Date: 27-08-2022
Location: ಬೆಂಗಳೂರು
“ಯಾವುದೆ ಒಳನುಡಿ ಕಾಲಾಂತರದಲ್ಲಿ ರೂಪುಗೊಂಡಿರುವಂತದ್ದು ಮತ್ತು ಅದು ಅತ್ಯಂತ ಸಹಜವಾಗಿ ಅಂದರೆ ಪ್ರಾಕ್ರುತಿಕವಾಗಿ ಬೆಳೆದಿರುತ್ತದೆ. ಇದಕ್ಕೆ ಎದುರಾಗಿ ಶಿಶ್ಟಕನ್ನಡವನ್ನು ಒಂದು ಸಮಾಜದ ಇತರೇತರ ಕಾರಣಗಳಿಗಾಗಿ ಬೆಳೆಸಿರಲಾಗಿರುತ್ತದೆ. ನಿಸರ್ಗಸಹಜವಾಗಿ ಬೆಳೆದ ಒಳನುಡಿಗಳ ರಚನೆಯನ್ನು ತಪ್ಪು ಎನ್ನುವುದು ನಿಸರ್ಗವನ್ನು ತಪ್ಪು ಎಂದಂತೆ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಧ್ವನಿ ವ್ಯತ್ಯಯ ಕುರಿತು ಚರ್ಚಿಸಿದ್ದಾರೆ.
ಯಾರಾದರೂ ಪಕ್ಕದಲ್ಲಿ ಇರುವವರಿಗೆ ಗೊತ್ತಾಗದಂತೆ ಪಿಸುಪಿಸು ಮಾತಾಡುವಾಗ ಬಹುತೇಕ ದ್ವನಿಗಳನ್ನು ಪಕ್ಕದಲ್ಲಿರುವವರಿಗೆ ಕೇಳದಂತೆ ಮುಚ್ಚಿಡಬಹುದು. ಆದರೆ, ಸ್ ಸ್ ಎಂಬ ದನಿ ಮಾತ್ರ ಕೇಳುತ್ತಿರುತ್ತದೆ. ಈ ದನಿಯನ್ನು ಮುಚ್ಚಿಡುವುದು ತುಂಬಾ ಕಶ್ಟ. ಇದು ಉಳಿದ ದ್ವನಿಗಳಿಗಿಂತ ಹೆಚ್ಚು ಕೇಳುತ್ತದೆ. ಈ ದ್ವನಿಯನ್ನು ಉಚ್ಚಾರ ಮಾಡುವಾಗ ಉಸಿರಾಡುವ ಗಾಳಿ ಹೊರಹೋಗುವಾಗ ನಾಲಿಗೆಯನ್ನು ನಡುವೆ ತೊರೆಗಳಂತೆ ಜಾಗ ಮಾಡಿ ಗಾಳಿ ಹರಿದುಹೋಗುವುದಕ್ಕೆ ಅವಕಾಶ ಮಾಡಲಾಗುತ್ತದೆ, ಇಲ್ಲವೆ ಸಹಜ ಹೋಗುವ ಗಾಳಿಗೆ ಅಡೆತಡೆ ಉಂಟು ಮಾಡಲಾಗುತ್ತದೆ. ಆ ಮೂಲಕ ಈ ದ್ವನಿಯನ್ನು ಹುಟ್ಟಿಸಲಾಗುತ್ತದೆ. ಇದಕ್ಕೆ ಪಾರಂಪರಿಕವಾಗಿ ಊಶ್ಮ ದ್ವನಿಗಳು ಎಂದು ಹೆಸರು.
