟನ್ ಜಗತ್ತಿನ ಒಂದು ಐತಿಹಾಸಿಕ ಚೌಕಟ್ಟನ್ನು ನಾವು ಕಾಣುತ್ತೇವೆ. ಧರ್ಮಯುದ್ಧ ಮಾಡುವವರು ಜೆರುಸಲೇಮನ್ನು ತಲುಪಿದ 12ನೆಯ ಶತಮಾನ ಮತ್ತು ಏಡನ್ ಬಂದರಿನಲ್ಲಿರುವ ಖಾಬ್-ಇಬ್ಸ್-ಎ-ಇಷಾಕ್ ಎಂಬ ವರ್ತಕನು ಇಂಡಿಯಾದಲ್ಲಿರುವ ತನ್ನ ಗೆಳೆಯ ಬೆನ್ ಯಿಜೂಗೆ ಒಂದು ಪತ್ರ ಬರೆದ ಕಾಲದ ವರೆಗೆ ವಿವರಗಳಿವೆ.

ಜೆರುಸಲೇಮಿನಿಂದ ಪ್ರಕಟವಾಗುತ್ತಿದ್ದ ಝಿಯೋನ್ ಎಂಬ ಒಂದು ಪತ್ರಿಕೆಯಲ್ಲಿ ಕಂಡ "ಮಧ್ಯಪೂರ್ವದ ಯಹೂದಿಯರ ಚರಿತ್ರೆಗೆ ಹೊಸ ಆಕರಗಳು" ಎಂಬ ಲೇಖನದಲ್ಲಿ ಉಲ್ಲೇಖಿತವಾದ ಒಂದು ಪತ್ರವು ಹೇಗೆ ಏಡನ್ ಬಂದರಿನ ಒಬ್ಬ ವರ್ತಕನು ಬೆನ್ ಯಿಜು ಎಂಬ ಯಹೂದಿ ವರ್ತಕನೊಂದಿಗೆ ಸಂಬಂಧವನ್ನಿರಿಸಿಕೊಂಡಿದ್ದ ಮತ್ತು ಬೊಮ್ಮ ಎಂಬ ಅವನ ಗುಲಾಮನ ಬಗ್ಗೆ ಕಾಳಜಿಯನ್ನಿಟ್ಟಕೊಂಡಿದ್ದ ಎಂಬುದನ್ನು ತಿಳಿಸುತ್ತದೆ. ಹಾಗೆಯೇ ಅದೇ ರೀತಿಯ ಇನ್ನೊಂದು ಪತ್ರವೂ ಇನ್ನೊಂದೆಡೆ ಸಿಗುತ್ತದೆ. ಲೇಖಕರ ಕುತೂಹಲ ಮತ್ತು ಹುಡುಕಾಟಗಳು ಇಲ್ಲಿಂದ ಆರಂಭವಾಗುತ್ತವೆ. ದಸ್ತಾವೇಜುಗಳನ್ನು ಅಧ್ಯಯನ ಮಾಡುತ್ತ ಲೇಖಕರಿಗೆ ತಮ್ಮ ಮೊದಲ ಸಂದರ್ಶನದಲ್ಲಿ ಭೇಟಿಯಾದ ಜನರ ನೆನಪಾಗುತ್ತದೆ. ಅಲ್ಲದೆ ಹೊಸಬರ ಪರಿಚಯವೂ ಆಗುತ್ತದೆ.

