Date: 07-07-2022
Location: ಬೆಂಗಳೂರು
“ಪ್ರೇಕ್ಷಕ ರಂಗಭೂಮಿ ಎಂದರೆ ರಂಗಸಂಸ್ಕೃತಿಯ ಅಭಿವೃದ್ಧಿ ಹಾಗೂ ವಿಕಾಸ ಸಾಧ್ಯತೆಯ ಸಂವಹನದ ಕ್ಷಿತಿಜ ವಿಸ್ತಾರಗೊಳ್ಳುವುದು. ಇಂತಹ ಮಹತ್ತರ ಸಂಗತಿಗಳನ್ನೇ ನೇಪಥ್ಯಕ್ಕೆ ಜರುಗಿಸುವ ಜಾಣ ಕೆಲಸ ಕೆಲವು ರಂಗಪಂಡಿತರು ಎಸಗುತ್ತಾರೆ” ಎನ್ನುತ್ತಾರೆ ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, ರಂಗಭೂಮಿ ಮತ್ತು ಪ್ರೇಕ್ಷಕ ಪರಂಪರೆಯ ಅವಿನಾಭಾವ ಸಂಬಂಧವನ್ನು ಚರ್ಚಿಸಿದ್ದಾರೆ.
ಮೊನ್ನೆ ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ "ಜತೆಗಿರುವನು ಚಂದಿರ" ನಾಟಕ ಪ್ರದರ್ಶನದ ಸಂದರ್ಭದಲ್ಲಿ ಕೇವಲ ಮೂರ್ನಾಲ್ಕು ಮಂದಿ ಕೆಲಸಗೇಡಿ ಕಿಡಿಗೇಡಿಗಳು ಎರಡು ನಿಮಿಷ ಕಿರುಚಾಡಿ, ಅದೇನೋ ಘೋಷಣೆ ಕೂಗಿ ನೂರಾರು ಮಂದಿ ಪ್ರೇಕ್ಷಕರು ನೋಡುತ್ತಿದ್ದ ನಾಟಕ ನಿಲ್ಲಿಸಿದ ಸುದ್ದಿ ಬಂದಿದೆ. ಘಟನೆಯನ್ನು ಖಂಡಿಸಿದ ಹತ್ತಾರು ಹೇಳಿಕೆಗಳು ಪ್ರಕಟಗೊಂಡಿವೆ. ತನ್ಮೂಲಕ ಪ್ರಯೋಗಶೀಲ ಸಂಗತಿಯೊಂದು ಸಾಮಾಜಿಕ ಜಾಲತಾಣಗಳಲ್ಲೇ ಲಯಗೊಳ್ಳುವ ಸಾಧ್ಯತೆಗಳು. ಆನವಟ್ಟಿಯಂತಹ ಹೋಬಳಿ ಮಟ್ಟದ ದೊಡ್ಡದಾದ ಹಳ್ಳಿಯೊಂದರಲ್ಲಿ ಜರುಗಿದ ಘಟನೆ ಇದು. ಅದು ಅಸಂಘಟಿತ ಪ್ರೇಕ್ಷಕ ಪರಂಪರೆಗೆ ದಿವಿನಾದ ಸಾಕ್ಷಿ. ಅಷ್ಟಲ್ಲದೇ ಅದರ ಜತೆಗೆ....ಚಂದಿರನ ಅಡ್ಡಿಪಡಿಸಿದ ಅಡ್ನಾಡಿಗಳ ಒಳ ಹುನ್ನಾರ ಅಲ್ಲಗಳೆಯಲಾಗದು.