ಕನ್ನಡ ಲಿಪಿಯಲ್ಲಿ ಸ್, ಶ್, ಷ್ ಎಂಬ ಮೂರು ಲಿಪಿಗಳು ಈ ದ್ವನಿಗಳಿಗೆ ಇವೆ. ಆದರೆ, ಉಚ್ಚರಣೆಯಲ್ಲಿ ಸ್ ಮತ್ತು ಶ್ ಎಂಬ ಎರಡು ಉಲಿಗಳು ಇವೆ. ಇವುಗಳಲ್ಲಿ ಸ್ ದ್ವನಿಯು ಮೂಲಕನ್ನಡದಿಂದಲೆ ಅದಕ್ಕೂ ಹಿಂದೆ ಮೂಲದ್ರಾವಿಡದಿಂದಲೆ ಬೆಳೆದು ಬಂದಿದೆ. ಸ್ ದ್ವನಿಯನ್ನು ಮೂಲದ್ರಾವಿಡಕ್ಕೆ ಮತ್ತೆ ಕಟ್ಟಿದೆ. ಶ್ ದ್ವನಿಯು ಅನ್ಯ ಬಾಶೆಗಳ ಸಂಪರ್ಕದಿಂದ ಕನ್ನಡಕ್ಕೆ ಬಂದಿದೆ. ಮುಕ್ಯವಾಗಿ ಸುಮಾರು ಎರಡು ಸಾವಿರ ವರುಶಗಳ ಹಿಂದೆ ಆದ ಪ್ರಾಕ್ರುತ ಮತ್ತು ತುಸು ಆನಂತರದ ಸಂಸ್ಕ್ರುತ ಬಾಶೆಗಳ ನಿರಂತರ ಸಂಪರ್ಕದಿಂದ ಅದು ಕನ್ನಡದಲ್ಲಿ ಉಚ್ಚರಣೆಗೆ ಬಂದಿದೆ. ಹೀಗಾಗಿ
ಕನ್ನಡದ ಆರಂಬದ ಶಾಸನಗಳಲ್ಲಿ ಈ ದ್ವನಿಗಳ ಹಂಚಿಕೆ ವಿವಿದ ಪರಿಸರಗಳಲ್ಲಿ ಸಮನಾಗಿ ಕಾಣಿಸುವುದಿಲ್ಲ. ಅವೆರಡೂ ನಿರಂತರ ವ್ಯತ್ಯಯದಲ್ಲಿ ಬಳಕೆಯಾಗುತ್ತವೆ.
ಉದಾ.: ಅವಿನಾಶಿ-ಅವಿನಾಸಿ, ಬಾಣರಾಸಿ-ಬಾಣರಾಶಿ, ಹಂಸೆ-ಹಂಶೆ
ಇದರೊಟ್ಟಿಗೆ ಪ್ರಾಕ್ರುತ ಮತ್ತು ಸಂಸ್ಕ್ರುತದಿಂದ ಬಂದಿರುವ ಶ್ ದ್ವನಿಯು ಇರುವ ಹಲವಾರು ಪದಗಳಲ್ಲಿಯೂ ಶ್-ಸ್ ವ್ಯತ್ಯಯ ಕಂಡುಬರುತ್ತದೆ. ಇದು ಹಲವೆಡೆ ಸ್ ದ್ವನಿಯಾಗಿ ಬದಲಾಗಿರಬಹುದು. ಉದಾ.: ಶರ್ಕರಾ>ಸಕ್ರಿ, ಸಕ್ಕರೆ, ಇನ್ನೂ ಹಲವೆಡೆ ಇದು ವ್ಯತ್ಯಯವಾಗಿ ಬಳಕೆಯಾಗುತ್ತದೆ. ಅಂದರೆ ಶ್ ಮತ್ತು ಸ್ ಎರಡೂ ದ್ವನಿಗಳು ಬಳಕೆಯಾಗುತ್ತವೆ.
ಉದಾ.: ಶಾಲಾ>ಶಾಲೆ-ಸಾಲಿ, ಶೂರ್ಪನಕ>ಶೂರ್ಪನಕಿ-ಸೂರ್ಪನಕಿ. ಇವುಗಳನ್ನು ಕನ್ನಡ ಶಾಸನಗಳಲ್ಲಿ, ಹಸ್ತಪ್ರತಿಗಳಲ್ಲಿ, ಹಳಗನ್ನಡ ಕಾವ್ಯಗಳಲ್ಲಿ ಹಾಗೆಯೆ ಇಂದಿನ ಕನ್ನಡದ ಬರಹಗಳಲ್ಲಿಯೂ ಕಾಣಬಹುದು. ಇಶ್ಟುಮಟ್ಟಿಗೆ ಈ ದ್ವನಿಗಳ ವ್ಯತ್ಯಯ ಸ್ಪಶ್ಟವಾಗಿ ಕಾಣಿಸುತ್ತದೆ.
