“ತಮ್ಮ ವೃತ್ತಿ ಜೀವನದಲ್ಲಿ ನಡೆದ ಒಂದು ಸಣ್ಣ ಘಟನೆಯ ಹಿಂದೆ ಬಿದ್ದ ಡಾ. ಸೂರ್ಯಕುಮಾರ್ ಅವರು, ಸಲೀಸಾಗಿ ಓದಿಸಿಕೊಂಡು ಹೋಗುವಂತಹ ಕಾದಂಬರಿಯನ್ನು ಬರೆದಿರುವುದು ಶ್ಲಾಘನೀಯವೇ ಸರಿ,” ಎನ್ನುತ್ತಾರೆ - ಮಾಕೋನಹಳ್ಳಿ ವಿನಯ್ ಮಾಧವ ಅವರು ಕೆ.ಬಿ. ಸೂರ್ಯಕುಮಾರ್ ಅವರ “ಮಂಗಳಿ” ಕೃತಿ ಕುರಿತು ಬರೆದ ಮುನ್ನುಡಿ.
1829ರಲ್ಲಿ, ಅಂದಿನ ಬ್ರಿಟಿಷ್ ಸರ್ಕಾರದ ವೈಸ್‌ರಾಯ್ ಆಗಿದ್ದ ಲಾರ್ಡ್ ವಿಲ್ಲಿಯಂ ಬೆಂಟಿಕ್ 'ಸತಿ' ಎಂಬ ಅನಿಷ್ಠ ಪದ್ಧತಿಯನ್ನು ಕಾನೂನಿನ ಮೂಲಕ ನಿರ್ಬಂಧಿಸಿದಾಗ, ಹಿಂದೂ ಧರ್ಮದ ಎಷ್ಟೋ ಜನರ ಕಣ್ಣು ಕೆಂಪಾಗಿದ್ದವು. ಅವರೆಲ್ಲರ ಸಿಟ್ಟು ತಿರುಗಿದ್ದು, ಆರ್ಯ ಸಮಾಜ ಸಂಸ್ಥಾಪಕರಾಗಿದ್ದ ರಾಜಾರಾಮ್ ಮೋಹನ್ ರಾಯ್ ಅವರ ವಿರುದ್ದ. ಈ ಕಾನೂನು ಬರಲು ಅವರೇ ಕಾರಣ ಎನ್ನುವುದು ಗುಟ್ಟೇನೂ ಆಗಿರಲಿಲ್ಲ.
ಹಾಗಾದರೆ, 'ಸತಿ' ಎನ್ನುವ ಪದ್ಧತಿ ಹಿಂದೂ ಧರ್ಮದ ನಿಜವಾದ ಆಚರಣೆಯೇ? ಹಾಗಂತ ಎಲ್ಲೂ ಬರೆದಿಲ್ಲ. ಏಕೆಂದರೆ, ಸತಿ ಪದ್ದತಿಯ ಮೊದಲ ದಾಖಲೆ ಸಿಗುವುದು ಮಹಾಭಾರತದಲ್ಲಿ. ಪಾಂಡು ಮಹಾರಾಜ ತೀರಿಕೊಂಡಾಗ, ಅವನ ಎರಡನೇ ಹೆಂಡತಿ ಮಾದ್ರಿ, ಗಂಡನ ಚಿತೆಯ ಮೇಲೆ ಕುಳಿತು ಸಹಗಮನ ಮಾಡುತ್ತಾಳೆ. ಆದರೆ ಮೊದಲ ಪತ್ನಿ ಕುಂತಿ, ಮಕ್ಕಳನ್ನು ನೋಡಿಕೊಳ್ಳಲು ಉಳಿದುಕೊಳ್ಳುತ್ತಾಳೆ.
ಪಾಂಡುವಿನ ತಂದೆ ವಿಚಿತ್ರವೀರ್ಯ ತೀರಿಕೊಂಡಾಗ, ಅವನ ಪತ್ನಿಯರಾದ ಅಂಬಿಕಾ ಮತ್ತು ಅಂಬಾಲಿಕೆಯರು 'ಸತಿ' ಪದ್ಧತಿಯನ್ನು ಅನುಸರಿಸುವುದಿಲ್ಲ. ಹಾಗೆಯೇ, ಅವನ ಅಜ್ಜ ಶಂತನು ಮಹಾರಾಜ ತೀರಿಕೊಂಡಾಗ, ಅಜ್ಜಿ ಸತ್ಯವತಿಯೇನೂ 'ಸತಿ' ಪದ್ದತಿಯನ್ನು ಅನುಸರಿಸಿರಲಿಲ್ಲ. ಅದು ಅವರವರ ಇಷ್ಟಕ್ಕೆ ಬಿಟ್ಟ ವಿಷಯವಾಗಿತ್ತು.