ಈ ಹಿಂದೆ ನಮ್ಮೆಲ್ಲ ಹಳ್ಳಿ, ಹೋಬಳಿ, ಪುಟ್ಟ ಪಟ್ಟಣಗಳಲ್ಲಿ ಕಂಪನಿ ನಾಟಕಗಳು ಸಹೃದಯ ಪ್ರೇಕ್ಷಕರ ಸಂಪೂರ್ಣ ಸಹಕಾರದೊಂದಿಗೆ ಜರುಗುತ್ತಿದ್ದವು. ಇಂತಹ ಕಿಡಿಗೇಡಿಗಳನ್ನು ಗದರಿಸಿ, ಬುದ್ದಿ ಹೇಳಿ ಅವರನ್ನೇ ಕೂಡಿಸಿ ನಾಟಕ ನೋಡುವಂತೆ ಮಾಡುತ್ತಿದ್ದರು. ಅದು ಯಶಸ್ವಿ ನಾಟಕ ಪ್ರದರ್ಶನದ ಯಶಸ್ಸು ಆಗಿರಬಲ್ಲದು. ಇತ್ತೀಚೆಗೆ ಅಂತಹ ಪ್ರೇಕ್ಷಕ ಪರಂಪರೆಯೇ ಕಣ್ಮರೆಯಾಗಿದೆ. ತನ್ಮೂಲಕ ಸಾಂಸ್ಕೃತಿಕ ಮತ್ತು ಸಹೃದಯ ಸಮಾಜವೊಂದರ ಕಣ್ಮರೆಯಾಗಿದೆ. ಅಂದು ವೃತ್ತಿ ರಂಗಭೂಮಿಯ ನಾಟಕ ಕಂಪನಿಗಳು ಸಹೃದಯ, ಸಂಪ್ರೀತಿ ಪ್ರೇಕ್ಷಕ ಪರಂಪರೆಯನ್ನು ಸಾಂಪ್ರದಾಯಿಕವಾಗಿ ಕಟ್ಟಿ ಬೆಳೆಸಿದ್ದವು. ಅಂತಹ ಪ್ರೇಕ್ಷಕ ಪಡೆಯ ಸಾಂಘಿಕ ಮತ್ತು ಸಾಂಸ್ಥಿಕ ಪರಂಪರೆಗೆ ನಾಂದಿ ಹಾಡಿದ್ದವು.
ಹೌದು, ಯಶಸ್ವಿ ನಾಟಕವೊಂದರ ಕುರಿತು ಮಾತಾಡುವಾಗ ಎಂಥವರಿಗೂ ಆಧುನಿಕ ರಂಗಭೂಮಿ ಸಂದರ್ಭದಲ್ಲಿ ನಿರ್ದೇಶಕ ಪರಂಪರೆಯತ್ತ ಆದ್ಯಗಮನ. ಹಾಗೇನೆ ವೃತ್ತಿರಂಗಭೂಮಿಯ ಕಂಪನಿ ನಾಟಕಗಳ ಸಂದರ್ಭದಲ್ಲಿ ನಟನ ಪರಂಪರೆಯದು ಧುತ್ತನೆ ನೆರವಿಗೆ ನಿಲ್ಲುವ ನಿಲುವು. ಆದರೆ ನಮ್ಮೆಲ್ಲ ಪ್ರೊಸಿನಿಯಮ್ ಥಿಯೇಟರ್ ಪ್ರದರ್ಶನಗಳು ಪ್ರೇಕ್ಷಕರೆಂಬ ಐಕಾನ್‌ಗಳ ಮೂಲಕವೇ ಸಾಂಸ್ಕೃತಿಕ ಮೌಲ್ಯ ಗಳಿಸಿವೆಯೆಂಬ ದ್ಯಾಸವೇ ಅವಕ್ಕೆ ಇರಲ್ಲ. ಆದರೆ ವೃತ್ತಿರಂಗಭೂಮಿ ಮಾತ್ರ ಪ್ರೇಕ್ಷಕರನ್ನು ಪ್ರಭುಸ್ವರೂಪದಲ್ಲಿ ಕಾಣುತ್ತಾ ಬಂದಿದೆ. ಹೊಸ ಅಲೆಯ ರಂಗಭೂಮಿ ಪ್ರೇಕ್ಷಕ ರಂಗಭೂಮಿ ಬೆಳೆಸುವ ಗೋಜಿಗೆ ಹೆಚ್ಚು ಹೋಗಲಿಲ್ಲ. ಪ್ರಯುಕ್ತ ಆನವಟ್ಟಿಯಂತಹ ಪ್ರಕರಣಗಳ ಹುಯಿಲಾಟ.