ಬೆನ್ ಯಿಜೂ ಭಾರತಕ್ಕೆ ಯಾಕೆ ಓಡಿ ಹೋದ? ಒಂದು ರಕ್ತಪಾತದಿಂದ ತಪ್ಪಿಸಿಕೊಂಡು ಅಶು ಎಂಬ ಗುಲಾಮಿ ಹುಡುಗಿಯನ್ನು ಮದುವೆಯಾಗಲು ಎಂದು ಅನಂತರ ಗೊತ್ತಾಗುತ್ತದೆ. ಕೊನೆಯಲ್ಲಿ ತನ್ನ ಮಾತೃ ದೇಶಕ್ಕೆ ವರ್ಷಗಳ ನಂತರ ಬಂದು ಅವನು ಈಜಿಪ್ಟ್ ಸೇರುತ್ತಾನೆ. ಹೆಸರಿಲ್ಲದ ಗುಲಾಮನ ಬಗ್ಗೆ ಲೇಖಕರು ಮತ್ತೆ ತನಿಖೆ ನಡೆಸಿ ಕೊನೆಗೆ ಅವನ ಹೆಸರು ಬೊಮ್ಮ ಎಂದು ಗೊತ್ತಾಗುತ್ತದೆ. ಬೊಮ್ಮ ಬೆನ್ ಯಿಜೂ ಕೈಕೆಳಗೆ ತರಬೇತಿ ಪಡೆದು ಕೊನೆಗೆ ಆ ವರ್ತಕನ ವ್ಯಾಪಾರ-ವಹಿವಾಟುಗಳನ್ನು ತಾನೇ ಕೈಗೆ ತೆಗೆದುಕೊಳ್ಳುತ್ತಾನೆ. ಬೆನ್ ಯಿಜೂ ಮತ್ತು ಬೊಮ್ಮರ ನಡುವಣ ಸೌಹಾರ್ದಯುತ ಸಂಬಂಧವು 18 ಮತ್ತು 19ನೆಯ ಶತಮಾನಗಳಲ್ಲಿ ಕಾಲ-ದೇಶಗಳ ಅಂತರದಲ್ಲಿ ಅಮೆರಿಕಾದಲ್ಲಿ ಬೆಳೆದ ಗುಲಾಮಿ ಪದ್ಧತಿಯ ಪರಿಕಲ್ಪನೆಗೆ ತೀರಾ ವ್ಯತಿರಿಕ್ತವಾದುದು ಎಂದು ಲೇಖಕರ ಅಧ್ಯಯನದಿಂದ ವ್ಯಕ್ತವಾಗುತ್ತದೆ. ಅಮೆರಿಕಾದ ಕ್ರೌರ್ಯ ಮತ್ತು ದೌರ್ಜನ್ಯಗಳ ಲವಲೇಶವೂ ಇಲ್ಲಿಲ್ಲ.

