Date: 18-11-2024
Location: ಬೆಂಗಳೂರು
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಸಂತ ಶ್ರೇ಼ಷ್ಠ ಕನಕದಾಸರ ಜಯಂತಿ’ ಮತ್ತು ಕನಕ ಶ್ರೀ ಪ್ರಶಸ್ತಿ, ಕನಕ ಗೌರವ ಹಾಗೂ ಕನಕ ಯುವ ಪುರಸ್ಕಾರ ಪ್ರಶಸ್ತಿ ಪ್ರದಾನ ಮತ್ತು ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದಿಂದ ಪ್ರಕಟಿಸಿರುವ ಸಮಗ್ರ ತತ್ವಪದ ಯೋಜನೆಯ 18 ಸಂಪುಟಗಳ ಪುಸ್ತಕಗಳ ಲೋಕಾರ್ಪಣಾ ಕಾರ್ಯಕ್ರಮವು 2024 ನ. 18 ಗುರುವಾರದಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ, "ಈ ಕಾರ್ಯಕ್ರಮದಲ್ಲಿ ನಾನು ಬಹಳಷ್ಟು ಖುಷಿಯಿಂದ ಭಾಗವಹಿಸಿದ್ದೇನೆ. ಇದು ಸರಕಾರ ಮಾಡುವಂತಹ ಕಾರ್ಯಕ್ರಮವಾಗಿದ್ದು, ಪ್ರತೀ ವರ್ಷ ಸರಕಾರ ಅನೇಕ ಜಯಂತಿಗಳನ್ನು ಆಚರಿಸುತ್ತಿದ್ದು, ಅದರಲ್ಲಿ ಕನಕದಾಸ ಜಯಂತಿ ವಿಶೇಷವಾದುದು," ಎಂದು ತಿಳಿಸಿದರು.
ಕನಕ ಜಯಂತಿಯ ಕುರಿತು ಉಪನ್ಯಾಸ ನೀಡಿದ ಸಾಹಿತಿ, ಚಿಂತಕ ಡಾ. ಬಂಜಗೆರೆ ಜಯಪ್ರಕಾಶ, "ತಮ್ಮ ಜೀವನದ ಅನುಭವಗಳು ಮತ್ತು ಚಿಂತನೆಗಳಿಂದ ಕನ್ನಡದ ಜನತೆಗೆ ಬಹಳ ಮುಖ್ಯವಾದ ಸಂದೇಶವನ್ನು ನೀಡಿರುವ ಸಂತ ಶ್ರೇಷ್ಠ. ಅಂತಹ ಶ್ರೇಷ್ಠರನ್ನು ನಾವು ಇವತ್ತಿನ ದಿನ ನೆನೆಯುತ್ತಿದ್ದೇವೆಂದರೆ ಅವರು ಜೀವನಕ್ಕೆ ವಿಮುಖವಾಗಿದ್ದರು ಎಂಬ ಕಾರಣಕ್ಕಾಗಿ ಅಲ್ಲ. ಬದಲಾಗಿ ಈ ಜೀವನದಲ್ಲಿರುವ ಕಷ್ಟಗಳನ್ನು, ಜನಸಾಮಾನ್ಯರ ದುಃಖ ದುಮ್ಮಾನಗಳನ್ನು, ಅವರ ತೊಂದರೆಗಳನ್ನು ಬಗೆಹರಿಸುವುದಕ್ಕೆ ತಮ್ಮ ಪದ್ಯಗಳಲ್ಲಿ, ಕೀರ್ತನೆಗಳಲ್ಲಿ ತಮ್ಮದೇ ಆದಂತಹ ದೃಷ್ಟಿಕೋನದಿಂದ ಜನತೆಯ ಮುಂದಿಟ್ಟರು. ಸಂತರನ್ನು ನಾವು ಸಾಮಾನ್ಯವಾಗಿ ವಿರಾಗಿಗಳು ಹಾಗೂ ಸನ್ಯಾಸಿಗಳೆಂದು ಕರೆಯುತ್ತೇವೆ. ಅವರು ವಿರಾಗಿಗಳು ಹೌದು, ಆದರೆ ಲೋಕ ಜೀವನಕ್ಕೆ ವಿಮುಖರಾದವರಲ್ಲ," ಎಂದು ತಿಳಿಸಿದರು.