ಇನ್ನು ಇಂದಿನ ಕನ್ನಡಗಳಲ್ಲಿ ಈ ದ್ವನಿಗಳ ಬಳಕೆಯನ್ನು ಗಮನಿಸಬಹುದು. ಕನ್ನಡದ ಹೆಚ್ಚಿನ ಒಳನುಡಿಗಳಲ್ಲಿ ಶ್ ದ್ವನಿ ಸಹಜವಾಗಿ ಬೆಳೆದಿದೆ. ಹಾಗಾಗಿ ಶ್ ದ್ವನಿ ಇಂದು ಕನ್ನಡದಲ್ಲಿ ಸಹಜವಾಗಿ ಬಳಕೆಯಲ್ಲಿದೆ ಎಂದು ಹೇಳಬಹುದು. ಆದರೆ ಕೆಲವು ಕನ್ನಡಗಳಲ್ಲಿ ಮುಕ್ಯವಾಗಿ ತಮಿಳುನಾಡಿನ ಕನ್ನಡಗಳಲ್ಲಿ, ಅದರಲ್ಲೂ ಮುಕ್ಯವಾಗಿ ನೀಲಗಿರಿಯ ಕನ್ನಡಗಳಲ್ಲಿ ಶ್-ಸ್ ವ್ಯತ್ಯಯ ಅತ್ಯಂತ ಸಹಜ. ಚಾಮರಾಜ ನಗರ ಕನ್ನಡದಲ್ಲಿ ಸ್ ದ್ವನಿ ಮಾತ್ರ ಬಳಕೆಯಲ್ಲಿದ್ದು ಶ್ ದ್ವನಿ ಬಳಕೆಯಲ್ಲಿ ಇಲ್ಲ. ಚಾಮರಾಜನಗರದ ಮುಕ್ಯವಾದ ಶಕ್ತಿಕೇಂದ್ರವಾದ ಮಲೆಮಾದೇಸ್ವರನ ಹೆಸರನ್ನ ಇಲ್ಲಿ ನೆನಪಿಸಿಕೊಳ್ಳಬಹುದು. ಇಲ್ಲವೆ ಕನ್ನಡದ ಮಹತ್ವದ ಬರಹಗಾರರಲ್ಲಿ ಒಬ್ಬರಾದ ದೇವನೂರು ಮಹದೇವ ಅವರ ಬರಹದಲ್ಲಿ ಇನ್ನೂ ಮುಕ್ಯವಾಗಿ ಅವರ ಉಚ್ಚರಣೆಯಲ್ಲಿ ಶ್ ದ್ವನಿ ಬಾರದಿರುವುದನ್ನು ಮತ್ತು ಶಿಶ್ಟಕನ್ನಡದಲ್ಲಿ ಸ್-ಶ್ ಎರಡೂ ದ್ವನಿಗಳು ಇರುವಲ್ಲಿಯೂ ಸ್ ದ್ವನಿಯ ಬಳಕೆ ಸಹಜವಾಗಿ ಆಗುವುದನ್ನು ಕಾಣಬಹುದು. ಇದಕ್ಕೆ ಕಾರಣ ಚಾಮರಾಜನಗರ ಜಿಲ್ಲೆಯಲ್ಲಿ ಶ್ ದ್ವನಿ ಇಲ್ಲದಿರುವುದು.