ಪ್ರೇಕ್ಷಕ ರಂಗಭೂಮಿ ಎಂದರೆ ರಂಗಸಂಸ್ಕೃತಿಯ ಅಭಿವೃದ್ಧಿ ಹಾಗೂ ವಿಕಾಸ ಸಾಧ್ಯತೆಯ ಸಂವಹನದ ಕ್ಷಿತಿಜ ವಿಸ್ತಾರಗೊಳ್ಳುವುದು. ಇಂತಹ ಮಹತ್ತರ ಸಂಗತಿಗಳನ್ನೇ ನೇಪಥ್ಯಕ್ಕೆ ಜರುಗಿಸುವ ಜಾಣ ಕೆಲಸ ಕೆಲವು ರಂಗಪಂಡಿತರು ಎಸಗುತ್ತಾರೆ. ಅಷ್ಟೇ ಯಾಕೆ ಕೆಲವೊಮ್ಮೆ ಹ್ಯಾವಕ್ಕೆ ಬಿದ್ದಂತೆ ನಿರ್ದೇಶಕ ಹಾಗೂ ನಟನಾ ಪರಂಪರೆಗಳ ಪೈಪೋಟಿ. ತಂತ್ರಗಳ ಬಳಕೆ ಕುರಿತೇ ಹೆಚ್ಚು ಹೆಚ್ಚು ಚರ್ಚೆಯ ಒಣಪಾಂಡಿತ್ಯಗಳ ಮೆರೆದಾಟ. ಅದರಲ್ಲೂ ನಟಿಗಿಂತಲೂ ನಟನ ಕುರಿತಾದ ಮೆಚ್ಚುಗೆಗಳ ಮೇಲಾಟ. ಅದೇನೆ ಇರಲಿ ನಾಟಕದ ನೋಡುಗ ಅವರ ಪಾಲಿಗೆ ಅಗ್ಗದ ಗಿರಾಕಿಯಂತೆ ಕಾಣಿಸಿರಬಹುದೇ.? ಸಹೃದಯ ಪ್ರೇಕ್ಷಕ ಸಂಸ್ಕೃತಿ ಕುರಿತು ಗಂಭೀರ ಚಿಂತನೆಗಳು ಮಹತ್ವದ ಸ್ಥಾನ ಪಡೆದಿಲ್ಲವೇಕೆ.?
ತುಂಬಾ ತುಟ್ಟಿ ಶ್ಯಾಣೇತನದ ಬುದ್ದಿಜೀವಿ ರಂಗವಿದ್ವಾಂಸರು ಎಲ್ಲರಂತೆ ಸಾಮಾನ್ಯರಲ್ಲ. ಅಪಾರ ರಂಗಾನುಭವ, ಜಾಗತಿಕ ಮಟ್ಟದ ರಂಗಪಾಂಡಿತ್ಯ ಹೊಂದಿದವರೆಂಬ ಬಿರುದಾಂಕಿತರು. ಅಂತಹ ಖ್ಯಾತಿವಂತ ರಂಗನಿರ್ದೇಶಕರು ಮನುಷ್ಯ ಕೇಂದ್ರಿತ ಸಂವೇದನೆಗಳನ್ನೇ ನಾಟಕದ ಆತ್ಮಗಳೆಂಬಂತೆ ಪ್ರೊಡಕ್ಷನ್ ಸಿದ್ಧಮಾಡುತ್ತಾರೆ. ಆದರೆ ಇವರಿಗೆ, ಇವರ ನಾಟಕಗಳನ್ನು ನೋಡುವ ಪ್ರೇಕ್ಷಕನೂ ಓರ್ವ ಜೀವಂತ ಮನುಷ್ಯನೆಂಬ ಎಳ್ಳರ್ಧ ಕಾಳಿನಷ್ಟಾದರೂ ಖಬುರು, ಪ್ರೀತಿ, ಗೌರವ ಇರುವುದಿಲ್ಲವೆಂದರೆ ಇವರ ಪ್ರತಿಭಾಶಾಲಿತನಕ್ಕೇನರ್ಥ.? ಅದಲ್ಲದಿದ್ದರೆ ಪ್ರೇಕ್ಷಕ ಸಂಸ್ಕೃತಿ ಒಂದು ಬೃಹತ್ ಪರಂಪರೆಯಾಗಿ ರೂಪುಗೊಳ್ಳಬೇಕಿತ್ತಲ್ಲವೇ.?