ಲೇಖಕರು ಈಜಿಪ್ಟಿನ ನಿವಾಸಿಗಳನ್ನು ಮುಗ್ಧರು, ಹಿಂಸೆ, ಭಯ ಮತ್ತು ಯುದ್ಧಗಳ ಬಗ್ಗೆ ಏನೂ ತಿಳಿಯದವರು, ತಮ್ಮ ದೈನಂದಿನ ಗೃಹೋಪಯೋಗಿ ವಸ್ತುಗಳ ಬಗ್ಗೆ ಕೂಡಾ ಏನೂ ಗೊತ್ತಿಲ್ಲದವರು ಎಂದು ಚಿತ್ರಿಸುತ್ತಾರೆ. ಲೇಖಕರು ಭಾರತೀಯನಾದ್ದರಿಂದ(ಒಂದು ವಸಾಹತುಶಾಹಿ ಸಮಾಜದಿಂದ ಬಂದವರಾದ್ದರಿಂದ)ಇದು ಒಂದು ವ್ಯಂಗ್ಯವಾಗಿ ಕಾಣುತ್ತದೆ. ಈ ದೃಷ್ಟಿಯಿಂದ ಲೇಖಕರು ತಾವೇ ಇತರರನ್ನು ಬಗ್ಗಿಸುವ ಒಬ್ಬ ಕಾಲನೈಸರ್ ಆಗಿ ಕಾಣುತ್ತಾರೆ. ಅವರು ಹೇಳುವ ಬೆನ್ ಯಿಜುನ ಕಥೆ ವಸಾಹತುಶಾಹಿಯ ದಸ್ತಾವೇಜುಗಳಿಂದ ತೆಗೆದುಕೊಂಡದ್ದಾಗಿದ್ದು, ಮತ್ತು ಓರ್ವ ಮಾನವಶಾಸ್ತçಜ್ಞರಾಗಿ ಅಲ್ಲಿ ಲೇಖಕರ ಪಾತ್ರವೂ ಇರುವುದರಿಂದ ಇದು ಒಂದು ವ್ಯಂಗ್ಯವೇ ಹೌದು. ವಸಾಹತುಶಾಹಿ ಕಥನದ ಅಂತರಾರ್ಥ ಮತ್ತು ಓರ್ವ ಮಾನವಶಾಸ್ತ್ರಜ್ಞರಾಗಿ ಅವರ ನಿಲುವುಗಳಲ್ಲಿ ವಿರೋಧಾಭಾಸವಿದ್ದಂತೆ ಕಾಣುತ್ತದೆ. ಲೇಖಕರನ್ನು ಈಜಿಪ್ಟಿನಲ್ಲಿ ಗೌರವಿಸುತ್ತಾರೆ. ಅದಕ್ಕೆ ಕಾರಣ ಅವರಿಗೆ ತಮ್ಮ ದೇಶದ ಅಭಿವೃದ್ಧಿಯ ಮಟ್ಟ ಈಜಿಪ್ಟ್ಗಿಂತ ಹಿರಿದು ಎಂಬ ಅರಿವು. ಅವರು ತಮ್ಮ ತಾಂತ್ರಿಕ ಹಿರಿಮೆಯ ಬಗ್ಗೆ ಆಗಾಗ ಮಾತನಾಡುತ್ತಾರೆ. ಮೂಲಭೂತವಾಗಿ ಇದು ಪಾಶ್ಚಾತ್ಯ ದೃಷ್ಟಿಯಿಂದ ಮಾಡುವ ಶ್ರೇಣೀಕರಣ. ಅವರು ಪಾಶ್ಚಾತ್ಯವಲ್ಲದ ಒಂದು ದೇಶದವರಾದರೂ ಒಬ್ಬ ಇಮಾಮನನ್ನು ಪಾರಂಪರಿಕ ಔಷಧ ಪ್ರಯೋಗಗಳ ಬಗ್ಗೆ ಕೇಳುತ್ತಿರುವಾಗ ಅವರಿಗೆ ನಾಚಿಕೆಯೆನ್ನಿಸುತ್ತದೆ. ಇದು ಪಾಶ್ಚಾತ್ಯ ಪ್ರಭಾವದಿಂದಾದುದು. ಅದು ಅವರಿಗೆ ತಮ್ಮದೇ ದೇಶದ ತಂತ್ರಗಳನ್ನು ಸಂಶಯದಿಂದ ನೋಡುವಂತೆ ಮಾಡುತ್ತದೆಯೆಂದು ಅನ್ನಿಸುತ್ತದೆ. ಈ ರೀತಿಯ ಮನೋಭಾವವನ್ನು ಇ.ಎಂ. ಫರ‍್ಸ್ಟರನ "ಅ ಪ್ಯಾಸೇಜ್ ಟು ಇಂಡಿಯಾ" ದಲ್ಲೂ ಕಾಣಬಹುದು. ಆದರೆ ಅಲ್ಲಿ ಲೇಖಕರು ಇಂಗ್ಲಂಡಿನವರು.