ಹಾಗಾದರೆ, ಇಲ್ಲಿ ದ್ವನಿಯ ಉಚ್ಚರಣೆ ಬಗೆಗೆ ಒಂದೆರಡು ಮಾತುಗಳನ್ನಾಡಲು ಅವಕಾಶ ಮಾಡಿಕೊಳ್ಳೋಣ. ಸಾಮಾನ್ಯವಾಗಿ ’ಶ್” ದ್ವನಿಯನ್ನು ಅದರಂತೆಯೆ ಇನ್ನೂ ಕೆಲವು ದ್ವನಿಗಳನ್ನು ಸಹಜವಾಗಿ ಉಚ್ಚಾರ ಮಾಡಲಾರದವರನ್ನು ಹಳ್ಳಿಗಮಾರರು ಎಂದು ಹೇಳುವುದು, ಕೀಳಾಗಿ ಕಾಣುವುದು ಕಂಡುಬರುತ್ತದೆ. ಇದು ಸರಿಯೆ? ಪ್ರತಿಯೊಬ್ಬರಿಗೂ ಅವರವರ ಬಾಶೆಯಲ್ಲಿ ಇರುವ ದ್ವನಿಗಳನ್ನು ಮಾತ್ರವೆ ಸಹಜವಾಗಿ ಗಳಿಸಿಕೊಳ್ಳಲು ಸಾದ್ಯವಾಗುತ್ತದೆ. ಅವರವರ ಬಾಶೆಯಲ್ಲಿ ಇಲ್ಲದಿರುವ ದ್ವನಿಗಳನ್ನು ಯಾರೂ ಪಡೆದುಕೊಳ್ಳಲಾರರು. ಹಾಗಾಗಿ, ಚಾಮರಾಜನಗರ ಕನ್ನಡದಲ್ಲಿ ಇಲ್ಲದ ಶ್ ದ್ವನಿಯನ್ನು ಆ ಕನ್ನಡದ ಯಾರೂ ಸಹಜವಾಗಿ ಪಡೆದುಕೊಳ್ಳಲಾರರು. ಪ್ರಯತ್ನಪೂರ್ವಕವಾಗಿ ಅದನ್ನು ಕಲಿಯಬಹುದಾದರೂ ಇದು ಕೇವಲ ಕೆಲವೆ ಕೆಲವು ಮಂದಿಗೆ ಮಾತ್ರ ಸಾದ್ಯ. ಹಾಗೆ ಶ್ ದ್ವನಿಯ ಉಚ್ಚರಣೆಯನ್ನು ಕಲಿತ ಕೆಲವೆ ಕೆಲವರಲ್ಲಿಯೂ ಆ ದ್ವನಿಯನ್ನು ಎಲ್ಲೆಲ್ಲಿ ಬಳಸಬೇಕೆಂಬ ಅರಿವು ಇರುವುದಿಲ್ಲ. ಅಂದರೆ ಸ್ ದ್ವನಿಗೆ ಹತ್ತಿರದಲ್ಲಿಯೆ ಉಚ್ಚಾರವಾಗುವ ಶ್ ದ್ವನಿಯನ್ನು ಯಾವ ಪದಗಳ ಯಾವ ಪರಿಸರದಲ್ಲಿ ಬಳಸಬೇಕು ಎಂಬುದು ಗೊತ್ತಾಗುವುದಿಲ್ಲ. ಸ್ ದ್ವನಿ ಇರುವ ಕಡೆಯೂ ಶ್ ದ್ವನಿ ಬಳಸಲು ಶುರು ಮಾಡುತ್ತಾರೆ. ಮಯ್ಸೂರು, ಬೆಂಗಳೂರುಗಳಂತ ಕನ್ನಡ ಮಾತಾಡುವ ಪರಿಸರಗಳಲ್ಲಿ ಚಾಮರಾಜನಗರದಿಂದ ಬಂದ ಹಲವರ ಕನ್ನಡದಲ್ಲಿ ಇದನ್ನು ಗಮನಿಸಬಹುದು. ತಮ್ಮ ’ಹಳ್ಳಿತನ”ವನ್ನು ಕಳೆದುಕೊಳ್ಳಬೇಕೆಂದು ಅವರು ಪ್ರಯತ್ನಿಸುತ್ತಿರುತ್ತಾರೆ ಕೂಡ.