ಸೋಜಿಗವೆಂದರೆ ಮನುಷ್ಯಪ್ರಜ್ಞೆಯ ಕುರಿತ ತರಹೇವಾರಿ ಇಸಂಗಳನ್ನು ತಮ್ಮ ನಾಟಕಗಳಲ್ಲಿ ತುರುಕುತ್ತಾರೆ. ಹೀಗೆ ತುರುಕುವ ಇವರು ಪ್ರೇಕ್ಷಕನ ಸಂವೇದನಾಶೀಲ ಸಹೃದಯತೆ ಮರೆತರೆ ಹೇಗೆ.? ಪ್ರೇಕ್ಷಕ ರಂಗಭೂಮಿಯ ಲವಲೇಶ ನೆನಪು ಇಡದಷ್ಟು ಈಪಾಟಿ ಜೋಬದ್ರಗೇಡಿತನ ಇವರನ್ನು ಕಾಡಿದ್ದಾದರೂ ಯಾಕೆ.?
ಸಿನೆಮಾ, ನಾಟಕ, ಭಾಷಣ, ಪುಸ್ತಕ ಇತರೆ ಎಲ್ಲ ಸಾಂಸ್ಕೃತಿಕ ಜ್ಞಾನಶಿಸ್ತು ಪ್ರದರ್ಶನಗಳ ಕುರಿತು ನಿಕಷದ ಚಿಂತನೆಗಳು ಅಭಿವ್ಯಕ್ತಿಯ ಸ್ವರೂಪ ಪಡೆದುಕೊಳ್ಳುವಾಗ ಪ್ರೇಕ್ಷಕ, ಕೇಳುಗ, ಓದುಗ ಸಹೃದಯತೆಯ ಮಹತ್ವದ ಸ್ಥಾನವನ್ನು ಅಲಂಕರಿಸುತ್ತಾನೆಂಬುದು ಮರೆಯಲಾಗದು. ನಮ್ಮ ಪರಂಪರಾಗತ ಸಂಕಥನ ಪಾಠ್ಯಗಳಲ್ಲಿ ಇದೆಲ್ಲ ಉಲ್ಲೇಖನೀಯ ವಿಷಯ .
ಅದರಲ್ಲೂ ವಿಶೇಷವಾಗಿ ವೃತ್ತಿರಂಗಭೂಮಿಯಲ್ಲಿ ಹಲವು ಸಾಂಸ್ಕೃತಿಕ ಪರಂಪರೆಗಳು ಶಿಖರಪ್ರಾಯದ ಉಲ್ಲೇಖಿತ ಮಟ್ಟದಲ್ಲಿವೆ. ಅಲ್ಲಿ ಪ್ರಮುಖವಾಗಿ ನಟನಾ ಚಾತುರ್ಯದ ಅಭಿನಯ ಪರಂಪರೆ, ರಂಗ ಸಂಗೀತ ಪರಂಪರೆ, ಭವ್ಯತೆಯ ರಂಗ ಸಜ್ಜಿಕೆಗಳ ಪರಂಪರೆಗಳು ಆಕರ ಸ್ಥಾನ ಪಡಕೊಂಡಿವೆ. ಅಷ್ಟೇ ಮಹತ್ವದ ಮತ್ತೊಂದು ಪರಂಪರೆ ಅಲ್ಲಿದೆ. ಅದುವೇ ಸಹೃದಯ ಪ್ರೇಕ್ಷಕ ಪರಂಪರೆ. ಅದುವೇ ’ಪ್ರೇಕ್ಷಕ ರಂಗಭೂಮಿ’. ಪ್ರೇಕ್ಷಕ ಪರಂಪರೆಯ ರಂಗಭೂಮಿ ಕಟ್ಟಿ ಬೆಳೆಸಿದ್ದು ನಮ್ಮ ಪರಂಪರಾಗತ ಕಂಪನಿ ನಾಟಕಗಳು. ಅಂತೆಯೇ ಅಂದಿನ ಕಂಪನಿಗಳ ಸಾಂಸ್ಕೃತಿಕ ಅಸ್ಮಿತೆ ಅವಿಸ್ಮರಣೀಯ.