ಆದರೆ, ಸತಿ ಪದ್ದತಿ ವ್ಯಾಪಕವಾಗಿ ಹಬ್ಬಿದ್ದು ರಜಪೂತ ಸಮಾಜದಿಂದ. ಅಲ್ಲೂ ಆರಂಭವಾಗಿದ್ದು ಚಿತ್ತೂರಿನ ರಾಣಿ ಪದ್ಮನಿ ಮತ್ತು ಇಡೀ ಅರಮನೆಯ ಸ್ತ್ರೀಯರು ಸಾಮೂಹಿಕವಾಗಿ ಬೆಂಕಿಯಲ್ಲಿ ಹಾರಿ ಆತ್ಮಾಹುತಿ ಮಾಡಿಕೊಂಡಾಗ.
ಅದಕ್ಕೊಂದು ಕಾರಣವಿತ್ತು. ಮೊಘಲರು ಭಾರತಕ್ಕೆ ಬರುವ ಮುಂಚೆಯೂ ಯುದ್ಧಗಳು ನಡೆಯುತ್ತಿದ್ದವು. ಆದರೆ, ಯುದ್ಧದಲ್ಲಿ ಗೆದ್ದ ರಾಜರುಗಳು, ಸೋತ ರಾಜರ ರಾಜ್ಯದ ಹೆಂಗಸರನ್ನು ಗೌರವವಾಗಿ ಕಾಣುತ್ತಿದ್ದರು. ಆದರೆ, ಮೊಘಲರು ಯುದ್ಧ ಗೆದ್ದ ತಕ್ಷಣವೇ, ಅಲ್ಲಿನ ಸಂಪತ್ತನ್ನು ಲೂಟಿ ಮಾಡುವುದು ಮತ್ತು ಅಲ್ಲಿನ ಹೆಂಗಸರ ಮೇಲೆ ಅತ್ಯಾಚಾರ ಮಾಡುವುದಕ್ಕೆ ಆರಂಭಿಸಿದರು. ಮನೆತನದ ಹೆಣ್ಣುಮಕ್ಕಳನ್ನು ಸೆರೆ ಹಿಡಿದು, ಅವರುಗಳನ್ನು ತಮ್ಮ ವೇಶೈಯರನ್ನಾಗಿ ಮಾಡಿಕೊಳ್ಳುತ್ತಿದ್ದರು. 200 ಅಲ್ಲಾವುದ್ದೀನ್ ಖಿಲ್ಲಿ ಸೈನ್ಯ ಈ ವಿಷಯದಲ್ಲಿ ಕುಖ್ಯಾತವಾಗಿತ್ತು. ಅವರ ಕೈಗೆ ಸೆರೆಸಿಕ್ಕ ಗಂಡಸರು ಮತ್ತು ಹೆಂಗಸರು ಸಾವಿಗಾಗಿ ಪರಿತಪಿಸುವಷ್ಟು ಹಿಂಸೆಗೊಳಗಾಗುತ್ತಿದ್ದರು. ಈ ನಿತ್ಯ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುವುದರ ಬದಲು, ಈ ಹೆಂಗಸರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡರು.
ಆದರೆ, ಇಂತಹ ಅತ್ಯಾಚಾರ ಇಲ್ಲದ ಸಮಯದಲ್ಲೂ, ವಿಧವೆಯರನ್ನು ಗಂಡಂದಿರ ಜೊತೆಗೆ ಬೆಂಕಿಗೆ ತಳ್ಳುವ 'ಸತಿ' ಎನ್ನುವ ಅನಿಷ್ಠ ಪದ್ಧತಿ ಹೇಗೆ ಮತ್ತು ಯಾವಾಗ ಸಮಾಜಿಕ ಪಿಡುಗಾಗಿ ಬೆಳೆಯಿತು? ಇದರ ಬಗ್ಗೆ ಅಂತಹಾ ಮಾಹಿತಿ ಇಲ್ಲ. ಕೆಲವು ಸಮುದಾಯಗಳಲ್ಲಂತೂ, ಹೆಣ್ಣೆ ಅನಿಷ್ಠ ಎನ್ನುವವರೆಗೂ ಈ ಪಿಡುಗು ಬೆಳೆಯಿತು. ರಾಜಾರಾಮ್ ಮೋಹನ್ ರಾಯ್ ಅವರು, ಈ ಪಿಡುಗನ್ನು ತೊಲಗಿಸಿ ಇನ್ನೂರು ವರ್ಷಗಳ ನಂತರ, ಎಲ್ಲಾ ಬದಲಾಗಿದೆ. ವಿಧವಾವಿವಾಹಗಳನ್ನು ಸಹ ಸಮಾಜ ಒಪ್ಪಿಕೊಂಡಿದೆ.