ಮಿತ್ರಾ ವೆಂಕಟ್ರಾಜ್ ಅವರ ಅನುವಾದ ತುಂಬಾ ಸೊಗಸಾಗಿದೆ. ಅಮಿತಾವ್ ಘೋಷ್ ಅವರದು ಅನುವಾದ ಮಾಡಲು ಕ್ಲಿಷ್ಟವೆನ್ನಿಸುವಂಥ ಉದ್ದುದ್ದ ವಾಕ್ಯಗಳು. ಇಂಗ್ಲಿಷ್ ಭಾಷೆಯ ವಾಕ್ಯಗಳ ದೀರ್ಘ ಶೈಲಿಯು ಕನ್ನಡಕ್ಕೆ ಸರಿ ಹೊಂದುವುದಿಲ್ಲ. ಆದರೆ ಮಿತ್ರಾ ಅವರ ಅನುವಾದವು ಅವೆಲ್ಲವನ್ನೂ ಸರಿದೂಗಿಸಿಕೊಂಡು ಸ್ಪಷ್ಟ ಅಭಿವ್ಯಕ್ತಿಯ ಮೂಲಕ ಓದುಗರನ್ನು ತಲುಪುವ ಗುಣವನ್ನು ಹೊಂದಿದೆ. ಅಲ್ಲದೆ ಕೃತಿಯ ಗಂಭೀರ ಶೈಲಿಗೆ ಅನುಸಾರವಾಗಿ ಅದಕ್ಕೆ ಸರಿಹೊಂದುವAಥ ಭಾರದ ಪದಗಳನ್ನು ಬಳಸಿ ಅವರು ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಉದ್ದಕ್ಕೂ ಆಗಾಗ ಬರುವ ಯಹೂದಿ ಮತ್ತು ಅರಬೀ ಹೆಸರುಗಳು ಓದಿನ ಓಘಕ್ಕೆ ತಡೆಯೆನ್ನಿಸಿದರೂ ಎಲ್ಲವನ್ನೂ ತಮ್ಮ ಸುಂದರವಾದ ಭಾಷಾ ಬಳಕೆಯ ಮತ್ತು ವಾಕ್ಯರಚನೆಯ ಮೂಲಕ ಅವರು ನವಿರಾಗಿಸಿದ್ದಾರೆ. ಹೀಗೆ " ಒಂದು ಪುರಾತನ ನೆಲದಲ್ಲಿ" ಕನ್ನಡ ಸಾಹಿತ್ಯಕ್ಕೆ ಒಂದು ಒಳ್ಳೆಯ ಸೇರ್ಪಡೆಯಾಗಿದೆಯೆಂದು ನಿಸ್ಸಂದೇಹವಾಗಿ ಹೇಳಬಹುದು.

- ಪಾರ್ವತಿ ಜಿ.ಐತಾಳ್


MORE FEATURES

ಜಗತ್ತಿನ ಶ್ರೇಷ್ಟ ಕಾದಂಬರಿಗಳ ಪಟ್ಟಿಗೆ ಸೇರೋ ಕೃತಿಯಿದು

26-12-2024 ಬೆಂಗಳೂರು

“ಜಗತ್ತಿನ ಶ್ರೇಷ್ಠ ಕಾದಂಬರಿಳ ಪಟ್ಟಿಗೆ ಸೇರೋ ಈ ಕಾದಂಬರಿಯ ಅನುವಾದ ಸರಾಗವಾಗಿ ಓದಿಸಿಕೊಂಡು ಹೋದರೂ ಅಲ್ಲಲ್ಲಿ ಹಂ...

ತೇಜಸ್ವಿ ಸಾಹಿತ್ಯವು ವಿಶ್ವದ ಅಗ್ರಮಾನ್ಯ ಸಾಹಿತ್ಯ

26-12-2024 ಬೆಂಗಳೂರು

“ತೇಜಸ್ವಿ ಸಾಹಿತ್ಯವನ್ನು ಮೆಚ್ಚುಗೆ, ಟೀಕೆ ಮತ್ತು ವಿಶ್ಲೇಷಣೆಗೆ ಈಡು ಮಾಡಿದ, ಸಮಾಜಮುಖಿಯಲ್ಲಿ ಪ್ರಕಟವಾದ ಆಯ್ದ ...

ನಾನು ಎಂದೋ ಬರೆದು ಮರೆಯುತ್ತಿರುವ ಕಾಲಂ..

26-12-2024 ಬೆಂಗಳೂರು

“ನಾನು ಎಂದೋ ಬರೆದು ಮರೆಯುತ್ತಿರುವ ಕಾಲಂ. ಇಂದೂ ಕೂಡ ನನ್ನ ಬೆನ್ನು ಹತ್ತಿರುವ ಕಾರಣಕ್ಕೆ, ಕೆಲವು ಉತ್ತಮವಾದ ಕಂತ...