ಎಷ್ಟೋ ಬಾರಿ ವೃತ್ತಿರಂಗಭೂಮಿಯ ನಾಟಕಗಳಲ್ಲಿ ಪ್ರೇಕ್ಷಕ ಅದೆಂತಹ ಮಹತ್ವ ಪಡೆದುಕೊಳ್ಳುತ್ತಾನೆಂದರೆ, ಕಲಾವಿದರು ನಾಟಕದ ನಡುವೆಯೇ ಪ್ರೇಕ್ಷಕರೊಂದಿಗೆ ಸಂಭಾಷಣೆಗೆ ಇಳಿಯುವ ಸನ್ನಿವೇಶಗಳು ಸ್ವಾಭಾವಿಕವಾಗಿ ಸೃಷ್ಟಿಯಾಗುತ್ತವೆ. ವೃತ್ತಿ ರಂಗದ ನಟನಟಿಯರು ಯಾವುದೇ ಮಡಿವಂತಿಕೆ ಇಲ್ಲದೇ ಕಾಕಾ, ಅಣ್ಣಾ, ಮಾಮಾ ಅಂತ ಪ್ರೇಕ್ಷಕರೊಡನೆ ಸಂಬೋಧಿಸುವ ಮೂಲಕ ಸಂವಾದಕ್ಕೆ ತೊಡಗುವ ಸಂದರ್ಭೋಚಿತ ಸನ್ನಿವೇಶಗಳು ನಗೆಗಡಲ ಜಳಕ ಮಾಡಿಸುತ್ತವೆ.
ಇನ್ನು ಕಲಾವಿದರಿಂದ ಸುಪರ್ ಹಿಟ್ ಡೈಲಾಗ್ ಕೇಳಿದೊಡನೆ, ಅಂತಹದ್ದೇ ಮನಮೆಚ್ಚುಗೆಯ ರಂಗಸಂಗೀತ ಪ್ರಸ್ತುತಗೊಂಡಾಗ ಸಂತುಷ್ಟರಾದ ಪ್ರೇಕ್ಷಕರು ಸಿಳ್ಳು, ಚಪ್ಪಾಳೆಗಳ ಸುರಿಮಳೆಗೈಯ್ಯುತ್ತಾರೆ. ಅದು ಅಷ್ಟಕ್ಕೆ ತಮಣಿಯಾಗದೇ ಪ್ರೇಕ್ಷಾಂಗಣದ ಸಂತಸ ಸಂಭ್ರಮದ ಎಲ್ಲೆ ಮೀರಿ " ಒನ್ಸ್ ಮೋರ್ " ಎಂದು ಭಾವಪರವಶರಾಗಿ ಜೋರಾಗಿ ಕೂಗುತ್ತಾರೆ. ಅವರ ಮೆಚ್ಚುಗೆಯ ಕೂಗಿಗೆ ಗೌರವ ತೋರಿ ಮತ್ತದೇ ಹಾಡು, ಡೈಲಾಗ್ ಮರುಕಳಿಸುತ್ತವೆ. ಹೀಗೆ ಕಲಾವಿದರು ಮತ್ತು ಪ್ರೇಕ್ಷಕರ ನಡುವೆ ಅಪರೂಪದ ರಂಗಸಂಸ್ಕೃತಿಯೊಂದರ ಸಂಪ್ರೀತಿ, ಸಂವಾದದ, ಸಂವಹನವೇ ಏರ್ಪಡುತ್ತದೆ.
ಇನ್ನೊಂದು ಅಪರೂಪದ ಉಲ್ಲೇಖಾರ್ಹ ಸಂಗತಿ ಪ್ರಸ್ತಾಪಿಸಲೇಬೇಕು. ಅಗ್ದೀ ಸೋಜಾಗಿ ಸೀನ್ ಬೈ ಸೀನ್ ನಾಟಕ ಜರುಗುತ್ತಿರುವುವಾಗ ಅಡ್ಡ ಸೋಗುಗಳ ದೃಶ್ಯಗಳು ಆನುಷಂಗಿಕ ಖುಷಿ ಕೊಡುತ್ತವೆ. ಹೀಗೆ ನಾಟಕದ ನಡುವೆ ಅಡ್ಡ ಸೋಗು ಹಾಕುವವರು ನಾಟಕಕ್ಕೆ ಸಂಬಂಧಪಡದ ನಾಟಕೇತರ ಪ್ರೇಕ್ಷಕರು. ಅವರು ಸ್ಥಳೀಯ ಮಹತ್ವದ ವ್ಯಕ್ತಿಗಳ ಅನುಕರಣೆ ಮಾಡಿ ಪ್ರೇಕ್ಷಕರನ್ನು ವಿನೋದ ಸಾಗರದಲ್ಲಿ ಮುಳುಗೇಳಿಸುತ್ತಾರೆ. ಹಾಗೇನೇ ನಾಟಕ ಕಲಾವಿದರ ಅಭಿನಯ ಮೆಚ್ಚಿ ಬೆಳ್ಳಿ, ಬಂಗಾರ, ಹಣದ ಆಯೇರಿ (ಉಡುಗೊರೆ) ಮಾಡುವ ನಡವಳಿಕೆಗಳಿಗೆ ವೃತ್ತಿ ರಂಗದಲ್ಲಿ ಯಥೇಚ್ಛ ಪ್ರಮಾಣದ ಅವಕಾಶಗಳಿವೆ.