ಲೇಖಕ ಕ್ಯಾ.ತ. ಚಿಕ್ಕಣ್ಣ ಮಾತನಾಡಿ, "ತನ್ನಿಂದ ಆಗದು ಎಂದು ಯಾವತ್ತಿಗೂ ಕನಕದಾಸರು ಬೆನ್ನು ಮಾಡಿ ಹೋಗಲಿಲ್ಲ. ಅದರ ಬದಲಾಗಿ ಅಸಾಧ್ಯವಾದುದನ್ನು ಸಾಧ್ಯವಿದೆ ಎಂದು ತೋರಿಸಿ, ಜೀವನದ ಪಾಠವನ್ನು ಕಲಿಸಿದ್ದಾರೆ. ಕನಕದಾಸರನ್ನು ನಾವು 21ನೇ ಶತಮಾನದಲ್ಲಿಯೂ ನೆನಪಿನಲ್ಲಿಡಳು ಬಹು ಮುಖ್ಯ ಕಾರಣ ಅವರು ಮನುಷ್ಯ ಕುಲದ ಬಗ್ಗೆ ಮಾತನಾಡಿದರು, ಮನುಷ್ಯನ ಅಂತರಂಗದ ಕುರಿತು ಅವರ ಆಲೋಚನೆಯಿತ್ತು, ಮನುಷ್ಯನ ಬದುಕಿಗೆ ಕಟ್ಟಿದ ಸಂಕೀರ್ಣವಾದ ಮೇಲು ಕೀಳು ಕಪ್ಪು ಬಿಳಿ ಇವೆಲ್ಲವುಗಳಿಂದಾಗುವ ಮಾನವ ಕುಲದ ನಷ್ಟ ಏನಾಗುತ್ತದೆ, ಹಾಗೆಯೇ ಇಂತಹ ವಿಚಾರಗಳು ಸೃಜನಶೀಲತೆಯನ್ನು ಕೊಲ್ಲುತ್ತದೆ ಎನ್ನುವುದನ್ನು ಅವರು ಮನಗಂಡರು," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವೇದಿಕೆಯ ದಿವ್ಯ ಸಾನಿಧ್ಯವನ್ನು ಹಾವೇರಿಯ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಮತ್ತು ತಿಂಥಣಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರು ಶ್ರೀ ಸಿದ್ಧರಾಮಾನಂದ ಸ್ವಾಮಿಗಳು ವಹಿಸಿದ್ದರು.
ವೇದಿಕೆಯಲ್ಲಿ ಘನ ಉಪಸ್ಥಿತಿಯಲ್ಲಿ ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ಎಸ್ ತಂಗಡಗಿ ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಉದಯ್ ಬಿ. ಗರುಡಾಚಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕ ಸರಕಾರದ ಮಾನ್ಯ ಇಂಧನ ಸಚಿವ ಕೆ.ಜೆ ಜಾರ್ಜ್, ಕರ್ನಾಟಕ ಸರಕಾರದ ಮಾನ್ಯ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಕರ್ನಾಟಕ ಸರಕಾರದ ಮಾನ್ಯ ನಗರಾಭಿವೃದ್ದಿ ಸಚಿವ ಸುರೇಶ್ ಬಿ.ಎಸ್, ಕರ್ನಾಟಕ ಸರಕಾರದ ಮಾನ್ಯ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್, ಕರ್ನಾಟಕ ವಿಧಾನ ಪರಿಷತ್ ಮಾನ್ಯ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ, ಮಾನ್ಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಅಶೋಕ್ ಮಹದೇವಪ್ಪ ಪಟ್ಟಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತರಾಗಿ ತತ್ವಪದಕಾರರ ಅಧ್ಯಯನ ಮತ್ತು ಸಂತಕವಿ ಕನಕದಾಸ ಸಂಸ್ಥೆಯ ಅಧ್ಯಕ್ಷ ಕಾ.ತ ಚಿಕ್ಕಣ್ಣ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ ರಾಮಚಂದ್ರಪ್ಪ, ಎಂ. ಈರಣ್ಣ, ಬಸವರಾಜ ಲ. ಬಸಲಿಗುಂದಿ, ಎಂ.ವಿ. ಸೋಮಶೇಖರ್, ಕೆ.ಎಂ. ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬೆಂಗಳೂರು: ಅಂಕಿತ ಪ್ರಕಾಶನದ ವತಿಯಿಂದ ಚಿತ್ರಸಮೂಹ ಸಹಯೋಗದಲ್ಲಿ ಸುಚಿತ್ರಾ ಫಿಲಂ ಸೊಸೈಟಿ ಹಾಗೂ ವಾರ್ತಾ ಮತ್ತು ಸಾರ್ವಜನ...
ಬೆಂಗಳೂರು: 'ವಿನಯ ಮತ್ತು ಅಧಿಕಾರ ಒಟ್ಟಿಗೆ ಹೋಗುವುದಿಲ್ಲ. ಅಧಿಕಾರ ಬಂದರೆ ಅಹಂಕಾರ ಒಟ್ಟೊಟ್ಟಿಗೆ ಬರುತ್ತದೆ. ಕೇಂದ...
ಬೆಂಗಳೂರು: ದೆಹಲಿಯ ಸಂಗೀತ ನಾಟಕ ಅಕಾಡೆಮಿಯಿಂದ ನೀಡುವ ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022ಕ್ಕೆ ಕವಿ, ನಾಟಕಕಾರ ಬೇಲೂರು ...
©2024 Book Brahma Private Limited.