ಆದರೆ ಇದೆಲ್ಲ ಅವಶ್ಯಕತೆ ಇಲ್ಲ. ಒಂದು ಒಳನುಡಿಯಲ್ಲಿ ಬಳಕೆಯಲ್ಲಿ ಇರುವ ದ್ವನಿಗಳಲ್ಲಿಯೆ ಕನ್ನಡವನ್ನು ಅತ್ಯಂತ ಸಹಜವಾಗಿ ಬಳಸಬಹುದು. ಶ್ ದ್ವನಿ ಇಲ್ಲದಿರುವುದು ಚಾಮರಾಜನಗರದ ವಿಶೇಶತೆಯೆ ಹೊರತು ಕೊರತೆ ಅಲ್ಲ. ಪ್ರತಿಯೊಂದು ಕನ್ನಡದ ಒಳನುಡಿಗಳೂ ಹೀಗೆ ಹಲವು ವಿಶೇಶತೆಗಳನ್ನು ಹೊಂದಿವೆ. ಕೆಲಕೆಲವು ಕನ್ನಡಗಳು ಕೆಲಕೆಲವು ವಿಶೇಶ ದ್ವನಿಗಳನ್ನು ಹೊಂದಿವೆ ಇಲ್ಲವೆ ಹೊಂದಿಲ್ಲ.
ಈ ವಿಚಾರವನ್ನು ಮಾತಾಡುವ ಮೂಲಕ ಒಂದು ಮಹತ್ವದ ವಿಚಾರವನ್ನು ನಾವು ಗಮನಿಸಬಹುದು. ಯಾವುದೆ ಒಳನುಡಿಯನ್ನು ಶಿಶ್ಟಕನ್ನಡಕ್ಕೆ ತಕ್ಕಂತೆ ಎತ್ತರಿಸುವುದು ಸರಿಯಲ್ಲ ಮತ್ತು ಅವಶ್ಯವಲ್ಲ. ಯಾವುದೆ ಒಳನುಡಿ ಕಾಲಾಂತರದಲ್ಲಿ ರೂಪುಗೊಂಡಿರುವಂತದ್ದು ಮತ್ತು ಅದು ಅತ್ಯಂತ ಸಹಜವಾಗಿ ಅಂದರೆ ಪ್ರಾಕ್ರುತಿಕವಾಗಿ ಬೆಳೆದಿರುತ್ತದೆ. ಇದಕ್ಕೆ ಎದುರಾಗಿ ಶಿಶ್ಟಕನ್ನಡವನ್ನು ಒಂದು ಸಮಾಜದ ಇತರೇತರ ಕಾರಣಗಳಿಗಾಗಿ ಬೆಳೆಸಿರಲಾಗಿರುತ್ತದೆ.
ನಿಸರ್ಗಸಹಜವಾಗಿ ಬೆಳೆದ ಒಳನುಡಿಗಳ ರಚನೆಯನ್ನು ತಪ್ಪು ಎನ್ನುವುದು ನಿಸರ್ಗವನ್ನು ತಪ್ಪು ಎಂದಂತೆ. ಅಂದರೆ ವಿವಿದ ಪರಿಸರಗಳಲ್ಲಿ ಗಿಡಮರಗಳು ವಿಬಿನ್ನವಾಗಿ ಇರುತ್ತವೆ. ಕರ್ನಾಟಕದ ಮಲೆನಾಡಿನಲ್ಲಿ, ಬಯಲುನಾಡಿನಲ್ಲಿ, ಕರಾವಳಿಯಲ್ಲಿ ಹೀಗೆ ವಿವಿದ ಕಡೆ ಈ ಬಿನ್ನತೆಯನ್ನು ಕಾಣಬಹುದು. ಈ ಬಿನ್ನತೆಯನ್ನು ತಪ್ಪು ಎಂದು ಹೇಳುವುದು ಮಾನವ ಉದ್ದಟತನ ಮಾತ್ರವೆ ಆಗಬಹುದು. ನಾವಿಲ್ಲಿ ಗಮನಿಸಬೇಕಿರುವುದು ’ಕನ್ನಡಗಳು” ಎಂಬ ಒಂದು ಅತ್ಯಂತ ಸರಳವಾದ ವಾಸ್ತವವನ್ನು.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.