ಹಾಗೆ ಆಯೇರಿ ಮಾಡುವಾಗ ಉಡುಗೊರೆಯ ನಿರೂಪಕ ಉಡುಗೊರೆ ನೀಡುವ ಪ್ರಾಯೋಜಕರು, ಅದನ್ನು ಪಡೆಯುವ ಕಲಾವಿದರ ಕುರಿತು ಬಣ್ಣಬಣ್ಣದ ಮಾತುಗಳನ್ನು ಹೇಳುತ್ತಲೇ ಪ್ರೇಕ್ಷಕರ ಕುರಿತು ಅಷ್ಟೇ ಸ್ವಾರಸ್ಯಕರ ಮಾತುಗಳನ್ನು ತುಂಬಾ ಸೊಗಸಾಗಿ ಹೇಳುತ್ತಾನೆ. ಅದು ಹೀಗಿರುತ್ತದೆ. "ಕನ್ನಡ ನಾಟ್ಯ ಕಲೆಯನ್ನು ಕಂಡು ಕುಲು ಕುಲು ನಗುತ್ತಿರುವ ಕನ್ನಡದ ಕಲಾಭಿಮಾನಿಗಳೇ..." ಹೀಗೆ ಒಮ್ಮೊಮ್ಮೆ ಈ ಪರಿಭಾಷೆ ಅತಿರೇಕದ ಕ್ಷಿತಿಜ ತಲುಪುವ ಪ್ರಸಂಗಗಳೂ ಜರುಗುತ್ತವೆ.
ಹೋಳಿಗೆ ತುಪ್ಪದ ಜೇನು ಹನಿಯಂತಹ ಪ್ರೇಕ್ಷಕರ ಸಾತ್ವಿಕ ಸದಭಿರುಚಿ ಈಗೀಗ ನೇಪಥ್ಯಕ್ಕೆ ಸಾಗಿದೆ. ಸಹೃದಯ ಪ್ರೇಕ್ಷಕರ ಸದಭಿರುಚಿ ನಾಲಗೆಗಳು ಕೆಟ್ಟು ಖರಾಬಾಗಿವೆ. ವರ್ತಮಾನದ ಬಹುತೇಕ ನಾಟಕ ಕಂಪನಿ ಕಲಾವಿದರು ಸದಭಿರುಚಿಯ ಸಾತ್ವಿಕ ವ್ಯಂಜನಕ್ಕೆ ಬದಲು ದಸ್ ನಂಬರ್ ದಮ್ ಬಿರಿಯಾನಿಯ ನಾನ್ವೆಜ್ಜಿನ ಬಿಗ್ ಬಿಗ್ ಲೆಗ್ ಪೀಸುಗಳನ್ನು ಪ್ರೇಕ್ಷಕರ ಹಲ್ಲು ಮತ್ತು ನಾಲಗೆಗಳ ಲಾಲಾಗ್ರಂಥಿಗಳಿಗೆ ಬರೋಬ್ಬರಿ ತಿಕ್ಕಿದ್ದಾರೆ. ಅಂತಹ ರಕ್ಕಸ ಆಹಾರದ ರುಚಿಗೆ ಸಾತ್ವಿಕ ಆಹಾರ ರುಚಿಯ ಅಸ್ಮಿತೆ ನಲುಗಿ ಹೋಗಿದೆ. ಇಂತಹ ಕೊಳಕು ರುಚಿ ತೋರಿಕೆಗೆ ದಶಕಗಳೇ ಗತಿಸಿವೆ. ಸಹೃದಯ, ಸಾತ್ವಿಕ ಸದಭಿರುಚಿ ಪ್ರೇಕ್ಷಕ ಸಂಸ್ಕೃತಿ ಎಂಬುದು ಸತ್ಯಾನಾಶವಾಗಿ ವಿನಾಶದ ಅಂಚಿನಲ್ಲಿದೆ.
