Date: 19-03-2025
Location: ಬೆಂಗಳೂರು
ಬೆಂಗಳೂರು: ವಿಜಯ ಕರ್ನಾಟಕ -ಸ್ನೇಹ ಬುಕ್ ಹೌಸ್ ಯುಗಾದಿ ವಿಶೇಷಾಂಕಕ್ಕಾಗಿ ಏರ್ಪಡಿಸಿದ್ದ ರೋಚಕ ಕಥಾಸ್ಪರ್ಧೆಯ ತೀರ್ಪು ಬಹಿರಂಗಗೊಂಡಿದ್ದು, ಹಾಸನದ ಸುಣ್ಣೆ ಸಿಂಧು 10 ಸಾವಿರ ರೂ. ಮೊತ್ತದ ಪ್ರಥಮ ಬಹುಮಾನ ಪಡೆದಿದ್ದಾರೆ. ಕೋಲಾರದ ಡಾ.ಶ್ರೀನಿವಾಸ್ ಪ್ರಸಾದ್ ಡಿ.ಎಸ್. ಐದು ಸಾವಿರ ರೂ. ಮೊತ್ತದ ದ್ವಿತೀಯ ಬಹುಮಾನ ಹಾಗೂ ಮಡಿಕೇರಿಯ ಶತೃ ಮೂರು ಸಾವಿರ ರೂ. ಮೊತ್ತದ ತೃತೀಯ ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ಸುಪ್ತಸಿಂಧು ಅವರ 'ನಿನಗೆಷ್ಟುನೆನಪಿದೆ' ಕಥೆ, ಡಾ. ಶ್ರೀನಿವಾಸ ಪ್ರಸಾದ್ ಅವರ 'ಛದ್ಮ' ಕಥೆ ಹಾಗೂ ಶತೃ ಅವರ 'ಕತೆ ಹೇಳ್ತಿಯಾ ಕತೆ' ಕಥೆಗಳು ಬಹುಮಾನಕ್ಕೆ ಪಾತ್ರವಾಗಿವೆ. ಇದಲ್ಲದೆ ಬೆಂಗಳೂರಿನ ಕಾವ್ಯಾ ಅವರ 'ಕಾರಾಗೃಹ' ಹಾಗೂ ಮೈಸೂರಿನ ಕಾರ್ತಿಕ್ ಕೃಷ್ಣ ಅವರ 'ಪುಸ್ತಕದಂಗಡಿಯಲ್ಲಿ ಸಿಕ್ಕಿದ ಹುಡುಗಿ' ಕಥೆಗಳು ತಲಾ 2,000 ರೂ. ಮೊತ್ತದ ಮೆಚ್ಚುಗೆ ಬಹುಮಾನಕ್ಕೆ ಪಾತ್ರವಾಗಿವೆ.
ಕಥಾಸ್ಪರ್ಧೆಗೆ ಕಾದಂಬರಿಕಾರ ಯತಿರಾಜ್ ವೀರಾಂಬುಧಿ, ಚಿತ್ರ ನಿರ್ದೇಶಕ ಕೆ.ಎಂ.ಚೈತನ್ಯ ಹಾಗೂ ರೋಚಕ ಕಥೆಗಳ ಕಾದಂಬರಿಕಾರ ಕೌಶಿಕ್ ಕೂಡುರಸ್ತೆ ತೀರ್ಪುಗಾರರಾಗಿದ್ದರು. "ರೋಚಕ ಕಥೆಗಳನ್ನು ಬರೆಯುವವರು ಇದ್ದಾರೆ ಎಂಬ ಸಂಗತಿಯೇ ಮುದ ನೀಡಿತು. ಕಥಾವಸ್ತು, ನಿರೂಪಣೆ, ಶೈಲಿ, ಭಾಷೆಯ ಸ್ಪುಟತೆ ಇವೆಲ್ಲವುಗಳನ್ನು ಗಮನಿಸಿ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ,'' ಎಂದು ಯತಿರಾಜ್ ವೀರಾಂಬುಧಿ ಹೇಳಿದರು. "ಸ್ಪರ್ಧೆಗೆ ಬಂದ ಸ್ಪಂದನೆ ಚೆನ್ನಾಗಿದ್ದರೂ, ಹಲವರು ಸಿದ್ಧಸೂತ್ರಗಳಿಗೆ ಕಟ್ಟುಬಿದ್ದುದು ಕಂಡುಬಂತು. ಈ ದಿಸೆಯಲ್ಲಿ ಗಮನಹರಿಸಿ ಕೃಷಿ ಮಾಡಬಹುದಾದ ಸಾಧ್ಯತೆ ಇಲ್ಲಿದೆ,'' ಎಂದು ಕೆ.ಎಂ.ಚೈತನ್ಯ ಹೇಳಿದರು. 'ರೋಚಕ ಕಥೆಗಳನ್ನು ಬರೆಯಲು ಹಲವರು ಉತ್ಸುಕತೆ ತೋರಿದ್ದು ಕಂಡು ಖುಷಿಯಾಯಿತು. ಇದರಿಂದ ಪತ್ತೆದಾರಿ ಪ್ರಕಾರಕ್ಕೆ ಪ್ರೋತ್ಸಾಹ ಸಿಕ್ಕಂತಾಗಿದೆ,'' ಎಂದು ಕೌಶಿಕ್ ಕೂಡುರಸ್ತೆ ಹೇಳಿದರು.
ಬಳ್ಳಾರಿ: ಕಳೆದ ಕೆಲವು ವರ್ಷಗಳಂತೆ ಈ ವರ್ಷವೂ “ಸಂಗಂ ಸಂಸ್ಥೆ ಬಳ್ಳಾರಿ”ಯು 'ಸಂಗಂ ಸಾಹಿತ್ಯ ಪುರಸ್ಕಾ...
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ‘ಡಾ.ಕೂ.ಗಿ.ಗಿರಿಯಪ್ಪ ಮತ್ತು ಶ್ರೀಮತಿ ಲಕ್ಷ್ಮೀದೇವಮ್ಮ ದತ್ತಿ ...
ಬೆಂಗಳೂರು: ಕರ್ನಾಟಕ ಪ್ರಕಾಶಕರ ಸಂಘ ಹಾಗೂ ಬಿ.ಎಂ.ಶ್ರೀ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ವ...
©2025 Book Brahma Private Limited.