ಸಾಮಾಜಿಕ ಪಿಡುಗುಗಳು ಭಾರತ ಅಥವಾ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರತೀ ಧರ್ಮಗಳಲ್ಲೂ ಇಂತಹ ಸಾಮಾಜಿಕ ಪಿಡುಗುಗಳು ಸ್ವಾಭಾವಿಕ. ಏಕೆಂದರೆ, ಇವು ಪಟ್ಟಭದ್ರ ಹಿತಾಸಕ್ತಿಗಳು, ಸಮಾಜವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಧರ್ಮದ ಲೇಪ ಬೆರೆಸಿ ತರುವ ಪದ್ದತಿಗಳು.
ಹಾಗೆ ನೋಡಿದರೆ, ಆಯಾ ಧರ್ಮಗ್ರಂಥಗಳಲ್ಲಿ ಈ ವಿಷಯಗಳ ಉಲ್ಲೇಖಗಳೇ ಇರುವುದಿಲ್ಲ. ಮನುಷ್ಯನ ಜೀವನ ಶೈಲಿ ಬದಲಾದಂತೆ, ಸಾಮಾಜಿಕ ಪಿಡುಗುಗಳು ತಮ್ಮದೇ ಆದ ಪರಿಹಾರ ಕಂಡುಕೊಳ್ಳುತ್ತವೆ. ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರುವ ನಂಬಿಕೆಯೂ ಬರುತ್ತದೆ. ಆದರೆ, ಕೆಲವರು ಮುಖ್ಯವಾಹಿನಿಗೆ ಬರಲು ಯಾವುದೇ ಸಮಾಜದ ಜನ ಒಪ್ಪುವುದಿಲ್ಲ ಎನ್ನುವುದಂತೂ ಕಟು ಸತ್ಯ. ಅಂಗವಿಕಲತೆ ಮತ್ತು ಬುದ್ದಿಮಾಂದ್ಯತೆಯಿಂದ ಬಳಲುವವರಿಗೆ ಸಮಾಜ ಕನಿಷ್ಠ ಕರುಣೆಯನ್ನಾದರೂ ತೋರಿಸುತ್ತಾರೆ. ಆದರೆ, ಎರಡು ವರ್ಗದ ಜನಗಳಿಗೆ ಜನರು ಕನಿಷ್ಠ ಸೌಜನ್ಯಕ್ಕಾದರೂ ಕರುಣೆ ತೋರಿಸುವುದಿಲ್ಲ. ಅವರುಗಳು ಹತ್ತಿರ ಬಂದರೆ ಅಸಹ್ಯ ಪಟ್ಟುಕೊಳ್ಳುತ್ತಾರೆ, ಅಷ್ಟೆ.
ಮೊದಲನೇ ವರ್ಗ, ಹಾರ್ಮೋನುಗಳ ತೊಂದರೆಯಿಂದಾಗಿ ಲಿಂಗ ಬದಲಾವಣೆ ಮಾಡಿಕೊಂಡವರು ಮತ್ತು ಎರಡನೇಯ ವರ್ಗ, ಅದೇ ಹಾರ್ಮೋನುಗಳ ತೊಂದರೆಯಿಂದ ತೃತೀಯ ಲಿಂಗಿಗಳಾಗಿ ಬದುಕುವವರು. ಲಿಂಗ ಬದಲಾವಣೆ ಮಾಡಿಕೊಂಡವರು ತಮ್ಮ ಗುರುತನ್ನು ಮುಚ್ಚಿಟ್ಟುಕೊಂಡು, ದೂರದಲ್ಲೆಲ್ಲೋ ಹೊಸ ಬದುಕು ಆರಂಭಿಸಬಹುದೇನೋ. ಆದರೆ, ತೃತೀಯ ಲಿಂಗಿಗಳು ಜಗತ್ತಿನ ಯಾವ ಭಾಗದಲ್ಲಿ ಹೋದರೂ ಸಹ, ಅವರಿಗೆ ತಾರತಮ್ಯ ಕಟ್ಟಿಟ್ಟ ಬುತ್ತಿ.