ಅದೇನೆ ಇರಲಿ ನಾಟಕ ಕಂಪನಿ ಮಾಲೀಕರಂತೂ ಪ್ರೇಕ್ಷಕ ಪ್ರಭುಗಳನ್ನು ಇವತ್ತಿಗೂ ಆರಾಧಕ ಮನೋಭಾವದಿಂದಲೇ ಉಪಾಸಿಸುತ್ತಲೇ ಬಂದಿದ್ದಾರೆ. ನಮ್ಮ ನಡುವೆ ಅದಕ್ಕೊಂದು ಜೀವಂತ ನಿದರ್ಶನವೇ ಇದೆ. ಹೆಸರಾಂತ ರಂಗನಟ, ಲೇಖಕ ಬೆಂಗೇರಿ ಬಸವರಾಜ ತಾನು ನಡೆಸುತ್ತಿರುವ ನಾಟಕ ಕಂಪನಿಯ (ವಿಶ್ವಭಾರತಿ ರಮ್ಯ ನಾಟಕ ಸಂಘ,ಶಿರೂರ) ಮೇನ್ ಬೋರ್ಡಿನಲ್ಲಿ ಯಾವುದೇ ದೇವರು ದಿಂಡರುಗಳ ಕೃಪೆ ಎಂದು ಹೆಸರು ಬರೆಸದೇ " ಪ್ರೇಕ್ಷಕ ದೇವೋಭವ " ಎಂಬ ಘೋಷವಾಕ್ಯ ಬರೆಸುವ ಮೂಲಕ ಪ್ರೇಕ್ಷಕರ ಬಗ್ಗೆ ತಮಗಿರುವ ಪ್ರೀತಿ, ಆದರಪೂರ್ವಕ ಭಾವನೆಗಳನ್ನು ಬಿಂಬಿಸಿದ್ದಾರೆ. ಅದು ಪ್ರೇಕ್ಷಕ ಪರಂಪರೆಗೆ ಸಲ್ಲುವ ಗೌರವ.
ವರನಟ ಡಾ. ರಾಜಕುಮಾರ ಅವರು ವೃತ್ತಿರಂಗಭೂಮಿಯ ರಂಗಮೌಲ್ಯ ಮೆರೆದ ಪ್ರಾತಃಸ್ಮರಣೀಯರು. ಅಂತೆಯೇ ಅವರು ಪ್ರೇಕ್ಷಕ ಪ್ರಭುಗಳಿಗೆ *ಅಭಿಮಾನಿ ದೇವರುಗಳೆಂತಲೇ* ಕರೆದು ಗೌರವ ತೋರುತ್ತಿದ್ದರು. ಮಾಸ್ಟರ್ ಹಿರಣ್ಣಯ್ಯನವರು ಯಾವತ್ತೂ ಪ್ರೇಕ್ಷಕರನ್ನು *ಅನ್ನದಾತರೆಂದೇ* ಬಾಯ್ತುಂಬಾ ಅಂತಃಕರಣ ತುಂಬಿ ಪ್ರೀತ್ಯಾದರ ತೋರುತ್ತಿದ್ದರು. ಏಣಗಿ ಬಾಳಪ್ಪ ಹಾಗೂ ಇನ್ನು ಕೆಲವು ಕಂಪನಿಗಳಲ್ಲಿ ಪ್ರೇಕ್ಷಕರಿಗೆ ಶರಣು ಹೇಳುವ ಸನ್ನಿವೇಶಗಳು ರಂಗಪ್ರಯೋಗದಂತೆ ಮಹತ್ವದ ಸ್ಥಾನ ಗಳಿಸಿದ್ದವು. ಕ್ಯಾಂಪ್ ಮಾಡಿದ ಊರುಗಳಲ್ಲಿ ಆಯ್ದ ಪ್ರೇಕ್ಷಕರಿಗೆ ಗೌರವ ಪಾಸ್ ನೀಡಿ ನಾಟಕಕ್ಕೆ ಆಮಂತ್ರಿಸುವ ಪದ್ಧತಿಯೇ ಇತ್ತು. ಅದು ಕೇವಲ ಕಂಪನಿಗೆ ನೆರವಿನ ತಂತ್ರವೆಂದು ಭಾವಿಸದೇ ಅದು ಪ್ರೇಕ್ಷಕ ಪ್ರಭುವಿಗೆ ಸಲ್ಲುವ ಸಾಂಸ್ಕೃತಿಕ ಗೌರವವೇ ಆಗಿದೆ.
ವೃತ್ತಿ ರಂಗಭೂಮಿಯ ಆರಂಭದ ಅಂದಿನಿಂದ ಇಂದಿನವರೆಗೂ ಒಂದೂವರೆ ಶತಮಾನ ಕಳೆದರೂ ಪ್ರೇಕ್ಷಕ ಮಹಾಶಯರ ಮೇಲಿನ ಗೌರವ, ಪ್ರೀತಿ, ವಿಶ್ವಾಸ ದಿನೇ ದಿನೇ ಹೆಚ್ಚುತ್ತಲೇ ಬಂದಿದೆ. ಅದೊಂದು ಅಮೂಲ್ಯ ಪರಂಪರೆ ಮಾತ್ರವಾಗಿ ಬೆಳೆಯದೇ ರಂಗಸಂಸ್ಕೃತಿಯ ಅನನ್ಯತೆಯಾಗಿ; ರಂಗ ಮೌಲ್ಯವಾಗಿ ಬೆಳೆಯುತ್ತಲೇ ಮುನ್ನಡೆ ಸಾಧಿಸಿದೆ.
ಇಂತಹ ಸಹೃದಯ ಪರಂಪರೆ ಆಧುನಿಕತೆಯ ಬೇರೊಂದು ರಂಗಪ್ರಕಾರಗಳಲ್ಲಿ ಹುಡುಕಿದರೂ ನಮಗೆ ಕಾಣಸಿಗುವುದಿಲ್ಲ. ಕೊರೊನಾ ಎಂಬ ಕರಾಳ ಕಾಲಘಟ್ಟದಲ್ಲಿ ನಾಟಕಗಳು ನಿಂತುಹೋದವು. ಆದರೆ ಬಹಳಷ್ಟು ಕಡೆಗೆ ಪ್ರೇಕ್ಷಕ ಪ್ರಭುಗಳೆಂಬ ಅನ್ನದಾತರು ಕಲಾವಿದರ ನೆರವಿಗೆ ನಿಂತಿರುವುದು ಸಹೃದಯ ರಂಗಸಂಸ್ಕೃತಿಯ ಪ್ರತೀಕ.
ಪ್ರಾರಂಭಿಸಲ್ಪಟ್ಟ ನಾಟಕ ಇನ್ನೊಂದು ಮಹತ್ವದ ಸನ್ನಿವೇಶದೊಂದಿಗೆ ಮಂಗಲ ಹಾಡುತ್ತದೆ. *ಯಾವತ್ತೂ ನಮ್ಮನ್ನು ಪ್ರೋತ್ಸಾಹಿಸಿ ನಮಗೆ ಅನ್ನ ನೀಡುತ್ತಿರುವ ತಂದೆ ತಾಯಿ ಸ್ವರೂಪಿ ಅನ್ನದಾತ ಪ್ರೇಕ್ಷಕ ಮಹಾಪ್ರಭುಗಳ ಅಡಿದಾವರೆಗಳಿಗೆ ಪೊಡಮೊಟ್ಟು*.... ಎಂಬ ಸವಿನಯ ಪ್ರಾರ್ಥನೆಯ ಮಾತುಗಳು ಲೆಕ್ಚರ್ ಸೀನ್ ಎಂಬ ನುಡಿಗಟ್ಟಿನೊಂದಿಗೆ ಇವತ್ತಿಗೂ ಎಲ್ಲಾ ನಾಟಕ ಕಂಪನಿಗಳು ಪ್ರೇಕ್ಷಕ ಪರಂಪರೆ ಗೌರವಿಸುವ ಪರಿಪಾಠಗಳನ್ನು ತಪ್ಪದೇ ಪರಿಪಾಲಿಸುತ್ತಾ ಬಂದಿವೆ. ಇದು ಕನ್ನಡ ವೃತ್ತಿರಂಗ ಸಂಸ್ಕೃತಿಯ ಮಹೋನ್ನತ ಪ್ರೇಕ್ಷಕ ಪರಂಪರೆಗೆ ಸಲ್ಲುವ ಗೌರವ. ಅದು ಪ್ರೇಕ್ಷಕ ರಂಗಭೂಮಿಯ ಬೆಳವಣಿಗೆಯೂ ಹೌದು.
ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.