ತೃತೀಯ ಲಿಂಗಿಗಳನ್ನು ಯಾವ ಧರ್ಮವೂ ತಾರತಮ್ಯದಿಂದ ನೋಡಿದ ಪ್ರಸ್ತಾಪವಿಲ್ಲ. ತೃತೀಯ ಲಿಂಗಿಗಳ ಬಗ್ಗೆ ಮಹಾಭಾರತದಲ್ಲಿ ಎರಡು ಕಡೆ ಉಲ್ಲೇಖವಿದೆ. ಮೊದಲನೆಯದಾಗಿ, ದ್ರುಪದನ ಸಂತಾನ, ಭೀಷ್ಮನನ್ನು ಕೊಲ್ಲಲೆಂದೇ ಹುಟ್ಟಿದ ಶಿಖಂಡಿ. ಎರಡನೇಯದಾಗಿ, ಊರ್ವಶಿಯಿಂದ ಶಾಪಗ್ರಸ್ಥನಾದ ಅರ್ಜುನನು, ಒಂದು ವರ್ಷದ ಕಾಲದವರೆಗೆ ಬೃಹನ್ನಳೆ ಎಂಬ ಹೆಸರಿನ ತೃತೀಯ ಲಿಂಗಿಯಾಗಿ ಪರಿವರ್ತನೆಗೊಂಡಿರುತ್ತಾನೆ. ಅದು, ಪಾಂಡವರ ಅಜ್ಞಾತವಾಸದ ಸಮಯದಲ್ಲಿ. ಆದರೆ, ಅವರನ್ನು ಅಸಹ್ಯ ಪಡುವಂತೆ ಎಲ್ಲೂ ಚಿತ್ರಿಸಿದ್ದು ಕಂಡುಬರುವುದಿಲ್ಲ.
ಆದರೆ, ಈಗ ಹಿಜಡಾ, ಛಕ್ಕ ಎಂದೆಲ್ಲಾ ಕರೆಸಿಕೊಳ್ಳುವ ತೃತೀಯ ಲಿಂಗಿಗಳು, ನಾವು ಚಿಕ್ಕಂದಿನಲ್ಲಿದ್ದಾಗ ಹೆಚ್ಚಾಗಿ ಕಾಣುತ್ತಿರಲಿಲ್ಲ. ಈಗ, ಎಲ್ಲೆಂದರಲ್ಲಿ ಕಾಣ ಸಿಗುತ್ತಾರೆ. ಬಸ್ ಸ್ಟ್ಯಾಂಡ್, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುತ್ತಾ, ಕೆಲವೊಮ್ಮೆ ಪೋಲಿಸ್ ಕೇಸುಗಳಲ್ಲಿ ಸಿಕ್ಕಿಕೊಂಡು.. ಅಲ್ಲಲ್ಲಿ ಎದುರಾಗುತ್ತಾರೆ. ಆದರೆ, ಅವರುಗಳನ್ನು ನೋಡಿದ ತಕ್ಷಣ ಜನಗಳು ಬೆಚ್ಚಿ ಬೀಳುವುದೇ ಹೆಚ್ಚು.
ಅವರೂ ಮನುಷ್ಯರು. ಅವರ ಲೈಂಗಿಕ ಹಾರ್ಮೋನುಗಳ ವ್ಯತ್ಯಾಸದಿಂದ ಅವರ ನಡವಳಿಕೆ ವಿಚಿತ್ರವೇ ಹೊರತು, ಅವರನ್ನು ಮನುಷ್ಯರಂತೆ ನೋಡಬಹುದು ಎನ್ನುವ ಭಾವನೆ ಹೆಚ್ಚಿನ ಜನಗಳಿಗೆ ಇಲ್ಲ. ಏಕೆಂದರೆ, ಇವರುಗಳ ಜೀವನ ಶೈಲಿಗಳಾಗಲೀ, ಆಚಾರ - ವಿಚಾರಗಳಾಗಲೀ ಯಾರಿಗೂ ತಿಳಿದಿಲ್ಲ. ಅಷ್ಟು ಯೋಚನೆ ಮಾಡುವ ಪುರುಸೊತ್ತು ಸಹ ನಮಗೆ ಇಲ್ಲ.
ವಾಸ್ತವದಲ್ಲಿ, ಅವರಿಗೂ ಒಂದು ಅವರದೇ ಆದ ಸಾಮಾಜಿಕ ಕಟ್ಟಳೆಗಳಿವೆ. ಅದರ ನೆರಳಲ್ಲೇ ಅವರು ಬದುಕುತ್ತಾರೆ. ಶತಮಾನಗಳಿಂದ, ಅವರದೇ ಆದ ದೇವರು, ಕುಟುಂಬ, ಜೀವನ ಮತ್ತು ನಂಬಿಕೆಗಳನ್ನು ಇಟ್ಟುಕೊಂಡು ಬದುಕುತ್ತಾರೆ. ಅವರಿಗೆ, ಅವರದೇ ಆದ ಭಾವನೆಗಳಿವೆ. ಅದನ್ನು ಮುಖ್ಯವಾಹಿನಿಯವರು ಅರ್ಥ ಮಾಡಿಕೊಳ್ಳಬೇಕು ಎನ್ನುವ ಹಪಾಹಪಿಯೂ ಇದೆ. ಆದರೆ, ಮುಖ್ಯವಾಹಿನಿಯೊಂದಿಗೆ ಬೆರೆಯುವ ಅವರ ಆಸೆ ಮರೀಚಿಕೆಯಾಗಿಯೇ ಉಳಿಯುವ ಎಲ್ಲಾ ಸಾಧ್ಯತೆಗಳಿವೆ.
ತೃತೀಯ ಲಿಂಗಿಗಳ ಭಾವನೆಗಳ ಬಗ್ಗೆ ಸಂಚಾರಿ ವಿಜಯ್ ನಟಿಸಿದ 'ನಾನು ಅವನಲ್ಲ, ಅವಳು' ಚಲನಚಿತ್ರ ಬಹಳಷ್ಟು ಬೆಳಕು ಚೆಲ್ಲಿತ್ತು. ಈಗ ಡಾ. ಕೆ.ಬಿ. ಸೂರ್ಯಕುಮಾರ್ ಅವರು, ತಮ್ಮ ಕಾದಂಬರಿಯಾದ 'ಮಂಗಳಿ'ಯಲ್ಲಿ, ತೃತೀಯ ಲಿಂಗಿಯ ಜೀವನದ ಪಯಣ, ತೃತೀಯ ಲಿಂಗಿಗಳ ಬದುಕು. ಕಟ್ಟಳೆಗಳ ಬಗ್ಗೆ ಬಹಳಷ್ಟು ಬೆಳಕು ಚೆಲ್ಲಿದ್ದಾರೆ.
ತಮ್ಮ ವೃತ್ತಿ ಜೀವನದಲ್ಲಿ ನಡೆದ ಒಂದು ಸಣ್ಣ ಘಟನೆಯ ಹಿಂದೆ ಬಿದ್ದ ಡಾ. ಸೂರ್ಯಕುಮಾರ್ ಅವರು, ಸಲೀಸಾಗಿ ಓದಿಸಿಕೊಂಡು ಹೋಗುವಂತಹ ಕಾದಂಬರಿಯನ್ನು ಬರೆದಿರುವುದು ಶ್ಲಾಘನೀಯವೇ ಸರಿ.
- ಮಾಕೋನಹಳ್ಳಿ ವಿನಯ್ ಮಾಧವ
“ಈ ಎಲ್ಲ ಯುವಜನಾಂಗದ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದರ ಜೊತೆಗೆ ಇತರ ಕ್ಷೇತ್ರದಲ್ಲಿ ಹೆಸರು ಮಾಡಿದ ಸಾಧಕರ ಬಗ...
“ರಾಜ್ಯವಾರು ಜನರ ಬದುಕಿನ ಗುಣಮಟ್ಟ ಹೆಚ್ಚಿಸೋಕೆ, ಮೂಲಭೂತ ಸೇವೆಗಳನ್ನ ಒದಗಿಸೋಕೆ ಕೇಂದ್ರ ಸರಕಾರದ ಅಡೆತಡೆಗಳು ದಕ...
"ಶಿಕ್ಷೆಯಲ್ಲಿನ ವೈರುಧ್ಯಗಳ ಅನಾವರಣ: ಸಣ್ಣ ಪುಟ್ಟ ಕಳ್ಳತನ ಮಾಡಿದವರಿಗೆ ಕೈಗೆ ಕೋಳ ಹಾಕಿ ಸಾರ್ವಜನಿಕವಾಗಿ ಎಳೆದುಕ...
©2024 Book Brahma Private Limited.